ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಜನೆ ಮಾಡುವವರ ಮೇಲೂ ಹಲ್ಲೆಯಾಗುತ್ತಿದೆ: ಪ್ರಧಾನಿ ಮೋದಿ

Published 20 ಏಪ್ರಿಲ್ 2024, 13:27 IST
Last Updated 20 ಏಪ್ರಿಲ್ 2024, 13:27 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಬೆಂಗಳೂರಿನ ಬೀದಿ, ಬೀದಿಗಳಲ್ಲಿ ಬಾಂಬ್‌ ಸ್ಫೋಟವಾಗುತ್ತಿದೆ. ಕರ್ನಾಟಕದಲ್ಲಿ ಭಜನೆ ಮಾಡುವವರ ಮೇಲೆ ಹಲ್ಲೆಗಳಾಗುತ್ತಿವೆ. ಕಾಂಗ್ರೆಸ್‌ ಬಗ್ಗೆ ಜನರು ಎಚ್ಚರಿಂದ ಇರಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನಗರದ ಅರಮನೆ ಮೈದಾನದಲ್ಲಿ ಶನಿವಾರ ನಡೆದ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ‘ಭಜನೆ, ಕೀರ್ತನೆ ಕೇಳಿಸಿಕೊಳ್ಳುವವರ ಮೇಲೂ ದಾಳಿಯಾಗುತ್ತಿದೆ. ಹೆಣ್ಣು ಮಕ್ಕಳ ಮೇಲೂ ಹಲ್ಲೆಗಳಾಗುತ್ತಿವೆ. ತಾಯಂದಿರು ಎಚ್ಚರದಿಂದ ಇರಬೇಕು’ ಎಂದರು.

2014ಮತ್ತು 2019ರ ಚುನಾವಣೆಗಳಲ್ಲಿ ನೀವು ದಾಖಲೆಯ ಸ್ಥಾನಗಳನ್ನು ನೀಡಿದ್ದರಿಂದ ಉತ್ತಮ ಸರ್ಕಾರ ನಡೆಸಲು ಸಾಧ್ಯವಾಯಿತು. ಇದರಿಂದ ದೇಶ ಉತ್ತಮವಾಗಿದೆ. ಭಾರತ ಈಗ ವಿಶ್ವದ ಐದು ಅತ್ಯುತ್ತಮ ರಾಷ್ಟ್ರಗಳ ಸಾಲಿನಲ್ಲಿದೆ. ಭಾರತದ ಬ್ಯಾಂಕಿಂಗ್‌ ಕ್ಷೇತ್ರ ಬಿಕ್ಕಟ್ಟಿನಲ್ಲಿತ್ತು. ಸಾವಿರಾರು ಕೋಟಿ ರೂಪಾಯಿ ಹಗರಣಗಳಿಂದಾಗಿ ಭಾರತಕ್ಕೆ ಬರಲು ವಿದೇಶಿ ಹೂಡಿಕೆದಾರರು ಭಯಪಡುತ್ತಿದ್ದರು. ಕಾಲ ಈಗ ಬದಲಾಗಿದೆ. ಈಗ ವಿಶ್ವದ ಎಲ್ಲೇ ಹೋಗಲಿ ಎಲ್ಲ ರಾಷ್ಟ್ರಗಳೂ ಭಾರತದ ಜತೆ ಸಂಬಂಧ ಹೊಂದಲು ಬಯಸುತ್ತಿವೆ ಎಂದು ಮೋದಿ ಹೇಳಿದರು.

ದೇಶವು ಜಗತ್ತಿನ 11ನೇ ಆರ್ಥಿಕತೆಯಿಂದ ಮೊದಲ ಐದು ರಾಷ್ಟ್ರಗಳ ಸಾಲಿಗೆ ಬಂದಿದೆ. ಭಾರತ ಈಗ ಅನುಸರಿಸುವ ರಾಷ್ಟ್ರವಲ್ಲ. ಮೊದಲು ಹೆಜ್ಜೆ ಇಡುವ ದೇಶವಾಗಿದೆ. ಈ ಬದಲಾವಣೆ ಹತ್ತು ವರ್ಷಗಳಲ್ಲಿ ಸಾಧ್ಯವಾಯಿತು. ಈ ಪರಿವರ್ತನೆಯ ಶ್ರೇಯ ಸಲ್ಲಬೇಕಿರುವುದು ಮೋದಿಗೆ ಅಲ್ಲ, ಬದಲಾಗಿ ನಮ್ಮನ್ನು ಬೆಂಬಲಿಸಿದ ಒಬ್ಬೊಬ್ಬ ಮತದಾರರಿಗೆ ಎಂದರು.

‘ಎನ್‌ಡಿಎ ಮತ್ತು ಇಂಡಿ ಎರಡೂ ಮೈತ್ರಿಕೂಟಗಳ ಪ್ರಚಾರ ಅಭಿಯಾನ ನೋಡುತ್ತಿದ್ದೀರಿ. ಕಾಂಗ್ರೆಸ್‌ ಮತ್ತು ಇಂಡಿ ಮೈತ್ರಿಕೂಟಕ್ಕೆ ಮೋದಿ ಹಾಗೂ ಮೋದಿ ಪರಿವಾರವೇ ಗುರಿ. ಆದರೆ, ಮೋದಿಯ ಗುರಿ 21ನೇ ಶತಮಾನದ ಭಾರತದ ವಿಕಾಸ. ಭಾರತದ ನಾಗರಿಕರ ಬೆಳವಣಿಗೆ, ಸಮೃದ್ಧಿ. ಜಗತ್ತಿನಲ್ಲಿ ಭಾರತದ ವರ್ಚಸ್ಸು ಹೆಚ್ಚಿಸುವುದು. ನೀವು ಮೋದಿ ಪರಿವಾರ. ನನ್ನ ಭಾರತವೇ ನನ್ನ ಪರಿವಾರ’ ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.

‘ನಾನು ಸಾಧಾರಣ ಬಡ ಕುಟುಂಬದಿಂದ ಬಂದೆ. ಇದರಿಂದ ಬಡವರ ಜೀವನವನ್ನು ಸುಲಲಿತಗೊಳಿಸುವುದು ತಿಳಿದಿದೆ ನನಗೆ. ನಗರೀಕರಣ ವೇಗವಾಗಿ ನಡೆಯುತ್ತಿದೆ. ನಗರದ ಬಡವರು, ಮಧ್ಯಮ ವರ್ಗದವರ ಜೀವನದ ಗುಣಮಟ್ಟ ಸುಧಾರಣೆ ಬರಬೇಕಿದೆ. ಅದು ಜರೂರಾಗಿ ಆಗಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT