ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಳನಾಯಕಿಯರೇಕೆ ಹೀಗೆ?

–ದೀಪಶ್ರೀ ಎಸ್ ಕೂಡ್ಲಿಗಿ
Published 19 ಏಪ್ರಿಲ್ 2024, 22:46 IST
Last Updated 19 ಏಪ್ರಿಲ್ 2024, 22:46 IST
ಅಕ್ಷರ ಗಾತ್ರ

ಮೌಲ್ಯಯುಕ್ತ, ಐತಿಹಾಸಿಕ, ಪ್ರಬುದ್ಧ, ಪೌರಾಣಿಕ ಧಾರಾವಾಹಿಗಳು ಕಣ್ಮರೆಯಾಗಿವೆ. ಕಣ್ಮಣಿಗಳನ್ನು ಕಿರಾತಕಿಯರಾಗಿ ತೋರಿಸುವ ಧಾರಾವಾಹಿಗಳು ಹೆಚ್ಚಿವೆ

ಒಂದು ಕಥೆಯಲ್ಲಿ ಅತ್ತೆಯೇ ಸೊಸೆಗೆ ವಿಲನ್, ಮತ್ತೊಂದು ಕಥೆಯಲ್ಲಿ ಮಲತಾಯಿಯೇ ಮಗಳಿಗೆ ವೈರಿ, ಮಗದೊಂದರಲ್ಲಿ ಅಕ್ಕ, ತಂಗಿಯರೇ ಅಣ್ಣ ತಮ್ಮನಿಗೆ ವೈರಿ, ಪತ್ನಿಗೆ ತನ್ನ ಗಂಡನೇ ಶತ್ರು. ಇದು ನಾನು ಹೇಳುತ್ತಿರುವ ಕಥೆಯಲ್ಲ. ಪ್ರಸ್ತುತ ಟಿವಿ ಧಾರಾವಾಹಿಗಳ ಕತೆ. ಹೆಣ್ಣನ್ನು ನಾವು ವಿದ್ಯೆಗೆ, ಸಿರಿದೇವತೆಗೆ, ಧಾತ್ರಿಗೆ ಹೋಲಿಸಿದ್ದೇವೆ. ಆದರೆ, ಹೆಣ್ಣನ್ನು ದುಷ್ಮನ್‌ಗಳಂತೆ ತೋರಿಸುವುದೇ ಸದ್ಯದ ಟ್ರೆಂಡ್‌ ಆಗಿದೆ.

ಹಳೆಕಾಲದ ಧಾರಾವಾಹಿಗಳಲ್ಲಿ ವಿಲನ್ ಪಾತ್ರಗಳನ್ನು ನಿಭಾಯಿಸುತ್ತಿದ್ದವರು ಕೇವಲ ಪುರುಷರಷ್ಟೇ. ಅಲ್ಲಿ ಪುರುಷರದ್ದೇ ಮೇಲುಗೈ ಇತ್ತು. ಬೆರಳೆಣಿಕೆಯಷ್ಟು ಸ್ತ್ರೀಯರದ್ದು. ಆದರೆ, ಇಂದು ಸರ್ವವನ್ನು ಮಹಿಳೆಯರೇ ನಿಭಾಯಿಸುತ್ತಿದ್ದಾರೆ.

ತಾಯಿ, ಅಜ್ಜಿ, ಮಗಳು, ಸೊಸೆ, ಮೊಮ್ಮಗಳು, ಅತ್ತೆ, ನಾದಿನಿ, ಅಕ್ಕ- ತಂಗಿ ಹೀಗೆ ಹೆಣ್ಣುಮಕ್ಕಳೇ ಸ್ಟ್ರಾಂಗ್. ಖಳನಾಯಕರ ಜಾಗವನ್ನು ಖಳನಾಯಕಿಯರು ಸಂಪೂರ್ಣವಾಗಿ ಆಕ್ರಮಿಸಿಕೊಂಡಿದ್ದಾರೆ. ಮದುವೆ, ಶುಭ ಸಮಾರಂಭ ನಡೆಯುವಾಗ ಅಲ್ಲಿ ಹಾಜರ್‌. ಸತ್ಕಾರ್ಯಗಳನ್ನು ಕೆಡಿಸುವುದೇ ಅವರ ಉದ್ದೇಶ.

ಪ್ರತಿ ಧಾರಾವಾಹಿಯಲ್ಲಿ ಲೇಡಿ ವಿಲನ್ ಅಥವಾ ಖಳನಾಯಕನಿಗೊಂದು ಜೋಡಿ ಖಳನಾಯಕಿ ಇರುವುದು ಸಾಮಾನ್ಯ ಎನ್ನುವಂತಾಗಿದೆ. ಹೆಣ್ಣಿಗೆ ಹೆಣ್ಣೆ ಶತ್ರು ಎಂಬ ಮಾತನ್ನು ಸುಳ್ಳು ಮಾಡಬಾರದು ಎಂಬ ಕಾರಣಕ್ಕಾ? ಎಲ್ಲಾ ಪಾತ್ರಗಳನ್ನು ನಿಭಾಯಿಸುವ ಮಹಿಳೆಯರು ವಿಲನ್ ಪಾತ್ರಗಳನ್ನು ಜರೂರಾಗಿ ನಿಭಾಯಿಸುತ್ತಾರೆ ಎಂಬ ಕಾರಣಕ್ಕೋ ತಿಳಿಯುತ್ತಿಲ್ಲ.

ಮೌಲ್ಯಯುಕ್ತ, ಐತಿಹಾಸಿಕ, ಪ್ರಬುದ್ಧ, ಪೌರಾಣಿಕ ಧಾರಾವಾಹಿಗಳು ಕಣ್ಮರೆಯಾಗಿವೆ. ಕಣ್ಮಣಿಗಳನ್ನು ಕಿರಾತಕಿಯರಾಗಿ ತೋರಿಸುವ ಧಾರಾವಾಹಿಗಳು ಹೆಚ್ಚಿವೆ. ಇಲ್ಲಿ ವಿಲನ್‌ಗಳಾಗಿರುವ ಸ್ತ್ರೀ ಪಾತ್ರಧಾರಿಗಳು ದ್ವೇಷಿಸುವುದು ಪುರುಷರನ್ನಷ್ಟೇ ಅಲ್ಲ, ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರನ್ನು.   

ಇಲ್ಲಿ ಖಳನಾಯಕಿಯರು ಮನೆಹಾಳು ಮಾಡಲು ನೆಮ್ಮದಿ ಕೆಡಿಸಲು ಬಳಸುವ ತಂತ್ರ ನೋಡಿದರೆ ಕೆಲವೊಮ್ಮೆ ನಗು ಬರುತ್ತದೆ. ಕೆಲವೊಮ್ಮೆ ಅಸಹ್ಯ ಎಂದೆನಿಸುತ್ತದೆ. ಹಾಲಿಗೆ ಉಪ್ಪು ಬೆರೆಸುವುದು, ಮೆಟ್ಟಿಲುಗಳ ಮೇಲೆ ಎಣ್ಣೆ ಸುರಿಯುವುದು, ಕಿಡ್ನ್ಯಾಪ್ ಮಾಡಿಸುವುದು , ರೌಡಿಗಳಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸುವುದು...

ದಿನದ 24 ಗಂಟೆಯಲ್ಲಿ 15 ರಿಂದ 20 ಗಂಟೆ ಈ ತರಹದ ಧಾರಾವಾಹಿಗಳದ್ದೇ ದರ್ಬಾರು.

ಧಾರಾವಾಹಿಗಳಲ್ಲಿ ಖಳನಾಯಕಿಯರನ್ನು ನೋಡುವುದೇ ಕಷ್ಟ.  ಅವರ ಕೃತಕ ಒಡವೆಗಳು, ಲಕ್ಷಣವಾಗಿ ಉಡದ ಸೀರೆ, ಡ್ರೆಸ್‌ಗಳು, ಗಾಬರಿಗೊಳಿಸುವ ಮೇಕಪ್‌ಗಳು, ನೋಡುವ ವಕ್ರದೃಷ್ಟಿ, ಮುಂಗೂದಲನ್ನು ಪದೇ ಪದೇ ತಿರುಗಿಸುವುದು, ಬಬಲ್ ಗಮ್ ತಿನ್ನುವವರಂತೆ ಬಾಯನ್ನು ಅತ್ತಿಂದಿತ್ತ, ಇತ್ತಿಂದತ್ತ ಹೊರಳಾಡಿಸುವುದು,  ಡೈಲಾಗ್ ಇಲ್ಲದಿರುವಾಗ ದೇಹ ಅಲುಗಾಡಿಸುವುದು ಇದಕ್ಕೆಲ್ಲ ಏನೆಂದು ಕರೆಯುತ್ತಾರೆ? ಕಾಲಕ್ಕೆ ತಕ್ಕಂತೆ ಬದಲಾಗಬೇಕು, ಬಲಿಯಾಗಬಾರದು.

ಧಾರಾವಾಹಿಗಳಲ್ಲಿ ಬರುವ ನೈತಿಕತೆಗಿಂತ ಕೆಟ್ಟ ಸಂಗತಿಗಳನ್ನು ಕಲಿಯುವವರೇ ಹೆಚ್ಚು. ಗಂಡಿಗಿಂತ ಹೆಣ್ಣಿನ ಮನಸ್ಸು ತುಂಬಾ ಸೂಕ್ಷ್ಮ ಹಾಗೂ ನಯ ನಾಜೂಕು ಹೀಗಿದ್ದಾಗ ಖಳನಾಯಕಿಯ ಪಾತ್ರ ಮಹಿಳಾ ಪ್ರೇಕ್ಷಕಿಯರ ಮೇಲೆ ಗಾಢವಾದ ಋಣಾತ್ಮಕ ಪ್ರಭಾವ ಬೀರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. 

ಮಹಿಳೆಯರು ಹೆಚ್ಚೆಚ್ಚು ಧಾರಾವಾಹಿಗಳನ್ನು ನೋಡಿ ಮನೆ ಕೆಡಿಸುವ ಪಾಠ ಕಲಿಯಲಿ ಎಂಬುದು ನಿರ್ದೇಶಕರ ಹಾಗೂ ನಿರ್ಮಾಪಕರ ಆಶಯವೇ? ಒಂದು ಚಿತ್ರ, ಒಂದು ಕಥೆ, ಒಂದು ಧಾರಾವಾಹಿ ಎಂದರೆ ಅಲ್ಲಿ ಒಳ್ಳೆಯದು ಹಾಗೂ ಕೆಟ್ಟದ್ದು ಎರಡು ಇರುತ್ತದೆ ಎಂಬುದೇನೋ ಸತ್ಯ. ಆದರೆ, ಈ ಧಾರಾವಾಹಿಗಳಲ್ಲಿ ಒಳ್ಳೆಯದಕ್ಕಿಂತ ಹೆಚ್ಚಾಗಿ ಕೆಟ್ಟದ್ದೇ ಇರುತ್ತದೆ. ಕೆಟ್ಟದ್ದನ್ನೇ ಹೆಚ್ಚು ಪ್ರಚಾರ,ಪ್ರಚೋದನೆ ಮಾಡುವ ಉದ್ದೇಶವೇನಿದೆ?  ಎಂಬುದು ಉತ್ತರ ಸಿಗದ ಪ್ರಶ್ನೆ. 

ಟಿ.ವಿ ಧಾರಾವಾಹಿಗಳ ವೃದ್ಧೆಯರು ಮಕ್ಕಳೊಂದಿಗೆ ಆಡುತ್ತಾ, ಅವರ ಯೋಗಕ್ಷೇಮ ಬಯಸದೇ ಅವರಿಗೆ ಹಿಡಿಶಾಪ ಹಾಕುತ್ತಾ ಶಪಿಸುತ್ತಾರೆ. ಇಂತಹ ಧಾರಾವಾಹಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ವೀಕ್ಷಕರನ್ನು ಹೊಂದಿರುವುದೇ ಖೇದಕರ ಸಂಗತಿ.

ಧಾರಾವಾಹಿಗಳಿಂದ ಸಮಾಜಕ್ಕೆ ಸಿಗುವ ಸಂದೇಶ, ಮೌಲ್ಯವಾದರೂ ಏನು? ಎಂಬ ಪ್ರಶ್ನೆಗೆ ಉತ್ತರವೇ ಇಲ್ಲ. ಧಾರಾವಾಹಿಗಳು ಸಂಬಂಧಗಳನ್ನು ಬೆಸೆಯುವ ಕೊಂಡಿಯಾಗಬೇಕು. ಹೊಸ ಸಂಬಂಧಗಳಿಗೆ ಸೇತುವೆಯಾಗಬೇಕು. ಭದ್ರ ಬುನಾದಿಯಾಗಬೇಕು. ಬದಲಿಗೆ ಸಂಬಂಧ ಕಡಿಯುವ, ಕತ್ತರಿಸುವ ಕೊಡಲಿಯಾಗಬಾರದು.

ಖಳನಾಯಕಿ ಪಾತ್ರವಷ್ಟೆ

ಕೂಡು ಕುಟುಂಬದಲ್ಲಿ ಬೆಳೆದ ನನಗೂ ಸಾಧನಾ ಪಾತ್ರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ನಾನು ಒಂದು ಪಾತ್ರವನ್ನು ಪ್ರತಿನಿಧಿಸುತ್ತಿದ್ದೇನೆ ಅಷ್ಟೇ. ವೈಯಕ್ತಿಕವಾಗಿ ಸಾಧನಾ (ಪಾತ್ರ) ಬಗ್ಗೆ ನನಗೂ ಅಸಮಧಾನವಿದೆ. ತನ್ನತನವನ್ನು ಉಳಿಸಿಕೊಳ್ಳಲು ಆಕೆ ಮಾಡುವ ತಂತ್ರಗಳು ಕೆಲವೊಮ್ಮೆ ನನಗೇ ಹೀಗೂ ಇರಬಹುದಾ ಎನಿಸುತ್ತದೆ. ವೀಕ್ಷಕರು ಧಾರಾವಾಹಿಗಳನ್ನು ನೋಡಿ ಹೇಗೆ ಇರಬೇಕು, ಹೇಗೆ ಇರಬಾರದು ಎಂದು ತಿಳಿದುಕೊಳ್ಳಬೇಕು. ಖಳನಾಯಕಿ ಕೂಡ ಒಂದು ಪಾತ್ರ, ಅದನ್ನು ಮನರಂಜನೆಯ ರೀತಿ ನೋಡಿದರೆ ಕಲಾವಿದರಿಗೂ ಸಾರ್ಥಕ ಭಾವವಿರುತ್ತದೆ.
–ಅಮೃತಾ ರಾಮಮೂರ್ತಿ (ಸಾಧನಾ ಪಾತ್ರಧಾರಿ, ಕೆಂಡಸಂಪಿಗೆ)

ಮನರಂಜನೆ ಒಂದು ಜವಾಬ್ದಾರಿ

ಖಳನಾಯಕಿಯಾಗಿ ಪಾತ್ರ ಮಾಡುವಾಗ ಕೆಲವು ಸನ್ನೀವೇಶ ಅತಿ ಎಂದು ಅನಿಸುತ್ತವೆ. ಹೀಗೆಲ್ಲಾ ಮಾಡಿದರೆ ಜನರು ಹೇಗೆ ನೋಡಬಹುದು ಎನ್ನುವ ಸಣ್ಣ ಅಳುಕು ನಮಗೂ ಕಾಡುತ್ತದೆ. ಕಾಲಮಾನಕ್ಕೆ ತಕ್ಕಂತೆ ಪಾತ್ರಗಳಲ್ಲಿಯೂ ಜನ ಬದಲಾವಣೆ ಕೇಳುತ್ತಾರೆ, ಹೀಗಾಗಿ ಜನರೂ ವಿಲನ್‌ ಪಾತ್ರಗಳನ್ನೇ ಹೆಚ್ಚು ಇಷ್ಟಪಡುತ್ತಾರೆ. ಅಭಿರುಚಿಗೆ ತಕ್ಕಂತೆ ಮನರಂಜನೆ ನೀಡುವುದು ನಮ್ಮ ಜವಾಬ್ದಾರಿ. ಆದರೂ ಕೆಲವೊಮ್ಮೆ ಸೃಷ್ಟಿಸುವ ಸಂದರ್ಭಗಳ ತೀವ್ರತೆಯನ್ನು ಕಡಿಮೆ ಮಾಡಬೇಕಾಗುತ್ತದೆ, ನನ್ನ ಪಾತ್ರದಲ್ಲಿ ನಾನು ಅದನ್ನು ಮಾಡಿದ್ದೇನೆ.
–ಅರ್ಚನಾ ಗೌಡ (ಸುಹಾಸಿನಿ ಪಾತ್ರಧಾರಿ, ಗಟ್ಟಿಮೇಳ)
ಬದಲಾದ ಮನಸ್ಥಿತಿ ಧಾರಾವಾಹಿಯಲ್ಲಿ ತೋರಿಸುವ ಪಾತ್ರದಲ್ಲಿರುವಂತೆ ನಿಜ ಜೀವನದಲ್ಲಿ ಇರಲು ಸಾಧ್ಯವಿಲ್ಲ. ಒಬ್ಬ ಹೆಣ್ಣು ಈ ರೀತಿಯೂ ಮಾಡಲು ಸಾಧ್ಯವೇ ಅಂತಾ ಅನಿಸಿದ್ದುಂಟು ನನಗೆ. ಆದರೆ, ಪಾತ್ರಕ್ಕೆ ಪೂರಕವಾಗಿ, ಮನರಂಜನೆಗೆ ನಟಿಸಲೇಬೇಕಾಗುತ್ತದೆ. ಮೇಕಪ್‌ ಹಾಕಿ ಕ್ಯಾಮೆರಾ ಮುಂದೆ ನಿಂತಾಗ ಪಾತ್ರದಲ್ಲಿ ತೊಡಗಿದಂತೆಯೆ. ಇತ್ತೀಚೆಗೆ ಜನರ ಮನಸ್ಥಿತಿಯೂ ಬದಲಾಗಿದೆ. ಖಳನಾಯಕಿಯಾಗಿ ನಟಿಸುವವರನನ್ನು ಅದೇ ಪಾತ್ರ ನೋಡುವುದಕ್ಕಿಂತ ನಟನೆಯನ್ನು ಗುರುತಿಸಿ ಪ್ರಶಂಸಿಸುತ್ತಾರೆ.
–ಜಾನ್ಸಿ ಸುಬ್ಬಯ್ಯ ( ಮಾನ್ಯತಾ ಪಾತ್ರಧಾರಿ, ರಾಮಾಚಾರಿ)
ಒಳ್ಳೆಯದು ಇದ್ದಲ್ಲಿ ಕೆಟ್ಟದ್ದು ಇದ್ದೇ ಇರುತ್ತದೆ. ಕೆಟ್ಟದ್ದರ ನಿವಾರಣೆಗೆ ಒಳ್ಳೆಯ ಪಾತ್ರಗಳಿರುತ್ತವೆ. ಅದಕ್ಕೆ ಧಾರಾವಾಹಿ ಹೊರತಲ್ಲ. ಮನರಂಜನೆಗೆಂದು ಖಳನಾಯಕಿಯರ ಪಾತ್ರ ಸೃಷ್ಟಿದ್ದರೂ ಜೀವನ ಸತ್ಯಕ್ಕೆ ಧಾರಾವಾಹಿಗಳು ಹತ್ತಿರವಾಗಿರುತ್ತವೆ. ಖಳನಾಯಕಿಯರ ಪಾತ್ರದಲ್ಲಿ ಹೆಣ್ಣುಮಕ್ಕಳನ್ನೇ ಯಾಕೆ ಹೆಚ್ಚು ತೋರಿಸುತ್ತಾರೆ ಎನ್ನುವ ಪ್ರಶ್ನೆ ಕಾಡುತ್ತದೆ, ಧಾರಾವಾಹಿಗಳಲ್ಲಿ ಹೆಣ್ಣುಮಕ್ಕಳನ್ನೇ ಒಳ್ಳೆಯ ಪಾತ್ರಗಳಲ್ಲೂ ತೋರಿಸುತ್ತಾರೆ ಅದನ್ನು ನೋಡಿ ಅಳವಡಿಸಿಕೊಂಡರೆ ಒಳ್ಳೆಯದು.
–ಮಾಲತಿ ಸರದೇಶಪಾಂಡೆ (ಸೀತಾ ಪಾತ್ರಧಾರಿ, ಸತ್ಯ)

ಕೆಟ್ಟತನದ ಅರಿವಿರಲಿ

ನಿರೂಪಣೆ: ಪವಿತ್ರಾ ಭಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT