ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 12 ಮಾರ್ಚ್ 2024, 23:49 IST
Last Updated 12 ಮಾರ್ಚ್ 2024, 23:49 IST
ಅಕ್ಷರ ಗಾತ್ರ

ರೋಪ್‌ವೇ: ಮತ್ತೆ ಮುನ್ನೆಲೆಗೆ ತಂದದ್ದೇಕೆ?

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ರೋಪ್‌ವೇ ಅಳವಡಿಸುವ ವಿಚಾರವು ಪರಿಸರಪ್ರಿಯರ ವಿರೋಧದ ಕಾರಣದಿಂದ ಈವರೆಗೆ ತಟಸ್ಥವಾಗಿತ್ತು. ಆದರೆ ಈಗ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮೈಸೂರಿನಲ್ಲಿ ಅದನ್ನು ಪ್ರಸ್ತಾಪಿಸುವ ಮೂಲಕ ಮತ್ತೊಮ್ಮೆ ಮುನ್ನೆಲೆಗೆ ತಂದಿದ್ದಾರೆ. ಮುಖ್ಯಮಂತ್ರಿ  ಸಿದ್ದರಾಮಯ್ಯ ಕೂಡ ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ, ಪರಿಸರಪ್ರಿಯರು ಒಪ್ಪಿದರೆ ಚಾಮುಂಡಿ ಬೆಟ್ಟಕ್ಕೆ ರೋಪ್‌ವೇ ನಿರ್ಮಿಸಲಾಗುವುದು ಎಂದು ಹೋಟೆಲ್ ಮಾಲೀಕರ ಮನವಿಗೆ ಸಂಬಂಧಿಸಿದಂತೆ ಹೇಳಿದ್ದಾರೆ. ಬರೀ ಪ್ರವಾಸೋದ್ಯಮ ಮತ್ತು ಹೋಟೆಲ್‌ಗಳ ಅಭಿವೃದ್ಧಿಯನ್ನಷ್ಟೇ ಗಮನದಲ್ಲಿ ಇಟ್ಟುಕೊಂಡು ಹೀಗೆ ಯೋಚಿಸುವ ಬದಲು, ಚಾಮುಂಡಿ ಬೆಟ್ಟದಲ್ಲಿನ ಸ್ಥಿತಿಗತಿಯನ್ನೂ ಪರಿಗಣಿಸಿದ್ದರೆ ರೋಪ್‌ವೇ ಯೋಜನೆ ಬಹುಶಃ ಅಪ್ರಸ್ತುತ ಎನಿಸುತ್ತಿತ್ತು.

ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಸ್ಥಾನವಲ್ಲದೆ ಒಂದು ಗ್ರಾಮವೂ ಇದೆ. ಎಲ್ಲ ಊರು, ಪಟ್ಟಣಗಳೂ ಬೆಳೆಯುತ್ತಿರುವಂತೆ ಚಾಮುಂಡಿ ಗ್ರಾಮವೂ ಬೆಳೆಯುತ್ತಿದೆ! ಆದರೆ ಜಮೀನುಗಳನ್ನು
ಲೇಔಟ್‌ಗಳನ್ನಾಗಿ ಪರಿವರ್ತಿಸುವ ಮೂಲಕ ನಮ್ಮ ಊರು, ಪಟ್ಟಣಗಳನ್ನು ವಿಸ್ತರಣೆ ಮಾಡುತ್ತಿದ್ದೇವೆ. ಚಾಮುಂಡಿ ಬೆಟ್ಟ ಮತ್ತು ಗ್ರಾಮವನ್ನು ಅಭಿವೃದ್ಧಿಪಡಿಸಬೇಕಾದರೆ ಬೆಟ್ಟವನ್ನು ಸಮತಟ್ಟು ಮಾಡಿ, ಮನೆ, ಮಾರುಕಟ್ಟೆಯನ್ನು ನಿರ್ಮಿಸಬೇಕಾಗುತ್ತದೆ. ಅಭಿವೃದ್ಧಿಗೆ ಕೊನೆ ಎಂಬುದೇ ಇರುವುದಿಲ್ಲ. ಹಿಂದೆ ಸಚಿವರಾಗಿದ್ದವರೊಬ್ಬರು, ಚಾಮುಂಡಿ ಬೆಟ್ಟದಲ್ಲಿ ಇರುವ ನಿವಾಸಿಗಳನ್ನು ಬೇರೆಡೆ ಸ್ಥಳಾಂತರಿಸಿ, ಅಲ್ಲಿ ಚಾಮುಂಡಿ ದೇವಸ್ಥಾನ ಮಾತ್ರ ಇರುವಂತೆ ಮಾಡುವುದರ ಕುರಿತು ಯೋಚಿಸಿದ್ದರೆಂದು ವರದಿಯಾಗಿತ್ತು. ಇದು ಚಾಮುಂಡಿ ಬೆಟ್ಟದ ಪರಿಸರವನ್ನು ಕಾಪಾಡಲು ಅಗತ್ಯ ಕೂಡ ಎಂಬ ಮಾತು ಕೇಳಿಬಂದಿತ್ತು. ಹೀಗಿರುವಾಗ, ಹಿಂದೆ ಸರಿದಿದ್ದ ಚಾಮುಂಡಿ ಬೆಟ್ಟದ ರೋಪ್‌ವೇ ಯೋಜನೆಯನ್ನು ಆಗಾಗ್ಗೆ ಮುನ್ನೆಲೆಗೆ ತರುವುದು ಅರ್ಥವಾಗದ ವಿಚಾರ.

ಮುಳ್ಳೂರು ಪ್ರಕಾಶ್, ಮೈಸೂರು

ಚುನಾವಣಾ ಅಸ್ತ್ರವಾಗಿ ಸಿಎಎ ಬಳಕೆ ಸಲ್ಲ 

ಪೌರತ್ವ ತಿದ್ದುಪಡಿ ಕಾಯ್ದೆಯು (ಸಿಎಎ) ಸದನದಲ್ಲಿ ಅಂಗೀಕೃತವಾದ ನಾಲ್ಕು ವರ್ಷಗಳ ನಂತರ ಕೇಂದ್ರ ಸರ್ಕಾರವು ಅದನ್ನು ಜಾರಿಗೆ ತರಲು ಹೊರಟಿರುವುದು ನ್ಯಾಯಸಮ್ಮತ ಅಲ್ಲ. ಈಗ ಚುನಾವಣೆಯಲ್ಲಿ ಅದನ್ನು
ಅಸ್ತ್ರವನ್ನಾಗಿ ಬಳಸಲು ಮುಂದಾಗಿರುವುದು ಖಂಡನಾರ್ಹ. ಅಲ್ಲದೆ ಇದು ಕಾನೂನಿನ ದುರುಪಯೋಗ ಸಹ.

ಕೆ.ಎಸ್‌.ಪಾರ್ಥಸಾರಥಿ, ಬೆಂಗಳೂರು 

ವೈಚಾರಿಕ ಒಮ್ಮತ ಮೂಡಲಿ

ಇಂದಿನ ಚುನಾವಣಾ ಪ್ರಚಾರದ ಭರಾಟೆಯಲ್ಲಿ, ಜನಸಾಮಾನ್ಯರ ಬದುಕಿಗೆ ಹತ್ತಿರವಾದ ನೈಜ ಸಂಗತಿಗಳು ತೆರೆಯ ಹಿಂದೆ ಸರಿಯುತ್ತಿವೆಯೇ ಎಂಬ ಆತಂಕ ಮೂಡುತ್ತದೆ. ಸಂವಿಧಾನವನ್ನು ಬದಲಾಯಿಸುವ ಇರಾದೆ, ಕೇಂದ್ರ– ರಾಜ್ಯಗಳ ನಡುವಿನ ಸಂಬಂಧ, ಭ್ರಷ್ಟಾಚಾರದಂತಹ ವಿಷಯಗಳು ಚರ್ಚಾರ್ಹವಾಗಿದ್ದು, ಹೆಚ್ಚು ಪ್ರಾಮುಖ್ಯ ಪಡೆಯಬೇಕಾಗಿದೆ. ದೇಶಭಕ್ತಿ, ದೇವರಿಗೆ ಸಂಬಂಧಿಸಿದಂತಹ ಭಾವನಾತ್ಮಕ ಸಂಗತಿಗಳಿಗಿಂತ ಪ್ರಚಲಿತ ಸಂಗತಿಗಳ ಬಗ್ಗೆ ವೈಚಾರಿಕ ಒಮ್ಮತ ಮೂಡುವ ಅಗತ್ಯವಿದೆ.

ಆಶಯ, ಮೈಸೂರು

ರೈತರ ಆಕ್ರೋಶ ಯಾರ ಮೇಲೆ? 

ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ಮೆಣಸಿನಕಾಯಿ ದರದ ದಿಢೀರ್‌ ಕುಸಿತದಿಂದ ಆಕ್ರೋಶಕ್ಕೆ ಒಳಗಾದ ರೈತರು ಎಪಿಎಂಸಿ ಕಚೇರಿಯಲ್ಲಿ ದಾಂದಲೆ ನಡೆಸಿರುವುದು ವರದಿಯಾಗಿದೆ (ಪ್ರ.ವಾ., ಮಾರ್ಚ್‌ 12). ಹಾಗಿದ್ದರೆ ರೈತರ ಆಕ್ರೋಶ ಯಾರ ಮೇಲೆ? ಬೆಲೆ ಕುಸಿತದ ವಿರುದ್ಧವೋ ಸರ್ಕಾರದ ವಿರುದ್ಧವೋ ಅಥವಾ ನಮ್ಮ ರಕ್ಷಣೆಗಾಗಿ ಇರುವ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಯ ವಿರುದ್ಧವೋ ಎಂಬುದು ತಿಳಿಯದಾಗಿದೆ. ರೈತರು ಪ್ರತಿಭಟನೆ ನಡೆಸುವುದು ತಪ್ಪಲ್ಲ. ಆದರೆ ಆ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ, ಘಟನೆಯನ್ನು ನಿಯಂತ್ರಿಸಲು ಸ್ಥಳಕ್ಕೆ ಬಂದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಯನ್ನೇ ಅವರು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ನಡೆಸಿರುವುದು, ಪತ್ರಕರ್ತರತ್ತ ಕಲ್ಲು ತೂರಿರುವುದು ನಮ್ಮ ಜನರ ಮನಃಸ್ಥಿತಿ ಎಂತಹ ಅಧೋಗತಿಗೆ ಇಳಿದಿದೆ ಎಂಬುದನ್ನು ತಿಳಿಸುತ್ತದೆ.

ಬೆಳೆದ ಉತ್ಪನ್ನಕ್ಕೆ ಸರಿಯಾದ ಬೆಲೆ ಸಿಗದಿದ್ದಾಗ, ದೇಶದ ಬೆನ್ನೆಲುಬು ಎನಿಸಿಕೊಂಡಿರುವ ರೈತರ ಸಹನೆಯ ಕಟ್ಟೆ ಒಡೆಯುವುದು ಸ್ವಾಭಾವಿಕ. ಆದರೆ ಅದು ಪ್ರತಿಭಟನೆಯ ಮೂಲಕ ತಮ್ಮ ಅಸಮಾಧಾನವನ್ನು ನ್ಯಾಯಯುತವಾಗಿ ಸರ್ಕಾರಕ್ಕೆ ಮುಟ್ಟಿಸುವಂತಹ ರೀತಿಯಲ್ಲಿ ಇರಬೇಕೇ ವಿನಾ ಹಿಂಸಾಕೃತ್ಯಗಳಿಗೆ ಇಳಿಯುವಂತೆ ಅಲ್ಲ.

ಜಗದೀಶ ಗಿರಡ್ಡಿ, ಇಳಕಲ್

ಹೃದಯದ ಸಖ್ಯವೇ ಇರಲಿ...

ರಾಜಕಾರಣಿಗಳೆಂದರೆ ಭ್ರಷ್ಟರೆಂಬುದು ಜನಜನಿತವಾದ ವಿಷಯ. ಚುನಾವಣಾ ವ್ಯವಸ್ಥೆಯೂ ಇದಕ್ಕೆ ಪೂರಕವಾಗಿಯೇ ಇದೆ. ಇಂತಹ ಸಂದರ್ಭದಲ್ಲಿ, ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ
ಡಾ. ಸಿ.ಎನ್.ಮಂಜುನಾಥ್ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಮ್ಮತಿ ನೀಡಿರುವುದಾಗಿ ವರದಿಯಾಗಿದೆ (ಪ್ರ.ವಾ., ಮಾರ್ಚ್‌ 12). ಲಕ್ಷಾಂತರ ಹೃದಯಗಳಿಗೆ ಚಿಕಿತ್ಸೆ ನೀಡಿ ಮಂಜುನಾಥ್ ಅವರ ಹೃದಯ ಮಿಡಿದಿದೆ. ಸಾರ್ಥಕ ಬದುಕು ಕಂಡಿರುವ ಅವರು, ಈ ಹೊಲಸು ರಾಜಕಾರಣಿಗಳ ತಾಳಕ್ಕೆ ಹೇಗೆ ಸ್ಪಂದಿಸಬಹುದು?

ಶಿಕ್ಷಣ ತಜ್ಞರಾದ ಕನಕಪುರ ಕರಿಯಪ್ಪನವರು ವಿದ್ಯಾಸಂಸ್ಥೆಯೊಂದನ್ನು ಕಟ್ಟಿ ಅದರ ಕೀರ್ತಿಯನ್ನು ಎತ್ತರಕ್ಕೆ ಏರಿಸಿದರು. ಆದರೆ, ರಾಜಕಾರಣ ಅವರನ್ನು ದೂರ ತಳ್ಳಿತು. ತಮ್ಮದೇ ಆದ ದೂರದೃಷ್ಟಿ ಇಟ್ಟುಕೊಂಡು ರಾಜಕೀಯ ಕ್ಷೇತ್ರಕ್ಕೆ ಬಂದಿದ್ದ ಅನೇಕ ವಿದ್ವಾಂಸರನ್ನು ರಾಜಕೀಯ ಕ್ಷೇತ್ರ ಉಳಿಸಿಕೊಳ್ಳಲಿಲ್ಲ. ಇನ್ನು ತಮ್ಮದಲ್ಲದ ಕ್ಷೇತ್ರದಲ್ಲಿ ಈ ಹೃದಯ ತಜ್ಞರಿಗೆ ಉಳಿಗಾಲವಿದೆಯೇ? ಮಂಜುನಾಥ್ ಅವರು ತಮ್ಮ ಜೀವಿತದ ಉಳಿದ ಅವಧಿಯನ್ನು, ನಲುಗಿರುವ ಸಾವಿರಾರು ಹೃದಯಗಳ ಜೊತೆಯಲ್ಲಿಯೇ ಕಳೆಯುವಂತೆ ಆಗಲಿ. ಹೃದಯ ಚಿಕಿತ್ಸೆಗೆ ಮಾರ್ಗದರ್ಶನ ನೀಡುವ ಕೆಲಸ ಮಾಡಲಿ. ಜನಸಾಮಾನ್ಯರು ಸದಾ ಅವರನ್ನು ವೈದ್ಯಕೀಯ ಕ್ಷೇತ್ರದಲ್ಲಿ ಕಾಣಲು ಇಷ್ಟಪಡುತ್ತಾರೆ.

ತಾ.ಸಿ.ತಿಮ್ಮಯ್ಯ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT