ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ‘ಪ್ರಜ್ವಲಿ’ಸಿದ ಪೆನ್‍ಡ್ರೈವ್

ಆನಂದ
Published 2 ಮೇ 2024, 0:15 IST
Last Updated 2 ಮೇ 2024, 0:15 IST
ಅಕ್ಷರ ಗಾತ್ರ

‘ಈ ಸಲ ಚೊಂಬು ನಿಮ್ಮದೇ’ ಎಂದು ಚಿಪ್ಪು ಹೇಳಿತು. ಅದಕ್ಕೆ ಚೊಂಬು ‘ಇಲ್ಲಪ್ಪಾ ನಾವೇನೂ ಆರ್‌ಸಿಬಿ ಅಲ್ಲ ‘ಚೊಂಬು ನಮ್ಮದೇ’ ಅಂತ ಹೇಳೋದಿಕ್ಕೆ. ನಮಗೆ ಕೊಟ್ಟರೂ ಬೇಡ’ ಎಂದಿತು.

ಹೀಗೆ ಚಿಪ್ಪು– ಚೊಂಬಿನ ನಡುವೆ ಜಟಾಪಟಿ ಆಫ್ ದಿ ಫೀಲ್ಡ್ ನಡೆಯುತ್ತಿತ್ತು.

ಚಿಪ್ಪು ದೊಡ್ಡದೋ ಚೊಂಬು ದೊಡ್ಡದೋ ಎಂಬ ಜಿಜ್ಞಾಸೆ ತಲೆದೋರಿತು. ‘ಚಿಪ್ಪು ನ್ಯಾಚುರಲ್ ಆದರೆ ಚೊಂಬು ಆರ್ಟಿಫಿಷಿಯಲ್ ಆದ್ದರಿಂದ ಚಿಪ್ಪೇ ದೊಡ್ಡದು’ ಎಂದು ಒಂದು ಚಿಂತಕರ ಚಾವಡಿ ಹೇಳಿತು. ಇನ್ನೊಂದು ಚಿಂತಕರ ಚಾವಡಿಯ ಪ್ರಕಾರ, ‘ಚೊಂಬಿನ ಅಳತೆಯನ್ನು ಅಗತ್ಯಕ್ಕೆ ತಕ್ಕಂತೆ ರೂಪಿಸಿಕೊಳ್ಳಬಹುದು, ಆದರೆ ಚಿಪ್ಪಿನ ಅಳತೆ ಮೊದಲೇ ಫಿಕ್ಸ್ ಆಗಿರುವುದರಿಂದ ಆ ಸೈಜಿಗೆ ಅದನ್ನು ಹಿಡಿಯುವವರು ಅಡ್ಜಸ್ಟ್ ಆಗಬೇಕೇ ವಿನಾ ನಮಗೆ ಬೇಕಾದ ಸೈಜಿಗೆ ಚಿಪ್ಪು ಸಿಗದು’ ಎಂದು ವಾದಿಸಿ, ಚಿಪ್ಪಿಗಿಂತ ಚೊಂಬೇ ವಾಸಿ ಎಂದು ಹೇಳಿತು.

ಅದಕ್ಕೆ ಚಿಪ್ಪಿನ ಬಣ, ‘ಚೊಂಬು ತಯಾರಿಸ
ಬೇಕಾದರೆ ಜನ ಬಲ, ನೀರಿನ ಬಲ, ವಿದ್ಯುತ್ ಬಲ, ಸಂಪನ್ಮೂಲ ಬಲ ಹೀಗೆ ಹಲವಾರು ಬಲಗಳು ಅಗತ್ಯ. ಆದರೆ ಚಿಪ್ಪಿಗೆ ಮರವೊಂದಿದ್ದರೆ ಸಾಕು ಬೇರಿನ್ನೇನೂ ಕೇಳದು, ತನ್ನಷ್ಟಕ್ಕೆ ತಾನೇ ಚಿಪ್ಪನ್ನು ಉತ್ಪಾದಿಸತೊಡಗುತ್ತದೆ. ಚೊಂಬು ಕೊಂಡರೆ ಜಿಎಸ್‍ಟಿ ಕಟ್ಟಬೇಕು, ಆದರೆ ಚಿಪ್ಪಿಗೆ ಅಂತಹ ತೆರಿಗೆಯ ಕಾಟವೇ ಇಲ್ಲ. ಆದ್ದರಿಂದ ಚಿಪ್ಪೇ ವಾಸಿ’ ಎಂದು ವಾದಿಸಿತು.

ಅದಕ್ಕೆ ಚೊಂಬುವಾದಿಗಳು ‘ಇದರಲ್ಲಿ ನೀರು ತುಂಬಿಡಬಹುದು, ಕೊಂಡೊಯ್ಯಬಹುದು, ಪೂರ್ಣಕುಂಭ ಸ್ವಾಗತಕ್ಕೆ ಬಳಸಬಹುದು... ನೀನಾರಿಗಾದೆಯೋ ಚಿಪ್ಪೇ’ ಎಂದು ರಾಗವಾಗಿ ಜರಿಯಿತು.

ಜಟಾಪಟಿ ಮುಂದುವರಿದಾಗ ಅಲ್ಲಿಗೆ ಬಂದ ಪೆನ್‍ಡ್ರೈವ್ ‘ನಿಮ್ಮಿಬ್ಬರಿಗಿಂತ ನಾನೇ ಹೆಚ್ಚು’ ಎಂದು ವಾದಿಸಿತು. ಆಗ ಚೊಂಬಿಗೂ ಚಿಪ್ಪಿಗೂ ಅಚ್ಚರಿ. ‘ಹೇಗೆ? ಪೇಳುವಂತವನಾಗು’ ಎಂದು ಪ್ರಲಾಪಿಸಿದಾಗ ಅದು ‘ನಾನು ನಿಮ್ಮಂತೆ ಕಾಣಿಸಿಕೊಳ್ಳಲೇಬೇಕಿಲ್ಲ, ಹಿಂಬದಿಯಲ್ಲಿ ನಿಂತೇ ಪ್ರಭಾವ ಬೀರುತ್ತಾ ‘ಪ್ರಜ್ವಲಿ’ಸುವೆ’ ಎಂದಿತು. ‘ಯೆಸ್, ಯು ಆರ್ ರೈಟ್’ ಎಂದು
ಚೊಂಬು– ಚಿಪ್ಪು ಒಪ್ಪಿಕೊಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT