ವಸುದೇವ ಭೂಪಾಲಂ ಬರೆದ `ದೇವರು ಸತ್ತ' ಎಂಬ ಪುಸ್ತಕವೊಂದು ಚಿಕ್ಕಂದಿನಲ್ಲಿ ನನ್ನ ಕೈಗೆ ಸಿಕ್ಕಿತು. ಅದನ್ನು ಆಸಕ್ತಿಯಿಂದ ಓದಿದ್ದು ನೆನಪಿದೆ. ಅವರ ನಾಸ್ತಿಕವಾದಿ ಚಿಂತನೆ ನನಗೆ ಸರಿಯಾಗಿಯೇ ಕಂಡಿತು. ಆದರೆ ಅವರ ತೀರ್ಮಾನ ಸರಿಯೋ ಇಲ್ಲವೋ ಅನ್ನುವ ಬಗ್ಗೆ ನಾನೂ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಒಂದು ಅನುಮಾನ ಮೂಡಿದ್ದು ನೆನಪಿದೆ. ದೇವರು ಇಲ್ಲವೆಂದ ಮೇಲೆ ಅವನು ಹುಟ್ಟುವುದಾಗಲೀ ಸಾಯುವುದಾಗಲೀ ಹೇಗೆ ಸಾಧ್ಯ?

ನಾವೆಲ್ಲರೂ ಒಂದು ಅರ್ಥದಲ್ಲಿ ಮತಲಬಿಗಳೇ. ಹಾಗಿರುವುದು ತಪ್ಪೂ ಅಲ್ಲ. ತೀಟೆ ತೀರಿಸಿಕೊಳ್ಳಲು, ಆಸೆಗಳನ್ನು ಪೂರೈಸಿಕೊಳ್ಳಲು ತಾನೆ ಎಲ್ಲರೂ ಪ್ರಯತ್ನಿಸುತ್ತಿರುವುದು? ಆದ್ದರಿಂದ ನನಗೆ ದೇವರು ಇಲ್ಲವೆಂಬ ಆಲೋಚನೆಯೇ ಚಿಕ್ಕಂದಿನಲ್ಲಿ ಭಯ ಹುಟ್ಟಿಸುತ್ತಿತ್ತು. ನಮ್ಮ ಮನೆಯ ವಾತಾವರಣದಲ್ಲಿ ನಡೆಯುತ್ತಿದ್ದ ಪೂಜೆ, ಪುನಸ್ಕಾರಗಳಲ್ಲಿ ಪಾಲ್ಗೊಳ್ಳುತ್ತಿದ್ದೆ; ನಮ್ಮಮ್ಮನ ಜೊತೆಗೆ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದೆ. `ಚಂದಮಾಮ' ಪತ್ರಿಕೆಯಲ್ಲಿ ಬರುತ್ತಿದ್ದ ಪುರಾಣ ಕತೆಗಳನ್ನು ಓದುತ್ತಿದ್ದೆ. ಆದರೆ ಇದೆಲ್ಲಾ ನಂಬಿಕೆಯಾಗಿರಲಿಲ್ಲ. ನಮ್ಮ ಕುಟುಂಬದ ಪರಿಸರದಲ್ಲಿ ವಾಡಿಕೆಗಳಾಗಿ ಬಿಟ್ಟಿದ್ದವು. ಮೈಸೂರು ಮಹಾರಾಜರು ನಮ್ಮನ್ನು ನೋಡಿಕೊಳ್ಳುವ ಹಾಗೆ ದೇವರು ನಮ್ಮನ್ನು ನೋಡಿಕೊಳ್ಳುತ್ತಾನೆ ಅನಿಸುತ್ತಿತ್ತು. ಆ ಭಾವನೆ ಹಿತವಾಗಿತ್ತು.

ನನ್ನ ಶಾಲಾದಿನಗಳಲ್ಲಿ ಇನ್ನೊಂದು ಘಟನೆ ಜರುಗಿತು. ನಮ್ಮ ಪ್ರೆಸ್ಸಿನಲ್ಲಿ ಅರುಳ್ ದಾಸ್ ಎಂಬ ಕ್ರೈಸ್ತನೊಬ್ಬ ಕೆಲಸ ಮಾಡುತ್ತಿದ್ದ. ಅವನಿಗೂ ನನಗೂ ತುಂಬಾ ದೋಸ್ತಿಯಾಯಿತು. ಅವನು ನನಗೆ ಸುಂದರವಾದ ಬಣ್ಣದ ಚಿತ್ರಗಳಿರುವ ಸಣ್ಣ ಸಣ್ಣ ಸುವಾರ್ತೆಗಳ ಪುಸ್ತಕಗಳನ್ನು ತಂದು ಕೊಡುತ್ತಿದ್ದ. ಅದರ ಮೂಲಕ ನನಗೆ ಬೈಬಲ್ಲಿನ ಪ್ರವೇಶವಾಯಿತು. ಏಸೂನ ಕತೆಗಳು, ಉವಾಚಗಳು ನನಗೆ ಬಹಳ ಹಿಡಿಸಿದವು. ಆಗಾಗ ಅವನ ಜೊತೆ ಕಾರ್ಪೊರೇಷನ್ ಬಳಿಯ ಚರ್ಚಿಗೆ ಭಾನುವಾರ ಹೋಗಿಬರುತ್ತಿದ್ದೆ. ದೇವಸ್ಥಾನಕ್ಕೆ ಹೋಗುವುದಕ್ಕೂ ಇದಕ್ಕೂ ನನಗೆ ವ್ಯತ್ಯಾಸ ಕಾಣಲಿಲ್ಲ. ನಾನು ಅಗಾಗ ಓದುತ್ತಿದ್ದ ಬಸವಣ್ಣನವರ ವಚನಗಳ ಹಾಗೇ ಏಸೂನ ಹೇಳಿಕೆಗಳು ಕೂಡ ಎಷ್ಟು ಸರಳ ಸುಂದರ ಅನಿಸುತ್ತಿತ್ತು.

ನಮ್ಮ ಮನೆಯ ಆಸುಪಾಸಿನ ಅಕ್ಕಿಪೇಟೆಯಲ್ಲಿದ್ದ ಮಸ್ತಾನ್ ಶಾ ವಲಿ ಅವರ ದರ್ಗಾಕ್ಕೂ ಆಗಾಗ ಹೋಗುತ್ತಿದ್ದೆವು. ನನಗೆ ಜ್ವರ ಬಂದಾಗ ಅ್ಲ್ಲಲಿ ಹೋಗಿ ತಾಯತ ಕಟ್ಟಿಸಿಕೊಂಡು ಬರುವುದು ರೂಢಿ, ದರ್ಗಾದ ವಿಶೇಷ ಸೆಳೆತವೆಂದರೆ ನವಿಲುಗರಿಯ ಬೀಸಣಿಕೆ ಮತ್ತು ಮನಸ್ಸನ್ನು ಇನ್ನೆಲ್ಲಿಗೋ ಕರೆದೊಯ್ಯುವ ಅತ್ತರು, ಅಗರಬತ್ತಿಯ ಸುಗಂಧ. ನಮ್ಮ ಪೂಜೆಗಳಲ್ಲಿನ ಕರ್ಪೂರದ ವಾಸನೆಯಷ್ಟೇ ಇದೂ ನನಗೆ ಪ್ರಿಯವಾಗಿತ್ತು.

ಒಟ್ಟಿನಲ್ಲಿ ದೇವಸ್ಥಾನ, ಇಗರ್ಜಿ, ದರ್ಗಾಗಳಿಗೆ ಹೋಗುವುದೆಂದರೆ ನಾಟಕ, ಸಿನಿಮಾಗಳಿಗೆ ಹೋಗುವುದರ ಹಾಗೆ ಒಂದು ಆಹ್ಲಾದಮಯ ಅನುಭವವಾಗಿತ್ತು. ಯಾರೋ ಮಾಡಿದ ಮಣ್ಣಿನ ಗಣಪತಿಯನ್ನು ಕೊಂಡು ಪೂಜೆಪುನಸ್ಕಾರ ಮಾಡಿ ಆಮೇಲೆ ಅದನ್ನು ಕೆರೆಗೋ ಭಾವಿಗೋ ಹಾಕುವ ಆಚರಣೆಯೂ ಬಹಳ ಮಜಾ ಕೊಡುತ್ತಿತ್ತು. ದೇವರು ನೀರಿನಲ್ಲಿ ಕರಗುತ್ತಾನೆಂಬ ಯೋಚನೆ ಬಂದಾಗ ಇಂಥ ದೇವರಿಗೆ ಹೆದರಬೇಕಿಲ್ಲ ಅನಿಸುತ್ತಿತ್ತು. ಗೌರಿ-ಗಣೇಶರು ಹೋಳಿಗೆ ಕಡುಬುಗಳಿಗೆ ನೆಪವಾದರೆ, ನಮ್ಮ ಜಾತಿಯ ಸ್ವಾಮಿಗಳ ಪಾದಪೂಜೆ ಬಾಳೆಹಣ್ಣಿನ ರಸಾಯನಕ್ಕೆ ಕಾರಣವಾದರೆ ಯಾಕೆ ತಾನೇ ಬೇಡವೆನ್ನಬೇಕು?

ಆದರೆ ದೇವರ ಅಸ್ತಿತ್ವದ ಬಗ್ಗೆ ನಾನು ಚಿಂತಿಸತೊಡಗಿದ್ದು ನನ್ನ ಹೈಸ್ಕೂಲು ದಿನಗಳಲ್ಲಿ. ನಮ್ಮ ಪಾಠದ ಭಾಗವಾಗಿ ರಾಮಕೃಷ್ಣ-ವಿವೇಕಾನಂದರ ಕತೆ ಓದಬೇಕಾಗಿ ಬಂತು. ರಾಮಕೃಷ್ಣರು ಕಾಳಿಯನ್ನು ಎದುರುಬದುರಾಗಿ ನೋಡುತ್ತಿದ್ದರೆಂಬ ವಿಷಯ ನನ್ನನ್ನು ಕಾಡತೊಡಗಿತು. ನಾನೂ ಒಂದು ದಿನ ಹಾಗೆಯೇ ದೇವರನ್ನು ನೋಡಬೇಕೆಂಬ ಹುಂಬ ಹಟ ಬಂತು. ಅದನ್ನು ಕೇಳಿ ನಮ್ಮಮ್ಮನಿಗೆ ಖುಷಿಯಾಯಿತು. ಯಾಕೆಂದರೆ ನನ್ನ ಮತ್ತು ವಿವೇಕಾನಂದರ ಜಾತಕಗಳಿಗೆ ಹೋಲಿಕೆಯಿದೆಯೆಂದು ಯಾರೋ ಜ್ಯೋತಿಷಿಗಳು ಅವಳಿಗೆ ಹೇಳಿದ್ದರಂತೆ.

ಇದೇ ಸಮಯದಲ್ಲಿ ಹೃಷಿಕೇಶದ ಸ್ವಾಮಿ ಶಿವಾನಂದರ ಪುಸ್ತಕಗಳು ನನ್ನ ಕೈಗೆ ಸಿಕ್ಕಿದವು. ಅವುಗಳ ಪ್ರೇರಣೆಯಿಂದ ಯೋಗ ಮಾಡಲು ಶುರು ಮಾಡಿದೆ. ರಾಮಕೃಷ್ಣಾಶ್ರಮದ ಭಾನುವಾರದ ಸುಶ್ರಾವ್ಯ ಭಜನೆಗಳಿಗೆ ಹೋಗತೊಡಗಿದೆ. ಇವುಗಳಿಂದ ಖುಷಿಯಾಗುತ್ತಿತ್ತೇ ಹೊರತು ದೇವರು ಎಲ್ಲೂ ಕಾಣಲಿಲ್ಲ. ನನಗೆ ಆಪ್ತರಾದ ಆಶ್ರಮದ ಸ್ವಾಮಿಗಳೊಬ್ಬರು ಆ ಸಂದರ್ಭದಲ್ಲಿ ಹೇಳಿದರು: ನಾನೂ ದೇವರನ್ನು ಕಂಡಿಲ್ಲ. ಎಷ್ಟೋ ಜನ್ಮಗಳ ತಪಸ್ಸಿನ ನಂತರವೇ ದೇವರು ಸಿಗುವುದು. ಅಲ್ಲಿಯವರೆಗೆ ಜಪ-ತಪ ಮಾಡಿ ಪುಣ್ಯ ಪಡೆದುಕೊಳ್ಳಬೇಕು. ಇದನ್ನು ಕೇಳಿ ನಿರಾಶೆಯಾದರೂ ನನ್ನ ಹಟ ಹೋಗಲಿಲ್ಲ.

ಈ ಹಟ ನನ್ನನ್ನು ಸಾಧನೆಯಿಂದ ಸಾಧನೆಗೆ, ಗುರುವಿನಿಂದ ಗುರುವಿಗೆ, ಪಂಥದಿಂದ ಪಂಥಕ್ಕೆ ಪರದಾಡಿಸತೊಡಗಿತು. ಆ ಎಲ್ಲ ವಿವರಗಳಿಗೆ ಇಲ್ಲಿ ಜಾಗ ಸಾಲದು. ಆದರೆ ಹಲವು ದಶಕಗಳವರೆಗೆ ನೀಡಿಕೊಂಡ ಈ ಹುಡುಕಾಟದ ಹುಡುಗಾಟದಲ್ಲಿ ಒಂದು ದೊಡ್ಡ ದೋಷವಿದ್ದುದು ಆಗ ಗೊತ್ತಾಗಿರಲಿಲ್ಲ. ನನ್ನನ್ನು ಹಿಂಬಾಲಿಸುವ ನೆರಳು ಎಲ್ಲಿದೆಯೆಂದು ಹುಡುಕುವ ಹಾಗಿತ್ತು ನನ್ನ ಹುಚ್ಚುತನ. ಆದರೆ ಈ ಹುಚ್ಚುತನ ಕೇವಲ ನನ್ನೊಬ್ಬನದಲ್ಲ ಎಂದು ಈಗ ಅರಿವಿಗೆ ಬರುತ್ತಿದೆ.

ಇದೇ ನಂಬಿಕೆಯ ತೊಂದರೆ. ಪುರಾಣ, ಪುಣ್ಯಕತೆಗಳು, ಸಿನಿಮಾ, ನಾಟಕ, ಕ್ಯಾಲೆಂಡರುಗಳ ದೇವರೊಬ್ಬ ಇದ್ದಾನೆ ಎಂಬುದು ಇಂಥ ಹುಡುಕಾಟಗಳ ಅಸಲು ಕುಮ್ಮಕ್ಕು. ಹೀಗೆ ಇದ್ದಾನೆ ಅನ್ನುವುದಕ್ಕೆ ಆಧಾರ? ಇನ್ಯಾರಿಗೋ ಆ ಅನುಭವ ಆಗಿದೆಯೆಂದು ನಾವು ನಂಬಿದ ಗುರು-ಹಿರಿಯರು ನೀಡಿದ ಪರೋಕ್ಷ ಸಾಕ್ಷಿ. `ಮನಸ್ಸಿದ್ದಂತೆ ಮಹಾದೇವ' ಎಂಬುದು ಕನ್ನಡದ ನಾಣ್ನುಡಿ. ದೇವರನ್ನು ಕಂಡ, ಕೇಳಿದ ಅನುಭವಗಳು ಪೂರ್ತಿ ವ್ಯಕ್ತಿಗತ. ಅದು ಫೋಟೋಕ್ಕೆ ಅಥವಾ ಧ್ವನಿಮುದ್ರಣಕ್ಕೆ ಸಿಗುವ ರೀತಿಯ ಇಂದ್ರಿಯಗ್ರಾಹ್ಯ ಅನುಭವವಲ್ಲ. ಹಾಗೆ ಕಂಡೆನೆಂದು ಹೇಳುವವರು ಆ ಅನುಭವ ಭಾಷೆಗೆ ಅತೀತವೆಂದು ಮತ್ತೆ ಹೇಳುತ್ತಾರೆ. ಅವರಿಗಾದ ಅನುಭವ ಹೇಗಿರಬಹುದೆಂದು ಸಂಸ್ಕೃತಿವಿಶಿಷ್ಟವಾದ ಭಾಷೆಯಲ್ಲಿ ನಿರನುಭವಿಗಳಾದ ನಂಬಿಗಸ್ಥರು ಕತೆ ಕಟ್ಟತೊಡಗುತ್ತಾರೆ.

ಇಂಥ ಕತೆಗಳು ರೋಚಕವೂ ಮನೋಹರವೂ ಆಗಿರುವುದು ಸಹಜ. ನಮಗಿಂತ ಎಷ್ಟೋಪಟ್ಟು ಬಲಯುತವಾದ, ಸ್ವಾತಂತ್ರ್ಯ ಹೊಂದಿದ ಮಾನವಾತಿಶಯ ಪಾತ್ರಗಳು ಆಬಾಲವೃದ್ಧರಿಗೆಲ್ಲರಿಗೂ ಪ್ರಿಯ. ಇಂಥ ಕಲ್ಪಿತ ಮಾನವಾತಿಶಯ ಪಾತ್ರಗಳ ಕಾಲವಿಶಿಷ್ಟವಾದ ಸದ್ಗುಣಗಳು ನಮಗೆ ಆದರ್ಶವಾಗುವುದೂ ಸರಿಯೆ. ದೈವಾಂಶ ಸಂಭೂತರೆಂದು ಬಣ್ಣಿಸಲಾದ ವೀರರು, ದಾನಿಗಳು, ಸಾರ್ಥತ್ಯಾಗಿಗಳು ದೇವರ ಕತೆಗಳಲ್ಲಿ ಮಾತ್ರವಲ್ಲ ಇತಿಹಾಸದಲ್ಲೂ ಸಿಗಬಹುದು. ಗಾಂಧಿ, ಅಂಬೇಡ್ಕರ್ ಮುಂತಾದವರು ಚಾರಿತ್ರಿಕ ವ್ಯಕ್ತಿಗಳಾಗಿದ್ದೂ ಸಹಸ್ರಾರು ಜನರಿಗೆ ಆದರ್ಶಪ್ರಾಯರಾಗಿದ್ದಾರೆ. ಇದೇ ರೀತಿ ಪೌರಾಣಿಕ ಪಾತ್ರಗಳಾದ ರಾಮನ ಪಿತೃಪ್ರೇಮ, ಕೃಷ್ಣನ ಮಿತ್ರಪ್ರೇಮ, ನೀಲಕಂಠನ ಸರ್ವಕಲ್ಯಾಣಪರತೆ ಮಾನವೀಯ ಆದರ್ಶಗಳಾಗಬಹುದು.

ಹೀಗೆ ಕಲ್ಯಾಣಕಾರಿಯಾದ ಆದರ್ಶಗಳಾದ ಪೌರಾಣಿಕ ಪಾತ್ರಗಳು ಅಥವಾ ಪೌರಾಣೀಕೃತ ಐತಿಹಾಸಿಕ ಪಾತ್ರಗಳು ನಮ್ಮನ್ನೂ ಒಳಗೊಂಡು ಲೋಕದ ಎಲ್ಲ ಡೊಂಕುಗಳನ್ನೂ ಸರಿಪಡಿಸುತ್ತಾವೆಂದೂ ನಾವು `ಧಾಲ್ ರೋಟಿ ಖಾವೋ ಪ್ರಭು ಕಾ ಗುಣ್ ಗಾವೋ' ಅನ್ನುತ್ತಾ ನಮ್ಮ ನೈತಿಕ ಜವಾಬ್ದಾರಿಗಳನ್ನು ನಮ್ಮ ಆದರ್ಶಕಲ್ಪನೆಗೆ ವರ್ಗಾಯಿಸಬಹುದೆಂಬುದು ಲೋಕಾರೂಢಿಯ ಧಾರ್ಮಿಕ ನಂಬುಗೆ. ಈ ಕಾರಣದಿಂದಲೇ ಇರಬಹುದು ಬುದ್ಧಗುರು ದೇವರ ತಂಟೆಗೇ ಹೋಗಲಿಲ್ಲ. `ಆತ್ತಾ ಹಿ ಆತ್ತನೋ ನಾಥೋ' ಅಂದರೆ ತನಗೆ ತಾನೇ ಒಡೆಯ ಎಂಬುದು ಬುದ್ಧಗುರು ತನ್ನ ಪ್ರಿಯ ಶಿಷ್ಯ ಆನಂದನಿಗೆ ನೀಡಿದ ಕೊನೆಯ ಸಂದೇಶಗಳಲ್ಲೊಂದು.

ಬಹುಮಟ್ಟಿಗೆ ಲೋಕಾರೂಢಿಯ ಧಾರ್ಮಿಕ ವಿಶ್ವಾಸ ಓಡುಗಾಲುತನದ, ಬೇಜವಾಬ್ದಾರಿಯ ಒಂದು ನೆಪ. ಕೆನಡಾದಲ್ಲಿ ಒಬ್ಬ ಸಮಾಜಶಾಸ್ತ್ರಜ್ಞನಿಗೆ, ನಂಬಿಕೆಗೂ ಅಪರಾಧಕ್ಕೂ ಇರುವ ಸಂಬಂಧದ ಬಗ್ಗೆ ಸಂಖ್ಯಾಧಾರಿತ ಬಿಚ್ಚುನೋಟದನುಸಾರ ಕೊಲೆ, ಮಾನಭಂಗದಂಥ ಘೋರ ಕೃತ್ಯಗಳಲ್ಲಿ ತೊಡಗುವ ವ್ಯಕ್ತಿಗಳಲ್ಲಿ ನಾಸ್ತಿಕರಿಗಿಂತಾ ಆಸ್ತಿಕರ ಸಂಖ್ಯೆಯೇ ಹೆಚ್ಚು ಎಂದು ತೋರಿಬಂದಿತಂತೆ. ಈ ಸಂಶೋಧನಾ ಫಲಿತಾಂಶ ಅವನ ಪೂರ್ವಸಿದ್ಧಾಂತಕ್ಕೆ ವ್ಯತಿರಿಕ್ತವಾಗಿತ್ತು. ನನಗನಿಸುತ್ತದೆ, ಇದರಲ್ಲಿ ಆಶ್ಚರ್ಯವೇನೂ ಇಲ್ಲ. ಧಾರ್ಮಿಕ ನಂಬಿಕೆಗಳಿಂದ ಇತಿಹಾಸದಲ್ಲಿ ಮಾತ್ರವಲ್ಲ ಪ್ರಸ್ತುತದಲ್ಲೂ ಅದೆಷ್ಟೋ ರಕ್ತದ ನದಿಗಳು ಹರಿದಿವೆ. ಆದರೆ ಇಂಥ ಹಿಂಸ್ರ ಪ್ರವೃತ್ತಿಗಳಿಂದ ನಾಸ್ತಿಕರೂ ಮುಕ್ತರಲ್ಲ. ದೇವರನ್ನು ನಂಬುತ್ತಿದ್ದ ಹಿಟ್ಲರ್ನಷ್ಟೇ ಘೋರ ಅಪರಾಧಗಳನ್ನು ದೇವರನ್ನು ನಂಬದ ಸ್ಟಾಲಿನ್ನಂಥವರೂ ಮಾಡಿದ್ದಾರೆ.

ಯಾಕೆಂದರೆ ಅವರು ದೇವರ ತರದ ಸರ್ವಶಕ್ತಿ ಮತ್ತು ಸರ್ವಜ್ಞತೆಗಳನ್ನು ತಾವು ನಂಬುವ ಸಿದ್ಧಾಂತಕ್ಕೆ ಅಥವಾ ತಾ ಸೇರಿದ್ದ ಪಕ್ಷಕ್ಕೆ ವರ್ಗಾಯಿಸಿರುತ್ತಾರೆ. ಅವರ ಹಿಂಬಾಲಕರು ತಮ್ಮ ನಾಯಕನಿಗೇ ದೈವತ್ವದ ರೀತಿಯ ಗುಣಗಳನ್ನು ಆರೋಪಿಸಿರುತ್ತಾರೆ. ದೈವೀಕೃತ ಅರಸರ ಹೆಸರಿನಲ್ಲೂ ರಕ್ತದ ಅದೆಷ್ಟೋ ನದಿಗಳು ಹರಿದಿವೆ. ಇದೇ ರೀತಿ, ಆಧುನಿಕ ಜಗತ್ತಿನಲ್ಲಿ ಫ್ಯಾಸಿಸಂನಂಥ ಅಮೂರ್ತ ಸಿದ್ಧಾಂತಗಳಿಗೆ ಸರ್ವಜ್ಞತ್ವವನ್ನಾರೋಪಿಸಿ ಅಪಾರ ಕೊಲೆ ಸುಲಿಗೆಗಳನ್ನು ನಡೆಸಲಾಗಿದೆ.

ಸರ್ವತ್ರಸ್ವತಂತ್ರವಾದ, ಪರಿಪೂರ್ಣವಾದ ಅತಿಮಾನುಷ ಶಕ್ತಿಯನ್ನು ಅಪರಿಪೂರ್ಣರಾದ ನಾವು ಸೃಜಿಸಿದ ದೇವರಿಗೋ ಆದರ್ಶಕ್ಕೋ ಪಕ್ಷಕ್ಕೋ ನಾಯಕನಿಗೋ ನಾವು ಆರೋಪಿಸಿದಾಗ ಘಟಿಸುವ ಅಚಾತುರ್ಯಗಳು ಈ ತೆರನವು. ಬುದ್ಧ, ಅಲ್ಲಮರಾದಿಯಾಗಿ ಎಲ್ಲ ಜ್ಞಾನಿಗಳು ಬೋಧಿಸಿದ, ಬದುಕಿದ ಸ್ವಂತ ಜವಾಬ್ದಾರಿಯನ್ನು ಒಪ್ಪುವುದಕ್ಕಿಂತಾ ಇನ್ಯಾರಿಗೋ, ಇನ್ಯಾವುದಕ್ಕೋ ನಾವು ಆರೋಪಿಸಿದಾಗ ಕಾರ್ಲ್ ಮಾರ್ಕ್ಸ್ ಹೇಳಿದಂತೆ ನಾವು ನಮ್ಮ ಶಕ್ತಿಗಳಿಂದ ಪರಕೀಯರಾಗಿ ಅಂಧಶಕ್ತಿಯೊಂದರ ಕೈಗೊಂಬೆಗಳಾಗಿ ಮಾರ್ಪಡುತ್ತೇವೆ.

ಲೆವಿಸ್ತ್ರಾಸ್, ವೊಲೆ ಶೊಯಿಂಕಾರಂಥವರು ಜಗತ್ತಿನ ರಕ್ತಸಿಕ್ತ ಇತಿಹಾಸಕ್ಕೆ ಲೋಕೋತ್ತರವಾದ ದೇವರನ್ನು ನಂಬಿದ ಯಹೂದಿ - ಕ್ರೈಸ್ತ ಪರಂಪರೆಗಳೇ ಕಾರಣ ಅನ್ನುತ್ತಾರೆ. ಇದು ಭಾಗಶಃ ನಿಜ. ಆದರೆ ಯಹೂದಿ - ಕ್ರೈಸ್ತ ನಂಬಿಕೆಗಳಿಗೆ ಹೊರತಾದ ನಾಗರಿಕತೆಗಳಲ್ಲೂ ಅದೇ ತೆರನ ಹಿಂಸೆಯ ಘಟನೆಗಳು ಜರುಗಿವೆ. ಸನಾತನ ಅಜ್ಟೆಕ್ ನಾಗರಿಕತೆಯಲ್ಲಿ ವಾರ್ಷಿಕ ಸೂರ್ಯೋಪಾಸನೆಯಂದು ನಡೆಸುತ್ತಿದ್ದ ವಿಧಿಯಲ್ಲಿ ಸಹಸ್ರಾರು ಲಡಾಯಿ ಕೈದಿಗಳನ್ನು ಬಲಿ ಕೊಡಲಾಗುತ್ತಿತ್ತು. ಅತ್ಯಂತ ಮಾನವೀಯವಾದ ಬೌದ್ಧಧರ್ಮಾನುಯಾಯಿಗಳಾದ ಶ್ರೀಲಂಕೆಯ ಬಹುಸಂಖ್ಯಾತರು ತಮಿಳರ ಮೇಲೆ ನಡೆಸಿದ ಅತ್ಯಾಚಾರಗಳಿಗೂ ಎಣೆಯಿಲ್ಲ.

ಆದ್ದರಿಂದ ಕಾಣದ ದೇವರಿಗೆ ತಮ್ಮ ಅಪರಾಧಗಳ ಜವಾಬ್ದಾರಿಯನ್ನು ಆರೋಪಿಸುವುದು ವಸ್ತುನಿಷ್ಠವಲ್ಲ. ಈ ಪ್ರವೃತ್ತಿ ಎಲ್ಲಾ ಧರ್ಮಗಳಲ್ಲಿ ಮತ್ತು ಆಧುನಿಕ ಸಮಾಜಗಳಲ್ಲಿ ಧರ್ಮದ ಖಾಲಿ ಜಾಗವನ್ನು ತುಂಬಿರುವ ಸಿದ್ಧಾಂತ-ಸಂಘಟನೆಗಳಲ್ಲಿ ಅಡಗಿರುವುದು ನಿಚ್ಚಳ.

ಭಾರತೀಯ ಧಾರ್ಮಿಕ ಪರಂಪರೆಗಳ ಆಚರಣೆಗಳ ಬುನಾದಿ ಯಹೂದಿ-ಕ್ರೈಸ್ತ ಧರ್ಮಗಳಿಗಿಂತಾ ಭಿನ್ನ. ನಮ್ಮ ಆಚರಣೆಗಳಲ್ಲಿ ದೇವರುಗಳನ್ನು ಒಂದು ಕಲ್ಲಿನಲ್ಲೋ ಮೂರ್ತಿಯಲ್ಲೋ ಯಂತ್ರದಲ್ಲೋ ಆವಾಹಿಸಿ ಕೊನೆಗೆ ವಿಸರ್ಜನೆ ಮಾಡುತ್ತೇವೆ. ಈ ಸಾಂಕೇತಿಕ ಕ್ರಿಯೆ ನಮ್ಮ ಇಚ್ಛಾ-ಜ್ಞಾನ-ಕ್ರಿಯಾ ಶಕ್ತಿಗಳನ್ನು ಕ್ರೋಡೀಕರಿಸುವ ಒಂದು ಉಪಾಯ. ಆದ್ದರಿಂದ ನಮ್ಮ ದೇವತೆಗಳು ಅಪರಿಪೂರ್ಣರಾದ, ಸೀಮಿತ ಅರಿವಿನ, ಸೀಮಿತ ಸ್ವಾತಂತ್ರ್ಯ ಶಕ್ತಿಗಳು ಕಲ್ಪಿಸಿಕೊಂಡ ಸರ್ವಜ್ಞತ್ವಗಳ ಕುರುಹುಗಳು. ಅವುಗಳಲ್ಲಡಗಿರುವ ನಮ್ಮ ಮಾನಸಿಕಶಕ್ತಿಯ ಸೃಷ್ಟಿಕರ್ತರು ನಮ್ಮ ಸೃಷ್ಟಿಗಳಾದ ಅವರು ಎಂದು ನಂಬುವುದು ನಾವು ಮಾಡಿದ ರೈಲ್ವೇ ಎಂಜಿನ್ನುಗಳು, ಕಂಪ್ಯೂಟರುಗಳು ನಮ್ಮ ಜವಾಬ್ದಾರಿ ವಹಿಸಿಕೊಳ್ಳುತ್ತವೆ ಎಂದು ನಂಬಿದಂತೆ. ಇಂಥ ಮರೆವೆಯೇ ಕುರುಡು ಧಾರ್ಮಿಕ ಮತ್ತು ಧಾರ್ಮಿಕೇತರ ನಂಬಿಕೆ-ಆಚರಣೆಗಳ ಹಾಗೂ ಅವು ಉತ್ಪಾದಿಸುವ ಅಪರಾಧ ಪರಂಪರೆಗಳಿಗೆ ನಾಂದಿ.

ಅಲ್ಲಮನೆಂದಂತೆ `ಸತ್ಯ ಶರಣರ ಮನಸಿನಲ್ಲಲ್ಲದೆ ಎಲ್ಲಿಯೂ ಇಲ್ಲ ನಮ್ಮ ಗೊಗ್ಗೇಶ್ವರನು'. ನಾವು ಹುಡುಕುತ್ತಿರುವ ದೇವರುಗಳು ನಮ್ಮ ಮನೋನಿವಾಸಿಗಳಾದ್ದರಿಂದ ನಾವು ಅವರ ಮೂಲಕ ಹುಡುಕುತ್ತಿರುವುದು ನಮ್ಮಳಗಿನ ಅಪ್ರಕಟಿತ ಶಕ್ತಿ-ಸ್ವಾತಂತ್ರ್ಯಗಳನ್ನೇ. ದೇವರನ್ನು ಹೆಸರಿಸದ ಬೌದ್ಧ ಅಥವಾ ಜೈನಧರ್ಮಗಳು ನಮ್ಮ ಹುಡುಕಾಟದ ಗುರಿಯಾದ ಆ ಸ್ವಾತಂತ್ರ್ಯ ಶಕ್ತಿಗೆ ದೇವರಿಗೆ ಬದಲಾಗಿ ನಿಬ್ಬಾಣ, ಧಮ್ಮ, ಕೈವಲ್ಯ ಇತ್ಯಾದಿಯಾಗಿ ಹೆಸರು ಕೊಟ್ಟಿವೆ. ಎಲ್ಲ ಧರ್ಮಗಳ, ಧರ್ಮಕ್ಕೆ ಪರ್ಯಾಯವಾಗಿರುವ ಸಮಾಜವಾದದಂಥ ಆಧುನಿಕ ಸಿದ್ಧಾಂತಗಳ ಅಂತಿಮ ಗುರಿ ಸರ್ವಜನ ಹಿತ, ಸರ್ವಜನ ಸುಖವಾಗಿದ್ದರೂ ಕುರುಡುನಂಬಿಕೆಯ ಕಾರಣ ಅವು ಲೋಕಕಂಟಕವಾಗುತ್ತಿವೆ.

ನನ್ನ ಹೊರಗಿಟ್ಟು ನಾನರಸುತ್ತಿದ್ದ ದೇವರ ಹುಡುಕಾಟವನ್ನು ಕೊನೆಗೊಳಿಸಿದವರು ನನ್ನ ಸೂಫಿ ಗುರು ಅಶದುಲ್ಲಾ ಖಾದ್ರಿ ವಲಿ ಶಿವಯೋಗಿಗಳು. ಒಂದು ರಾತ್ರಿ ನಾನು ಅವರ ಗುಹೆಯಲ್ಲಿ ತಂಗಿದ್ದೆ. ಊಟದ ನಂತರ ಧ್ಯಾನಕ್ಕೆ ಕೂತಿದ್ದೆ. ಅವರು ನನ್ನನ್ನು ತಿವಿದು ಧ್ಯಾನದಿಂದ ಹೊರಗೆ ತಂದರು. `ಸಿವ್ ಪರ್ಕಾಸ್ ಕಣ್ಮುಚ್ಕಂಡು ಏನಪ್ಪಾ ಮಾಡ್ತಿದ್ದೆ?' ಎಂದು ಕೇಳಿದರು. ನಾನು ಹೇಳಿದೆ: `ಧ್ಯಾನ ಮಾಡ್ತಾ ಇದ್ದೆ'. ಅವರು ನಕ್ಕು ಕೇಳಿದರು: `ಧ್ಯಾನದಗೆ ಏನ್ನ ಹುಡುಕ್ತಾ ಇದ್ದಪ್ಪ?' `ಮಂತ್ರಜಪ ಮಾಡ್ತಿದ್ದೆ' ಎಂದೆ. ಅವರೆಂದರು: `ನೋಡಪ್ಪಾ, ಈ ಮಂತ್ರ-ತಂತ್ರ- ಪೂಜೆ-ಗೀಜೆ ಇವೆಲ್ಲಾ ಇರದು ಜಗತ್ನಗೇ ಶ್ರೇಷ್ಠವಾಗಿರದನ್ನ ಪಡಕಳಕೆ. ಅದನ್ನ ಪಡಕಳಕಾಗೆ ಇದ್ರೆ ಇವೆಲ್ಲಾ ಬೇಕಾರ್. ನೀನು ಮಕ್ಳಿಗೆ ಪಾಠ ಏಳನು. ಜಗತ್ನಗೇ ಶ್ರೇಷ್ಠವಾದ್ದೂ ಏನು ಏಳಪ್ಪ'.

