ಸೆಪ್ಟೆಂಬರ್ ಮೊದಲ ವಾರವನ್ನು ನಾನು ಬ್ರಿಟನ್‌ನಲ್ಲಿ ಕಳೆದೆ. ಅಲ್ಲಿನ ಮುಖ್ಯ ಸುದ್ದಿ ಸಿರಿಯಾ ನಿರಾಶ್ರಿತರ ಕುರಿತದ್ದಾಗಿತ್ತು. ಮೃತದೇಹಗಳು ಟರ್ಕಿಯ ಕಡಲ ಕಿನಾರೆಗೆ ಬಂದು ಅಪ್ಪಳಿಸುತ್ತಿದ್ದವು. ತಮ್ಮ ಗಡಿಗೆ ಬಂದ ನಿರಾಶ್ರಿತರ ಮೇಲೆ ಹಂಗೆರಿಯ ಪೊಲೀಸರು ಕ್ರೂರವಾಗಿ ಹಲ್ಲೆ ನಡೆಸುತ್ತಿದ್ದರು. ಪತ್ರಿಕೆ ಮತ್ತು ದೂರದರ್ಶನ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದ ಇಂತಹ ದೃಶ್ಯಗಳು ಬಿಸಿಯೇರಿದ ಚರ್ಚೆಗೆ ಪ್ರೇರಣೆ ನೀಡುತ್ತಿದ್ದವು. ನಿರಾಶ್ರಿತರಿಗೆ ನೆರವಾಗಲು ಬ್ರಿಟನ್ ಏನು ಮಾಡಬಹುದು ಎಂಬುದರ ಸುತ್ತಲೇ ಹೆಚ್ಚಿನ ಚರ್ಚೆಗಳು ನಡೆಯುತ್ತಿದ್ದವು.

ಪತ್ರಿಕೆಯೊಂದರಲ್ಲಿ ಸೆಪ್ಟೆಂಬರ್ 3ರಂದು ಪ್ರಕಟವಾಗಿದ್ದ ಶೀರ್ಷಿಕೆ ಹೀಗಿತ್ತು: ‘ಕ್ಯಾಮರಾನ್: ಇನ್ನಷ್ಟು ನಿರಾಶ್ರಿತರನ್ನು ಭರಿಸುವುದು ನಮಗೆ ಸಾಧ್ಯವಿಲ್ಲ’. ಅದರ ಕೆಳಗೆ ಸುಂದರವಾದ ಮುದ್ರಣದಲ್ಲಿ ಇನ್ನಷ್ಟು ವಿವರಗಳಿದ್ದವು. 2014ರ ಮಾರ್ಚ್‌ನಿಂದ ಈವರೆಗೆ 216 ಸಿರಿಯಾ ವಲಸಿಗರಿಗೆ ಬ್ರಿಟನ್ ಆಶ್ರಯ ನೀಡಿದೆ. ಇದೇ 18 ತಿಂಗಳ ಅವಧಿಯಲ್ಲಿ ಸ್ವಿಟ್ಜರ್ಲೆಂಡ್ 2,700 ನಿರಾಶ್ರಿತರಿಗೆ ಆಶ್ರಯ ನೀಡಿದ್ದರೆ, ಜರ್ಮನಿ 38 ಸಾವಿರ ನಿರಾಶ್ರಿತರನ್ನು ದೇಶಕ್ಕೆ ಬರಮಾಡಿಕೊಂಡಿದೆ. ಹೀಗಿದ್ದರೂ ಬ್ರಿಟನ್ ಪ್ರಧಾನಿ ನಿರಾಶ್ರಿತರನ್ನು ಭರಿಸುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸಿರಿಯಾ ಸಂಘರ್ಷದ ಸಂತ್ರಸ್ತರ ನೋವನ್ನು ಶಮನ ಮಾಡುವುದಕ್ಕಾಗಿ ಐರೋಪ್ಯ ಒಕ್ಕೂಟದ ಸದಸ್ಯ ರಾಷ್ಟ್ರಗಳು ತ್ವರಿತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್ ಹೇಳಿದ್ದಾರೆ. ಜರ್ಮನಿ ಎಂಟು ಲಕ್ಷ ನಿರಾಶ್ರಿತರಿಗೆ ಆಶ್ರಯ ನೀಡಲಿದೆ ಎಂದು ಅವರು ಪ್ರಕಟಿಸಿದ್ದಾರೆ. ಐರೋಪ್ಯ ಒಕ್ಕೂಟದ ಇತರ ದೇಶಗಳೂ ಗಣನೀಯ ಸಂಖ್ಯೆಯಲ್ಲಿ ನಿರಾಶ್ರಿತರಿಗೆ ಆಶ್ರಯ ನೀಡುವ ಬದ್ಧತೆ ಪ್ರದರ್ಶಿಸಬೇಕಿದೆ.

ಮರ್ಕೆಲ್ ಅವರ ಘೋಷಣೆ ಕೆಲವು ವಿಶ್ಲೇಷಕರ ಮೆಚ್ಚುಗೆ ಗಳಿಸಿದರೆ ಇತರರು ಅದನ್ನು ಸಿನಿಕತನದಿಂದಲೇ ನೋಡಿದ್ದಾರೆ. ಜರ್ಮನಿಯ ಜನರಿಗೆ ವಯಸ್ಸಾಗುತ್ತಿದೆ, ಹಾಗಾಗಿ ಅಲ್ಲಿನ ಕಾರ್ಖಾನೆಗಳ ಕೆಲಸಕ್ಕೆ ಯುವ ಮತ್ತು ಆರೋಗ್ಯವಂತ ಜನರ ಅಗತ್ಯ ಇದೆ ಎಂದು ಒಬ್ಬರು ವಿಶ್ಲೇಷಕರು ಅಭಿಪ್ರಾಯಪಟ್ಟರು. ಇದು ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳುವ ಮತ್ತು ಪ್ರಚಾರ ಪಡೆಯುವ ಯತ್ನ ಎಂದು ಇನ್ನೊಬ್ಬರು ಹೇಳಿದರು. ಮಿತವ್ಯಯಕರ ಕ್ರಮಗಳಿಗೆ ಒಪ್ಪಿಗೆ ನೀಡುವಂತೆ ಜರ್ಮನಿಯ ಮೇಲೆ ಒತ್ತಡ ಹೇರಿದ ನಂತರ ಜರ್ಮನಿ ನಕಾರಾತ್ಮಕ ಪ್ರಚಾರ ಪಡೆದಿತ್ತು. ಅದರಿಂದ ಹೊರಗೆ ಬರುವುದಕ್ಕಾಗಿ ಮರ್ಕೆಲ್ ಹೀಗೆ ಮಾಡಿದ್ದಾರೆ ಎಂದೂ ಅವರು ತಮ್ಮ ವಾದ ಸರಣಿ ಮಂಡಿಸಿದರು.

ಜರ್ಮನಿ ತೋರಿರುವ ಔದಾರ್ಯವನ್ನು ಸಿನಿಕರೂ ಅನುಮಾನಿಸಲಾಗದು. ಮರ್ಕೆಲ್ ಮೊಂಡುತನದ, ಅನಾಕರ್ಷಕ ರಾಜಕಾರಣಿ. ಅವರ ದೇಶವೂ ವಿದೇಶಿಯರ ಬಗ್ಗೆ ಅಂತಹ ಮಮತೆ ತೋರಿದ ನಿದರ್ಶನಗಳಿಲ್ಲ. ಹಾಗಿದ್ದರೂ ತಮ್ಮ ದಾನ, ಧರ್ಮ, ಸಹಾನುಭೂತಿ ಪರಂಪರೆಯ ಬಗ್ಗೆ ಹೆಮ್ಮೆಪಡುವ ಬ್ರಿಟಿಷರನ್ನು ಜರ್ಮನರು ಮತ್ತು ಅವರ ಚಾನ್ಸಲರ್ ಈ ಬಾರಿ ನಾಚಿಕೆಪಡುವಂತೆ ಮಾಡಿದ್ದಾರೆ.

ಬ್ರಿಟನ್‌ನ ಚರ್ಚೆಯನ್ನು ಗಮನಿಸುತ್ತಿರುವಾಗಲೇ ನನಗೆ ಜರ್ಮನಿಯ ಅಂತರರಾಷ್ಟ್ರೀಯತೆಯ ಬಗೆಗಿನ ಮತ್ತೊಂದು ಅದ್ಭುತ ನಿದರ್ಶನ ನೆನಪಾಯಿತು. ಇದು ಕೇವಲ ಎರಡು ದಶಕಗಳ ಹಿಂದೆ ನಡೆದ ಘಟನೆ. ಹಾಗಿದ್ದರೂ ಸಾರ್ವಜನಿಕ ಸ್ಮರಣೆಯಿಂದ ಹಿಂದಕ್ಕೆ ಸರಿದಿದೆ. 1995ರಲ್ಲಿ ನಾನು ಬರ್ಲಿನ್‌ನಲ್ಲಿ ಜೀವಿಸುತ್ತಿದ್ದ ಅವಧಿಯಲ್ಲಿ, ಹವಾಮಾನ ಬದಲಾವಣೆ ಬಗ್ಗೆ ನಗರವು ಮೊದಲ ಪ್ರಮುಖ ಅಂತರರಾಷ್ಟ್ರೀಯ ಸಮಾವೇಶದ ಆತಿಥ್ಯ ವಹಿಸಿಕೊಂಡಿತ್ತು. ಜರ್ಮನಿಯ ಆಗಿನ ಚಾನ್ಸಲರ್ ಹೆಲ್ಮಟ್ ಕೋಲ್ ಅವರ ಮುಂದಾಳತ್ವದಲ್ಲಿ ಸಮಾವೇಶ ನಡೆದಿತ್ತು. ಹವಾಮಾನ ಬದಲಾವಣೆಯ ಅಪಾಯಕಾರಿ ಆಯಾಮಗಳ ಜಾಗತಿಕ ಸಮಸ್ಯೆಯ ಬಗ್ಗೆ ಕೊನೆಗೂ ಜಾಗೃತಿ ಮೂಡಲಾರಂಭಿಸಿದ್ದ (ಕೆಲವರಲ್ಲಾದರೂ) ಸಂದರ್ಭದಲ್ಲಿ ಜಾಗತಿಕ ನಾಯಕರಿಗೆ ಸಮಸ್ಯೆ ಬಗ್ಗೆ ಅರಿವು ಮೂಡಿಸಲು ಕೋಲ್ ಮುಂದಾಗಿದ್ದರು.

ಕೋಲ್ ಸಿಡುಕು ಮುಖದ ರಾಜಕಾರಣಿ. ಅವರು ಮರ್ಕೆಲ್ ಅವರಷ್ಟೂ ಆಕರ್ಷಕ ವ್ಯಕ್ತಿತ್ವ ಹೊಂದಿದ್ದವರಲ್ಲ. ಅವರು ಸಂಪ್ರದಾಯವಾದಿ ಮುಕ್ತ ಮಾರುಕಟ್ಟೆಯ ಪ್ರತಿಪಾದಕ. ಪ್ರಗತಿಪರ ವಿಚಾರವೊಂದಕ್ಕಾಗಿ ಕೋಲ್ ವಹಿಸಿದ್ದ ಮುಂದಾಳತ್ವ ನನ್ನಲ್ಲಿ ಅಚ್ಚರಿ ಮೂಡಿಸಿತ್ತು. ಪಾಶ್ಚಿಮಾತ್ಯ ಜಗತ್ತಿನ ಇತರ ಭಾಗಗಳಲ್ಲಿನ ಬಲಪಂಥೀಯ ರಾಜಕಾರಣಿಗಳು ಪರಿಸರ ಸುಸ್ಥಿರತೆಗೆ ಸಂಬಂಧಿಸಿ ಸಂಪೂರ್ಣ ಅಸಡ್ಡೆ ಹೊಂದಿದ್ದರು. ಅಮೆರಿಕದಲ್ಲಿ, ಹಿಂದಿನ ಡೆಮಾಕ್ರಟಿಕ್ ಅಧ್ಯಕ್ಷರು ಆರಂಭಿಸಿದ್ದ ಪರಿಸರ ಸುರಕ್ಷಾ ಕ್ರಮಗಳನ್ನು ಆಗಿನ ಅಧ್ಯಕ್ಷ ರೊನಾಲ್ಡ್ ರೇಗನ್ ರದ್ದುಪಡಿಸಿದ್ದರು. ನನ್ನದೇ ದೇಶ ಭಾರತದಲ್ಲಿ ಮುಕ್ತ ಮಾರುಕಟ್ಟೆ ಪ್ರತಿಪಾದಕರು ಪರಿಸರವಾದಿಗಳನ್ನು ಪ್ರಗತಿ ವಿರೋಧಿಗಳು ಎಂದು ಹಣೆಪಟ್ಟಿ ಕಟ್ಟುತ್ತಿದ್ದರು.

ಹೆಲ್ಮಟ್ ಕೋಲ್ ಅವರ ಹಸಿರು ಅಂತರರಾಷ್ಟ್ರೀಯವಾದಕ್ಕೆ ಆಗ ಜರ್ಮನಿಯ ರಾಜಕೀಯದಲ್ಲಿ ಪ್ರಮುಖ ಪಕ್ಷವಾಗಿದ್ದ ಜರ್ಮನ್ ಗ್ರೀನ್ ಪಾರ್ಟಿಯ ಒತ್ತಡವೇ ಕಾರಣ ಎಂದು ಆರಂಭದಲ್ಲಿ ನಾನು ಭಾವಿಸಿದ್ದೆ. ಆದರೆ ಕೋಲ್ ಸ್ವತಂತ್ರವಾಗಿಯೇ ಸಮಸ್ಯೆಯನ್ನು ಅರ್ಥ ಮಾಡಿಕೊಂಡಿದ್ದರು ಎಂಬುದನ್ನು ನಂತರ ನಾನು ಕಂಡುಕೊಂಡೆ. 1987ರಲ್ಲಿ ರೇಗನ್ ಅನುಯಾಯಿಗಳು ಪರಿಸರವಾದಿಗಳನ್ನು ವೇಷ ಮರೆಸಿಕೊಂಡಿರುವ ಸೋವಿಯತ್ ಏಜೆಂಟರು ಎಂದು ದಾಳಿ ನಡೆಸುತ್ತಿದ್ದರು. ಆ ಸಂದರ್ಭದಲ್ಲಿಯೇ ಕೋಲ್ ಜರ್ಮನಿಯ ಸಂಸತ್ತಿನಲ್ಲಿ ‘ಹಸಿರು ಮನೆ ಪರಿಣಾಮದಿಂದ ಹವಾಮಾನದ ಮೇಲಾಗುವ ಭಾರಿ ಅಪಾಯ’ ಎಂಬ ಬಗ್ಗೆ ಮಹತ್ವದ ಭಾಷಣವೊಂದನ್ನು ಮಾಡಿದ್ದರು.

1995ರ ಹೊತ್ತಿಗೆ ಬರ್ಲಿನ್ ಸಮಾವೇಶ ನಡೆದಾಗ ರೊನಾಲ್ಡ್ ರೇಗನ್ ಸಾರ್ವಜನಿಕ ಜೀವನದಿಂದ ನೇಪಥ್ಯಕ್ಕೆ ಸರಿದಿದ್ದರು.
ಡೆಮಾಕ್ರಟಿಕ್ ಪಕ್ಷದ ಬಿಲ್ ಕ್ಲಿಂಟನ್ ಅಧಿಕಾರದಲ್ಲಿದ್ದರು. ಉಪಾಧ್ಯಕ್ಷರಾಗಿದ್ದ ಅಲ್ ಗೋರ್ ಅವರು 1992ರಲ್ಲಿ (ಆಗ ಅವರು ಸೆನೆಟ್ ಸದಸ್ಯರಾಗಿದ್ದರು) ‘ಅರ್ಥ್ ಇನ್ ದ ಬ್ಯಾಲೆನ್ಸ್’ ಎಂಬ ಕೃತಿಯೊಂದನ್ನು ಪ್ರಕಟಿಸಿದ್ದರು. ಕ್ಲಿಂಟನ್-ಗೋರ್ ಆಡಳಿತ ರೇಗನ್ ಅವಧಿಯಲ್ಲಿ ಕೈಬಿಡಲಾಗಿದ್ದ ಹಲವು ದೇಶಿ ಪರಿಸರ ಸುರಕ್ಷತಾ ಕ್ರಮಗಳನ್ನು ಮರು ಸ್ಥಾಪಿಸಿತ್ತು. ಆದರೆ ಅವರು ಜಾಗತಿಕ ಮಟ್ಟದಲ್ಲಿ ಜವಾಬ್ದಾರಿ ವಹಿಸಿಕೊಳ್ಳಲು ನಿರಾಕರಿಸಿದರು. ವಾತಾವರಣದಲ್ಲಿ ಹಸಿರು ಮನೆ ಅನಿಲ ಸಂಗ್ರಹಗೊಳ್ಳಲು ಕೈಗಾರಿಕೀಕರಣಗೊಂಡ ದೇಶಗಳು ಮತ್ತು ಮುಖ್ಯವಾಗಿ ಅಮೆರಿಕ ಕಾರಣ ಎಂಬುದು ಸ್ಪಷ್ಟವಾಗಿತ್ತು. ಹಿಂದೆ ಅತ್ಯಂತ ಹೆಚ್ಚು ಹಾನಿ ಮಾಡಿದವರು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ನ್ಯಾಯದ ಒತ್ತಡ ಹೆಚ್ಚಿತ್ತು. ಪಶ್ಚಿಮ ಯುರೋಪ್‌ನ ದೇಶಗಳು ಕೆಲವು ಬದಲಾವಣೆಗಳಿಗೆ ಸಿದ್ಧವಾಗಿದ್ದವು. ಆದರೆ ಡೆಮಾಕ್ರಟಿಕ್ ಪಕ್ಷ ಅಧಿಕಾರದಲ್ಲಿದ್ದರೂ ಅಮೆರಿಕ ಅದಕ್ಕೆ ಸಿದ್ಧವಿರಲಿಲ್ಲ.

ಹವಾಮಾನ ಬದಲಾವಣೆ ಬಗ್ಗೆ 1997ರ ಡಿಸೆಂಬರ್‌ನಲ್ಲಿ ಕ್ಯೋಟೊದಲ್ಲಿ ಎರಡನೇ ದೊಡ್ಡ ಅಂತರರಾಷ್ಟ್ರೀಯ ಸಮಾವೇಶ ನಡೆಯಿತು. ಇಲ್ಲಿ ಅಂಗೀಕರಿಸಲಾದ ಕ್ಯೋಟೊ ಕರಾರು ಪ್ರಕಾರ ದೇಶಗಳೇ ಸ್ವಯಂಪ್ರೇರಣೆಯಿಂದ ಇಂಗಾಲ ಹೊರಸೂಸುವಿಕೆ ಕಡಿತಗೊಳಿಸುವ ಬದ್ಧತೆ ಪ್ರದರ್ಶಿಸಬೇಕಿತ್ತು. ಇದಕ್ಕೆ ಸಹಿ ಮಾಡಿದ ಮೊದಲ ದೇಶಗಳಲ್ಲಿ ಜರ್ಮನಿಯೂ ಒಂದು. ತಮ್ಮ ಅಧಿಕಾರಾವಧಿಯ ಕೊನೆಯ ತಿಂಗಳುಗಳಲ್ಲಿದ್ದ ಹೆಲ್ಮಟ್ ಕೋಲ್, 2020ರ ಹೊತ್ತಿಗೆ ತಮ್ಮ ದೇಶ ಶೇ 20ರಷ್ಟು ಇಂಗಾಲ ಹೊರಸೂಸುವಿಕೆ ಕಡಿತಗೊಳಿಸುವುದಾಗಿ ಘೋಷಿಸಿದರು. ಫ್ರಾನ್ಸ್, ಬ್ರಿಟನ್ ಮತ್ತು ಯುರೋಪ್‌ನ ಇತರ ಕೆಲವು ಸಣ್ಣ ದೇಶಗಳೂ ಇದೇ ಮಾತು ಕೊಟ್ಟವು. ಆದರೆ ಅಮೆರಿಕ ಮಾತ್ರ ಇಂತಹ ಯಾವುದೇ ಬದ್ಧತೆ ತೋರಲು ಒಪ್ಪಲಿಲ್ಲ.

ಹವಾಮಾನ ಹಾಳು ಮಾಡುವಲ್ಲಿ ಅಮೆರಿಕದ ಕೊಡುಗೆಯೇ ಅತಿ ಹೆಚ್ಚು ಎಂಬುದು 1997-98ರ ಹೊತ್ತಿಗೆ ಸ್ಪಷ್ಟವಾಗಿತ್ತು. ಮುಂದಿನ ದಿನಗಳಲ್ಲಿ, ಅತ್ಯಂತ ಜನನಿಬಿಡ ಮತ್ತು ತೀವ್ರವಾಗಿ ಕೈಗಾರಿಕೀಕರಣಗೊಳ್ಳುತ್ತಿರುವ ಚೀನಾ ಮತ್ತು ಭಾರತ ಅತಿ ಹೆಚ್ಚಿನ ಹಾನಿ ಉಂಟು ಮಾಡಲಿವೆ ಎಂಬುದೂ ಸ್ಪಷ್ಟವಾಗಿತ್ತು. ಕ್ಯೋಟೊ ಕರಾರಿಗೆ ಸಹಿ ಮಾಡದ ಕ್ಲಿಂಟನ್-ಗೋರ್ ಆಡಳಿತದ ಕ್ರಮ ಹೊಣೆಗೇಡಿತನದ್ದು ಎಂದೇ ವಿಶ್ಲೇಷಿಸಬೇಕು. 1998ರಲ್ಲಿ ಜಗತ್ತಿನ ಅತ್ಯಂತ ದೊಡ್ಡ ಮಾಲಿನ್ಯಕಾರಕ ದೇಶವು ಯುರೋಪ್‌ನ ದೇಶಗಳ ಹಾಗೆ ಜವಾಬ್ದಾರಿಯಿಂದ ವರ್ತಿಸಿದ್ದರೆ ಚೀನಾ ಮತ್ತು ಭಾರತ ಕರಾರಿಗೆ ಸಹಿ ಹಾಕುತ್ತಿದ್ದವು. ಇಂಗಾಲ ಹೊರಸೂಸುವಿಕೆ ಕಡಿತದ ಹೆಚ್ಚು ವ್ಯಾಪಕವಾದ ಮತ್ತು ಕಡಿಮೆ ತೀವ್ರತೆಯ ಒಪ್ಪಂದವನ್ನು ಆಗ ಮಾಡಿಕೊಳ್ಳಬಹುದಿತ್ತು.

1990ರ ದಶಕದ ಕೊನೆಯ ಅವಧಿಯಲ್ಲಿ ಯುರೋಪ್‌ನ ದೇಶಗಳೊಂದಿಗೆ ಅಮೆರಿಕ, ಚೀನಾ ಮತ್ತು ಭಾರತ ಸೇರಿದ್ದರೆ ವಾತಾವರಣದಲ್ಲಿ ಹಸಿರು ಮನೆ ಅನಿಲ ಶೇಖರಣೆಯನ್ನು ತಡೆಗಟ್ಟಬಹುದಿತ್ತು ಮತ್ತು ಹವಾಮಾನ ಬದಲಾವಣೆ ಈಗ ಇರುವುದಕ್ಕಿಂತ ಬಹಳ ಕಡಿಮೆ ಅಪಾಯಕಾರಿಯಾಗಿ ಇರುತ್ತಿತ್ತು. ಕೆಲವು ಜನರು ಅಲ್ ಗೋರ್ ಅವರನ್ನು ಪರಿಸರ ಹೀರೊ ಎಂದು ಪರಿಗಣಿಸುತ್ತಾರೆ. ಆದರೆ ನಾನು ಅವರನ್ನು ಪರಿಸರ ಅವಕಾಶವಾದಿ ಎಂದು ನೋಡುತ್ತೇನೆ. ಕ್ಲಿಂಟನ್ ನೇತೃತ್ವದ ಸರ್ಕಾರದ ಭಾಗವಾಗಿದ್ದಾಗ ಈ ಬಗ್ಗೆ ತಮ್ಮ ಸರ್ಕಾರ ಜವಾಬ್ದಾರಿಯುತವಾಗಿ ವರ್ತಿಸುವಂತೆ ಮಾಡಲಿಲ್ಲ. 2000ದಲ್ಲಿ ಅಧ್ಯಕ್ಷ ಚುನಾವಣೆಗೆ ನಿಂತಾಗ ಅವರ ಪ್ರಚಾರದಲ್ಲಿ ಪರಿಸರದ ವಿಷಯ ಪ್ರಸ್ತಾಪವಾಗಲೇ ಇಲ್ಲ. ಚುನಾವಣೆ ಸೋತ ನಂತರ ಪವಾಡಸದೃಶವಾಗಿ ಅವರಿಗೆ ತಮ್ಮ ಹಸಿರು ಭೂತಕಾಲ ನೆನಪಾಗಿ, ಮಾನವ ಕುಲಕ್ಕೆ ಹವಾಮಾನ ಬದಲಾವಣೆ ತರಬಲ್ಲ ಅಪಾಯದ ಬಗ್ಗೆ ಸಿನಿಮಾ ಮಾಡಿದರು. ಇದು ಆಷಾಢಭೂತಿತನದ ಪರಮಾವಧಿ. ಹೀಗಿದ್ದೂ ಓಸ್ಲೊದಲ್ಲಿರುವ ಬುದ್ಧಿವಂತರನ್ನು ಮೂರ್ಖರನ್ನಾಗಿ ಮಾಡಿದ ಗೋರ್, ನೊಬೆಲ್ ಶಾಂತಿ ಪ್ರಶಸ್ತಿಯನ್ನೂ ಪಡೆದುಕೊಂಡರು.

1990ರ ದಶಕದಲ್ಲಿ ಅಮೆರಿಕ ಸಣ್ಣತನ, ಸ್ವಾರ್ಥ ಪ್ರದರ್ಶಿಸಿದರೆ ಹೆಲ್ಮಟ್ ಕೋಲ್ ಅದಕ್ಕೆ ಸಂಪೂರ್ಣ ವ್ಯತಿರಿಕ್ತವಾದ ಅಂತರರಾಷ್ಟ್ರೀಯತೆ ಮೆರೆದರು. ಈಗ ಇಂಗ್ಲೆಂಡ್‌ನ ಡೇವಿಡ್ ಕ್ಯಾಮರಾನ್ ಮತ್ತು ಅವರಂತಹ ಇತರರ ವಿರುದ್ಧ ಮರ್ಕೆಲ್ ದೊಡ್ಡ ಮಾನವೀಯತೆ ಮೆರೆದಿದ್ದಾರೆ.

ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದಲ್ಲಿನ ಆಂತರಿಕ ಸಂಘರ್ಷವೇ ದೊಡ್ಡ ಸಂಖ್ಯೆಯ ನಿರಾಶ್ರಿತರು ಯುರೋಪ್‌ನತ್ತ ಬರಲು ಕಾರಣ. ಮೊದಲನೇ ಮಹಾಯುದ್ಧದ ನಂತರ ಕೆಲವು ಕೃತಕ ದೇಶಗಳು ಮತ್ತು ಇರಾಕ್, ಸಿರಿಯಾ, ಜೋರ್ಡನ್, ಸೌದಿ ಅರೇಬಿಯಾಗಳಂತಹ ‘ಸಾಮ್ರಾಜ್ಯ’ಗಳನ್ನು ಸೃಷ್ಟಿಸಿದ ಬ್ರಿಟನ್ ಮತ್ತು ಫ್ರಾನ್ಸ್ ಇಲ್ಲಿ ಮುಖ್ಯ ತಪ್ಪಿತಸ್ಥರು; ತೀರಾ ಇತ್ತೀಚೆಗೆ, ಸೌದಿಯ ಪ್ರಗತಿ ವಿರೋಧಿಗಳಿಗೆ ಅಮೆರಿಕ ಮತ್ತು ಬ್ರಿಟನ್ ನೀಡಿದ ಬೆಂಬಲ, ಇರಾಕ್ ಮೇಲೆ ದಾಳಿ ನಡೆಸಿದ ತಪ್ಪು ನಿರ್ಧಾರ ಸಮಸ್ಯೆಯನ್ನು ಇನ್ನಷ್ಟು ಸಂಕೀರ್ಣಗೊಳಿಸಿತು. ಈ ತಪ್ಪುಗಳು ಮತ್ತು ಅಪರಾಧಗಳು ಚಳವಳಿಗೆ ಪ್ರೇರಣೆಯಾದರೆ, ಮುಸ್ಲಿಂ ಮೂಲಭೂತವಾದಿಗಳು ಅದನ್ನು ತ್ವರಿತವಾಗಿ ತಮ್ಮ ತೆಕ್ಕೆಗೆ ತೆಗೆದುಕೊಂಡರು.

ಇತರರಿಂದಾಗಿ ಉಂಟಾಗಿರುವ ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಜರ್ಮನಿಯ ರಾಜಕಾರಣಿಗಳು ಮುಂದಾಗುತ್ತಿದ್ದಾರೆ ಎಂಬುದನ್ನೂ ಗಣನೆಗೆ ತೆಗೆದುಕೊಂಡರೆ ಅವರ ನಡತೆ ಇನ್ನೂ ಹೆಚ್ಚಿನ ಶ್ಲಾಘನೆಗೆ ಒಳಗಾಗುತ್ತದೆ. ಹಸಿರು ಮನೆ ಅನಿಲ ಶೇಖರಗೊಳ್ಳಲು ಅಮೆರಿಕದ ಕೊಡುಗೆ ಜರ್ಮನಿಗಿಂತ ಬಹಳ ಹೆಚ್ಚು. ಹಾಗಿದ್ದೂ ಅದನ್ನು ತಡೆಯುವಲ್ಲಿ ಅಮೆರಿಕ ಮಾಡಿದ್ದು ಅತ್ಯಲ್ಪ. ಹಾಗೆಯೇ, ಇಸ್ಲಾಮಿಕ್ ಸ್ಟೇಟ್ ಸ್ವಯಂಪ್ರೇರಿತವಾಗಿ ಹುಟ್ಟಿಕೊಂಡ ಹೋರಾಟವೇ ಅಥವಾ ಅಮೆರಿಕ ಮತ್ತು ಬ್ರಿಟನ್‌ನ ಸಾಹಸಿಕತೆಯ ಫಲವೇ ಎಂಬುದು ಚರ್ಚಾರ್ಹ ವಿಷಯ. ಆದರೆ ಈ ವಿಷಯದಲ್ಲಿ ಜರ್ಮನಿಯ ಪಾತ್ರವೇ ಇಲ್ಲ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ.

ಅಮೆರಿಕನ್ನರು, ವಿಶೇಷವಾಗಿ ಅಲ್ಲಿನ ರಾಜಕಾರಣಿಗಳು, ಮತ್ತೂ ವಿಶೇಷವಾಗಿ ಅಲ್ಲಿನ ಅಧ್ಯಕ್ಷರು, ಇತರ ದೇಶಗಳ ಜನರಿಗಿಂತ ಮಾನವ ಕುಲದ ಬಗ್ಗೆ ತಮಗೆ ಹೆಚ್ಚು ಕಾಳಜಿ ಎಂದು ಭಾವಿಸುತ್ತಾರೆ. ಜಗತ್ತಿನ ಅತ್ಯಂತ ದೊಡ್ಡ ಶಕ್ತಿಯಾಗಿ ಮೆರೆಯುತ್ತಿದ್ದ ಕಾಲದಲ್ಲಿ ಬ್ರಿಟನ್ ರಾಜಕಾರಣಿಗಳು ಮತ್ತು ಪ್ರಧಾನಿಗಳು ತಾವು ಮಾನವ ಕುಲದ ಅತ್ಯುತ್ತಮ, ಅತ್ಯಂತ ವಿಶ್ವಾಸಾರ್ಹ ರಕ್ಷಕರು ಎಂದು ಭಾವಿಸಿದ್ದರು. ಜರ್ಮನಿಯ ರಾಜಕಾರಣಿಗಳು ಆರಂಭಿಸಿದ ಯುದ್ಧಗಳು ಬ್ರಿಟಿಷರ ಮನಸಿನಿಂದ ಮಾಸುವುದೇ ಇಲ್ಲ. ಎರಡು ಮಹಾಯುದ್ಧಗಳ ಬಗ್ಗೆ ಪ್ರತಿ ವರ್ಷವೂ ಹತ್ತಾರು ಪುಸ್ತಕಗಳು ಮತ್ತು ಸಾಕ್ಷ್ಯಚಿತ್ರಗಳು ತಯಾರಾಗುತ್ತವೆ. ವಸ್ತು ಮತ್ತು ವಿಷಯದಲ್ಲಿ ಇವುಗಳು ಎಷ್ಟೇ ಭಿನ್ನವಾಗಿದ್ದರೂ ಅವುಗಳು ಮುಖ್ಯವಾಗಿ ಬ್ರಿಟಿಷರು ಒಳ್ಳೆಯವರು ಮತ್ತು ಜರ್ಮನರು ಅಪಾಯಕಾರಿಗಳು, ಕೆಟ್ಟವರು ಎಂದು ಬಿಂಬಿಸುತ್ತವೆ.

ಈ ಸಿದ್ಧ ಮಾದರಿಗಳಿಂದ ನಾವೀಗ ಮುಂದೆ ಸಾಗಬೇಕು. ಎಷ್ಟೇ ಅನಾಕರ್ಷಕವಾಗಿದ್ದರೂ ಕೋಲ್ ಮತ್ತು ಮರ್ಕೆಲ್ ಅವರಿಗೆ ಕೈಸರ್ ವಿಲ್‌ಹೆಲ್ಮ್ ಮತ್ತು ಅಡಾಲ್ಫ್ ಹಿಟ್ಲರ್ ಅವರಿಗಿಂತ ಒಂದಿಡೀ ಜಗತ್ತಿನ ವ್ಯತ್ಯಾಸವಿದೆ. ಸನ್ನಿವೇಶಗಳು ಮತ್ತು ಬಹುಶಃ ಅವರದೇ ವ್ಯಕ್ತಿತ್ವಗಳು ಇವರನ್ನು ಕಡಿಮೆ ಕೆಟ್ಟವರು ಮತ್ತು ಹೆಚ್ಚು ಮುಕ್ತ ಮನಸ್ಸಿನವರನ್ನಾಗಿ ಮಾಡಿವೆ. ಇನ್ನೊಂದೆಡೆ, ಅಮೆರಿಕ ಮತ್ತು ಬ್ರಿಟನ್ ರಾಜಕಾರಣಿಗಳು ಹೆಚ್ಚು ಸ್ವಾರ್ಥಿಗಳೂ ಕುಬ್ಜರೂ ಆಗಿದ್ದಾರೆ. ಕ್ಲಿಂಟನ್ ಮತ್ತು ಗೋರ್ ಅಂಥವರಿಗೆ ಫ್ರಾಂಕ್ಲಿನ್ ಡಿ ರೂಸ್‌ವೆಲ್ಟ್ ಅವರೊಂದಿಗೆ ಹೋಲಿಸಬಹುದಾದ ಏಕೈಕ ಸಾಮ್ಯವೆಂದರೆ ಡೆಮಾಕ್ರಟಿಕ್ ಪಕ್ಷಕ್ಕೆ ಸೇರಿದವರು ಎಂಬುದು ಮಾತ್ರ. ಹಾಗೆಯೇ, ವಿನ್‌ಸ್ಟನ್ ಚರ್ಚಿಲ್ ಅವರಂತೆಯೇ ತಾನೂ ಕನ್ಸರ್ವೇಟಿವ್ ಪ್ರಧಾನಿ ಎಂದು ಡೇವಿಡ್ ಕ್ಯಾಮರಾನ್ ಹೇಳಿಕೊಳ್ಳಬಹುದು.

ಈ ಮೂರೂ ದೇಶಗಳನ್ನು ಸುಮಾರಾಗಿ ಗೊತ್ತಿರುವವನಾಗಿ ಹೇಳಬಹುದಾದ ಒಂದು ವಿಷಯವೆಂದರೆ, ನಾನು ಜರ್ಮನಿಗಿಂತ ಅಮೆರಿಕ ಮತ್ತು ಬ್ರಿಟನ್‌ನಲ್ಲಿ ಹೆಚ್ಚು ನಿರಾತಂಕವಾಗಿರುತ್ತೇನೆ. ಜರ್ಮನಿಯ ಬೌದ್ಧಿಕ ಸಂಸ್ಕೃತಿ ಹೆಚ್ಚು ಗಡುಸು ಮತ್ತು ನಿಯಮ ನಿಷ್ಠ. ಅಲ್ಲಿನ ಬೀದಿಯಲ್ಲಿ ಸಿಗುವ ಸಾಮಾನ್ಯ ವ್ಯಕ್ತಿ ಹೆಚ್ಚು ನಿಷ್ಠುರನಾಗಿರುತ್ತಾನೆ. ಆದರೆ ರಾಜಕಾರಣಿಗಳ ಹೋಲಿಕೆಯಲ್ಲಿ ತಕ್ಕಡಿ ಜರ್ಮನಿ ಕಡೆಗೆ ವಾಲುತ್ತದೆ. ಎರಡನೇ ಮಹಾಯುದ್ಧದ ನಂತರ ಬ್ರಿಟನ್ ಅಥವಾ ಅಮೆರಿಕದ ಯಾವುದೇ ನಾಯಕರು 1990ರ ದಶಕದಲ್ಲಿ ಹೆಲ್ಮಟ್ ಕೋಲ್ ಅವರಂತೆ ಅಥವಾ ಈಗ ಏಂಜೆಲಾ ಮರ್ಕೆಲ್ ಅವರಂತೆ ವಿಶಾಲವಾಗಿ ಅಂತರರಾಷ್ಟ್ರೀಯ ಪ್ರಜ್ಞೆ ಪ್ರದರ್ಶಿಸಿದ್ದೇ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.