ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಇ ಫಾರ್ ಎಕ್ಸಾಂ

Published 26 ಮಾರ್ಚ್ 2024, 21:46 IST
Last Updated 26 ಮಾರ್ಚ್ 2024, 21:46 IST
ಅಕ್ಷರ ಗಾತ್ರ

‘ಎ ಫಾರ್ ಆ್ಯಪಲ್, ಪಿ ಫಾರ್ ಪೀಪಲ್ ಎಂದು ಮೊನ್ನೆ ಮೊನ್ನೆವರೆಗೂ ಆಡಿಕೊಂಡಿದ್ದ ಮಗಳು ಇ ಫಾರ್ ಎಕ್ಸಾಂ ಬರೆಯುವಷ್ಟು ದೊಡ್ಡವಳಾಗಿಬಿಟ್ಟಳು...’ ಸುಮಿ ಆನಂದಪಟ್ಟಳು.

‘ಹೌದು, ಮಗಳ ಪರೀಕ್ಷೆ ಶುರುವಾಗಿದೆ. ಮೊಬೈಲ್, ಟಿ.ವಿ. ಮ್ಯೂಟ್ ಮಾಡಿ ಮನೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡು. ಒಗ್ಗರಣೆ ಸೌಂಡು-ಘಾಟು ಮಗಳ ಓದಿಗೆ ಡಿಸ್ಟರ್ಬ್ ಆಗದಂತೆ ಮನೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡು. ಮಗಳಲ್ಲಿ ಪರೀಕ್ಷೆ ಎದುರಿಸುವ ಆತ್ಮವಿಶ್ವಾಸ ಮೂಡಿಸು’ ಅಂದ ಶಂಕ್ರಿ.

‘ಪರೀಕ್ಷೆ ಎದುರಿಸುವುದಕ್ಕಿಂತ ಪರೀಕ್ಷಾ ವ್ಯವಸ್ಥೆಗೆ ಹೆದರಿಬಿಡುತ್ತಾಳೇನೋ ಅನ್ನೋ ಆತಂಕವಿದೆ ಕಣ್ರೀ. ಪರೀಕ್ಷಾ ಕೇಂದ್ರದ ಸುತ್ತ ದಪ್ಪ ಮೀಸೆಯ ಪೊಲೀಸರು ಲಾಠಿ ಹಿಡಿದು ಕಾವಲಿರ್ತಾರಂತೆ. ಜೇಬು, ಜ್ಯಾಮಿಟ್ರಿ ಬಾಕ್ಸ್ ಚೆಕ್ ಮಾಡಿ ಒಳಗೆ ಬಿಡ್ತಾರಂತೆ. ಗೋಡೆ ಕಡೆ ಮುಖ ಮಾಡಿ ಪರೀಕ್ಷೆ ಬರೆಯಬೇಕಂತೆ. ಸಿ.ಸಿ. ಟಿ.ವಿ. ಕ್ಯಾಮೆರಾ ಕಣ್ಣುಗಳು ಕೆಕ್ಕರಿಸಿಕೊಂಡು ನೋಡುತ್ತವಂತೆ, ಸ್ಕ್ವ್ಯಾಡ್‌ ಮೇಲೆ ಸ್ಕ್ವ್ಯಾಡ್‌ಗಳು ಆಗಾಗ ಬಂದು ಹೆದರಿಸಿಹೋಗ್ತಾವಂತೆ...’

‘ಮಕ್ಕಳು ಕಾಪಿ ಹೊಡೆಯಬಾರದೆಂದು ಕಾಪಿ ತಡೆ ಕ್ರಮ ಕೈಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಪರೀಕ್ಷಾ ಸುರಕ್ಷಾ ಕ್ರಮಗಳು ಇನ್ನಷ್ಟು ಕಠಿಣ ಆಗಬಹುದು’.

‘ಕಠಿಣ ಅಂದ್ರೆ? ಪರೀಕ್ಷಾರ್ಥಿ ಹಿಂದೆ ಒಬ್ಬೊಬ್ಬರು ಗನ್ ಹಿಡಿದು ನಿಂತು ‘ಅತ್ತ ಇತ್ತ ತಿರುಗಿದರೆ ಹುಷಾರ್...’ ಅಂತ ಹೇಳೋ ಸ್ಥಿತಿ ಬರುವುದೇನೋ’.

‘ಮಕ್ಕಳು ಔಟಾಫ್ ಔಟ್ ಮಾರ್ಕ್ಸ್‌ ಗಳಿಸಬೇಕು ಅನ್ನೋ ಪೋಷಕರು, ಸಂಸ್ಥೆಗೆ ನೂರಕ್ಕೆ ನೂರು ರಿಸಲ್ಟ್ ದೊರಕಿಸಬೇಕು ಅನ್ನುವ ಶಾಲೆಗಳ ಮಾರ್ಕ್ಸ್‌ ವ್ಯಾಧಿಗೆ ಚಿಕಿತ್ಸೆಯಾಗಬೇಕು. ಪರೀಕ್ಷೆಯನ್ನು ಭೂತ ಮಾಡಿ ಮಕ್ಕಳನ್ನು ಹೆದರಿಸುವುದು ನಿಲ್ಲಬೇಕು’.

‘ಹೌದುರೀ, ಪರೀಕ್ಷೆಯು ಮಕ್ಕಳಿಗೆ ಸವಿಯುವ ಹುರಿಗಡಲೆ ಆಗಬೇಕೇ ವಿನಾ ಕಬ್ಬಿಣದ ಕಡಲೆ ಆಗಬಾರದು...’ ಎಂದಳು ಸುಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT