ನಮ್ಮೆಲ್ಲರನ್ನೂ ಒಂದಲ್ಲ ಒಂದು ಭಯ ಕಾಡುತ್ತಿರುತ್ತದೆ. ಕೆಲವರು ಭಯ ವನ್ನು ಒಪ್ಪಿಕೊಳ್ಳುತ್ತಾರೆ, ಇನ್ನು ಕೆಲವರು ಬಹಿರಂಗವಾಗಿ ಒಪ್ಪಿಕೊಳ್ಳುವುದಿಲ್ಲ. ನೂರಾರು ತರಹದ ಭಯಗಳಿವೆ. ಕೆಲವರಿಗೆ ಕತ್ತಲೆಯ ಭಯ, ಮತ್ತೆ ಹಲವರಿಗೆ ಸೋಲಿನ ಭಯ. ಸೋಲಿನ ಭಯ ನಮ್ಮನ್ನು ಸೋಲಿನಲ್ಲೇ ಇಡುತ್ತದೆ. ಬಡತನದ ಭಯ ಬಡತನದಲ್ಲೇ ಉಳಿಯುವಂತೆ, ಧೈರ್ಯದಿಂದ ಮುನ್ನುಗ್ಗದಂತೆ ಮಾಡುತ್ತದೆ. ಕೆಲಸ ಕಳೆದುಕೊಳ್ಳುವ ಭಯ ಹೊಸ ಪ್ರಯೋಗಗಳನ್ನು ಹೊಸಕಿ ಹಾಕುತ್ತದೆ. ಅಂತೆಯೇ ಸಾಹೇಬರ ಭಯ, ರಾಹುಕಾಲದಲ್ಲಿ ಕೆಲಸ ಮಾಡಬೇಕಾದ ಭಯ, ದೇವರ ಭಯ, ವಾಸ್ತು ಭಯ ಕೊನೆಗೆ ಮೃತ್ಯುವಿನ ಭಯ.

ಹೀಗೆ ಭಯಗಳ ಸಾಲು ಸಾಲೇ ನಮ್ಮನ್ನು ಕಾಡುತ್ತದೆ. ಈ ಹೆದರಿಕೆಗಳಿಂದ, ಭಯಗಳಿಂದ ಪಾರಾಗಲು ಏನು ಮಾಡಬೇಕು. ನನ್ನ ಪರಿಚಯದ ಹಿರಿಯರೊಬ್ಬರಿದ್ದಾರೆ. ತಮ್ಮನ್ನು ಆಗಾಗ ಕಾಡುವ ಚಿಂತೆ, ಭಯಗಳಿಂದ ಪಾರಾಗಲು ಅವರೊಂದು ನವೀನ ವಿಧಾನ ಹುಡುಕಿಕೊಂಡಿದ್ದಾರೆ. ಅದು ಮೇಲ್ನೋಟಕ್ಕೆ ವಿಚಿತ್ರವೆನ್ನಿಸಿದರೂ ಅವರಿಗೆ ಪರಿಣಾಮಕಾರಿಯಾಗಿ ಕಂಡಿದೆ. ಅದನ್ನು ಬಳಸಿದ ಅನೇಕರೂ ಅದನ್ನು ಪಾಲಿಸುತ್ತಿದ್ದಾರೆ. ಹಿರಿಯರ ಮನೆಯವರು ಮತ್ತು ಸ್ನೇಹಿತರು ಸೇರಿ `ಭಾನುವಾರದ ಕ್ಲಬ್' ರಚಿಸಿಕೊಂಡಿದ್ದಾರೆ. ಈ ವಿಷಯ ಕೇಳಿ ಅವರನ್ನು ಕಾಣಲು ಹೋದೆ.

`ರಾಯರೇ ಈ ಭಾನುವಾರ ಕ್ಲಬ್ನದು ಏನು ವಿಶೇಷ' ಎಂದು ಕೇಳಿದೆ. ಅವರು ಹೇಳಿದರು, `ಭಯ ಎಲ್ಲರನ್ನೂ ಕಾಡುವಂತೆ ನನ್ನನ್ನೂ ಕಾಡುತ್ತಿತ್ತು. ಯಾವು ಯಾವುದೋ ವ್ಯಕ್ತ ಹಾಗೂ ಅವ್ಯಕ್ತ ಭಯಗಳು ನನ್ನ ಬೆನ್ನು ಹತ್ತಿದ್ದಾಗ ನಾನೊಂದು ಉಪಾಯ ಮಾಡಿದೆ. ನನ್ನಿಂದ ಎದುರಿಸುವುದು ಕಷ್ಟ ಎನಿಸುವ ಸಮಸ್ಯೆಗಳು ಬಂದಾಗ ಅವುಗಳನ್ನು ಒಂದು ಕಾಗದದಲ್ಲಿ ಬರೆದು ಒಂದು ರಟ್ಟಿನ ಪೆಟ್ಟಿಗೆಯಲ್ಲಿ ಹಾಕಿ ಮುಚ್ಚಿ ಬಿಟ್ಟೆ. ಆ ಪೆಟ್ಟಿಗೆಯ ಮೇಲೆ ಭಾನುವಾರ ರಾತ್ರಿ ಒಂಬತ್ತು ಗಂಟೆ ಎಂದು ಬರೆದಿಟ್ಟಿದ್ದೆ' ಎಂದರು.

`ಹಾಗೆ ಬರೆದರೆ ಏನಾಯ್ತು' ಎಂದು ಕುತೂಹಲದಿಂದ ಕೇಳಿದೆ. ಅವರು, `ನಾನು ಪೆಟ್ಟಿಗೆಯಲ್ಲಿ ಹಾಕಿದ ಮೇಲೆ ಅದರ ವಿಷಯವನ್ನು ಭಾನುವಾರ ರಾತ್ರಿಯವರೆಗೆ ಚಿಂತಿಸದಿರಲು ತೀರ್ಮಾನಿಸಿದೆ. ಭಾನುವಾರ ರಾತ್ರಿ ಒಂಬತ್ತು ಗಂಟೆಗೆ ಈ ಕ್ಲಬ್ಬಿನ ಸದಸ್ಯರಾದ ನಮ್ಮ ಮನೆಯವರೆಲ್ಲ ಸೇರಿ ಆ ಪೆಟ್ಟಿಗೆಯನ್ನು ತೆರೆದು ಸಮಸ್ಯೆಯನ್ನು ನೋಡುತ್ತಿದ್ದೆವು, ಅದಕ್ಕೊಂದು ಪರಿಹಾರ ಹುಡುಕಲು ಪ್ರಯತ್ನಿಸುತ್ತ್ದ್ದಿದೆವು' ಎಂದರು.

`ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿತ್ತೇ' ಎಂದು ಕೇಳಿದಾಗ ಅವರು ಗಟ್ಟಿಯಾಗಿ ನಕ್ಕು `ತಮಾಷೆ ಏನು ಗೊತ್ತೇ. ಪ್ರತಿಶತ ತೊಂಬತ್ತರಷ್ಟು ಸಮಸ್ಯೆಗಳು ಕೇವಲ ಕಾಲ್ಪನಿಕವಾಗಿದ್ದವು, ಇಲ್ಲವೇ ಅವು ಆಗಾಗಲೇ ಪರಿಹಾರವಾಗಿ ಹೋಗಿರುತ್ತಿದ್ದವು. ಅಂದು ಬಹಳ ದೊಡ್ಡದು ಎನಿಸಿದ ಸಮಸ್ಯೆ ಕೆಲದಿನಗಳ ಅಂತರದ ಮೇಲೆ ಅಷ್ಟೇನೂ ದೊಡ್ಡದಲ್ಲ ಎನ್ನಿಸುತ್ತಿತ್ತು' ಎಂದರು. `ಹಾಗಾದರೆ ಆ ಉಳಿದ ಪ್ರತಿಶತ ಹತ್ತರಷ್ಟು ಸಮಸ್ಯೆಗಳ ಸ್ಥಿತಿ ಏನಾಯಿತು' ಎಂದು ಕೇಳಿದೆ.

ಅದಕ್ಕವರು ಮತ್ತಷ್ಟು ಗಟ್ಟಿಯಾಗಿ ನಕ್ಕು, `ಅವುಗಳನ್ನು ಮತ್ತೆ ಭಾನುವಾರ ಪೆಟ್ಟಿಗೆಯಲ್ಲಿ ಹಾಕಿಬಿಡುತ್ತಿದ್ದೆ' ಎಂದರು! ಇದು ಸಮಸ್ಯೆಗಳಿಂದ ತಪ್ಪಿಸಿಕೊಳ್ಳುವ ವಿಧಾನವಲ್ಲ. ಇದರ ಹಿಂದೆ ಒಂದು ತತ್ವವಿದೆ. ಒಂದು ಕ್ಷಣಕ್ಕೆ ತುಂಬ ದೊಡ್ಡದಾಗಿ ಕಂಡ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಸಿಕ್ಕದಿದ್ದರೆ ಅದರ ಬಗ್ಗೆಯೇ ಕೊರಗುತ್ತ ಕುಳಿತರೆ ಭಾವನೆಗಳ ಪೂರದಲ್ಲಿ ಸಮಸ್ಯೆ ಪರಿಹಾರವಾಗದೇ ತಲೆಭಾರವಾಗುತ್ತದೆ, ಆತಂಕ ಹೆಚ್ಚಾಗುತ್ತದೆ.

ಒಂದೆರಡು ದಿನ ಅದನ್ನು ಹಿಂದಕ್ಕೆ ತಳ್ಳಿ. ಆಗ ಮನಸ್ಸು ಸ್ವಲ್ಪ ವಿರಾಮವಾಗಿ ಭಾವನಾತ್ಮಕವಾಗಿ ಉಳಿಯದೇ ವೈಚಾರಿಕವಾಗುತ್ತದೆ. ಪರಿಹಾರ ಗೋಚರವಾಗಲು ಅನುವಾಗುತ್ತದೆ. ಭಾವನಾತ್ಮಕವಾದ ಮನಸ್ಸು ಗೋಜಲುಗೋಜಲಾಗಿ ಸರಿಯಾದ ತೀರ್ಮಾನಕ್ಕೆ ಬರುವುದು ಕಷ್ಟ.
ಅದಕ್ಕೇ ಡಿ.ವಿ.ಜಿ ಹೇಳುತ್ತಾರೆ,

ಕೊಳದ ಜಲ ನಿನ್ನ ಮನ ಲೋಗರದರೊಳಗಿಳಿಯೆ
ತಳದ ಕಸ ತೇಲುತ್ತ ಬಗ್ಗಡವದಹುದು
ಕಲಕದದ್ದದೆ ಕೊಂಚ ಬಿಟ್ಟಿದ್ದೊಡದು ಮರಳಿ
ತಿಳಿಯಹುದು ಶಾಂತಿಯಲಿ - ಮಂಕುತಿಮ್ಮ

ನಮ್ಮ ಮನಸ್ಸಿನ ಕೊಳ, ಸಮಸ್ಯೆಗಳಿಂದ ಕೊಳಕಾಗದೆ ಅದನ್ನು ತಿಳಿಯಾಗಿಸಲು ಕಲಕದೇ ಕೊಂಚ ಕಾಲ ಹಾಗೇ ಬಿಟ್ಟಿರಬೇಕು. ಆಗ ಅದು ತಿಳಿಯಾಗುತ್ತದೆ. ಅದಕ್ಕೆಂದೇ `ಭಾನುವಾರದ ಕ್ಲಬ್' ಒಂದು ಪರಿಹಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.