ಮಾಡುವ ಕೆಲಸಕ್ಕೆ ಒಂದು `ಕೇಂದ್ರ ಗಮನ' ಎಂಬುದು ಇರದೇ ಇದ್ದರೆ ಹೀಗೆಯೇ ಆಗುತ್ತದೆ. ಒಂದು ಸಂಸ್ಥೆಗೆ, ಅದರ ಮುಖ್ಯಸ್ಥರಿಗೆ ಇಂಥ `ಕೇಂದ್ರ ಗಮನ' ಎಂಬುದು ಇರಬೇಕಾಗುತ್ತದೆ. ಅದು ಇಲ್ಲದೇ ಇದ್ದರೆ ಮಾಡಬೇಕಾದ ಕೆಲಸ ಬಿಟ್ಟು ಇನ್ನು ಏನೇನೋ ಮಾಡುತ್ತ ಇರುತ್ತೇವೆ. ಮೊನ್ನೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ' ಚಂದ್ರು ಅವರು ನವದೆಹಲಿಗೆ ಸಾಹಿತಿಗಳ, `ಸಮಾಜ ಸೇವಕ'ರ ನಿಯೋಗ ತೆಗೆದುಕೊಂಡು ಹೋಗಿ ಬಂದ ಮೇಲೆ ಪ್ರಾಧಿಕಾರ ತನ್ನ `ಕೇಂದ್ರ ಗಮನ'ವನ್ನು ಕಳೆದುಕೊಂಡಿದೆ ಎಂದು ಮತ್ತೆ ಅನಿಸಿತು.

ಪ್ರಾಧಿಕಾರದ ವತಿಯಿಂದ ಇಂಥ ನಿಯೋಗ ದೆಹಲಿಗೆ ಹೋಗುತ್ತಿರುವುದು ಇದೇ ಮೊದಲೇನೂ ಅಲ್ಲ. ಬಹುಶಃ ಇದು ಮೂರನೇ ನಿಯೋಗ. ಈ ಸಾರಿ ಅದು ದೆಹಲಿಯಲ್ಲಿ ತಂಗಿದ್ದು ಒಂಬತ್ತು ದಿನ. ಪ್ರಧಾನಿಯವರನ್ನೂ ಸೇರಿ ಕೇಂದ್ರದ ಹಲವು ಸಚಿವರನ್ನು, ಸಂಸದರನ್ನು ನಿಯೋಗ ಭೇಟಿ ಮಾಡಿತು. ನಿಯೋಗದಲ್ಲಿ ಇದ್ದ ಒಬ್ಬ ಸದಸ್ಯರ ಪ್ರಕಾರ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಜತೆಗಿನ ಭೇಟಿ ಹೆಚ್ಚು `ಫಲಪ್ರದ' ಎನಿಸಿತು. ಖರ್ಗೆ ಅವರನ್ನು ದೆಹಲಿಗೆ ಹೋಗಿಯೇ ಭೇಟಿ ಮಾಡಬೇಕೇ?! ಕಲಿಕೆಯ ಮಾಧ್ಯಮ ಕುರಿತು ಪ್ರಧಾನಿ ಜತೆಗಿನ ಮಾತು ಮಾತೃಭಾಷೆ ಶಿಕ್ಷಣದ ಪರವಾಗಿಯೇನೂ ಇರಲಿಲ್ಲ.

ಚಂದ್ರು ಅವರ ನಿಯೋಗ ದೆಹಲಿಗೆ ಹೋಗಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ, ರಾಷ್ಟ್ರೀಯ ಉದ್ಯೋಗ ನೀತಿ ಮತ್ತು ರಾಷ್ಟ್ರೀಯ ಜಲನೀತಿಯನ್ನು ಜಾರಿಗೆ ತರುವಂತೆ ಪ್ರಧಾನಿಯವರಿಗೆ ಆಗ್ರಹಿಸಲು. 1994ರಲ್ಲಿ ವೀರಪ್ಪ ಮೊಯ್ಲಿಯವರು ಮುಖ್ಯಮಂತ್ರಿ ಆಗಿದ್ದಾಗ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಒಂದು ಅಧಿನಿಯಮ ರೂಪಿಸಲಾಯಿತು. ಅದರಲ್ಲಿ ಪ್ರಾಧಿಕಾರ ಏನು ಕೆಲಸ ಮಾಡಬೇಕು ಎಂದು ನಿರ್ದೇಶಿಸಲಾಗಿತ್ತು. ಚಂದ್ರು ಅವರು ನಿಯೋಗ ತೆಗೆದುಕೊಂಡು ಹೋಗಿದ್ದ ಯಾವ ವಿಷಯವೂ ಅದರಲ್ಲಿ ಇಲ್ಲ!

ಪ್ರಾಧಿಕಾರ ಮುಖ್ಯವಾಗಿ ಮಾಡಬೇಕಾದ ಕೆಲಸ ಆಡಳಿತದಲ್ಲಿ ಕನ್ನಡದ ಅನುಷ್ಠಾನ, ಸರೋಜಿನಿ ಮಹಿಷಿ ವರದಿಯ ಒಪ್ಪಿತ ಅಂಶಗಳ ಜಾರಿ. ಕನ್ನಡ ಅಭಿವೃದ್ಧಿಗೆ ಸಂಬಂಧಿಸಿದ ಮಾಹಿತಿಗಳ ಪ್ರಕಟಣೆ. ಕನ್ನಡ ಬಳಸದ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಕ್ರಮ ಜರುಗಿಸುವ ಅವಕಾಶ ಹಾಗೂ ಕನ್ನಡದ ಬಗ್ಗೆ ಕಾಲ ಕಾಲಕ್ಕೆ ಸರ್ಕಾರಕ್ಕೆ ಸಲಹೆ ನೀಡುವುದು. ಇಲ್ಲಿ ಎಲ್ಲಿಯೂ ಆಗಾಗ ದೆಹಲಿಗೆ ನಿಯೋಗ ತೆಗೆದುಕೊಂಡು ಹೋಗುವ ಪ್ರಸ್ತಾಪವೂ ಇಲ್ಲ!

ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿ ಆಗಿದ್ದಾಗ ಕನ್ನಡ ಮತ್ತು ಗಡಿನಾಡು ಕಾವಲು ಸಮಿತಿಯನ್ನು ರಚಿಸಿದ್ದರು. ಅದಕ್ಕೆ ಮೊದಲು ಜ್ಞಾನದೇವ ದೊಡ್ಡಮೇಟಿ ಮತ್ತು ನಂತರ ಸಿದ್ದರಾಮಯ್ಯ ಅವರು ಅಧ್ಯಕ್ಷರಾಗಿದ್ದರೂ ಅದು ಹೆಚ್ಚು ಸುದ್ದಿ ಮಾಡಿದ್ದು ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಅಧ್ಯಕ್ಷರಾಗಿದ್ದಾಗ. ಪುಟ್ಟಪ್ಪ ಗಟ್ಟಿ ಮನುಷ್ಯ. ಹೆಗಡೆಯವರು ಪುಟ್ಟಪ್ಪನವರಿಗೆ ಎಲ್ಲ ಸ್ವಾತಂತ್ರ್ಯ ಕೊಟ್ಟಿದ್ದರು. ಹಾಗೆ ನೋಡಿದರೆ ಪುಟ್ಟಪ್ಪ ಅವರಿಗೆ ಹಲ್ಲಿಲ್ಲದ ಒಂದು ಸಂಸ್ಥೆಯ ಅಧ್ಯಕ್ಷತೆ ಸಿಕ್ಕಿತ್ತು.

ಆದರೆ, ಒಬ್ಬ ಮನುಷ್ಯನಲ್ಲಿ ಗಟ್ಟಿಗತನ ಇದ್ದರೆ ಏನೆಲ್ಲ ಮಾಡಬಹುದು ಎಂಬುದಕ್ಕೆ ಅವರು ಅಧ್ಯಕ್ಷರಾಗಿ ಆಡಳಿತದಲ್ಲಿ ಕನ್ನಡವನ್ನು ಜಾರಿಗೆ ತರಲು ಕೊಟ್ಟ ಒತ್ತು ಒಂದು ನಿದರ್ಶನ. ಪುಟ್ಟಪ್ಪ ಯಾವುದಾದರೂ ಕಚೇರಿಗೆ ಭೇಟಿ ನೀಡುತ್ತಾರೆ ಎಂದರೆ ಅಧಿಕಾರಿಗಳ ಚಲ್ಲಣ ಒದ್ದೆಯಾಗುತ್ತಿತ್ತು. ಪುಟ್ಟಪ್ಪನಂಥ ಒಬ್ಬ ವ್ಯಕ್ತಿ ಮಹಾರಾಷ್ಟ್ರದಲ್ಲಿಯೂ ಇರಬೇಕು ಎಂದು ಅಲ್ಲಿನ ಪತ್ರಿಕೆಗಳು ಬರೆದುದು ಆಗಿನ ಕನ್ನಡ ಮತ್ತು ಗಡಿನಾಡು ಕಾವಲು ಸಮಿತಿ ಒತ್ತಿದ ಮುದ್ರೆ ಎಂಥದು ಎಂಬುದಕ್ಕೆ ಒಂದು ಉದಾಹರಣೆ.

ಅದೇ ಛಾಪು ಮುಂದೆ ಯಾರೇ ಅಧ್ಯಕ್ಷರಾದರೂ ಉಳಿಯಿತು. ಚಂದ್ರಶೇಖರ ಪಾಟೀಲರು ಅಧ್ಯಕ್ಷರಾಗಿದ್ದಾಗ ಕೂಡ ಅನೇಕ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಅಲ್ಲಿ ಇದ್ದ ಇಂಗ್ಲಿಷ್ ಬೆರಳಚ್ಚು ಯಂತ್ರಗಳನ್ನು ಮತ್ತು ಮೊಹರುಗಳನ್ನು ವಶಪಡಿಸಿಕೊಂಡು ಹೋಗುತ್ತಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಎಲ್ಲ ಸರ್ಕಾರಗಳು ಎಷ್ಟು ಮಹತ್ವ ಕೊಟ್ಟಿದ್ದವು ಮತ್ತು ಈಗಲೂ ಕೊಟ್ಟಿವೆ ಎಂದರೆ ಪಾಟೀಲರು ಅಧ್ಯಕ್ಷರಾಗಿದ್ದಾಗ ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿತ್ತು.

ಆದರೆ, ಆಗಿನ ಕನ್ನಡ ಸಂಸ್ಕೃತಿ ಖಾತೆಯ ಸಚಿವರು ರಾಜ್ಯ ದರ್ಜೆ ಸಚಿವರಾಗಿದ್ದರು. ಈಗಲೂ ಪ್ರಾಧಿಕಾರದ ಅಧ್ಯಕ್ಷರಿಗೆ ಸಂಪುಟ ದರ್ಜೆಯ ಸ್ಥಾನಮಾನವೇ ಇದೆ. ಇದರ ಹಿಂದಿನ ಆಶಯ ಮುಖ್ಯವಾಗಿ ಜನರ ಭಾಷೆಯಲ್ಲಿಯೇ ಆಡಳಿತ ನಡೆಯಬೇಕು ಮತ್ತು ಅದಕ್ಕೆ ಪೂರಕವಾದ ವ್ಯವಸ್ಥೆಯನ್ನು ಪ್ರಾಧಿಕಾರ ಮಾಡಬೇಕು ಎನ್ನುವುದೇ ಆಗಿತ್ತು. ಪ್ರಾಧಿಕಾರದ ಕೆಲಸಗಳಿಗೆ ಸುದ್ದಿ ಮಾಧ್ಯಮಗಳಲ್ಲಿ ಸಿಕ್ಕ ಪ್ರಚಾರ ಕೂಡ ಈ ಆಶಯಕ್ಕೆ ಪೂರಕವಾಗಿಯೇ ಇತ್ತು.

ರಾಜ್ಯದಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವವರೆಗೆ ಪ್ರಾಧಿಕಾರಕ್ಕೆ ಸರ್ಕಾರ ಕೊಡುತ್ತಿದ್ದ ಅನುದಾನ ವಾರ್ಷಿಕ ಕೇವಲ ಐದು ಲಕ್ಷ ರೂಪಾಯಿ ಮಾತ್ರ ಆಗಿತ್ತು. ಸಣ್ಣಪುಟ್ಟ ಕೆಲಸಗಳಿಗಾಗಿ ಈ ಹಣವನ್ನು ಖರ್ಚು ಮಾಡಬಹುದಿತ್ತು. ಸಂಬಳ, ಸಾರಿಗೆಯ ಖರ್ಚು ವೆಚ್ಚಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯೇ ನೋಡಿಕೊಳ್ಳುತ್ತಿತ್ತು.

ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಿದ್ದಂತೆಯೇ ಪ್ರಾಧಿಕಾರದ ಅದೃಷ್ಟ ಖುಲಾಯಿಸಿತು. ಕಳೆದ ನಾಲ್ಕು ಮುಂಗಡಪತ್ರಗಳಲ್ಲಿ ಪ್ರಾಧಿಕಾರಕ್ಕೆ ವಾರ್ಷಿಕ ಐದು ಕೋಟಿ ರೂಪಾಯಿಗಳ ಹಾಗೆ ಅನುದಾನ ಸಿಕ್ಕಿದೆ. ಒಂದು ವರ್ಷ ಆರು ಕೋಟಿ ರೂಪಾಯಿ ಅನುದಾನ ಸಿಕ್ಕಿತ್ತು. ಪ್ರಾಧಿಕಾರ ಈಗ ದಿಕ್ಕು ತಪ್ಪಿದವರಂತೆ ವರ್ತಿಸುತ್ತಿರುವುದಕ್ಕೆ ಅನುದಾನ ಹೀಗೆ ಇದ್ದಕ್ಕಿದ್ದಂತೆ ಐದು ನೂರು ಪಟ್ಟು ಹೆಚ್ಚಾಗಿದ್ದು ಕಾರಣ ಎನಿಸುತ್ತದೆ. ಸಿಕ್ಕ ಅನುದಾನವನ್ನು ಖರ್ಚು ಮಾಡಬೇಕು. ಮಾಡಲು ಸೂಕ್ತ ದಾರಿಗಳು ಇರಲಿಲ್ಲ.

ಕಳೆದ ನಾಲ್ಕು ವರ್ಷಗಳಲ್ಲಿ ಪ್ರಾಧಿಕಾರದ ಅಧ್ಯಕ್ಷರು ಸರ್ಕಾರದ ಕಚೇರಿಗಳಿಗೆ ಹೋಗಿ ಆಡಳಿತದಲ್ಲಿ ಕನ್ನಡ ಎಷ್ಟರ ಮಟ್ಟಿಗೆ ಜಾರಿಯಾಗಿದೆ ಎಂದು ತಪಾಸಣೆ ಮಾಡಿದ್ದು, ಜಾರಿ ಮಾಡದ ಅಧಿಕಾರಿಗಳ ವಿರುದ್ಧ ಸರ್ಕಾರಕ್ಕೆ ಶಿಫಾರಸು ಮಾಡಿ ಸುದ್ದಿ ಆಗಿದ್ದು ಯಾರಿಗೂ ನೆನಪಿಲ್ಲ. ಬರಗೂರು ರಾಮಚಂದ್ರಪ್ಪ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಮೊದಲ ಬಾರಿಗೆ 18 ಜನ ಐಎಎಸ್ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದರು. ಅವರೆಲ್ಲ ಪ್ರಾಧಿಕಾರಕ್ಕೆ ಸಮಜಾಯಿಷಿಯನ್ನೂ ಕೊಟ್ಟಿದ್ದರು.

ಹಾಗೆ ನೋಡಿದರೆ ಕನ್ನಡವನ್ನು ಜಾರಿಗೆ ತರದ ಅಧಿಕಾರಿಗಳ ವಿರುದ್ಧ ಏನು ಶಿಸ್ತುಕ್ರಮ ತೆಗೆದುಕೊಳ್ಳಬಹುದು ಎಂಬುದರ ಬಗ್ಗೆ ಸರ್ಕಾರವು ಬರಗೂರರು ಅಧ್ಯಕ್ಷರಾಗಿದ್ದ ಕಾಲದಲ್ಲಿಯೇ ವಿವರಣೆ ನೀಡಿತ್ತು. ಅಲ್ಲಿಯವರೆಗೆ `ಕ್ರಮಕ್ಕೆ ಶಿಫಾರಸು ಮಾಡುವುದು' ಎಂಬ ಮಗುಂ ವಾಕ್ಯ ಮಾತ್ರ ನಿಯಮದಲ್ಲಿ ಇತ್ತು. ಕನ್ನಡವನ್ನು ಆಡಳಿತದಲ್ಲಿ ಸರಿಯಾಗಿ ಜಾರಿಗೆ ತರದೇ ಇದ್ದರೆ ತನ್ನ ವಿರುದ್ಧ ಕ್ರಮಕ್ಕೆ ಕನಿಷ್ಠ ಶಿಫಾರಸು ಹೋಗಬಹುದು ಎಂಬ ಹೆದರಿಕೆ ಕೂಡ ಈಗ ಅಧಿಕಾರಿಗಳಲ್ಲಿ ಇದ್ದಂತೆ ಕಾಣುವುದಿಲ್ಲ.

ಅವರ ಅದೃಷ್ಟಕ್ಕೆ ಪ್ರಾಧಿಕಾರದ ಗಮನ ಗಡಿನಾಡನಲ್ಲಿ ಜನಪದ ಸಮ್ಮೇಳನ ನಡೆಸುವ ಕಡೆಗೆ, ಶಾಸ್ತ್ರೀಯ ಭಾಷೆಯಾಗಿ ಕನ್ನಡ ಕುರಿತು ವಿಚಾರ ಸಂಕಿರಣ ನಡೆಸುವ ಕಡೆಗೆ, ಕನ್ನಡ ನುಡಿ ತೇರು ಎಂದು ಯಾತ್ರೆ ನಡೆಸುವ ಕಡೆಗೆ ಮತ್ತು ಇದನ್ನೆಲ್ಲ ಮೀರಿ ದೆಹಲಿಗೆ ಸಾಹಿತಿಗಳ, `ಸಮಾಜ ಸೇವಕ'ರ ನಿಯೋಗ ತೆಗೆದುಕೊಂಡು ಹೋಗುವುದರ ಕಡೆಗೆ ಹರಿದಿದೆ. ಆಡಳಿತದಲ್ಲಿ ಕನ್ನಡ ಎಷ್ಟರ ಮಟ್ಟಿಗೆ ಜಾರಿಯಾಗಿದೆ ಎಂದು ನೋಡಲು ಅದೇ ಕೆಲಸಕ್ಕೆ ರಚಿತವಾದ ಪ್ರಾಧಿಕಾರಕ್ಕೇ ವ್ಯವಧಾನ ಇಲ್ಲ ಎನ್ನುವುದಾದರೆ ಅಧಿಕಾರಿಗಳಿಗೆ ಏಕೆ ಶ್ರದ್ಧೆ ಇರುತ್ತದೆ? ಮೊನ್ನೆ ನಾನು ಪ್ರಾದೇಶಿಕ ಸಾರಿಗೆ ಕಚೇರಿಗೆ ಹೋಗಿದ್ದೆ.

ನನ್ನ ಡ್ರೈವಿಂಗ್ ಲೈಸೆನ್ಸ್ ಕಳೆದು ಹೋಗಿತ್ತು. ಪೊಲೀಸ್ ಠಾಣೆಗೆ ದೂರು ಕೊಟ್ಟು ಅವರು ಕೊಟ್ಟ ರಸೀತಿಯನ್ನು ಲಗತ್ತಿಸಿ ಸಂಬಂಧಪಟ್ಟ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಬಳಿ ಅರ್ಜಿ ಹಿಡಿದುಕೊಂಡು ಹೋದೆ. ಅವರು, `ಲೈಸೆನ್ಸ್ ಕಳೆದುಕೊಂಡು ಬಿಟ್ಟಿರೇನ್ರೀ' ಎಂದು ಜಬರಿಸುವಂತೆ ಕೇಳಿ `ಗೆಟ್ ಅಫಿಡೆವಿಟ್' ಎಂದು ಇಂಗ್ಲಿಷ್ನಲ್ಲಿ ಬರೆದು ಅರ್ಜಿಯನ್ನು ವಾಪಸು ಕೊಟ್ಟರು.

ಅವರು ಇನ್ನಷ್ಟು ಮೆಲುದನಿಯಲ್ಲಿ ಮಾತನಾಡಬಹುದಿತ್ತಲ್ಲ ಎಂದು ನಾನು ಅಂದುಕೊಳ್ಳಲಿಲ್ಲ. ಏಕೆಂದರೆ ಅಧಿಕಾರಿಗಳು ಜಬರಿಸಿಯೇ, ಮುಖ ಗಂಟು ಹಾಕಿಕೊಂಡೇ ಅಲ್ಲವೆ ಮಾತನಾಡಬೇಕಾದುದು? ಆದರೆ, `ಪ್ರಮಾಣಪತ್ರ ಸಲ್ಲಿಸಿ' ಎಂದು ಕನ್ನಡದಲ್ಲಿ ಸುಲಭವಾಗಿ ಬರೆಯಬಹುದಿತ್ತಲ್ಲ ಎಂದು ಅಂದುಕೊಂಡೆ. ಯಾರಿಗೆ ಹೇಳುವುದು? ಎರಡು ಶಬ್ದಗಳನ್ನು ಕನ್ನಡದಲ್ಲಿ ಬರೆಯುವುದಕ್ಕೂ ಅಧಿಕಾರಿಗಳಿಗೆ ಮನಸ್ಸು ಇಲ್ಲದೇ ಇರುವಾಗ ಆಡಳಿತದಲ್ಲಿ ಕನ್ನಡ ಶೇ 90ರಷ್ಟು, 95ರಷ್ಟು ಜಾರಿಗೆ ಬಂದಿದೆ ಎಂದು ಹೇಳುವುದರಲ್ಲಿ ಏನು ಅರ್ಥವಿದೆ?

ಆಡಳಿತದಲ್ಲಿ ಕನ್ನಡವನ್ನು ಜಾರಿಗೆ ತರುವುದು ಒಂದು ಬಗೆ. ಆ ಕನ್ನಡ ಅರ್ಥವಾಗುವಂತೆ ಇರುವುದು ಇನ್ನೊಂದು ಬಗೆ. ಹಾಗೆ ಅರ್ಥವಾಗುವಂಥ ಕನ್ನಡದಲ್ಲಿ ನಮ್ಮ ಆಡಳಿತ ಜಾರಿಗೆ ಬಂದಿದೆಯೇ? ಸರ್ಕಾರದ ಕನ್ನಡವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಮೂಲ ಇಂಗ್ಲಿಷ್ ಪ್ರತಿಯನ್ನು ನೋಡಬೇಕಾಗುತ್ತದೆ! ಹಾಗಾದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಏನು ಮಾಡುತ್ತಿದೆ? ಸರ್ಕಾರದ ಆಡಳಿತ ಬಹುತೇಕ ಕಂಪ್ಯೂಟರ್ಮಯವಾಗಿದೆ. ಅನೇಕ ಕಚೇರಿಗಳು ಕಾಗದ ರಹಿತ ಕಚೇರಿಗಳು ಆಗುತ್ತಿವೆ. ಈಗ ಅಲ್ಲದಿದ್ದರೂ ಇನ್ನು ಕೆಲವು ವರ್ಷಗಳಲ್ಲಿ ಅದು ಸಂಪುರ್ಣವಾಗಿ ಸಾಧ್ಯವಾಗುತ್ತದೆ.

ಹಾಗಾದರೆ ಅದಕ್ಕೆ ಅಗತ್ಯವಾದ ತಂತ್ರಾಂಶ ಸಿದ್ಧವಾಗಿದೆಯೇ? ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡ ತಂತ್ರಾಂಶ ಅಭಿವೃದ್ಧಿಗೆ ಒಂದು ಸಮಿತಿ ರಚಿಸಿತ್ತು. ಆ ಸಮಿತಿ ತನ್ನ ವರದಿಯನ್ನೂ ಕೊಟ್ಟಿದೆ. ಇದು ಸರ್ಕಾರಿ ಆಡಳಿತದಲ್ಲಿ ಬಳಕೆ ಮಾಡಲೂ ಉಪಯುಕ್ತವಾದ ಒಂದು ತಂತ್ರಾಂಶ. ಆದರೆ, ಅದನ್ನು ಅನುಷ್ಠಾನದಲ್ಲಿ ತರಲು ಇನ್ನೂ ಯಾವ ಪ್ರಯತ್ನವೂ ನಡೆದಂತೆ ಕಾಣುವುದಿಲ್ಲ. ಒಳ್ಳೆಯ ಕೆಲಸಕ್ಕೆ ನೂರೆಂಟು ಅಡಚಣೆ. ಅದನ್ನು ಜಾರಿಗೆ ತರುವಂತೆ ಚಂದ್ರಶೇಖರ ಕಂಬಾರರು ಮಾತ್ರ ಅವಕಾಶ ಸಿಕ್ಕಾಗಲೆಲ್ಲ ದನಿ ಎತ್ತುತ್ತಿದ್ದಾರೆ. ಅವರದು ಒಂಟಿದನಿ.

ಅಧಿಕಾರ ಎಂಬುದು ಒಂದು ಅವಕಾಶ. ಒಂದು ಸುಸಂಧಿ. ರಂಗಭೂಮಿಯ ನಟರಾಗಿ ಪ್ರಖ್ಯಾತರಾದ `ಮುಖ್ಯಮಂತ್ರಿ' ಚಂದ್ರು ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಕೆಲಸ ಮಾಡುವ ಭಾಗ್ಯ ಸಿಕ್ಕಿದೆ. ಆದರೆ, ಅವರು ಮತ್ತು ಪ್ರಾಧಿಕಾರದ ಇತರ ಸದಸ್ಯರು ಮೂಲ ಉದ್ದೇಶಗಳನ್ನೇ ಮರೆತಂತೆ ಕಾಣುತ್ತದೆ. ಇಲ್ಲವಾದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ವಿವಿಧ ಅಕಾಡೆಮಿಗಳು ಮಾಡುವ ಕೆಲಸವನ್ನು ಪ್ರಾಧಿಕಾರವೂ ಮಾಡುತ್ತಿರಲಿಲ್ಲ.

ರಾಷ್ಟ್ರೀಯ ಜಲನೀತಿಯನ್ನು ರೂಪಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಧಾನಿಗೆ ಮನವಿ ಕೊಡುವುದಂತೂ ಅತಿರೇಕ ಎನ್ನುವಂಥ ಕೆಲಸ. ನಿಜ, ಕನ್ನಡ ಎಂದರೆ ನಾಡು, ನುಡಿ, ನೀರು ಎಲ್ಲದಕ್ಕೂ ಸಂಬಂಧಪಟ್ಟುದು. ಆದರೆ, ಪ್ರಾಧಿಕಾರಕ್ಕೆ ಏನು ಕೆಲಸ ಮಾಡಬೇಕು ಎಂದು ಸರ್ಕಾರ ಗೊತ್ತುಪಡಿಸಿದೆಯಲ್ಲ? ಕರ್ನಾಟಕದ ಮುಖ್ಯಮಂತ್ರಿಗಳಿಗೆ, ಜಲಸಂಪನ್ಮೂಲ ಸಚಿವರಿಗೆ ಹೊಳೆಯದ್ದನ್ನು ಅಥವಾ ಅವರು ಮಾಡಲಾಗದ್ದನ್ನು ತಾನು ಮಾಡುತ್ತಿದ್ದೇನೆ ಎಂದು `ಮುಖ್ಯಮಂತ್ರಿ' ಚಂದ್ರು ಹೇಳಲು ಹೊರಟಿದ್ದಾರೆಯೇ? ಅವರಿಗೆ ಆ ಉದ್ದೇಶ ಇದೆಯೋ ಇಲ್ಲವೋ ಗೊತ್ತಿಲ್ಲ.

ಆದರೆ, ಅವರ ಕ್ರಿಯೆ ಅಂಥ ಒಂದು ಅರ್ಥವನ್ನು ಧ್ವನಿಸುತ್ತದೆ. ಅವರು ಮತ್ತೆ ಮತ್ತೆ ವಿದೇಶ ಪ್ರವಾಸ ಮಾಡುತ್ತಿರುವುದು, ಅಲ್ಲಿನ ಕನ್ನಡ ಸಂಘ ಸಂಸ್ಥೆಗಳಿಗೆ ಕೊಡುಗೈ ದಾನಶೂರತನ ತೋರಿಸುತ್ತಿರುವುದು ಇಂಥದೇ ಇನ್ನೊಂದು ಅತಿರೇಕದ ಕೆಲಸ. ಮನೆಗೆದ್ದು ಮಾರು ಗೆಲ್ಲಬೇಕು ಎಂಬ ಮಾತು ಇದೆ. `ಮುಖ್ಯಮಂತ್ರಿ' ಚಂದ್ರು ಇನ್ನೂ ತಮ್ಮ ಮನೆಯನ್ನೇ ಗೆದ್ದಿಲ್ಲ. ಮಾರು ಹೇಗೆ ಗೆಲ್ಲುತ್ತಾರೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.