ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ಪುಡಿ ರೌಡಿ, ನಲಪಾಡ್‌ ಮರಿ ರೌಡಿ; ಕಾಂಗ್ರೆಸ್‌ಗೆ ನೈತಿಕತೆಯಿಲ್ಲ: ಬಿಜೆಪಿ

ಕಾಂಗ್ರೆಸ್ –ಬಿಜೆಪಿ ನಡುವೆ ರೌಡಿ ರಾಜಕೀಯ
Last Updated 3 ಡಿಸೆಂಬರ್ 2022, 15:17 IST
ಅಕ್ಷರ ಗಾತ್ರ

ಬೆಂಗಳೂರು: ರಾಜಕೀಯ ನಾಯಕರು ರೌಡಿ ಶೀಟರ್‌ಗಳೊಂದಿಗೆ ಕಾಣಿಸಿಕೊಂಡಿರುವ ವಿಚಾರ ಕಾಂಗ್ರೆಸ್‌ –ಬಿಜೆಪಿ ನಡುವೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ನಾಯಕರು ರೌಡಿ ಶೀಟರ್‌ಗಳೊಂದಿಗೆ ಕಾಣಿಸಿಕೊಂಡಿರುವ ವಿಚಾರವನ್ನು ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ರೌಡಿಗಳ ಕಿಂಗ್ ಕೊತ್ವಾಲನ ಚಹಾ ಲೋಟ ಎತ್ತುತ್ತಿದ್ದ ಪುಡಿ ರೌಡಿ ಡಿ.ಕೆ.ಶಿವಕುಮಾರ್‌ ಅವರನ್ನು ರಾಜ್ಯ ಘಟಕದ ಅಧ್ಯಕ್ಷನನ್ನಾಗಿ ಮಾಡಿರುವ ಕಾಂಗ್ರೆಸ್‌ಗೆ ಬಿಜೆಪಿಯ ಬಗ್ಗೆ ಮಾತನಾಡುವ ನೈತಿಕತೆಯಿದೆಯಾ ಎಂದು ಪ್ರಶ್ನಿಸಿಕೊಳ್ಳಲಿ’ ಎಂದು ಕಿಡಿಕಾರಿದೆ.

ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರಿಂದ ಆರಂಭವಾಗುವ ಇವರ ಕ್ರೂರ ನಾಯಕರ ಪಟ್ಟಿ ಮೊನ್ನೆ ಮೊನ್ನೆ ಬಾರ್‌ನಲ್ಲಿ ಅಮಾಯಕರಿಗೆ‌ ಹೊಡೆದ ಮರಿ ರೌಡಿ ಮೊಹಮ್ಮದ್ ನಲಪಾಡ್‌ವರೆಗೂ ಇದೆ ಎಂದು ಬಿಜೆಪಿ ಟೀಕಿಸಿದೆ.

‘ರೌಡಿಗಳ ಬಗ್ಗೆ ಮಾತಾಡುವ ಕಾಂಗ್ರೆಸ್‌, ಕುಖ್ಯಾತ ಕೊಲೆ‌ ಅರೋಪಿ ವಿನಯ್ ಕುಲಕರ್ಣಿ ಬಗ್ಗೆ ಮಾತಾಡಲ್ಲವೇಕೆ? ಕಾಂಗ್ರೆಸ್‌ಗೆ ಜೀವ ಭಯವೇ? ನಲಪಾಡ್ ಹೊಡೆದುಬಿಟ್ಟಾರೆಂಬ ಭಯವೇ? ‘ಕೆ‌.ಜೆ. ಜಾರ್ಜ್‌ ನನ್ನ ಸಾವಿಗೆ ಕಾರಣ‘ ಎಂದು ಜೀವಬಿಟ್ಟ ಡಿವೈಎಸ್‌ಪಿ ಗಣಪತಿ ನೆನಪಿದೆಯೇ? ಅಷ್ಟೇ ಅಲ್ಲ, ಕಾಂಗ್ರೆಸ್‌ನಲ್ಲಿ ದರೋಡೆ‌ ಕೋರರೂ ಇದ್ದಾರೆ’ ಎಂದು ಬಿಜೆಪಿ ದೂರಿದೆ.

'2011ರಲ್ಲಿ ಜಮೀರ್ ಅಹ್ಮದ್ ವಿರುದ್ಧ ದರೋಡೆ ಪ್ರಕರಣ ದಾಖಲಾಗಿ ವಾರೆಂಟ್ ನೀಡಲಾಗಿತ್ತು. ಎಲ್ಲಿ ತಮ್ಮ ಮನೆ ದರೋಡೆ ಮಾಡಿಬಿಟ್ಟರೆ ಎಂದು ಗ್ಯಾಂಗ್‌ ಲೀಡರ್ ಡಿಕೆಶಿ ಸುಮ್ಮನಿದ್ದಾರೆಯೇ? ಇತ್ತ ಡಿ.ಕೆ.ಸುರೇಶ್‌, ಪಿಎಸ್‌ಐ ಟಿ. ಆರ್‌. ಶ್ರೀನಿವಾಸ್‌ರನ್ನು ಸಾರ್ವಜನಿಕವಾಗಿ ಅವಮಾನಿಸುವುದರ ಜೊತೆಗೆ ಜೀವ ಬೆದರಿಕೆಯೂ ಹಾಕ್ತಾರೆ’ ಎಂದು ಬಿಜೆಪಿ ಗುಡುಗಿದೆ.

‘ಬೆಂಗಳೂರಿನ ಸಕಲ ರೌಡಿಗಳನ್ನೂ ಪೋಷಿಸಿ, ಪ್ರೋತ್ಸಾಹಿಸುತ್ತಿರುವ ಮಹಾನ್ ನಾಯಕ ರಾಮಲಿಂಗಾ ರೆಡ್ಡಿ ಅವರು ಪ್ರತಿ ಸಲ‌ ಚುನಾವಣೆಯಲ್ಲಿ ಗೆಲ್ಲುತ್ತಿರುವುದೇ ರೌಡಿಗಳ ಕೃಪೆಯಿಂದ ಎಂಬುದು ಇಡೀ ಲೋಕಕ್ಕೇ ಗೊತ್ತಿದೆ. ಬೇಕಾದ್ರೆ ರೌಡಿ ನಾಗನ ಜೊತೆ ರೆಡ್ಡಿ ಸಾಹೇಬರ ಸಂಬಂಧವೇನು ಎಂಬುದನ್ನು ಮಾಧ್ಯಮಗಳೇ ಬಿಚ್ಚಿಟ್ಟಿದ್ದಾವೆ ನೋಡಿ’ ಎಂದು ಬಿಜೆಪಿ ಕಾಲೆಳೆದಿದೆ.

‘ಇನ್ನು ಸೌಮ್ಯಾ ರೆಡ್ಡಿಯವರು ಹೇಗೆ ಗೆದ್ದರು ಎಂಬುದನ್ನು ನಾವು ಹೇಳಲು ಹೋಗುವುದಿಲ್ಲ ಬಿಡಿ. ಹೀಗೆ ಕೊತ್ವಾಲನ ರೈಟ್‌ ಹ್ಯಾಂಡಾಗಿ ಡಿ.ಕೆ.ಶಿವಕುಮಾರ್ ಇದ್ದರೆ ಲೆಫ್ಟ್‌ಹ್ಯಾಂಡಲ್ಲಿ ನಿಂತವರೇ ನಮ್ಮ ನಿಮ್ಮೆಲ್ಲರ ಸೋಲಿನ ಸರದಾರ ಬಿ.ಕೆ. ಹರಿಪ್ರಸಾದ್. ರೌಡಿಗಳಿಂದ ಇವರು ಈಗಲೂ ಸೆಲ್ಯೂಟ್ ಹೊಡೆಯುವಷ್ಟು ಹವಾ ಇಟ್ಟಿದ್ದಾರೆ ಎಂಬುದು ಹಳೆ‌ ವಿಷಯ’ ಎಂದು ಬಿಜೆಪಿ ಛೇಡಿಸಿದೆ.

‘ರೌಡಿಗಳು, ಕಳ್ಳರು, ಕೊಲೆಗಾರರು, ದರೋಡೆಕೋರರು, ಭ್ರಷ್ಟಾಚಾರಿಗಳೇ ನಾಯಕರಾಗಿರೋ ಕಾಂಗ್ರೆಸ್, ರೌಡಿ‌ ರಾಜ್ಯದ ಬಗ್ಗೆ ಭಾಷಣ ಬಿಗಿಯುತ್ತಿರುವುದು, ಅಲ್ಲೆಲ್ಲೋ ಇರುವ ಅಲ್‌ಖೈದಾದವನು ಶಾಂತಿಯ ಸಂದೇಶ ಸಾರಿದಷ್ಟೇ ಅದಕ್ಕೆ ಪ್ರಾಮುಖ್ಯತೆ. ಭಯದಿಂದ ಅಣ್ಣಾ ಎಂದು ಕರೆಸಿಕೊಳ್ಳುವ ಡಿಕೆಶಿ ಪಟಾಲಮ್ಮಿನಿಂದ ಬಿಜೆಪಿಗೆ ಪಾಠ ಬೇಕಾಗಿಲ್ಲ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT