ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024: RCB vs GT– ಗಿಲ್ ಬಳಗಕ್ಕೆ ‘ವಿಲ್’ ಸವಾಲು ಇಂದು

ರಾಯಲ್ ಚಾಲೆಂಜರ್ಸ್‌ ಬೆಂಗಳೂರು–ಗುಜರಾತ್ ಟೈಟನ್ಸ್‌ ಮುಖಾಮುಖಿ ಇಂದು
Published 4 ಮೇ 2024, 0:28 IST
Last Updated 4 ಮೇ 2024, 2:51 IST
ಅಕ್ಷರ ಗಾತ್ರ

ಬೆಂಗಳೂರು: ಧಗಧಗಿಸುವ ಬಿಸಿಲಿನಲ್ಲಿ ಬೆಂದು ಬಸವಳಿದಿರುವ ಉದ್ಯಾನನಗರಿಯು ಕಳೆದೆರಡು ದಿನಗಳಿಂದ ಮಳೆಯ  ಪುಳಕ ಅನುಭವಿಸುತ್ತಿದೆ.  

ಇದೇ ಹೊತ್ತಿನಲ್ಲಿ ಸ್ಥಳೀಯ ಕ್ರಿಕೆಟ್ ಅಭಿಮಾನಿಗಳ ಮನತಣಿಸುವ ಭರವಸೆಯೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತವರಿನಂಗಳದಲ್ಲಿ ಕಣಕ್ಕಿಳಿಯಲು ಸಿದ್ಧವಾಗಿದೆ. ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಫಫ್ ಡುಪ್ಲೆಸಿ ಬಳಗವು ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದೆ. 

ಕಳೆದೆರಡು ಪಂದ್ಯಗಳಲ್ಲಿ ಸತತ ಜಯ ಸಾಧಿಸಿರುವ ರಾಯಲ್ ಚಾಲೆಂಜರ್ಸ್ ತಂಡವು ಬೆಂಗಳೂರಿಗರಲ್ಲಿ ಹೊಸ ನಿರೀಕ್ಷೆ  ಮೂಡಿಸಿದೆ. ಬೌಲರ್‌ಗಳ ಸತತ ವೈಫಲ್ಯದ ನಡುವೆ ತಂಡದ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್ ಅವರು ಸತತವಾಗಿ ಮಿಂಚುತ್ತಿದ್ದಾರೆ. ರಜತ್ ಪಾಟೀದಾರ್ ಕೂಡ ಲಯಕ್ಕೆ ಮರಳಿದ್ದಾರೆ. ಆದರೆ ಕಳೆದ ಪಂದ್ಯದಲ್ಲಿ ಇಂಗ್ಲೆಂಡ್‌ ಮೂಲದ ವಿಲ್ ಜ್ಯಾಕ್ಸ್‌ ಬಾರಿಸಿದ ಸಿಕ್ಸರ್‌ಗಳಿಗೆ ಆರ್‌ಸಿಬಿ ಅಭಿಮಾನಿಗಳು ಮೈಕೊಡವಿಕೊಂಡು ಎದ್ದಿದ್ಧಾರೆ.  ‘ವಾರಾಂತ್ಯ ದಿನ’ದ ಪಂದ್ಯದ ಟಿಕೆಟು, ಪಾಸ್‌ಗಳಿಗಾಗಿ ಶುಕ್ರವಾರ ಸಂಜೆಯ ಮಳೆಯಲ್ಲಿಯೂ ಜನರು ಎಡತಾಕುತ್ತಿದ್ದಾರೆ.

ಈ ಸಲದ ಟೂರ್ನಿಯು ಆರ್‌ಸಿಬಿ ಕೂಡ ಆಡಿರುವ 10 ಪಂದ್ಯಗಳಲ್ಲಿ ಸೋಲಿನ ಕಹಿಯನ್ನೇ ಹೆಚ್ಚು ಉಂಡಿದೆ. ಅದರಲ್ಲಿ ತವರಿನಂಗಳದಲ್ಲಿ ಆಡಿದ್ದ ನಾಲ್ಕು ಪಂದ್ಯಗಳಲ್ಲಿ ಗೆದ್ದಿದ್ದು ಒಂದು ಮಾತ್ರ. ಮಾರ್ಚ್‌ 22ರಂದು ಚೆನ್ನೈನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಸೋತಿತ್ತು.  ಬೆಂಗಳೂರಿನಲ್ಲಿ  ನಡೆದ ಎರಡನೇ ಪಂದ್ಯದಲ್ಲಿ (ಮಾ. 25) ಪಂಜಾಬ್ ಕಿಂಗ್ಸ್ ಎದುರು ಜಯಿಸಿತ್ತು. ಆದರೆ ಅದರ ನಂತರದ ಆರು ಪಂದ್ಯಗಳಲ್ಲಿ ಸತತವಾಗಿ ಪರಾಭವಗೊಂಡಿತ್ತು. 

