ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖಾಮುಖಿ | ಮುಂಬೈ ನಾರ್ತ್ ಸೆಂಟ್ರಲ್‌: ಉಜ್ವಲ್‌ ನಿಕಂ vs ವರ್ಷಾ ಗಾಯಕ್ವಾಡ್‌

Published 30 ಏಪ್ರಿಲ್ 2024, 19:57 IST
Last Updated 30 ಏಪ್ರಿಲ್ 2024, 19:57 IST
ಅಕ್ಷರ ಗಾತ್ರ

ಉಜ್ವಲ್‌ ನಿಕಂ (ಬಿಜೆಪಿ)

ಮಹಾರಾಷ್ಟ್ರದ ಮುಂಬೈ ನಾರ್ತ್‌ ಸೆಂಟ್ರಲ್‌ ಲೋಕಸಭಾ ಕ್ಷೇತ್ರದಿಂದ ಹಿರಿಯ ವಕೀಲ ಉಜ್ವಲ್‌ ನಿಕಂ ಅವರನ್ನು ಬಿಜೆಪಿಯು ಅಭ್ಯರ್ಥಿಯಾಗಿ ಘೋಷಿಸುವ ಮೂಲಕ ಸ್ಪರ್ಧಾ ಕಣವು ರಂಗೇರಿದೆ. ಈ ಕ್ಷೇತ್ರದಿಂದ ಎರಡು ಬಾರಿ ಗೆದ್ದಿದ್ದ ಪೂನಂ ಮಹಾಜನ್‌ ಅವರಿಗೆ ಟಿಕೆಟ್‌ ನಿರಾಕರಿಸಿ, ಉಜ್ವಲ್‌ ಅವರನ್ನು ಅಖಾಡಕ್ಕಿಳಿಸಲಾಗಿದೆ. 2019ರ ಚುನಾವಣೆಯಲ್ಲಿ ಪೂನಂ ಅವರು, 1,30,005 ಮತಗಳ ಅಂತರದಿಂದ ಕಾಂಗ್ರೆಸ್‌ನ ಪ್ರಿಯಾ ದತ್ತ್‌ ಅವರನ್ನು ಪರಾಭವಗೊಳಿಸಿದ್ದರು. ಉಜ್ವಲ್‌ ಅವರು ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಸರ್ಕಾರದ ಪರ ವಕೀಲರಾಗಿ ವಾದಿಸಿದ್ದರು. ಈ ಪ್ರಕರಣದಲ್ಲಿ ಉಗ್ರ ಅಜ್ಮಲ್‌ ಕಸಬ್‌ಗೆ ಗಲ್ಲು ಶಿಕ್ಷೆಗೆ ವಿಧಿಸಲಾಗಿತ್ತು. ಅಲ್ಲದೆ 1993ರ ಸರಣಿ ಸ್ಫೋಟ ಮತ್ತು ಬಾಲಿವುಡ್‌ ಚಿತ್ರ ನಿರ್ಮಾಪಕ ಗುಲ್ಶನ್‌ ಕುಮಾರ್‌ ಕೊಲೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಇವರು ಸರ್ಕಾರದ ಪರ ವಕೀಲರಾಗಿದ್ದರು.

ವರ್ಷಾ ಗಾಯಕ್ವಾಡ್‌ (ಕಾಂಗ್ರೆಸ್‌)

ಮುಂಬೈ ನಾರ್ತ್‌ ಸೆಂಟ್ರಲ್‌ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷವು ಧಾರಾವಿ ಕ್ಷೇತ್ರದ ಶಾಸಕಿ ವರ್ಷಾ ಗಾಯಕ್ವಾಡ್‌ ಅವರನ್ನು ಸ್ಪರ್ಧೆಗಿಳಿಸಿದೆ. ವರ್ಷಾ ಅವರು ಪಕ್ಷದ ಮುಂಬೈ ನಗರ ಘಟಕದ ಅಧ್ಯಕ್ಷೆಯೂ ಹೌದು. ಅನುಭವಿ ರಾಜಕಾರಣಿ ಹಾಗೂ ಸ್ಥಳೀಯವಾಗಿ ಪ್ರಭಾವವಿರುವ ನಾಯಕಿಯಾಗಿರುವುದರಿಂದ ವರ್ಷಾ ಅವರು ಗೆಲ್ಲುತ್ತಾರೆಂಬ ವಿಶ್ವಾಸ ಕಾಂಗ್ರೆಸ್‌ ಮುಖಂಡರದ್ದಾಗಿದೆ. 2009ರಲ್ಲಿ ಈ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾ ದತ್ತ್ ಅವರು ಗೆದ್ದಿದ್ದರು. ‘ಮಹಾ ವಿಕಾಸ್‌ ಆಘಾಡಿ’ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ವರ್ಷಾ ಅವರ ಗೆಲುವಿನ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿದೆ. ವರ್ಷಾ ಅವರು ರಾಜ್ಯ ಸಚಿವೆಯಾಗಿಯೂ ಈ ಹಿಂದೆ ಕಾರ್ಯನಿರ್ವಹಿಸಿದ್ದು, ಕ್ಷೇತ್ರದ ಜನರಿಗೆ ಚಿರಪರಿಚಿತರಾಗಿದ್ದಾರೆ. ವರ್ಷಾ ಅವರ ತಂದೆ ಏಕನಾಥ ಗಾಯಕ್ವಾಡ್‌ ಅವರು ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT