ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 13 ಮಾರ್ಚ್ 2024, 23:47 IST
Last Updated 13 ಮಾರ್ಚ್ 2024, 23:47 IST
ಅಕ್ಷರ ಗಾತ್ರ

ಬೋರ್ಡ್‌ ಪರೀಕ್ಷೆ: ಸಲ್ಲದ ಗೊಂದಲ

ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಶಾಲೆಗಳ 5, 8 ಹಾಗೂ 9ನೇ ತರಗತಿಗಳಿಗೆ ಬೋರ್ಡ್‌ ಪರೀಕ್ಷೆ ನಡೆಯುವುದಕ್ಕೆ ಅನುವು ಮಾಡಿಕೊಟ್ಟಿದ್ದ ಹೈಕೋರ್ಟ್‌ ವಿಭಾಗೀಯ ಪೀಠದ ಮಧ್ಯಂತರ ಆದೇಶವನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಶಿಕ್ಷಣ ಇಲಾಖೆಯು ಇದೀಗ ಬೋರ್ಡ್‌
ಪರೀಕ್ಷೆಗಳನ್ನು ಮುಂದೂಡಿರುವುದು ಗೊಂದಲಕ್ಕೆ ಕಾರಣವಾಗಿದೆ. ಈ ಬೆಳವಣಿಗೆಯಿಂದ ಶಿಕ್ಷಣ ಇಲಾಖೆಗೆ ಮತ್ತೊಮ್ಮೆ ಹಿನ್ನಡೆಯಾಗಿದ್ದು ಮಾತ್ರವಲ್ಲ, ಲಕ್ಷಾಂತರ ವಿದ್ಯಾರ್ಥಿಗಳು, ಪಾಲಕರಲ್ಲಿ ಆತಂಕ ಮನೆಮಾಡಿದೆ.

ಬೋರ್ಡ್‌ ಪರೀಕ್ಷೆಗೆ ಸಂಬಂಧಿಸಿದ ಅನಿಶ್ಚಯ ಸ್ಥಿತಿಯಿಂದ ಮಕ್ಕಳು ರೋಸಿಹೋಗಿದ್ದಾರೆ. ಇಲಾಖೆಯು ಮಕ್ಕಳ ಮೇಲೆ ಇಂತಹ ಪ್ರಯೋಗ ಮಾಡುವುದನ್ನು ಬಿಟ್ಟು, ಸರಿಯಾದ ಕ್ರಿಯಾ ಯೋಜನೆ ರೂಪಿಸಿ ಅದರಂತೆ ನಡೆದುಕೊಳ್ಳಬೇಕು. ಈಗಾಗಲೇ ಮುದ್ರಿತವಾದ ಪ್ರಶ್ನೆಪತ್ರಿಕೆಯ ವೆಚ್ಚದ ಹೊರೆ ಒಂದೆಡೆ
ಯಾದರೆ,  ಶಾಲೆಗಳಿಗೆ ಮುಂದೇನು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಇಂತಹ ಸಮಸ್ಯೆಗಳಿಗೆ ಇಲಾಖೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. 

⇒ಸುರೇಂದ್ರ ಪೈ, ಭಟ್ಕಳ

‘ಆ ತಾಯಿ’ಯ ಋಣ ತೀರಿಸಬೇಡವೇ?

ಸರ್ಕಾರದ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಯೋಜನೆ ಕುರಿತ ಮಲ್ಲಿಕಾರ್ಜುನ ಹೆಗ್ಗಳಗಿ ಅವರ ಲೇಖನವು (ಸಂಗತ, ಮಾರ್ಚ್‌ 12) ಪ್ರೇರಣೆ ನೀಡುವಂತಿದೆ. ಈ ದಿನಗಳಲ್ಲಿ ಕನ್ನಡ ಶಾಲೆಗಳು ಮುಚ್ಚುತ್ತಿವೆ ಎಂಬ ವಿಷಯ ತಿಳಿದ ಪ್ರಜ್ಞಾವಂತ ಹಳೆ ವಿದ್ಯಾರ್ಥಿಗಳು ತಾವು ಕಲಿತ ಕನ್ನಡ ಶಾಲೆಗೆ ಭೇಟಿ ಕೊಟ್ಟು, ಯಾವ ರೀತಿಯಲ್ಲಿ ತಾವು ಸಹಾಯಹಸ್ತ ಚಾಚಬಹುದು ಎಂದು ಯೋಚಿಸಬೇಕು. ಅದರಂತೆ ತಮ್ಮ ಸಂಕಲ್ಪವನ್ನು ಅನುಷ್ಠಾನಕ್ಕೆ ತಂದರೆ ತಮ್ಮ ‘ಆ ತಾಯಿಯ ಋಣ’ವನ್ನೂ ಸ್ವಲ್ಪ ಮಟ್ಟಿಗೆ ತೀರಿಸಿದಂತೆ ಆಗುವುದಿಲ್ಲವೇ?

ತನ್ನ ಶಾಲೆಯು ಅನ್ಯರತ್ತ ದೈನ್ಯದಿಂದ ನೋಡಬೇಕೇಕೆ, ತನ್ನ ಅಸ್ತಿತ್ವಕ್ಕಾಗಿ ನೋಯಬೇಕೇಕೆ ಎಂಬ ಕಳಕಳಿಯು ಹಳೆ ವಿದ್ಯಾರ್ಥಿಗಳನ್ನು ಕಾಡಬೇಕು. ಅವರು ತಮ್ಮ ಪಾಲಿನ ಈ ಜವಾಬ್ದಾರಿಯನ್ನು ನಿರ್ವಹಿಸಿದರೆ ನಮ್ಮ ಪ್ರಾಥಮಿಕ ಕನ್ನಡ ಶಾಲೆಗಳು ಸದ್ಯದಲ್ಲಿ ತಮಗೆ ಬಂದಿರುವ ಕುತ್ತಿನಿಂದ ಪಾರಾಗಬಹುದು.

ಮಾಲತಿ ಪಟ್ಟಣಶೆಟ್ಟಿ, ಧಾರವಾಡ

ಪ್ರಾಣಿ– ಪಕ್ಷಿಗಳ ಬವಣೆ ಅರಿಯೋಣ

ಬೇಸಿಗೆ ಬಂತೆಂದರೆ ನಗರ, ಪಟ್ಟಣ, ಹಳ್ಳಿ ಎಂಬ ಭೇದವಿಲ್ಲದೆ ಎಲ್ಲೆಡೆಯೂ ನೀರಿಗಾಗಿ ಪರಿತಪಿಸುವಂತಹ ಸ್ಥಿತಿ ಎದುರಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಾಣಿ– ಪಕ್ಷಿಗಳು ಹೇಗೆ ಬದುಕುತ್ತವೆ, ಹೇಗೆ ನೀರು ಕುಡಿಯುತ್ತವೆ ಎಂದು ಯೋಚಿಸುವುದನ್ನೇ ನಾವು ಮರೆತುಬಿಡುತ್ತೇವೆ. ಸುಡು ಬೇಸಿಗೆಯಲ್ಲಿ ಆಹಾರದ ಜತೆ ನೀರು ಹುಡುಕುವುದಕ್ಕೂ ಪರದಾಡುವ ಸ್ಥಿತಿ ಆ ಮೂಕ ಜೀವಿಗಳದು. ಇಂತಹ ದುಃಸ್ಥಿತಿಯನ್ನು ತಪ್ಪಿಸಬೇಕೆಂದರೆ ನಾವು ಮರಗಳ ಕೆಳಗೆ, ಮನೆಯ ಅಂಗಳದಲ್ಲಿ ಅಥವಾ ಮನೆಯ ಟೆರೇಸ್ ಮೇಲೆ ಬಟ್ಟಲುಗಳನ್ನು ಇಟ್ಟು, ನೀರು, ಸ್ವಲ್ಪ ಅಕ್ಕಿಕಾಳು ಅಥವಾ ಯಾವುದಾದರೂ ಒಂದು ಬಗೆಯ ಕಾಳನ್ನು ಪಕ್ಷಿಗಳಿಗಾಗಿ ತೆಗೆದಿಡೋಣ. ಪ್ರಾಣಿ– ಪಕ್ಷಿಗಳ ಜೀವ ಉಳಿಸಿ ಮಾನವೀಯತೆ ಮೆರೆಯೋಣ.

ಸಾವಿತ್ರಿ ಆರ್., ಹೊಸಪೇಟೆ

ಇಂದಿರಾ ಕ್ಯಾಂಟೀನ್‌: ಗುಣಮಟ್ಟ ಕಾಪಾಡಿ

ಕರ್ನಾಟಕ ಸರ್ಕಾರವು ಇಂದಿರಾ ಕ್ಯಾಂಟೀನ್‍ಗಳ ಸಂಖ್ಯೆಯನ್ನು ಹೆಚ್ಚಿಸುವುದಾಗಿ ಹೇಳಿಕೆ ನೀಡಿದೆ. ಹೆಚ್ಚುವರಿ ಇಂದಿರಾ ಕ್ಯಾಂಟೀನ್‌ಗಳ ಅಗತ್ಯವೂ ಇದೆ. ಈ ಕ್ಯಾಂಟೀನ್‍ಗಳು ಪ್ರಾರಂಭದಲ್ಲಿ ಬಹಳಷ್ಟು ಪ್ರಚಾರ ಪಡೆದು, ಜನರನ್ನು ಸೆಳೆದದ್ದು ನಿಜ. ಕಾಲಕ್ರಮೇಣ ಅಲ್ಲಿನ ಆಹಾರದ ಗುಣಮಟ್ಟ, ಸ್ವಚ್ಛತೆ ಉತ್ತಮವಾಗಿಲ್ಲದ ಕಾರಣ, ಕ್ಯಾಂಟೀನ್ ಕಡೆ ಹೋಗುವ ಜನರ ಸಂಖ್ಯೆ ಕುಸಿದಿದೆ.

ಇಂದಿರಾ ಕ್ಯಾಂಟೀನ್‍ಗಳಲ್ಲಿ ಮುದ್ದೆಯನ್ನೂ ನೀಡುವುದಾಗಿ ಸರ್ಕಾರವು ಈ ವರ್ಷದ ಜನವರಿಯಲ್ಲಿ ಹೇಳಿಕೆ ನೀಡಿತ್ತು. ಫೆಬ್ರುವರಿ ಕಳೆದು ಮಾರ್ಚ್‌ ಬಂದಿದ್ದರೂ ಮುದ್ದೆ ನೀಡುವ ಯೋಜನೆ ಜಾರಿಯಾಗಿಲ್ಲ. ಬಹುತೇಕ
ಸ್ಥಳಗಳಲ್ಲಿ ಇಂದಿರಾ ಕ್ಯಾಂಟೀನ್‍ಗಳು ಇರುವ ಸ್ಥಳ ಆಕರ್ಷಣೀಯವಾಗಿದ್ದು ಊಟ, ಉಪಾಹಾರದ ಸಮಯ ಮುಗಿದ ನಂತರ ಆ ಜಾಗವನ್ನು ವ್ಯವಸ್ಥಿತವಾಗಿ ಬಳಕೆ ಮಾಡಬಹುದಾಗಿದೆ. ಇದ್ಯಾವುದರ ಬಗ್ಗೆಯೂ ಯೋಚಿಸದೆ, ಮುಖ್ಯವಾಗಿ ಆಹಾರದ ಪ್ರಮಾಣ ಮತ್ತು ಗುಣಮಟ್ಟವನ್ನು ಉತ್ತಮಪಡಿಸದೇ ಕ್ಯಾಂಟೀನ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ಮುಂದಾಗುವುದರಲ್ಲಿ ಅರ್ಥವಿಲ್ಲ.

ಈ.ಬಸವರಾಜು, ಬೆಂಗಳೂರು

ಅದೇ ಚಾಳಿ... ಚೀನಾ ಇನ್ನಾದರೂ ತೊರೆಯಲಿ

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಅರುಣಾಚಲ ಪ್ರದೇಶಕ್ಕೆ ಬೇಟಿ ನೀಡಿ, ಅತಿ ಎತ್ತರದಲ್ಲಿ ನಿರ್ಮಿಸಿರುವ ಸೆಲಾ ಸುರಂಗವನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದನ್ನು ಆಕ್ಷೇಪಿಸಿರುವ ಚೀನಾದ ವರ್ತನೆ ಖಂಡನಾರ್ಹ.
ಹೊಳೆಯ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಕೇ ಅನ್ನುವ ಹಾಗೆ ನಮ್ಮ ದೇಶದ ಒಂದು ರಾಜ್ಯವಾಗಿರುವ ಅರುಣಾಚಲ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ನಾವು ಸರ್ವಸ್ವತಂತ್ರರು.
ಅರುಣಾಚಲ ಪ್ರದೇಶದ ವಿಚಾರದಲ್ಲಿ ಪದೇ ಪದೇ ಕ್ಯಾತೆ ತೆಗೆಯುವ ಚಾಳಿಯನ್ನು ಚೀನಾ
ಇನ್ನಾದರೂ ಬಿಡಬೇಕು.

ಕೆ.ವಿ.ವಾಸು, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT