ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ಯಾಯವಾಗಿದ್ದು ಯುಪಿಎ ಕಾಲದಲ್ಲಿ: ಆರ್‌. ಅಶೋಕ

Published 28 ಏಪ್ರಿಲ್ 2024, 15:39 IST
Last Updated 28 ಏಪ್ರಿಲ್ 2024, 15:39 IST
ಅಕ್ಷರ ಗಾತ್ರ

ಬೆಂಗಳೂರು: ‘ಬರ ಪರಿಹಾರದ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿರುವುದು ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಅಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯಕ್ಕೆ ಭರಪೂರ ಪರಿಹಾರ ನೀಡಿದೆ. ಆದರೆ, ರಾಜ್ಯಕ್ಕೆ ಚಿಪ್ಪು ನೀಡಿರುವ ಕಾಂಗ್ರೆಸ್‌ನವರು ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಬರಗಾಲದಿಂದ ಆಗಿರುವ ಹಾನಿಗೆ ಮಾರ್ಗಸೂಚಿಗಳ ಪ್ರಕಾರ, ₹ 4,860 ಕೋಟಿ ಪರಿಹಾರ ನೀಡುವಂತೆ ಕೋರಿ ರಾಜ್ಯ ಸರ್ಕಾರ ಮೊದಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಅದರ ಆಧಾರದಲ್ಲಿ ಕೇಂದ್ರ ಸರ್ಕಾರ ₹ 3,454 ಕೋಟಿ ಬಿಡುಗಡೆ ಮಾಡಿದೆ. ಎರಡನೇ ಹಂತದಲ್ಲಿ ₹ 18,172 ಕೋಟಿ ಪರಿಹಾರ ಕೋರಿ ಮನವಿ ಸಲ್ಲಿಸಿದ್ದ ಕಾಂಗ್ರೆಸ್‌ ಸರ್ಕಾರ, ಅದನ್ನೇ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉ‍ಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಎರಡು ನಾಲಗೆ ಇದ್ದಂತೆ ಮಾತನಾಡುತ್ತಾರೆ’ ಎಂದು ವಾಗ್ದಾಳಿ ನಡೆಸಿದರು.

‘2004–05ರಿಂದ 2014ರವರೆಗೆ ರಾಜ್ಯ ಸರ್ಕಾರ ಬರ, ನೆರೆ ಪರಿಹಾರ ಕೋರಿ ಸಲ್ಲಿಸಿದ್ದ ಪ್ರಸ್ತಾವಗಳು ಮತ್ತು ಬಿಡುಗಡೆಯಾದ ನೆರವಿನ ಮೊತ್ತದ ಮಾಹಿತಿಯನ್ನು ಅವಲೋಕಿಸಿ ನೋಡಲಿ. ಬೇಡಿಕೆಯ ಶೇ 4ರಿಂದ 18ರಷ್ಟು ಮೊತ್ತವನ್ನು ಮಾತ್ರ ಬಿಡುಗಡೆ ಮಾಡಲಾಗಿತ್ತು. ಇದು ಯುಪಿಎ ಮೈತ್ರಿಕೂಟದ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡಿರುವುದಕ್ಕೆ ಸಾಕ್ಷಿ’ ಎಂದರು.

‘2014ರಿಂದ ಈವರೆಗೆ ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಸರ್ಕಾರದ ಅವಧಿಯಲ್ಲಿ ಬೇಡಿಕೆ ಮೊತ್ತಕ್ಕೆ ಹೋಲಿಸಿದರೆ ಶೇ 88ರವರೆಗೂ ಪರಿಹಾರ ಬಿಡುಗಡೆ ಆಗಿದೆ. ಈ ಕುರಿತು ನೈಜ ಅಂಕಿಅಂಶಗಳನ್ನು ಒದಗಿಸಲು ಬಿಜೆಪಿ ಸಿದ್ಧವಿದೆ. ಸುಳ್ಳು ಹೇಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ’ ಎಂದು ಅಶೋಕ ಆಗ್ರಹಿಸಿದರು.

ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ
‘ಯುಪಿಎ ಸರ್ಕಾರದಿಂದ ವಂಚನೆ’
ಬೆಂಗಳೂರು: ‘ರಾಜ್ಯದಲ್ಲಿ ಬರ ನೆರೆ ಬಂದಾಗ ಅತ್ಯಲ್ಪ ಪರಿಹಾರ ನೀಡಿ ವಂಚಿಸಿದ್ದು ಕಾಂಗ್ರೆಸ್‌ ನೇತೃತ್ವದ ಯು‍ಪಿಎ ಮೈತ್ರಿಕೂಟದ ಸರ್ಕಾರ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ದೂರಿದರು. ಸುದ್ದಿಗಾರರ ಜತೆ ಭಾನುವಾರ ಮಾತನಾಡಿದ ಅವರು ‘ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಹೆಚ್ಚು ಅನ್ಯಾಯವಾಗಿದೆ. ಆದರೆ ರಾಜ್ಯದ ಕಾಂಗ್ರೆಸ್‌ ಸರ್ಕಾರವು ಎನ್‌ಡಿಎ ಮೈತ್ರಿಕೂಟದ ಅವಧಿಯಲ್ಲಿ ಅನ್ಯಾಯವಾಗಿದೆ ಎಂದು ಗೂಬೆ ಕೂರಿಸಲು ಯತ್ನಿಸುತ್ತಿದೆ’ ಎಂದರು. ‘ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್‌) ಮಾರ್ಗಸೂಚಿ ಅನುಸಾರ ₹ 4860 ಕೋಟಿ ಪರಿಹಾರ ಕೇಳಿ ಮೊದಲು ರಾಜ್ಯ ಸರ್ಕಾರ ಮನವಿ ಸಲ್ಲಿಸಿತ್ತು. ಅದರ ಅನುಸಾರ ₹ 3454 ಕೋಟಿ ಪರಿಹಾರವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ₹ 18172 ಕೋಟಿ ಪರಿಹಾರ ಕೇಳಲಾಗಿತ್ತು ಎಂದು ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಇದು ಸರಿಯಾದ ನಡೆಯಲ್ಲ’ ಎಂದರು. ‘ರಾಜ್ಯ ಸರ್ಕಾರದವರು ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುವುದರಲ್ಲೇ ಕಾಲಹರಣ ಮಾಡಬಾರದು. ಕೇಂದ್ರದಿಂದ ಬಂದಿರುವ ಹಣವನ್ನು ಜನರಿಗೆ ಸಮರ್ಪಕವಾಗಿ ತಲುಪಿಸುವ ಕೆಲಸ ಮಾಡಲಿ’ ಎಂದು ಆಗ್ರಹಿಸಿದರು.

ಬರ ಪರಿಹಾರದ ದಾಖಲೆ ಬಿಡುಗಡೆ ಮಾಡಿದ ಬೊಮ್ಮಾಯಿ

ಹಾವೇರಿ: ‌‘ಕೇಂದ್ರ ಸರ್ಕಾರ ನೀಡಿರುವ ₹3,454 ಕೋಟಿ ಬರ ಪರಿಹಾರದ ಮೊತ್ತಕ್ಕೆ ಸಮನಾಗಿ ರಾಜ್ಯ ಸರ್ಕಾರವೂ ತನ್ನ ಖಜಾನೆಯಿಂದ ರೈತರಿಗೆ ಬರ ಪರಿಹಾರವನ್ನು ತಕ್ಷಣವೇ ನೀಡಬೇಕು’ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು. 

‘ಕಾಂಗ್ರೆಸ್‌ ಸರ್ಕಾರಕ್ಕೆ ಬದ್ಧತೆ ಇದ್ದರೆ, ಖಜಾನೆಯಲ್ಲಿ ದುಡ್ಡಿದ್ದರೆ ಮತ್ತು ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ತನ್ನ ಪಾಲಿನ ಹಣವನ್ನೂ ಸಂಕಷ್ಟದಲ್ಲಿರುವ ಅನ್ನದಾತರ ಖಾತೆಗೆ ತಕ್ಷಣ ಹಾಕಬೇಕು. ಬರ ಪರಿಹಾರದ ಬಗ್ಗೆ ಕಾಂಗ್ರೆಸ್ ಸರ್ಕಾರ ಹಿಂದೆಂದೂ ಕಾಣದ ರಾಜಕಾರಣ ಮಾಡುತ್ತಿದೆ’ ಎಂದು ಅವರು ಭಾನುವಾರ ಪತ್ರಿಕಾ ಗೋಷ್ಠಿಯಲ್ಲಿ ಆರೋಪಿಸಿದರು.

‘ಯುಪಿಎ ಹಾಗೂ ಎನ್‌ಡಿಎ ಅವಧಿಯಲ್ಲಿ ರಾಜ್ಯಕ್ಕೆ ಬಿಡುಗಡೆಯಾದ ಪರಿಹಾರದ ದಾಖಲೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಯುಪಿಎ ಸರ್ಕಾರದ ಅವಧಿಯಲ್ಲಿ 2004 ರಿಂದ 2014ರವರೆಗೆ 10 ವರ್ಷಗಳಲ್ಲಿ ರಾಜ್ಯ ಸರ್ಕಾರದಿಂದ ಬರ ಪರಿಹಾರಕ್ಕೆ ₹19,579 ಕೋಟಿ ಕೋರಲಾಗಿತ್ತು. ಆದರೆ ಬಿಡುಗಡೆ ಮಾಡಿದ್ದು ಕೇವಲ ₹1,954 ಕೋಟಿ. ಅಂದರೆ ಶೇ 10ರಷ್ಟು ಬರ ಪರಿಹಾರ’ ಎಂದು ಹೇಳಿದರು. 

‘ಎನ್‌ಡಿಎ ಸರ್ಕಾರದ ಅವಧಿಯಲ್ಲಿ 2014-24ರವರೆಗೆ ರಾಜ್ಯ ಸರ್ಕಾರದಿಂದ ₹36,588 ಕೋಟಿ ಪರಿಹಾರಕ್ಕೆ ಬೇಡಿಕೆ ಸಲ್ಲಿಸಿದ್ದು, ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರ ₹9,639 ಕೋಟಿ (ಶೇ 26ರಷ್ಟು) ಬಿಡುಗಡೆ ಮಾಡಿದೆ. ಯುಪಿಎ ಸರ್ಕಾರ ಮತ್ತು ಎನ್‌ಡಿಎ ಸರ್ಕಾರ ಕರ್ನಾಟಕಕ್ಕೆ ನೀಡಿದ ಪರಿಹಾರದಲ್ಲಿ ಅಜಗಜಾಂತರವಿದೆ’ ಎಂದರು. ‘ಯಡಿಯೂರಪ್ಪ ಮತ್ತು ನಾನು ಸಿಎಂ ಆಗಿದ್ದ  ಅವಧಿಯಲ್ಲಿ ಪ್ರವಾಹ ಬಂದಾಗ ಮನೆ ಕಳೆದು ಕೊಂಡವರಿಗೆ ತಕ್ಷಣ ಪರಿಹಾರವಾಗಿ ₹10 ಸಾವಿರ ಬಿಡುಗಡೆ ಮಾಡಿದ್ದೆವು. ಈಗಿನ ಕಾಂಗ್ರೆಸ್ ಸರ್ಕಾರ ತನ್ನ ಖಜಾನೆಯಿಂದ ನಯಾಪೈಸೆ ಪರಿಹಾರ ನೀಡಿಲ್ಲ’ ಎಂದು ವಾಗ್ದಾಳಿ ನಡೆಸಿದರು. 

ಮೋದಿಯವರನ್ನು ಟೀಕಿಸುವುದು ಕಾಂಗ್ರೆಸ್‌ಗೆ ಫ್ಯಾಷನ್ ಆಗಿದೆ. ಕಾಂಗ್ರೆಸ್‌ಗೆ ಮೋದಿ ಫೋಬಿಯಾ ಶುರುವಾಗಿದೆ‌ ಎಂದು ಬೊಮ್ಮಾಯಿ ಹೇಳಿದರು.

ಕಾಂಗ್ರೆಸ್‌ ನಡೆ ಖಂಡಿಸುವೆ: ಬಿಎಸ್‌ವೈ

ಬಾಗಲಕೋಟೆ: ದೊಡ್ಡ ಪ್ರಮಾಣದಲ್ಲಿ ಪರಿಹಾರ ಹಣ ಬಿಡುಗಡೆ ಮಾಡಿದ ನಂತರವೂ ಪ್ರತಿಭಟಿಸುತ್ತಿರುವುದು ನೋಡಿದರೆ ಕೇಂದ್ರ ಸರ್ಕಾರವನ್ನು ದೂರಬೇಕು. ಅಪಪ್ರಚಾರ ಮಾಡಬೇಕು ಎನ್ನುವುದು ಬಿಟ್ಟರೆ ಕಾಂಗ್ರೆಸ್‌ನದ್ದು ಬೇರೆ ಉದ್ದೇಶ ಕಾಣುತ್ತಿಲ್ಲ. ಸ್ಪಂದಿಸಿದ ನಂತರವೂ ಪ್ರತಿಭಟನೆ ಮಾಡುವುದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗೆ ಶೋಭೆ ತರುವುದಿಲ್ಲ. ಕಾಂಗ್ರೆಸ್‌ನ ಈ ನಡೆಯನ್ನು ಖಂಡಿಸುತ್ತೇನೆ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಯುಪಿಎ ಅವಧಿಯಲ್ಲಿ ರಾಜ್ಯಕ್ಕೆ ಶೇ 10–11ರಷ್ಟು ಅನುದಾನ ಬಿಡುಗಡೆ ಆಗಿದ್ದರೆ, ಎನ್‌ಡಿಎ ಅವಧಿಯಲ್ಲಿ ಶೇ 51ರಷ್ಟು ಅನುದಾನ ನೀಡಲಾಗಿದೆ
ಪ್ರಲ್ಹಾದ ಜೋಶಿ, ಬಿಜೆಪಿ ಅಭ್ಯರ್ಥಿ, ಧಾರವಾಡ ಲೋಕಸಭಾ ಕ್ಷೇತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT