ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ವೋಟಿಗಾಗಿ ಮೇಕೆದಾಟು!

Published 26 ಮಾರ್ಚ್ 2024, 22:18 IST
Last Updated 26 ಮಾರ್ಚ್ 2024, 22:18 IST
ಅಕ್ಷರ ಗಾತ್ರ

ವೋಟಿಗಾಗಿ ಮೇಕೆದಾಟು!  

ಮೇಕೆದಾಟು ಯೋಜನೆಯನ್ನು ಎಲ್ಲ ಪಕ್ಷಗಳೂ ಬೆಂಬಲಿಸಬೇಕೆಂದು ಎಚ್‌.ಡಿ.ದೇವೇಗೌಡರು ಸಲಹೆ ನೀಡಿ ಎಲ್ಲ ನಾಯಕರ ಮೂಗಿಗೂ ತುಪ್ಪ ಸವರಿದ್ದಾರೆ. ಇದಕ್ಕೆ ತದ್ವಿರುದ್ಧವಾಗಿ, ಈ ದುಂದುವೆಚ್ಚದ, ವಿಧ್ವಂಸಕಾರಿ ಕನಸಿಗೆ ಯಾವ ಪಕ್ಷವೂ ನೀರೆರೆಯಬಾರದೆಂದು ವಿಜ್ಞಾನಿಗಳು, ಪರಿಸರವಾದಿಗಳು ಹಾಗೂ ವಿಚಾರವಂತರೆಲ್ಲ ಹೇಳುತ್ತಲೇ ಬಂದಿದ್ದಾರೆ. ಈ ಯೋಜನೆಗೆ ಸುರಿಯುವ ಹಣದ ಅರ್ಧ ಭಾಗವನ್ನು ಬೆಂಗಳೂರಿನ ಕೆರೆಗಳ ಹೂಳೆತ್ತಲು, ಇಲ್ಲಿನ ಮಳೆನೀರನ್ನು ಸಂಗ್ರಹಿಸಲು ಮತ್ತು ಕೊಳೆನೀರನ್ನು ಮೂರನೆಯ ಹಂತದಲ್ಲಿ ಶುದ್ಧೀಕರಿಸಲು ಬಳಸಿದರೆ, ಹೆಚ್ಚುವರಿ 31 ಟಿಎಂಸಿ ಅಡಿ (ಮೇಕೆದಾಟು ಯೋಜನೆಯಿಂದ ಸಿಗುವ ನೀರಿನ ಇಮ್ಮಡಿ) ನೀರು ಸಿಗುತ್ತದೆಂಬ ಲೆಕ್ಕಾಚಾರವನ್ನು
ಮುಂದಿಟ್ಟಿದ್ದಾರೆ. ಹಾಗೆ ಮಾಡಿದರೆ ನಗರದ ಗಾಳಿಯೂ ಮನಸ್ಸೂ ತಂಪಾಗಿರುತ್ತವೆ; ನಮ್ಮ ದೇಶದ ಮೊದಲ ‘ಸ್ಪಾಂಜ್‌ ಸಿಟಿ’ ಎಂದು ಬೆಂಗಳೂರು ಖ್ಯಾತಿ ಪಡೆಯುತ್ತದೆ. ರಾಮನಗರ, ಕನಕಪುರಕ್ಕೆ ನೀರು ಬೇಕೆಂದರೆ ಅಲ್ಲೂ ಬೆಂಗಳೂರು ಮಾದರಿಯನ್ನು ಅನ್ವಯಿಸಲು ಸಾಧ್ಯವಾಗುತ್ತದೆ. ನಮ್ಮದು ವಿದ್ಯಾವಂತರು, ವಿಜ್ಞಾನಿಗಳ ನಗರವೆಂದು ಸಾರಿದಂತಾಗುತ್ತದೆ.

ಇಷ್ಟೆತ್ತರದ ಭೂಮಿಯಲ್ಲಿ ಇಷ್ಟು ದೊಡ್ಡ ಪ್ರಮಾಣದ ನೀರು ಕೊಳಕಿನ ಧಾರೆಯಾಗಿ, ಆವಿಯಾಗಿ ಹೋಗುತ್ತಿದೆ. ಅದನ್ನು ಮರೆತು, ಮೇಕೆದಾಟುವಿನಲ್ಲಿ ದಶಕಗಳ ಕಾಲ ಡೈನಮೈಟ್‌ ಸಿಡಿಸುತ್ತ, ಅರಣ್ಯ ನಾಶ ಮಾಡುತ್ತ, ಗಡಿಯಂಚಿನಲ್ಲಿ ತಗಾದೆ ಎಬ್ಬಿಸಿ ಮತದಾರರಲ್ಲಿ ಕಿಚ್ಚೆಬ್ಬಿಸುತ್ತ ಹೋಗುವ ರಾಜಕೀಯ ಬೇಕೊ ಅಥವಾ ನಾಳಿನ ಪೀಳಿಗೆ ಹೆಮ್ಮೆಪಡುವಂತಹ ವಿವೇಕದ ನಡೆ ಬೇಕೊ? 

–ನಾಗೇಶ ಹೆಗಡೆ, ಕೆಂಗೇರಿ

ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ

ಮುಖ್ಯ ಶಿಕ್ಷಕರ ನಿರ್ಲಕ್ಷ್ಯದಿಂದ ತನಗೆ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರವೇಶ ಪತ್ರ ಬಂದಿಲ್ಲ ಎಂದು ಆರೋಪಿಸಿ, ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಹರನಗಿರಿ ಸರ್ಕಾರಿ ಪ್ರೌಢಶಾಲೆಯ ಅಭಿಷೇಕ್‌ ಜರಮಲ್ಲ ಎಂಬ ವಿದ್ಯಾರ್ಥಿ ತನ್ನ ಪೋಷಕರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿರುವುದಾಗಿ ವರದಿಯಾಗಿದೆ (ಪ್ರ.ವಾ., ಮಾರ್ಚ್‌ 26). ಇಂತಹ ಆರೋಪದಲ್ಲಿ ವಾಸ್ತವ ಇದ್ದರೆ ಇದು ನಿಜಕ್ಕೂ ಅಮಾನವೀಯ ಪ್ರಕರಣವೇ ಆಗುತ್ತದೆ. ಈ ಬಗೆಯ ಬೆಳವಣಿಗೆಗಳು ಸಂಬಂಧಪಟ್ಟ ವಿದ್ಯಾರ್ಥಿ ಮಾತ್ರವಲ್ಲದೆ ಇತರ ವಿದ್ಯಾರ್ಥಿಗಳ ಮನಸ್ಸಿನ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಇಂತಹ ಸಂಗತಿಗಳು ಘಟಿಸದಂತೆ ನೋಡಿಕೊಳ್ಳಬೇಕಾದುದು ಶಿಕ್ಷಣ ಇಲಾಖೆಯ ಕರ್ತವ್ಯ.

–ಸಚಿನ್ ಹೊಳೆಹದ್ದು, ಶೃಂಗೇರಿ

ಜಲಮಾರ್ಷಲ್‌ ನೇಮಿಸಿ

ನಗರ ಮತ್ತು ಪಟ್ಟಣಗಳಲ್ಲಿ ಕೆಲವರು ಬೆಳಿಗ್ಗೆ ಮನೆ ಮುಂದೆ ರಂಗೋಲಿ ಹಾಕಲು ನೀರು ಚಿಮುಕಿಸುವ ಬದಲು ನೀರು ಸುರಿದು ರಸ್ತೆ ತೊಳೆಯುವ ಅಭ್ಯಾಸ ಹೊಂದಿರುತ್ತಾರೆ. ಇಂತಹವರ ವಿರುದ್ಧ ನಿಗಾ ವಹಿಸಿ ದಂಡ ಹಾಕಲು, ಅಂದರೆ ನೀರಿನ ದುರ್ಬಳಕೆ ತಡೆಯಲು ಸ್ಥಳೀಯ ಸಂಸ್ಥೆಗಳು ಜಲಮಾರ್ಷಲ್‌ಗಳನ್ನು ನೇಮಿಸಬೇಕು. ಸ್ವಯಂಸೇವಕರನ್ನು ಈ ಕಾರ್ಯಕ್ಕೆ ನಿಯೋಜಿಸಿದರೆ ಆರ್ಥಿಕ ಹೊರೆಯೂ ಬೀಳುವುದಿಲ್ಲ. 

– ಎಸ್.ರವಿ, ಮೈಸೂರು

ಭ್ರಷ್ಟರಿಗೆ ಪಾಠ ಕಲಿಸಿದ ಇತಿಹಾಸ ಇದೆ

‘ಚುನಾವಣಾ ರಾಜಕಾರಣದಲ್ಲಿ ಮಕ್ಕಳಾಟ’ ಎಂಬ ಲೇಖನದಲ್ಲಿ (ಪ್ರ.ವಾ., ಮಾರ್ಚ್ 26) ಚಂದ್ರಕಾಂತ ವಡ್ಡು ಅವರು ನಮ್ಮ ಪ್ರಸ್ತುತ ರಾಜಕೀಯದಲ್ಲಿ ಕಾಣಿಸಿಕೊಂಡ ಕೆಲವು ಒಳಸುಳಿಗಳತ್ತ ಗಮನ ಸೆಳೆದಿರುವುದು ಸರಿ. ಆದರೆ ಕೊನೆಯಲ್ಲಿ ಅವರು ‘ಉತ್ತರವಿಲ್ಲದೇ ಉಳಿಯುವ ಪ್ರಶ್ನೆ: ಯಾರು, ಎಲ್ಲಿಂದ ಸರಿಪಡಿಸುವುದು?’ ಎಂದಿದ್ದಾರೆ. ರಾಜಕೀಯ ಭ್ರಷ್ಟಾಚಾರವನ್ನು ಮತದಾರರೇ ಮತದಾನದ ಮೂಲಕವೇ ಸರಿಪಡಿಸಬೇಕಿದೆ. ಅದಕ್ಕೆ ಬೇರೆ ದಾರಿಯೇ ಇಲ್ಲ. ಆದರೆ ಇಂದು ಮತದಾರರನ್ನು ಸಹ ಭ್ರಷ್ಟರನ್ನಾಗಿಸಿರುವುದು ವಾಸ್ತವ ಸತ್ಯವಾಗಿದೆ. ಆದರೂ ನಾವು ಮತದಾರರನ್ನು ನಂಬಲೇಬೇಕಿದೆ. ಏಕೆಂದರೆ ಮತದಾರರು ಭ್ರಷ್ಟ ರಾಜಕಾರಣಿಗಳಿಗೆ ಪಾಠ ಕಲಿಸಿದ ಅನೇಕ ಉದಾಹರಣೆಗಳು ನಮ್ಮಲ್ಲಿವೆ.

ಆಡಳಿತ ನಡೆಸಿದ ಪಕ್ಷವನ್ನು ಐದು ಅಥವಾ ಹತ್ತು ವರ್ಷಕ್ಕೊಮ್ಮೆ ಬದಲಿಸುವ ಆಕಾಂಕ್ಷೆ ಸಾಮಾನ್ಯವಾಗಿ ಮತದಾರರಲ್ಲಿ ಇದ್ದೇ ಇರುತ್ತದೆ. ಇದಕ್ಕೆ ಬಹಳ ಒಳ್ಳೆಯ ಉದಾಹರಣೆ ಎಂದರೆ, ಎಂತಹ ಪ್ರತಿಕೂಲ ಸಂದರ್ಭದಲ್ಲೂ 1977ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ನಮ್ಮ ದೇಶದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಿದರು. ಹಾಗೆ ನೋಡಿದರೆ, ಆಗ ದೇಶದ ಮತದಾರರಲ್ಲಿ ರಾಜಕೀಯ ಪ್ರಜ್ಞೆ ಅಷ್ಟೊಂದು ಚುರುಕಾಗಿರಲಿಲ್ಲ. ಇಂಟರ್ನೆಟ್‌ ಬಳಕೆ ಈಗಿನಂತೆ ಇರಲಿಲ್ಲ. ಮೊಬೈಲ್ ಫೋನ್‌ ಸಹ ಇರಲಿಲ್ಲ. ಸಾಕ್ಷರತೆಯ ಪ್ರಮಾಣವೂ ಈಗಿನಷ್ಟು ಇರಲಿಲ್ಲ. ಈ ಎಲ್ಲದರ ನಡುವೆಯೂ ಅಂದಿನ ಮತದಾರರು ಕಾಂಗ್ರೆಸ್ ಪಕ್ಷವನ್ನು ಮತದಾನದ ಮೂಲಕವೇ ಸೋಲಿಸಿ ಪಾಠ ಕಲಿಸಿದರು. ಆನಂತರ ಜನತಾ ಪಕ್ಷದ ಒಳಜಗಳವನ್ನೂ ಸಹಿಸದ ಮತದಾರರು ಜನತಾ ಪಕ್ಷಕ್ಕೂ ಪಾಠ ಕಲಿಸಿ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದ್ದೂ ಉಂಟು. ಅಂದರೆ, ನಮ್ಮ ದೇಶದ ಮತದಾರರಿಗೆ ಭ್ರಷ್ಟಾಚಾರರಹಿತ, ಕಿತ್ತಾಟ
ವಿಲ್ಲದ, ರೈತಪರ, ಪರಿಸರಪರ ಸರ್ಕಾರ ಬೇಕೆಂಬ ಆಸೆ ಪ್ರಬಲವಾಗಿದೆ. ಮತದಾರರು ಇಂದು ಜಾಗೃತರಾಗಿದ್ದಾರೆ. ಹೀಗಾಗಿ, ಬರಲಿರುವ ಚುನಾವಣೆಯಲ್ಲಿ ಮತದಾರರು ಭ್ರಷ್ಟ ರಾಜಕಾರಣಿಗಳಿಗೆ ಪಾಠ ಕಲಿಸಲಿದ್ದಾರೆ ಎಂಬ ನಿರೀಕ್ಷೆ ಇಟ್ಟುಕೊಳ್ಳಬಹುದು. 

–ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ಪುರದ ಪುಣ್ಯಂ…

ಕೊಟ್ಟಮಾತಿನಂತೆ ಎಲ್ಲವನ್ನೂ ಬಿಟ್ಟು ಅಯೋಧ್ಯಾಪುರದಿಂದ ಕಾಡಿನತ್ತ ಹೊರಟ ಹರಿಶ್ಚಂದ್ರನನ್ನು, ‘ಪುರದ ಪುಣ್ಯಂ ಪುರುಷ ರೂಪಿಂದ ಪೋಗುತಿದೆ…’ ಎಂದು ಬಣ್ಣಿಸುವ ಮಹಾಕವಿ ರಾಘವಾಂಕ, ಈ ಲೋಕದ ಚುನಾವಣಾ ಕಣದ ಅಭ್ಯರ್ಥಿಗಳನ್ನು ಕಂಡು ಹೀಗನ್ನುತ್ತಿದ್ದನೇನೊ: ಕೋಟಿ ಕೋಟಿ ಕುಳಗಳ್... ಬೀದಿಬೀದಿ ಅಲೆಯುತಿರ್ಪರ್, ತಟ್ಟುವರ್ ಮನೆಮನಗಳ ಕದವ ಗೆಲುವಿಗಾಗಿ ಹಂಬಲಿಸುತ್ತ, ಹಗಲಿರುಳ ಪರಿವಿಲ್ಲದೆ ಯಾಚಿಸುತಿಹರ್ ಮತದಾರರ ಆ ಅಮೂಲ್ಯ ಮತವ...!   

–ಮ.ಗು.ಬಸವಣ್ಣ, ನಂಜನಗೂಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT