ಇದು 1964ರಷ್ಟು ಹಿಂದಿನ ಮಾತು. ಅಮೆರಿಕೆಯ ಸುಪ್ರೀಂ ಕೊರ್ಟಿನ ನ್ಯಾಯಮೂರ್ತಿ ಬ್ರೆನ್ನನ್ ಅವರ ನೇತೃತ್ವದ ಪೀಠ, ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯ ಮೇಲಿನ ಮಾನಹಾನಿ ಪ್ರಕರಣವನ್ನು ವಿಚಾರಣೆ ಮಾಡುತ್ತಿತ್ತು. ‘ಪತ್ರಿಕೆಯಲ್ಲಿ ಪ್ರಕಟವಾದ ಪೂರ್ಣ ಪುಟದ ಜಾಹೀರಾತು ದುರುದ್ದೇಶದ್ದು, ಅದು ಸಂಪೂರ್ಣ ಸುಳ್ಳು ಹಾಗೂ ಸತ್ಯದ ಬಗೆಗೆ ಕಿಂಚಿತ್ತೂ ಗೌರವ ಇಲ್ಲದ್ದು ಎಂದು ಸಾಬೀತು ಮಾಡಿದರೆ ಮಾತ್ರ ಫಿರ್ಯಾದುದಾರರು ಪರಿಹಾರ ಪಡೆಯಲು ಯೋಗ್ಯರು’ ಎಂದು ಉಳಿದ ಎಲ್ಲ ನ್ಯಾಯಮೂರ್ತಿಗಳ ಪರವಾಗಿ ಬ್ರೆನ್ನನ್ ಅವರು ತೀರ್ಪು ನೀಡಿದ್ದರು.

‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯ ವಿರುದ್ಧ ದಾವೆ ಹೂಡಿದ ಸಲ್ಲಿವಾನ್ ಸಂಸ್ಥೆ ಹಾಗೆಂದು ಸಾಬೀತು ಮಾಡಲು ಸೋತಿತು. ಬ್ರೆನ್ನನ್ ಅವರ ತೀರ್ಪು ವಾಕ್ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಿತು. ಈ ತೀರ್ಪು ಇಂದಿಗೂ ಅಮೆರಿಕದಲ್ಲಿ ಚರಿತ್ರಾರ್ಹ ತೀರ್ಪು ಎಂದು ಹೆಸರಾಗಿದೆ. ಬ್ರೆನ್ನನ್ ಅವರಿಗೆ ಅಮೆರಿಕ ದೇಶದ ನಾಲ್ಕನೇ ಅಧ್ಯಕ್ಷ ಜೇಮ್ಸ್ ಮ್ಯಾಡಿಸನ್ ಹೇಳಿದ ಮಾತು ನೆನಪು ಇತ್ತು. ಮ್ಯಾಡಿಸನ್‌ರು ಹೇಳಿದ್ದರು : ‘ಸರ್ಕಾರದ ಮೇಲೆ ನಿಷೇಧ ಹೇರುವ ಅಧಿಕಾರ ಜನರಿಗೆ ಇದೆಯೇ ಹೊರತು ಜನರ ಮೇಲೆ ನಿಷೇಧ ಹೇರುವ ಅಧಿಕಾರ ಸರ್ಕಾರಕ್ಕೆ ಇಲ್ಲ’ ಎಂದು.

ಪ್ರಜಾಪ್ರಭುತ್ವದ ಬೇರುಗಳು ಆಳವಾಗಿ ಊರುವುದು ಇಂಥ ನಿದರ್ಶನಗಳಿಂದ, ಮಹತ್ವದ ತೀರ್ಪುಗಳಿಂದ. ಅಮೆರಿಕೆಯಲ್ಲಿ ಯಾರು ಯಾರ ವಿರುದ್ಧ ಬೇಕಾದರೂ ಬರೀ ಟೀಕೆ ಮಾಡುವುದಲ್ಲ, ದ್ವೇಷದ ಮಾತೂ (Hate speach) ಆಡಬಹುದು. ಆದರೆ, ದೈಹಿಕ ಹಲ್ಲೆ ಮಾಡುವುದಕ್ಕೆ ಮಾತ್ರ ಅಲ್ಲಿ ನಿರ್ಬಂಧ ಇದೆ. ಅನೇಕ ಪಾಶ್ಚಾತ್ಯ ದೇಶಗಳಲ್ಲಿ ಅಲ್ಲಿನ ನ್ಯಾಯಮೂರ್ತಿಗಳನ್ನು ‘ನೀನೊಬ್ಬ ಶತಮೂರ್ಖ’ ಎಂದು ತೆಗಳಬಹುದು!

