ಇದು ಸಮರ ಕಾಲ. ಇನ್ನೇನು ಎರಡು ಮೂರು ತಿಂಗಳಲ್ಲಿ ರಾಜ್ಯದಲ್ಲಿ ಚುನಾವಣೆ ಬರುತ್ತದೆ. ಹಾಗೆ ನೋಡಿದರೆ ಆಡಳಿತ ಪಕ್ಷ ನಾಳೆಯಿಂದಲೇ ಚುನಾವಣೆಗೆ ಹೋಗಲು ಸಿದ್ಧ! ಅದು ಬಜೆಟ್ ಮಂಡನೆಯ ದಿನಕ್ಕಾಗಿ ಮಾತ್ರ ಕಾಯುತ್ತಿತ್ತು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜನರು ಯಾರಿಗೆ ಆಶೀರ್ವಾದ ಮಾಡುತ್ತಾರೆ ಎಂಬುದು ಭವಿಷ್ಯದ ಪ್ರಶ್ನೆ. ಮುಂದೆ ಬರುವ ಸರ್ಕಾರ ಬೇರೆ ಪಕ್ಷದ್ದು ಆಗಿದ್ದರೆ ಶುಕ್ರವಾರ ಮಂಡನೆ ಆಗಿರುವ ಬಿಜೆಪಿ ಸರ್ಕಾರದ ಬಜೆಟ್‌ನ ಜತೆಗೆ ಅದಕ್ಕೆ ಯಾವ ಭಾವನಾತ್ಮಕ ನಂಟೂ ಇರುವುದಿಲ್ಲ. ಅದು ತನ್ನ ಪಕ್ಷದ ಪ್ರಣಾಳಿಕೆಗೆ ಅನುಗುಣವಾಗಿ ಹೊಸ ಬಜೆಟ್‌ನ್ನೇ ಬೇಕಾದರೂ ಮಂಡಿಸಬಹುದು. ಅದು ಈಗ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಗೊತ್ತಿಲ್ಲ ಎಂದು ಅಲ್ಲ. ಆದರೆ, ಮುಂದಿನ ಸರ್ಕಾರ ಯಾವುದು ಬಂದರೂ ಬದಲಿಸಲು ಆಗದ ಒಂದು ಸಂಗತಿಯನ್ನು ಶೆಟ್ಟರು ಈ ಬಜೆಟ್‌ನಲ್ಲಿ ಸೇರಿಸಿದ್ದಾರೆ. ಬಹುಶಃ ಯಾರೂ ಅದನ್ನು ಊಹಿಸಿರಲಿಕ್ಕಿಲ್ಲ ಎಂದು ಅನಿಸುತ್ತದೆ. ಅದು ಹೊಸ ನಲವತ್ಮೂರು ತಾಲ್ಲೂಕುಗಳ ರಚನೆ.

1996ರಲ್ಲಿ ಮುಖ್ಯಮಂತ್ರಿಯಾಗಿದ್ದ ಜೆ.ಎಚ್.ಪಟೇಲರು ಹೊಸ ಜಿಲ್ಲೆಗಳ ರಚನೆಗೆ ಮೊಟ್ಟ ಮೊದಲು ನಾಂದಿ ಹಾಡಿದ್ದರು. ನಂತರ ಎಚ್.ಡಿ.ಕುಮಾರಸ್ವಾಮಿಯವರು 20-20 ತಿಂಗಳ ಸರ್ಕಾರದಲ್ಲಿ ಎರಡು ಹೊಸ ಜಿಲ್ಲೆ ರಚಿಸಿದ್ದರು. ಯಡಿಯೂರಪ್ಪನವರು ತಮ್ಮ ಅವಧಿಯಲ್ಲಿ ಒಂದು ಹೊಸ ಜಿಲ್ಲೆಯನ್ನು ರಚಿಸಿದ್ದರು. ಆದರೆ, ಜಗದೀಶ ಶೆಟ್ಟರು ಮಾತ್ರ ಮೊದಲ ಬಾರಿಗೆ ಕರ್ನಾಟಕದಲ್ಲಿ ಹೊಸ ತಾಲ್ಲೂಕುಗಳ ಘೋಷಣೆ ಮಾಡಿದ್ದಾರೆ. ಆ ಮೂಲಕ ಮುಂದಿನ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಪ್ರಬಲ ಅಸ್ತ್ರವೊಂದನ್ನು ಕೊಟ್ಟಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಕಿತ್ತೂರು ಉತ್ಸವದಲ್ಲಿ ಆ ಐತಿಹಾಸಿಕ ಊರನ್ನು ಅವರು ಹೊಸ ತಾಲ್ಲೂಕು ಎಂದು ಘೋಷಿಸಿದ್ದರು. ಅದು, ಇಡೀ ದೇಶದಲ್ಲಿ ಬ್ರಿಟಿಷ್‌ರ ವಿರುದ್ಧ ಮೊದಲ ಸಮರ ಸಾರಿದ ರಾಣಿ ಕಿತ್ತೂರು ಚೆನ್ನಮ್ಮನ ಊರು.

ಇವೆಲ್ಲ ಭಾವನಾತ್ಮಕ ವಿಚಾರಗಳು. ಚುನಾವಣೆ ಸಮಯದಲ್ಲಿ ಭಾವನಾತ್ಮಕ ವಿಚಾರಗಳಿಗೇ ಪ್ರಾಧಾನ್ಯ. ಆ ಭಾವನೆಯ ಮೇಲೆಯೇ ಮುಖ್ಯಮಂತ್ರಿಗಳು ತಮ್ಮ ರಾಜಕೀಯ ಆಟ ಆಡಿದ್ದಾರೆ. ಹೈದರಾಬಾದ್ ಕರ್ನಾಟಕಕ್ಕೆ ಸಂವಿಧಾನದ ಅಡಿಯಲ್ಲಿ ವಿಶೇಷ ಸ್ಥಾನಮಾನ ಒದಗಿಸುವಲ್ಲಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆಯವರು ವಹಿಸಿದ ವಿಶೇಷ ವೈಯಕ್ತಿಕ ಆಸಕ್ತಿಯ ಹಿಂದೆಯೂ ಮುಂಬರುವ ಚುನಾವಣೆಯೇ ಇತ್ತು. ಆ ಮೂಲಕ ಹೈದರಾಬಾದ್ ಕರ್ನಾಟಕದ ಸುಮಾರು 40 ಸೀಟುಗಳಲ್ಲಿ ಮುನ್ನಡೆ ಪಡೆಯುವುದು ಮುಖ್ಯಮಂತ್ರಿ ಗದ್ದುಗೆ ಮೇಲೆ ಕಣ್ಣು ಇಟ್ಟಿರುವ ಖರ್ಗೆಯವರ ಉದ್ದೇಶವಾಗಿತ್ತು. ಅದು ಆಗಬಹುದು ಎಂಬ ನಿರೀಕ್ಷೆಯೂ ಇದೆ. ಕಾಂಗ್ರೆಸ್ ಪಕ್ಷ ಹಾಕಿದ ಈ ಭಾವನಾತ್ಮಕ ದಾಳಕ್ಕೆ ಬಿಜೆಪಿಯೂ ಒಂದು ಪ್ರತಿದಾಳ ಉರುಳಿಸಿದೆ.

ಮುಖ್ಯಮಂತ್ರಿಗಳು ಹೊಸದಾಗಿ 43 ತಾಲ್ಲೂಕುಗಳನ್ನು ರಚಿಸಿದ್ದಾರೆ. 2007ರಲ್ಲಿ ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಎಂ.ಬಿ.ಪ್ರಕಾಶ್ ಅವರ ನೇತೃತ್ವದಲ್ಲಿ ರಚಿಸಿದ್ದ ಸಮಿತಿ ಸೂಚಿಸಿದ್ದ ಕೆಲವು ಹೊಸ ತಾಲ್ಲೂಕುಗಳನ್ನು ಬಿಟ್ಟು ತಮಗೆ ಬೇಕಾದ ತಾಲ್ಲೂಕುಗಳನ್ನು ಅವರು ಸೇರಿಸಿದ್ದಾರೆ. ರಾಜಕೀಯದಲ್ಲಿ ಇದೂ ಸಹಜ. ಈ ಹೊಸ ತಾಲ್ಲೂಕುಗಳಲ್ಲಿ ಬಹುತೇಕ ಊರುಗಳು ವಿಧಾನಸಭಾ ಕ್ಷೇತ್ರಗಳ ಕೇಂದ್ರ ಸ್ಥಾನಗಳೂ ಆಗಿರುವುದರಿಂದ ಅಲ್ಲಿ ಬಿಜೆಪಿ ಪ್ರಬಲ ಸ್ಪರ್ಧೆ ಒಡ್ಡುವುದು ನಿರೀಕ್ಷಿತ. ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆ.ಡಿ (ಎಸ್)ನಿಂದ ಮಾತ್ರವಲ್ಲದೆ ತಮ್ಮದೇ ಪಕ್ಷದಲ್ಲಿ ಇದ್ದು ಈಗ ಹೊರಗೆ ಹೋಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದಲೂ ಬಿಜೆಪಿಯು ಪೈಪೋಟಿ ಎದುರಿಸಬೇಕಿತ್ತು. ರಾಜಕೀಯ ಚದುರಂಗದ ಆಟದಲ್ಲಿ ಮುಖ್ಯಮಂತ್ರಿಗಳು ಒಳ್ಳೆಯ ಕಾಯಿಯನ್ನೇ ಆಡಿದ್ದಾರೆ. ಮುಂದೆ ಯಾವ ಪಕ್ಷದ ಸರ್ಕಾರ ಬಂದರೂ ಅವರು ಈಗ ಶೆಟ್ಟರು ಮಂಡಿಸಿದ ಬಜೆಟ್‌ನಲ್ಲಿ ಏನೇ ಬದಲಾವಣೆ ಮಾಡಿದರೂ ಅಥವಾ ಅದನ್ನು ಕೈ ಬಿಟ್ಟರೂ ಹೊಸ ತಾಲ್ಲೂಕುಗಳ ರಚನೆಯ ನಿರ್ಧಾರವನ್ನು ಕೈ ಬಿಡುವುದು ಕಷ್ಟವಾಗುತ್ತದೆ. ಅಷ್ಟರ ಮಟ್ಟಿಗೆ ಶೆಟ್ಟರು ಕರ್ನಾಟಕದ ಇತಿಹಾಸದಲ್ಲಿ ತಮ್ಮ ಹೆಸರನ್ನು ಭದ್ರ ಮಾಡಿಕೊಂಡಿದ್ದಾರೆ. ಯಡಿಯೂರಪ್ಪನವರಿಗೆ ಇದರ ಕೊಂಚ ವಾಸನೆ ಬಡಿದಿದ್ದರೂ ಅವರು ಇನ್ನಿಬ್ಬರು ಶಾಸಕರಿಂದ ರಾಜೀನಾಮೆ ಕೊಡಿಸಿ ಸರ್ಕಾರ ಉರುಳಿಸಿ ಬಿಡುತ್ತಿದ್ದರೋ ಏನೋ?!

ಹೊಸ ತಾಲ್ಲೂಕುಗಳಲ್ಲಿ ಹೆಚ್ಚು ಎದ್ದು ಕಾಣುವುದು ನಿಪ್ಪಾಣಿಯ ಹೆಸರು. ಬೆಳಗಾವಿ ಜಿಲ್ಲೆಯ ಉತ್ತರದಲ್ಲಿ ಇರುವ ಈ ಊರಿನ ಪಶ್ಚಿಮಕ್ಕೆ ಕೇವಲ ಮೂರು ನಾಲ್ಕು ಕಿಲೋಮೀಟರ್ ದೂರದಲ್ಲಿ ಮಹಾರಾಷ್ಟ್ರ ಇದೆ. ಕರ್ನಾಟಕ-ಮಹಾರಾಷ್ಟ್ರ-ಕೇರಳ ರಾಜ್ಯಗಳ ನಡುವಿನ ಗಡಿ ವಿವಾದ ಬಗೆಹರಿಸಲು ರಚನೆಯಾಗಿದ್ದ ನ್ಯಾಯಮೂರ್ತಿ ಮಹಾಜನ್ ಆಯೋಗದ ವರದಿ ಪ್ರಕಾರ ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಬೇಕು. ಚಿಕ್ಕೋಡಿ ತಾಲ್ಲೂಕಿನ ನಿಪ್ಪಾಣಿ ವಾಣಿಜ್ಯ ವಹಿವಾಟಿನ ದೃಷ್ಟಿಯಿಂದ ಅತ್ಯಂತ ಶ್ರೀಮಂತ ಊರು.

ತಂಬಾಕು ಮತ್ತು ಕಬ್ಬು ಅಲ್ಲಿನ ಪ್ರಧಾನ ಬೆಳೆ. ಈ ಬೆಳೆ ಬೆಳೆಯುವ ರೈತರು ಗಟ್ಟಿ ಕುಳಗಳು. ಆದರೆ, 75 ಕಿಲೋಮೀಟರ್ ದೂರ ಇರುವ ಜಿಲ್ಲಾ ಕೇಂದ್ರ ಬೆಳಗಾವಿಗಿಂತ ವ್ಯಾಪಾರ ವಹಿವಾಟಿಗೆ, ಸಂಬಂಧಗಳಿಗೆ 40 ಕಿಲೋಮೀಟರ್ ದೂರ ಇರುವ ಮಹಾರಾಷ್ಟ್ರದ ಕೊಲ್ಲಾಪುರವೇ ನಿಪ್ಪಾಣಿಗರಿಗೆ ಹತ್ತಿರ. ಕೇವಲ ಐದಾರು ವರ್ಷಗಳ ಹಿಂದಿನ ವರೆಗೂ ಈ ಪಟ್ಟಣದಲ್ಲಿ ಅಲ್ಲಿನ ಪುರಸಭೆಯ ಮೇಲೆ ಮಾತ್ರ ಕನ್ನಡದ ಫಲಕವಿತ್ತು. ಕನ್ನಡ ಭಾಷಿಕರೇ ಆದ ಲಿಂಗಾಯತರು ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ ಅವರ ಅಂಗಡಿ ಮುಂಗಟ್ಟುಗಳ ಮೇಲೂ ಮರಾಠಿ ಫಲಕಗಳೇ ಇರುತ್ತಿದ್ದುವು. ಒಟ್ಟು ಊರು ಮರಾಠಿಮಯವಾಗಿತ್ತು. ಮಹಾರಾಷ್ಟ್ರ ಸರ್ಕಾರ ನಿಪ್ಪಾಣಿಗೆ ತೀರಾ ಹತ್ತಿರದ ರಾಧಾನಗರಿಯಲ್ಲಿ ತೆರೆದ ಶಹಾ ಕಾಲೇಜಿಗೇ ನಿಪ್ಪಾಣಿಯ ಮಕ್ಕಳು ಹೋಗುತ್ತಿದ್ದರು. ಕೆ.ಎಲ್.ಇ ಸಂಸ್ಥೆಯವರು ಅಲ್ಲಿ ಕಾಲೇಜು ಸ್ಥಾಪಿಸಿದ ನಂತರ ಆ ವಲಸೆ ಕೊಂಚ ಕಡಿಮೆಯಾಯಿತು. ನಿಪ್ಪಾಣಿಯ ವಿದ್ಯಾರ್ಥಿಗಳಿಗೆ ದೂರದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕಿಂತ ಕೊಲ್ಲಾಪುರದ ಬಳಿಯ ಶಿವಾಜಿ ವಿಶ್ವವಿದ್ಯಾಲಯವೇ ಎಲ್ಲ ರೀತಿಯಿಂದ ಹತ್ತಿರದ್ದಾಗಿತ್ತು.

ಈ ಕಾರಣದಿಂದಾಗಿಯೇ ನಿಪ್ಪಾಣಿ ವಿಧಾನಸಭಾ ಕ್ಷೇತ್ರದಿಂದ 1972ರ ಒಂದು ಚುನಾವಣೆ ಬಿಟ್ಟರೆ 1985ರ ವರೆಗೆ ಮಹಾರಾಷ್ಟ್ರ ಏಕೀಕರಣ ಸಮಿತಿ ಅಭ್ಯರ್ಥಿಗಳೇ ಗೆದ್ದು ಬರುತ್ತಿದ್ದರು. 85ರ ನಂತರ ಅಲ್ಲಿ ಮತ್ತೆ ಸಮಿತಿಗೆ ಖಾತೆ ತೆರೆಯಲು ಆಗಿಲ್ಲ. ಆದರೆ, ಮರಾಠಿ ಅಸ್ಮಿತೆ ಕಡಿಮೆ ಮಾಡಲು ಯಾವ ಸರ್ಕಾರಗಳಿಗೂ ಆಗಿರಲಿಲ್ಲ. ರಾಷ್ಟ್ರೀಯ ಪಕ್ಷಗಳಿಂದ ವಿಧಾನಸಭೆಗೆ ಆಯ್ಕೆಯಾದವರೂ ಮರಾಠಿ ಭಾಷಿಕರೇ ಆಗಿದ್ದರು. ಹೀಗಾಗಿ ಅಲ್ಲಿ ಕನ್ನಡಕ್ಕೆ ಪ್ರಧಾನಪಟ್ಟ ಸಿಕ್ಕಿರಲೇ ಇಲ್ಲ. ಪಾಟೀಲ ಪುಟ್ಟಪ್ಪನವರು ನಿಪ್ಪಾಣಿಯನ್ನು ಜಿಲ್ಲಾ ಕೇಂದ್ರ ಮಾಡಬೇಕು ಎಂದು ಮೊದಲಿನಿಂದಲೂ ಹೇಳುತ್ತಿರುವುದರ ಹಿಂದೆ ಕೇರಳ ರಾಜ್ಯವು 1984ರಲ್ಲಿ ಕಾಸರಗೋಡನ್ನು ಜಿಲ್ಲಾ ಕೇಂದ್ರ ಮಾಡಿ ಅಲ್ಲಿನ ಕನ್ನಡ ಅಸ್ಮಿತೆಯನ್ನು ಹೆಚ್ಚೂ ಕಡಿಮೆ ಅಳಿಸಿ ಹಾಕಿದ ನಿದರ್ಶನ ಇತ್ತು. ಹಾಗೆ ನೋಡಿದರೆ ನಿಪ್ಪಾಣಿಯ ಬಗ್ಗೆ ಕಾಳಜಿಯಿಂದ ಮಾತನಾಡಿದವರು ಪುಟ್ಟಪ್ಪ ಮಾತ್ರ. ಅವರಿಗೆ ನಿಪ್ಪಾಣಿಯ ಮಹತ್ವ ಗೊತ್ತಿತ್ತು. ಆದರೆ, ಅವರು ಹೇಳಿದ ಹಾಗೆ ನಿಪ್ಪಾಣಿಯನ್ನು ಈಗ ಜಿಲ್ಲಾ ಕೇಂದ್ರ ಮಾಡಿದ್ದರೆ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿಗೆ ಅನುಕೂಲ ಆಗುತ್ತಿರಲಿಲ್ಲ. ಜಿಲ್ಲಾ ಕೇಂದ್ರ ಸ್ಥಾನಕ್ಕೆ ಹೋರಾಟ ಮಾಡುತ್ತಿರುವ ಗೋಕಾಕ ಭಾಗದ ಜನರಿಗೆ ಅದರಿಂದ ತೀವ್ರ ಅಸಂತೋಷವೇ ಆಗುತ್ತಿತ್ತು. ಈಗ ಮುಖ್ಯಮಂತ್ರಿಗಳು ಗೋಕಾಕ ತಾಲ್ಲೂಕಿನ ಮೂಡಲಗಿಯನ್ನೂ ಹೊಸ ತಾಲ್ಲೂಕು ಎಂದು ಘೋಷಣೆ ಮಾಡಿದ್ದಾರೆ. ಕನ್ನಡ ಹಿತದ ದೃಷ್ಟಿಯ ಜತೆಗೆ ಮತಪೆಟ್ಟಿಗೆಯ ಮೇಲೂ ಅವರಿಗೆ ಕಣ್ಣು!

ಕರ್ನಾಟಕದ ಜತೆಗಿನ ಗಡಿ ವಿವಾದ ಕುರಿತು ಈಗಲೂ ಸುಪ್ರೀಂ ಕೋರ್ಟಿನಲ್ಲಿ ದಾವೆಯನ್ನು ಜೀವಂತ ಇಟ್ಟಿರುವ ಮಹಾರಾಷ್ಟ್ರ ಸರ್ಕಾರಕ್ಕೆ ಬೆಳಗಾವಿಯ ಸುವರ್ಣ ವಿಧಾನಸೌಧ ಒಂದು ದೊಡ್ಡ ಉತ್ತರವಾದರೆ ನಿಪ್ಪಾಣಿಯನ್ನು ತಾಲ್ಲೂಕು ಮಾಡಿದ್ದು ಎರಡನೆಯ ಉತ್ತರ. ಇನ್ನು ಮುಂದೆ ತಾಲ್ಲೂಕು ಕೇಂದ್ರವಾಗುವ ನಿಪ್ಪಾಣಿಯಲ್ಲಿ ನಿಧಾನವಾಗಿ ಕನ್ನಡದ ಅಸ್ಮಿತೆ ಇನ್ನಷ್ಟು ಹೆಚ್ಚುತ್ತದೆ, ಅಲ್ಲಿ ಕನ್ನಡ ಮಾತನಾಡುವ ಜನರ ಸಂಖ್ಯೆ ಹೆಚ್ಚುತ್ತ ಹೋಗುತ್ತದೆ; ಶಾಲೆ ಕಾಲೇಜುಗಳ ಸಂಖ್ಯೆ ಬೆಳೆಯುತ್ತದೆ.

ಜನರಿಗೆ ಅವರ ಬದುಕು ಮುಖ್ಯ. ಅವರಿಗೆ ಅನುಕೂಲಗಳು ಹೆಚ್ಚುತ್ತ ಹೋದಂತೆ ಭಾವನಾತ್ಮಕ ವಿಚಾರಗಳು ಹಿಂದೆ ಸರಿಯುತ್ತ ಹೋಗುತ್ತವೆ. ಹೇಗೂ ಗಡಿ ವಿವಾದ ಎಂದೆಂದೂ ಬಗೆಹರಿಯದ ಸಂಗತಿ ಎಂದು ನಿಪ್ಪಾಣಿ ಜನರಿಗೆ ಗೊತ್ತಿಲ್ಲವೆಂದಲ್ಲ. ಅವರಿಗೆ ಕರ್ನಾಟಕ ಸರ್ಕಾರದಿಂದಲೇ ಅನುಕೂಲ ಆಗುವುದಾದರೆ ಅವರು ಮಹಾರಾಷ್ಟ್ರಕ್ಕೆ ಹೋಗಬೇಕು ಎಂದು ಏಕೆ ಬಯಸುತ್ತಾರೆ?

ಕಾಸರಗೋಡಿನಲ್ಲಿ ಕನ್ನಡಪರ ಧ್ವನಿ ಹೀಗೆಯೇ ಕ್ಷೀಣವಾಗಿ ಹೋಯಿತು. ಒಂದು ಕಾಲದಲ್ಲಿ ಕೇರಳದ ವಿಧಾನಸಭೆಗೆ ಕಾಸರಗೋಡಿನ ಕನ್ನಡಿಗರು ಅವಿರೋಧವಾಗಿ ಆಯ್ಕೆಯಾಗುತ್ತಿದ್ದರು. ಅಲ್ಲಿ ಕನ್ನಡದ ಕೂಗಿಗೆ ವಿರೋಧವೇ ಇರಲಿಲ್ಲ. 1984ರಲ್ಲಿ ಕೇರಳ ಸರ್ಕಾರ ಕಾಸರಗೋಡನ್ನು ಜಿಲ್ಲಾ ಕೇಂದ್ರ ಮಾಡಿತು. ಈಗ ಅಲ್ಲಿ ಕಾಸರಗೋಡು ಕ್ಷೇತ್ರದಿಂದ ಸ್ಪರ್ಧಿಸಲು ಕನ್ನಡ ಅಭ್ಯರ್ಥಿಗಳು ಸಿಗುವುದೇ ಇಲ್ಲ! ಮತ್ತೆ ಬದುಕಿನ ಪ್ರಶ್ನೆ. ಅನಿವಾರ್ಯತೆ ಎಂಬುದು ಯಾವಾಗಲೂ ದೊಡ್ಡ ಪಾಠವನ್ನು ಕಲಿಸುತ್ತದೆ. ರೂಢಿ ಮಾಡಿಬಿಡುತ್ತದೆ. ಬೆಳಗಾವಿ ಜಿಲ್ಲೆಯಲ್ಲಿಯೂ ಮಹಾರಾಷ್ಟ್ರ ಏಕೀಕರಣ ಸಮಿತಿ ಪ್ರಬಲವಾಗಿದ್ದ ಕೆಲವು ಕ್ಷೇತ್ರಗಳು ಇದ್ದುವು.

ಕೇರಳ ರಾಜ್ಯವು ಕಾಸರಗೋಡಿನಲ್ಲಿ ತೆಗೆದುಕೊಂಡ ಕ್ರಮಗಳಿಗಿಂತ ತೀರಾ ತಡವಾಗಿ ಕರ್ನಾಟಕ ಸರ್ಕಾರ ತೆಗೆದುಕೊಂಡ ಕ್ರಮಗಳಿಂದ ಇಲ್ಲಿಯೂ ಈಗ ಸಮಿತಿಯ ಸದ್ದು ಅಡಗಿದೆ. ವಿಧಾನಸಭೆಯಲ್ಲಿ ಅದಕ್ಕೆ ಪ್ರಾತಿನಿಧ್ಯ ತಪ್ಪಿ ದಶಕವೇ ಆಗಿದೆ. ಮಹಾಜನ್ ಆಯೋಗದ ವರದಿ ಪ್ರಕಾರ ಕರ್ನಾಟಕಕ್ಕೆ ಸೇರಬೇಕಿದ್ದ ಕಾಸರಗೋಡಿನಲ್ಲಿ ಕನ್ನಡದ ಧ್ವನಿ ಅಡಗಿಸಲು ಕೇರಳ ಸರ್ಕಾರ ತೆಗೆದುಕೊಂಡ ಕ್ರಮದ ಮಾದರಿ ಅದೇ ಆಯೋಗದ ವರದಿ ಪ್ರಕಾರ ಮಹಾರಾಷ್ಟ್ರ ಸೇರಬೇಕಿದ್ದ ನಿಪ್ಪಾಣಿಯಲ್ಲಿಯೂ ಈಗ ಆಗಿದೆ. ತಡವಾದರೂ, ಪುಟ್ಟದಾದರೂ ಇದು ಒಂದು ಶ್ಲಾಘನೀಯ ಹೆಜ್ಜೆ.

ಕದಂಬರು ಕನ್ನಡ ನಾಡನ್ನು ಆಳಿದ ಮೊದಲ ದೊರೆಗಳು. ಅವರ ರಾಜಧಾನಿ ಬನವಾಸಿ. ಆರಂಕುಸವಿಟ್ಟರೂ ನೆನೆವುದೆನ್ನ ಮನ ಎಂದ ಆದಿಕವಿ ಪಂಪನ ನಾಡು ಅದು. ಪಾಟೀಲ ಪುಟ್ಟಪ್ಪನವರು ನಿಪ್ಪಾಣಿಯನ್ನು ಜಿಲ್ಲಾ ಕೇಂದ್ರ ಮಾಡಬೇಕು ಎಂದ ಹಾಗೆಯೇ ಬನವಾಸಿಯನ್ನು ತಾಲ್ಲೂಕು ಕೇಂದ್ರ ಮಾಡಬೇಕು ಎಂದೂ ಹೇಳಿದ್ದರು. ನಾಡನ್ನು ಆಳುವ ನಾಯಕರಿಗೆ ಇಂಥ ವಿಚಾರಗಳು ಗೊತ್ತಿರಬೇಕು. ಇಲ್ಲದಿದ್ದರೆ ಯಾರಾದರೂ ತಿಳಿದವರು ಹೇಳಿದ್ದನ್ನಾದರೂ ಅವರು ಗಮನದಲ್ಲಿ ಇಟ್ಟುಕೊಂಡಿರಬೇಕು.

ಮುಖ್ಯಮಂತ್ರಿಗಳು ಬನವಾಸಿಯನ್ನು ತಾಲ್ಲೂಕು ಮಾಡಿದ್ದರೆ ಅವರಿಗೆ ಮುಂಬರುವ ಚುನಾವಣೆಯ ಆಚೆಯೂ ಒಂದು ನೋಟ ಇದೆ ಎಂದು ಅನಿಸುತ್ತಿತ್ತು. ಆ ಶ್ರೇಯದಿಂದ ಈಗ ಅವರು ವಂಚಿತರಾಗಿದ್ದಾರೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.