ಮಾವೊವಾದಿಗಳು ಮತ್ತು ಉಗ್ರರು ಯಾಕೆ ಗಾಂಧಿಯವರ ಅಹಿಂಸೆಯ ಪ್ರತಿಪಾದನೆ ಓದಬೇಕು?

ಕಳೆದ ವರ್ಷದ ಬಹುಭಾಗವನ್ನು ಗಾಂಧೀಜಿ ಕೃತಿಗಳ ಸಂಗ್ರಹವನ್ನು ಓದಲು ವ್ಯಯ ಮಾಡಿದ್ದೇನೆ. ಇದು ಕಠಿಣ ಶ್ರಮದ ಕೆಲಸವಾದರೂ ಖುಷಿ ಕೊಡುವಂತಹುದು. ಗಾಂಧಿ ಬರೆದ ವಿಚಾರಗಳ ವೈವಿಧ್ಯ, ಚಿಂತನೆ ಮತ್ತು ಅವರ ಗದ್ಯದ ಸ್ಪಷ್ಟತೆ ಇದಕ್ಕೆ ಕಾರಣ. ಗಾಂಧಿ ಅವರ ಕೆಲವು ಚಿಂತನೆಗಳು ಆ ಕಾಲ ಮತ್ತು ಸ್ಥಳಕ್ಕೆ ಸೇರಿದ್ದು, ಇತಿಹಾಸಕಾರರು ಮತ್ತು ಜೀವನ ಚರಿತ್ರೆ ಬರೆಯುವವವರಿಗಷ್ಟೇ ಅವು ಪ್ರಸ್ತುತ. ಆದರೆ ಗಾಂಧಿ ಬರೆದಿರುವ ಇತರ ಹಲವು ವಿಚಾರಗಳು ಇನ್ನೂ ದೀರ್ಘ ಕಾಲ ಪ್ರಸ್ತುತ ಅನಿಸಿಕೊಳ್ಳುತ್ತವೆ.

1930ರಲ್ಲಿ ಗಾಂಧಿ ಅವರ ನಿಯತಕಾಲಿಕ ‘ಯಂಗ್ ಇಂಡಿಯಾ’ದ ಮೊದಲ ಸಂಚಿಕೆಯಲ್ಲಿ ಇಂತಹ ಒಂದು ‘ಕಾಲಾತೀತ’ ಲೇಖನ ಪ್ರಕಟವಾಗಿತ್ತು. ಅದರ ಶೀರ್ಷಿಕೆ ‘ದ ಕಲ್ಟ್ ಆಫ್ ದ ಬಾಂಬ್’. 1928 ಮತ್ತು 29ರಲ್ಲಿ ಬ್ರಿಟಿಷ್ ಅಧಿಕಾರಿಗಳ ಹತ್ಯೆಗೆ ಸರಣಿ ಪ್ರಯತ್ನಗಳು ನಡೆದವು. ಇದರಲ್ಲಿ ಅತ್ಯಂತ ಗಂಭೀರವಾದ ಪ್ರಯತ್ನ 1929ರ ಡಿಸೆಂಬರ್ 23ರಂದು ನಡೆಯಿತು. ವೈಸ್ರಾಯ್ ಲಾರ್ಡ್ ಇರ್ವಿನ್ ಅವರು ಸಂಚರಿಸುತ್ತಿದ್ದ ವಿಶೇಷ ರೈಲಿಗೆ ಬಾಂಬ್ ಇಡಲಾಯಿತು. ಇದು ನವದೆಹಲಿಯ ಹೊರಭಾಗದಲ್ಲಿಯೇ ನಡೆಯಿತು. ಸ್ಫೋಟದ ಕಾರಣಕ್ಕೆ ಎರಡು ಬೋಗಿಗಳು ರೈಲಿನಿಂದ ಬೇರ್ಪಟ್ಟವು. ವೈಸ್ರಾಯ್ ಯಾವುದೇ ಗಾಯ ಕೂಡ ಇಲ್ಲದೆ ಬಚಾವಾದರು.

ಗಾಂಧಿ ಮತ್ತು ಇತರ ರಾಷ್ಟ್ರೀಯವಾದಿಗಳನ್ನು ಭೇಟಿಯಾಗಲು ಇರ್ವಿನ್ ಅವರು ನವದೆಹಲಿಗೆ ಬರುತ್ತಿದ್ದರು. ಅದೇ ಸಂಜೆ ಗಾಂಧಿ ಮತ್ತು ಇರ್ವಿನ್ ಭೇಟಿಯಾದಾಗ, ವೈಸ್ರಾಯ್ ಹತ್ಯೆ ಯತ್ನದ ಬಗ್ಗೆ ಗಾಂಧಿ ಆಘಾತ ವ್ಯಕ್ತಪಡಿಸಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ವಾರ್ಷಿಕ ಸಭೆಯಲ್ಲಿ ಭಾಗವಹಿಸಲು ಅಲ್ಲಿಂದ ಗಾಂಧಿ ಲಾಹೋರ್ಗೆ ಹೋದರು. ಅದೇ ಏಪ್ರಿಲ್ನಲ್ಲಿ ನವದೆಹಲಿಯಲ್ಲಿ ಕೇಂದ್ರ ಶಾಸನಸಭೆಯ ಮೇಲೆ ಬಾಂಬ್ ದಾಳಿ ನಡೆಸಿದ ಪ್ರಕರಣದಲ್ಲಿ ಜೈಲು ಸೇರಿದ್ದ ಭಗತ್ ಸಿಂಗ್ ಅವರ ತವರು ಲಾಹೋರ್. ಭಗತ್ ಸಿಂಗ್ ಮತ್ತು ಇತರ ಹಲವು ಪಂಜಾಬಿ ಕ್ರಾಂತಿಕಾರಿಗಳು ಸದಸ್ಯರಾಗಿದ್ದ ಹಿಂದೂಸ್ತಾನ್ ರಿಪಬ್ಲಿಕನ್ ಸೋಷಿಯಲಿಸ್ಟ್ ಅಸೋಸಿಯೇಷನ್ನ (ಎಚ್ಎಸ್ಆರ್ಎ) ಭದ್ರಕೋಟೆಯಾಗಿತ್ತು ಲಾಹೋರ್.

‘ಮುಗ್ಧ ಜನರ ಮೇಲೆ ಬಾಂಬ್ ಎಸೆದು ಸ್ಫೋಟಿಸುವ ಮೂಲಕ ಎಂದೂ ಸ್ವಾತಂತ್ರ್ಯ ಪಡೆಯುವುದು ಸಾಧ್ಯವಿಲ್ಲ. ಇದು ಅತ್ಯಂತ ಹೀನ ಅಪರಾಧ ಎಂದೇ ನಾನು ಭಾವಿಸುತ್ತೇನೆ’ ಎಂದು ಲಾಹೋರ್ನಲ್ಲಿ ಗಾಂಧಿ ಹೇಳಿದರು. ನಂತರ ಅಲ್ಲಿಂದ ಅಹಮದಾಬಾದ್ನ ತಮ್ಮ ಆಶ್ರಮಕ್ಕೆ ರೈಲಿನಲ್ಲಿ ಹಿಂದಿರುಗುವಾಗ ‘ದ ಕಲ್ಟ್ ಆಫ್ ದ ಬಾಂಬ್’ ಲೇಖನವನ್ನು ಅವರು ಬರೆದರು. ಭಾರತದ ಮೇಲೆ ಇತ್ತೀಚೆಗೆ ನಡೆದ ಭಯೋತ್ಪಾದನಾ ದಾಳಿಗಳ ಸಂದರ್ಭದಲ್ಲಿ ಅಹಿಂಸೆಯ ಮಹತ್ವದ ಪ್ರತಿಪಾದನೆ ಅಥವಾ ಮರು ಪ್ರತಿಪಾದನೆ ಇದು ಎಂದು ಪರಿಗಣಿಸಬಹುದು. ಲೇಖನವನ್ನು ಗಾಂಧಿ ಹೀಗೆ ಆರಂಭಿಸುತ್ತಾರೆ:

‘ನಮ್ಮ ಸುತ್ತಲಿನ ಪ್ರದೇಶದಲ್ಲಿ ಎಷ್ಟೊಂದು ಹಿಂಸೆ ಇದೆ ಎಂದರೆ, ರಾಜಕೀಯವಾಗಿ ಜಾಗೃತವಾಗಿರುವ ಭಾರತದ ಪ್ರದೇಶಗಳಲ್ಲಿ ಅಲ್ಲೊಂದು ಇಲ್ಲೊಂದು ಬಾಂಬ್ ಎಸೆಯಲಾಗುತ್ತದೆ. ಇದು ಆತಂಕ ಸೃಷ್ಟಿಸಿದೆ. ಬಹುಶಃ ಕೆಲವರ ಹೃದಯದಲ್ಲಿ ಇದು ಖುಷಿಯನ್ನು ಸೃಷ್ಟಿಸಿರಬಹುದು’. ಭಾರತದಾದ್ಯಂತ ನಡೆಸಿದ ಪ್ರವಾಸದಲ್ಲಿ ತಾವು ಕಂಡುಕೊಂಡ ಅಂಶವೆಂದರೆ, ‘ತಾವು ಪಡೆಯುವ ಸ್ವಾತಂತ್ರ್ಯ ಹಿಂಸೆಯಿಂದ ಕಳಂಕಗೊಂಡಿರಬಾರದು ಎಂಬ ಜಾಗೃತಿ ದೊಡ್ಡ ಸಂಖ್ಯೆಯ ಜನರಲ್ಲಿ ಮೂಡಿದೆ’ ಎಂದು ಗಾಂಧಿ ಬರೆಯುತ್ತಾರೆ. ಅಹಿಂಸೆಯ ಬಗ್ಗೆ ತಮಗೆ ಇದ್ದ ಅಚಲ ನಂಬಿಕೆಯಿಂದಾಗಿಯೇ ಗಾಂಧಿ ಹೀಗೆ ಹೇಳುತ್ತಾರೆ: ‘ಹಿಂಸೆಯ ಬಗ್ಗೆ ಹೇವರಿಕೆ ಉಂಟಾಗದವರು ನಮ್ಮ ಅರ್ಥಕ್ಕೆ ನಿಲುಕುವುದಿಲ್ಲ’.

ನಂತರ, ಸ್ವಾತಂತ್ರ್ಯ ಹೋರಾಟಗಾರರು ಹಿಂಸೆಗೆ ಇಳಿಯುವುದರ ವಿರುದ್ಧ ಗಾಂಧಿ ನೈತಿಕ ಎನ್ನುವುದಕ್ಕಿಂತ ಹೆಚ್ಚಾಗಿ ಪ್ರಾಯೋಗಿಕವಾದ ಎರಡು ಪ್ರಮುಖ ವಾದಗಳನ್ನು ಮುಂದಿಡುತ್ತಾರೆ. ಮೊದಲನೆಯದಾಗಿ, ಇದು ಸರ್ಕಾರ ಇನ್ನಷ್ಟು ದಮನಕಾರಿಯಾಗಲು ಕಾರಣವಾಗುತ್ತದೆ. ಹೀಗಾಗಿ, ‘ಪ್ರತಿ ಬಾರಿ ಹಿಂಸೆ ಉಂಟಾದಾಗಲೂ ನಮಗೆ ಅಪಾರ ನಷ್ಟವಾಗಿದೆ...’ ಎರಡನೆಯದಾಗಿ, ಹಿಂಸೆಯ ಸಂಸ್ಕೃತಿ ಅಥವಾ ಪ್ರವೃತ್ತಿ ಅಂತಿಮವಾಗಿ, ಅದನ್ನು ಸೃಷ್ಟಿಸುವ ಸಮಾಜದ ವಿರುದ್ಧವೇ ತಿರುಗುತ್ತದೆ.

‘ವಿದೇಶಿ ಆಡಳಿತಗಾರರ ವಿರುದ್ಧದ ಹಿಂಸೆ, ನಂತರ ದೇಶದ ಪ್ರಗತಿಗೆ ಅಡ್ಡಿಯಾಗುತ್ತಾರೆ ಎಂದು ಪರಿಗಣಿಸಲಾಗುವ ನಮ್ಮದೇ ಜನರ ವಿರುದ್ಧದ ಸಹಜ, ಸುಲಭ ಕ್ರಮವಾಗಿಬಿಡುತ್ತದೆ’. ಹಾಗಾಗಿಯೇ ಗಾಂಧಿ ಹೀಗೆ ಹೇಳುತ್ತಾರೆ: ‘ನಮ್ಮ ಪ್ರಗತಿಗೆ ತಡೆಯಾಗಿರುವ ಹಲವು ಅನಾಚಾರಗಳಿಂದ ಸಮಾಜವನ್ನು ಬಿಡಿಸುವುದಕ್ಕಾಗಿ ನಾವು ಹಿಂಸೆಯ ಮೊರೆ ಹೋದರೆ, ಆ ಮೂಲಕ ನಾವು ನಮ್ಮ ಕಷ್ಟಗಳನ್ನು ಹೆಚ್ಚಿಸುವುದಲ್ಲದೆ ಬೇರೇನನ್ನೂ ಮಾಡುವುದಿಲ್ಲ ಮತ್ತು ನಮ್ಮ ಸ್ವಾತಂತ್ರ್ಯದ ದಿನವನ್ನು ಮುಂದೂಡುತ್ತಲೇ ಹೋಗುತ್ತೇವೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ದೊಡ್ಡ ಬೌದ್ಧಿಕ ಪ್ರಯತ್ನವೇನೂ ಬೇಕಾಗಿಲ್ಲ’.

ಹಿಂಸೆಯ ಮೂಲಕ ಇಂಗ್ಲಿಷರನ್ನು ಹೊರಗಟ್ಟುವ ಪ್ರಯತ್ನದ ಬಗ್ಗೆ ಗಾಂಧಿ ಅವರ ಅಭಿಪ್ರಾಯ ಹೀಗಿದೆ: ‘ಇದು ಸ್ವಾತಂತ್ರ್ಯದತ್ತ ನಮ್ಮನ್ನು ಮುನ್ನಡೆಸುವ ಬದಲಿಗೆ ಸಂಪೂರ್ಣ ಗೊಂದಲಕ್ಕೆ ಕಾರಣವಾಗುತ್ತದೆ. ನಮ್ಮ ಮಿದುಳು ಮತ್ತು ಹೃದಯವನ್ನು ಹೊಂದಾಣಿಕೆ ಮಾಡಿಕೊಂಡು ಭಿನ್ನಾಭಿಪ್ರಾಯಗಳನ್ನು ಸರಿಪಡಿಸುವ ಮೂಲಕ, ನಮ್ಮೊಳಗೆ ಸಾವಯವ ಒಗ್ಗಟ್ಟನ್ನು ರೂಪಿಸಿಕೊಳ್ಳುವ ಮೂಲಕ ಮಾತ್ರ ನಾವು ಸ್ವಾತಂತ್ರ್ಯವನ್ನು ಹೊಂದಬಹುದು. ನಮ್ಮ ಮುನ್ನಡೆಗೆ ತಡೆಯಾಗುತ್ತಿದ್ದಾರೆ ಎಂದು ನಾವು ಕಲ್ಪಿಸಿಕೊಳ್ಳುವವರಲ್ಲಿ ಭಯ ಹುಟ್ಟಿಸಿ ಅಥವಾ ಅವರನ್ನು ಕೊಂದು ಸ್ವಾತಂತ್ರ್ಯ ಪಡೆದುಕೊಳ್ಳುವುದು ಸಾಧ್ಯವಿಲ್ಲ. ಸಹನೆ ಮತ್ತು ಮೃದುತ್ವದ ಮೂಲಕ ವಿರೋಧಿಯನ್ನು ಪರಿವರ್ತಿಸುವುದರ ಮೂಲಕವಷ್ಟೇ ಇದು ಸಾಧ್ಯ’.

‘ಬಾಂಬ್ ಸಂಸ್ಕೃತಿ’ಗೆ ಪರ್ಯಾಯವಾಗಿ ಗಾಂಧಿ ಅಹಿಂಸೆಯ ನೈತಿಕತೆ ಅಗತ್ಯವಾಗಿರುವ ಸಾಮೂಹಿಕ ಅಸಹಕಾರ ಚಳವಳಿಯನ್ನು ಮುಂದಿಡುತ್ತಾರೆ. ಹಿಂಸೆಯಲ್ಲಿ ಭಾಗಿ ಆಗಿಲ್ಲದವರು ಇತ್ತೀಚಿನ ಬಾಂಬ್ ದಾಳಿಗಳನ್ನು ಬಹಿರಂಗವಾಗಿ ಖಂಡಿಸುವಂತೆ ಕರೆ ನೀಡುವ ಮೂಲಕ ಲೇಖನವನ್ನು ಗಾಂಧಿ ಮುಕ್ತಾಯಗೊಳಿಸುತ್ತಾರೆ. ‘ಈ ಮೂಲಕ ಭ್ರಮಾಧೀನರಾಗಿರುವ ಮತ್ತು ತಮ್ಮೊಳಗಿನ ಹಿಂಸಾ ಪ್ರವೃತ್ತಿಗೆ ಇನ್ನಷ್ಟು ಪೋಷಣೆ ಬಯಸುವ ರಾಷ್ಟ್ರಭಕ್ತರು ಹಿಂಸೆಯ ನಿರರ್ಥಕತೆಯನ್ನು ಅರಿಯುತ್ತಾರೆ ಮತ್ತು ಪ್ರತಿ ಬಾರಿಯೂ ಹಿಂಸೆಯಿಂದಾಗಿರುವ ಅಪಾರ ಹಾನಿಯನ್ನು ತಿಳಿದುಕೊಳ್ಳುತ್ತಾರೆ’.

ಪಂಜಾಬ್ನ ಕೆಲವು ಆಕ್ರಾಂತ ಯುವಕರು ಗಾಂಧೀಜಿ ಲೇಖನವನ್ನು ಓದಿ, ಅದಕ್ಕೊಂದು ಸಂಘರ್ಷಾತ್ಮಕವಾದ ಪ್ರತಿಕ್ರಿಯೆಯನ್ನು ಸಿದ್ಧಪಡಿಸುತ್ತಾರೆ. ಅದನ್ನು ಕರಪತ್ರವಾಗಿ ಮುದ್ರಿಸಿ ಸಬರಮತಿ ಆಶ್ರಮಕ್ಕೆ ಕಳುಹಿಸುತ್ತಾರೆ. ಕ್ರಾಂತಿಕಾರಿ ನಂಬಿಕೆಯ ಪ್ರಬಲ ಆವಾಹನೆಯೊಂದಿಗೆ ಕರಪತ್ರ ಆರಂಭವಾಗುತ್ತದೆ. ಅಧಿಕಾರವನ್ನು ವಶಕ್ಕೆ ಪಡೆದಿರುವ ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟದ ಮೂಲಕ ಮಾತ್ರ ಸ್ವಾತಂತ್ರ್ಯ ಸಾಧ್ಯ ಎಂದು ಕರಪತ್ರ ಪ್ರತಿಪಾದಿಸುತ್ತದೆ.

‘ಯುವಕರ ಅಸಂತೃಪ್ತಿಯಲ್ಲಿ ಕ್ರಾಂತಿ ಈಗಾಗಲೇ ಜನ್ಮ ತಾಳಿದೆ’ ಎಂಬುದು ಅವರ ಅಭಿಪ್ರಾಯವಾಗಿತ್ತು. ‘ಸ್ವಾತಂತ್ರ್ಯದ ಅದಮ್ಯ ಬಯಕೆ’ ಬೆಳೆದಂತೆ ‘ಆಕ್ರೋಶಿತ ಯುವಕರು ದಮನಕಾರರನ್ನು ಕೊಲ್ಲಲು ಆರಂಭಿಸುತ್ತಾರೆ’. ಸಶಸ್ತ್ರ ಹೋರಾಟ ‘ದಮನಕಾರರ ಮನದಲ್ಲಿ ಭೀತಿಯನ್ನು ಬಿತ್ತುತ್ತದೆ, ಇದು ಪ್ರತೀಕಾರದ ಭರವಸೆ ತುಂಬುತ್ತದೆ ಮತ್ತು ದಮನಕ್ಕೊಳಗಾದ ಜನರಿಗೆ ಮುಕ್ತಿ ನೀಡುತ್ತದೆ, ನಡುಗುತ್ತಿರುವವರಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬುತ್ತದೆ, ಆಡಳಿತ ವರ್ಗದ ಮೇಲರಿಮೆಯನ್ನು ಚಿಂದಿಯಾಗಿಸುತ್ತದೆ ಮತ್ತು ಆಳ್ವಿಕೆಗೊಳಗಾಗಿರುವ ಜನಾಂಗದ ಸ್ಥಾನವನ್ನು ಜಾಗತಿಕವಾಗಿ ಹೆಚ್ಚಿಸುತ್ತದೆ...’ ಎಂದು ಕರಪತ್ರದಲ್ಲಿ ಬರೆಯಲಾಗಿತ್ತು.

ಗಾಂಧಿ ಮತ್ತು ಅವರ ನಂಬಿಕೆಯ ಬಗ್ಗೆ ಕರಪತ್ರ ಹೀಗೆ ಹೇಳಿತ್ತು: ‘ಸಾರ್ವಜನಿಕ ವೇದಿಕೆಯ ಮೇಲೆ ನಿಂತು ಜನರನ್ನು ನೋಡುವ ಮತ್ತು ಅವರಿಗೆ ದರ್ಶನ ಮತ್ತು ಉಪದೇಶ ನೀಡುವ ಯಾವುದೇ ವ್ಯಕ್ತಿ ತಮಗೆ ಜನರ ಮನಸ್ಸು ತಿಳಿದಿದೆ ಎಂದು ಹೇಳುವುದಕ್ಕೆ ಸಾಧ್ಯ ಇಲ್ಲ... ಇತ್ತೀಚಿನ ವರ್ಷಗಳಲ್ಲಿ ಗಾಂಧಿ ಎಂದಾದರೂ ಜನರ ಜೀವನದಲ್ಲಿ ಬೆರೆತಿದ್ದಾರೆಯೇ? ಸಂಜೆಯ ಹೊತ್ತು ಬೆಂಕಿ ಹಾಕಿಕೊಂಡು ಅದರ ಸಮೀಪ ಕೂರುವ ರೈತನೊಂದಿಗೆ ಕುಳಿತು ಆತ ಏನು ಯೋಚನೆ ಮಾಡುತ್ತಿದ್ದಾನೆ ಎಂದು ಅರಿಯಲು ಗಾಂಧಿ ಯತ್ನಿಸಿದ್ದಾರೆಯೇ?

ಒಂದೇ ಒಂದು ಸಂಜೆ ಕಾರ್ಖಾನೆಯ ಕಾರ್ಮಿಕನ ಜತೆ ಕುಳಿತು ತಮ್ಮ ಪ್ರತಿಜ್ಞೆಗಳನ್ನು ಆತನೊಂದಿಗೆ ಹಂಚಿಕೊಂಡಿದ್ದಾರೆಯೇ?’ ಈ ಆರೋಪಗಳಿಗೆ ಯಾವುದೇ ಆಧಾರ ಇರಲಿಲ್ಲ. ದಕ್ಷಿಣ ಆಫ್ರಿಕಾದಲ್ಲಿದ್ದ ಎಲ್ಲ ವರ್ಗಗಳ ಭಾರತೀಯರೊಂದಿಗೆ ಇಪ್ಪತ್ತಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವ ಗಾಂಧಿಗಿತ್ತು. ಇಡೀ ಹದಿನೈದು ವರ್ಷ ಭಾರತದಾದ್ಯಂತ ಸಂಚರಿಸಿದ್ದರು ಮತ್ತು ಭಾರತೀಯರೊಂದಿಗೆ ಕೆಲಸ ಮಾಡಿದ್ದರು. ಹಾಗೆ ನೋಡಿದರೆ, ಗಾಂಧಿ ಭಾರತದಲ್ಲಿ ನಡೆಸಿದ ಮೊದಲ ಹೋರಾಟವೇ ಚಂಪಾರಣ್ನ ರೈತರ ಪರ ಮತ್ತು ಅಹಮದಾಬಾದ್ನ ಕಾರ್ಮಿಕರ ಪರ ಆಗಿತ್ತು.

ಜನರು ಹೇಗೆ ಜೀವಿಸುತ್ತಿದ್ದಾರೆ ಮತ್ತು ಏನು ಯೋಚಿಸುತ್ತಿದ್ದಾರೆ ಎಂಬುದು ತಮಗೆ ತಿಳಿದಿದೆ ಎಂದು ಹೇಳಿಕೊಳ್ಳುವುದರಿಂದ ಈ ಯುವಕರನ್ನು ಅವರ ಯೌವನ ಮತ್ತು ಅನನುಭವ ತಡೆಯಲಿಲ್ಲ. ಅವರು ನೋಡಿದಂತೆ, ‘ಸಾಮಾನ್ಯ ಮನುಷ್ಯನಿಗೆ ಅಹಿಂಸೆಯನ್ನು ಪ್ರತಿಪಾದಿಸುವ ಚಂದದ ಧಾರ್ಮಿಕ ತತ್ವಗಳು ಮತ್ತು ಶತ್ರುವನ್ನೂ ಪ್ರೀತಿಸುವ ಪರಿಕಲ್ಪನೆ ಅಲ್ಪಸ್ವಲ್ಪವೂ ಅರ್ಥವಾಗಿಲ್ಲ. ಜಗತ್ತು ಇರುವುದೇ ಹೀಗೆ. ನಿಮಗೊಬ್ಬ ಗೆಳೆಯ ಇದ್ದರೆ ಆತನಿಗಾಗಿ ನೀವು ಸಾಯಲೂ ಸಿದ್ಧರಾಗುತ್ತೀರಿ. ನಿಮಗೊಬ್ಬ ಶತ್ರು ಇದ್ದರೆ ಆತನ ವಿರುದ್ಧ ಹೋರಾಡುತ್ತೀರಿ ಮತ್ತು ಸಾಧ್ಯವಾದರೆ ಆತನನ್ನು ಕೊಲ್ಲಲು ಯತ್ನಿಸುತ್ತೀರಿ.

ಆದಂನ ಕಾಲದಿಂದಲೇ ಇದು ನಡೆದುಕೊಂಡು ಬಂದಿದೆ. ಇದನ್ನು ಅರ್ಥ ಮಾಡಿಕೊಳ್ಳಲು ಯಾವ ವ್ಯಕ್ತಿಗೂ ಕಷ್ಟವಾಗುವುದಿಲ್ಲ. ಜನರು ನಮ್ಮೊಂದಿಗೆ ಗಟ್ಟಿಯಾಗಿ ನಿಂತಿದ್ದಾರೆ ಎಂಬುದನ್ನು ಅನುಭವದಿಂದ ನಾವು ಕಂಡುಕೊಂಡಿದ್ದೇವೆ. ಕ್ರಾಂತಿಗಾಗಿ ಅವರು ಸಾವಿರಗಟ್ಟಲೆಯಲ್ಲಿ ಒಟ್ಟಾಗಿ ಬರುವ ದಿನಗಳು ದೂರವಿಲ್ಲ’. ಈ ಕರಪತ್ರ ಗಾಂಧಿಯ ಕೈಗೆ ಸಿಕ್ಕಿತ್ತು ಎಂಬುದು ಖಚಿತ. ಯಾಕೆಂದರೆ ಇದು ಅವರ ವೈಯಕ್ತಿಕ ಪತ್ರಗಳ ಪಟ್ಟಿಯಲ್ಲಿ ಇದೆ. ಇಂದಿಗೂ ಈ ಕರಪತ್ರ ನವದೆಹಲಿ ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದಲ್ಲಿ ಇದೆ. ಗಾಂಧಿ ಈ ಕರಪತ್ರವನ್ನು ಓದಿರುತ್ತಾರೆ. ಆದರೆ ಅವರು ಅದಕ್ಕೆ ಪ್ರತಿಕ್ರಿಯೆ ನೀಡಲಿಲ್ಲ.

ಈ ವಿನಿಮಯ ನಡೆದು 86 ವರ್ಷಗಳ ನಂತರ ಅದನ್ನು ಓದುವಾಗ, ತಮ್ಮ ಯುವ ಎದುರಾಳಿಗಳಿಗಿಂತ ಗಾಂಧಿ ಹೆಚ್ಚಿನ ಮುಂಗಾಣ್ಕೆ ಹೊಂದಿದ್ದರು ಎಂದು ಕಾಣುತ್ತದೆ. ಭಾರತದಲ್ಲಿ ಇಂದು ನಡೆಯುತ್ತಿರುವ ಎರಡು ಅತ್ಯಂತ ಪ್ರಮುಖ ಸಶಸ್ತ್ರ ಹೋರಾಟಗಳನ್ನು ನೋಡೋಣ- ಅವುಗಳೆಂದರೆ, ಕಾಶ್ಮೀರದ ಉಗ್ರಗಾಮಿ ಹೋರಾಟ ಮತ್ತು ಮಧ್ಯ ಭಾರತದ ಮಾವೊವಾದಿ ನಕ್ಸಲ್ ಹೋರಾಟ. ಎರಡೂ ಗುಂಪುಗಳು ಹಿಂಸೆ ಎಸಗುತ್ತವೆ ಮತ್ತು ಅದು ಅಗತ್ಯ ಹಾಗೂ ಅನಿವಾರ್ಯ ಎಂದು ನಂಬಿವೆ. ಎರಡೂ ಗುಂಪುಗಳು ಗಾಂಧಿಯವರ ಚಿಂತನೆ ಮತ್ತು ವಿಧಾನದ ಬಗ್ಗೆ ಅಸಡ್ಡೆ ಹೊಂದಿವೆ.

ಉಗ್ರರು ಮತ್ತು ಮಾವೊವಾದಿಗಳಿಬ್ಬರೂ ಜನರ ಅಸಂತೃಪ್ತಿಯನ್ನೇ ಹಿಡಿದುಕೊಂಡು ಹಿಂಸೆಗೆ ಇಳಿದವರು ಎಂಬುದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ಕೇಂದ್ರದ ಎಲ್ಲ ಸರ್ಕಾರಗಳು ಕಾಶ್ಮೀರ ಕಣಿವೆಯ ಜನರ ಬಗ್ಗೆ ನಿರಂತರವಾಗಿ ಅಸಡ್ಡೆ ತೋರಿವೆ. ನಕ್ಸಲರು ಕೆಲಸ ಮಾಡುತ್ತಿರುವ ಛತ್ತೀಸಗಡ, ಜಾರ್ಖಂಡ್, ಆಂಧ್ರ ಪ್ರದೇಶ, ಮಹಾರಾಷ್ಟ್ರಗಳ ಆದಿವಾಸಿಗಳ ಬಗ್ಗೆಯೂ ಇದೇ ಮಾತು ಸತ್ಯ. ಕಾಶ್ಮೀರಿಗಳು ಮತ್ತು ಆದಿವಾಸಿಗಳ ಸಮಸ್ಯೆಗಳು ನೈಜ ಮತ್ತು ವಾಸ್ತವಿಕ. ಆದರೆ ಸಶಸ್ತ್ರ ಹೋರಾಟ ಈ ಸಮಸ್ಯೆಗಳಿಗೆ ಪರಿಹಾರ ನೀಡಿದೆಯೇ? ಸಶಸ್ತ್ರ ಹೋರಾಟದ ಒಂದು ಪರಿಣಾಮವೆಂದರೆ (ಗಾಂಧೀಜಿ ಮುಂಗಾಣ್ಕೆಯಂತೆ), ದಮನಿಸುವಿಕೆ ಹೆಚ್ಚಾಗಿದೆ; ಬಂಡಾಯವನ್ನು ದಮನ ಮಾಡಲು ಸಾವಿರಾರು ಯೋಧರು ಮತ್ತು ಪೊಲೀಸರನ್ನು ಕಳುಹಿಸಲಾಗಿದೆ.

ಎರಡನೇ ಪರಿಣಾಮವೆಂದರೆ, ಗಾಂಧಿಯವರ ಭವಿಷ್ಯದಂತೆ, ಬಂಡಾಯ ಎದ್ದವರು ಸರ್ಕಾರದ ವಿರುದ್ಧ ನಡೆಸುವ ಹಿಂಸೆ ನಂತರ ಅವರ ವಿರುದ್ಧವೇ ತಿರುಗುತ್ತದೆ; ತಮ್ಮ ವಿಧಾನಗಳನ್ನು ಒಪ್ಪಿಕೊಳ್ಳದ ತಮ್ಮದೇ ಜನರನ್ನು ಗುರಿಯಾಗಿಸಿ ಅವರು ಹತ್ಯೆಗಳನ್ನು ನಡೆಸುತ್ತಾರೆ. ಮಾವೊವಾದಿಗಳು ‘ಪೊಲೀಸ್ ಮಾಹಿತಿದಾರರ’ ಕೈಕಾಲು ಕತ್ತರಿಸುವುದು ಅಥವಾ ಕೊಲೆ ಮಾಡಿದರೆ, ಬಾಂಬು ಮತ್ತು ಬಂದೂಕು ಬದಲಿಗೆ ಮಾತುಕತೆ ನಡೆಸಬೇಕು ಎಂಬ ಮನೋಭಾವದವರನ್ನು ಕಾಶ್ಮೀರಿ ಉಗ್ರರು ಕೊಲ್ಲುತ್ತಾರೆ. ಕಾಶ್ಮೀರದಲ್ಲಿ ಉಗ್ರರ ಸಶಸ್ತ್ರ ಹೋರಾಟ 1980ರ ದಶಕದಲ್ಲಿ ಆರಂಭಗೊಂಡಿತು. ಮಾವೊವಾದಿಗಳ ಸಶಸ್ತ್ರ ಹೋರಾಟ ಇನ್ನೂ ಹಿಂದೆ ಅಂದರೆ, 1960ರ ದಶಕದಲ್ಲಿ ಆರಂಭವಾಗಿದೆ. ಎರಡು ಹೋರಾಟಗಳೂ ಯಶಸ್ಸು ಕಂಡಿಲ್ಲ.

ಹೋರಾಟದಿಂದಾಗಿ ಶೋಷಣೆ ಮತ್ತು ತಾರತಮ್ಯ ಕಡಿಮೆಯಾಗಿಲ್ಲ. ಈ ಬಂಡಾಯಗಾರರು ತಮ್ಮ ವಿಧಾನಗಳನ್ನು ಬದಲಿಸಿಕೊಳ್ಳುವ ಕಾಲ ಬಂದಿದೆ ಅಥವಾ ಬಹಳ ಹಿಂದೆಯೇ ಈ ಕೆಲಸವನ್ನು ಅವರು ಮಾಡಬೇಕಿತ್ತು. ಗಾಂಧಿ ಅವರನ್ನು ಓದುವುದು ಈ ನಿಟ್ಟಿನಲ್ಲಿ ಅವರಿಗೆ ನೆರವಾಗಬಹುದು. ಗಾಂಧಿ ಅವರ ಎಲ್ಲ ಕೃತಿಗಳನ್ನು ಅವರು ಓದುವ ಅಗತ್ಯ ಇಲ್ಲ; ಅಹಿಂಸೆಯನ್ನು ತಾತ್ವಿಕವಾಗಿ ಮತ್ತು ರಾಜಕೀಯವಾಗಿ ಪ್ರತಿಪಾದಿಸುವ ಕೆಲವು ಲೇಖನಗಳನ್ನು ಮಾತ್ರ ಓದಿದರೆ ಸಾಕು. ‘ದ ಕಲ್ಟ್ ಆಫ್ ದ ಬಾಂಬ್’, ಓದು ಆರಂಭಿಸಲು ಅತ್ಯುತ್ತಮ ಲೇಖನ.

editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.