ಭಾರತವು ಸ್ವಾತಂತ್ರ್ಯ ಬಂದ ಲಾಗಾಯ್ತಿನಿಂದಲೂ ಪ್ರಜಾಪ್ರಭುತ್ವವನ್ನೇ ಅನುಸರಿಸುತ್ತಿರುವ ದೇಶ. ಇನ್ನೇನು ಬರುವ ಆಗಸ್ಟ್ ವೇಳೆಗೆ ನಮ್ಮ ಸ್ವಾತಂತ್ರ್ಯಕ್ಕೆ ಎಪ್ಪತ್ತು ವರ್ಷ ತುಂಬುತ್ತದೆ. ಅದು ಕಡಿಮೆ ಆಯುಷ್ಯವೇನೂ ಅಲ್ಲ. ಆದರೆ, ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಉಳಿದ ಪ್ರಜಾಪ್ರಭುತ್ವದ ದೇಶಗಳಲ್ಲಿ ಇರುವಷ್ಟು ಬೆಲೆ ಇದೆಯೇ? ಅಲ್ಲಿ ಇರುವಷ್ಟು ಮಾಧ್ಯಮ ಇಲ್ಲಿಯೂ ಸ್ವತಂತ್ರವಾಗಿದೆಯೇ ಎಂದು ಕೇಳಿದರೆ ಸಕಾರಾತ್ಮಕ ಉತ್ತರ ಕೊಡುವುದು ಕಷ್ಟವಾಗುತ್ತದೆ.

ನಿಜ, ಸಂವಿಧಾನದ 19 (1) ಎ ಪರಿಚ್ಛೇದದ ಅನುಸಾರ ನಮಗೆಲ್ಲ ಅಭಿವ್ಯಕ್ತಿ ಸ್ವಾತಂತ್ರ್ಯ ಸಿಕ್ಕಿದೆ. ಅದೇ ಉಸಿರಿನಲ್ಲಿ 19 (2)ನೇ ಪರಿಚ್ಛೇದದಲ್ಲಿ ಆ ಸ್ವಾತಂತ್ರ್ಯಕ್ಕೆ ಅನೇಕ ನಿರ್ಬಂಧಗಳನ್ನು ಕೂಡ ಹಾಕಲಾಗಿದೆ. ಇನ್ನೊಬ್ಬ ವ್ಯಕ್ತಿಯ ಘನತೆ, ದೇಶದ ಸಮಗ್ರತೆ, ಸಾರ್ವಭೌಮತ್ವ, ಭದ್ರತೆ, ವಿದೇಶಗಳ ಜೊತೆಗಿನ ಮೈತ್ರಿ, ಸಾರ್ವಜನಿಕ ಶಾಂತಿ, ಧರ್ಮಗಳ ನಡುವೆ ಅಶಾಂತಿಗೆ ಪ್ರಚೋದನೆ, ನೈತಿಕತೆ– ಸಭ್ಯತೆಗೆ ಭಂಗ, ನ್ಯಾಯಾಂಗ ನಿಂದನೆ ಇತ್ಯಾದಿ ಕಾರಣಗಳೆಲ್ಲ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ನಿರ್ಬಂಧಗಳಾಗಿವೆ, ನೆಪಗಳಾಗಿವೆ!

ಭಾರತೀಯ ದಂಡ ಸಂಹಿತೆಯ 499ನೇ ಕಲಮು ಮಾನಹಾನಿಗೆ ಸಂಬಂಧಿಸಿದ್ದು. ಈ ಕಲಮಿನ ಪ್ರಕಾರ ಒಬ್ಬ ವ್ಯಕ್ತಿ ಅಥವಾ ಒಂದು ಮಾಧ್ಯಮ ಸಂಸ್ಥೆ ಬರೀ ನಿಜವನ್ನು ಹೇಳಿದರೆ, ಬರೆದರೆ ಮಾತ್ರ ಸಾಲದು. ‘ಅದು ಸಾರ್ವಜನಿಕ ಒಳಿತಿಗೆ ಹೇಳಿದ, ಬರೆದ ಸತ್ಯ’ ಎಂದು ಸಾಬೀತು ಮಾಡಬೇಕು. ಈ ಕಲಮಿನ ಒಂದು ವಿಚಿತ್ರ ಸಮಸ್ಯೆ ಎಂದರೆ ಒಬ್ಬ ವ್ಯಕ್ತಿ ನೇರವಾಗಿ ಯಾವುದೇ ತಪ್ಪು ಮಾಡದೇ ಇದ್ದಾಗಲೂ ಆತ ತನ್ನ ವಿರುದ್ಧ ಸಂಚು ಹೂಡಿದ್ದ ಎಂದು ಆತನ ವಿರುದ್ಧ ಫಿರ್ಯಾದು ದಾಖಲು ಮಾಡಬಹುದು.

ಭಾರತೀಯ ದಂಡ ಸಂಹಿತೆ ಜಾರಿಗೆ ಬಂದ ಕಳೆದ 156 ವರ್ಷಗಳ ಲಾಗಾಯ್ತಿನಿಂದಲೂ ಮಾನಹಾನಿ ಮತ್ತು ಜೀವಿಸುವ ಹಕ್ಕನ್ನು (ಸಂವಿಧಾನದ 21ನೇ ಪರಿಚ್ಛೇದ) ತಳಕು ಹಾಕಲಾಗಿದೆ. ಒಬ್ಬ ವ್ಯಕ್ತಿಯ ಮಾನಹಾನಿಯಾದರೆ ಮರ್ಯಾದೆಯಿಂದ ಜೀವಿಸುವ ಆತನ ಹಕ್ಕನ್ನು ಕಿತ್ತುಕೊಂಡಂತೆ ಎಂದು ಅರ್ಥೈಸಲಾಗಿದೆ. ಜೀವಿಸುವ ಹಕ್ಕಿಗೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿಂತ ಒಂದು ಗುಂಜಿ ಹೆಚ್ಚು ತೂಕ! ಅದು ಸಹಜ ಕೂಡ.

ಕಳೆದ ಶುಕ್ರವಾರ ಸುಪ್ರೀಂ ಕೋರ್ಟಿನ ವಿಭಾಗೀಯ ಪೀಠ ಮಾನಹಾನಿ ಮೊಕದ್ದಮೆಗಳನ್ನು ಕೇವಲ ‘ಸಿವಿಲ್ ಅಪರಾಧ’ ಎಂದು ಪರಿಗಣಿಸಲು ನಿರಾಕರಿಸಿದೆ. ಅದು ‘ಕ್ರಿಮಿನಲ್ ಅಪರಾಧ’ ಕೂಡ ಹೌದು ಎಂದು ಅದು ಹೇಳಿದೆ. ಒಬ್ಬ ವ್ಯಕ್ತಿ ಯಾರ ವಿರುದ್ಧವಾದರೂ ಮಾನಹಾನಿ ಪ್ರಕರಣ ದಾಖಲು ಮಾಡಿದರೆ ಆತನಿಗೆ ಕೇವಲ ನಷ್ಟ ಪರಿಹಾರ ನೀಡಿದರೆ ಮಾತ್ರ ಸಾಲದು ಆರೋಪಿಯು ಜೈಲು ಶಿಕ್ಷೆಯನ್ನೂ (ಗರಿಷ್ಠ ಎರಡು ವರ್ಷ) ಅನುಭವಿಸಬೇಕು ಎಂದು ಈ ತೀರ್ಪು ಹೇಳಿದಂತೆ ಆಗಿದೆ.

ಕಾಂಗ್ರೆಸ್, ಬಿಜೆಪಿ ಮತ್ತು ಎ.ಎ.ಪಿ ಮುಖಂಡರು ಹಾಗೂ ಕೆಲವು ಮಾಧ್ಯಮ ಸಂಸ್ಥೆಗಳ ಪ್ರತಿನಿಧಿಗಳು ಮಾನಹಾನಿ ಕಲಮಿನ ಕ್ರಿಮಿನಲ್ ಅಪರಾಧವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನ ಮೆಟ್ಟಿಲು ಏರಿದ್ದರು.

ಕೇಂದ್ರ ಸರ್ಕಾರ ತನ್ನ ಅಭಿಪ್ರಾಯ ಹೇಳುವಾಗ ಸಹಜವಾಗಿಯೇ ರಕ್ಷಣಾತ್ಮಕ ವಾದವನ್ನು ಮಂಡಿಸಿ ವಸಾಹತು ಕಾಲದ ಭಾರತೀಯ ದಂಡ ಸಂಹಿತೆಯ ಕಲಮಿನ ಪರ ನಿಂತುಕೊಂಡಿತು. ಅಷ್ಟೇನು ಮಾಧ್ಯಮ ಸ್ನೇಹಿಯಲ್ಲದ ಕೇಂದ್ರ ಸರ್ಕಾರದ ನಿಲುವು ಅರ್ಥ ಮಾಡಿಕೊಳ್ಳುವಂಥದು. ಆದರೆ, ಸುಪ್ರೀಂ ಕೋರ್ಟು ಇಂಥ ಮಹತ್ವದ ತೀರ್ಪು ಕೊಡುವುದಕ್ಕಿಂತ ಮುಂಚೆ ಶ್ರೀಲಂಕಾದಂಥ ಪುಟ್ಟ ದೇಶದಲ್ಲಿ ಕೂಡ ಮಾನಹಾನಿ ಕ್ರಿಮಿನಲ್ ಅಪರಾಧವಲ್ಲ ಎಂಬ ಸಂಗತಿಯನ್ನು ಗಮನಿಸಬೇಕಿತ್ತು. ಅಥವಾ ಈ ವಿಚಾರವನ್ನು ಸುಪ್ರೀಂ ಕೋರ್ಟಿನ ಸಂವಿಧಾನ ಪೀಠ ಪರಾಮರ್ಶೆ ಮಾಡಲಿ ಎಂದಾದರೂ ಹೇಳಬೇಕಿತ್ತು.

ಭಾರತೀಯ ದಂಡ ಸಂಹಿತೆಯ ಎಲ್ಲ ಕಲಮುಗಳಲ್ಲಿ ಮಾನಹಾನಿ ಕಲಮು ವಿಶಿಷ್ಟವಾದುದು. ಅದರಡಿ ಸಿವಿಲ್ ಮತ್ತು ಕ್ರಿಮಿನಲ್ ಅಪರಾಧಗಳಿಗೆ ಎರಡು ‘ಶಿಕ್ಷೆ’ ವಿಧಿಸಲು ಅವಕಾಶ ಇದೆ. ಬಹುಶಃ ಅದೇ ಕಾರಣಕ್ಕಾಗಿ ಕೇಂದ್ರದ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ದೆಹಲಿ ಮುಖ್ಯಮಂತ್ರಿ ಹಾಗೂ ಎ.ಎ.ಪಿ ಮುಖಂಡ ಅರವಿಂದ್ ಕೇಜ್ರಿವಾಲ್ ವಿರುದ್ಧ ಹತ್ತು ಕೋಟಿ ರೂಪಾಯಿಗಳ ಬೃಹತ್ ಪರಿಹಾರ ಕೇಳುವ ಸಿವಿಲ್ ಮೊಕದ್ದಮೆ ಜೊತೆಗೆ ಹಾಗೂ ಶಿಕ್ಷೆ ವಿಧಿಸಬೇಕು ಎನ್ನುವ ಕ್ರಿಮಿನಲ್ ದಾವೆಯನ್ನೂ ಹೂಡಿದ್ದಾರೆ.

ಮಾನಹಾನಿ ಕಲಮು ಮುಖ್ಯವಾಗಿ ಬಾಯಿಮುಚ್ಚಿಸುವ ಉದ್ದೇಶದ್ದು. ಮಾಧ್ಯಮಗಳಿಗೆ ಇರುವ ಭಯವೂ ಅದೇ. ಅನೇಕ ಸಾರಿ ಅದು ಸತ್ಯ ಎಂದು ಗೊತ್ತಿರುವಾಗಲೂ ಆಧಾರಗಳು ಸಾಲದೇ ಮಾಧ್ಯಮಗಳು ಆ ಸತ್ಯವನ್ನು ಬರೆಯಲು ಹಿಂದೇಟು ಹಾಕುತ್ತವೆ. ಯಾರಾದರೂ ದಾಖಲೆ ಸಹಿತ ಭ್ರಷ್ಟಾಚಾರ ಮಾಡುತ್ತಾರೆಯೇ? ಮಾನಹಾನಿ ಕಲಮಿನ ಇನ್ನೊಂದು ವಿಶೇಷ ಎಂದರೆ ಅದು ಮಾನಹಾನಿ ಮೊಕದ್ದಮೆ ಹೂಡುವ ಸರ್ಕಾರಿ ನೌಕರನಿಗೆ ಅಥವಾ ಸಾರ್ವಜನಿಕ ಸೇವಕನಿಗೆ ಸರ್ಕಾರಿ ವಕೀಲರ ವಕಾಲತ್ತಿನ ಸೌಲಭ್ಯವನ್ನು ಒದಗಿಸುತ್ತದೆ.

ಮಾನಹಾನಿ ಪ್ರಕರಣ ಎದುರಿಸುವ ವ್ಯಕ್ತಿ ಅಥವಾ ಸಂಸ್ಥೆ ಸ್ವಂತ ಖರ್ಚಿನಲ್ಲಿ ತನ್ನನ್ನು ಸಮರ್ಥಿಸಿಕೊಳ್ಳಬೇಕಾಗುತ್ತದೆ! ಮಾನಹಾನಿಗೆ ಒಳಗಾದ ವ್ಯಕ್ತಿಯ ಜೀವಿಸುವ ಹಕ್ಕಿಗೆ ಧಕ್ಕೆಯಾಗಿರುತ್ತದೆ ಎಂಬ ನೆಪದಲ್ಲಿಯೇ ಆತನಿಗೆ ಸರ್ಕಾರಿ ವಕೀಲರ ನೆರವು ಪಡೆಯುವ ಅವಕಾಶವೂ ಸಿಕ್ಕಿದೆ!

ಇದು ಕಾನೂನು ರೂಪಿಸುವಾಗ ಆದ ಲೋಪವೋ ಅಥವಾ ಕಾನೂನು ರೂಪಿಸುವವರು ತಮ್ಮ ಅನುಕೂಲಕ್ಕೆ ಮಾಡಿಕೊಂಡ ಸವಲತ್ತೋ ಅಥವಾ ತಮ್ಮ ವಿರುದ್ಧ ಯಾರೂ ಬಾಯಿ ತೆರೆಯಬಾರದೆಂಬುದಕ್ಕೆ ಮಾಡಿಕೊಂಡ ರಕ್ಷಣಾ ಕ್ರಮವೋ ಹೇಳುವುದು ಕಷ್ಟ. ಎಲ್ಲವೂ ಇರುವುದು ಸಾಧ್ಯ.

ಸಿವಿಲ್ ಅಪರಾಧ ಸಾಬೀತಾದರೆ ಫಿರ್ಯಾದುದಾರರು ಕೇಳುವಷ್ಟು ಪರಿಹಾರವನ್ನೂ ಕೊಡಬೇಕು. ಕ್ರಿಮಿನಲ್ ಅಪರಾಧ ಸಾಬೀತಾದರೆ ಜೈಲಿಗೂ ಹೋಗಬೇಕು ಎನ್ನುವುದಾದರೆ ಇದಕ್ಕಿಂತ ಕಠಿಣ ಕಾನೂನು ಇನ್ನೊಂದು ಇರಲಾರದು. ಭಾರತದ ಸಂವಿಧಾನ ರಚನೆಗಿಂತ ಮುಂಚಿನ ಕಾಲದ ಈ ಬ್ರಿಟಿಷ್ ಕಾನೂನಿನ ಉದ್ದೇಶ ಮುಖ್ಯವಾಗಿ ರಾಜಕೀಯ ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವುದಾಗಿತ್ತು. ರಾಜ ಹಾಡುವ ಹಾಡನ್ನೇ ಹಾಡುತ್ತ ಇರಬೇಕು ಎಂದು ಬಯಸುವುದಾಗಿತ್ತು.

ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿಂತ ಆತನ ಘನತೆ ಮುಖ್ಯ ಎಂದು ಹೇಳಿ ಬಾಯಿಮುಚ್ಚಿಸುವ ಹುನ್ನಾರವಾಗಿತ್ತು. ಸುಪ್ರೀಂ ಕೋರ್ಟು ಈಗಿನ ಹಾಗೆ ತೀರ್ಪು ನೀಡುವ ಬದಲು, ‘ಸಂವಿಧಾನ ಪೂರ್ವ ಕಾಲದ ಈ ಕಲಮನ್ನು ಪರಾಮರ್ಶೆಗೆ ಒಳಪಡಿಸಲು ಇದು ಸಕಾಲ’ ಎಂದು ಹೇಳಿದ್ದರೆ ಅದು ಒಂದು ಮೈಲಿಗಲ್ಲು ಎನ್ನಿಸುವಂಥ ತೀರ್ಪು ಆಗುತ್ತಿತ್ತು. ಅಂಥ ಅವಕಾಶವನ್ನು ಸರ್ವೋಚ್ಚ ನ್ಯಾಯಾಲಯ ತಪ್ಪಿಸಿಕೊಂಡಿತು.

ಕೆಳಹಂತದ ನ್ಯಾಯಾಲಯಗಳಲ್ಲಿ ಏನಾಗುತ್ತಿದೆ ಎಂದು ಅನೇಕ ಸಾರಿ ಉಚ್ಚ ಹಾಗೂ ಸರ್ವೋಚ್ಚ ನ್ಯಾಯಾಲಯಗಳ ಗಮನಕ್ಕೆ ಬಾರದೇ ಹೋಗಬಹುದು. ಬೇರೆ ರಾಜ್ಯಗಳಲ್ಲಿ ಹೇಗಿದೆಯೊ ತಿಳಿಯದು. ಆದರೆ, ಕರ್ನಾಟಕದಲ್ಲಿ ದಿನಬೆಳಗಾದರೆ ಸಿವಿಲ್ ನ್ಯಾಯಾಲಯಗಳು ನೀಡುವ ನಿಷೇಧಾದೇಶಗಳು (ಇಂಜಂಕ್ಷನ್) ಮಾಧ್ಯಮಗಳ ಸಂಪಾದಕರ ಮೇಜಿನ ಮೇಲೆ ಬಂದು ಬೀಳುತ್ತವೆ. ಯಾವುದಾದರೂ ಒಂದು ಟೀವಿ ವಾಹಿನಿಯಲ್ಲಿ ಯಾರಾದರೂ ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಒಂದು ವರದಿ ಪ್ರಕಟವಾಗುವುದೇ ತಡ ಅವರು ನೇರವಾಗಿ ತಮ್ಮ ವ್ಯಾಪ್ತಿಯ ಸಿವಿಲ್ ನ್ಯಾಯಾಲಯಕ್ಕೆ ಹೋಗಿ ರಾಜ್ಯದಲ್ಲಿ ಇರುವ ಎಲ್ಲ ಟೀವಿ ವಾಹಿನಿಗಳು ಮತ್ತು ಪತ್ರಿಕೆಗಳ ವಿರುದ್ಧ ನಿಷೇಧಾದೇಶ ತರುತ್ತಾರೆ. ಕೆಳ ನ್ಯಾಯಾಲಯಗಳು ಅಂಥ ಒಂದು ಆದೇಶ ಹೊರಡಿಸುವುದಕ್ಕಿಂತ ಮುಂಚೆ ವರದಿ ಪ್ರಕಟಿಸಿದ ವಾಹಿನಿ ಅಥವಾ ಪತ್ರಿಕೆ ಜೊತೆಗೆ ಉಳಿದ ಎಲ್ಲ ವಾಹಿನಿ ಹಾಗೂ ಪತ್ರಿಕೆಗಳನ್ನು ಏಕೆ ಪಕ್ಷದಾರರನ್ನಾಗಿ ಮಾಡಲಾಗಿದೆ ಎಂಬ ಕನಿಷ್ಠ ಪ್ರಶ್ನೆಯನ್ನೂ ಹಾಕುವುದಿಲ್ಲ.

ಹಾಗಾದರೆ ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆ ಸಾರ್ವಜನಿಕ ಹಿತಕ್ಕೆ ಧಕ್ಕೆಯಾಗುವಂತೆ ನಡೆದುಕೊಂಡರೆ ಅದನ್ನು ಪ್ರಕಟಿಸಬಾರದೇ? ಹಾಗಾದರೆ ಪತ್ರಿಕೆಗಳು ಏಕೆ ಇರಬೇಕು? ಅದು ಪತ್ರಿಕೆಗಳ ಮೂಲಭೂತ ಹಕ್ಕಿಗೆ ಹಾಕಿದ ನಿರ್ಬಂಧ ಆಗುವುದಿಲ್ಲವೇ? ಇದನ್ನು ಎಲ್ಲಿ ಪ್ರಶ್ನಿಸುವುದು? ಆರೋಪ ಎನಿಸುವಂಥ ಒಂದು ಮಾತು ಆಡಿದರೆ, ‘ನಿಮ್ಮನ್ನು ಯಾವ ಜೈಲಿಗೆ ಕಳುಹಿಸಬೇಕು’ ಎಂದು ಕೇಳುವ ಹೈಕೋರ್ಟಿನ ನ್ಯಾಯಮೂರ್ತಿಗಳ ಎದುರು ನಿಲ್ಲಲ್ಲು ಎಂಟೆದೆಯೇ ಬೇಕಾಗುತ್ತದೆ!

ಹಾಗಾದರೆ ನ್ಯಾಯಾಂಗ ನಿಂದನೆಯ ನೆಪದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಆದರೂ ಸುಮ್ಮನೆ ಇರಬೇಕೇ? ನ್ಯಾಯಾಲಯಗಳು ಇರುವುದು ಮುಖ್ಯವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗಾಗಿ. ಅದನ್ನು ಕುಂಠಿತಗೊಳಿಸಲು ಅಲ್ಲ. ಯಾರಾದರೂ ನಿಷೇಧಾದೇಶ ಕೋರಿ ಅರ್ಜಿ ಸಲ್ಲಿಸಿದರೆ ಮಾನಹಾನಿ ಮೊಕದ್ದಮೆ ದಾಖಲಿಸುವ ಅವಕಾಶವನ್ನು ನೀವು ಏಕೆ ಬಳಸಿಕೊಂಡಿಲ್ಲ ಎಂದು ಕೇಳಬೇಕಲ್ಲದೆ ವರದಿ ಪ್ರಕಟಿಸುವ ಹಕ್ಕನ್ನೇ ಮೊಟಕುಗೊಳಿಸಿದರೆ ಹೇಗೆ?

ಅಭಿವ್ಯಕ್ತಿ ಸ್ವಾತಂತ್ರ್ಯದ ಎದುರು ಇರುವ ಅಡ್ಡಿಗಳು ಒಂದೆರಡು ಅಲ್ಲ. ಒಂದು ಕಡೆ ಮಾನಹಾನಿ ಮೊಕದ್ದಮೆಯ ಹೆದರಿಕೆ. ಇನ್ನೊಂದು ಕಡೆ ನ್ಯಾಯಾಂಗ ನಿಂದನೆಯ ಬೆದರಿಕೆ; ಮಗದೊಂದು ಕಡೆ ಶಾಸಕಾಂಗದಿಂದ ಹಕ್ಕುಚ್ಯುತಿಯ ಎಚ್ಚರಿಕೆ. ನಿಜ, ಯಾವ ಸ್ವಾತಂತ್ರ್ಯವೂ ಪರಿಪೂರ್ಣವಾದುದು ಅಲ್ಲ. ಎಲ್ಲದಕ್ಕೂ ಒಂದು ನಿರ್ಬಂಧ ಎಂಬುದು ಇರಬೇಕು. ಇಲ್ಲವಾದರೆ ಸಮಾಜದಲ್ಲಿ ಅರಾಜಕತೆ ಸೃಷ್ಟಿಯಾಗಬಹುದು. ಮಾನಹಾನಿಯನ್ನು ಕೇವಲ ಸಿವಿಲ್ ಅಪರಾಧ ಎಂದು ಪರಿಗಣಿಸಿದರೆ ಸಾಕು ಎಂದು ಸುಪ್ರೀಂ ಕೋರ್ಟು ಹೇಳಿದ್ದರೆ ಅದು ಕೂಡ ಅಭಿವ್ಯಕ್ತಿ ಸ್ವಾತಂತ್ರ್ಯದ ನಿಸ್ಸೀಮತೆಗೆ ಒಂದು ನಿರ್ಬಂಧದಂತೆಯೇ ಕೆಲಸ ಮಾಡುತ್ತಿತ್ತು.

ಪ್ರಜಾಪ್ರಭುತ್ವದಲ್ಲಿ ಕಾನೂನುಗಳು ಪ್ರಗತಿಪರವಾಗಿ ಇರಬೇಕು. ಮತ್ತೆ ಮತ್ತೆ ಅವುಗಳ ಪರಾಮರ್ಶೆ ಆಗುತ್ತ ಇರಬೇಕು. ಸಲಿಂಗ ಕಾಮದ ಸಿಂಧುತ್ವದ ವಿಚಾರದಲ್ಲಿಯೂ ಸುಪ್ರೀಂ ಕೋರ್ಟಿನ ತೀರ್ಪು ಬದಲಾದ ಕಾಲದ ಅಗತ್ಯಕ್ಕೆ ಅನುಗುಣವಾಗಿ ಇರಲಿಲ್ಲ. ಕ್ರಿಮಿನಲ್ ಮಾನಹಾನಿ ಪ್ರಕರಣದ ವಿಚಾರದಲ್ಲಿಯೂ ಅದು ಹಾಗೆಯೇ ಸಾಂಪ್ರದಾಯಿಕವಾಗಿ ನಡೆದುಕೊಂಡಿದೆ. ಈಗ ಸಂಸತ್ತಿನ ಮೇಲೆ ಜವಾಬ್ದಾರಿ ಬಿದ್ದಿದೆ. ಪ್ರಜಾಪ್ರಭುತ್ವದ ಅತ್ಯುನ್ನತ ದೇಗುಲವಾದ ಸಂಸತ್ತಿನ ನಡೆ ಹೇಗಿರಬಹುದು? ಸುಪ್ರೀಂ ಕೋರ್ಟಿನ ತೀರ್ಪಿಗಿಂತ ಭಿನ್ನವಾಗಿ ಇರಲಾರದು ಎಂದು ಊಹಿಸುವುದು ಕಷ್ಟವೇನೂ ಅಲ್ಲ. ಯಾವ ಪ್ರಭುತ್ವಕ್ಕಾದರೂ ಅಭಿವ್ಯಕ್ತಿ ಸ್ವಾತಂತ್ರ್ಯ ಬೇಕಿರುತ್ತದೆಯೇ? ದೊರೆ ಹಾಡುವ ಹಾಡನ್ನೇ ಎಲ್ಲರೂ ಹಾಡಬೇಕು ಎಂದು ಅದು ಬಯಸುತ್ತದೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.