ನಾನು ಈ ಪ್ರಶ್ನೆಗೆ ತಯಾರಾಗಿರಲಿಲ್ಲ. ನಾವು ತಯಾರಿರದ ಸಮಯದಲ್ಲೇ ಸದಾ ಎಚ್ಚರವನ್ನಾಚರಿಸುವ ಗುರು ಪರೀಕ್ಷೆಗೊಡ್ಡುವುದು. `ಗುರುವಾ'- ನಾನು ಕೇಳಿದೆ. ಅವರು `ಅಲ್ಲ'ವೆಂದರು. ದೇವರು, ಪರೋಪಕಾರ, ತ್ಯಾಗ, ತಪಸ್ಸು ಇತ್ಯಾದಿಯಾಗಿ ಒಂದೊಂದಾಗಿ ಹೆಸರಿಸಿದೆ. ಅವುಗಳಲ್ಲಿ ಯಾವುದನ್ನೂ ಒಪ್ಪದ ಅವರು `ಇವಾಗ ನಿಗಾ ಮಾಡಿ ಕೇಳಿಸಿಕ' ಎಂದು ತಮ್ಮ ಏಕತಾರಿಯನ್ನು ತೆಗೆದುಕೊಂಡು ತನ್ಮಯತೆಯಿಂದ ಬಾರಿಸತೊಡಗಿದರು. ಕೈವಾರ ತಾತಯ್ಯನ `ನಾದಮು ವಿನಲೇದಾ' ಎಂಬ ತತ್ವವವನ್ನು, ನಂತರ ಸರ್ಪಭೂಷಣ ಶಿವಯೋಗಿಯ `ಶ್ರಿಗಿರಿಯ ಸುಕ್ಷೇತ್ರಕೆ ಹೋಗಿ' ಎಂಬ ಸ್ವರವಚನವನ್ನು ಹಾಡಿದರು. ಬಳಿಕ ಅಂದರು: `ನೋಡಪ್ಪ ಈ ಜಗತ್ತಿನಗೆ ಎಲ್ಲವನ್ನೂ ಮೀರಿದ್ದು ನಾದ. ಅದೇ ಗುರು, ಅದೇ ಶಿವ, ಅದೇ ಎಲ್ಲಾ. ಅದು ನಮ್ಮಳಗೇ ಐತೆ.

ಅದೇ ಈ ಜಗತ್ನ ವಿಲಾಸವಾಗಿ ಐಬೋಗವಾಗಿ ಬತ್ತುದೆ. ಆ ನಾದ ಇಡ್ದೊನು ಬ್ರಮ್ಮೋಂಡ್ಲದ ಗುರು. ಈಡೀದೊನೆ ನಮ್ಮ ಸಾಬರಾಗಿರಲಿ ನಿಮ್ಮ ಇಂದೂಗಳಾಗಿರಲಿ ಬೇಕಾರ್. ತಾತ ಏಳಿದ ಆ ತತ್ವವನ್ನೇ ಸಪ್ಪಣ್ಣಪ್ಪನೋರು `ಶರೀರದೊಳಗಿರ ಶ್ರೀಸೈಲ' ಅಂದಿದ್ದು. ಅದ್ರಿಂದ ಈ ದೇವ್ರ, ದಿಂಡ್ರು, ಮಂತ್ರ ಇವನ್ನೆಲ್ಲಾ ಉಗುದ್ ಬಿಟ್ಟು ಈ ನಾದಾನೇ ಅನುಸಂಧಾನ ಮಾಡಪ್ಪ. ಅದು ನಮ್ಮಳ್ಗೇ ಐತೆ. ಅದೇ ನಾವಾಗ್ತೈತೆ. ಅದೇ ಎಲ್ಲಾನೂ ಆಗ್ತೈತೆ. ಆ ನಾದಾನೇ ಬ್ರಮ್ಮೋಂಡ್ಲದ ನಾಡಿ. ಅದನಿಡ್ಕಳಪ್ಪಾ ಸಾಕು.'
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.