ಗೋ ವಾದ ಹಡಗು ನಿರ್ಮಾಣ ಸಂಸ್ಥೆಯೊಂದರ ಉದ್ಯೋಗಿ ದೇವು ಚೋದಂಕರ್ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ‘ಮೋದಿ ವಿರೋಧಿ’ ಹೇಳಿಕೆಯೊಂದನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆಂಬ ಆರೋಪದ ಮೇಲೆ ಈಗ ಬಂಧನಕ್ಕೊಳಗಾಗಿದ್ದಾರೆ. ಹಾಗೆಯೇ ‘ಮೋದಿ ವಿರೋಧಿ’ ಎಂಎಂಎಸ್ ಕಳುಹಿಸಿದ್ದಕ್ಕೆ ಸೈಯದ್ ವಕಾಸ್ ಎಂಬ ವಿದ್ಯಾರ್ಥಿಯೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಚುನಾವಣಾ ಪ್ರಚಾರ ಕಾಲದಲ್ಲಿ ಬಿಜೆಪಿಯ ಗಿರಿರಾಜ್ ಸಿಂಗ್, ಸಮಾಜವಾದಿ ಪಕ್ಷದ ಅಜಂ ಖಾನ್ ಮುಂತಾದವರು ತಮ್ಮ ಭಾಷಣಗಳಲ್ಲಿ ಬಳಸಿದ ಮಾತುಗಳಿಗೂ ದೇವು ಮತ್ತು ಸೈಯದ್ ‘ಮೋದಿ ವಿರೋಧ’ ವ್ಯಕ್ತಪಡಿಸಲು ಬಳಸಿದ ಮಾತುಗಳು ಮತ್ತು ಅದನ್ನು ಪ್ರೇರೇಪಿಸಿದ ಮನಸ್ಥಿತಿಯಲ್ಲಿ ಅಂಥ ವ್ಯತ್ಯಾಸಗಳೇನೂ ಇಲ್ಲ.

ಭಾರತದ ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ನು 2008ರಲ್ಲಿ ಆತುರಾತುರವಾಗಿ ತಿದ್ದುಪಡಿ ಮಾಡಿ ‘ಸೆಕ್ಷನ್ 66ಎ’ಯನ್ನು ಸೇರಿಸದೇ ಹೋಗಿದ್ದರೆ, ಇವರಿಬ್ಬರೂ ನವ ಮಾಧ್ಯಮ ಬಳಸಿ ವ್ಯಕ್ತಪಡಿಸಿದ ಅದೇ ಅಭಿಪ್ರಾಯಗಳನ್ನು ಭಾಷಣದಲ್ಲೋ, ಮುದ್ರಿತ ಕರಪತ್ರ ಅಥವಾ ಲೇಖನದಲ್ಲಿ ಹೇಳಿದ್ದರೂ ಬಂಧನವನ್ನು ಎದುರಿಸಬೇಕಾಗುತ್ತಿರಲಿಲ್ಲ. ಗಿರಿರಾಜ್ ಸಿಂಗ್ ಮತ್ತು ಅಜಂ ಖಾನ್‌ರಂತೆಯೇ ತಮ್ಮ ಮಾತುಗಳ ಅರ್ಥವನ್ನು ವಿವರಿಸುತ್ತಾ ತಮ್ಮನ್ನು ಸಮರ್ಥಿಸಿಕೊಳ್ಳಬಹುದಿತ್ತು. ಅಥವಾ ಹೆಚ್ಚೆಂದರೆ ಒಂದು ಕ್ಷಮೆಯಲ್ಲಿ ವಿವಾದ ಮುಗಿಯುತ್ತಿತ್ತು.

ಮೇಲಿನ ಹೋಲಿಕೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ‘ಸೆಕ್ಷನ್ 66ಎ’ಯ ಕ್ರೌರ್ಯಕ್ಕೆ ಒಂದು ಸಾಕ್ಷಿ ಮಾತ್ರ. ಈ ಕಾಯ್ದೆ ಜಾರಿಗೆ ಬಂದ ಮೇಲೆ ಅನೇಕರು ಇಂಥದ್ದೇ ತೊಂದರೆಗೆ ಒಳಗಾಗಿದ್ದಾರೆ. ಈಗ ಬಂಧನಕ್ಕೆ ಒಳಗಾಗಿರುವ ಇಬ್ಬರ ‘ರಾಜಕೀಯ ಅಭಿಪ್ರಾಯ’ಗಳಿಗೆ ಕೆಲಮಟ್ಟದ ‘ಸ್ಪಷ್ಟತೆ’ಯಾದರೂ ಇದೆ. ಇದೇ ಸೆಕ್ಷನ್ ಅನ್ವಯ ಮಹಾರಾಷ್ಟ್ರದಲ್ಲಿ ಬಂಧಿತರಾಗಿದ್ದ ಇಬ್ಬರು ಯುವತಿಯರ ಪ್ರಕರಣ ಮತ್ತೂ ವಿಚಿತ್ರ.

ಬಾಳಾ ಠಾಕ್ರೆ ಸಾವಿನ ನಂತರದ ಮುಂಬೈ ಬಂದ್‌ನ ಕುರಿತಂತೆ ತನ್ನ ಅಭಿಪ್ರಾಯವನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದು ಒಬ್ಬಳ ಬಂಧನಕ್ಕೆ ಕಾರಣವಾದರೆ ಅದನ್ನು ಲೈಕ್ ಮಾಡಿದ್ದು ಮತ್ತೊಬ್ಬಳ ಬಂಧನಕ್ಕೆ ಕಾರಣವಾಗಿತ್ತು. ಆಂಧ್ರಪ್ರದೇಶದ ಪಿಯುಸಿಎಲ್‌ನ (ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿ)ಯ ಜಯಾ ವಿಂಧ್ಯಾಲ್ ಕೆಲವು ರಾಜಕಾರಣಿಗಳನ್ನು ಟೀಕಿಸಿ ಒಂದು ಲೇಖನ ಬರೆದಿದ್ದರು. ಅದನ್ನು ಆಂಧ್ರದ ಪ್ರಮುಖ ದಿನಪತ್ರಿಕೆಯೊಂದು ಪ್ರಕಟಿಸಿತ್ತು. ಆದರೆ ಅವರು ಅದೇ ಲೇಖನವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರ ಹಿಂದೆಯೇ ಅವರು ಬಂಧನಕ್ಕೆ ಒಳಗಾಗಬೇಕಾಯಿತು.

ಮಮತಾ ಬ್ಯಾನರ್ಜಿ ಕುರಿತ ವ್ಯಂಗ್ಯಚಿತ್ರವನ್ನು ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡ ಪ್ರೊಫೆಸರ್ ಒಬ್ಬರಿಗೂ ಇದೇ ಸ್ಥಿತಿ ಒದಗಿ ಬಂದಿತ್ತು. ಹೀಗೆ ಪಟ್ಟಿ ಮಾಡುತ್ತಾ ಹೋದರೆ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದ ಪ್ರಕರಣಗಳೇ ಹಲವಿವೆ. ಇದಲ್ಲದೆ ಅಷ್ಟೇನೂ ಸುದ್ದಿಯಾಗದೇ ಹೋದ ಅನೇಕ ಪ್ರಕರಣಗಳು ಇನ್ನೂ ಇರಬಹುದು.

ಮಾಹಿತಿ ತಂತ್ರಜ್ಞಾನ ಕಾಯ್ದೆ-2000ಕ್ಕೆ ತಿದ್ದುಪಡಿ ತಂದು ಅದನ್ನೊಂದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಾರಕವಾದ ಕಾಯ್ದೆಯನ್ನಾಗಿ ಮಾರ್ಪಡಿಸಿದ ಖ್ಯಾತಿ ಯುಪಿಎ–-1ರದ್ದು. ಮುಂಬೈ ಮೇಲೆ ನಡೆದ 26/11ರ ಭಯೋತ್ಪಾದಕ ದಾಳಿಯ ನಂತರ ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ನು ಆತುರಾತುರವಾಗಿ ತಿದ್ದುಪಡಿಗೆ ಒಳಪಡಿಸಲಾಯಿತು. 2008ರ ಡಿಸೆಂಬರ್ 22ರಂದು ಇದನ್ನು ಲೋಕಸಭೆ ಅಂಗೀಕರಿಸಿದರೆ ಮರುದಿನ ರಾಜ್ಯಸಭೆ ಅಂಗೀಕರಿಸಿತು. ಭಯೋತ್ಪಾದಕರು ನವ ಮಾಧ್ಯಮಗಳನ್ನು ತಮ್ಮ ಸಂವಹನಕ್ಕಾಗಿ ಬಳಸಿದ್ದರು ಎಂಬ ‘ಭದ್ರತಾ ಕಾರಣ’ಗಳನ್ನು ಮುಂದೊಡ್ಡಿ ಸರ್ಕಾರ ಈ ತಿದ್ದುಪಡಿ ಮಾಡಿತ್ತು.

ಇದರ ದೂರಗಾಮಿ ಪರಿಣಾಮಗಳ ಬಗ್ಗೆ ಆಗಲೇ ಚರ್ಚೆಗಳು ಆರಂಭವಾಗಿದ್ದವು. ಆದರೆ ಯಾವ ರಾಜಕೀಯ ಪಕ್ಷವೂ ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಈ ಕಾಯ್ದೆಯ ದುರ್ಬಳಕೆಯ ಪ್ರಕರಣಗಳಿಗೂ ಒಂದು ರಾಜಕೀಯ ಆಯಾಮವಿದೆ. ಇಲ್ಲಿಯ ತನಕ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿರುವ ಎಲ್ಲಾ ಪ್ರಕರಣಗಳಲ್ಲಿಯೂ ಬಂಧನಕ್ಕೊಳಗಾದವರು ರಾಜಕಾರಣಿ, ರಾಜಕೀಯ ಪಕ್ಷಗಳಿಗೆ ಮುಜುಗರ ಉಂಟುಮಾಡಬಹುದಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದವರೇ. ಬಹುಶಃ ಅದೇ ಕಾರಣಕ್ಕೆ ಈ ಕಾಯ್ದೆಯನ್ನು ಎಲ್ಲಾ ರಾಜಕೀಯ ಪಕ್ಷಗಳೂ ಪ್ರೀತಿಸುತ್ತವೆ!

ಬಾಳಾ ಠಾಕ್ರೆ ಸಾವಿನ ನಂತರದ ಮುಂಬೈ ಬಂದ್ ಬಗ್ಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ ಶಾಹೀನ್ ದಾದಾ ಮತ್ತು ರೇಣು ಶ್ರೀನಿವಾಸನ್ ಅವರನ್ನು ಬಂಧಿಸಿದಾಗ ಮಹಾರಾಷ್ಟ್ರದಲ್ಲಿ ಇದ್ದದ್ದು ಕಾಂಗ್ರೆಸ್ ಸರ್ಕಾರ. ಈ ಪ್ರಕರಣದ ಬಿಸಿ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಕಾಯ್ದೆಯನ್ನು ಸಮರ್ಥಿಸಿಕೊಳ್ಳುವ ಭಾಗವಾಗಿ ಯುಪಿಎ-–2 ಈ ಕಾಯ್ದೆಯನ್ನು ಬಳಸಿ ಯಾರನ್ನಾದರೂ ಬಂಧಿಸುವ ಮೊದಲು ಐಜಿಪಿ, ಡಿಸಿಪಿ ಅಥವಾ ಎಸ್‌ಪಿ ಮಟ್ಟದ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆಯಬೇಕೆಂಬ ನಿರ್ದೇಶನವನ್ನು ಎಲ್ಲಾ ರಾಜ್ಯಗಳಿಗೆ ರವಾನಿಸಿತು. ಅದಾದ ನಂತರವೂ ಬಂಧನಗಳೇನೂ ಕಡಿಮೆಯಾಗಲಿಲ್ಲ ಎಂಬುದಕ್ಕೆ ಜಯಾ ವಿಂಧ್ಯಾಲ್ ಅವರ ಬಂಧನವೇ ಸಾಕ್ಷಿ. ಅದಕ್ಕೆ ಪುಟವಿಡುವಂತೆ ಈಗ ಮತ್ತೆರಡು ಬಂಧನಗಳಾಗಿವೆ.

2009ರ ಫೆಬ್ರುವರಿಯಲ್ಲಿ ಈ ಕಾಯ್ದೆಗೆ ರಾಷ್ಟ್ರಪತಿಗಳ ಅಂಕಿತ ದೊರೆಯಿತು. ಈ ಸಂದರ್ಭದಲ್ಲಿಯೇ ಬೆಂಗಳೂರಿನ ಸೆಂಟರ್ ಫಾರ್ ಇಂಟರ್‌ನೆಟ್ ಅಂಡ್ ಸೊಸೈಟಿಯ ನಿರ್ದೇಶಕರಲ್ಲಿ ಒಬ್ಬರಾದ ಕಾನೂನು ತಜ್ಞ ಪ್ರಾಣೇಶ್ ಪ್ರಕಾಶ್ ವಿವರವಾದ ಟಿಪ್ಪಣಿಯೊಂದರ ಮೂಲಕ ಈ ಕಾಯ್ದೆಯ ದುರ್ಬಳಕೆಯ ಕುರಿತು ಎಚ್ಚರಿಸಿದ್ದರು (http://goo.gl/q63czf). ಇದಾದ ಮೇಲೆ ಅನೇಕ ಐಟಿ ಕಾನೂನು ತಜ್ಞರು, ಮಾನವ ಹಕ್ಕು ಹೋರಾಟಗಾರರು ಇದರ ಬಗ್ಗೆ ನಿರಂತರವಾಗಿ ಬರೆಯುತ್ತಲೇ ಇದ್ದಾರೆ. ಈ ಕಾಯ್ದೆಯ ಕ್ರೌರ್ಯದ ಕುರಿತು ಭಾರತದ ಬಹುತೇಕ ಎಲ್ಲಾ ಪತ್ರಿಕೆಗಳೂ ಸಂಪಾದಕೀಯವನ್ನೂ ಬರೆದಿವೆ. ಆದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾವ ರಾಜಕೀಯ ಪಕ್ಷದ ಪ್ರಣಾಳಿಕೆಯೂ ಮಾಹಿತಿ ತಂತ್ರಜ್ಞಾನ ಕಾಯ್ದೆಯೊಳಗಿರುವ ಕ್ರೂರ ಸೆಕ್ಷನ್ ತೆಗೆದು ಹಾಕುವ ಭರವಸೆಯನ್ನೇನೂ ನೀಡಿರಲಿಲ್ಲ.

ಯುಪಿಎ–-2ರಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಖಾತೆಯ ರಾಜ್ಯ ಸಚಿವರಾಗಿದ್ದ ಮಿಲಿಂದ್ ದೇವ್ರಾ ತಮ್ಮ ಅಧಿಕಾರಾವಧಿಯ ಉದ್ದಕ್ಕೂ ಈ ಕಾಯ್ದೆಯನ್ನು ಸತತವಾಗಿ ಸಮರ್ಥಿಸಿಕೊಳ್ಳುತ್ತಾ ಬಂದರು. ಅಷ್ಟೇ ಅಲ್ಲ ಇದನ್ನು ಬಹಳ ಎಚ್ಚರಿಕೆಯಿಂದ ರೂಪಿಸಲಾಗಿದೆ ಎಂದು ಪದೇ ಪದೇ ಹೇಳುತ್ತಿದ್ದರು. ಆದರೆ ಈ ಕಾಯ್ದೆಯ ಕುರಿತಂತೆ ಕೂಲಂಕಷ ಅಧ್ಯಯನ ಮಾಡಿರುವ ಅಪರ್ಣಾ ವಿಶ್ವನಾಥನ್ (http://goo.gl/7D7Mi1) ಮತ್ತು ಪ್ರಾಣೇಶ್ ಪ್ರಕಾಶ್ (http://goo.gl/jCM0Ab) ಅವರು ‘ಸೆಕ್ಷನ್ 66ಎ’ ಹೇಗೆ ಯುನೈಟೆಡ್ ಕಿಂಗ್‌ಡಂನ (ಯು.ಕೆ.) ಕಮ್ಯುನಿಕೇಷನ್ ಆ್ಯಕ್ಟ್ 2003 ಮತ್ತು ಪೊಸ್ಟ್ಆಫೀಸ್ (ಅಮೆಂಡ್ಮೆಂಟ್) ಆ್ಯಕ್ಟ್ 1935ನ್ನು ಯಥಾವತ್ತಾಗಿ ಎತ್ತಿಕೊಳ್ಳಲಾಗಿದೆ ಎಂಬುದನ್ನು ಬಹಳ ಚೆನ್ನಾಗಿ ವಿವರಿಸಿದ್ದಾರೆ.

ಯು.ಕೆ.ಯ ಕಾನೂನು ‘ವಿಪರೀತವಾಗಿ ಅವಮಾನಿಸುವುದು’ ಎಂಬುದನ್ನು ನಿರ್ವಚಿಸುವುದಕ್ಕೆ ಸಂಬಂಧಿಸಿದಂತೆ ವಹಿಸಿದ ಎಚ್ಚರ, ‘ಸೆಕ್ಷನ್ 66ಎ’ಗೆ ಇಲ್ಲ. ಈ ಕಾಯ್ದೆಯನ್ನು ಅಲ್ಲಿನ ನ್ಯಾಯಾಲಯಗಳು ವ್ಯಾಖ್ಯಾನಿಸಿದ ಬಗೆಯನ್ನೂ ನಮ್ಮ ನಿಯಮ ನಿರ್ಮಾತೃಗಳು ಗಮನಕ್ಕೆ ತೆಗೆದುಕೊಂಡಿಲ್ಲ.

ಈ ಎಲ್ಲವುಗಳ ಪರಿಣಾಮ ಈಗ ಬೇರೆ ಬೇರೆ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ‘ಅತಿ ಸಂವೇದನಾಶೀಲ’ ಸಂಘಟನೆಗಳ ಸಂಖ್ಯೆ ಹೆಚ್ಚುತ್ತಿದೆ. ಹಿಂದೆಲ್ಲಾ ಒಂದು ನಗೆಹನಿಯಾಗಬಹುದಾಗಿದ್ದ ವಿಚಾರಗಳೀಗ ‘ಭಾವನೆಗಳನ್ನು ಕೆರಳಿಸುವ’ ಇಲ್ಲವೇ ‘ಭಾವನೆಗಳಿಗೆ ಧಕ್ಕೆಯುಂಟು ಮಾಡುವ’ ವಿಷಯಗಳಾಗುತ್ತಿವೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ‘ಸೆಕ್ಷನ್ 66ಎ’ ಅಂಥ ಕಾನೂನುಗಳು ‘ಭಾವನೆಗಳನ್ನು ಗುತ್ತಿಗೆಗೆ ಪಡೆದವರ’ ಶಕ್ತಿಯನ್ನು ಹೆಚ್ಚಿಸುತ್ತವೆ. ಇಂಥ ವಿಚಾರಗಳಲ್ಲಿ ಪೊಲೀಸರು ತಕ್ಷಣದ ತಲೆನೋವನ್ನು ಕಳೆದುಕೊಳ್ಳುವ ತಂತ್ರ ಅನುಸರಿಸುತ್ತಾರೆ.

ಮುಂಬೈಯಲ್ಲಿ ಶಾಹೀನ್ ದಾದ ಮತ್ತು ರೇಣು ಶ್ರೀನಿವಾಸನ್ ಅವರ ಬಂಧನ ಇದಕ್ಕೆ ಅತ್ಯುತ್ತಮ ಉದಾಹರಣೆ. ಪೊಲೀಸರು ಇಬ್ಬರು ಯುವತಿಯರನ್ನು ಬಂಧಿಸುವುದಕ್ಕೆ ತೋರಿದ ಆತುರದ ಹಿಂದೆ ಶಿವಸೇನೆಯ ‘ಶಕ್ತಿ’ಯಿದೆಯೇ ಹೊರತು ಪೊಲೀಸ್ ವ್ಯವಸ್ಥೆಯ ದಕ್ಷತೆಯಿಲ್ಲ. ಗೋವಾದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ದೂರು ಬಂದಿರುವುದು ‘ಮೋದಿ ನಿಂದನೆ’ಯ ವಿರುದ್ಧ. ಸಹಜವಾಗಿಯೇ ಪೊಲೀಸರಿಗೆ ‘ಆರೋಪಿ’ಯನ್ನು ಬಂಧಿಸುವುದು ಸುಲಭದ ಮಾರ್ಗವಾಗಿ ಕಾಣಿಸುತ್ತದೆ.

ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ. ಮುಸ್ಲಿಂ ಯುವಕನ ‘ಮೋದಿ ನಿಂದನೆ’ಯ ವಿಷಯದಲ್ಲಿ ಮೃದುವಾಗಿದ್ದರೆ ಅದನ್ನೇ ಬಿಜೆಪಿ ರಾಜಕೀಯ ಲಾಭಕ್ಕೆ ಬಳಸಬಹುದೆಂಬ ಭಯ ಅದರದ್ದು. ಅಭಿವ್ಯಕ್ತಿ ಸ್ವಾತಂತ್ರ್ಯದ ಚರ್ಚೆ ನಮಗೆ ಈಗ ಬೇಡ ಎಂದು ಸರ್ಕಾರ ಭಾವಿಸಿರಬಹುದು. ‘ಢುಂಢಿ’ ಕಾದಂಬರಿಯ ಲೇಖಕ ಯೋಗೇಶ್ ಮಾಸ್ಟರ್ ಅವರನ್ನು ಬಂಧಿಸುವುದಕ್ಕೆ ಕರ್ನಾಟಕದ ಪೊಲೀಸರು ತೋರಿದ ಆತುರದಲ್ಲೇ ಇದು ಸ್ಪಷ್ಟವಾಗಿತ್ತು. ಈಗ ಅದು ಇನ್ನಷ್ಟು ನಿಚ್ಚಳವಾಗಿದೆ.

ಕೇಂದ್ರದಲ್ಲಿ ಸ್ವಂತ ಶಕ್ತಿಯ ಮೇಲೆ ಸರ್ಕಾರ ರಚಿಸಲು ಮುಂದಾಗಿರುವ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ನವ ಮಾಧ್ಯಮವನ್ನು ಬಳಸಿದಷ್ಟು ಇನ್ಯಾವ ಪಕ್ಷಗಳೂ ಬಳಸಿಲ್ಲ. ಒಂದರ್ಥದಲ್ಲಿ ಬಿಜೆಪಿ ಅದರಲ್ಲೂ ಮುಖ್ಯವಾಗಿ ಇಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ನರೇಂದ್ರ ಮೋದಿಯವರ ದೊಡ್ಡ ಸಂಖ್ಯೆಯ ಬೆಂಬಲಿಗರು ಸಾಮಾಜಿಕ ಜಾಲ ತಾಣಗಳಲ್ಲಿ ‘ಎಲ್ಲಾ ಬಗೆ’ಯಲ್ಲೂ ಸಕ್ರಿಯರು. ‘ಸೆಕ್ಷನ್ 66ಎ’ಯನ್ನು ಬಿಜೆಪಿಯ ರಾಜಕೀಯ ವಿರೋಧಿಗಳು ‘ಪರಿಣಾಮಕಾರಿ’ಯಾಗಿ

ಬಳಸಲು ತೊಡಗಿದರೆ ಬಂಧನಗಳ ಸಂಖ್ಯೆ ಸಾವಿರಗಳಿಗೇರಬಹುದೇನೋ? ಇದನ್ನು ತಡೆಯುವುದಕ್ಕಾದರೂ ಹೊಸ ಸರ್ಕಾರ ‘ಸೆಕ್ಷನ್ 66ಎ’ಯ ಕ್ರೌರ್ಯಕ್ಕೊಂದು ಕಡಿವಾಣ ಹಾಕಬಹುದೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.