ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಗ್‌ಬಾಸ್‌ ಸಾಕಷ್ಟು ಅಭಿಮಾನಿಗಳನ್ನು ನೀಡಿದೆ: ಸಂಗೀತಾ ಶೃಂಗೇರಿ

Published 28 ಮಾರ್ಚ್ 2024, 23:42 IST
Last Updated 28 ಮಾರ್ಚ್ 2024, 23:42 IST
ಅಕ್ಷರ ಗಾತ್ರ
ದಿಗಂತ್‌, ಸಂಗೀತಾ ಶೃಂಗೇರಿ ಅಭಿನಯದ ‘ಮಾರಿಗೋಲ್ಡ್‌’ ಚಿತ್ರ ಮುಂದಿನ ವಾರ ತೆರೆ ಕಾಣುತ್ತಿದೆ. ಚಿತ್ರದ ಬಗ್ಗೆ, ತಮ್ಮ ಮುಂದಿನ ಸಿನಿಪಯಣದ ಕುರಿತು ನಾಯಕಿ ಸಂಗೀತಾ ಮಾತನಾಡಿದ್ದಾರೆ... 

‘ಚಿತ್ರದಲ್ಲಿ ಸೋನು ಎಂಬ ಪಾತ್ರ. ಡ್ಯಾನ್ಸರ್‌ ಆಗಿರುತ್ತೇನೆ. ಇಲ್ಲಿವರೆಗೆ ನಾನು ಗ್ಲಾಮರಸ್‌ ಪಾತ್ರ ಮಾಡಿರಲಿಲ್ಲ. ಹೀಗಾಗಿ ಈ ಪಾತ್ರ ನನ್ನ ವೃತ್ತಿಜೀವನಕ್ಕೆ ಬಹಳ ಮುಖ್ಯ. ಇಲ್ಲಿ ತುಂಬ ಗಟ್ಟಿಗಿತ್ತಿ ಆಗಿರುತ್ತೇನೆ. ಪ್ರೀತಿಗಾಗಿ ಏನೂ ಬೇಕಾದರೂ ಮಾಡಬಲ್ಲೆ ಎಂಬುದು ಇಲ್ಲಿ ಗೊತ್ತಾಗುತ್ತದೆ’ ಎಂದು ಚಿತ್ರದಲ್ಲಿ ಪಾತ್ರವನ್ನು ವಿವರಿಸಿದರು ಸಂಗೀತಾ.

ಈ ವರ್ಷ ಬಿಗ್‌ಬಾಸ್‌ ಮನೆಯಿಂದ ಹೊರಬಂದ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ. ‘ಬಹುಶಃ ಹತ್ತು ಸಿನಿಮಾ ಮಾಡಿದರೂ ಸಂಪಾದಿಸಲಾಗದಷ್ಟು ಅಭಿಮಾನಿಗಳು ಬಿಗ್‌ಬಾಸ್‌ನಿಂದ ಸಿಕ್ಕಿದ್ದಾರೆ. ಅವರ ಪ್ರೀತಿ ಅಪಾರ. ಹಾಗಂತ ಕಿರುತೆರೆಯಲ್ಲಿ ಸಕ್ರಿಯವಾಗುವ ಆಲೋಚನೆ ಇಲ್ಲ. ಒಮ್ಮೆ ಆ ಲೋಕಕ್ಕೆ ಕಾಲಿಟ್ಟರೆ ವರ್ಷಪೂರ್ತಿ ಒಂದೇ ಪಾತ್ರದಲ್ಲಿ ಇರಬೇಕಾಗುತ್ತದೆ. ಹಾಗಾಗಲು ಇಷ್ಟವಿಲ್ಲ. ಭಿನ್ನವಾಗಿದ್ದನ್ನು ಮಾಡಬೇಕೆಂಬ ಆಲೋಚನೆಯೊಂದಿಗೆ ಬಂದವಳು. 2017ರಲ್ಲಿಯೇ ನನ್ನ ಮೊದಲ ಸಿನಿಮಾ ಬಿಡುಗಡೆಯಾಗಿತ್ತು’ ಎಂದು ಅವರು ತಮ್ಮ ಮನದ ಇಂಗಿತ ವ್ಯಕ್ತಪಡಿಸಿದರು.

ಒಂದು ದಶಕದಿಂದ ಕಿರುತೆರೆ, ಹಿರಿತೆರೆಯಲ್ಲಿ ಸಕ್ರಿಯವಾಗಿರುವ ಸಂಗೀತಾ ಅವರಿಗೆ ‘ಚಾರ್ಲಿ’, ‘ಶಿವಾಜಿ ಸೂರತ್ಕಲ್‌–2’ ಸಿನಿಮಾಗಳು ಸ್ಯಾಂಡಲ್‌ವುಡ್‌ನಲ್ಲಿ ತಕ್ಕಮಟ್ಟಿನ ಜನಪ್ರಿಯತೆ ತಂದುಕೊಟ್ಟವು. ಹಾಗಂತ ಸದ್ಯ ಅವರು ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ‘ಕನ್ನಡದಲ್ಲಿ ನಾಯಕಿಗೆ ಪ್ರಾಮುಖ್ಯವಿರುವ ಸಿನಿಮಾಗಳು ಬರುವುದು ಕಡಿಮೆ. ಬಹುತೇಕ ಸಿನಿಮಾಗಳಲ್ಲಿ ಸುಮ್ಮನೆ ಹೆಸರಿಗೆ ನಾಯಕಿ ಇರುತ್ತಾಳೆ. ಅಂತಹ ಚಿತ್ರಗಳನ್ನು ಮಾಡಲು ಇಷ್ಟವಿಲ್ಲ. ಚಿತ್ರದಲ್ಲಿ ಪಾತ್ರ ಪ್ರಮುಖವಾಗಿರಬೇಕು, ಅದಕ್ಕೊಂದು ತೂಕ ಇರಬೇಕು. ಅಂತಹ ಚಿತ್ರಗಳನ್ನು ಹುಡುಕುತ್ತಿರುವೆ. ಹೀಗಾಗಿ ಸದ್ಯಕ್ಕೆ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ’ ಎನ್ನುತ್ತಾರೆ ಸಂಗೀತಾ. 

ಟ್ರೇಲರ್‌ ಬಿಡುಗಡೆ
ಚಿನ್ನದ ಬಿಸ್ಕತ್ ಮಾರಲು ಹೊರಟ ನಾಲ್ವರು ಹುಡುಗರ ಕಥೆ ಹೊಂದಿರುವ ‘ಮಾರಿಗೋಲ್ಡ್’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ರಾಘವೇಂದ್ರ ಎಂ.ನಾಯ್ಕ್ ನಿರ್ದೇಶನದ ಚಿತ್ರಕ್ಕೆ ರಘುವರ್ಧನ್ ಬಂಡವಾಳ ಹೂಡಿದ್ದಾರೆ. ಚಿನ್ನದ ಬಿಸ್ಕತ್ತಿನ ಹಿಂದೆ ಬಿದ್ದ ನಾಲ್ವರಲ್ಲಿ ಮಾರಿಗೋಲ್ಡ್‌ ಯಾರ ಪಾಲಾಗುತ್ತದೆ ಎಂಬುದೇ ಚಿತ್ರಕಥೆ ಎಂದು ಮೇಲ್ನೊಟಕ್ಕೆ ತಿಳಿಯುತ್ತಿದೆ. ಆ್ಯಕ್ಷನ್‌, ಥ್ರಿಲ್ಲರ್‌ ಕಥಾಹಂದರದ ಚಿತ್ರದಲ್ಲಿ ಯಶ್ ಶೆಟ್ಟಿ, ಕಾಕ್ರೋಚ್ ಸುಧೀ, ಸಂಪತ್ ಮೈತ್ರೇಯಾ ಮೊದಲಾದವರು ನಟಿಸಿದ್ದಾರೆ. ವೀರ್ ಸಮರ್ಥ ಸಂಗೀತ, ರಘು ನಿಡವಳ್ಳಿ ಸಂಭಾಷಣೆ, ಕೆ.ಎಸ್.ಚಂದ್ರಶೇಖರ್ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT