ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಕ್ರವನ್ನು ಮತ್ತೆ ಕಂಡುಹಿಡಿಯುವ ಕೆಲಸವನ್ನು ಕೈಬಿಟ್ಟಿದೆ. ಸ್ವತಂತ್ರ ಮತ್ತು ಮುಕ್ತ ತಂತ್ರಾಂಶದ ಆಂದೋಲನದಲ್ಲಿ ಸಕ್ರಿಯವಾಗಿರುವ ಬಳಗದ ಪ್ರಯತ್ನ ಸರ್ಕಾರದ ಕಣ್ಣು ತೆರೆಸಿದೆ. ಫೆಬ್ರುವರಿ 7ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿಗಳು ಇಲ್ಲಿಯ ತನಕ ಕನ್ನಡ ಓಸಿಆರ್ (ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ ಅಥವಾ ಮುದ್ರಿತ ಅಕ್ಷರಗಳನ್ನು ಕಂಪ್ಯೂಟರ್ ಅರ್ಥ ಮಾಡಿಕೊಳ್ಳಬಲ್ಲ, ಕಂಪ್ಯೂಟರಿನಲ್ಲಿ ಸಂಪಾದಿಸಲು ಸಾಧ್ಯವಿರುವ ಪಠ್ಯವಾಗಿ ಪರಿವರ್ತಿಸುವ ಕ್ರಿಯೆ) ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಎಲ್ಲರನ್ನೂ ಕರೆದು ಪ್ರತಿಯೊಂದು ತಂತ್ರಾಂಶವನ್ನೂ ತಂತ್ರಜ್ಞರು, ಭಾಷಾ ತಜ್ಞರ ಸಮ್ಮುಖದಲ್ಲಿ ಮುಕ್ತ ಪರಿಶೀಲನೆ ನಡೆಸಿತು. ಅದರ ಜೊತೆಗೆ, ಈ ಹಿಂದೆ ಓಸಿಆರ್ ಹಾಗೂ ಇತರ ತಂತ್ರಾಂಶಗಳಿಗಾಗಿ ಕರೆದಿದ್ದ ಟೆಂಡರ್ ಅನ್ನು ಹಿಂದೆಗೆದುಕೊಂಡಿರುವುದಾಗಿಯೂ ಪ್ರಕಟಿಸಿತು.

ಸಾಮಾನ್ಯವಾಗಿ ಸರ್ಕಾರಿ ಕೆಂಪು ಪಟ್ಟಿಯೊಳಗೆ ಪ್ರತಿಭಟನೆಗಳು ಹೂತು ಹೋಗುವುದೇ ಹೆಚ್ಚು. ಆದರೆ ಕನ್ನಡ ಸಂಸ್ಕೃತಿ ಇಲಾಖೆ ಮತ್ತು ತಂತ್ರಾಂಶ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಭಿನ್ನಮತವನ್ನು ರಚನಾತ್ಮಕವಾಗಿ ಸ್ವೀಕರಿಸಿದ್ದರಿಂದ ಕನ್ನಡ ಓಸಿಆರ್ ಅಭಿವೃದ್ಧಿಗೆ ಸಂಬಂಧಿಸಿದಂತೆ ಈ ತನಕ ನಡೆದಿರುವ ಪ್ರಯತ್ನಗಳ ಚಿತ್ರಣವೊಂದು ಲಭಿಸಿತು. ಸರ್ಕಾರಿ ಸಂಪನ್ಮೂಲ ಬಳಸಿ ನಡೆದಿರುವ ಸಂಶೋಧನೆಗಳು, ಸಮುದಾಯದ ಪಾಲ್ಗೊಳ್ಳುವಿಕೆಯೊಂದಿಗೆ ನಡೆದಿರುವ ಪ್ರಯತ್ನ ಹಾಗೂ ಖಾಸಗಿ ಪ್ರಯತ್ನಗಳೆಲ್ಲವೂ ಈ ಸಭೆಯಲ್ಲಿ ಅನಾವರಣಗೊಂಡವು. ಅತ್ಯುತ್ತಮ ಎನ್ನಬಹುದಾದ ಖಾಸಗಿ ಪ್ರಯತ್ನಗಳ ಜೊತೆಯಲ್ಲೇ ತೃಪ್ತಿಕರ ಮಟ್ಟದಲ್ಲಿರುವ ಸಾಮುದಾಯಿಕ ಪಾಲ್ಗೊಳ್ಳುವಿಕೆಯ ಅಭಿವೃದ್ಧಿಯ ಪ್ರಯತ್ನವೂ ಇದೆ ಎಂಬುದು ಎಲ್ಲರಿಗೂ ತಿಳಿಯಿತು. ಅಷ್ಟೇ ಅಲ್ಲ ಕೇಂದ್ರ ಸರ್ಕಾರದ ಟಿಡಿಐಎಲ್ ಯೋಜನೆಯ (ಭಾರತೀಯ ಭಾಷೆಗಳಿಗಾಗಿ ತಂತ್ರಜ್ಞಾನ ಅಭಿವೃದ್ಧಿ) ನೆರವು ಪಡೆದು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಅಭಿವೃದ್ಧಿ ಪಡಿಸಿರುವ ಓಸಿಆರ್ ಹೇಗಿದೆ ಎಂಬುದು ಬಹುಶಃ ಇದೇ ಮೊದಲ ಬಾರಿಗೆ ಕ್ಷೇತ್ರದ ಆಸಕ್ತರಿಗೆ ತಿಳಿಯಿತು. ಆದರೆ, ಈ ತಂತ್ರಾಂಶದ ಆಕರ ಸಂಕೇತಗಳನ್ನು ಮುಕ್ತವಾಗಿ ಬಿಡುಗಡೆ ಮಾಡಲು ಐಐಎಸ್‌ಸಿಯ ಪ್ರತಿನಿಧಿಗಳು ನಿರಾಕರಿಸಿದರು ಎಂಬುದನ್ನು ಈ ಸಭೆಯನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ ‘ಮಿತ್ರಮಾಧ್ಯಮ’ದ (http://goo.gl/nYrT22) ಬೇಳೂರು ಸುದರ್ಶನ ತಮ್ಮ ಜಾಲತಾಣದಲ್ಲಿ ದಾಖಲಿಸಿದ್ದಾರೆ.

ಐಐಎಸ್‌ಸಿಯ ನಿಲುವು ಸರ್ಕಾರದ ಸಂಪೂರ್ಣ ನೆರವಿನೊಂದಿಗೆ ಕಾರ್ಯನಿರ್ವಹಿಸುತ್ತಿರುವ ಐಐಎಸ್‌ಸಿಯಂಥ ಸಂಸ್ಥೆಯ ಸಂಶೋಧನೆಗಳ ಫಲ ಯಾರಿಗೆ ದೊರೆಯಬೇಕು ಎಂಬ ಪ್ರಶ್ನೆಗೆ ಕಾರಣವಾಗುತ್ತದೆ. ಭಾರತೀಯ ಭಾಷೆಗಳಿಗೆ ತಂತ್ರಜ್ಞಾನ ಅಭಿವೃದ್ಧಿ ಪಡಿಸುವ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರ ಒದಗಿಸಿದ ಸಂಪನ್ಮೂಲದಿಂದ ಓಸಿಆರ್ ಸಿದ್ಧವಾಗಿದೆ. ಅಂದರೆ ಇದು ಜನ ಬಳಕೆಗೆ ಮುಕ್ತವಾಗಿ ಲಭ್ಯವಾಗಬೇಕು ಎಂಬುದು ಸಾಮಾನ್ಯ ತರ್ಕಕ್ಕೆ ಸಿಗುವ ವಾದ. ಆದರೆ ಐಐಎಸ್‌ಸಿಯ ವಿದ್ವಾಂಸರು ಹೇಳುವಂತೆ ಇದನ್ನು ಮುಕ್ತವಾಗಿರಿಸಿದರೆ ದೊಡ್ಡ ಸಂಸ್ಥೆಗಳು ಇದನ್ನು ದುರುಪಯೋಗಪಡಿಸಿಕೊಳ್ಳಬಹುದಂತೆ. ಅದಕ್ಕಾಗಿ ಈ ತಂತ್ರಾಂಶವನ್ನು ಖಾಸಗಿಯವರ ಮೂಲಕ ಜನರ ಬಳಕೆಗೆ ಬಿಡುಗಡೆ ಮಾಡುತ್ತಾರಂತೆ. ತರ್ಕಕ್ಕೆ ಈ ವಾದವನ್ನು ಒಪ್ಪಿಕೊಂಡರೂ ಮತ್ತೊಂದು ಸಮಸ್ಯೆ ಉದ್ಭವಿಸುತ್ತದೆ. ಮುಕ್ತವಾಗಿರಿಸಿದರೆ ದೊಡ್ಡ ಸಂಸ್ಥೆಗಳು ದುರುಪಯೋಗಪಡಿಸಿಕೊಳ್ಳುತ್ತವೆ. ಖಾಸಗಿ ಸಂಸ್ಥೆಯೊಂದರ ಮೂಲಕ ಬಿಡುಗಡೆ ಮಾಡಿದರೆ ಆ ಸಂಸ್ಥೆ ಇದನ್ನು ದುರುಪಯೋಗ ಪಡಿಸಿಕೊಳ್ಳುವುದಿಲ್ಲ ಎನ್ನುವುದಕ್ಕೆ ಏನು ಖಾತರಿ? ಇಷ್ಟಕ್ಕೂ ಈ ಉತ್ಪನ್ನಕ್ಕೆ ಭಾರೀ ವಾಣಿಜ್ಯ ಬೇಡಿಕೆ ಇದೆ ಎಂದಾದರೆ ಅದನ್ನಾದರೂ ರಚನಾತ್ಮಕವಾಗಿ ಬಳಸಿಕೊಳ್ಳುವ ಪ್ರಯತ್ನವನ್ನು ಐಐಎಸ್‌ಸಿ ಯಾಕೆ ಮಾಡಲಿಲ್ಲ ಎಂಬ ಪ್ರಶ್ನೆಯೂ ಇಲ್ಲಿ ಪ್ರಸ್ತುತವಾಗುತ್ತದೆ. ಇಷ್ಟಕ್ಕೂ ಈ ತಂತ್ರಾಂಶ ಸಿದ್ಧಗೊಂಡು ಹಲವಾರು ವರ್ಷಗಳೇ ಉರುಳಿದವು. ಇಲ್ಲಿಯ ತನಕವೂ ಇದು ಬೆಳಕು ಕಾಣದೇ ಇರುವ ಸ್ಥಿತಿಯನ್ನು ಹೇಗೆಂದು ಅರ್ಥೈಸುವುದು?

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳ ದೊಡ್ಡ ಕೆಲಸಗಳನ್ನು ಮಾಡುತ್ತಿರುವ ಐಐಟಿ, ಐಐಎಸ್‌ಸಿಯಂಥ ಸಂಸ್ಥೆಗಳು ಭಾರತೀಯ ಭಾಷೆಗಳ ತಂತ್ರಜ್ಞಾನದಂಥ ವಿಚಾರಕ್ಕೆ ಬಂದಾಗ ಯಾವ ರೀತಿಯ ನಿಲುವು ತಳೆಯುತ್ತವೆ ಎಂಬುದನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಅಗತ್ಯವಿದೆ. ಕಂಪ್ಯೂಟರ್ ಮತ್ತು ಭಾರತೀಯ ಭಾಷೆಗಳಿಗೆ ಸಂಬಂಧಿಸಿದಂತೆ ಈ ಸಂಸ್ಥೆಗಳಲ್ಲಿ ನಡೆಯುತ್ತಿರುವ ಸಂಶೋಧನೆಗಳ ಪ್ರಮಾಣವೇನೂ ಸಣ್ಣದಲ್ಲ. ಹಾಗೆಯೇ ಭಾರತೀಯವಾದ ಕಂಪ್ಯೂಟಿಂಗ್ಗಾಗಿಯೇ ಸ್ಥಾಪಿತವಾಗಿರುವ ಸಿ-ಡಾಕ್ (CDAC) ಕೂಡಾ ಭಾರತೀಯ ಭಾಷೆಗಳ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಅನೇಕ ಕೆಲಸಗಳನ್ನು ಮಾಡಿದೆ ಎಂಬುದು ಅದರ ವಾರ್ಷಿಕ ವರದಿಗಳಲ್ಲಿ ಕಾಣಸಿಗುತ್ತದೆ. ಈ ಸಂಸ್ಥೆ ಕೂಡಾ ‘ಚಿತ್ರಾಂಕಣ’ ಎಂದು ಓಸಿಆರ್ ಅಭಿವೃದ್ಧಿ ಪಡಿಸಿತ್ತು ಎಂಬ ಮಾಹಿತಿಯನ್ನು ಬೇಳೂರು ಸುದರ್ಶನ ಪಾತಾಳ ಗರಡಿ ಹಾಕಿ ಹೊರತೆಗೆದಿದ್ದಾರೆ. ಭಾರತೀಯ ಭಾಷೆಗಳಿಗೆ ಸಮಗ್ರವಾದ ಒಂದು ಓಸಿಆರ್ ಅಭಿವೃದ್ಧಿ ಪಡಿಸುವುದಕ್ಕೆ ವಿವಿಧ ಸಂಸ್ಥೆಗಳ ಮತ್ತು ತಜ್ಞರ ಕೂಟವೊಂದನ್ನು ರೂಪಿಸಿರುವುದು ಮತ್ತು ಅದು ಮಾಡಿದ ‘ಅತ್ಯುತ್ತಮ’ ಕೆಲಸದಿಂದ ಸಂತೋಷಗೊಂಡು ಅದರ ಎರಡನೇ ಹಂತದ ಕೆಲಸಕ್ಕೆ ಹಣಕಾಸನ್ನು ಮಂಜೂರು ಮಾಡಿರುವ ಸಂಗತಿ ಕೂಡಾ ಸಿ-ಡಾಕ್‌ನ 2010-11ರ ವಾರ್ಷಿಕ ವರದಿ ಹೇಳುತ್ತದೆ.

2000ನೇ ಇಸವಿಯಿಂದಲೇ ದಕ್ಷಿಣ ಭಾರತದ ಭಾಷೆಗಳ ಓಸಿಆರ್‌ಗಾಗಿ ಕೆಲಸ ನಡೆಯುತ್ತಿರುವುದನ್ನು ಐಐಎಸ್‌ಸಿಯ ಮೆಡಿಕಲ್ ಇಂಟೆಲಿಜೆನ್ಸ್ ಮತ್ತು ಲಾಂಗ್ವೇಜ್ ಎಂಜಿನಿಯರಿಂಗ್ ಲ್ಯಾಬೊರೇಟರಿಯ ಜಾಲತಾಣದಲ್ಲಿರುವ ವಿವರಗಳು ಸೂಚಿಸುತ್ತಿವೆ. ಈ ಮಧ್ಯೆ ತಮಿಳು ಮತ್ತು ಕನ್ನಡದ ಮುದ್ರಿತ ಅಕ್ಷರಗಳನ್ನು ಪಠ್ಯವಾಗಿ ಪರಿವರ್ತಿಸುವ ಯೋಜನೆ, ಕೈಬರಹವನ್ನು ಕಂಪ್ಯೂಟರ್ ಗುರುತಿಸುವಂತೆ ಮಾಡುವ ಯೋಜನೆಗಳ ವಿವರಗಳೆಲ್ಲಾ ಇಲ್ಲಿವೆ. ಇವುಗಳ ಮುಖ್ಯ ಸಂಶೋಧಕ, ಸಹ ಸಂಶೋಧಕನಾಗಿ ಕೆಲಸ ಮಾಡಿದ್ದವರ ಹೆಸರುಗಳ ಅಡಿಯಲ್ಲಿ ಈ ವಿವರಗಳು ಲಭ್ಯವಿವೆ. ಆದರೆ ಈ ಸಂಶೋಧನೆಗಳ ಫಲಿತಾಂಶವೇನು? ಇದರಿಂದ ಕನ್ನಡ ಬಿಡಿ; ಯಾವುದಾದರೂ ಒಂದು ಭಾರತೀಯ ಭಾಷೆಗಾದರೂ ಏನಾದರೂ ಅನುಕೂಲವಾಗಿದೆಯೇ? ಯಾವುದಾದರೂ ಜನಬಳಕೆಗೆ ಸಾಧ್ಯವಿರುವ ಉತ್ಪನ್ನ ಹೊರಬಂದಿದೆಯೇ? ಎಂಬ ಪ್ರಶ್ನೆಗಳನ್ನು ಮುಂದಿಟ್ಟುಕೊಂಡರೆ ಸಿಗುವ ಉತ್ತರ ಬಹುತೇಕ ಶೂನ್ಯ.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆಯುವ ಎಲ್ಲಾ ಸಂಶೋಧನೆಗಳೂ ಏನಾದರೊಂದು ಉತ್ಪನ್ನವಾಗಿಯೇ ಜನರೆದುರು ಬರಬೇಕೆಂದಿಲ್ಲ. ಅದು ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದ ಒಟ್ಟು ಬೆಳವಣಿಗೆಯಲ್ಲಿ ತನ್ನದೇ ಆದ ರೀತಿಯ ಕಾಣಿಕೆಯನ್ನು ನೀಡಬಹುದು. ಆದರೆ ನಿರ್ದಿಷ್ಟ ಉದ್ದೇಶಕ್ಕಾಗಿಯೇ ಒಂದು ಸಂಶೋಧನೆಯನ್ನು ಕೈಗೆತ್ತಿಕೊಂಡು ಜನಸಾಮಾನ್ಯನ ತೆರಿಗೆಯ ಹಣವನ್ನು ವ್ಯಯಿಸಿದಾಗ ಅದರ ಫಲಿತಾಂಶವೇನು ಎಂಬುದನ್ನು ಸಾರ್ವಜನಿಕವಾಗಿ ಪ್ರಕಟಿಸುವುದು ಈ ಸಂಸ್ಥೆಗಳ ಜವಾಬ್ದಾರಿಯಲ್ಲವೇ?

ಕನ್ನಡವೂ ಸೇರಿದಂತೆ ಅನೇಕ ಭಾರತೀಯ ಭಾಷೆಗಳು ಅಂತಾರಾಷ್ಟ್ರೀಯ ಶಿಷ್ಟತೆಯಾದ ಯೂನಿಕೋಡ್‌ನ ಪರಿಧಿಯೊಳಗೆ ಬಂದು ಎರಡೂವರೆ ದಶಕಗಳೇ ದಾಟಿ ಹೋದವು. ತೊಂಬತ್ತರ ದಶಕದ ಆರಂಭದಲ್ಲಿಯೇ ಯೂನಿಕೋಡ್ ಶಿಷ್ಟತೆಯ ಮೊದಲ ಆವೃತ್ತಿ ಪ್ರಕಟವಾಗಿತ್ತು. ಅದರಲ್ಲಿ ಕನ್ನಡವೂ ಒಳಗೊಂಡಿತ್ತು. ಆದರೆ, ಇದು ಕನ್ನಡವನ್ನು ಕಂಪ್ಯೂಟರಿನಲ್ಲಿ ಬಳಸುತ್ತಿರುವ ಸ್ವತಂತ್ರ ತಜ್ಞರಿಗೆ ತಿಳಿಯುವುದಕ್ಕೇ ಹತ್ತು ವರ್ಷ ಬೇಕಾಯಿತು. ಅದಕ್ಕೂ ಮೊದಲು ಈ ವಿವರ ಖಂಡಿತವಾಗಿಯೂ ಸಿ-ಡಾಕ್, ಐಐಎಸ್‌ಸಿ, ಐಐಟಿಗಳಿಗಂತೂ ಮೊದಲೇ ತಿಳಿದಿರುವ ಸಾಧ್ಯತೆ ಇತ್ತು. ಆದರೆ, ಇಲ್ಲಿರುವ ವಿದ್ವಾಂಸರು ತಮ್ಮ ವಿದ್ವತ್ ಪ್ರಕಟಣೆಗಳಿಗಾಗಿ ಭಾರತೀಯ ಭಾಷೆಗಳ ಮೇಲಿನ ಸಂಶೋಧನೆಯನ್ನು ಬಳಸಿಕೊಂಡರೇ ಹೊರತು ಈ ಭಾಷೆಗಳನ್ನು ತಂತ್ರಜ್ಞಾನದ ಕ್ಷೇತ್ರದಲ್ಲಿ ಪ್ರಸ್ತುತವಾಗಿಸುವುದಕ್ಕೆ ಬೇಕಿರುವ ಗಂಭೀರ ಪ್ರಯತ್ನಗಳನ್ನು ಮಾಡಲಿಲ್ಲ ಎಂದು ಭಾವಿಸಬೇಕಾಗುತ್ತದೆ. ಬಹುಶಃ ಈ ಬಗೆಯ ಸಂಸ್ಥೆಗಳಿಂದ ಸರ್ಕಾರಕ್ಕೆ ಸರಿಯಾದ ಮಾಹಿತಿ ತಲುಪಿದ್ದರೆ ಭಾರತೀಯ ಭಾಷೆಗಳ ಕಂಪ್ಯೂಟಿಂಗ್ ಈಗಿರುವುದಕ್ಕಿಂತ ಎಷ್ಟೋ ಮುಂದಕ್ಕೆ ಸಾಗುವ ಎಲ್ಲಾ ಸಾಧ್ಯತೆಗಳೂ ಇದ್ದವು.

ಇನ್ನು ಪೇಟೆಂಟ್ ಮತ್ತು ಹಕ್ಕು ಸ್ವಾಮ್ಯಕ್ಕೆ ಸಂಬಂಧಿಸಿದಂತೆ ಸರ್ಕಾರಿ ಸ್ವಾಮ್ಯದ ಸಂಶೋಧನಾ ಸಂಸ್ಥೆಗಳಿಗೆ ಸ್ಪಷ್ಟವಾದ ಮತ್ತು ಜನಪರವಾದ ನೀತಿಯೊಂದು ಇರಬೇಕಾದುದು ಅಗತ್ಯ. ಚಕ್ರವನ್ನು ಕಂಡುಹಿಡಿದಾತ ಅದಕ್ಕೆ ಶಾಶ್ವತವಾದ ಪೇಟೆಂಟ್ ಪಡೆದಿದ್ದರೆ ಏನಾಗಬಹುದಿತ್ತು ಎಂದು ಯೋಚಿಸಿದರೆ ಇದು ಅರ್ಥವಾಗುತ್ತದೆ. ಹಾಗೆಂದು ಸಂಶೋಧಕನಿಗೆ ಯಾವುದೇ ರೀತಿಯ ಲಾಭ ಇರಬಾರದು ಎಂದುಕೊಳ್ಳಬೇಕಾಗಿಲ್ಲ. ತಂತ್ರಾಂಶ ಕ್ಷೇತ್ರದಲ್ಲಿ ಉತ್ಪನ್ನದಿಂದ ದೊರೆಯುವ ಪ್ರತಿಫಲಕ್ಕಿಂತ ಅದರ ನಿರ್ವಹಣೆ ಮತ್ತು ಸೇವೆಗಳಲ್ಲಿ ಹೆಚ್ಚಿನ ಪ್ರತಿಫಲವಿದೆ. ಗೂಗಲ್‌ನಂಥ ಸಂಸ್ಥೆ ಆಂಡ್ರಾಯ್ಡ್ ತಂತ್ರಾಂಶವನ್ನು ನಿರ್ವಹಿಸುತ್ತಿರುವುದರ ಹಿಂದಿನ ವಾಣಿಜ್ಯ ತರ್ಕ ಇದುವೇ. ಸರ್ಕಾರಿ ಸಂಶೋಧನಾ ಸಂಸ್ಥೆಗಳೂ ಇಂಥದ್ದೊಂದು ಮಧ್ಯಮ ಮಾರ್ಗವನ್ನು ಆರಿಸಿಕೊಳ್ಳಬೇಕಾಗಿದೆ. ತಮ್ಮ ಸಂಶೋಧನೆಗಳನ್ನು ಮುಕ್ತವಾಗಿಟ್ಟುಕೊಂಡೇ ಅವು ವಾಣಿಜ್ಯಿಕವಾಗಿಯೂ ಲಾಭ ತರುವಂತೆ ನೋಡಿಕೊಳ್ಳಬಹುದು. ಇದಕ್ಕೆ ಬೇಕಿರುವುದು ಮುಕ್ತ ಮತ್ತು ಸೃಜನಶೀಲ ಮನಸ್ಸು ಮಾತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.