ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಕ್ರಿಕೆಟ್ ಬೆಟ್ಟಿಂಗ್ ಹೆಚ್ಚಳ: 50 ಮಂದಿ ಬಂಧನ

ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣಕ್ಕೆ ಪೊಲೀಸರ ಕ್ರಮ l ಏಪ್ರಿಲ್ ಅಂಕಿ–ಅಂಶ ಬಿಡುಗಡೆ
Published 8 ಮೇ 2024, 0:30 IST
Last Updated 8 ಮೇ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಐಪಿಎಲ್ ಟಿ– 20 ಕ್ರಿಕೆಟ್ ಪಂದ್ಯಗಳು ನಡೆಯುತ್ತಿರುವ ಬೆನ್ನಲ್ಲೇ ನಗರದಲ್ಲಿ ಬೆಟ್ಟಿಂಗ್ ಪ್ರಕರಣಗಳು ಹೆಚ್ಚಳವಾಗಿದ್ದು, ಏಪ್ರಿಲ್‌ ತಿಂಗಳಿನಲ್ಲಿ 50 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

‘ಮಾರ್ಚ್‌ 22ರಿಂದ ಐಪಿಎಲ್ ಟಿ– 20 ಕ್ರಿಕೆಟ್ ಪಂದ್ಯಗಳು ಆರಂಭವಾಗಿದ್ದು, ಮೇ 26ರಂದು ಫೈನಲ್‌ ಪಂದ್ಯವಿದೆ. ಈ ಕ್ರಿಕೆಟ್ ಪಂದ್ಯಗಳ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದವರ ವಿರುದ್ಧ ಏಪ್ರಿಲ್‌ನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದ್ದು, 25 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ಹೇಳಿದರು.

ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣಕ್ಕೆ ಏಪ್ರಿಲ್‌ನಲ್ಲಿ ಪೊಲೀಸರು ಕೈಗೊಂಡ ಕ್ರಮಗಳ ಅಂಕಿ–ಅಂಶಗಳನ್ನು ದಯಾನಂದ್ ಅವರು ಮಂಗಳವಾರ ಬಿಡುಗಡೆ ಮಾಡಿದರು.

‘ಜೂಜಾಟಕ್ಕೆ ಸಂಬಂಧಪಟ್ಟಂತೆ 48 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, 369 ಮಂದಿಯನ್ನು ಬಂಧಿಸಲಾಗಿದೆ. ಜೂಜಾಟ ಸ್ಥಳಗಳ ಮಾಲೀಕರ ವಿರುದ್ಧವೂ ಕ್ರಮ ಜರುಗಿಸಲಾಗಿದೆ’ ಎಂದರು.

‘ಮಟ್ಕಾ, ಜೂಜಾಟ, ಕ್ರಿಕೆಟ್ ಬೆಟ್ಟಿಂಗ್, ವೇಶ್ಯಾವಾಟಿಕೆ, ಅಕ್ರಮ ಶಸ್ತ್ರಾಸ್ತ್ರ, ಡ್ರಗ್ಸ್ ಸಾಗಣೆ–ಮಾರಾಟ ಸೇರಿದಂತೆ ವಿವಿಧ ಕಾನೂನು ಬಾಹಿರ ಚಟುವಟಿಕೆಗಳನ್ನು ಪತ್ತೆ ಮಾಡಿ 182 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಜೊತೆಗೆ, 563 ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ದಯಾನಂದ್ ಹೇಳಿದರು.

42 ಜನರು ಗಡಿಪಾರು: ‘ರೌಡಿಗಳು ಹಾಗೂ ಅಪರಾಧ ಹಿನ್ನೆಲೆಯುಳ್ಳವರ ಮೇಲೆ ನಿಗಾ ವಹಿಸಲಾಗಿದೆ. ಮುಚ್ಚಳಿಕೆ ನಿಯಮ ಉಲ್ಲಂಘಿಸಿದ್ದ ಇಬ್ಬರು ರೌಡಿಗಳ ಬಾಂಡ್‌ ಮೌಲ್ಯವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 42 ವ್ಯಕ್ತಿಗಳನ್ನು ಗಡಿಪಾರು ಸಹ ಮಾಡಲಾಗಿದೆ’ ಎಂದು ದಯಾನಂದ್ ತಿಳಿಸಿದರು.

‘510 ಪ್ರಕರಣಗಳಲ್ಲಿ ಶಿಕ್ಷೆ: ₹ 25 ಸಾವಿರ ಬಹುಮಾನ’

‘ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 997 ಪ್ರಕರಣಗಳ ವಿಚಾರಣೆಯನ್ನು ಪೂರ್ಣಗೊಳಿಸಿರುವ ನ್ಯಾಯಾಲಯ 510 ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆ ಹಾಗೂ ದಂಡವನ್ನು ವಿಧಿಸಿದೆ’ ಎಂದು ಕಮಿಷನರ್ ದಯಾನಂದ್ ತಿಳಿಸಿದರು. ‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ)ಕಾಯ್ದೆ ಕೊಲೆ ಕೊಲೆ ಯತ್ನ ಎನ್‌ಡಿಪಿಎಸ್ ವಂಚನೆ ಹಾಗೂ ಇತರೆ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆ ಆಗಿದೆ. ಕೆಲ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ’ ಎಂದು ಅವರು ಹೇಳಿದರು. ‘ಜೀವಾವಧಿ ಶಿಕ್ಷೆ ಆಗಲು ಉತ್ತಮ ರೀತಿಯಲ್ಲಿ ತನಿಖೆ ಮಾಡಿದ್ದ ತನಿಖಾಧಿಕಾರಿಗಳಿಗೆ ತಲಾ ₹ 25000 ಬಹುಮಾನ ನೀಡಲಾಗಿದೆ. ಉಳಿದ ಪ್ರಕರಣಗಳ ತನಿಖಾಧಿಕಾರಿಗಳಿಗೆ ತಲಾ ₹ 10000 ಬಹುಮಾನ ನೀಡಲಾಗುವುದು’ ಎಂದು ದಯಾನಂದ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT