ಪರಮಶಾಂತಿ ಮತ್ತು ಮಹಾಕರುಣೆಯ ತಂಪಾದ ತಿಳಿಬೆಳಕನ್ನು ಭೂವಲಯದ ಉದ್ದಕ್ಕೂ ಹರಡುವಲ್ಲಿ ಬುದ್ಧನ ಜೀವಿತದ ಮೂರು ಹುಣ್ಣಿಮೆಗಳು ಮಹತ್ವಪೂರ್ಣ. ಮೊದಲನೆಯದು ಸಾಕ್ಯಮುನಿ ಬುದ್ಧ ಜನಿಸಿದ ದಿನ. ಅದೂ ಹುಣ್ಣಿಮೆ. ಎರಡನೆಯದು ತನ್ನ ಅರಮನೆಯನ್ನು ನಟ್ಟಿರುಳಲ್ಲಿ ತೊರೆದು ಆತ ಅರಿವಿನ ಬೆಳಕನ್ನು ಅರಸಲು ಹೊರಟದ್ದು. ಅದೂ ಹುಣ್ಣಿಮೆ.

ಕೊನೆಯದು ಆತ ತನ್ನ ದೇಹತ್ಯಾಗ ಮಾಡಿದ ದಿನ. ಅದೂ ಹುಣ್ಣಿಮೆ. ಹೀಗಾಗಿ ಬುದ್ಧನ ಹುಟ್ಟಿನ ದಿನ, ಆತ ಗೃಹತ್ಯಾಗ ಮಾಡಿದ ದಿನ, ದೇಹತ್ಯಾಗ ಮಾಡಿದ ಮೂರು ಹುಣ್ಣಿಮೆಗಳು ಇಡೀ ಜಗತ್ತಿನ ಕರಾಳ ಇತಿಹಾಸವನ್ನು ಶಾಂತಿ ಮತ್ತು ಕರುಣೆಯಿಂದ ಪ್ರಕಾಶಮಾನವಾಗಿಸಿದವು.

ಬುದ್ಧನ ಮೂರ್ತಿಗಳು ಜಗತ್ತಿನ ಶಿಲ್ಪಗಳಲ್ಲಿ ಅತ್ಯಂತ ಪ್ರಸಿದ್ಧವಾಗಿವೆ, ಪ್ರಭಾವಿಯಾಗಿವೆ. ಭಾರತೀಯ ಸೌಂದರ್ಯ ಮೀಮಾಂಸೆಯಲ್ಲಿ ಆಚಾರ್ಯ ಅಭಿನವಗುಪ್ತಪಾದರಿಗೆ ಶಾಂತರಸವನ್ನು ಒಂಬತ್ತನೆಯ ರಸವನ್ನಾಗಿ ಸ್ಥಾಪಿಸಲು ಆ ಕಾಲದಲ್ಲಿ ವ್ಯಾಪಕವಾಗುತ್ತಿದ್ದ ಬುದ್ಧನ ಧ್ಯಾನಮೂರ್ತಿಗಳಿಂದ ಪ್ರೇರಣೆ ದೊರಕಿತೆಂದು ಹೇಳಲಾಗಿದೆ.

ಆದರೂ ಬುದ್ಧ ತನ್ನ ಮೂರ್ತಿಸ್ಥಾಪನೆಗೆ, ಪೂಜೆಗೆ ಅನುಮತಿ ನೀಡಲಿಲ್ಲ. ಗಾಂಧಾರ ದೇಶದಲ್ಲಿ ಬುದ್ಧನ ಮೂರ್ತಿಗಳು ಪ್ರಚುರಗೊಳ್ಳುವ ಮೊದಲು ಬೌದ್ಧಶಿಲ್ಪದಲ್ಲಿ ಬುದ್ಧನನ್ನು ಕುದುರೆ, ಧರ್ಮಚಕ್ರ ಇತ್ಯಾದಿ ಸಂಕೇತಗಳ ಮೂಲಕವೇ ಸೂಚಿಸಲಾಗುತ್ತಿತ್ತೆಂಬುದು ನಮಗೆ ಸಾಂಚಿಯಂಥ ಶಿಲ್ಪರಚನೆಗಳ ಮೂಲಕ ತಿಳಿದುಬರುತ್ತದೆ.

ದೇಹಧಾರಿಗಳಾದ ಮಾನ-ವರು ಅಮೂರ್ತ ಆದರ್ಶಗಳಿಗೆ ದೇಹರೂಪವನ್ನು ನೀಡುವ ಪ್ರಕ್ರಿಯೆಯನ್ನು ಯಾವ ಮೂರ್ತಿವಿರೋಧಿ ಧರ್ಮವೂ ಪ್ರತಿಬಂಧಿಸಲು ಸಾಧ್ಯವಾಗಿಲ್ಲ. ಹೀಗಾಗಿ ಬೌದ್ಧಧರ್ಮ ಚೀನಾ, ಟಿಬೆಟ್, ಕೊರಿಯಾ, ಜಪಾನುಗಳಲ್ಲಿ ಮಹಾಯಾನದ ಹೊಸ ಆವಿಷ್ಕಾರಗಳನ್ನು ಪಡೆದುಕೊಂಡಾಗ ಮೂರ್ತಿಸ್ಥಾಪನೆ ಮತ್ತು ಮೂರ್ತಿಧ್ಯಾನಗಳು ಪ್ರಚಾರಕ್ಕೆ ಬಂದವು.

ಜಪಾನಿನ ನಾರಾದಲ್ಲಿ ಬುದ್ಧನ ಮರದ ಬೃಹತ್ ಮೂರ್ತಿ ಇಂದಿಗೂ ಪೂಜೆಗೊಳ್ಳುತ್ತಿದೆ. ನಾರಾದ ಬುದ್ಧಮಂದಿರ ಮೂರು ಬಾರಿ ಬೆಂಕಿಯ ಅನಾಹುತಗಳಿಗೆ ತುತ್ತಾಗಿತ್ತು. ಅದನ್ನು ಮೂರು ಬಾರಿ ಪುನರ್ನಿರ್ಮಾಣ ಮಾಡಲಾಯಿತು. ಅದು ಪ್ರತಿದಿನ ನೂರಾರು ಬೌದ್ಧ ಯಾತ್ರಿಗಳನ್ನು ಇಂದಿಗೂ ಸೆಳೆಯುತ್ತಿದೆ.

ಇಡೀ ಜಗತ್ತನ್ನು ನುಂಗಿ ನೀರು ಕುಡಿಯಲು ಬಯಸಿದ ಸಾಮ್ರಾಜ್ಯಪಿಪಾಸುಗಳ ಸಂಖ್ಯೆ ಕಡಿಮೆಯೇನಲ್ಲ. ಅಲೆಕ್ಸಾಂಡರ್ ಗೆಲ್ಲಲಿಕ್ಕೆ ಇನ್ನೊಂದು ಭೂಮಿಯಿಲ್ಲವಲ್ಲ ಎಂದು ಮಗುವಿನಂತೆ ಅಳುತ್ತಿದ್ದನಂತೆ. ಆದರೆ ಅವನು ಒಂದು ಜಗತ್ತನ್ನೂ ಪೂರ್ಣ ಗೆಲ್ಲುವ ಮೊದಲೇ ಅವಸಾನಗೊಂಡ. ಮಂಗೋಲಿಯಾದ ಚಂಗೀಸ್ ಖಾನ್ ಇನ್ನೊಬ್ಬ ಅಪ್ರತಿಹತ ಸಾಮ್ರಾಜ್ಯಪಿಪಾಸು.

ಜಪಾನಿನಿಂದ ರಷ್ಯಾದವರೆಗಿನ ಅವನಿಯನ್ನು ವಶಪಡಿಸಿಕೊಂಡ. ಇಡೀ ಜಗತ್ತನ್ನು ಗೆಲ್ಲಲು ಅವನಿಗೂ ಸಾಧ್ಯವಾಗಲಿಲ್ಲ. ಹಾಗೆಯೇ ಪೃಥ್ವೀಮಂಡಲದಲ್ಲಿ ಬೃಹತ್ ಸಾಮ್ರಾಜ್ಯಗಳನ್ನು ಸ್ಥಾಪಿಸಿದ ರೋಮನ್ನರಾಗಲಿ, ಸ್ಪೇನಿಗರಾಗಲಿ, ಮೊಘಲರಾಗಲಿ, ಪೂರ್ವ ಏಷ್ಯಾದಲ್ಲಿ ಸಾಮ್ರಾಜ್ಯಗಳನ್ನು ಕಟ್ಟಿದ ತಮಿಳರಸರಾಗಲಿ ಯಾರೂ ಇಡೀ ಜಗತ್ತನ್ನು ವಶಪಡಿಸಿಕೊಳ್ಳುವುದರಲ್ಲಿ ಯಶಸ್ಸು ಪಡೆಯಲಿಲ್ಲ. ಅಲ್ಲದೆ ಅವರು ಕಟ್ಟಿದ ಯಾವ ಸಾಮ್ರಾಜ್ಯವೂ ಬಹುಕಾಲ ಉಳಿಯಲಿಲ್ಲ. ಇತಿಹಾಸದ ಸುಂಟರಗಾಳಿಯಲ್ಲಿ ತೇಲಿಹೋದವು.

ಬುದ್ಧ ಅರಸುಕುಲದಲ್ಲಿ ಜನಿಸಿಯೂ ಅರಸೊತ್ತಿಗೆಯನ್ನು ತ್ಯಜಿಸಿದ. ಸಾಮ್ರಾಜ್ಯಪಿಪಾಸೆ ಅವನನ್ನು ಸೋಂಕಲೂ ಇಲ್ಲ. ಆದರೆ ಬದುಕಿನ ಅಶಾಶ್ವತೆಯನ್ನು ಸಾರಿದ ಬುದ್ಧ ಸ್ಥಾಪಿಸಿದ ಧರ್ಮಸಾಮ್ರಾಜ್ಯ ಇಂದಿಗೂ ಉಳಿದಿದೆ, ಬೆಳೆಯುತ್ತಿದೆ. ಅಮೆರಿಕದಂಥ ದೇಶದಲ್ಲಿ ಬೌದ್ಧಧರ್ಮ ಇಂದು ಜನಪ್ರಿಯತೆಯಲ್ಲಿ ಎರಡನೆಯ ಸ್ಥಾನದಲ್ಲಿದೆ.

ಜರ್ಮನಿಯ ರಾಜಧಾನಿಯಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚಿನ ಬೌದ್ಧ ಧ್ಯಾನಕೇಂದ್ರಗಳಿವೆ. ಕತ್ತಿ ಅಥವಾ ಬಂದೂಕಿನ ಬಲವಿಲ್ಲದೆ, ಒಂದು ಹನಿ ರಕ್ತವನ್ನೂ ಸುರಿಸದೆ ಇಂದು ವಿಶ್ವಧರ್ಮವಾಗಿ ರಾರಾಜಿಸುತ್ತಿರುವ ಬೌದ್ಧಧರ್ಮದ ದಿಗ್ವಿಜಯ ಜಗತ್ತಿನ ಇತಿಹಾಸದ ಸೋಜಿಗಗಳಲ್ಲೊಂದು. ಆದ್ದರಿಂದಲೋ ಏನೋ ಬೌದ್ಧ ಶಿಲ್ಪ ಮತ್ತು ಚಿತ್ರಕಲೆಗಳಲ್ಲಿ, ಧ್ಯಾನಮೂರ್ತಿಗಳ ವಿವರಗಳಲ್ಲಿ ಬುದ್ಧ ಮತ್ತು ಅವನ ಅವತಾರಗಳಾಗಿರುವ ಬೋಧಿಸತ್ವರಿಗೆ ರಾಜವೈಭವದ ಲಕ್ಷಣಗಳನ್ನು ಆರೋಪಿಸಲಾಗಿದೆ.

ಮಕುಟಧಾರಿಗಳಾದ, ವಿವಿಧ ಆಯುಧಪಾಣಿಗಳಾದ, ಸ್ವರ್ಣ-ವಜ್ರ-ವೈಢೂರ್ಯ ಧಾರಿಗಳಾದ ಬುದ್ಧ, ಬೋಧಿಸತ್ವರು ಬೌದ್ಧರ ಸಾಮೂಹಿಕ ಮಾನಸ ಭಿತ್ತಿಯಲ್ಲಿ ನೆಲೆ ನಿಂತು ಧ್ಯಾನ-ಪೂಜೆಗಳನ್ನು ಸ್ವೀಕರಿಸುತ್ತಿದ್ದಾರೆ. ಅವರವರ ಭಾವಕ್ಕೆ ಅವರವರ ವೇಷಗಳನ್ನು ತೊಟ್ಟು ಶಿಲ್ಪ ಮತ್ತು ಚಿತ್ರಕಲೆಗಳಲ್ಲಿ ಅನಿತ್ಯವಾದಿಯಾದ ಬುದ್ಧನ ಸ್ಮರಣೆ ನಿತ್ಯಘಟನೆಯಾಗಿದೆ.

ಅದೇ ರೀತಿ ತಿಪಿಟಕಾದಿಗಳಲ್ಲಿ ದಾಖಲಿತವಾದ ಬುದ್ಧವಚನವೂ ನಮ್ಮ ನಡುವೆ ಬುದ್ಧನ ಅಸ್ತಿತ್ವದ ಮುಂದುವರಿಕೆಯಾಗಿದೆ. ಪ್ರಜ್ಞಾಪಾರಮಿತ ಸ್ತೋತ್ರವೆಂಬ ವಜ್ರಾಯಾನ ಪಂಥದ ರಚನೆಯಲ್ಲಿ ಹೀಗೆ ಹೇಳಲಾಗಿದೆ: ‘ಹೇಗೆ ಚಂದ್ರ ಮತ್ತು ಚಂದ್ರಪ್ರಕಾಶದ ನಡುವೆ ಭೇದವಿಲ್ಲವೋ ಹಾಗೆಯೇ ಬುದ್ಧ ಮತ್ತು ಬುದ್ಧವಚನಗಳನ್ನು ಬೇರ್ಪಡಿಸುವುದು ಸಾಧ್ಯವಿಲ್ಲ’.

ಬುದ್ಧವಚನವಾದರೋ ತಿಪಿಟಕಾದ ಬೃಹತ್ ರಾಶಿಯಲ್ಲಿ, ಮಹಾಯಾನ ಪಂಥಗಳ ಸಂಸ್ಕೃತ, ಟಿಬೆಟಿಯನ್, ಚೀಣಿ, ಜಪಾನಿ, ಕೊರಿಯನ್ ಭಾಷೆಗಳ ಅಸಂಖ್ಯ ಸೂತ್ರ, ಟೀಕೆಗಳ ಮಹಾನ್ ರಾಶಿಯಲ್ಲಿ ವಿಪುಲವಾಗಿ ಹರಡಿಹೋಗಿದೆ. ಅವುಗಳಲ್ಲಿ ವ್ಯಕ್ತವಾಗಿರುವ ಬೋಧನೆಗಳ, ನಿರ್ದೇಶನಗಳ ಬಹುಳತೆ ಮತ್ತು ಅಂತರ್ವಿರೋಧಗಳು ಬೌದ್ಧಧರ್ಮ, ಶಾಖೋಪಶಾಖೆಗಳಾಗಿ ಹಲವು ಕವಲೊಡೆಯಲು ಕಾರಣವಾದವು. ಆದರೆ ಅನಿತ್ಯತತ್ವ, ಅನಾತ್ಮತತ್ವ, ಪ್ರತೀತ್ಯಸಮುತ್ಪಾದ ಮತ್ತು ನಿರೀಶ್ವರವಾದಗಳು ಎಲ್ಲ ಬಗೆಯ ಬೌದ್ಧಪಂಥಗಳಿಗೂ ಮಾನ್ಯವಾದವೆಂದು ಹೇಳುತ್ತಾರೆ ಜರ್ಮನಿಯ ವಿಖ್ಯಾತ ವಿದ್ವಾಂಸ ಲಾಮಾ ಅನಗರಿಕ ಗೋವಿಂದ.

ಜಗತ್ತಿನ, ದೇಶದ ಮತ್ತು ನನ್ನ ವ್ಯಕ್ತಿಗತವಾದ ಹಲವಾರು ಅನಿಶ್ಚಿತತೆಗಳ ನಡುವೆ ಈ ಸಲದ ಬುದ್ಧನ ಹುಣ್ಣಿಮೆಯನ್ನು ಹೇಗೆ ಆಚರಿಸಬೇಕೆಂದು ಯೋಚಿಸುತ್ತಿರುವಾಗ ನನಗೆ ಬುದ್ಧನ ಬೋಧನೆಗಳನ್ನು ಸಂಗ್ರಹರೂಪವಾಗಿ ಹೇಳುವ ‘ಧಮ್ಮಪದ’ದ ನೆನಪಾಯಿತು. ಈ ಕೃತಿಯನ್ನು ನಾನು ನನ್ನ ಬದುಕಿನ ನಿರ್ಣಾಯಕ ವರ್ಷಗಳಲ್ಲಿ ನಿತ್ಯಪಾಠ ಮಾಡುತ್ತಿದ್ದೆ.

ಇಂದು ‘ಧಮ್ಮಪದ’ ಕನ್ನಡವನ್ನೂ ಒಳಗೊಂಡು ಜಗತ್ತಿನ ಎಲ್ಲ ಭಾಷೆಗಳಿಗೂ ಅನುವಾದವಾಗಿದೆ. ಆಧ್ಯಾತ್ಮಿಕ ಸತ್ಯ ಮತ್ತು ಕಾವ್ಯ-ಸೌಂದರ್ಯಗಳ ಸಂಗಮವಾಗಿರುವ ಈ ಕೃತಿಯ ಅನುವಾದವನ್ನು ಈ ಹಿಂದೆ ಬೌದ್ಧಧರ್ಮದಲ್ಲಿ ತಜ್ಞರಾಗಿದ್ದ ದಿವಂಗತ ಜಿ.ಪಿ. ರಾಜರತ್ನಂ ಅವರು ಮಾಡಿದ್ದರು. ಮುಂದೆ ಬೆಂಗಳೂರಿನ ಮಹಾಬೋಧಿ ಸೊಸೈಟಿಯವರು ಇನ್ನೊಂದು ಅನುವಾದವನ್ನು ಪ್ರಕಟಿಸಿದರು.

ಈಚೆಗೆ ನನ್ನ ಯುವ ಮಿತ್ರರೂ ವಿದ್ವತ್ಪೂರ್ಣ ಬರಹಗಾರರೂ ಆದ ಜಿ.ಬಿ. ಹರೀಶ್ ಅವರು ‘ಧಮ್ಮಪದ’ದ ಹೊಸ ಅನುವಾದವನ್ನು ಮಾಡಿ ಅಭಿಪ್ರಾಯಕ್ಕಾಗಿ ನನಗೆ ಕಳಿಸಿದ್ದಾರೆ. ಬುದ್ಧನ ಹುಣ್ಣಿಮೆಯಂದು ಸಾದ್ಯಂತವಾಗಿ ಅದನ್ನು ಮತ್ತೆ ಓದಿದಾಗ ಅದರ ಮೊದಲ ಅಧ್ಯಾಯದಲ್ಲಿರುವ ಒಂದು ದ್ವಿಪದಿ ಮತ್ತೆ ನನ್ನ ಗಮನ ಸೆಳೆಯಿತು. ನನಗಿದು ಬುದ್ಧವಚನದ ಸಾರೋದ್ಧರವಾಗಿ ತೋರುವುದರಿಂದ ಮತ್ತು ಎಂದಿಗಿಂತಲೂ ಇಂದು ನನ್ನ ರಾಷ್ಟ್ರ ಮತ್ತು ಜಗತ್ತುಗಳಿಗೆ ಅತ್ಯಂತ ಪ್ರಸ್ತುತವಾಗಿದೆಎಂದು ಅನಿಸುತ್ತಿರುವುದರಿಂದ ಅದರ ಬಗ್ಗೆ ಧ್ಯಾನಿಸುತ್ತಿದ್ದೇನೆ.

ಆ ದ್ವಿಪದಿಯು ಮೂಲ ಪಾಲಿಯಲ್ಲಿ ಹೀಗಿದೆ:
ನಹಿ ವೇರೇನ ವೇರಾಣಿ ಸಮ್ಮಂತಿಧ ಕುದಾಚನಙ
ಅವೇರೇನ ಸಮ್ಮಂತಿ ಏಸ ಧಮ್ಮೋ ಸನಾತನೋ

ಇದರರ್ಥ:
ವೈರದಿಂದ ಎಂದಿಗೂ ಸಾಧ್ಯವಿಲ್ಲ ವೈರಶಮನ ಅವೈರದಿಂದ ಸಾಧ್ಯ. ಇದೇ ಧರ್ಮ ಸನಾತನ
ಇದು ಬುದ್ಧ ನೀಡಿದ ಸನಾತನ ಧರ್ಮದ ವ್ಯಾಖ್ಯೆ. ಇದೇನೂ ಬುದ್ಧ ನೀಡಿದ ಹೊಸ ಆಲೋಚನೆಯಲ್ಲ. ಹಾಗೆ ನೋಡಿದರೆ ಬುದ್ಧ ತಾನು ಹೊಸ ಧರ್ಮ ಸ್ಥಾಪಿಸಿದೆ ಎಂದು ಕೊಚ್ಚಿಕೊಳ್ಳಲೇ ಇಲ್ಲ. ತನ್ನ ಮೊದಲೈದು ಶಿಷ್ಯರಿಗೆ ಸಾರನಾಥದಲ್ಲಿ ಬೋಧಿಪ್ರಾಪ್ತಿಯ ನಂತರ ಆತ ನೀಡಿದ ಬೋಧನೆಯ ಹೆಸರು ಧಮ್ಮಚಕ್ಕ ಪಬತ್ತನ ಸುತ್ತ (ಧರ್ಮಚಕ್ರ ಪ್ರವರ್ತನ ಸೂತ್ರ). ಅಂದರೆ ಧರ್ಮಚಕ್ರ ಮೊದಲೇ ಇತ್ತು. ಆ ಚಕ್ರ ಸ್ಥಗಿತಗೊಂಡಿತ್ತು.

ಬುದ್ಧ ಅದನ್ನು ಪುನಶ್ಚಾಲನೆ ಮಾಡಿದ. ಆ ಬೋಧನೆಯ ಸಾರಸರ್ವಸ್ವ ಚತುರಿ ಅರಿಯ ಸಚ್ಚಾನಿ (ನಾಲ್ಕು ಆರ್ಯಸತ್ಯಗಳು). ಇಲ್ಲಿ ಆರ್ಯ ಅಂದರೆ ಜನಾಂಗಸೂಚಕವಲ್ಲ. ಹಿರೇಕರು ಎಂದದರ ಅರ್ಥ. ಅಂದರೆ ಆತ ಬೋಧಿಸಿದ ಸತ್ಯಗಳು ಈಗಾಗಲೇ ಆತನ ಹಿರೇಕರಿಗೆ ಗೋಚರವಾಗಿ ಅವರು ಅವುಗಳನ್ನು ವ್ಯಕ್ತಪಡಿಸಿದ್ದರು. ಜ್ಞಾನೋದಯ ಕಾಲದಲ್ಲಿ ಬುದ್ಧ ಅವುಗಳನ್ನು ತನ್ನ ಧ್ಯಾನಾನುಭವದಲ್ಲಿ ಕಂಡುಕೊಂಡ.

ವಿದ್ವಾಂಸರು ಬೌದ್ಧಧರ್ಮದ ಸಾರವನ್ನು ವಿವಿಧ ರೀತಿಗಳಲ್ಲಿ ವಿವರಿಸಿದ್ದಾರೆ. ನಾಲ್ಕು ಆರ್ಯಸತ್ಯಗಳು, ದುಃಖಾಂತಕ್ಕೆ ಅಗತ್ಯವಾದ ಅರಿಯ ಅಠ್ಠಂಗ ಮಗ್ಗ (ಆರ್ಯ ಅಷ್ಟಾಂಗ ಮಾರ್ಗ)ಬುದ್ಧನ ಬೋಧನೆಯ ಆಧಾರಸ್ತಂಭಗಳು. ಅಷ್ಟೇ ಮುಖ್ಯವಾದುವು ಬುದ್ಧ ನೀಡಿದ ಎನ್ನಲಾದ ತ್ರಿರತ್ನಗಳು: ಶೀಲ, ಸಮಾಧಿ, ಪ್ರಜ್ಞಾಶೀಲವನ್ನು ಮಾದಕದ್ರವ್ಯಗಳ ನಿಷೇಧ ಇತ್ಯಾದಿ ಸಂಕುಚಿತ ಕಲ್ಪನೆಗಳಲ್ಲಿ ಗುರುತಿಸಲಾಗುತ್ತಿದೆಯಾದರೂ ಶೀಲವೆಂಬುದರ ಹರಹು ಬಹಳ ದೊಡ್ಡದು.

ಪ್ರಜ್ಞೆಯೆಂದರೆ ಅರಿವು. ಅರಿವೆಂದರೆ ನೇರ ಗ್ರಹಿಕೆ. ಇದನ್ನೇ ಕರ್ನಾಟಕದ ಶರಣರು ಅರಿವೆಂದು ಕರೆದರು. ಆದರೆ ಈ ಮೂರು ರತ್ನಗಳಿಗೆ ಕಾರಣೀಭೂತವಾದ ಇನ್ನೊಂದು ತತ್ವವಿದೆ. ಅದನ್ನೇ ಮೇತ್ತಾಕರುಣಾ(ಮೈತ್ರಿ-ಕರುಣೆ) ಎಂದು ಕರೆಯಲಾಗಿದೆ. ಮೇಲ್ಕಂಡ ದ್ವಿಪದಿ ಮೈತ್ರಿ-ಕರುಣೆಯ ಅಸ್ತಿವಾರವಾದ ನಿರ್ವೈರವನ್ನು ಸನಾತನ ಧರ್ಮವೆಂದು ಸಾರಿದೆ. ಬೇಕು–-ಬೇಡ, ಹೌದು–-ಇಲ್ಲ ಇತ್ಯಾದಿ ಪರಸ್ಪರ ವಿರುದ್ಧವಾದ ಭಾವನೆಗಳ ನಡುವೆ ತೊಳಲಾಡುವ ಮನಸ್ಸು ಸದಾ ಇಬ್ಬಂದಿತನದಲ್ಲಿ, ಇಕ್ಕಟ್ಟು-–ಬಿಕ್ಕಟ್ಟುಗಳಲ್ಲಿ ಅಶಾಂತವಾಗಿರುತ್ತದೆ.

ಒಂದು ಬೇಕಾದರೆ ಇನ್ನೇನೋ ಬೇಡವಾಗಿರುತ್ತದೆ; ಒಂದರ ಬಗೆಗೆ ಆಕರ್ಷಣೆ ಇದ್ದರೆ ಇನ್ನೊಂದರ ಬಗ್ಗೆ ವಿಕರ್ಷಣೆಯಿರುತ್ತದೆ. ಪ್ರೀತಿ ಇದ್ದಲ್ಲಿ ಹಗೆಯೂ ಇರುತ್ತದೆ. ಆದರೆ ಕರುಣೆಯೆಂಬುದು ಮೈತ್ರಿಯೆಂಬುದು ನಿರ್ದ್ವಂದ್ವದ ಸ್ಥಿತಿ. ಕರುಣೆಗೆ ವಿರೋಧಾರ್ಥಕ ಭಾವನೆಯಿಲ್ಲ.

ಮೈತ್ರಿಯು ರಾಗವಲ್ಲ. ರಾಗವಿದ್ದಲ್ಲಿ ದ್ವೇಷ ಅನಿವಾರ್ಯ. ‘ನತ್ಥಿ ರಾಗಸಮೋ ನದಿ’ ಅನ್ನುತ್ತದೆ ಧಮ್ಮಪದ. ಅಂದರೆ ರಾಗ ಕೊನೆಯಿರದ ನದಿ. ರಾಗವು ದ್ವೇಷಕ್ಕೂ, ದ್ವೇಷವು ಮೋಹಕ್ಕೂ ಎಡೆ ಮಾಡಿಕೊಟ್ಟು ನಮ್ಮನ್ನು ದುಃಖಜಾಲದಲ್ಲಿ ಸಿಲುಕಿಸುತ್ತದೆ. ಸಂಘರ್ಷಾತ್ಮಕ, ಶೋಷಣಾತ್ಮಕ ಸಾಮಾಜಿಕ ಸನ್ನಿವೇಶಗಳಲ್ಲಿ ತಾನೇ, ತನ್ನ ಜಾತಿಯೇ, ತನ್ನ ಕುಲವೇ, ತನ್ನ ಸಿದ್ಧಾಂತವೇ ಶ್ರೇಷ್ಠವೆನ್ನುವ ಭಾವನೆಗಳು ಎಡೆಬಿಡದ ರಾಗ-ದ್ವೇಷಗಳ ಮೇಲಾಟವನ್ನುಂಟು ಮಾಡಿ ಮನೋವಿಕಾಸವನ್ನು ಕುಂಠಿತಗೊಳಿಸುತ್ತವೆ.

ಬಹುತೇಕ ಧರ್ಮಗಳೂ ಈ ತೆರನ ಸಾಮೂಹಿಕ ಸ್ವಾರ್ಥಕ್ಕೆ ಸ್ಫೂರ್ತಿ ನೀಡಿವೆ. ಬೌದ್ಧಧರ್ಮ ಕರುಣೆಯನ್ನು ತನ್ನ ಆಧಾರವಾಗಿರಿಸಿಕೊಂಡಿದ್ದರೂ ಬೌದ್ಧಧರ್ಮ ಪ್ರಧಾನ ಶ್ರೀಲಂಕೆಯಲ್ಲಿ ನಡೆದ ತಮಿಳರ ಸಾಮೂಹಿಕ ಹತ್ಯಾಕಾಂಡ ಕರುಣೆಯನ್ನು ಪಾಲಿಸುವುದು ಬೌದ್ಧಧರ್ಮೀಯರಿಗೂ ಸುಲಭವಲ್ಲವೆಂದು ತೋರಿಸಿಕೊಟ್ಟಿದೆ.

ಮೈತ್ರಿಕರುಣೆಗಳಿಲ್ಲದೆ ಶೀಲ-, ಸಮಾಧಿ-, ಕರುಣೆಗಳೂ ನಿರರ್ಥಕವೆಂದು ಸೂಚಿಸುವ ದಂತಕತೆಯೊಂದು ಬೌದ್ಧಪರಂಪರೆಯಲ್ಲಿದೆ.
ಒಮ್ಮೆ ಹಲವು ಮಂದಿ ಬೌದ್ಧಭಿಕ್ಷುಗಳು ಸಿಂಹಗುಹೆಯೆಂಬ ತಾಣದಲ್ಲಿ ಕಠೋರ ಸಾಧನೆ ಮಾಡತೊಡಗುತ್ತಾರೆ. ಅವರ ಮನಸ್ಸು ವಿಪಸ್ಸನ ಧ್ಯಾನದಲ್ಲಿ ನೆಲೆನಿಂತು ಮೊದಲಿಗೆ ಶಾಂತವಾದಂತೆ ಕಂಡರೂ ಸ್ವಲ್ಪ ಸಮಯದ ನಂತರ ಭಯಾನಕ ರೂಪಗಳು ಕಾಣತೊಡಗಿ ಅವರನ್ನು ಹೆದರಿಸತೊಡಗುತ್ತವೆ.

ಅವರೆಲ್ಲರೂ ಪರಿಹಾರವನ್ನು ಕೇಳಲು ಬುದ್ಧಗುರುವಿನ ಬಳಿ ಹೋಗುತ್ತಾರೆ. ಮೈತ್ರಿಕರುಣೆಗಳನ್ನು ಬಲಪಡಿಸಿಕೊಳ್ಳದೆ ಧ್ಯಾನದಲ್ಲಿ ತೊಡಗಿದರೆ ಹೀಗಾಗುವುದೆಂದು ಬುದ್ಧ ಹೇಳುತ್ತಾನೆ. ಆಮೇಲೆ ಆ ಭಿಕ್ಷುಗಳು ಬುದ್ಧನ ಬೋಧನೆಯ ಅನುಸಾರ ಮೇತ್ತಾಭಾವನಾ ಎಂಬ ಸಾಧನೆಯನ್ನು ಮಾಡಿ ಭಯಮುಕ್ತರಾಗುತ್ತಾರೆ. ಮೈತ್ರಿ-ಕರುಣೆಯೇ ಬುದ್ಧವಚನಚಂದ್ರಿಕೆಯ ಪ್ರಶಾಂತ ಪ್ರಕಾಶ. ಅದು ನಮ್ಮೆಲ್ಲರ ಆಕಾಶಗಳನ್ನೂ ಬೆಳಗ-ತೊಡಗಲಿ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.