ಮಹಾತ್ಮ ಗಾಂಧೀಜಿಯವರ ಸಿದ್ಧಾಂತಗಳನ್ನು ಭಾರತೀಯ ಜನತಾ ಪಕ್ಷ ಗೌರವದಿಂದ ಕಂಡಿರುವುದಕ್ಕೆ ಹೆಚ್ಚಿನ ಪುರಾವೆಗಳೇನೂ ಇಲ್ಲ! ಆದರೆ ಭಾರತದ ಪ್ರಜಾಪ್ರಭುತ್ವದ ಒತ್ತಡಗಳು ಹೇಗಿರುತ್ತವೆಂದರೆ ಗಾಂಧೀಜಿಯನ್ನು ಬಾಯಿಪ್ರಚಾರಕ್ಕಾದರೂ ನೆನೆಯಬೇಕಾದ ಅನಿವಾರ್ಯ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಈಗ ಎದುರಾಗಿದೆ.

ಈ ಸಲ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಗಾಂಧಿ ಜಯಂತಿಯನ್ನು ‘ಸ್ವಚ್ಛತಾ ದಿನ’ವನ್ನಾಗಿ ಆಚರಿಸಲು ಕೇಂದ್ರ ಸರ್ಕಾರ ಕರೆ ನೀಡಿದೆ. ಈ ಕರೆಯಲ್ಲಿರುವ ಸ್ವಚ್ಛತೆಯ ವ್ಯಾಖ್ಯಾನ ಅತ್ಯಂತ ಸೀಮಿತವಾಗಿದೆಯಷ್ಟೇ ಅಲ್ಲ, ಗಾಂಧಿ ಮಾರ್ಗವನ್ನು ವಾಚ್ಯವಾಗಿಸಿ ಶಿಥಿಲಗೊಳಿಸುವ ಗುಪ್ತ ಯೋಜನೆಯೂ ಇದರ ಹಿಂದೆ ಇರುವಂತಿದೆ. ಆಶ್ವಾಸನೆ ಮತ್ತು ನಡವಳಿಕೆಗಳ ನಡುವಣ ಅಂತರವನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಿಕೊಳ್ಳುವುದೇ ವ್ಯಕ್ತಿತ್ವವನ್ನು, ಸಮಾಜವನ್ನು ಸ್ವಚ್ಛಗೊಳಿಸುವ ಹಾದಿ ಎಂಬ ಸರಳ ಸತ್ಯ ನಮ್ಮ ರಾಜಕಾರಣಿಗಳಿಗೆ ತಿಳಿದರೆ ಅವರ ಅನೇಕ ಬೂಟಾಟಿಕೆಗಳು ಕಡಿಮೆಯಾಗುತ್ತವೆ.

ಅದರ ಜೊತೆಗೇ, ಕೊನೆಯ ಪಕ್ಷ ಕಳೆದ 50 ವರ್ಷಗಳಿಂದ ಜಗತ್ತು, ಅದರಲ್ಲೂ ಭಾರತ, ಕಷ್ಟದಲ್ಲಿದ್ದಾಗಲೆಲ್ಲ ಗಾಂಧೀಜಿಯನ್ನು ನೆನೆಸಿಕೊಳ್ಳುತ್ತಲೇ ಇದೆ ಎಂಬ ಸತ್ಯವನ್ನೂ ನಮ್ಮ ನಾಯಕರು ತಿಳಿಯಲಿ. ಗೆರಿಲ್ಲಾ ಯುದ್ಧ ಮಾಡಿ ಸ್ವಾತಂತ್ರ್ಯದ ಗುರಿ ತಲುಪಲಾಗದ ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ಕೊನೆಗೆ ಗಾಂಧಿ ಮಾರ್ಗವನ್ನೇ ಬಳಸಬೇಕಾಯಿತು. ಹಿಂದೊಮ್ಮೆ ದಕ್ಷಿಣ ಆಫ್ರಿಕಾದಲ್ಲಿ ಮೋಹನದಾಸ್ ಗಾಂಧಿ ಕಂಡುಕೊಂಡ ಅಹಿಂಸೆಯ ಸಾತ್ವಿಕ ಶಕ್ತಿಯನ್ನು ಮಂಡೇಲಾ ನಿಧಾನಕ್ಕೆ ಕಂಡುಕೊಂಡರು. ಅದಕ್ಕೂ ಮೊದಲು ಅಮೆರಿಕದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅಮೆರಿಕದ ವರ್ಣಭೇದದ ವಿರುದ್ಧದ ಹೋರಾಟಕ್ಕೆ ಗಾಂಧಿಯಿಂದಲೂ ಪಾಠಗಳನ್ನು ಕಲಿತಿದ್ದರು.

ಹೀಗೆ ಜಗತ್ತಿನ ದೊಡ್ಡ ನಾಯಕರು ಗಾಂಧೀಜಿಯನ್ನು ಹುಡುಕಿಕೊಂಡಂತೆ, ಪ್ರತಿ ವ್ಯಕ್ತಿಯೂ ಒಂದಲ್ಲ ಒಂದು ಹಂತದಲ್ಲಿ ಗಾಂಧೀಜಿಯನ್ನು ಹುಡುಕಿಕೊಳ್ಳಲೇಬೇಕಾಗುತ್ತದೆ. ರಾಮ ಮನೋಹರ ಲೋಹಿಯಾ ಹೇಳಿದ ಒಂದು ಮಾತು ನನಗೆ ಪ್ರತಿದಿನ ಅನುಭವಕ್ಕೆ ಬರುತ್ತಿರುತ್ತದೆ: ‘ವ್ಯಕ್ತಿಯೊಬ್ಬನ ಹಿಂದೆ ವ್ಯಾಪಕ ಜನ ಹಾಗೂ ಸಂಸ್ಥೆಗಳ ಬೆಂಬಲವಿಲ್ಲದಿದ್ದರೂ, ಹೋರಾಡಲು ಯಾವ ಆಯುಧವಿಲ್ಲದಿದ್ದರೂ, ಅನ್ಯಾಯ ಹಾಗೂ ದಬ್ಬಾಳಿಕೆಯ ವಿರುದ್ಧ ಸೆಣಸಲು ಹಾಗೂ ಸಂಕಟವನ್ನು ಗಂಭೀರವಾಗಿ ಸಹಿಸಲು ಪ್ರತಿಯೊಬ್ಬನ ಅಂತರಂಗದಲ್ಲೂ ಏನೋ ಒಂದು ಇದೆ ಎಂಬುದನ್ನು ಗಾಂಧೀಜಿ ತೋರಿಸಿದರು’.

ಆದ್ದರಿಂದಲೇ ಸಾಮಾನ್ಯ ಜನ ಕೂಡ ತಮ್ಮ ಕಷ್ಟದ ಗಳಿಗೆಗಳಲ್ಲಿ ಗಾಂಧೀಜಿಯನ್ನು ಹುಡುಕಿಕೊಳ್ಳುತ್ತಲೇ ಇರುತ್ತಾರೆ. ಈಚೆಗೆ ಬೆಂಗಳೂರಿನ ಬಳಿಯ ಮಂಡೂರಿನ ಹೋರಾಟವನ್ನು ನೀವು ಗಮನಿಸಿರಬಹುದು: ಕಳೆದ ಐದಾರು ವರ್ಷಗಳಿಂದ ಬೆಂಗಳೂರಿನ ಭೀಕರ ಕಸವನ್ನು ತಮ್ಮೂರಿನ ಮೇಲೆ ಸುರಿಸಿಕೊಂಡು ನರಳುತ್ತಿರುವ ಮಂಡೂರಿನ ಜನಕ್ಕೆ ಅದನ್ನು ಪ್ರತಿಭಟಿಸಲು ಗಾಂಧಿ ಮಾರ್ಗ ಬಿಟ್ಟರೆ ಬೇರೆ ಹಾದಿಯೇ ಇರಲಿಲ್ಲ. ಕಸದಲ್ಲೂ ರಾಜಕೀಯ ಮಾಡುವ ರಾಜಕಾರಣಿಗಳು, ಕಂಟ್ರಾಕ್ಟರುಗಳ ದುಷ್ಟಜಾಲದ ಎದುರು ಮಂಡೂರಿನ ಅಸಹಾಯಕ ಜನ ಹಿರಿಯ ಗಾಂಧಿವಾದಿ ಎಚ್.ಎಸ್. ದೊರೆಸ್ವಾಮಿ ಅವರನ್ನು, ಆಮ್ ಆದ್ಮಿ ಪಾರ್ಟಿಯ ರವಿಕೃಷ್ಣಾರೆಡ್ಡಿ ಅವರನ್ನು ಜೊತೆಗಿಟ್ಟುಕೊಂಡು ಹೋರಾಟ ನಡೆಸಿದರು. ಜನಪ್ರತಿನಿಧಿಗಳ ಕಪಟ ಸಂಧಾನಕ್ಕೆ, ಸುಳ್ಳು ಆಶ್ವಾಸನೆಗಳಿಗೆ ಮಂಡೂರಿನ ಜನ ಬಗ್ಗಲಿಲ್ಲ. ಕೊನೆಗೆ, ದೊರೆಸ್ವಾಮಿ ಅವರನ್ನು ಮುಂದಿಟ್ಟುಕೊಂಡು ಸರ್ಕಾರ ಮತ್ತು ಬೆಂಗಳೂರು ಮಹಾನಗರಪಾಲಿಕೆ ಮುಂದಿನ ನವೆಂಬರ್ 30ರ ತನಕ ಗಡುವು ಪಡೆಯಬೇಕಾಯಿತು. ನವೆಂಬರ್ ಕೊನೆಗೆ ಮಂಡೂರಿನಲ್ಲಿ ಕಸ ಸುರಿಯುವುದು ನಿಲ್ಲದಿದ್ದರೆ ರಾಜ್ಯ ಸರ್ಕಾರಕ್ಕೆ ನಿರ್ಣಾಯಕ ಬಿಕ್ಕ–ಟ್ಟೊಂದು ಎದುರಾಗಲಿದೆ.

ಮಂಡೂರಿನ ಜನ ಯಾರಿಗೇ ವೋಟು ಹಾಕಿರಲಿ, ಅವರು ‘ಜನಪ್ರತಿನಿಧಿ’ ಎಂದು ಕೊನೆಗೂ ನಂಬಿದ್ದು ಗಾಂಧೀಜಿಯ ಸ್ಪರ್ಶ ಪಡೆದ ದೊರೆಸ್ವಾಮಿಯವರನ್ನೇ ಹೊರತು ಕಾರ್ಪೊರೇಟರುಗಳನ್ನಾಗಲೀ ಮಂತ್ರಿಗಳನ್ನಾಗಲೀ ಅಲ್ಲ. ಈ ಅಂಶ ‘ಜನಪ್ರತಿನಿಧಿ’ಗಳು ಎಂದುಕೊಳ್ಳುವ ರಾಜಕಾರಣಿಗಳನ್ನು ಜನ ಯಾವ ಕಾರಣಕ್ಕೂ ನಂಬದಂಥ ಸ್ಥಿತಿ ತಲುಪಿರುವುದನ್ನು ಸೂಚಿಸುತ್ತದೆ. ಇಂಥ ಅಪನಂಬಿಕೆಯ ಕಾಲದಲ್ಲೂ ಜನರ ಒಳಗಿರುವ ಸಾತ್ವಿಕ ಪ್ರಜ್ಞೆ ಗಾಂಧೀಜಿಯ ಅನುಯಾಯಿಯೊಬ್ಬರನ್ನು ನಂಬಿಕೆಗೆ ಅರ್ಹರೆಂದು ಗುರುತಿಸಿದ ರೀತಿ ಕಂಡಾದರೂ ಸಾರ್ವಜನಿಕ ಜೀವನದಲ್ಲಿರುವ ಎಲ್ಲರೂ ಆತ್ಮಪರೀಕ್ಷೆ ಮಾಡಿಕೊಳ್ಳಬೇಕು.

ಗಾಂಧೀಜಿಯವರ ವ್ಯಕ್ತಿತ್ವ ಜನರಲ್ಲಿರುವ ಒಳ್ಳೆಯತನವನ್ನು ಹೊರತರುತ್ತಿದ್ದುದನ್ನು ಕುರಿತು ರಾಜಮೋಹನ ಗಾಂಧಿ ‘ಮೋಹನದಾಸ್: ಎ ಟ್ರೂ ಸ್ಟೋರಿ ಆಫ್ ಎ ಮ್ಯಾನ್, ಹಿಸ್ ಪೀಪಲ್ ಅಂಡ್ ಆ್ಯನ್ ಎಂಪೈರ್’ ಪುಸ್ತಕದಲ್ಲಿ ಬರೆಯುತ್ತಾರೆ. ಕಲ್ಕತ್ತಾದ (ಈಗ ಕೋಲ್ಕತ್ತ) ಪ್ರೊಫೆಸರೊಬ್ಬರು ದಾಖಲಿಸಿರುವ ಘಟನೆ ಇದು: ಭಾರತಕ್ಕೆ ಸ್ವಾತಂತ್ರ್ಯ ಬಂದ ವರ್ಷ ಕಲ್ಕತ್ತಾದಲ್ಲಿ ಕೋಮುಹಿಂಸೆಯಲ್ಲಿ ತೊಡಗಿದ್ದವರ ಮನಸ್ಸನ್ನು ಪರಿವರ್ತಿಸಲು ಗಾಂಧೀಜಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರು.

ಆಗ ಕೆಲವು ವಿದ್ಯಾರ್ಥಿಗಳು ತಮಗೆ ಎಷ್ಟೇ ಅಪಾಯಗಳಿದ್ದರೂ ಲೆಕ್ಕಿಸದೆ ಮನೆಗಳಿಂದ, ಹಾದಿಬೀದಿಗಳಿಂದ ಆಯುಧಗಳನ್ನು ತಂದು ಗಾಂಧೀಜಿಯವರ ಮುಂದಿಟ್ಟು ತಾವು ಹಿಂಸೆಯ ಮಾರ್ಗದಿಂದ ದೂರ ಸರಿಯುತ್ತಿದ್ದೇವೆ ಎಂದು ಸೂಚಿಸಿದರು. ಇದಕ್ಕಿಂತ ಮಹತ್ವದ ಪ್ರತಿಕ್ರಿಯೆ ಕಲ್ಕತ್ತಾದ ಮನೆಗಳಲ್ಲಿ ಕಂಡು ಬಂತು. ಕಲ್ಕತ್ತಾದ ಗಂಡಸರು ತಂತಮ್ಮ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಮರಳುವ ಹೊತ್ತಿಗೆ ಎಂದಿನಂತೆ ಅವರ ಊಟ ರೆಡಿಯಾಗಿರುತ್ತಿತ್ತು. ಆದರೆ ಮನೆಯಲ್ಲಿದ್ದ ಮಡದಿಯರು ಇಡೀ ದಿನ ಊಟ ಮಾಡಿದಂತಿರಲಿಲ್ಲ. ‘ಯಾಕೆ?’ ಎಂದು ಆ ಗಂಡಸರು ತಮ್ಮ ಮಡದಿಯರನ್ನು ಕೇಳಿದರೆ ಅವರು ಕೊಟ್ಟ ಉತ್ತರ: ‘ಗಾಂಧೀಜಿ ನಾವು ಮಾಡಿದ ಪಾಪಗಳಿಗಾಗಿ ಸಾಯುತ್ತಿದ್ದಾರೆ; ನಾವು ಹೇಗೆ ಊಟ ಮಾಡಲಿ?’

ಇನ್ನೂ ಮುಗ್ಧತೆಯನ್ನು ಉಳಿಸಿಕೊಂಡಿದ್ದ ಕಲ್ಕತ್ತಾದ ವಿದ್ಯಾರ್ಥಿಗಳು ಹಾಗೂ ಮಹಿಳೆಯರ ಪ್ರತಿಕ್ರಿಯೆ ನಾಯಕನೊಬ್ಬ ಸ್ವಾರ್ಥವಿಲ್ಲದೆ ಜನರಿಗಾಗಿ ಮಿಡಿಯುತ್ತಿರುವುದು ಖಾತ್ರಿಯಾದರೆ ಅವನ ಮಾತನ್ನು ಕೆಲವರಾದರೂ ಕೇಳಿಸಿಕೊಳ್ಳುತ್ತಾರೆ ಎಂಬುದನ್ನೂ ಸೂಚಿಸುತ್ತದೆ. ಈಚೆಗೆ ಈ ಮನಕಲಕುವ ಪ್ರತಿಕ್ರಿಯೆ ಓದಿದ ನಂತರ, ಇತ್ತೀಚಿನ ವರ್ಷಗಳಲ್ಲಿ ನಮ್ಮ ಬಹುತೇಕ ರಾಜಕಾರಣಿಗಳು ಮನುಷ್ಯರೊಳಗಿನ ಈ ಮುಗ್ಧತೆಗೆ ಮನವಿ ಮಾಡಿಕೊಳ್ಳುವ ಸಾಧ್ಯತೆಯನ್ನೇ ನಾಶ ಮಾಡಿದ್ದಾರಲ್ಲ ಎನ್ನಿಸಿ ವ್ಯಥೆಯಾಗತೊಡ-ಗಿತು.

ಮಾನವನೊಳಗಿನ ಮುಗ್ಧತೆ, ದಿಟ್ಟತನ, ಪಾಪಪ್ರಜ್ಞೆ, ಒಳ್ಳೆಯತನ ಹಾಗೂ ಪ್ರತಿಯೊಬ್ಬರಲ್ಲೂ ಅಡಗಿರಬಹುದಾದ ಹೆಣ್ತನವನ್ನು ಗಾಂಧೀಜಿ ಹೊರತರಲೆತ್ನಿಸುತ್ತಿದ್ದರು. ಪುರಾಣಗಳಲ್ಲಿರುವ ‘ಅರ್ಧ ನಾರೀಶ್ವರ’ನ ಸಾಂಕೇತಿಕತೆಯನ್ನು ಪ್ರತಿ ಗಂಡೂ ತಲುಪಬೇಕಾದ ಆದರ್ಶ ಎಂದು ಗಾಂಧಿ ವಿವರಿಸಿಕೊಂಡಿದ್ದನ್ನು ಹಲವರು ಗುರುತಿಸಿದ್ದಾರೆ. ಗಾಂಧೀಜಿಯವರಲ್ಲಿದ್ದ ಈ ಕೋಮಲತೆಯನ್ನು ಲೋಹಿಯಾ ಗುರುತಿಸಿದ ರೀತಿ ಅತ್ಯಂತ ಅರ್ಥಪೂರ್ಣವಾಗಿದೆ: ‘ಹೆಣ್ಣು ಹಾಗೂ ದೇವರು ಇವೆರಡೇ ಪ್ರಾಯಶಃ ಜೀವನದ ಉದ್ದೇಶಗಳು ಎಂದೊಮ್ಮೆ ನಾನು ಹೇಳಿದೆ. ನಾನು ದೇವರನ್ನು ಭೇಟಿಯಾಗಿಲ್ಲ ಹಾಗೂ ಹೆಣ್ಣು ನನಗೆ ಎಟುಕದೇ ಉಳಿದಿದ್ದಾಳೆ. ಆದರೆ ದೇವರು ಹಾಗೂ ಹೆಣ್ಣುಗಳೆರಡರ ಹೊಳಹುಗಳನ್ನುಳ್ಳ ಮನುಷ್ಯನನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತು’.

ಗಾಂಧೀಜಿಯವರಲ್ಲಿ ವ್ಯವಸ್ಥಿತ ಸಿದ್ಧಾಂತಗಳನ್ನು ಹುಡುಕಿ ಅವು ಅವರಲ್ಲಿಲ್ಲ ಎಂದು ಮೂಗು ಮುರಿಯುವವರಿಗೆ ಈ ಬಗೆಯ ಸೂಕ್ಷ್ಮ ಮುಖಗಳು ಅಷ್ಟು ಸುಲಭವಾಗಿ ಕಾಣಲಾರವು. ಹಾಗೆ ನೋಡಿದರೆ, ಜನರು ತಮ್ಮ ನಿತ್ಯದ ತಾಪತ್ರಯಗಳ ಜೊತೆಗಿದ್ದುಕೊಂಡೇ ಬಳಸಬಹುದಾದ ಮಾರ್ಗಗಳನ್ನೇ ಗಾಂಧೀಜಿ ರೂಪಿಸಲೆತ್ನಿಸುತ್ತಿದ್ದರು. ಸುಳ್ಳು ಹೇಳಲು ಮನುಷ್ಯನಲ್ಲಿ ಇರಬಹುದಾದ ಹಿಂಜರಿಕೆಯನ್ನು ಸತ್ಯ ಕುರಿತ ಬದ್ಧತೆಯನ್ನಾಗಿಸಲು ಯತ್ನಿಸಿದರು. ಹಿಂಸೆಯ ಬಗೆಗೆ ಜನರಿಗೆ ಇರಬಹುದಾದ ಅಳುಕನ್ನು ಅಹಿಂಸೆಯ ತತ್ವವನ್ನಾಗಿಸಲು ಯತ್ನಿಸಿದರು. ಅನೇಕ ಸಲ ಇನ್ನೊಬ್ಬರಿಗಾಗಿ ನವೆಯಲು ಉಪವಾಸ ಮಾಡುವ ಜನರಿಂದ ಕಲಿತ ಪಾಠವನ್ನು ಸತ್ಯಾಗ್ರಹದ ಅಸ್ತ್ರವನ್ನಾಗಿಸಿದರು. ‘ಉಪವಾಸ ಮಾಡುವುದು ನನ್ನ ರಕ್ತಮಾಂಸಗಳಲ್ಲಿ ಬೆರೆತುಬಿಟ್ಟಿದೆ. ನಾನು ಅದನ್ನು ತಾಯಮೊಲೆ ಹಾಲಿನಿಂದಲೇ ಪಡೆದುಕೊಂಡುಬಿಟ್ಟಿರುವೆ. ನನ್ನ ತಾಯಿ ಯಾರಿಗೋ ಕಾಯಿಲೆಯಾದರೆ ಉಪವಾಸ ಮಾಡುತ್ತಿದ್ದಳು. ಯಾವುದೋ ನೋವಿನಿಂದ ನರಳುತ್ತಿರುವಾಗಲೂ ಉಪವಾಸ ಮಾಡುತ್ತಿದ್ದಳು. ಅದಕ್ಕೆ ಈ ಋತು, ಆ ಋತು ಎಂಬ ಭೇದವಿರಲಿಲ್ಲ. ಅವಳ ಮಗ ನಾನು; ಅವಳಿಗಿಂತ ಹೇಗೆ ಭಿನ್ನವಾಗಿದ್ದೇನು!’ ಎಂದು ಗಾಂಧೀಜಿ ಹೇಳುತ್ತಿದ್ದರು.

ಇತರರ ಮನಪರಿವರ್ತನೆಗಾಗಿ, ಸಮಾಜವನ್ನು ಬೆಸೆಯಲು, ವಸಾಹತುಶಾಹಿಯನ್ನು ಮಣಿಸಲು ದೇಹದಂಡನೆ ಮಾಡಿದ ಗಾಂಧೀಜಿಯವರ ಈ ಉಪವಾಸ ಬಾಬಾಸಾಹೇಬ ಅಂಬೇಡ್ಕರ್ ಅವರು ಮಂಡಿಸಿದ ಪ್ರತ್ಯೇಕ ಮತಕ್ಷೇತ್ರಗಳ ಬೇಡಿಕೆಯ ವಿರುದ್ಧವೂ ತಿರುಗಿದ್ದನ್ನು ಮಾತ್ರ ನನ್ನಂಥವರಿಗೆ ಇವತ್ತಿಗೂ ಅರಗಿಸಿಕೊಳ್ಳಲಾಗಿಲ್ಲ. ದಲಿತರನ್ನು ಮುಖ್ಯವಾಹಿನಿಯಲ್ಲಿ ಒಂದು ಗೂಡಿಸಲು ಗಾಂಧೀಜಿ ಉಪವಾಸ ಮಾಡಿದರು ಎಂದು ಯಾರು ಎಷ್ಟೇ ವಾದಿಸಿದರೂ ಈ ಉಪವಾಸ ಕ್ರೂರವಾಗಿತ್ತು ಎಂದೇ ಅನಿಸುತ್ತಿರುತ್ತದೆ.

ಆದರೆ ಇದೊಂದು ಚಾರಿತ್ರಿಕ ತಪ್ಪಿಗಾಗಿ ಗಾಂಧೀಜಿಯವರ ಇನ್ನಿತರ ಸರಿಗಳನ್ನು ಕಡೆಗಣಿಸುವುದು ಬೇಡ. ಕಟ್ಟಕಡೆಯವರಿಗಾಗಿ ಚಿಂತಿಸಬೇಕಾದ ಅಗತ್ಯವನ್ನು ಭಾರತದ ಸಾಮಾಜಿಕ ಚಿಂತನೆ ಹಾಗೂ ರಾಜಕಾರಣದ ಕೇಂದ್ರಕ್ಕೆ ಗಾಂಧೀಜಿ ತಂದರೆಂಬುದನ್ನು ಹಾಗೂ ಇವತ್ತಿಗೂ ಆ ಕಾಳಜಿ ಸರ್ಕಾರಿ ಕಾರ್ಯಕ್ರಮಗಳ ಭಾಗವಾಗಿರಲು ಅವರು ಪ್ರೇರಣೆಯಾಗಿದ್ದಾರೆಂಬುದನ್ನು ಮರೆಯದಿರೋಣ. ಒಮ್ಮೆ ತನ್ನ ಕ್ರಿಯೆಯ ಬಗ್ಗೆ ಅನುಮಾನದಲ್ಲಿದ್ದವರೊಬ್ಬರಿಗೆ ಗಾಂಧೀಜಿ ಒಂದು ಪುಟ್ಟ ಪರೀಕ್ಷೆ ಮಾಡಿಕೊಳ್ಳಲು ಹೇಳಿದರು. ಇದು ಎಲ್ಲ ಕಾಲಕ್ಕೂ ಅಗತ್ಯವಿರುವ ಮುಖ್ಯ ಪರೀಕ್ಷೆಯಂತಿದೆ: ‘ನಿನಗೆ ಯಾವುದಾದರೂ ಕ್ರಿಯೆಯ ಬಗ್ಗೆ ಅನುಮಾನ ಬಂದಾಗ ಅಥವಾ ನೀನು ಅತಿಯಾಗಿ ನಿನ್ನಲ್ಲೇ ಮುಳುಗಿಹೋದಾಗ ಈ ಪರೀಕ್ಷೆ ಮಾಡಿಕೋ: ನೀನು ನೋಡಿರುವ ಅತ್ಯಂತ ಬಡವನಾದ, ಅತ್ಯಂತ ದುರ್ಬಲನಾದ ಮನುಷ್ಯನ ಮುಖವನ್ನು ನೆನೆಸಿಕೋ. ನೀನೀಗ ಮಾಡಬೇಕೆಂದು ಯೋಚಿಸುತ್ತಿರುವ ಕೆಲಸದಿಂದ ಅವನಿಗೇನಾದರೂ ಉಪಯೋಗವಿದೆಯೇ ಎಂಬ ಪ್ರಶ್ನೆ-ಯನ್ನು ನಿನಗೆ ನೀನೇ ಕೇಳಿಕೋ. ಇದರಿಂದ ಅವನು ಏನನ್ನಾದರೂ ಪಡೆದಾನೇ? ನೀನು ಇಡಲಿರುವ ಹೆಜ್ಜೆ ಆ ಕಟ್ಟಕಡೆಯ ಮನುಷ್ಯ ತನ್ನ ಜೀವನ ಹಾಗೂ ವಿಧಿಯ ಮೇಲೆ ನಿಯಂತ್ರಣ ಸಾಧಿಸಲು ನೆರವಾದೀತೆ? ನಿನ್ನ ಈ ಕ್ರಿಯೆ ಹಸಿದಿರುವ ಹಾಗೂ ಚೈತನ್ಯ ಬತ್ತಿರುವ ಲಕ್ಷಾಂತರ ಜನರು ತಮ್ಮ ಸ್ವರಾಜ್ಯವನ್ನು ಗಳಿಸುವತ್ತ ಕರೆದೊಯ್ದೀತೆ?’

ಅಕ್ಟೋಬರ್ ಎರಡರಂದು ಸುಮ್ಮನೆ ಗಾಂಧಿಯವರನ್ನು ನೆನೆಸಿಕೊಳ್ಳುವ ಎಲ್ಲರನ್ನೂ, ಮುಖ್ಯವಾಗಿ ನಮ್ಮ ನಾಯಕರನ್ನು, ಕೊನೆಯ ಪಕ್ಷ ಈ ಮಾತುಗಳಾದರೂ ಸದಾ ಕಾಡುತ್ತಿರಲಿ. ಗಾಂಧಿ ಹಾಗೂ ಗಾಂಧಿವಾದ ಎನ್ನುವುದು ಸಿದ್ಧ ಪಾಕವಲ್ಲ; ಅದು ನಾವು ಸದಾ ರೂಪಿಸಿಕೊಳ್ಳುವ ಆದರ್ಶ ಕೂಡ. ಆ ಆದರ್ಶವನ್ನು ಪ್ರತಿದಿನ ಹುಡುಕಿಕೊಳ್ಳುತ್ತಾ ನಮ್ಮ ನಡೆನುಡಿಗಳ ಬಗ್ಗೆ ಒಂದು ಚಣವಾದರೂ ಪರೀಕ್ಷೆ ಮಾಡಿಕೊಳ್ಳುತ್ತಿದ್ದರೆ ಮಾತ್ರ ನಮ್ಮ ಸಣ್ಣತನ, ಸುಳ್ಳುಗಳು, ದುರಹಂಕಾರ ಹಾಗೂ ಅತಿಯಾದ ವ್ಯಕ್ತಿಕೇಂದ್ರತೆಯ ಸ್ವಾರ್ಥದಿಂದ ಬಿಡಿಸಿಕೊಳ್ಳಬಹುದೇನೋ!

ಕೊನೆ ಟಿಪ್ಪಣಿ: ಗಾಂಧೀಜಿಯ ಸ್ಪರ್ಶ ಮತ್ತು ಕನ್ನಡ ಸಾಹಿತ್ಯ
ಕನ್ನಡದಲ್ಲಿ ಕೆಲವರ ಬರಹಗಳನ್ನು ಓದುವಾಗಲೆಲ್ಲ ಅವರು ಗಾಂಧಿಯನ್ನು ಸ್ಪರ್ಶಿಸಿರುವ ರೀತಿ ಅಥವಾ ಗಾಂಧಿ ಅವರನ್ನು ಮುಟ್ಟಿರುವ ರೀತಿ ನನಗೆ ಅವ್ಯಕ್ತವಾಗಿ ಅನುಭವಕ್ಕೆ ಬರುತ್ತಿರುತ್ತದೆ. ತೇಜಸ್ವಿ ಸೃಷ್ಟಿಸಿದ ಕರ್ವಾಲೋನನ್ನು ವಿಮರ್ಶಕರೊಬ್ಬರು ‘ಗಾಂಧಿಯನ್ ವಿಜ್ಞಾನಿ’ ಎಂದಾಗ ತೇಜಸ್ವಿಯವರ ಕಲ್ಪನೆಯಲ್ಲಿ ಗಾಂಧಿ ಬೆಳೆದ ಪರಿಗೆ ಬೆರಗಾಗಿತ್ತು. ಕುವೆಂಪು, ಬೇಂದ್ರೆ, ಕಾರಂತ, ಅನಂತಮೂರ್ತಿ, ಲಂಕೇಶ್, ಕಂಬಾರ, ದೇವನೂರ ಮಹಾದೇವ, ಪ್ರಸನ್ನರ ಬರಹಗಳು ಅಥವಾ ಎಚ್.ಎಸ್. ವೆಂಕಟೇಶಮೂರ್ತಿ, ಸವಿತಾ ನಾಗಭೂಷಣರ ಪದ್ಯಗಳನ್ನು ಓದಿದಾಗಲೆಲ್ಲ ಇಲ್ಲಿ ಎಲ್ಲೋ ಕಂಡೂ ಕಾಣದಂತೆ ಗಾಂಧಿ ಹರಿಯುತ್ತಿದ್ದಾರೆ ಎನ್ನಿಸತೊಡಗುತ್ತದೆ.

ಸ್ವಂತವನ್ನು ಪರೀಕ್ಷಿಸುವ ಕ್ರಮ, ಮಾನವನ ಔದಾರ್ಯವನ್ನು ಹುಡುಕುವ ರೀತಿ, ಅಲ್ಪಸಂಖ್ಯಾತರನ್ನು ಅರಿಯುವ ಬಗೆ, ಸಮಾಜವನ್ನು ರೂಪಿಸುವವರು ಅತ್ಯಂತ ಜವಾವ್ದಾರಿಯಿಂದ ಬರೆಯಬೇಕೆಂಬ ಕಾಳಜಿ, ಅನುಕಂಪದಿಂದ ಇತರರನ್ನು ಗ್ರಹಿಸುವ ಕ್ರಮ, ಮಾನವ ವರ್ತನೆಗಳನ್ನು ಅರಿಯುವಲ್ಲಿರುವ ವ್ಯವಧಾನ, ಭಾಷೆಯ ಬಳಕೆ ಹೀಗೆ ಯಾವುದಾದರೊಂದು ಅಂಶದಲ್ಲಿ ಇವರಲ್ಲಿ ಗಾಂಧಿಸತ್ವ ಬೆರೆಯುತ್ತಿರುತ್ತದೆ.

ಇವರೆಲ್ಲರಿಗಿಂತ ಭಿನ್ನವಾಗಿ ಗಾಂಧಿ ಚಿಂತನೆಯನ್ನು ಗ್ರಹಿಸಿ, ವಿಸ್ತರಿಸಿದ ಡಿ.ಎಸ್. ನಾಗಭೂಷಣರಂಥವರು ಕನ್ನಡ ದಲ್ಲಿದ್ದಾರೆನ್ನುವುದು ನಿಜ. ಆದರೆ, ಮೇಲೆ ಹೇಳಿದವರ ಬರಹಗಳ ಆಳದಲ್ಲಿ ಗಾಂಧೀಜಿಯ ಮರುದನಿಯಿದೆ ಎಂಬ ಕಾರಣಕ್ಕೆ ಅವರು ನನ್ನೊಳಗೆ ಇಳಿಯುತ್ತಿರುತ್ತಾರೆ. ಎರಡು ವರ್ಷಗಳ ಕೆಳಗೆ ಒಂದು ಸಭೆಯಲ್ಲಿ ಇದ್ದಕ್ಕಿದ್ದಂತೆ ನನ್ನೊಳಗಿನಿಂದ ಮೂಡಿಬಂದ ಮಾತು ಇದು: ‘ಕಿ.ರಂ.ನಾಗರಾಜ್ ಮತ್ತು ದೇವನೂರ ಮಹಾದೇವರನ್ನು ನೋಡಿದಾಗ, ನೆನೆದಾಗ ಗಾಂಧಿ ಇಲ್ಲೇ ಎಲ್ಲೋ ಓಡಾಡಿದ್ದರೆಂದು ನನಗೆ ಅನಿಸತೊಡಗುತ್ತದೆ’. ಇದು ತೀರ ಉತ್ಪ್ರೇಕ್ಷೆಯಿರಲಿಕ್ಕಿಲ್ಲ ಎಂದುಕೊಂಡಿರುವೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.