ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಕಾರ್ಮಿಕರ ಕಾರ್ಡ್‌ ಪತ್ತೆಗೆ ತಂಡ ರಚನೆ

ಕೋವಿಡ್‌ ನಂತರ ಕಾರ್ಡ್‌ಗಳ ಸಂಖ್ಯೆ ದಿಢೀರ್‌ ಏರಿಕೆ: ಪರಿಶೀಲನಾ ಕಾರ್ಯ ಆರಂಭ
Published 25 ನವೆಂಬರ್ 2023, 0:20 IST
Last Updated 25 ನವೆಂಬರ್ 2023, 0:20 IST
ಅಕ್ಷರ ಗಾತ್ರ

ಹಾವೇರಿ: ರಾಜ್ಯದಲ್ಲಿ ನಕಲಿ ಕಾರ್ಮಿಕರ ಸಂಖ್ಯೆ ಮಿತಿಮೀರಿದ್ದು, ಸರ್ಕಾರಿ ಸವಲತ್ತುಗಳು ಅನರ್ಹರ ಪಾಲಾಗುತ್ತಿವೆ ಎಂಬ ದೂರು ಕೇಳಿಬಂದ ಕಾರಣ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ನಕಲಿ ಕಾರ್ಮಿಕರ ಕಾರ್ಡ್‌ಗಳನ್ನು ಪತ್ತೆ ಮಾಡಿ, ರದ್ದುಗೊಳಿಸಲು ಮುಂದಾಗಿದೆ.

ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 18.49 ಲಕ್ಷ ಮಹಿಳಾ ಕಾರ್ಮಿಕರು, 27.83 ಲಕ್ಷ ಪುರುಷ ಕಾರ್ಮಿಕರು ಹಾಗೂ 9,076 ಇತರೆ ಸೇರಿದಂತೆ ಒಟ್ಟು 46.42 ಲಕ್ಷ ಕಾರ್ಮಿಕರು ನೋಂದಣಿ ಮಾಡಿಕೊಂಡು, ‘ಕಾರ್ಮಿಕರ ಕಾರ್ಡ್‌’ ಪಡೆದಿದ್ದಾರೆ. ಇವರಲ್ಲಿ ನಕಲಿ ಕಾರ್ಮಿಕರನ್ನು ಪತ್ತೆ ಹಚ್ಚಿ, ನೈಜ ಕಾರ್ಮಿಕರ ಪಟ್ಟಿ ಸಿದ್ಧಪಡಿಸಲು ಮಂಡಳಿ ಕ್ರಮ ಕೈಗೊಂಡಿದೆ. 

ನಕಲಿ ಕಾರ್ಡ್‌ ಹಾವಳಿ:

ಹಾವೇರಿ ಜಿಲ್ಲೆಯಲ್ಲಿ 2.96 ಲಕ್ಷ ಕಟ್ಟಡ ಕಾರ್ಮಿಕರು ನೋಂದಣಿಯಾಗಿದ್ದಾರೆ. 2011ರ ಜನಗಣತಿಯ ಪ್ರಕಾರ ಜಿಲ್ಲೆಯಲ್ಲಿ 3.30 ಲಕ್ಷ ಮನೆಗಳಿವೆ. ಅಂದರೆ ಪ್ರತಿ ಮನೆಗೊಂದರಂತೆ ನೋಂದಣಿ ಕಾರ್ಡ್‌ ಇರಬಹುದು, ಕಟ್ಟಡ ಕಾರ್ಮಿಕರಲ್ಲದವರು ನೋಂದಣಿಯಾಗಿರಬಹುದು ಎಂಬ ಸಂಶಯದಿಂದ ಜಿಲ್ಲೆಯಾದ್ಯಂತ ನಕಲಿ ಕಾರ್ಡ್‌ಗಳನ್ನು ಪತ್ತೆ ಹಚ್ಚಿ, ರದ್ದುಗೊಳಿಸಲು ಕಾರ್ಮಿಕ ಕಲ್ಯಾಣ ಮಂಡಳಿಯ ಕಾರ್ಯದರ್ಶಿ ಹಾಗೂ ಜಂಟಿ ಕಾರ್ಯದರ್ಶಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. 

ಕಾರ್ಮಿಕರ ನೈಜತೆಯನ್ನು ಸ್ಥಳೀಯ ಕಾರ್ಮಿಕ ನಿರೀಕ್ಷಕರು, ಎಕ್ಸಿಕ್ಯೂಟಿವ್ ಹಾಗೂ //ಡಾಟಾ ಎಂಟ್ರಿ ಆಪರೇಟರ್‌ಗಳಿಂದ// ಖುದ್ದು ಸ್ಥಳ ಪರಿಶೀಲನೆ ಮಾಡಬೇಕು. ಕಲ್ಯಾಣ ಮಂಡಳಿಯಿಂದ ನೀಡಿರುವ ಪಟ್ಟಿಯನ್ನು ಆಮೂಲಾಗ್ರವಾಗಿ ಪರಿಶೀಲಿಸಿ, ನೈಜ ಕಾರ್ಮಿಕರಲ್ಲವೆಂಬ ಬಗ್ಗೆ ಮಾಹಿತಿ ದೊರೆತರೆ, ಮಹಜರು ಪ್ರತಿಯಲ್ಲಿ ನಮೂದಿಸಿ, ಸ್ಥಳೀಯ ಸಾಕ್ಷಿಗಳ ಸಮಕ್ಷಮ ಪಂಚನಾಮೆ ಜರುಗಿಸಬೇಕು ಎಂದು ಕಾರ್ಮಿಕ ಕಲ್ಯಾಣ ಮಂಡಳಿಯ ಜಂಟಿ ಕಾರ್ಯದರ್ಶಿ ಆದೇಶಿಸಿದ್ದಾರೆ. 

ಕೋವಿಡ್‌ ನಂತರ ಕಾರ್ಡ್‌ ಹೆಚ್ಚಳ:

‘ಕೋವಿಡ್‌ ಬರುವ ಮುನ್ನ ಹಾವೇರಿ ಜಿಲ್ಲೆಯಲ್ಲಿ ಅಂದಾಜು 50 ಸಾವಿರ ಕಾರ್ಮಿಕರ ಕಾರ್ಡ್‌ಗಳಿದ್ದವು. ಕೋವಿಡ್‌ ಬಂದ ನಂತರ ಕಾರ್ಡ್‌ಗಳ ಸಂಖ್ಯೆ 2.96 ಲಕ್ಷಕ್ಕೆ ದಿಢೀರ್‌ ಏರಿಕೆಯಾಯಿತು. ಕೋವಿಡ್‌ ಸಂದರ್ಭ ಕಾರ್ಮಿಕ ಇಲಾಖೆಯಿಂದ ನೀಡಿದ ಆಹಾರ ಕಿಟ್‌ ಮತ್ತು ಕಾರ್ಮಿಕರ ಖಾತೆಗೆ ₹3 ಸಾವಿರ ಪ್ರೋತ್ಸಾಹಧನ ಪಡೆಯಲು ಕಾರ್ಮಿಕರಲ್ಲದವರು ಕಾರ್ಡ್‌ ಮಾಡಿಸಿಕೊಂಡು, ಸೌಲಭ್ಯಗಳಿಗಾಗಿ ಮುಗಿಬಿದ್ದರು. ಹಳ್ಳಿ–ಹಳ್ಳಿಯಲ್ಲೂ ಏಜೆಂಟರು ಹುಟ್ಟಿಕೊಂಡರು’ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು. 

5,500 ಕಾರ್ಡ್‌ ರದ್ದು:

‘ಹಾವೇರಿ ಜಿಲ್ಲೆಯಲ್ಲಿ ಈಗಾಗಲೇ 5,500 ನಕಲಿ ಕಾರ್ಡ್‌ಗಳನ್ನು ರದ್ದುಗೊಳಿಸಿದ್ದೇವೆ. ಹೊಸದಾಗಿ ಸಲ್ಲಿಕೆಯಾಗಿದ್ದ 20,657 ಆನ್‌ಲೈನ್‌ ಅರ್ಜಿಗಳಲ್ಲಿ 3,945 ಅರ್ಜಿಗಳನ್ನು ತಿರಸ್ಕೃತಗೊಳಿಸಲಾಗಿದೆ. ಬಾಕಿ ಅರ್ಜಿಗಳ ಪರಿಶೀಲನೆ ನಡೆಯುತ್ತಿದೆ. ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಜಿಲ್ಲೆಗೆ ಅಧಿಕಾರಿಗಳ ತಂಡ ಬಂದಿದ್ದು, ಎಂಟು ತಾಲ್ಲೂಕುಗಳಲ್ಲೂ ನಕಲಿ ಕಾರ್ಡ್‌ ಪತ್ತೆ ಹಚ್ಚುವ ಕಾರ್ಯ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಮಹೇಶ ಕೊರಳಿ ‘ಪ್ರಜಾವಾಣಿ’ಗೆ ತಿಳಿಸಿದರು. 

ವಜಾಗೊಂಡ ನೌಕರರಿಂದ ನಕಲಿ ಕಾರ್ಡ್‌ ಪತ್ತೆ ಕಾರ್ಯ!

ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹಾವೇರಿ ಜಿಲ್ಲೆಯ 13 ಡಾಟಾ ಎಂಟ್ರಿ ಆಪರೇಟರ್‌ಗಳನ್ನು ನಕಲಿ ಕಾರ್ಡ್‌ ಮಾಡಿಕೊಟ್ಟ ಆರೋಪದಲ್ಲಿ ಕೆಲಸದಿಂದ ವಜಾಗೊಳಿಸುವಂತೆ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು ನ.5ರಂದು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ಸೂಚಿಸಿದ್ದರು. 

ವಜಾಗೊಂಡ ನೌಕರರು ಕೇವಲ 15 ದಿನಗಳಲ್ಲೇ ಮತ್ತೆ ಕೆಲಸಕ್ಕೆ ಹಾಜರಾಗಿರುವುದು ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ನೌಕರರನ್ನೇ ನಕಲಿ ಕಾರ್ಡ್‌ಗಳ ಪತ್ತೆ ಹಚ್ಚುವ ಕಾರ್ಯಕ್ಕೆ ನೇಮಿಸಿರುವುದಕ್ಕೆ
ಕಾರ್ಮಿಕ ಮುಖಂಡರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. 

‘ಸೇವೆಯಿಂದ ಬಿಡುಗಡೆಗೊಂಡಿದ್ದ ನೌಕರರು ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟು, ಮತ್ತೆ ಕೆಲಸಕ್ಕೆ ಹಾಜರಾಗಿದ್ದಾರೆ. ಇಲಾಖೆಯಲ್ಲಿ ಸಿಬ್ಬಂದಿಯ ತೀವ್ರ ಕೊರತೆಯಿರುವ ಕಾರಣ, ನಕಲಿ ಕಾರ್ಡ್‌ ಪತ್ತೆ ಹಚ್ಚುವ ಕಾರ್ಯಕ್ಕೆ ಈ 13 ಸಿಬ್ಬಂದಿಯನ್ನು ನೇಮಿಸಲಾಗಿದೆ’ ಎಂದು ಕಾರ್ಮಿಕ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು. 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT