ಆರು ದಿನಗಳ ಹಿಂದಷ್ಟೇ ಸುದ್ದಿ ಬಂದಿತ್ತು: ಭೂಮಿಗೆ ಅತ್ಯಂತ ನಿಕಟ ಹೋಲಿಕೆ ಇರಬಹುದಾದ ಹೊಸ ಗ್ರಹವೊಂದು ಸೌರಲೋಕದ ಆಚೆ ಸಿಗ್ನಸ್ ನಕ್ಷತ್ರ ಪುಂಜದಲ್ಲಿ ಪತ್ತೆಯಾಗಿದೆ. ಗಾತ್ರದಲ್ಲಿ ತುಸು ದೊಡ್ಡದಾದ ಅದು ಭೂಮಿಯ ಅಣ್ಣನಂತಿದೆ. ಪ್ರತಿ 385 ದಿನಗಳಿಗೊಮ್ಮೆ ತನ್ನ ಸೂರ್ಯನ ಸುತ್ತ ಒಂದು ಪ್ರದಕ್ಷಿಣೆ ಹಾಕುತ್ತಿದೆ. ನಮ್ಮ ಪೃಥ್ವಿಯ ಹಾಗೆಯೇ ವಾಯುಮಂಡಲ, ಹದವಾದ ಬಿಸಿಲು ಮತ್ತು ನೀರು ಕೂಡ ಇರುವ ಸಾಧ್ಯತೆಯಿದೆ. ಏಕೆಂದರೆ ಅದು ತನ್ನ ಸೂರ್ಯನಿಗೆ ತೀರ ಹತ್ತಿರವೂ ಅಲ್ಲದ, ತೀರ ದೂರವೂ ಅಲ್ಲದ ‘ವಾಸಯೋಗ್ಯ’ ಅಂತರದಲ್ಲಿದೆ. ಅಂದರೆ ಅದರಲ್ಲಿ ಜೀವಪೋಷಕ ಗುಣಗಳಿರುವ ಸಾಧ್ಯತೆ ಇದೆ.

‘ಕೆಪ್ಲರ್’ ಹೆಸರಿನ ದೂರದರ್ಶಕದ ಮೂಲಕ ಪತ್ತೆಯಾದ ಆ ಗ್ರಹದ ಸದ್ಯದ ಹೆಸರು ‘ಕೆಪ್ಲರ್ 452ಬಿ’. ಅಲ್ಲಿ ಬುದ್ಧಿವಂತ ಜೀವಿಗಳಿರಬಹುದೆ? ಅಲ್ಲಿನ ಗಿಡಮರಗಳಿಗೆ ರೆಕ್ಕೆಪುಕ್ಕ ಇವೆಯೆ? ಬೇಕೆಂದಾಗ, ಬೇಕೆಂದಲ್ಲಿ ಮೈಬಿಚ್ಚಿ ಮಲಗುವ ಹುಲ್ಲುಹಾಸು ಇದ್ದೀತೆ? ಮಾತಾಡುವ ಮೃಗಪಕ್ಷಿಗಳು, ಹಾಲುಕ್ಕಿಸುವ ಕೊಳವೆ ಬಾವಿಗಳು? ಏನೊ ಗೊತ್ತಿಲ್ಲ. ಈಗ ನಮ್ಮ ‘ಕೆಪ್ಲರ್’ ದೂರದರ್ಶಕಕ್ಕೆ ಬಂದು ತಲುಪಿದ ಅದರ ಕ್ಷೀಣ ಬೆಳಕು ಕೂಡ 1400 ವರ್ಷಗಳಷ್ಟು ಹಳತು. ಆ ಸೌರಾತೀತ ಗ್ರಹಕ್ಕೆ ಭೇಟಿ ನೀಡಬೇಕೆಂದರೆ ನಾವು ಬೆಳಕಿನ ವೇಗದಲ್ಲಿ ಸಾಗುತ್ತಿದ್ದರೂ ಅಲ್ಲಿಗೆ ಹೋಗಿ ತಲುಪಲು 1400 ವರ್ಷಗಳು ಬೇಕು. ಇಲ್ಲಿಂದ ಯಾರಾದರೂ ಅಲ್ಲಿಗೆ ಹೋಗಿ ‘ನಾನು ಸುರಕ್ಷಿತ ತಲುಪಿದ್ದೇನೆ’ ಎಂದು ಭೂಗ್ರಹಕ್ಕೆ ಫೋನ್ ಮಾಡಿದರೂ ಆ ಸಂದೇಶ ಇಲ್ಲಿಗೆ ತಲುಪಲು ಮತ್ತೆ 1400 ವರ್ಷಗಳು ಬೇಕಾಗುತ್ತದೆ.

ಅಂದಮೇಲೆ, ಭೂಮಿಯ ಮೇಲಿನ ನಮಗೆ ಅದು ಸದ್ಯಕ್ಕೆ ಕೈಗೆಟಕುವ ಗ್ರಹವಂತೂ ಅಲ್ಲ. ಇಂದಿನ ಮಕ್ಕಳ ಮೊಮ್ಮಕ್ಕಳು ಅಲ್ಲಿಗೆ ಹೊರಡಬಹುದೇನೊ. ಆ ಸುಂದರ ಕನಸು ನನಸಾಗುವವರೆಗಾದರೂ ನಾವು ಈ ನಮ್ಮ ಸುಂದರ ಗ್ರಹವನ್ನು ಸುರಕ್ಷಿತ ಇಟ್ಟುಕೊಳ್ಳೋಣವೆ? ನಮ್ಮ ಮುಂದಿನ ಪೀಳಿಗೆಯವರ ಬದುಕಿನ ಹಕ್ಕನ್ನು ನಾವು ಈಗಲೇ ಹೊಸಕಿ ಹಾಕುತ್ತಿಲ್ಲ ತಾನೆ?

ಶಿಲ್ಲಾಂಗ್‌ಗೆ ಹೊರಡುವ ಮುಂಚೆ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಇದೇ ಪ್ರಶ್ನೆಯನ್ನು ಎತ್ತಿಕೊಂಡರೆಂದು ಕಾಣುತ್ತದೆ. ಭೂಮಿಯನ್ನು ಹೋಲುವ ಹೊಸ ಗ್ರಹ ಪತ್ತೆಯಾಗಿದ್ದು ಅವರ ಗಮನಕ್ಕೆ ಬಂದಿತ್ತು. ಅದಕ್ಕೇ ಅವರು ‘ಭೂಗ್ರಹವನ್ನು ವಾಸಯೋಗ್ಯವಾಗಿ ಇಟ್ಟುಕೊಳ್ಳುವುದು ಹೇಗೆ?’ ಎಂಬ ವಿಷಯವನ್ನು ಶಿಲ್ಲಾಂಗ್‌ನ ವಿದ್ಯಾರ್ಥಿಗಳ ಎದುರು ಚರ್ಚಿಸಲು ವೇದಿಕೆ ಏರಿ, ಅದೇ ತಾನೆ ಪೀಠಿಕೆ ಹಾಕುತ್ತಿದ್ದರು. ಭೂಮಿಯಾಚಿನ ಜಗತ್ತುಗಳನ್ನು ಪ್ರಸ್ತಾಪಿಸಲು ಬಯಸಿದ್ದರೊ ಏನೊ, ದೇಹವನ್ನು ಕಳಚಿಟ್ಟು ಆಚಿನ ಜಗತ್ತಿಗೇ ಹೊರಟು ಹೋದರು.

ಇದನ್ನೂ ಓದಿ: ಅಬ್ದುಲ್ ಕಲಾಂ ಜನ್ಮದಿನ; ಇಂದು ವಿಶ್ವ ವಿದ್ಯಾರ್ಥಿಗಳ ದಿನ

ಕಲಾಂ ಸರ್ ಎಂದೂ ನಿಂತಲ್ಲಿ ದೀರ್ಘಕಾಲ ನಿಂತವರಲ್ಲ. ರಾಷ್ಟ್ರಪತಿ ಹುದ್ದೆಗೆ ಏರಿದ ಅತ್ಯಂತ ಚಲನಶೀಲ ವ್ಯಕ್ತಿ ಎನಿಸಿದ ಅವರು ತಮ್ಮ ಬದುಕಿನುದ್ದಕ್ಕೂ ಚಲನೆಯನ್ನೇ ಪ್ರತಿನಿಧಿಸಿದಂತಿದ್ದರು. ಓದು ಮುಗಿಸಿ, ರಕ್ಷಣಾ ಇಲಾಖೆಗೆ ಸೇರಿದ ಹೊಸದರಲ್ಲಿ ಅವರ ತಂಡ ತಯಾರಿಸಿದ ಮೊದಲ ಯಂತ್ರವೇ ‘ಹೊವರ್‌ಕ್ರಾಫ್ಟ್’ ಆಗಿತ್ತು. ಅಂದರೆ, ನೆಲದ ಮೇಲಾಗಿರಲಿ ಅಥವಾ ನೀರಿನ ಮೇಲಾಗಿರಲಿ ಅರ್ಧ ಮೀಟರ್ ಎತ್ತರದಲ್ಲಿ ಹಾರಿಕೊಂಡು ಜಾರಿಕೊಂಡು ಹೋಗುವ ದೋಣಿಯಂಥ ಸಾಧನ ಅದಾಗಿತ್ತು. ಸ್ವತಃ ಅಬ್ದುಲ್ ಕಲಾಂ ಅದರ ಚಾಲಕನಾಗಿ, ಪಕ್ಕದಲ್ಲಿ ಅಂದಿನ ರಕ್ಷಣಾ ಸಚಿವ ವಿ.ಕೆ. ಕೃಷ್ಣ ಮೆನನ್ ಅವರನ್ನು ಕೂರಿಸಿಕೊಂಡು ಪ್ರಾತ್ಯಕ್ಷಿಕೆಯನ್ನು ನೀಡಿದ್ದರು.

ರಸ್ತೆ ಅದೆಷ್ಟೇ ಕೆಟ್ಟದಿದ್ದರೂ ಕುಲುಕಾಡದೆ ಸಲೀಸಾಗಿ ಚಲಿಸಬಲ್ಲ ಆ ವಾಹನ ಅದೇಕೋ ಉತ್ಪಾದನೆಯ ಹಂತಕ್ಕೆ ಬರಲೇ ಇಲ್ಲ. ಆದರೆ ಕಲಾಂ ಅದರಿಂದಾಗಿ ಮೇಲಕ್ಕೇರುತ್ತಲೇ ಹೋದರು. ರಕ್ಷಣಾ ಇಲಾಖೆಯಿಂದ ಇಸ್ರೋಕ್ಕೆ ಬಂದು ‘ಎಸ್‌ಎಲ್‌ವಿ’ ರಾಕೆಟ್‌ಗಳ ನಿರ್ಮಾಣಕ್ಕೆ ತೊಡಗಿ ‘ರೋಹಿಣಿ’ ಉಪಗ್ರಹವನ್ನು ಮೇಲಕ್ಕೇರಿಸಿದರು. ನಂತರ ಮತ್ತೆ ರಕ್ಷಣಾ ಸಂಶೋಧನಾ ಸಂಸ್ಥೆಗೇ ಮರಳಿ ದಿಶಾನಿರ್ದೇಶಕ ಯುದ್ಧ ಕ್ಷಿಪಣಿಗಳ (ಗೈಡೆಡ್ ಮಿಸೈಲ್ಸ್) ತಯಾರಿಕೆಯ ಮೇಲ್ವಿಚಾರಣೆ ವಹಿಸಿದರು. ಸ್ಫೋಟಕಗಳನ್ನು ಹೊತ್ತೊಯ್ಯಬಲ್ಲ ವಿವಿಧ ಬಗೆಯ ಯುದ್ಧಾಸ್ತ್ರಗಳಿಗೆ ಪೃಥ್ವಿ, ನಾಗ್, ತ್ರಿಶೂಲ್, ಅಗ್ನಿ ಮುಂತಾದ ಹೆಸರುಗಳನ್ನು ಅವರೇ ಆಯ್ಕೆ ಮಾಡಿದರು.

ರಕ್ಷಣಾ ಸಲಹೆಗಾರರಾಗಿ ಪದೋನ್ನತಿ ಪಡೆದು ‘ತ್ರಿಶೂಲ್’ ಎಂಬ ಕ್ಷಿಪಣಿಯನ್ನು ನೆಲಸೇನೆ, ನೌಕಾಸೇನೆ ಮತ್ತು ವಾಯುಸೇನೆ ಹೀಗೆ ಈ ಮೂರೂ ಬಲಗಳ ಬತ್ತಳಿಕೆಗಳಲ್ಲೂ ಸೇರಿಸಿದರು. ಪರಮಾಣು ತಂತ್ರಜ್ಞಾನದಲ್ಲಿ ಪರಿಣತಿ ಇಲ್ಲದಿದ್ದರೂ ಅದರ ಪರೀಕ್ಷಾರ್ಥ ಸ್ಫೋಟದ ಮೇಲ್ವಿಚಾರಣೆ ನಡೆಸಿ ಯುದ್ಧ ಕ್ಷಿಪಣಿಗಳಲ್ಲಿ ಪರಮಾಣು ಬಾಂಬ್ ಕೂಡ ಸೇರ್ಪಡೆಯಾಗಲು ಕಾರಣರಾದರು. ನಂತರ ಅದೇ ಖ್ಯಾತಿಯಿಂದಾಗಿ ರಾಷ್ಟ್ರಪತಿ ಹುದ್ದೆಯನ್ನೂ ಪಡೆದು, ಆ ಮೂರೂ ಬಲಗಳ ಮಹಾದಂಡನಾಯಕರಾದರು.

ರಾಷ್ಟ್ರಪತಿ ಆಗಿದ್ದಾಗ ತಮ್ಮ 74ನೇ ವಯಸ್ಸಿನಲ್ಲಿ ಧ್ವನಿಯ ವೇಗವನ್ನೂ ಮೀರಿ (ಗಂಟೆಗೆ 2120 ಕಿ.ಮೀ) ಚಲಿಸಬಲ್ಲ ‘ಸುಖೋಯ್- 30’ ವಿಮಾನವನ್ನೇರಿ ಪೈಲಟ್ ಜೊತೆ ಕೂತು, ಅಗಾಧ ಒತ್ತಡವನ್ನು ಸಹಿಸಿಕೊಂಡೇ ವಿಮಾನದಲ್ಲಿರುವ ವಿವಿಧ ಯಂತ್ರಭಾಗಗಳ ಕಾರ್ಯಕ್ಷಮತೆಯ ಪರೀಕ್ಷೆ ನಡೆಸಿದರು. ರಡಾರ್ ಮೇಲೆ ಕಣ್ಣಿಟ್ಟು ನೆಲದ ಚಲನೆಯನ್ನೂ ವೀಕ್ಷಿಸುತ್ತಿದ್ದರು. (‘ಈ ವಯಸ್ಸಿನಲ್ಲಿ, ಅಷ್ಟು ವೇಗದಲ್ಲಿ ಸಾಗಲು ಹೆದರಿಕೆ ಆಗಿಲ್ಲವೆ?’ ಎಂದು ಆಮೇಲೆ ವಿದ್ಯಾರ್ಥಿಯೊಬ್ಬ ಕೇಳಿದಾಗ, ‘ಹೆದರಲಿಕ್ಕೆ ಪುರುಸೊತ್ತೇ ಇರಲಿಲ್ಲ’ ಎಂದಿದ್ದರು.)

ದಿಶಾನಿರ್ದೇಶಕ ಕ್ಷಿಪಣಿಯನ್ನು ರೂಪಿಸಿದ್ದ ಅವರು ತಾವೇ ಸ್ವತಃ ಒಂಥರಾ ಗೈಡೆಡ್ ಮಿಸೈಲ್ ಆಗಿದ್ದರು. ದೇಶದ ಬಡತನ, ಅನಕ್ಷರತೆ, ಮೌಢ್ಯಗಳೇ ಮುಂತಾದ ಅಸಲೀ ವೈರಿಗಳನ್ನು ದಮನ ಮಾಡುವ ನಾನಾ ಬಗೆಯ ಕಾರ್ಯಯೋಜನೆಗಳು ಅವರ ಬತ್ತಳಿಕೆಯಲ್ಲಿರುತ್ತಿದ್ದವು. ಚಂದ್ರನಲ್ಲಿಗೆ ಭಾರತೀಯರು ಹೋಗಬೇಕು, ಅಲ್ಲಿರುವ ಅಪಾರ ಹೀಲಿಯಂ ಇಂಧನವನ್ನು ಎತ್ತಿ ತಂದು ದೇಶದ ಶಕ್ತಿ ಸಮಸ್ಯೆಯನ್ನು ಬಗೆಹರಿಸಬೇಕು; ಕಡಲಂಚಿನ ಥೋರಿಯಂ ಮರಳನ್ನು ಎತ್ತಬೇಕು, ಅದರಿಂದ ಪರಮಾಣು ಶಕ್ತಿಯನ್ನು ಉತ್ಪಾದಿಸಬೇಕು; ದೇಶದ ನದಿಗಳನ್ನೆಲ್ಲ ಜೋಡಿಸಿ ರೈತರ ಬದುಕನ್ನು ಮೇಲೆತ್ತಬೇಕು ಎಂಬೆಲ್ಲ ಕನಸಿನ ಸೂತ್ರಗಳನ್ನು ಮುಂದಿಡುತ್ತಿದ್ದರು.

ಅಂಥ ಬೃಹತ್ ಯೋಜನೆಗಳಿಗೆ ಟೀಕೆಗಳು ಎದುರಾದವು. ಕಲಾಂ ಬಲಿಷ್ಠ ಶಕ್ತಿಗಳ ಕೈಗೊಂಬೆಯಂತೆ ಆಡುತ್ತಿದ್ದಾರೆಂಬ ಆರೋಪ ಬಂದಾಗಲೆಲ್ಲ ಎದೆಗುಂದದೆ ಅವರು ಮೆಲ್ಲನೆ ತಮ್ಮ ಚಲನೆಯ ದಿಕ್ಕನ್ನು ಬದಲಿಸುತ್ತಿದ್ದರು. ಹೊಸ ಹೊಸ ಕನಸುಗಳನ್ನು ಎಳೆಯರೆದುರು ಬಿಚ್ಚುತ್ತ ಬಿತ್ತುತ್ತ ತಾವೇ ಬೆಳೆಯುತ್ತ, ಬದಲಾಗುತ್ತ, ನೆಲದ ವಾಸ್ತವಗಳನ್ನು ಅರ್ಥ ಮಾಡಿಕೊಳ್ಳುತ್ತ ಹೋದರು. ಇಂಥ ಹೈಟೆಕ್ ತಂತ್ರಜ್ಞಾನಗಳ ಲಾಭವೆಲ್ಲ ಅನುಕೂಲಸ್ಥರಿಗೇ ಹೋಗುತ್ತ, ಅದರ ಅಡ್ಡ ಪರಿಣಾಮಗಳೆಲ್ಲ ದುರ್ಬಲರತ್ತ ಸಾಗುವುದು ಅವರಿಗೆ ಬಹುದೊಡ್ಡ ಸಮಸ್ಯೆಯಾಗಿ ಕಂಡಿತು.

ಸಮತೋಲ ಅಭಿವೃದ್ಧಿಯ ಪರಿಕಲ್ಪನೆ ಹೇಗಿರಬೇಕೆಂಬ ಬಗ್ಗೆ ತಜ್ಞರೊಂದಿಗೆ ಚರ್ಚಿಸುತ್ತ, ಭಾರತದ 60 ಲಕ್ಷ ಹಳ್ಳಿಗಳಿಗೆ ಸೂಕ್ತ ತಂತ್ರಜ್ಞಾನವನ್ನು ತಲುಪಿಸುವ ಸೂತ್ರಗಳನ್ನು ರೂಪಿಸುತ್ತ, ಆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸುವಂತೆ ಕರೆ ನೀಡುತ್ತ ಹೋದರು. ಎಷ್ಟೆಂದರೆ ಬೆಂಗಳೂರಿನ ಪ್ರೆಸ್‌ಕ್ಲಬ್ ಉಪನ್ಯಾಸದಲ್ಲೂ ಅವರು ಕೆರೆಗಳ ಹೂಳೆತ್ತುವ ಬಗ್ಗೆ, ಬಡತನವನ್ನು ಮೀರಿ ನಿಲ್ಲುವ ರೈತರ ಯಶೋಗಾಥೆಗಳ ಪ್ರಚಾರಕ್ಕೆ ಆದ್ಯತೆ ಕೊಡುವಂತೆ ಪತ್ರಕರ್ತರಿಗೆ ಬೋಧಿಸಿದ್ದರು.

ದೇಶದ ಎಲ್ಲ ಸಮಸ್ಯೆಗಳಿಗೂ ಉತ್ತರ ಹುಡುಕುತ್ತ, ಅದಕ್ಕೆಂದು ಯುವ ಪೀಳಿಗೆಯನ್ನು ಪ್ರೇರೇಪಿಸಬಲ್ಲ ಗ್ರಂಥಗಳನ್ನು, ಕವನಗಳನ್ನು ಬರೆಯುತ್ತ, ವೀಣೆ ನುಡಿಸುತ್ತ, ಅಪ್ಪಟ ಮೇಷ್ಟ್ರಂತೆ ಮಕ್ಕಳಿಗೆ ಪಾಠ ಹೇಳುತ್ತ, ಅಧ್ಯಾತ್ಮದ ಬಗ್ಗೆ ತಾವೇ ಪಾಠ ಹೇಳಿಸಿಕೊಳ್ಳುತ್ತ, ಪರಿಶ್ರಮ ಮತ್ತು ಪ್ರಾಮಾಣಿಕತೆಗೆ ತಾವೇ ಮಾದರಿಯಾಗುತ್ತ ಯುವ ಹೃದಯಗಳನ್ನು ಗೆಲ್ಲುತ್ತ ಮೇಲೇರಿದರು.

ಮೇಲಕ್ಕೇರುತ್ತ ಹೋದವರಿಗೆ ಇಡೀ ಭೂಮಂಡಲವೇ ಕಾಣತೊಡಗುತ್ತದೆ. ಒಂದೆಡೆ ಉತ್ತರದ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಮಾನವ ಸಂಪನ್ಮೂಲಗಳ ಅಭಾವ; ಇನ್ನೊಂದೆಡೆ ದಕ್ಷಿಣದ ಗಿಜಿಗುಡುವ ಬಡರಾಷ್ಟ್ರಗಳಲ್ಲಿ ಅಭಿವೃದ್ಧಿಯ ಅಭಾವ. ಈ ಎರಡನ್ನೂ ಭಾರತವೇ ಸರಿತೂಗಿಸುವ ಕನಸನ್ನು ಹೆಣೆದರು. ನಾಲ್ಕು ವರ್ಷಗಳ ಹಿಂದೆ ಆಫ್ರಿಕದ 53 ದೇಶಗಳ ಮಹಾಮೇಳದಲ್ಲಿ ಮಾತಾಡುತ್ತ, ‘ಕೇವಲ 15 ಕೋಟಿ ಡಾಲರ್ ಕೊಡಿ; ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಸಂಪರ್ಕ ತಂತ್ರಜ್ಞಾನ ಏನೆಲ್ಲ ಕೊಟ್ಟೀತೆಂದು ನಾನು ತೋರಿಸುತ್ತೇನೆ’ ಎಂದಿದ್ದರು.

ಅದೊಂದು ಸವಾಲಿನಿಂದಾಗಿ ಆ ಅಷ್ಟೂ ದೇಶಗಳಲ್ಲಿ ಅಂಥ ಅಲ್ಪ ಮೊತ್ತದಲ್ಲಿ ಟೆಲಿ ಮೆಡಿಸಿನ್ ಮತ್ತು ಇ- ಶಿಕ್ಷಣ ವ್ಯವಸ್ಥೆಯನ್ನು ನಮ್ಮವರೇ ಕಲ್ಪಿಸುವಂತಾಯಿತು. ನಮ್ಮ ಬಹುಕೋಟಿ ಯುವಜನತೆ ಸುಶಿಕ್ಷಿತರಾದರೆ ಇಡೀ ಜಗತ್ತಿಗೆ ಆಸರೆ ಒದಗಿಸಲು ಸಾಧ್ಯ ಎಂಬುದಕ್ಕೆ ಪ್ರಾತ್ಯಕ್ಷಿಕೆ ಸಿಕ್ಕಂತಾಯಿತು.

ಆ ಹೊತ್ತಿಗೆ ಪೃಥ್ವೀಮಟ್ಟದ ಪರಿಸರ ಸಮಸ್ಯೆಗಳ ಕಾವು ಅವರನ್ನು ತಟ್ಟತೊಡಗಿತ್ತು. 2012ರಲ್ಲಿ ಪೆಂಗ್ವಿನ್ ವಾರ್ಷಿಕ ಸಭೆಯಲ್ಲಿ ಮಾತಾಡುತ್ತ, ‘ಸಾವಿರಾರು ವರ್ಷಗಳಿಂದ ನಾವು ಸಂಪನ್ಮೂಲಗಳನ್ನು ಭೂಮಿಯ ಒಡಲಿನಿಂದ ಮೇಲಕ್ಕೆತ್ತುತ್ತ ಬಂದಿದ್ದೇವೆ ವಿನಾ ಏನನ್ನೂ ಹಿಂದಿರುಗಿಸಿಲ್ಲ. ಹೀಗೆ ಮೇಲೆತ್ತುವ ಪ್ರಮಾಣವನ್ನು ಕಮ್ಮಿ ಕಮ್ಮಿ ಮಾಡುತ್ತ ಸುಸ್ಥಿರ ಅಭಿವೃದ್ಧಿಯ ಹಾದಿ ತುಳಿಯಬೇಕು’ ಎಂದು ಕರೆಕೊಟ್ಟರು. ಆ ನಿಟ್ಟಿನಲ್ಲಿ ಬೋಧನಾ ಸರಣಿ ಆರಂಭಿಸಿ, ಈಚೆಗೆ ಬಾಂಬೆ ಐಐಟಿಯ ಟೆಕ್‌ಫೆಸ್ಟ್‌ನಲ್ಲಿ ನೆರೆದಿದ್ದ ವಿದ್ಯಾರ್ಥಿಗಳಿಗೆ ಸೌರದೀಕ್ಷೆ ಕೊಡಿಸಿದರು: ‘ಸಿಂಗಪುರ ನಮಗಿಂತ 12 ಪಟ್ಟು ಹೆಚ್ಚು ಶಕ್ತಿಯನ್ನು ಬಳಸುತ್ತಿದೆ. ಅಮೆರಿಕ 14 ಪಟ್ಟು, ಅರಬ್ ಎಮಿರೇಟ್ ನಮಗಿಂತ 16 ಪಟ್ಟು ಹೆಚ್ಚು ಶಕ್ತಿಯನ್ನು ಬಳಸುತ್ತಿದೆ.

ನಾವು ಅವರಷ್ಟೇ ಶಕ್ತಿವಂತರಾಗಬೇಕೆಂದರೆ ಪೆಟ್ರೋಲು ಕಲ್ಲಿದ್ದಲಿಂದ ಸಾಧ್ಯವಿಲ್ಲ. ಡಾಲರ್‌ಗಳನ್ನು ಸುರಿದು ಆಮದು ಮಾಡಿಕೊಂಡರೂ ನಾವು ಉರಿಸುವ ಪ್ರತಿ ಲೀಟರ್ ತೈಲವೂ 2.2 ಕಿಲೊಗ್ರಾಂ ಕಾರ್ಬನ್ ಡೈಆಕ್ಸೈಡ್ ಹೊಮ್ಮಿಸುತ್ತ ವರ್ಷಕ್ಕೆ 35 ಕೋಟಿ ಟನ್ ವಿಷವಸ್ತು ವಾಯುಮಂಡಲಕ್ಕೆ ಸೇರುತ್ತದೆ. ಇಡೀ ಭೂಗ್ರಹದ ಉಷ್ಣತೆಯನ್ನು ನಾವೇ ಹೆಚ್ಚಿಸುತ್ತ ಹೋಗುತ್ತೇವೆ. ಅದರ ಬದಲಿಗೆ ದೇಶದ 22 ಕೋಟಿ ಮನೆಗಳಿಗೂ ಸೌರ ವಿದ್ಯುತ್ ಶಕ್ತಿ ಸಿಗುವಂತಾಗಬೇಕು. ಸೂರ್ಯನ ಶಕ್ತಿಯಿಂದಲೇ ಓಡಬಲ್ಲ ಕಾರುಗಳು ತಯಾರಾಗಬೇಕು, ನಾವೇ ಜಗತ್ತಿಗೆಲ್ಲ ಮಾದರಿಯಾಗಬೇಕು’ ಎಂದರು. ‘ಇಲ್ಲಿ ನೆರೆದ ಪ್ರತಿಯೊಬ್ಬ ವಿದ್ಯಾರ್ಥಿಯೂ ಸೂರ್ಯನ ರಾಯಭಾರಿಯಾಗಬೇಕು’ ಎನ್ನುತ್ತ ಅವರೆಲ್ಲರಿಗೆ ಪ್ರತಿಜ್ಞಾ ವಿಧಿಯನ್ನೇ ಬೋಧಿಸಿದರು.

ಹೋದಲ್ಲೆಲ್ಲ ಹೀಗೆ ದೀಕ್ಷೆ ಕೊಡಿಸುತ್ತ, ಸೂತ್ರಪಾಠ ಮಾಡಿಸುತ್ತ, ಪ್ರತಿಜ್ಞಾ ವಿಧಿ ಬೋಧಿಸುತ್ತ ಕೊನೆಗೆ ಅವರದ್ದೇ ಯೋಜನೆಗಳ ಯಶೋಗಾಥೆಗಳ ಚಿತ್ರಣ ಹೇಗಿದೆ? ಅಲ್ಲಿ ನಮಗೆ ಕೆಲಮಟ್ಟಿಗೆ ನಿರಾಸೆ ಕಾದಿದೆ. ಅವರು ಹೆಣೆದ ಕನಸುಗಳಲ್ಲಿ ಕೆಲವು ಕೈಗೂಡುತ್ತಿಲ್ಲ, ಇನ್ನು ಕೆಲವು ಕಮರಿ ಹೋಗುತ್ತಿವೆ. ವಿಜ್ಞಾನ ತಂತ್ರಜ್ಞಾನಕ್ಕೆ ರಾಷ್ಟ್ರೀಯ ಮುಂಗಡಪತ್ರದಲ್ಲಿ ಶೇ 1ಕ್ಕಿಂತ ಹೆಚ್ಚಿನ ಅನುದಾನ ಈಗಲೂ ಸಿಗುತ್ತಿಲ್ಲ. ಪ್ರತಿಭಾವಂತ ಯುವಜನರೆಲ್ಲ ಎಂಜಿನಿಯರ್‌ಗಳಾಗಿ, ಡಾಕ್ಟರ್‌ಗಳಾಗಿ, ಸಾಫ್ಟ್‌ವೇರ್ ಪರಿಣತರಾಗಿ ಹಣ ಸಂಪಾದನೆಯ ಮಾರ್ಗವನ್ನೇ ಆಯ್ಕೆ ಮಾಡಿಕೊಳ್ಳುತ್ತಿರುವಾಗ, ವಿಜ್ಞಾನ ಮತ್ತು ಸಂಶೋಧನೆಯನ್ನೇ ಮುಖ್ಯವೃತ್ತಿಯಾಗಿಸಬಲ್ಲ ‘ಸೈನ್ಸ್ ಕೇಡರ್’ ಆರಂಭಿಸಬೇಕು ಎಂದು ಅವರು ಹೇಳುತ್ತಿದ್ದರು. ಅದು ಕಾರ್ಯಗತ ಆಗಲಿಲ್ಲ.

ಹಳ್ಳಿಯ ಜನರು ನಗರಗಳತ್ತ ವಲಸೆ ಬರುವುದನ್ನು ತಡೆಯಲು ಅವರು ‘ಪುರ’ ಎಂಬ ಯೋಜನೆಯನ್ನು ರೂಪಿಸಿದರು. ಅಂದರೆ ಹಳ್ಳಿಗಿಂತ ದೊಡ್ಡದಾದ, ಆದರೆ ನಗರಕ್ಕಿಂತ ತುಸು ಚಿಕ್ಕದಾದ ಪಟ್ಟಣಗಳಲ್ಲಿ ಆದರ್ಶ ಮಟ್ಟದ ಮೂಲ ಸೌಕರ್ಯ, ಉದ್ಯೋಗ, ಸಂಪರ್ಕ, ಸಮುಚಿತ ಶಿಕ್ಷಣ, ಆರೋಗ್ಯ ವ್ಯವಸ್ಥೆ ಎಲ್ಲವನ್ನು ಒದಗಿಸುವ ಕನಸನ್ನು ಹೆಣೆದರು. ಈ ಯೋಜನೆ ಅನೇಕ ರಾಜ್ಯಗಳಲ್ಲಿ ಆರಂಭವಾಗಿದ್ದೇನೊ ಹೌದು. ಆದರೆ ಮಾದರಿಯಾಗುವ ಮಟ್ಟಕ್ಕೆ ಯಾವ ಪುರವೂ ಬೆಳೆದು ನಿಂತಿಲ್ಲ. ಯೋಜನೆಗಳು ಅದೆಷ್ಟೇ ಸೂತ್ರಬದ್ಧವಾಗಿದ್ದರೂ ಅವು ನೆಲ ಮುಟ್ಟುತ್ತಿಲ್ಲ, ನಿರೀಕ್ಷಿತ ಫಲ ಕೊಡುತ್ತಿಲ್ಲ.

ಹಾಗೆಂದು ಅವರು ಖಿನ್ನರಾಗಿ ಕೂತಿದ್ದೇ ಇಲ್ಲ. ಇಂದಿನ ಪೀಳಿಗೆಯ ವೈಫಲ್ಯಗಳೇ ನಾಳಿನವರಿಗೆ ಮೆಟ್ಟಿಲಾಗುತ್ತವೆ ಎಂದು ನಂಬಿ ಈ ಮೇಷ್ಟ್ರು ತಮ್ಮ ದಾರಿಯುದ್ದಕ್ಕೂ ಹಿಡಿತುಂಬ ಕನಸುಗಳನ್ನು ಬಿತ್ತುತ್ತಲೇ ಹೋದರು.

ಪುಣ್ಯಾತ್ಮ, ಬಿತ್ತುತ್ತಿರುವಾಗಲೇ ಹೋದರು.

editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.