ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 16 ಮಾರ್ಚ್ 2024, 0:10 IST
Last Updated 16 ಮಾರ್ಚ್ 2024, 0:10 IST
ಅಕ್ಷರ ಗಾತ್ರ

ಶ್ರೀಗಳು ಪಕ್ಷಾತೀತವಾಗಿದ್ದರೆ ಒಳಿತು

‘ಬಿಜೆಪಿಯು ರಾಮಮಂದಿರದ ವಿಷಯವನ್ನು ಪ್ರಸ್ತಾಪಿಸಿ ಚುನಾವಣೆಯಲ್ಲಿ ಪ್ರಚಾರಕ್ಕೆ ಬಳಸಿಕೊಂಡರೆ ತಪ್ಪೇನಿಲ್ಲ’ ಎಂದು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿರುವುದು ಸಮರ್ಥನೀಯವಲ್ಲ. ಪೂಜ್ಯರು ಅಧ್ಯಾತ್ಮ ಚಿಂತಕರು, ಸರ್ವಸಂಗ ಪರಿತ್ಯಾಗಿಗಳು, ‘ಜಗವೆಲ್ಲ ನನ್ನ ಕುಟುಂಬ’ ಎನ್ನುವ ವಿಚಾರಧಾರೆಯನ್ನು ಸಮಾಜಕ್ಕೆ ಬೋಧಿಸಬೇಕಾದವರು. ಅಂತಹವರು ಯಾವುದೋ ಒಂದು ಪಕ್ಷದ ಪರ ನಿಲ್ಲುವುದು, ಅದಕ್ಕೆ ಬೆಂಬಲ ವ್ಯಕ್ತಪಡಿಸುವುದು ಸಾಮಾನ್ಯ ನಾಗರಿಕರನ್ನು ಗೊಂದಲಕ್ಕೆ ತಳ್ಳುತ್ತದೆ. ಸಮಾಜದಲ್ಲಿನ ಸರ್ವರ ಒಳಿತನ್ನು ಬಯಸುವುದಾದರೆ ಶ್ರೀಗಳು ಪಕ್ಷಾತೀತವಾಗಿರಬೇಕು.

⇒ಶಾಂತಕುಮಾರ್, ಸರ್ಜಾಪುರ

ಋಣ ತೀರಿಸುವ ಪ್ರಶ್ನೆಯೇ ಇಲ್ಲ

‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಐದು ಯೋಜನೆಗಳ ಫಲಾನುಭವಿಗಳು ಗ್ಯಾರಂಟಿಯ ಋಣ ತೀರಿಸಬೇಕು’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿರುವುದು ವರದಿಯಾಗಿದೆ (ಪ್ರ.ವಾ., ಮಾರ್ಚ್‌ 15). ಗ್ಯಾರಂಟಿ ಯೋಜನೆಗಳಿಗೆ ಹಣವನ್ನು ಯಾರೂ ತಮ್ಮ ಜೇಬಿನಿಂದ ಕೊಡುತ್ತಿಲ್ಲ. ಅದು ಜನರ ತೆರಿಗೆ ಹಣದಿಂದಲೇ ಪಾವತಿಯಾಗುತ್ತಿದೆ. ಹಾಗಾಗಿ, ಇದರಲ್ಲಿ ಯಾರು ಯಾರ ಋಣವನ್ನೂ ತೀರಿಸುವ ಪ್ರಶ್ನೆಯೇ ಬರುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳಿಗೆ ಮತ ಕೊಟ್ಟ ಜನರ ಋಣಕ್ಕಿಂತ ಹೆಚ್ಚಿನ ಋಣ ಯಾವುದೂ ಇರುವುದಿಲ್ಲ.

ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮತ್ತೂರು, ಕೊಪ್ಪ

ತೈಲೋತ್ಪನ್ನ ದರ ಇಳಿಕೆ: ಮೂಗಿಗೆ ತುಪ್ಪ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕೇಂದ್ರ ಸರ್ಕಾರ ಎರಡು ರೂಪಾಯಿಯಷ್ಟು ಇಳಿಸಿದೆ. ಕೆಲ ದಿನಗಳ ಹಿಂದೆ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ನೂರು ರೂಪಾಯಿಯಷ್ಟು ಇಳಿಸಲಾಗಿತ್ತು. ಇವೆಲ್ಲ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೈಗೊಂಡ ಕ್ರಮಗಳು. ವಾಸ್ತವವಾಗಿ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಬೆಲೆ ಇಳಿಕೆಗೆ ಹೋಲಿಸಿದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಬಹಳ ಹಿಂದೆಯೇ ಕನಿಷ್ಠ ಹತ್ತು ರೂಪಾಯಿಗಿಂತಲೂ ಹೆಚ್ಚು ಇಳಿಸಬೇಕಾಗಿತ್ತು. ತೈಲ ಕಂಪನಿಗಳು ಲಾಭ ಮಾಡಿಕೊಂಡ ಮೇಲೆ ಮತ್ತು ಕೇಂದ್ರ, ರಾಜ್ಯ ಸರ್ಕಾರಗಳು ಸೆಸ್ ರೂಪದಲ್ಲಿ ಬಹಳಷ್ಟು ಹಣ ಬಾಚಿಕೊಂಡ ಮೇಲೆ ಮೂಗಿಗೆ ಈಗೊಂದಿಷ್ಟು ತುಪ್ಪ ಹಚ್ಚುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ. ಸಾಮಾನ್ಯ ಜನ ಬೆಲೆ ಏರಿಕೆಯಿಂದ ತತ್ತರಿಸಿಹೋದರೂ ಕಿವಿಗೊಡದ ಸರ್ಕಾರ ಈಗ ಚುನಾವಣೆ ಸಮಯದಲ್ಲಿ, ಸುಮಾರು ಎರಡು ವರ್ಷಗಳ ನಂತರ ಒಂದಿಷ್ಟು ಕರುಣೆ ತೋರಿದೆ.

ಪೆಟ್ರೋಲ್, ಡೀಸೆಲ್ ಬೆಲೆಯನ್ನು ಸಂಬಂಧಿಸಿದ ತೈಲ ಕಂಪನಿಗಳೇ ನಿರ್ಧರಿಸುತ್ತವೆ ಎಂದು ಹೇಳುತ್ತಲೇ ಪ್ರತಿಯೊಂದನ್ನೂ ಕೇಂದ್ರ ಸರ್ಕಾರವೇ ನಿರ್ಧರಿಸುತ್ತಾ ಬಂದಿದೆ. ಪೆಟ್ರೋಲ್, ಡೀಸೆಲ್ ಬೆಲೆ ನಿರ್ಧಾರ ಹಾಗೂ ಹೆದ್ದಾರಿಗಳ ಮೇಲೆ ಟೋಲ್ ಸಂಗ್ರಹದಲ್ಲಿ ಕೇಂದ್ರ ಸರ್ಕಾರ ಪಾರದರ್ಶಕವಾಗಿ ವರ್ತಿಸದೇ ಇರುವುದರಿಂದ ವಾಹನಗಳ ಮಾಲೀಕರು ಒಂದು ರೀತಿಯ ಶೋಷಣೆಗೆ ಒಳಗಾಗುತ್ತಿದ್ದಾರೆ. ಹಣದುಬ್ಬರ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಇವುಗಳ ಕುರಿತು ಸರ್ಕಾರ
ಸಮಂಜಸವೆನಿಸುವ ಕ್ರಮವನ್ನು ಅನುಸರಿಸಬೇಕು. ತೈಲೋತ್ಪನ್ನಗಳ ದರಗಳು ಅಂತರರಾಷ್ಟ್ರೀಯ ವಾಸ್ತವ ಮಾರುಕಟ್ಟೆಯ ದರಗಳನ್ನು ಆಧರಿಸಿದರೆ ಹೆಚ್ಚು ಸಮಂಜಸ ಎನಿಸುತ್ತದೆ.

⇒ವೆಂಕಟೇಶ ಮಾಚಕನೂರ, ಧಾರವಾಡ 

ಜಂಕ್‌ಫುಡ್‌: ಯುವಜನ ಜಾಗೃತರಾಗಲಿ

ರಾಸಾಯನಿಕಭರಿತ ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿಗಳ ಮಾರಾಟವನ್ನು ರಾಜ್ಯ ಸರ್ಕಾರವು ಜನರ ಆರೋಗ್ಯದ ದೃಷ್ಟಿಯಿಂದ ನಿಷೇಧಿಸಿರುವುದು ಸ್ವಾಗತಾರ್ಹ. ರಾಸಾಯನಿಕ ಬಳಸದ ಗೋಬಿ ಮತ್ತು ಕಾಟನ್ ಕ್ಯಾಂಡಿಗಳಿಗೆ ನಿಷೇಧವಿಲ್ಲ ಎಂದಿದೆ. ಆದರೆ, ಇದರ ಪರಿಣಾಮಕಾರಿ ಜಾರಿ ಸಾಧ್ಯವೇ? ಹೋಟೆಲ್ ಅಥವಾ ಬೀದಿ ಬದಿಯ ವ್ಯಾಪಾರಸ್ಥರು ‘ನಮ್ಮ ಆಹಾರದಲ್ಲಿ ರಾಸಾಯನಿಕ ಬಳಸಿಲ್ಲ’ ಎಂದು ಬೋರ್ಡ್ ಹಾಕುತ್ತಾರೆಯೇ? ಹಾಕಿದರೂ ಅದು ನಂಬಲರ್ಹವೇ? ಗ್ರಾಹಕರು ಪ್ರತಿ ತಟ್ಟೆಯನ್ನೂ ಪ್ರಯೋಗಾಲಯದಲ್ಲಿ
ಪರೀಕ್ಷೆ ಮಾಡಿಸಿ ತಿನ್ನಲಾಗುವುದೇ? ಎಲ್ಲಾ ಅಂಗಡಿಗಳ ಮುಂದೆ ಅಧಿಕಾರಿಗಳನ್ನು, ಪರೀಕ್ಷಾ ಕೇಂದ್ರಗಳನ್ನು ನಿಯೋಜಿಸಲು ಸಾಧ್ಯವೇ? ಇವೆಲ್ಲಾ ಆಗದಮಾತು.

ಹಾಗಾಗಿ, ನಾಲಿಗೆಯ ರುಚಿಗೆ ಮಾರುಹೋಗಿರುವ ಜನ ಮತ್ತು ಅದರಲ್ಲೂ ಯುವಜನ ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ. ರಾಸಾಯನಿಕಗಳಿಂದ ಕ್ಯಾನ್ಸರ್‌ನಂತಹ ರೋಗಗಳಿಗೆ ತುತ್ತಾಗಬಹುದು ಎಂಬ ಅರಿವು ಹೊಂದಬೇಕಿದೆ. ಹಸಿವಿಗಾಗಿ ಆಹಾರ ಸೇವಿಸುವುದರ ಬದಲು ನಾಲಿಗೆಯ ರುಚಿಗಾಗಿ ಜನ ಜಂಕ್‌ಫುಡ್‌ ಸೇವಿಸುತ್ತಾರೆ. ನಮ್ಮ ಹಿರಿಯರು ನಮ್ಮ ಸಹಜ ಸಾಂಪ್ರದಾಯಿಕ  ಆಹಾರಗಳನ್ನೇ ನಿಯಮಿತವಾಗಿ ಸೇವಿಸುತ್ತಾ ಆರೋಗ್ಯವಂತರಾಗಿ ಲವಲವಿಕೆಯಿಂದ ಇರುತ್ತಿದ್ದರು. ಅಲ್ಲದೆ ದೀರ್ಘಾಯುಷಿಗಳಾಗಿ ಬಾಳಿದರು ಎಂಬುದನ್ನು ಗಮನಿಸಬೇಕಿದೆ. ಅಪರೂಪಕ್ಕೆ ಮನದ ಬಯಕೆ
ಈಡೇರಿಸಿಕೊಳ್ಳಲು ಜಂಕ್‌ಫುಡ್ ಸೇವಿಸಿದರೆ ಬಹುಶಃ ತೊಂದರೆ ಇರಲಾರದು. ಆದರೆ ಅದು ‘ಚಟ’ ಆಗದಿರಲಿ. ಜನ ಸ್ವಯಂ ಕಡಿವಾಣ ಹಾಕಿಕೊಂಡು ಆರೋಗ್ಯ ಕಾಪಾಡಿಕೊಳ್ಳಲಿ.

⇒ಪತ್ತಂಗಿ ಎಸ್. ಮುರಳಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT