ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಂದರ್ಶನ | ಪ್ರಜ್ವಲ್‌ ಪ್ರಕರಣ ; ಬಿಜೆಪಿ ಹೊಣೆಯಲ್ಲ: ರಾಜನಾಥ್ ಸಿಂಗ್

ಸುಮಿತ್‌ ಪಾಂಡೆ
Published 9 ಮೇ 2024, 0:25 IST
Last Updated 9 ಮೇ 2024, 0:25 IST
ಅಕ್ಷರ ಗಾತ್ರ

ಲೋಕಸಭಾ ಚುನಾವಣೆಯ ಪ್ರಚಾರದ ನಡುವೆ ಕೇಂದ್ರದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನ ಇಲ್ಲಿದೆ. ಜೆಡಿಎಸ್‌–ಬಿಜೆಪಿ ಮೈತ್ರಿ, ಸಂಸದ ಪ್ರಜ್ವಲ್‌ ರೇವಣ್ಣ ‍ಪ್ರಕರಣ, ಸಂವಿಧಾನ ಬದಲಾವಣೆ ಗುಲ್ಲು, ತನಿಖಾ ಸಂಸ್ಥೆಗಳ ದುರುಪಯೋಗ ಆರೋಪ ಮತ್ತಿತರ ವಿಷಯಗಳ ಕುರಿತು ಅವರು ಮುಕ್ತವಾಗಿ ಮಾತನಾಡಿದ್ದಾರೆ

ಪ್ರ

ಯಾವೆಲ್ಲ ವಿಷಯಗಳನ್ನು ಮುಂದಿಟ್ಟುಕೊಂಡು ಬಿಜೆಪಿಯು ಮೂರನೇ ಅವಧಿಗೆ ಜನಾದೇಶ ಕೋರುತ್ತಿದೆ? 

ಅಂತರರಾಷ್ಟ್ರೀಯ ಸಮುದಾಯದಲ್ಲಿ ಭಾರತದ ಸ್ಥಾನಮಾನ ಬೆಳೆದಿದೆ. ಭಾರತವು ಅಭಿವೃದ್ಧಿ ಹೊಂದಿದ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸ ಜನರಿಗೆ ಇದೆ. ದೇಶ ಪ್ರಗತಿಯ ಹಾದಿಯಲ್ಲಿದೆ ಎಂದು ಜನರು ಭಾವಿಸಿದ್ದಾರೆ. 

ಪ್ರ

ಮೊದಲ ಎರಡು ಹಂತದ ಮತದಾನದ ಬಳಿಕ ಬಿಜೆಪಿಯು ತನ್ನ ಸಾಧನೆಗಿಂತ ಕಾಂಗ್ರೆಸ್‌ ಪ್ರಣಾಳಿಕೆ ಬಗ್ಗೆ ಹೆಚ್ಚು ಮಾತನಾಡುತ್ತಿದೆಯಲ್ಲ? 

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಸ್ಪಷ್ಟತೆ ಇಲ್ಲ. ಪಿತ್ರಾರ್ಜಿತ ಆಸ್ತಿಗೆ ತೆರಿಗೆ ವಿಧಿಸುವ ಬಗ್ಗೆ ಕಾಂಗ್ರೆಸ್‌ ಮುಖಂಡ ಸ್ಯಾಮ್‌ ಪಿತ್ರೋಡಾ ಸಲಹೆ ನೀಡಿದ್ದಾರೆ. ಈ ಸಲಹೆಯನ್ನು ಕಾರ್ಯಗತ
ಗೊಳಿಸಿದರೆ ದಕ್ಷಿಣ ಅಮೆರಿಕದ ಕೆಲವು ರಾಷ್ಟ್ರಗಳಲ್ಲಿ ಸಂಭವಿಸಿದಂತೆ ದೊಡ್ಡ ಆರ್ಥಿಕ ಹಿಂಜರಿತ ಉಂಟಾಗಲಿದೆ. ಕಾಂಗ್ರೆಸ್‌ ಧರ್ಮಾಧಾರಿತ ಮೀಸಲಾತಿಯನ್ನು ಪರಿಚಯಿಸುವ ದಟ್ಟವಾದ ಸಾಧ್ಯತೆ ಇದೆ. ತುಷ್ಟೀಕರಣ ನೀತಿ ಅನುಸರಿಸುವುದನ್ನು ಕಾಂಗ್ರೆಸ್‌ ಮುಂದುವರಿಸಿದೆ. ಅದನ್ನು ಬಯಲಿಗೆ ಎಳೆಯುವುದು ಅವಶ್ಯಕ. 

ಪ್ರ

ಲೋಕಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಬಿಜೆಪಿಯ ಕೆಲವು ನಾಯಕರು ‘ಸಂವಿಧಾನ ಬದಲಾವಣೆ’ ಕುರಿತು ಹೇಳಿಕೆಗಳನ್ನು ನೀಡಿದ್ದಾರೆ. ಇದು ಪಕ್ಷದ ಚುನಾವಣಾ ಪ್ರಚಾರದ ಮೇಲೆ ಪರಿಣಾಮ ಬೀರಿದೆಯೇ? 

ಸಂವಿಧಾನವನ್ನು ನಾವು ಏಕೆ ಬದಲಾಯಿಸಬೇಕು? ಭಾರತದ ಪ್ರಜಾಪ್ರಭುತ್ವವು ವಿಶ್ವದಲ್ಲೇ ಅತ್ಯುತ್ತಮವಾದದ್ದು. ಪ್ರತಿಪಕ್ಷಗಳು ಈ ವಿಷಯವನ್ನು ಮುಂದಿಟ್ಟುಕೊಂಡು ಜನರಲ್ಲಿ ಭಯ ಹುಟ್ಟಿಸಲು ಯತ್ನಿಸುತ್ತಿವೆ.

ಪ್ರ

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಮೀಸಲಾತಿ ಕೊನೆಗೊಳ್ಳಲಿದೆ ಎಂದು ವಿರೋಧ ಪಕ್ಷಗಳ ಮುಖಂಡರು ಹೇಳುತ್ತಿದ್ದಾರಲ್ಲ? 

ಮೀಸಲಾತಿಯನ್ನು ರದ್ದುಗೊಳಿಸುವ ಪ್ರಶ್ನೆಯೇ ಇಲ್ಲ. ಇದು ಪ್ರತಿಪಕ್ಷಗಳ ವೈಚಾರಿಕ ದಿವಾಳಿತನವನ್ನು ತೋರಿಸುತ್ತದೆ. 

ಪ್ರ

ಬಿಜೆಪಿ ತನ್ನ ಕೇಂದ್ರ ನಾಯಕರನ್ನು ರಾಜ್ಯ ರಾಜಕಾರಣಕ್ಕೆ ಕಳುಹಿಸುತ್ತಿದೆ. ಅದೇ ರೀತಿ, ಮಾಜಿ ಮುಖ್ಯಮಂತ್ರಿಗಳಾದ ಶಿವರಾಜ ಸಿಂಗ್ ಚೌಹಾಣ್‌, ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್‌ ಮತ್ತಿತರರನ್ನು ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸುವ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಕರೆಸಿಕೊಳ್ಳಲು ಯೋಜಿಸಿದೆ. ಇದರ ಹಿಂದಿನ ಚಿಂತನೆ ಏನು? 

ರಾಜ್ಯ ನಾಯಕತ್ವವು ಅಭಿವೃದ್ಧಿ ಹೊಂದಿದ ಸಂದರ್ಭದಲ್ಲಿ ಕೇಂದ್ರಕ್ಕೆ ಬರಬೇಕು. ಇಲ್ಲದಿದ್ದರೆ ಕೇಂದ್ರದಲ್ಲಿ ನಿರ್ವಾತ ಸೃಷ್ಟಿಯಾಗುತ್ತದೆ. ಹೊಸ ನಾಯಕತ್ವವು ವಿಕಸನಗೊಳ್ಳಬೇಕು. ಇದೊಂದು ನಿರಂತರ ಪ್ರಕ್ರಿಯೆ. ಯಾವುದೇ ರಾಜಕೀಯ ಪಕ್ಷ ಸದೃಢವಾಗಲು ಇಂತಹ ಪ್ರಕ್ರಿಯೆ ನಡೆಯಬೇಕು. ಇದರಿಂದ ಯಾರಿಗೂ ಅವಮಾನ ಆಗುತ್ತಿಲ್ಲ. ರಾಜ್ಯದ ನಾಯಕರು ರಾಷ್ಟ್ರ ನಾಯಕರಾದರೆ ತಪ್ಪೇನು? ಯಾವುದೇ ದೊಡ್ಡ ರಾಜಕೀಯ ಪಕ್ಷದಲ್ಲಿ ಇದು ನಿರಂತರ ಪ್ರಕ್ರಿಯೆ. 

ಪ್ರ

ವಿರೋಧ ಪಕ್ಷಗಳ ನಾಯಕರಿಗೆ ಕಿರುಕುಳ ನೀಡಲು ಬಿಜೆಪಿಯು ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪ ಇದೆಯಲ್ಲ? 

ಇದೊಂದು ಆಧಾರರಹಿತ ಆರೋ‍ಪ. ತನಿಖಾ ಸಂಸ್ಥೆಗಳು ತಮ್ಮ ಕೆಲಸವನ್ನು ಮಾಡುತ್ತಿವೆ. ತಮಗೆ ಅನ್ಯಾಯವಾಗುತ್ತಿದೆ ಎಂದು ಯಾರಾದರೂ ಭಾವಿಸಿದರೆ ಅವರು ನ್ಯಾಯಾಲಯದ ಮೊರೆಹೋಗಬಹುದು. ಈ ವಿಷಯದಲ್ಲಿ ಸರ್ಕಾರವನ್ನು ಎಳೆದು ತರುತ್ತಿರುವುದು ಏಕೆ?

ಪ್ರ

ನೀವು ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಮೊದಲ ಬಾರಿಗೆ ಸರ್ಕಾರ ರಚಿಸಿತ್ತು. ಕರ್ನಾಟಕದಲ್ಲಿ ಭಿನ್ನಾಭಿಪ್ರಾಯಗಳನ್ನು ನಿಯಂತ್ರಿಸಲು ಬಿಜೆಪಿ ಏಕೆ ವಿಫಲವಾಗಿದೆ? 

ರಾಜಕೀಯ ಪಕ್ಷಗಳು ಬೆಳೆಯುವ ಸಂದರ್ಭದಲ್ಲಿ ಇವೆಲ್ಲ ಸಂಭವಿಸುತ್ತವೆ. ಕೆಲವರು ಪಕ್ಷ ತೊರೆದಿದ್ದರೂ ಆಮೇಲೆ ಮರಳಿದ್ದಾರೆ.  

ಪ್ರ

ಬಿ.ಎಸ್‌.ಯಡಿಯೂರಪ್ಪ ಅವರ ಕುಟುಂಬ ರಾಜಕಾರಣದ ವಿರುದ್ಧ ಕೆ.ಎಸ್‌. ಈಶ್ವರಪ್ಪ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಇದು ಸ್ವಜನ ಪಕ್ಷಪಾತ ಹಾಗೂ ಕುಟುಂಬ ರಾಜಕಾರಣದ ಬಗ್ಗೆ ಬಿಜೆಪಿಯ ನಿಲುವನ್ನು ದುರ್ಬಲಗೊಳಿಸುವುದಿಲ್ಲವೇ? 

ಕಾಂಗ್ರೆಸ್‌ ಪಕ್ಷ ಹಾಗೂ ಸಮಾಜವಾದಿ ಪಕ್ಷದಲ್ಲಿರುವಂತೆ ಒಂದು ಕುಟುಂಬವು ಪಕ್ಷವನ್ನು ನಿಯಂತ್ರಿಸಬಾರದು. ನಮ್ಮ ಪಕ್ಷದ ಮೇಲೆ ಯಾವುದೇ ಕುಟುಂಬದ ಶಾಶ್ವತ ಹಿಡಿತ ಸಾಧ್ಯವಿಲ್ಲ. ಒಂದು ಕುಟುಂಬದ ಎರಡನೇ, ಮೂರನೇ, ನಾಲ್ಕನೇ ಸದಸ್ಯರು ಸಕ್ರಿಯರಾಗಿದ್ದರೆ, ಅವರು ತಮ್ಮ ಕಾರ್ಯದಲ್ಲಿ ಮುಂದುವರಿಯಬಹುದು. ಕರ್ನಾಟಕದಲ್ಲಿ ಬಿಜೆಪಿಯ ಬೆಳವಣಿಗೆಯಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರ ಪಾತ್ರ ಮಹತ್ವದ್ದು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಉತ್ತಮ ಕೆಲಸ ಮಾಡುತ್ತಿದ್ದಾರೆ. 

ಪ್ರ

ಉತ್ತರಪ್ರದೇಶದ ಕೈಸರ್‌ಗಂಜ್‌ ಕ್ಷೇತ್ರದಲ್ಲಿ ಹಾಲಿ ಸಂಸದ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌ ಅವರಿಗೆ ಪಕ್ಷ ಟಿಕೆಟ್‌ ನಿರಾಕರಿಸಿದೆ. ಇದಕ್ಕೆ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕಾರಣವೇ? 

ಬ್ರಿಜ್‌ಭೂಷಣ್‌ ಸಿಂಗ್ ದೀರ್ಘಕಾಲದಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ಸಲ ಅವರ ಪುತ್ರನಿಗೆ ಅವಕಾಶ ನೀಡಲಾಗಿದೆ. ಅದನ್ನು ಬೇರೆ ಯಾವುದೇ ದೃಷ್ಟಿಕೋನದಿಂದ ನೋಡಬಾರದು.

ಪ್ರ

 ಸಂಸದ ಪ್ರಜ್ವಲ್‌ ರೇವಣ್ಣ ಪ್ರಕರಣವು ಕರ್ನಾಟಕದಲ್ಲಿ ಬಿಜೆಪಿಯ ನಿರೀಕ್ಷೆಗಳ ಮೇಲೆ ಪರಿಣಾಮ ಬೀರುತ್ತದೆಯೇ? 

ಈ ಪ್ರಕರಣವು ಬಿಜೆಪಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಇದನ್ನು ಜೆಡಿಎಸ್‌ ನಿಭಾಯಿಸಬೇಕು. 

ಪ್ರ

ನಿಮ್ಮ ಪಕ್ಷವು ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದೆಯಲ್ಲ? 

ಒಂದು ವೇಳೆ ಮಿತ್ರ ಪಕ್ಷ ಏನಾದರೂ ತಪ್ಪು ಮಾಡಿದರೆ ಬಿಜೆಪಿ ಹೇಗೆ ಹೊಣೆಯಾಗುತ್ತದೆ? ಅವರದ್ದು ಪ್ರತ್ಯೇಕ ರಾಜಕೀಯ ಪಕ್ಷ. ಚುನಾವಣೆಯಲ್ಲಿ ಮತ ವಿಭಜನೆ (ಕಾಂಗ್ರೆಸ್ಸೇತರ ಮತಗಳು) ಕಡಿಮೆ ಮಾಡುವ ಉದ್ದೇಶದಿಂದ ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಳ್ಳಲಾಗಿದೆ.

ಪ್ರ

ಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ಪರಾರಿಯಾಗಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಇದು ನಿಜವೇ? 

ಈ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಯಾವುದಾದರೂ ಪುರಾವೆ ನೀಡಲು ಸಿದ್ಧವಿದೆಯಾ? ನಮ್ಮ ಸರ್ಕಾರ ಈ ಕೆಲಸ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT