ಕಲ್ಯಾಣ ಮಂಟಪವೆಂದರೆ ವಿಡಿಯೊ ಕ್ಯಾಮೆರಾ - ಅದರ ಎದುರು ರೇಷ್ಮೆ ಸೀರೆ, ಗರಿಗರಿ ಜುಬ್ಬಾ, ನಳನಳಿಸುವ ಹೂಗುಚ್ಛ, ಮಿರುಗುವ ಉಡುಗೊರೆ ಪೊಟ್ಟಣಗಳ ಸರದಿ ಸಾಲು ಕಣ್ಣಿಗೆ ಕಟ್ಟುತ್ತದೆ.

ಕೆಲ ಸಮಯದ ಹಿಂದೆ ಬೆಂಗಳೂರಿನ ಗಾಂಧಿ ಕೃಷಿ ವಿವಿಯ ಸಂಶೋಧನಾ ವಿದ್ಯಾರ್ಥಿಗಳ ತಂಡವೊಂದು ಕಲ್ಯಾಣ ಮಂಟಪಗಳ ಸಮೀಕ್ಷೆಗೆ ಬಂದಿತ್ತು. ಕೈಯಲ್ಲಿ ಚಿಕ್ಕ ತಕ್ಕಡಿ, ಪೆನ್ನು, ಟಿಪ್ಪಣಿಪುಸ್ತಕ ಹಿಡಿದು ಇಲ್ಲಿನ ಮದುವೆಯ ಸಂಭ್ರಮದ ನಡುವೆಯೇ ಈ ಯುವಕ ಯುವತಿಯರು ಊಟದ ಭವನಕ್ಕೆ ಹೋಗಿ ಎಂಜಲು ತಟ್ಟೆಗಳ ಸಮೀಕ್ಷೆ ನಡೆಸುತ್ತಿದ್ದರು. ಅತಿಥಿಗಳು ಊಟದ ತಟ್ಟೆಯಲ್ಲಿ ಎಷ್ಟೆಷ್ಟು ಆಹಾರ ಪದಾರ್ಥಗಳನ್ನು ಬದಿಗೊತ್ತಿ ಮೇಲೇಳುತ್ತಾರೆ ಎಂಬುದರ ಸಮೀಕ್ಷೆ ಅದಾಗಿತ್ತು.

ಒಟ್ಟು 72 ಕಲ್ಯಾಣ ಮಂದಿರಗಳ ಸಮೀಕ್ಷೆ ಮಾಡಿ ಅವರು ಕಲೆಹಾಕಿದ ವಿವರಗಳು ರಾಷ್ಟ್ರೀಯ ದಾಖಲೆಗಳಂತಾಗಿವೆ. ಬೆಂಗಳೂರು ನಗರದಲ್ಲಿ ಪ್ರತಿವರ್ಷ ಮದುವೆ ಊಟದ ಸಂದರ್ಭದಲ್ಲಿ 943 ಟನ್ ಆಹಾರ ಪದಾರ್ಥಗಳು ತಿಪ್ಪೆಗೆ ಹೋಗುತ್ತಿವೆ. ಮದುವೆ ಊಟ ಎಂದಮೇಲೆ ಉತ್ಕೃಷ್ಟ ಗುಣಮಟ್ಟದ ಊಟವೇ ಆಗಿರಬೇಕು. ಅಂದಾಜು ಲೆಕ್ಕಾಚಾರದ ಪ್ರಕಾರ ಪ್ರತಿವರ್ಷ ಸುಮಾರು 339 ಕೋಟಿ ರೂಪಾಯಿಗಳ ಮೌಲ್ಯದ ಆಹಾರ ಗೊಬ್ಬರಗುಂಡಿಗೆ. ಅಷ್ಟು ಹಣದಲ್ಲಿ 260 ಲಕ್ಷ ಜನರಿಗೆ ಮಾಮೂಲು ಊಟ ಹಾಕಬಹುದಿತ್ತು.

ಮದುವೆ ಊಟ ಅಥವಾ ಹೋಟೆಲ್ ಊಟಗಳಲ್ಲಿ ಉಳಿಯುವ ಎಂಜಲಿನ ಕೆಲವು ಪಾಲನ್ನು ಹಂದಿ ಸಾಕಣೆದಾರರು ಒಯ್ಯುತ್ತಾರೆ, ಹಂದಿ ಮಾಂಸ ಮತ್ತೆ ಆಹಾರ ರೂಪದಲ್ಲಿ ನಗರಕ್ಕೇ ಬಂದು ಮತ್ತೆ ತ್ಯಾಜ್ಯವಾಗುತ್ತದೆ. ತಿಂದರೂ ಅಷ್ಟೆ, ಬಿಸಾಕಿದರೂ ಅಷ್ಟೆ; ಅದು ಅಂತಿಮವಾಗಿ ಯಾವುದೋ ತಿಪ್ಪೆಗುಂಡಿಗೆ ಸೇರಿ ಮೆಲ್ಲಗೆ ಮೀಥೇನ್ ಅನಿಲದ ರೂಪದಲ್ಲಿ ವಾತಾವರಣ ಸೇರುತ್ತದೆ. ಮೀಥೇನ್ ಅನಿಲ ಭೂಮಿಯ ತಾಪಮಾನವನ್ನು ಏರಿಸುವ ನಂಬರ್ ವನ್ ಖಳನಾಯಕ ಎನಿಸಿದೆ.

ಇಂಗಾಲದ ಡೈಆಕ್ಸೈಡ್‌ಗೆ ಹೋಲಿಸಿದರೆ ಅದು 20 ಪಟ್ಟು ಹೆಚ್ಚು ಪ್ರಮಾಣದಲ್ಲಿ ಶಾಖಮಾರಿ.
ಮೀಥೇನ್ ವಿಷಯ ಹೇಗೂ ಇರಲಿ. ಅಷ್ಟೊಂದು ಆಹಾರವನ್ನು, ಅಂದರೆ - ಕಲ್ಯಾಣ ಮಂದಿರಗಳಲ್ಲಿ ತಿಪ್ಪೆಗೆ ಸೇರುವ 943 ಟನ್ ಆಹಾರವನ್ನು ಉತ್ಪಾದಿಸಲು ಬಳಸಿದ ಎಷ್ಟೊಂದು ನೀರು, ಪಂಪ್‌ಸೆಟ್ ಶಕ್ತಿ, ರಸಗೊಬ್ಬರ, ಮಾನವ ಶ್ರಮ ವ್ಯರ್ಥವಾಯಿತಲ್ಲ? ಹಾಗೆ ಬೆಳೆಸಿದ ಆಹಾರ ಪದಾರ್ಥಗಳನ್ನು ನಗರಕ್ಕೆ ಸಾಗಿಸಲು, ಬೇಯಿಸಲು ಬಳಸಿದ ಸಂಪನ್ಮೂಲಗಳೆಲ್ಲ ನಿರರ್ಥಕವಾದುವಲ್ಲ? ಅಥವಾ ಅಪಾರ್ಥಕ (ಅಂಥದ್ದೊಂದು ಪದ ಇದ್ದರೆ) ಆಯಿತೆನ್ನಿ. ಏಕೆಂದರೆ ಆಹಾರ ಉತ್ಪಾದನೆಗೆಂದು ಮೇಲೆತ್ತಿದ ನೀರು, ಖನಿಜ, ಡೀಸೆಲ್ ಮತ್ತಿತರ ಒಳಸುರಿಗಳೆಲ್ಲವೂ ವಾಯುಮಂಡಲವನ್ನು ಬಿಸಿ ಮಾಡುತ್ತವೆ. ಅವೆಲ್ಲವುಗಳಿಂದ ಪಡೆದ ಆಹಾರವೂ ಅಂತಿಮವಾಗಿ ವಾಯುಮಂಡಲವನ್ನು ಇನ್ನಷ್ಟು ಬಿಸಿ ಮಾಡುವಲ್ಲಿ ವ್ಯಯವಾಗುತ್ತಿದೆ. ಅನುಕೂಲಸ್ಥರ ಭೂರಿಭೋಜನವೆಲ್ಲ ಹೀಗೆ ಭೂಮಿಗೇ ಮುಳುವಾಗಬೇಕೆ?

ಇಂದು ಈ ವಿಷಯವನ್ನು ಪ್ರಸ್ತಾಪಿಸಲು ಕಾರಣ ಏನೆಂದರೆ ಫೆಬ್ರುವರಿ 28ಅನ್ನು `ರಾಷ್ಟ್ರೀಯ ವಿಜ್ಞಾನ ದಿನ'ವಾಗಿ ಆಚರಿಸಲಾಗುತ್ತಿದೆ. ಈ ವರ್ಷದ `ವಿಜ್ಞಾನ ದಿನ'ದ ಒತ್ತುಗುರಿಯಾಗಿ `ಆಹಾರ ಭದ್ರತೆ ಮತ್ತು ಕುಲಾಂತರಿ ತಂತ್ರಜ್ಞಾನ' ಎಂಬ ವಿಷಯವನ್ನೇ ಎಲ್ಲೆಡೆ ಚರ್ಚಿಸಬೇಕೆಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಿರ್ಧರಿಸಿದೆ. ಆದ್ದರಿಂದ ಇವೊತ್ತು ಭಾರತದ ಅಸಂಖ್ಯಾತ ವಿದ್ಯಾಸಂಸ್ಥೆಗಳಲ್ಲಿ ಭಾಷಣ, ಚರ್ಚಾಗೋಷ್ಠಿ ಮತ್ತು ವಿಜ್ಞಾನ ವಸ್ತು ಪ್ರದರ್ಶನಗಳಲ್ಲಿ ಈ ಕುಲಾಂತರಿ ತಂತ್ರಜ್ಞಾನದ ಗುಣಗಾನ ಮತ್ತು ವಿಮರ್ಶೆಗೇ ಒತ್ತು ಕೊಡಲಾಗುತ್ತಿದೆ. `

ಕುಲಾಂತರಿಗಳು ಬಂದರೆ ಯಾರೂ ಹಸಿವೆಯಿಂದ ನರಳಬೇಕಾಗಿಲ್ಲ' ಎಂಬ ಕನಸನ್ನು ಯುವ ಮನಸ್ಸುಗಳಲ್ಲಿ ಬಿತ್ತಲು ಸಿದ್ಧತೆ ನಡೆದಿದೆ.

ಕುಲಾಂತರಿ ತಂತ್ರಜ್ಞಾನವನ್ನು ಹೇಗಾದರೂ ಎಲ್ಲರೂ ಒಪ್ಪಿಕೊಳ್ಳುವಂತೆ ಮಾಡಲು ವಾಣಿಜ್ಯ ಶಕ್ತಿಗಳು ನಾನಾ ಬಗೆಯ ಕಸರತ್ತು ಮಾಡುತ್ತಿವೆ. ಹಸಿವೆಯಿಂದ ಬಸವಳಿಯುತ್ತಿರುವ ಜಗತ್ತಿಗೆ ಅದು ಪವಾಡ ಸದೃಶ ಪರಿಹಾರ ನೀಡಲಿದೆ ಎಂದೇ ಬಿಂಬಿಸಲಾಗುತ್ತಿದೆ. ಈ ತಂತ್ರಜ್ಞಾನವೇನೊ ಬೆರಳು ಕಚ್ಚುವಂಥದ್ದು, ಅದರಲ್ಲೇನೂ ಸಂಶಯವಿಲ್ಲ.

ಸಸ್ಯದ ವಂಶವಾಹಿಯಲ್ಲೇ ವಿಷವಸ್ತು ತೂರಿಕೊಳ್ಳುವಂತೆ ಮಾಡಲಾಗಿದೆ. ಸಸ್ಯ ತಾನೇ ಸ್ವತಃ ತನ್ನ ವೈರಿಯನ್ನು ಸದೆಬಡಿಯುವಂತೆ ಅದರ ಬೇರಿನಿಂದ ಹಿಡಿದು ಬೀಜದಲ್ಲೂ-ಅಂಥ ಬೀಜದಿಂದ ಜನಿಸುವ ಹೊಸ ಪೀಳಿಗೆಯ ಸಸ್ಯಗಳಲ್ಲೂ ಕೀಟನಿರೋಧಕ ಅಂಶಗಳು ಸ್ರವಿಸುವಂತೆ ಮಾಡಬಹುದು. ಹಿಂದೆ ಮೊದಲ ಬಾರಿಗೆ ಡಿಡಿಟಿ, ಬಿಎಚ್‌ಸಿ, ಎಲ್ಡ್ರಿನ್, ಫಾಲಿಡಾಲ್‌ಗಳನ್ನು ಬಳಕೆಗೆ ತಂದಾಗಲೂ ಆಹಾರ ಭದ್ರತೆಯ ಬಗ್ಗೆ ಹೀಗೇ ಬಣ್ಣಿಸಲಾಗಿತ್ತು. ಅವೆಲ್ಲ ಸುಳ್ಳಾಗಿವೆ. ಕೀಟಗಳು ವಿಷಗಳನ್ನು ನುಂಗಿಯೂ ಬದುಕಲು ಕಲಿತಿವೆ.

ಬದಲಿಗೆ ಅಂಥ ಘೋರ ವಿಷಗಳ ಸಂಪರ್ಕಕ್ಕೆ ಬಂದ ಕೃಷಿಕರು, ಬಳಕೆದಾರರು ಹಾಗೂ (ಅವೆರಡರ ಗುಂಪಿಗೆ ಸೇರದ) ಪಡ್ರೆ ಹಳ್ಳಿಯ ನತದೃಷ್ಟ ಕುಟುಂಬಗಳು ಕಷ್ಟನಷ್ಟ ಅನುಭವಿಸುವಂತಾಗಿದೆ. ಕುಲಾಂತರಿ ಸಸ್ಯಗಳೂ ಅಂಥ ಆಪತ್ತನ್ನು ಸೃಷ್ಟಿ ಮಾಡಿದರೆ? ಆದ್ದರಿಂದಲೇ `ಕುಲಾಂತರಿ ತಂತ್ರಜ್ಞಾನದ ಸುರಕ್ಷತೆಯ ಬಗ್ಗೆ ಪೂರ್ತಿ ಪರೀಕ್ಷೆ ನಡೆಯಲಿ, ಆ ನಂತರ ಬೇಕಿದ್ದರೆ ಬಳಕೆಗೆ ತರೋಣ' ಎಂದು ವಿವೇಕವಂತರೆಲ್ಲ ಹೇಳುತ್ತಿದ್ದಾರೆ.

ಮೂರು ವರ್ಷಗಳ ಹಿಂದೆ ದೇಶದ ಏಳು ನಗರಗಳಲ್ಲಿ ಸಮಾಲೋಚನ ಸಭೆ ನಡೆಸಿದ ಅಂದಿನ ಪರಿಸರ ಸಚಿವ ಜೈರಾಮ್ ರಮೇಶ್ `ಆಹಾರದ ಸಸ್ಯಗಳಲ್ಲಿ ಕುಲಾಂತರಿ ತಂತ್ರಜ್ಞಾನದ ಬಳಕೆಗೆ ಸದ್ಯಕ್ಕೆ ಅನುಮತಿಯನ್ನು ನೀಡಲಾಗದು'ಎಂದು ಆದೇಶ ಹೊರಡಿಸಿದ್ದರು. ನಂತರ ಅವರನ್ನು ಪರಿಸರ ಖಾತೆಯಿಂದ ಎತ್ತಂಗಡಿ ಮಾಡಿ ಗ್ರಾಮೀಣಾಭಿವೃದ್ಧಿ ಸಚಿವರನ್ನಾಗಿ ಕೂರಿಸಲಾಯಿತು. ಆ ಮಾತು ಬೇರೆ.

ಕುಲಾಂತರಿ ಫಸಲನ್ನು ರೈತರ ಹೊಲದಲ್ಲಿ ಬೆಳೆಯಲು ಈಗಲೂ ಅನುಮತಿ ಇಲ್ಲ. ಆದರೆ ಪ್ರಯೋಗಶಾಲೆಯಲ್ಲಿ, ಪ್ರಾಯೋಗಿಕ ಕೃಷಿ ಕ್ಷೇತ್ರಗಳಲ್ಲಿ ಬೆಳೆಸಲಾಗುತ್ತಿದೆ. ಕಂಪೆನಿಗಳು ಅವುಗಳನ್ನು ಹೊಲಕ್ಕೆ ಇಳಿಸಲು ತುದಿಗಾಲಲ್ಲಿ ನಿಂತಿವೆ. ಕೃಷಿ ಸಚಿವ ಶರದ್ ಪವಾರ್ ಮೂಲಕ ರಾಜಕೀಯ ಒತ್ತಡ ಹೇರುತ್ತಿವೆ. ಈ ನಡುವೆ ಸಂಸತ್ ಸದಸ್ಯ ಬಾಸುದೇಬ್ ಆಚಾರಿಯಾ ನೇತೃತ್ವದಲ್ಲಿ ಸಂಸದೀಯ ಸಮಿತಿ ಕಳೆದ ವರ್ಷ ಕುಲಾಂತರಿ ಬೆಳೆಗಳ ಬಗ್ಗೆ ತನ್ನ ವರದಿಯನ್ನು ಸಲ್ಲಿಸಿತು.

ವಿವಿಧ ರಾಜಕೀಯ ಪಕ್ಷಗಳ, ವಿಜ್ಞಾನಿಗಳ ಹಾಗೂ ಆಹಾರತಜ್ಞರನ್ನೊಳಗೊಂಡ 31 ಸದಸ್ಯರ ಈ ಸಮಿತಿ ದೇಶದ ತುಂಬೆಲ್ಲ ಓಡಾಡಿ, ಕೃಷಿಕರನ್ನೂ ಕೃಷಿ ವಿಧವೆಯರನ್ನೂ ಮಾತನಾಡಿಸಿತು. `ಸದ್ಯಕ್ಕಂತೂ ಕುಲಾಂತರಿ ತಂತ್ರಜ್ಞಾನ ಖಡಾಖಂಡಿತ ಬೇಡ'ವೆಂದು ತನ್ನ ಶಿಫಾರಸನ್ನು ನೀಡಿತು. `ಕೇವಲ ಲಾಭಕ್ಕಾಗಿಯಷ್ಟೇ ಸೃಷ್ಟಿಯಾದ ಈ ತಂತ್ರಜ್ಞಾನದಿಂದ ರಾಷ್ಟ್ರದ ಆಹಾರ ಭದ್ರತೆಗೆ ಯಾವ ಕೊಡುಗೆಯೂ ಸಾಧ್ಯವಾಗುವಂತಿಲ್ಲ; ವಿದರ್ಭದ ರೈತರು ಏನೆಲ್ಲ ನಷ್ಟ ಅನುಭವಿಸಿಯೂ ಕುಲಾಂತರಿ (ಬಿಟಿ) ಹತ್ತಿಯನ್ನು ಬೆಳೆಯುತ್ತಿರುವುದು ಏಕೆಂದರೆ ಅವರಿಗೆ ಬೇರೆ ಯಾವ ತಳಿಯ ಹತ್ತಿ ಬೀಜವೂ ಸಿಗದಂತೆ ಮಾಡಲಾಗಿದೆ'ಎಂದು ಆಚಾರಿಯಾ ಹೇಳಿದ್ದಾರೆ.

ಇತ್ತ ಸರ್ವೋಚ್ಚ ನ್ಯಾಯಾಲಯವೂ ಕುಲಾಂತರಿ ಜಟಾಪಟಿ ಕುರಿತು ತನಗೆ ಸಲಹೆ ನೀಡುವಂತೆ ಐವರು ಸದಸ್ಯರ ತಾಂತ್ರಿಕ ಸಮಿತಿಯೊಂದನ್ನು ರಚಿಸಿತ್ತು. ಹೆಸರಾಂತ ಜೀವವಿಜ್ಞಾನಿಗಳು, ಪೋಷಕಾಂಶ ತಜ್ಞರು ಹಾಗೂ ಕೃಷಿ ವಿಜ್ಞಾನಿಗಳ ಈ ಸಮಿತಿಯೂ ಆಹಾರ ಬೆಳೆಗಳಲ್ಲಿ ಕುಲಾಂತರಿ ಪ್ರಯೋಗವನ್ನು ಹತ್ತು ವರ್ಷಗಳ ಕಾಲ ತಡೆ ಹಿಡಿಯಬೇಕೆಂದು ಶಿಫಾರಸು ಮಾಡಿತು. ಪ್ರಯೋಗ ನಡೆಸುವುದೇ ಆದರೆ ಬೇರೆ ಯಾವ ಬೆಳೆಗಳ ಸಂಪರ್ಕಕ್ಕೂ ಅವು ಬಾರದಂತೆ ಕಟ್ಟುನಿಟ್ಟಿನ ನಿಗಾ ಇಡಬೇಕೆಂದು ಹೇಳಿತು.

ಆದರೆ ಬೀಜ ಕಂಪೆನಿಗಳ ಪ್ರಭಾವಲಯ ಅದೆಷ್ಟು ಬಲವಾಗಿದೆಯೆಂದರೆ ಶರದ್ ಪವಾರರ ಆಣತಿಯಂತೆ ಈಚೆಗಷ್ಟೇ ಕೃಷಿ ಸಚಿವಾಲಯ ಸರ್ವೋಚ್ಚ ನ್ಯಾಯಾಲಯಕ್ಕೆ ಒಂದು ಅಫಿಡವಿಟ್ (ಪ್ರಮಾಣಪತ್ರ) ಸಲ್ಲಿಸಿದೆ: ಇತರ ಬೆಳೆಗಳ ನಡುವೆಯೇ ಕುಲಾಂತರಿ ಫಸಲಿನ ಪ್ರಯೋಗ ನಡೆಸುವುದು ತೀರಾ ಅಗತ್ಯವೆಂದೂ ಇಂಥ ಪ್ರಯೋಗಗಳನ್ನು ತಡೆ ಹಿಡಿದರೆ ಭಾರತದ ಕೃಷಿ ವಲಯಕ್ಕೆ ಭಾರೀ ಹಿನ್ನಡೆ ಉಂಟಾಗಿ ದೇಶದ ಆಹಾರ ಭದ್ರತೆಗೆ ಧಕ್ಕೆ ಒದಗಲಿದೆ ಎಂದೂ ಕೃಷಿ ಇಲಾಖೆ ಮನವಿ ಮಾಡಿದೆ. ಒಟ್ಟು 56 ಆಹಾರ ಫಸಲುಗಳ ಮೇಲೆ ಕುಲಾಂತರಿ ಪ್ರಯೋಗಗಳನ್ನು ನಡೆಸಲು ಅದು ಅನುಮತಿ ಕೋರಿದೆ.

ಜಟಾಪಟಿ ಅಲ್ಲಿಗೇ ಮುಗಿಯಲಿಲ್ಲ. ಕುಲಾಂತರಿ ಸದ್ಯಕ್ಕೆ ಬೇಡವೆಂದು ಜೈರಾಮ್ ರಮೇಶ್ ಆದೇಶ ಹೊರಡಿಸಿದ ದಿನವನ್ನು (ಫೆಬ್ರುವರಿ 9) `ಆಹಾರ ಸುರಕ್ಷಾ ದಿನ' ಎಂದು ದೇಶಾದ್ಯಂತ ಸಾವಯವ ಕೃಷಿ ಸಂಘಟನೆಗಳು ಘೋಷಿಸಿವೆ. ಅದೇ ದಿನ 150 ವಿಜ್ಞಾನಿಗಳು ಕುಲಾಂತರಿ ಪ್ರಯೋಗಗಳನ್ನು ಕೈಬಿಡಬೇಕೆಂದು ಈಗಿನ ಪರಿಸರ ಸಚಿವೆ ಜಯಂತಿ ನಟರಾಜನ್‌ಗೆ ಪತ್ರ ಬರೆದಿದ್ದಾರೆ. ಅದರ ಸಾರಾಂಶ ಏನೆಂದರೆ, `ಬಹುಪಾಲು ದೇಶಗಳಲ್ಲಿ ಕುಲಾಂತರಿ ಬೆಳೆಗಳನ್ನು ಬೆಳೆಸುತ್ತಿಲ್ಲ.

ಜಗತ್ತಿನ ಒಟ್ಟೂ ಕೃಷಿ ಭೂಮಿಯಲ್ಲಿ ಕುಲಾಂತರಿ ಬೆಳೆಗಳ ಪಾಲು ಕೇವಲ ಶೇ. 3.2ರಷ್ಟು ಮಾತ್ರ ಇದೆ. ಅದರಲ್ಲೂ ಸೋಯಾ, ಮೆಕ್ಕೆಜೋಳ, ಹತ್ತಿ ಮತ್ತು ಕನೋಲಾ- ಈ ನಾಲ್ಕು ಬೆಳೆಗಳೇ ಶೇ.99 ಪಾಲು ಪಡೆದಿವೆ. ಹಾಗಾಗಿ ಯಾವ ದೇಶವೂ ಆಹಾರ ಭದ್ರತೆಗಾಗಿ ಕುಲಾಂತರಿಗಳನ್ನು ಅವಲಂಬಿಸಿಲ್ಲ'.

ಆಹಾರ ಭದ್ರತೆಯ ಪ್ರಶ್ನೆಗೆ ಈಗ ಬರೋಣ: ಅದರ ಮೂರು ಸೂತ್ರಗಳೇನೆಂದರೆ - ಗೋದಾಮುಗಳು ಖಾಲಿಯಾಗಕೂಡದು; ಯಾವ ಪ್ರಜೆಯ ಹೊಟ್ಟೆಯೂ ಹಸಿದಿರಕೂಡದು; ಮತ್ತು ಆರೋಗ್ಯಕ್ಕೆ ಬೇಕಿದ್ದ ಸಮತೋಲ ಪೋಷಕಾಂಶಗಳ ಬಗ್ಗೆ ಪ್ರಜೆಗೆ ಅರಿವಿರಬೇಕು. ನಮ್ಮಲ್ಲಿ ಗೋದಾಮುಗಳಲ್ಲಿ ಆಹಾರಧಾನ್ಯ ಖಾಲಿಯಾಗುವ ಸಂದರ್ಭವೇ ಬಂದಿಲ್ಲ. ಬದಲಿಗೆ ಮುಗ್ಗಿ ಕೊಳೆತು ಹೆಗ್ಗಣಗಳ ಪಾಲಾಗುತ್ತಿವೆ.

ಸರ್ವೋಚ್ಚ ನ್ಯಾಯಾಲಯದಿಂದ ಸರ್ಕಾರ ಛೀಮಾರಿ ಬೇರೆ ಹಾಕಿಸಿಕೊಂಡಿದೆ. ಈಚೆಗಷ್ಟೆ ಕೃಷಿ ಮತ್ತು ಆಹಾರ ಸಂಸ್ಕರಣೆಯ ರಾಜ್ಯ ಸಚಿವ ತಾರಿಖ್ ಅನ್ವರ್ ಹೇಳಿದ ಪ್ರಕಾರ, ಪ್ರತಿ ವರ್ಷದ ನಮ್ಮ ಕೃಷಿ ಉತ್ಪಾದನೆಯ ಶೇಕಡಾ 40 ಭಾಗ, ಅಂದರೆ ಸುಮಾರು 50 ಸಾವಿರ ಕೋಟಿ ರೂಪಾಯಿ ಮೌಲ್ಯದ ಆಹಾರ ಹಾಳಾಗುತ್ತಿದೆ.

ಇತ್ತ ಅನುಕೂಲಸ್ಥರು ವ್ಯರ್ಥ ಚೆಲ್ಲುವ ಮೃಷ್ಟಾನ್ನದ ಕತೆ ಬೇರೆ. ಇಷ್ಟಿದ್ದೂ ದೇಶದ 32 ಕೋಟಿ ಜನರಿಗೆ ಹೊಟ್ಟೆ ತುಂಬ ಉಣ್ಣಲು ಸಿಗುತ್ತಿಲ್ಲ. `ಇದು ದೇಶಕ್ಕೇ ಅವಮಾನಕಾರಿ' ಎಂದು ಪ್ರಧಾನಿಯವರೂ ಹೇಳುತ್ತಾರೆ. ಹೀಗಾಗಿ ಇಳುವರಿ ಹೆಚ್ಚಿಸುವ ಕುಲಾಂತರಿ ತಂತ್ರಜ್ಞಾನಕ್ಕಿಂತ ಬೆಳೆದು ತಂದ ಆಹಾರ ಧಾನ್ಯಗಳನ್ನು ಹಾಳಾಗದಂತೆ ಸಂರಕ್ಷಿಸುವ ತಂತ್ರಜ್ಞಾನ ನಮಗೆ ಬೇಕಾಗಿದೆ; ಹಸಿದವರ ಅಡುಗೆಮನೆಗೆ ಅವನ್ನು ತಲುಪಿಸುವ ಬದ್ಧತೆ ಬೇಕಾಗಿದೆ.

ಆದರೆ ಕುಲಾಂತರಿ ಭಂಜಕರು ಸುಮ್ಮನಿರಬೇಕಲ್ಲ? ಬೇರೆಯದೇ ಬಗೆಯ ಗಜ್ಜರಿಯ ಆಮಿಷವನ್ನು ನಮ್ಮ ಮುಂದೆ ತೂಗಾಡಿಸುತ್ತಾರೆ. ಗಜ್ಜರಿಯಲ್ಲಿರುವಂಥ `ಎ' ಅನ್ನಾಂಗವನ್ನು ಭತ್ತದಲ್ಲಿ ತೂರಿಸಿ, ಎಲ್ಲರ ಕಣ್ಣಿನ ಆರೋಗ್ಯವನ್ನು ಕಾಪಾಡಬಲ್ಲ ಅಕ್ಕಿಯನ್ನು ಸೃಷ್ಟಿಸುತ್ತಾರಂತೆ. ಒಂದೇ ವರ್ಷದಲ್ಲಿ ಐದಾಳೆತ್ತರಕ್ಕೆ ಬೆಳೆದು ಕಾಗದ ತಯಾರಿಕೆಗೆ ಕಚ್ಚಾತಿರುಳನ್ನು ನೀಡಬಲ್ಲ ಸೂಪರ್‌ವೃಕ್ಷಗಳನ್ನು ಚೀನೀಯರು ಬೆಳೆಸುತ್ತಿದ್ದಾರಂತೆ. ನಮ್ಮ ಕೃಷಿಕರನ್ನೂ ಅಂಥ ಮಜಲಿಗೆ ಏರಿಸಬೇಕಾದರೆ ಬಿಟಿ ತಂತ್ರಜ್ಞಾನ ಬೇಕಂತೆ.

ಬೇಕು, ಬಿಡಿ! ಬಿಟಿ ಹತ್ತಿ ಬೆಳೆದು ನೇಣುಹಗ್ಗ ಹಿಡಿದ ರೈತನಿಗೆ ಎತ್ತರದ ಮರಗಳು ಕೈಬೀಸಿ ಕರೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.