ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾರಂಟಿಗಳಿಗೆ ಒಂದೇ ಒಂದು ಪೈಸೆ ಕೇಂದ್ರದಿಂದ ಕೇಳಿಲ್ಲ, ಅದು ಬೇಕಾಗಿಯೂ ಇಲ್ಲ: CM

Published 23 ಏಪ್ರಿಲ್ 2024, 13:42 IST
Last Updated 23 ಏಪ್ರಿಲ್ 2024, 13:42 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕವನ್ನು ಮತ್ತು ರೈತರನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ದ್ವೇಷಿಸುತ್ತಾರೆ. ಕರ್ನಾಟಕಕ್ಕೆ ನ್ಯಾಯ ಕೊಡಿ ಎಂದು ಕೇಳಿದರೂ ಸ್ಪಂದಿಸುತ್ತಿಲ್ಲ. ಆದರೆ, ಮತ ಕೇಳಲು ಬರುತ್ತಿದ್ದಾರೆ. ಈ ಕಾರಣಕ್ಕೆ ಗೋ ಬ್ಯಾಕ್ ನರೇಂದ್ರ ಮೋದಿ, ಗೋ ಬ್ಯಾಕ್ ಅಮಿತ್ ಶಾ ಎನ್ನುತ್ತಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ರಾಜ್ಯಕ್ಕೆ ನೀಡಬೇಕಾಗಿರುವ ಬರ ಪರಿಹಾರದ ವಿಷಯದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ, ವಿಧಾನಸೌಧದ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಮೋದಿ ಅವರಿಗೆ ಕರ್ನಾಟಕ ನೆನಪಾಗುವುದು ಚುನಾವಣೆ ಸಂದರ್ಭದಲ್ಲಿ ಮಾತ್ರ. ಪ್ರವಾಹ, ಭೀಕರ ಬರಗಾಲದಲ್ಲಿಯೂ ರಾಜ್ಯಕ್ಕೆ ಅವರು ಬರಲಿಲ್ಲ’ ಎಂದು ವಾಗ್ದಾಳಿ ನಡೆಸಿದರು.

ರಾಜ್ಯಕ್ಕೆ ಬರ ಪರಿಹಾರ ಹಣ ಬಿಡುಗಡೆ ಮಾಡದ ನರೇಂದ್ರ ಮೋದಿ ಅಮಿತ್ ಶಾ ಯಾವ ಮುಖ ಇಟ್ಟುಕೊಂಡು ಮತ ಕೇಳಲು ಕರ್ನಾಟಕಕ್ಕೆ ಬರುತ್ತಾರೆ. ರಾಜ್ಯಕ್ಕೆ ಬರಲು ಅವರಿಗೆ ಯಾವುದೇ ನೈತಿಕತೆ ಇಲ್ಲ.
ಸಿದ್ದರಾಮಯ್ಯ, ಮುಖ್ಯಮಂತ್ರಿ

‘ಬರ ಪರಿಹಾರ ಕೋರಿ ಸೆಪ್ಟೆಂಬರ್ 22ರಂದೇ ಮನವಿ ಸಲ್ಲಿಸಿದ್ದು, ಕೇಂದ್ರದ ತಂಡ ನಾಲ್ಕು ದಿನ ಪರಿಶೀಲನೆ ಮಾಡಿ ವರದಿ ನೀಡಿದೆ. ರಾಜ್ಯದಲ್ಲಿ ಭೀಕರ ಬರಗಾಲವಿದ್ದು, 223 ತಾಲ್ಲೂಕುಗಳನ್ನು ಬರಗಾಲ ಪೀಡಿತ ಎಂದು ಘೋಷಿಸಿದ್ದೇವೆ. 100 ವರ್ಷಗಳ ನಂತರ ಇಂಥ ಬರಗಾಲ ಎದುರಾಗಿದೆ. ಮೊದಲೇ ಮನವಿ ಕೊಟ್ಟಿದ್ದರೂ, ಅಮಿತ್ ಶಾ ಚನ್ನಪಟ್ಟಣಕ್ಕೆ ಬಂದಿದ್ದ ಸಂದರ್ಭದಲ್ಲಿ ಮನವಿಯನ್ನು ವಿಳಂಬವಾಗಿ ಸಲ್ಲಿಸಿದ್ದಾರೆ ಎಂದು ಹೇಳಿದ್ದರು’ ಎಂದರು.

‘ಗ್ಯಾರಂಟಿ ಯೋಜನೆಗಳಿಗೆ ಹಣ ಕೇಳುತ್ತಿದ್ದಾರೆ, ಬರ ‍ಪರಿಹಾರಕ್ಕೆ ಅಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ನಾವು ಗ್ಯಾರಂಟಿಗಳಿಗೆ ಒಂದೇ ಒಂದು ಪೈಸೆಯನ್ನೂ ಕೇಂದ್ರದಿಂದ ಕೇಳಿಲ್ಲ. ನಮಗೆ ಬೇಕಾಗಿಯೂ ಇಲ್ಲ. ನಾವು ಬರಗಾಲವನ್ನು ಈವರೆಗೆ ಸಮರ್ಥವಾಗಿ ಎದುರಿಸಿದ್ದೇವೆ. ಕುಡಿಯುವ ನೀರು, ಮೇವು ಒದಗಿಸಿದ್ದೇವೆ, ಜನರಿಗೆ ಕೆಲಸ ಕೋಟ್ಟು, ಗುಳೇ ಹೋಗುವುದನ್ನು ತಪ್ಪಿಸಲು ಯತ್ನಿಸಿದ್ದೇವೆ, ರೈತರಿಗೆ ಮೊದಲ ಕಂತಿನ ಪರಿಹಾರ ನೀಡುವುದನ್ನು ಮಾಡಿದ್ದೇವೆ’ ಎಂದರು.

‘ಎನ್‌ಡಿಆರ್‌ಎಫ್‌ನಿಂದ ₹ 18,172 ಕೋಟಿ ಬಿಡುಗಡೆ ಮಾಡುವಂತೆ ಕೋರಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಏಳು ತಿಂಗಳು ಕಳೆದಿದೆ. ಕೇಂದ್ರ ಸರ್ಕಾರ ನಮ್ಮ ಮನವಿಗೆ ಸ್ಪಂದಿಸದ ಕಾರಣ, ರಾಜ್ಯ ಸರ್ಕಾರ ಅನಿವಾರ್ಯವಾಗಿ ಸುಪ್ರೀಂ ಕೋರ್ಟ್ ಕದ ತಟ್ಟಬೇಕಾದ ಪರಿಸ್ಥಿತಿ ಬಂತು. ಅಲ್ಲಿ ಅಟಾರ್ನಿ ಜನರಲ್ ಅವರು ಮೋದಿ ಮತ್ತು ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದ ಸುಳ್ಳಿನ ಬಗ್ಗೆ ಪ್ರಸ್ತಾಪ ಮಾಡಲಿಲ್ಲ. ತೆರಿಗೆ ಅನ್ಯಾಯದ ಬಗ್ಗೆ ರಾಜ್ಯ ಸರ್ಕಾರ ಸೂಕ್ತವಾದ ಹಾಗೂ ಸತ್ಯಾಂಶವನ್ನು ಮಂಡಿಸಿದ್ದರಿಂದ ಕರ್ನಾಟಕದ ಮೇಲೆ ಸುಪ್ರೀಂ ಕೋರ್ಟ್‌ ಕರುಣೆ ತೋರಿದೆ. ನಾವು ಸುಪ್ರೀಂ ಕೋರ್ಟ್‌ಗೆ ಹೋಗದೇ ಇರುತ್ತಿದ್ದರೆ ಪರಿಹಾರವನ್ನೇ ನೀಡುತ್ತಿರಲಿಲ್ಲ’ ಎಂದರು.

ನ್ಯಾಯ ಕೇಳಲು ಜನತಾ ನ್ಯಾಯಾಲಯದ ಮೊರೆ ಹೋಗುತ್ತೇವೆ. ಮೋದಿ ಸರ್ಕಾರವನ್ನು ಕರ್ನಾಟಕದಿಂದ ಮಾತ್ರವಲ್ಲದೆ ದೇಶದ ಇತರೆ ಕಡೆಗಳಿಂದಲೂ ಕಿತ್ತು ಹಾಕಲು ಪ್ರಯತ್ನಿಸುತ್ತೇವೆ
ರಣದೀಪ್‌ ಸಿಂಗ್‌ ಸುರ್ಜೇವಾಲ, ಕಾಂಗ್ರೆಸ್‌ ಉಸ್ತುವಾರಿ

‘ಕೊಡಿ ಕೊಡಿ ಬರ ಪರಿಹಾರ ಕೊಡಿ, ನಮ್ಮ ತೆರಿಗೆ ನಮ್ಮ ಹಕ್ಕು, ನರೇಂದ್ರ ಚೊಂಬೇಶ್ವರನಿಗೆ, ಚೊಂಬು ಕೊಟ್ಟ ಮೋದಿಗೆ, ಕರ್ನಾಟಕಕ್ಕೆ ಖಾಲಿ ಚೊಂಬು ಕೊಟ್ಟ ಬಿಜೆಪಿಗೆ ಧಿಕ್ಕಾರ ಎಂದು ಪ್ರತಿಭಟನಾ ನಿರತರು ಘೋಷಣೆ ಕೂಗಿದರು.

ಪ್ರತಿಭಟನೆಯಲ್ಲಿ ಸಚಿವರಾದ ಕೆ.ಜೆ. ಜಾರ್ಜ್, ರಾಮಲಿಂಗಾ ರೆಡ್ಡಿ, ಬೈರತಿ ಸುರೇಶ್, ಶಾಸಕ ರಿಜ್ವಾನ್ ಅರ್ಷದ್, ಪರಿಷತ್‌ ಸದಸ್ಯ ನಾಗರಾಜ್ ಯಾದವ್, ಪರಿಷತ್ತಿನ ಮಾಜಿ ಸದಸ್ಯರಾದ ಎಚ್.ಎಂ. ರೇವಣ್ಣ, ರಮೇಶ ಬಾಬು ಮತ್ತಿತರರು ಇದ್ದರು.

ಬರ ಪರಿಹಾರ ಬಿಡುಗಡೆ ವಿಚಾರದಲ್ಲಿ ವಾರದಲ್ಲಿ ತೀರ್ಮಾನ ಮಾಡುವುದಾಗಿ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರ ಹೇಳಿದೆ. ಇನ್ನೂ ಒಂದು ವಾರ ಕಾಯುತ್ತೇವೆ. ಬಿಡುಗಡೆ ಮಾಡದಿದ್ದರೆ ಮತ್ತೆ ಕೋರ್ಟ್‌ಗೆ ಹೋಗುತ್ತೇವೆ
ಕೃಷ್ಣ ಬೈರೇಗೌಡ, ಕಂದಾಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT