ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ದ್ವಾರಕೀಶ್ ನಿಧನ: ಸಿಎಂ ಸಿದ್ದರಾಮಯ್ಯ, ನಟ ದೊಡ್ಡಣ್ಣ ಸೇರಿ ಗಣ್ಯರ ಸಂತಾಪ

Published 16 ಏಪ್ರಿಲ್ 2024, 8:12 IST
Last Updated 16 ಏಪ್ರಿಲ್ 2024, 8:12 IST
ಅಕ್ಷರ ಗಾತ್ರ

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ (Dwarakish) ಅವರು ಮಂಗಳವಾರ ನಿಧನರಾದರು. ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್‌ ಸೇರಿದಂತೆ ಸಿನಿ ತಾರೆಯರು ಸಂತಾಪ ಸೂಚಿಸಿದ್ದಾರೆ.

ನಟ, ನಿರ್ದೇಶಕ, ನಿರ್ಮಾಪಕರಾಗಿ ಬಹುಕಾಲ ಕನ್ನಡ ಚಿತ್ರರಂಗದ ಸೇವೆಗೈದ ಕನ್ನಡಿಗರ ಪ್ರೀತಿಯ ‘ಪ್ರಚಂಡ ಕುಳ್ಳ’ ದ್ವಾರಕೀಶ್ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು. ವರನಟ ರಾಜ್‌ಕುಮಾರ್ ಮತ್ತು ವಿಷ್ಣುವರ್ಧನ್ ಅವರಂತಹ ಮೇರು ನಟರೊಂದಿಗೆ ಪರದೆ ಹಂಚಿಕೊಳ್ಳುತ್ತಿದ್ದರೂ ಹಾಸ್ಯಭರಿತ ನಟನೆಯ ಮೂಲಕ ನೋಡುಗರ ಮನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ದ್ವಾರಕೀಶ್ ಅವರ ನಿಧನದಿಂದ ಕನ್ನಡ ಚಿತ್ರರಂಗ ಬಡವಾಗಿದೆ. 
–ಸಿದ್ದರಾಮಯ್ಯ, ಮುಖ್ಯಮಂತ್ರಿ
ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕರಾದ ದ್ವಾರಕೀಶ್‌ ಅವರು ನಿಧನರಾದ ಸಂಗತಿ ತಿಳಿದು ಮನಸ್ಸಿಗೆ ಅಪಾರ ನೋವುಂಟಾಯಿತು. 1964ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು, ಹಾಸ್ಯ ಕಲಾವಿದ, ನಾಯಕ ಹಾಗೂ ಪೋಷಕ ನಟನಾಗಿ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಕನ್ನಡ ಚಿತ್ರರರಂಗಕ್ಕೆ ಅಮೂಲ್ಯ ಕೊಡುಗೆ ನೀಡಿದ ದ್ವಾರಕೀಶ್‌ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಭಗವಂತನು ಅವರ ಕುಟುಂಬಕ್ಕೆ ಅಗಲಿಕೆಯ ನೋವು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಡಿ.ಕೆ ಶಿವಕುಮಾರ್‌, ಡಿಸಿಎಂ
ಚಿಕ್ಕವಯಸ್ಸಿನಿಂದಲೂ ಅವರೊಂದಿಗೆ ಒಡನಾಡಿದ್ದೇನೆ. ಅಪ್ಪಾಜಿ ಜೊತೆಗೆ ಅವರಿಗೆ ಒಡನಾಟ ಹೆಚ್ಚಿತ್ತು. ದ್ವಾರಕೀಶ್‌ ಅವರ ಪ್ರೊಡಕ್ಷನ್ಸ್‌ನಲ್ಲಿ ನಾನು ‘ಆಯುಷ್ಮಾನ್‌ಭವ’ ಸಿನಿಮಾ ಮಾಡಿದ್ದೇನೆ. ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ದ್ವಾರಕೀಶ್‌ ಅವರ ನಗುಮುಖವನ್ನೇ ಸದಾ ನೆನೆಯುತ್ತ ಬೀಳ್ಕೊಡುವೆ. ಹೋಗಿ ಬನ್ನಿ ದ್ವಾರಕೀಶ್ ಮಾಮ.
–ಶಿವರಾಜ್‌ಕುಮಾರ್‌, ನಟ 
ಕನ್ನಡ ಚಿತ್ರರಂಗದ ಮತ್ತೊಂದು ಅಮೂಲ್ಯ ಜೀವವನ್ನು ಕಳೆದುಕೊಂಡಿದ್ದೇವೆ. ಕನ್ನಡ ಚಲನಚಿತ್ರ ರಂಗವನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಅವರ ಮಹಾನ್ ಕೊಡುಗೆಗಳನ್ನು ಮರೆಯಲಾಗದು-ಮರೆಯಕೂಡದು.
- ಸುದೀಪ್‌, ನಟ
ವಿಷ್ಣುವರ್ಧನ್ ಮತ್ತು ದ್ವಾರಕೀಶ್‌ ಅವರ ಸಂಬಂಧ ಇಡೀ ನಾಡಿಗೆ ತಿಳಿದಿದೆ. ಅವರ ಅಗಲಿಕೆ ತುಂಬಾ ಬೇಸರ ತರಿಸಿದೆ. 
–ಅನಿರುದ್ಧ, ನಟ 
ಕನ್ನಡದ ಹಿರಿಯ ನಟರಾದ ದ್ವಾರಕೀಶ್ ಅವರ ಅಗಲಿಕೆ ನನಗೆ ಬಹಳ ನೋವುಂಟು ಮಾಡಿದೆ. ಕಲಾವಿದರಾಗಿ ಅಷ್ಟೇ ಅಲ್ಲದೆ; ನಿರ್ಮಾಪಕರಾಗಿ, ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಅವರು ಸಲ್ಲಿಸಿರುವ ಅನುಪಮ ಸೇವೆ ಆವಿಸ್ಮರಣೀಯ. ವರನಟ ರಾಜ್‌ಕುಮಾರ್‌, ವಿಷ್ಣುವರ್ಧನ್‌, ಅಂಬರೀಶ್‌ರಂಥ ದಿಗ್ಗಜರ ಜತೆ ನಟಿಸಿದ್ದ ಅವರು, ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಿನಿಮಾ ಆಸ್ತಿಯಾಗಿದ್ದರು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಅಧ್ಯಕ್ಷ
‘ಹೆಣ್ಣಿನ ಸೌಭಾಗ್ಯ’, ‘ಮುದ್ದಿನ ಮಾವ’ ಚಿತ್ರದಲ್ಲಿ ದ್ವಾರಕೀಶ್‌ ಅವರೊಂದಿಗೆ ನಟಿಸಿದ್ದೆ. ಶೂಟಿಂಗ್‌ ಸಂದರ್ಭದಲ್ಲಿ ಸಿನಿಪಯಣದ ಅನುಭವಗಳನ್ನು ಅವರು ಹಂಚಿಕೊಳ್ಳುತ್ತಿದ್ದರು. ಅವರ ಜೀವನೋತ್ಸಾಹ ಎಲ್ಲರಿಗೂ ಮಾದರಿ.    
–ಗಿರಿಜಾ ಲೋಕೇಶ್‌, ನಟಿ  
ಕನ್ನಡ ಸಿನಿಮಾ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗ ಒಬ್ಬ ಅದ್ಭುತವಾದ ನಿರ್ಮಾಪಕನನ್ನು ಕಳೆದುಕೊಂಡಿದೆ. ಅವರೊಬ್ಬ ಬಹುಮುಖ ಪ್ರತಿಭೆಯ ವ್ಯಕ್ತಿ. ವಿಷ್ಣುವರ್ಧನ್‌ ಅವರ ಬಳಿಕ ಮತ್ತೊಬ್ಬ ಒಳ್ಳೆಯ ಗೆಳೆಯನನ್ನು ಕಳೆದುಕೊಂಡಿದ್ದೇನೆ. ಅವರಿಗಿದ್ದ ಸಿನಿಮಾ ಪ್ರೀತಿಯನ್ನು ನಾನು ಅನುಭವಿಸಿದ್ದೇನೆ. ನನ್ನ ಗುರು ಅವರು. ‘ಆಪ್ತಮಿತ್ರ’ ಸಂದರ್ಭದಲ್ಲಿ ಅವರು ಯಾವ ವಿಚಾರದಲ್ಲೂ ರಾಜಿ ಮಾಡಿಕೊಂಡಿಲ್ಲ. ಆ ಸಿನಿಮಾ ಬಿಡುಗಡೆ ಬಳಿಕ, ‘ನೀನು ಮತ್ತೊಮ್ಮೆ ನನ್ನನ್ನು ನನ್ನ ಖುರ್ಚಿಯಲ್ಲಿ ಕೂರಿಸಿದೆ’ ಎಂದರು. ಇದಕ್ಕಿಂತ ಮಿಗಿಲಾದ ಪ್ರಶಸ್ತಿ ಬೇಕೇ?   
-ಪಿ.ವಾಸು, ನಿರ್ದೇಶಕ. 
ಕನ್ನಡ ಚಿತ್ರರಂಗಕ್ಕೆ ದೊಡ್ಡ ಅಡಿಪಾಯ ಹಾಕಿಕೊಟ್ಟವರು. ತಂತ್ರಜ್ಞಾನ ಇಲ್ಲದೇ ಇದ್ದ ಸಂದರ್ಭದಲ್ಲಿ ‘ಸಿಂಗಾಪುರದಲ್ಲಿ ರಾಜ ಕುಳ್ಳ’ದಂತಹ ದೊಡ್ಡ ಸಾಹಸಗಳನ್ನು ಮಾಡಿದವರು.   
–ರಮೇಶ್‌ ಭಟ್‌, ನಟ 
ಅವರೊಬ್ಬ ಪ್ರಚಂಡ ಸಾಹಸಿ. ಚಿತ್ರರಂಗದ ಎಲ್ಲ ವಿಭಾಗಗಳ ನೇತೃತ್ವ ವಹಿಸಿದವರು. ಜೀವನದಲ್ಲಿ ಹಲವು ಏರಿಳಿತಗಳನ್ನು ಕಂಡರು. ‘ಮುದ್ದಿನ ಮಾವ’ ಸಿನಿಮಾವನ್ನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ.    
–ದೊಡ್ಡಣ್ಣ, ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT