ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೂವಂ’ ದೇಶದ ಅತಿ ಕಲುಷಿತ ನದಿ: ಇಲ್ಲಿದೆ ಅದರ ವಿವರ

Last Updated 31 ಜನವರಿ 2023, 11:08 IST
ಅಕ್ಷರ ಗಾತ್ರ

ನವದೆಹಲಿ: ಚೆನ್ನೈನ ಕೂವಂ ನದಿಯನ್ನು ದೇಶದ ‘ಅತಿ ಕಲುಷಿತ’ ನದಿ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ)ಯ ಇತ್ತೀಚಿನ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವರದಿಯ ಪ್ರಕಾರ, ಆವಡಿ ನಗರದಿಂದ ಸತ್ಯನಗರದ ನಡುವೆ ನದಿಯಲ್ಲಿ ‘ಬಯೊಲಾಜಿಕಲ್‌ ಆಕ್ಸಿಜನ್‌ ಡಿಮಾಂಡ್‌’ (ಬಿಒಡಿ– ನೀರು ಕುಡಿಯಲು, ಬಳಸಲು ಯೋಗ್ಯವೋ ಅಲ್ಲವೋ ಎಂದು ನಿರ್ಧರಿಸುವ ಗುಣಾಂಕ) ಪ್ರತಿ ಲೀಟರ್‌ಗೆ 345 ಎಂಜಿ ಇದೆ. ಇದು ದೇಶದ 603 ನದಿಗಳಲ್ಲೇ ಅತ್ಯಧಿಕ ಎನಿಸಿಕೊಂಡಿದೆ. ಕುತೂಹಲಕರ ಸಂಗತಿ ಎಂದರೆ, ಗುಜರಾತ್‌ನ ಸಾಬರಮತಿ ನದಿಯಲ್ಲಿ ಪ್ರತಿ ಲೀಟರ್‌ನ ಬಿಒಡಿ ಪ್ರಮಾಣ 292 ಎಂಜಿ ಇದೆ. ಉತ್ತರ ಪ್ರದೇಶದ ಬಹೇಲಾದಲ್ಲಿ ಬಿಒಡಿ ಪ್ರಮಾಣ 287 ಎಂಜಿ ಇದೆ. ಹೀಗಾಗಿ ಈ ನದಿಗಳು ಕ್ರಮವಾಗಿ ಎರಡು ಮತ್ತು ಮೂರನೇ ಕಲುಷಿತ ನದಿಗಳೆನಿಸಿಕೊಂಡಿವೆ.

ಕಳೆದ ನಾಲ್ಕು ವರ್ಷಗಳಲ್ಲಿ ತಮಿಳುನಾಡಿನಲ್ಲಿ ಕಲುಷಿತ ನದಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ವರದಿ ಹೇಳಿದೆ. 2019 ರಿಂದ 2021 ರ ನಡುವಿನ ಅವಧಿಯಲ್ಲಿ ತಮಿಳುನಾಡಿನ 12 ನದಿಗಳ ನೀರಿನ ಗುಣಮಟ್ಟವನ್ನು 73 ಸ್ಥಳಗಳಲ್ಲಿ ಪರಿಶೀಲನೆ ಮಾಡಲಾಗಿದೆ. 10 ನದಿಗಳ 53 ಸ್ಥಳಗಳಲ್ಲಿ ಬಿಒಡಿ ಪ್ರಮಾಣ ನಿಗದಿತ ಪ್ರಮಾಣದಲ್ಲಿ ಇರಲಿಲ್ಲ ಎಂದೂ ಹೇಳಲಾಗಿದೆ.

ತಮಿಳುನಾಡಿನ ಅಡ್ಯಾರ್, ಅಮರಾವತಿ, ಭವಾನಿ, ಕಾವೇರಿ, ಕೂವಂ, ಪಾಲಾರ್, ಸರಬಂಗಾ, ತಾಮರೈಬರಾಣಿ, ವಸಿಷ್ಟ ಮತ್ತು ತಿರುಮಣಿಮುತಾರ್ ಎಂಬ 10 ನದಿಗಳಲ್ಲಿ ಬಿಒಡಿ ನಿಗದಿತ ಮಾನದಂಡಗಳಿಗೆ ಅನುಗುಣವಾಗಿ ಇರಲಿಲ್ಲ ಎಂದು ವರದಿ ತಿಳಿಸಲಾಗಿದೆ.

ತಾಮರೈಬರಾಣಿ ಮತ್ತು ಕೂವಂ ನದಿಗಳು ಕಳೆದ ಕೆಲವು ವರ್ಷಗಳಿಂದ ಹೆಚ್ಚು ಕಲುಷಿತಗೊಂಡಿವೆ. ಪರಿಸರವಾದಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಮಾಲಿನ್ಯದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.

ಕೂವಂ ನದಿಯು ದೇಶದಲ್ಲೇ ಹೆಚ್ಚು ಕಲುಷಿತಗೊಂಡಿರುವ ನದಿಯಾಗಿದ್ದರೂ, ಅದನ್ನು ಸ್ವಚ್ಛಗೊಳಿಸಲು ಪ್ರಸ್ತುತ ಸರ್ಕಾರವು ಕ್ರಮಗಳನ್ನು ಕೈಗೊಂಡಿದೆ. ನದಿ ಒತ್ತುವರಿಯನ್ನು ಶೇ 80ರಷ್ಟು ತೆರವು ಮಾಡಲಾಗಿದೆ. ಎಗ್ಮೋರ್‌ನ ಲ್ಯಾಂಗ್ಸ್ ಗಾರ್ಡನ್, ನುಂಗಂಬಾಕ್ಕಂ ಮತ್ತು ಚೆಟ್‌ಪೇಟ್‌ನಲ್ಲಿ ಮೂರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗಿದೆ. ಸಂಸ್ಕರಿಸದ ಕೊಳಚೆ ನೀರು ನದಿಗೆ ಹರಿಯುವುದನ್ನು ತಡೆಯುವತ್ತ ಅಧಿಕಾರಿಗಳು ಈಗ ಗಮನಹರಿಸಿದ್ದಾರೆ.

ಕಲುಷಿತ ನೀರನ್ನು ಜೈವಿಕವಾಗಿ ಸಂಸ್ಕರಿಸಲಾಗುತ್ತಿದೆ. ಅದರ ನಂತರ, ನೀರಿನ ಗುಣಮಟ್ಟವನ್ನು ಹೆಚ್ಚಿಸಲು ಸೆಡಿಮೆಂಟೇಶನ್ ಮತ್ತು ಶೋಧನೆ ಮಾಡಲಾಗುತ್ತಿದೆ. ಇದರ ನಂತರ, ಸೋಂಕುನಿವಾರಣೆಗೆಂದು ನೀರನ್ನು ಕ್ಲೋರಿನೇಟ್ ಮಾಡಲಾಗುತ್ತಿದೆ.

ಮಾಲಿನ್ಯ ಮಾಪನ ವಿಧಾನ

ಕೇಂದ್ರದ ಮಾಲಿನ್ಯ ನಿಯಂತ್ರಣ ಮಂಡಳಿಯು 1990ರಿಂದ ನದಿಗಳ ನೀರಿನ ಗುಣಮಟ್ಟ ಮಾಪನ ಮಾಡುತ್ತಿದೆ. ಒಂದು ಲೀಟರ್‌ ನೀರಿನಲ್ಲಿ ಪತ್ತೆಯಾಗುವ ಬಿಒಡಿ ಪ್ರಮಾಣದ ಆಧಾರದಲ್ಲಿ ಮಾಲಿನ್ಯವನ್ನು ಲೆಕ್ಕ ಹಾಕಲಾ ಗುತ್ತದೆ. ಬಿಒಡಿ ಪ್ರಮಾಣ ಹೆಚ್ಚು ಇದ್ದಷ್ಟು ಮಾಲಿನ್ಯವೂ ಹೆಚ್ಚು ಎಂದರ್ಥ. ನದಿಯ ನೀರಿನಲ್ಲಿ ಬಿಒಡಿಯ ಪ್ರಮಾಣವು 3 ಎಂ.ಜಿ.(ಒಂದು ಲೀಟರ್‌ ನೀರಿನಲ್ಲಿ) ಅಥವಾ ಅದಕ್ಕಿಂತ ಕಡಿಮೆ ಇದ್ದರೆ ಅಂಥ ನದಿಯನ್ನು ಆರೋಗ್ಯವಂತ ನದಿ ಎಂದು ಸಿಪಿಸಿಬಿ ತೀರ್ಮಾನಿಸುತ್ತದೆ. ಇದರ ಪ್ರಮಾಣವು 30 ಎಂ.ಜಿ. ಮೀರಿದರೆ ಅಂಥ ನದಿ ಯನ್ನು ಗರಿಷ್ಠ ಆದ್ಯತಾ ಪಟ್ಟಿಗೆ ಸೇರಿಸಲಾಗುತ್ತದೆ. ಅರ್ಕಾವತಿಯಲ್ಲಿ ಗರಿಷ್ಠ (14) ಬಿಒಡಿ ಪ್ರಮಾಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT