ಕೇವಲ ಒಂದೂವರೆ ದಶಕದ ಹಿಂದೆ ಮನೆಗೊಂದು ದೂರವಾಣಿ ಸಂಪರ್ಕ ಇರುವುದು ಶ್ರೀಮಂತಿಕೆಯ ಅದಲ್ಲವಾದರೆ ಮೇಲ್ಮಧ್ಯಮ ವರ್ಗದ ಸಂಕೇತವಾಗಿತ್ತು. ಹೆಚ್ಚು ಕಡಿಮೆ ಇದೇ ಕಾಲದಲ್ಲಿ ಮೊಬೈಲ್ ಫೋನ್ ಇರುವುದು ಶ್ರೀಮಂತಿಕೆಯ ಸಂಕೇತವಾಗಿತ್ತು. ಈಗ ಪರಿಸ್ಥಿತಿ ಎಷ್ಟರ ಮಟ್ಟಿಗೆ ಬದಲಾಗಿದೆ ಎಂದರೆ ಮೂರನೇ ಹಂತದ ಪಟ್ಟಣಗಳಲ್ಲಿಯೂ ಸಾರ್ವಜನಿಕ ದೂರವಾಣಿ ಕೇಂದ್ರಗಳನ್ನು ಕಾಣುವುದು ಕಷ್ಟವಾಗಿಬಿಟ್ಟಿದೆ. ನಗರಗಳ ಎಲ್ಲಾ ಬೀದಿಗಳಲ್ಲಿಯೂ ಕಾಣ ಸಿಗುತ್ತಿದ್ದ ಎಸ್‌ಟಿಡಿ ಬೂತ್ ಈಗ ದುರ್ಬೀನು ಬಳಸಿ ಹುಡುಕಿದರೂ ಕಾಣಸಿಗುವುದಿಲ್ಲ. ಕಾರಣ ಸರಳ, ಇಂದು ಬಡವರ ಬಳಿಯೂ ಮೊಬೈಲ್ ಫೋನ್‌ಗಳಿವೆ! ಬಿಪಿಎಲ್ (ಬಡತನ ರೇಖೆಯ ಕೆಳಗಿರುವವರು) ಪಡಿತರ ಚೀಟಿ ಮಾಡಿಸುವುದಕ್ಕೂ ಒಂದು ಮೊಬೈಲ್ ಫೋನ್ ಇರಬೇಕಾಗುತ್ತದೆ. ಇಲ್ಲವಾದರೆ ಫೋಟೊ ತೆಗೆಸಿಕೊಳ್ಳಲು ಎಲ್ಲಿಗೆ ಯಾವತ್ತು ಹೋಗಬೇಕು ಎಂಬ ಮಾಹಿತಿ ನೀಡುವುದಕ್ಕೆ ಇಲಾಖೆಗೆ ಕಷ್ಟವಾಗುತ್ತದೆ. ಅಥವಾ ಬಡವನಿಗೆ ಕಾರ್ಡ್ ಪಡೆಯಲು ಬೇಕಾದ ಮಾಹಿತಿಯೇ ದೊರೆಯುವುದಿಲ್ಲ! ಇದನ್ನು ಸ್ವಲ್ಪ ಸರಳೀಕರಿಸಿ ಹೇಳುವುದಾದರೆ ಈ ಕಾಲದಲ್ಲಿ ಬಡವರಾಗಿರುವುದು ಹಿಂದೆಂದಿಗಿಂತಲೂ ಕಷ್ಟ.

ಈ ಕಾಲದಲ್ಲಿ ಡಿಜಿಟಲ್ ಡಿವೈಡ್ ಅಥವಾ ಡಿಜಿಟಲ್ ಕಂದಕ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ನಮ್ಮ ರಾಜಕೀಯ ಪಕ್ಷಗಳು ಇದನ್ನು ಸರಳವಾಗಿ ಅರ್ಥ ಮಾಡಿಕೊಂಡು ಬಿಟ್ಟಿವೆ. ಒಂದು ಹಂತದಲ್ಲಿ ಕಾಂಗ್ರೆಸ್ ಪಕ್ಷ ಎಲ್ಲ ಬಡವರಿಗೂ ಒಂದೊಂದು ಮೊಬೈಲ್ ದೂರವಾಣಿ ಒದಗಿಸಿಬಿಡುವ ಮಾತನಾಡಿತ್ತು. ಆದರೆ ಅದು ಪರಿಕಲ್ಪನೆಯ ಮಟ್ಟದಲ್ಲಿ ಉಳಿದು ಹೋಯಿತು. ಹಾಗೆಂದು ಈ ಪರಿಕಲ್ಪನೆಯನ್ನು ರಾಜಕೀಯ ಪಕ್ಷಗಳು ಕೈಬಿಟ್ಟಿವೆ ಎಂದಲ್ಲ. 2014ರ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಎರಡು ಮುಖ್ಯ ರಾಜಕೀಯ ಪಕ್ಷಗಳೂ ಎಲ್ಲಾ ಮೊಬೈಲ್ ಬಳಕೆದಾರರಿಗೂ ಇಂಟರ್‌ನೆಟ್ ಬಳಸುವ ಅನುಕೂಲವನ್ನು ಕಲ್ಪಿಸುವ ಭರವಸೆ ನೀಡಿವೆ. ನಿರ್ದಿಷ್ಟ ಪ್ರದೇಶಗಳಲ್ಲಿ ಉಚಿತ ಸಾರ್ವಜನಿಕ ವೈಫೈ ಸಂಪರ್ಕ ಕಲ್ಪಿಸುವುದರ ಹಿಂದಿರುವುದೂ ಇದೇ ಚಿಂತನೆ. ಎಲ್ಲರನ್ನೂ ಇಂಟರ್‌ನೆಟ್‌ನ ವ್ಯಾಪ್ತಿಯೊಳಕ್ಕೆ ತರುವುದು ಇದರ ಉದ್ದೇಶ. ಇಂಥ ಯೋಜನೆಗಳು ನಿಜಕ್ಕೂ ಡಿಜಿಟಲ್ ಕಂದಕಕ್ಕೊಂದು ಸೇತುವೆಯಾಗಬಲ್ಲವೇ?

ಬಹುಶಃ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದಕ್ಕೆ ಈ ಡಿಜಿಟಲ್ ಕಂದಕದ ಪರಿಕಲ್ಪನೆಯನ್ನು ಭಾರತೀಯವಾಗಿ ಅರ್ಥಮಾಡಿಕೊಳ್ಳಬೇಕಾಗುತ್ತದೆ. 1995ರಲ್ಲಿ ಭಾರತದಲ್ಲಿ ಇಂಟರ್‌ನೆಟ್ ಸಾರ್ವಜನಿಕ ಬಳಕೆಗೆ ಸಿಕ್ಕಿತು. ಹೆಚ್ಚು ಕಡಿಮೆ ಇದೇ ಹೊತ್ತಿಗೆ ಮೊಬೈಲ್ ಫೋನ್‌ಗಳ ಆಗಮನವೂ ಆಯಿತು. ಆದರೆ, ಬ್ರಾಡ್‌ಬ್ಯಾಂಡ್ ಸಂಪರ್ಕಗಳು ಮನೆ ಮನೆಗೆ ತಲುಪುವುದಕ್ಕೆ ಮತ್ತೂ ಹತ್ತು ವರ್ಷಗಳೇ ಬೇಕಾದವು. ಈ ನಡುವೆ ಮೊಬೈಲ್‌ನ ಒಳಬರುವ ಕರೆಗಳು ಉಚಿತವಾದವು. ಅದರೊಂದಿಗೆ ಮೊಬೈಲ್ ಫೋನ್‌ಗಳ ಸಂಖ್ಯೆ ಅಗಾಧವಾಗಿ ಹೆಚ್ಚ ತೊಡಗಿತು. ಇದಕ್ಕೆ ಖಾಸಗಿ ಮೊಬೈಲ್ ಸೇವಾದಾತರು ಚಂದಾದಾರರನ್ನು ಆಕರ್ಷಿಸಲು ನಡೆಸಿದ ಸ್ಪರ್ಧೆಯೂ ಕೆಲ ಮಟ್ಟಿಗೆ ಕಾರಣ. ಇದರ ಹಿಂದೆಯೇ ಮೊಬೈಲ್ ಫೋನ್‌ಗಳ ಬೆಲೆಯಲ್ಲೂ ಇಳಿಕೆ ಕಂಡುಬಂತು. ಇವೆಲ್ಲವೂ ಸೇರಿ ಮೊಬೈಲ್ ಸಂಪರ್ಕದ ಸಂಖ್ಯೆ ಈಗ 98 ಕೋಟಿಯಷ್ಟಿದೆ. ಈಗ ಎಲ್ಲಾ ಮೊಬೈಲ್ ಸಂಪರ್ಕಗಳಿಗೆ ಇಂಟರ್‌ನೆಟ್ ಸಂಪರ್ಕ ಕಲ್ಪಿಸುವ ಮಾತುಗಳು ಕೇಳಿಬರುತ್ತಿವೆ.

ಭಾರತದ ಇಂಟರ್‌ನೆಟ್ ಬಳಕೆದಾರರಲ್ಲಿ ಬಹುಪಾಲು ಮಂದಿ ಮೊಟ್ಟ ಮೊದಲು ಇಂಟರ್‌ನೆಟ್‌ಗೆ ಸಂಪರ್ಕ ಪಡೆದದ್ದೇ ಮೊಬೈಲ್ ಫೋನ್‌ನ ಮೂಲಕ. ಹಾಗೆಯೇ ಈಗಲೂ 43 ಕೋಟಿ ಮಂದಿಯ ಬಳಿ ಇಂಟರ್‌ನೆಟ್ ಬಳಸಬಲ್ಲ ಫೋನ್‌ಗಳಿವೆ ಎಂಬ ವಾಸ್ತವವನ್ನು ಗಮನದಲ್ಲಿಟ್ಟುಕೊಂಡರೆ ಎಲ್ಲಾ ಮೊಬೈಲ್ಗಳಿಗೆ ಇಂಟರ್‌ನೆಟ್ ಎಂಬ ಭರವಸೆಯ ಹಿಂದಿನ ಪ್ರೇರಣೆಗಳು ಅರಿಯಬಹುದು. ಡಿಜಿಟಲ್ ಕಂದಕಕ್ಕೆ ಸೇತುವೆ ನಿರ್ಮಿಸುವ ಈ ಬಗೆಯ ಕೆಲಸಗಳಿಗೆ ಒಂದು ದೊಡ್ಡ ಮಿತಿ ಇದೆ. ಇವೆಲ್ಲವೂ ಸಂಪರ್ಕಕ್ಕೆ ಬೇಕಿರುವ ಮೂಲಸೌಕರ್ಯದ ನಿರ್ಮಾಣ ಮತ್ತು ಅದಕ್ಕೆ ಬೇಕಿರುವ ಉಪಕರಣಗಳನ್ನು ಒದಗಿಸುವ ಮಾದರಿ. ಆದರೆ, ಡಿಜಿಟಲ್ ಕಂದಕ ಈಗ ಕೇವಲ ಇಂಥ ಮಾರ್ಗಗಳಿಂದ ಮುಚ್ಚುವಂಥದ್ದಾಗಿ ಉಳಿದಿಲ್ಲ. ಭಾರತದಲ್ಲಿರುವ ಕಂದಕದ ಸ್ವರೂಪ ಇನ್ನೂ ಹೆಚ್ಚು ಸಂಕೀರ್ಣ.

ನಮ್ಮಲ್ಲಿ ಡಿಜಿಟಲ್ ಕಂದಕದ ಕುರಿತ ಚರ್ಚೆ ಈ ತಂತ್ರಜ್ಞಾನ ನಮ್ಮನ್ನು ತಲುಪಿದ ಹೊತ್ತಿಗೇ ಆರಂಭವಾಗಿತ್ತು. ಈ ಚರ್ಚೆ ಅಲ್ಲೇ ನಿಂತಿರುವುದು ಮಾತ್ರ ದುರದೃಷ್ಟಕರ. 1998ರ ಹೊತ್ತಿಗೆ ಡಿಜಿಟಲ್ ಕಂದಕದ ಕುರಿತು ವಿಶ್ವವ್ಯಾಪಿಯಾಗಿ ಚರ್ಚೆ ಆರಂಭವಾದ ಹೊತ್ತಿನಲ್ಲಿ ಇದು ‘ಮಾಹಿತಿಯುಳ್ಳವರು’ ಮತ್ತು ‘ಮಾಹಿತಿ ಇಲ್ಲದವರು’ ಎಂಬ ಎರಡು ವರ್ಗವನ್ನು ಸೃಷ್ಟಿಸುತ್ತದೆ ಎಂದು ಗ್ರಹಿಸಲಾಗಿತ್ತು. ಇದನ್ನು ನಿವಾರಿಸುವುದಕ್ಕೆ ಎಲ್ಲರಿಗೂ ಮಾಹಿತಿ ಒದಗಿಸುವುದಕ್ಕೆ ಬೇಕಿರುವ ಸೌಕರ್ಯಗಳನ್ನು ಒದಗಿಸಿದರೆ ಸಾಕು ಎಂಬ ಗ್ರಹಿಕೆಯೊಂದಿಗೆ ಪ್ರಯತ್ನಗಳೂ ಆರಂಭವಾದವು. ಒಂದೂವರೆ ದಶಕದ ನಂತರವೂ ಭಾರತದಲ್ಲಿ ಡಿಜಿಟಲ್ ಕಂದಕಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕೆ ಸಂಬಂಧಿಸಿದ ಪ್ರಯತ್ನಗಳು ಇದರಿಂದ ಆಚೆಗೆ ಚಲಿಸುತ್ತಿಲ್ಲ.

ಸದ್ಯದ ಭಾರತದ ಸ್ಥಿತಿಯನ್ನೊಮ್ಮೆ ಅವಲೋಕಿಸೋಣ. ತೀರಾ ಇತ್ತೀಚಿನ ಅಂಕಿ– ಅಂಶಗಳು ಹೇಳುವಂತೆ ಮೊಬೈಲ್ ಫೋನ್ ಸಂಪರ್ಕ ಪಡೆದವರಲ್ಲಿ 15 ಕೋಟಿ ಮಂದಿ ಮಾತ್ರ ಇಂಟರ್‌ನೆಟ್ ಬಳಕೆದಾರರು. ಈ ಸಂಖ್ಯೆಯನ್ನು ಭಾರತದ ಒಟ್ಟು ಇಂಟರ್‌ನೆಟ್ ಬಳಕೆದಾರರ ಸಂಖ್ಯೆ ಎಂದಿಟ್ಚುಕೊಳ್ಳಬಹುದು. ಹೆಚ್ಚಿನ ಬ್ರಾಡ್‌ಬ್ಯಾಂಡ್ ಬಳಕೆದಾರರು ಮೊಬೈಲ್ ಇಂಟರ್‌ನೆಟ್ ಬಳಕೆದಾರರೂ ಆಗಿರುತ್ತಾರೆ. ಅಂದರೆ ಇಲ್ಲಿಯ ತನಕ ಇಂಟರ್‌ನೆಟ್ ತಲುಪಿರುವುದು ಶೇಕಡಾ 10.2ರಷ್ಟು ಮಂದಿಗೆ ಎನ್ನಬಹುದು. ಇನ್ನುಳಿದ ಶೇಕಡಾ 90ರಷ್ಟು ಮಂದಿಯನ್ನು ತಲುಪುವ ಪ್ರಶ್ನೆ ಸರಳವಾದುದಲ್ಲ. ಮೊಬೈಲ್ ಮೂಲಕ ಇಂಟರ್‌ನೆಟ್ ಎಂಬ ಪರಿಕಲ್ಪನೆ ಸಂಪೂರ್ಣ ನಿಜವಾದರೂ ಡಿಜಿಟಲ್ ಕಂದಕದ ಆಚೆಗೇ ಉಳಿದುಬಿಡುವ ಒಂದು ವರ್ಗವಿರುತ್ತದೆ. ಬಹುಶಃ ಅದರ ಕುರಿತಂತೆ ಈಗಲೇ ಚಿಂತಿಸುವ ಅಗತ್ಯವಿದೆ.

ಮೂಲ ಸೌಕರ್ಯ ಮತ್ತು ಉಪಕರಣಗಳನ್ನು ಒದಗಿಸುವ ಮೂಲಕ ತಲುಪಲಾಗದ ವರ್ಗ ಯಾವುದು? ಈ ಪ್ರಶ್ನೆಯನ್ನು ಸುಮಾರು ಏಳೆಂಟು ವರ್ಷಗಳ ಹಿಂದೆಯೇ ಆಸ್ಟ್ರೇಲಿಯಾದ ಕರ್ಟಿನ್ ವಿಶ್ವವಿದ್ಯಾಲಯದ ವಿದ್ವಾಂಸ ಮೈಕೆಲ್ ಕೆಂಟ್ ಚರ್ಚಿಸಿದ್ದರು. ಮೂಲ ಸೌಕರ್ಯ ಮತ್ತು ಸಂಪರ್ಕವನ್ನು ಖಾತರಿ ಪಡಿಸಿಕೊಂಡ ನಂತರವೂ ಡಿಜಿಟಲ್ ಜಗತ್ತಿನ ಅಂಚಿನಲ್ಲಿ ಉಳಿಯುವ ವರ್ಗದ ಬಗ್ಗೆ ಅವರು ಹೇಳುತ್ತಾರೆ. ಬಹುಶಃ ಇದು ಪ್ರಪಂಚದ ಬೇರೆ ಯಾವುದೇ ದೇಶಕ್ಕಿಂತ ಭಾರತದ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತವಾಗುತ್ತದೆ. ಬೇರಾವುದೇ ತಂತ್ರಜ್ಞಾನಕ್ಕಿಂತ ಹೆಚ್ಚು ಬೌದ್ಧಿಕವಾದುದು ಡಿಜಿಟಲ್ ತಂತ್ರಜ್ಞಾನ. ಇದನ್ನು ಬಳಸುವುದಕ್ಕೆ ಕೇವಲ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ಗಳ ಲಭ್ಯತೆಯಷ್ಟೇ ಸಾಕಾಗುವುದಿಲ್ಲ. ಅದನ್ನು ಬಳಸುವುದಕ್ಕೊಂದು ಮಟ್ಟದ ತಿಳಿವಿನ ಅಗತ್ಯವಿದೆ. ಹಾಗೆಯೇ ಆ ತಿಳಿವು ಬರುವುದಕ್ಕೆ ಒಂದು ಸಾಂಸ್ಕೃತಿಕ ಮತ್ತು ಸಾಮಾಜಿಕ ವಾತಾವರಣವೂ ಬೇಕಾಗುತ್ತದೆ. ಈ ಎರಡೂ ಇಲ್ಲದಿರುವ ಬಹುದೊಡ್ಡ ವರ್ಗ ಈಗಲೂ ಭಾರತದಲ್ಲಿದೆ.

ಇದನ್ನು ಸರ್ಕಾರಿ ಸೇವೆಗಳ ಕಂಪ್ಯೂಟರೀಕರಣದ ಉದಾಹರಣೆಯಲ್ಲಿ ಅರಿಯಬಹುದು. ಬೆಂಗಳೂರಿನ ಪೊಲೀಸ್ ಠಾಣೆಗಳಲ್ಲಿ ದೂರು ನೀಡಿದರೆ ಅದರ ಎಫ್ಐಆರ್ ಆದ ತಕ್ಷಣ ದೂರುದಾರನಿಗೆ ಎಸ್ಎಂಎಸ್ ಸಂದೇಶ ಬರುತ್ತದೆ. ಒಂದು ರೀತಿಯಲ್ಲಿ ಇದು ದೂರು ದಾಖಲಾಗಿರುವುದನ್ನು ಖಾತರಿ ಪಡಿಸುವ ವ್ಯವಸ್ಥೆ. ಒಂದು ತನ್ನದೂ ಎನ್ನಬಹುದಾದ ಮೊಬೈಲ್ ಸಂಖ್ಯೆ ಇಲ್ಲದಾತನಿಗೆ ತನ್ನ ದೂರು ದಾಖಲಾಗಿರುವ ವಿವರ ತಿಳಿಯುವುದು ಹೇಗೆ? ಸರ್ಕಾರಿ ಕಾನೂನುಗಳ ದೃಷ್ಟಿಯಲ್ಲಿ ನೋಡಿದರೆ ಪೊಲೀಸರು ಆತನಿಗೆ ಒಂದು ಹಿಂಬರಹ ಕೊಡಬೇಕು. ಪೊಲೀಸ್ ಠಾಣೆಗೆ ಕಾಲಿರಿಸುವುದೆಂದರೆ ಮಧ್ಯಮ ವರ್ಗದವರಿಗೇ ಕಷ್ಟದ ಸಂಗತಿ. ಇನ್ನು ಮೊಬೈಲ್ ಫೋನ್ ಕೂಡಾ ಇಲ್ಲದ ಬಡವನ ಸ್ಥಿತಿ ಏನಾಗಬಹುದು? ಪೊಲೀಸರು ಆತನ ದೂರನ್ನು ಎಫ್ಐಆರ್ ಮಟ್ಟಕ್ಕೆ ಕೊಂಡೊಯ್ಯುವುದಕ್ಕೆ ಬಲಾಢ್ಯನೊಬ್ಬನ ಮಧ್ಯಪ್ರವೇಶ ಅಗತ್ಯವಾಗಿಬಿಡುತ್ತದೆ. ಒಂದು ವೇಳೆ ದೂರುದಾರನ ಬಳಿ ಮೊಬೈಲ್ ಫೋನ್ ಇದ್ದರೆ ಏನಾಗಬಹುದು ಎಂದು ಪ್ರಶ್ನೆಯನ್ನಿಟ್ಟುಕೊಂಡರೆ ಆಗಲೂ ಪರಿಸ್ಥಿತಿ ಹೆಚ್ಚೇನೂ ಬದಲಾಗುವುದಿಲ್ಲ. ಆತನಿಗೆ ಮೊಬೈಲ್‌ಗೆ ದೂರು ದಾಖಲಾದ ಮಾಹಿತಿ ಬಂದರೂ ಅದು ದೂರುದಾರನಿಗೆ ತಿಳಿಯುವ ಭಾಷೆಯಲ್ಲಿ ಇರುವುದಿಲ್ಲ. ಅದು ತಂತ್ರಜ್ಞಾನಕ್ಕೆ ಅಗತ್ಯವಿರುವ ಇಂಗ್ಲಿಷ್ನಲ್ಲಿರುತ್ತದೆ.

ನಿರ್ದಿಷ್ಟ ತಂತ್ರಜ್ಞಾನವೊಂದು ಭಾರಿ ವೇಗದಲ್ಲಿ ಬೆಳೆಯುತ್ತಾ ಹೋದಾಗ ಅದು ಕೆಲವು ಪೂರ್ವಗ್ರಹಗಳನ್ನೂ ಸೃಷ್ಟಿಸುತ್ತಾ ಹೋಗುತ್ತದೆ. ಭಾರತದ ಜನಸಂಖ್ಯೆಯ ಜೊತೆಗೆ ಮೊಬೈಲ್ ಸಂಪರ್ಕಗಳನ್ನು ಹೋಲಿಸಿದರೆ ಎಲ್ಲಾ ಮನೆಗಳಿಗೂ ಫೋನ್ ತಲುಪಿದೆ ಎಂಬ ಸರಳ ತೀರ್ಮಾನಕ್ಕೆ ಯಾರೂ ಬಂದುಬಿಡುತ್ತಾರೆ. ಬಹುತೇಕರ ಎರಡೆರಡು ಸಂಪರ್ಕಗಳು, ಕೆಲಸ ಮಾಡದ ಸಂಪರ್ಕಗಳು ಇತ್ಯಾದಿಗಳನ್ನೆಲ್ಲಾ ಕಳೆದು ಲೆಕ್ಕ ಹಾಕಬೇಕೆಂದು ಯಾರೂ ಯೋಚಿಸುವುದಿಲ್ಲ. ಎಲ್ಲಾ ಬಡವರ ಬಳಿಯೂ ಮೊಬೈಲ್ ಫೋನ್ ಇದ್ದೇ ಇರುತ್ತದೆ ಎಂಬ ಇಂಥ ಪೂರ್ವಗ್ರಹಗಳಿಂದ ರೇಷನ್ ಕಾರ್ಡಿಗೆ ಮೊಬೈಲ್ ಬೇಕಾಗುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಒಂದು ವೇಳೆ ಇಲ್ಲ ಎಂದರೆ ಸರ್ಕಾರಿ ಅಧಿಕಾರಿಗಳು ಒಂದು ಫೋನ್ ಕನೆಕ್ಷನ್ ಪಡೆದುಕೊಳ್ಳಿ ಎಂದು ಸಲಹೆ ಮಾಡಿದರೂ ಆಶ್ಚರ್ಯವಿಲ್ಲ. ಹೀಗೆ ಫೋನ್ ಖರೀದಿಸಿದವರೆಲ್ಲಾ ಡಿಜಿಟಲ್ ಕಂದಕವನ್ನು ದಾಟಿದವರು ಎಂಬ ತೀರ್ಮಾನಕ್ಕೆ ಸರ್ಕಾರ ಬಂದರೂ ಆಶ್ಚರ್ಯವಿಲ್ಲ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.