ಹೋದ ತಿಂಗಳು 15ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿದ್ದ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಎದುರು ಆರ್‌ಸಿಬಿ ಬೌಲರ್‌ಗಳು ಸಿಕ್ಕಾಪಟ್ಟೆ ದಂಡನೆಗೆ ಒಳಗಾಗಿದ್ದರು. ಐಪಿಎಲ್‌ನ ಗರಿಷ್ಠ ಮೊತ್ತವನ್ನು (287 ರನ್) ಸನ್‌ರೈಸರ್ಸ್ ದಾಖಲಿಸಿತ್ತು. ಇದಾಗಿ ಹತ್ತು ದಿನಗಳ ನಂತರ ಸನ್‌ರೈಸರ್ಸ್‌ ತಂಡವನ್ನು ಅವರದ್ದೇ ಅಂಗಳದಲ್ಲಿ ಹಣಿದಿದ್ದ ಬೆಂಗಳೂರು ತಂಡವು ಜಯದ ಲಯಕ್ಕೆ ಮರಳಿತ್ತು. ಹೋದ ಪಂದ್ಯದಲ್ಲಿ ಅಹಮದಾಬಾದಿನಲ್ಲಿ  ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್‌ ಸೋತಿತ್ತು. ಇದೀಗ ನಾಲ್ಕು ದಿನಗಳ ನಂತರ ಮತ್ತೊಮ್ಮೆ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಪ್ರವಾಸಿ ಬಳಗದ ಬೌಲಿಂಗ್ ವಿಭಾಗವು ಸಂದೀಪ್ ವಾರಿಯರ್, ರಶೀದ್ ಖಾನ್ ಹಾಗೂ ಮೋಹಿತ್ ಶರ್ಮಾ ಅವರ ಮೇಲೆ ಹೆಚ್ಚು ಅವಲಂಬಿತವಾಗಿದೆ. ಶಾರೂಕ್ ಖಾನ್ ಮತ್ತು ಸಾಯಿ ಸುದರ್ಶನ್ ಉತ್ತಮ ಲಯದಲ್ಲಿರುವುದರಿಂದ ಬ್ಯಾಟಿಂಗ್ ಬಲ ಹೆಚ್ಚಿದೆ.

ಆದರೆ ಎರಡೂ ತಂಡಗಳಿಗೆ ಪ್ಲೇ ಆಫ್‌ ಹಾದಿ ಬಹುದೂರದಲ್ಲಿದೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಒಂದಷ್ಟು ಮೇಲಕ್ಕೇರುವ ಅವಕಾಶವಂತೂ ಡುಪ್ಲೆಸಿ ಬಳಗಕ್ಕೆ ಇದೆ. ಅದಕ್ಕಾಗಿಯಾದರೂ ಎಲ್ಲ ವಿಭಾಗಗಳಲ್ಲಿ ದಿಟ್ಟ ಹೋರಾಟ ಮಾಡಲೇಬೇಕಾದ ಅನಿವಾರ್ಯತೆ ಇದೆ. ಬೆಂಚ್‌ನಲ್ಲಿರುವ ಯುವ ಆಟಗಾರರಿಗೆ ಅವಕಾಶ ಕೊಟ್ಟು ನೋಡುವತ್ತಲೂ ತಂಡದ ವ್ಯವಸ್ಥಾಪಕ ಮಂಡಳಿ ಚಿತ್ತ ಹರಿಸಬೇಕಿದೆ. ಟೂರ್ನಿಯ ಮೊದಲ ಐದು ಪಂದ್ಯಗಳಲ್ಲಿ ಬೆಂಚ್ ಕಾದಿದ್ದ ವಿಲ್ ಜ್ಯಾಕ್ಸ್‌ ಅವರಂತೆ ಮಿಂಚುವ ಪ್ರತಿಭೆಗಳು ಇರಬಹುದಲ್ಲವೇ?

ಗುಜರಾತ್ ಟೈಟನ್ಸ್‌ ತಂಡದ ನಾಯಕ ನಾಯಕ ಶುಭಮನ್ ಗಿಲ್  ತಾಲೀಮು ನಡೆಸಿದರು

ಗುಜರಾತ್ ಟೈಟನ್ಸ್‌ ತಂಡದ ನಾಯಕ ನಾಯಕ ಶುಭಮನ್ ಗಿಲ್  ತಾಲೀಮು ನಡೆಸಿದರು

–ಪ್ರಜಾವಾಣಿ ಚಿತ್ರ/ರಂಜು ಪಿ

ಪ್ಲೇ ಆಫ್‌ ಲೆಕ್ಕಾಚಾರ?

ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿರುವ ಆರ್‌ಸಿಬಿಗೆ ಪ್ಲೇಆಫ್‌ ಪ್ರವೇಶದ ಹಾದಿಯು ಕಡುಕಠಿಣವಾಗಿದೆ.  ಅದಕ್ಕಾಗಿ ಲೆಕ್ಕಾಚಾರಗಳು ನಡೆಯುತ್ತಿವೆ.  ತನ್ನ ಪಾಲಿಗೆ ಉಳಿದಿರುವ ಎಲ್ಲ ನಾಲ್ಕು ಪಂದ್ಯಗಳಲ್ಲಿ ದೊಡ್ಡ ಅಂತರದ ರನ್‌ರೇಟ್‌ನೊಂದಿಗೆ ಗೆಲ್ಲಬೇಕು. ಅದರಿಂದ ಒಟ್ಟು 14 ಅಂಕಗಳು ತಂಡದ ಖಾತೆಯಲ್ಲಿ ಸೇರುತ್ತವೆ. ಅಷ್ಟಾದರೂ  ಪಟ್ಟಿಯಲ್ಲಿ ಮೊದಲ ಐದು ಸ್ಥಾನಗಳಲ್ಲಿರುವ  ತಂಡಗಳು ತಮ್ಮ ಪಾಲಿನ ಪಂದ್ಯಗಳಲ್ಲಿ ಸೋಲಬೇಕು ಎಂಬ ಲೆಕ್ಕಾಚಾರಗಳು ಇವೆ. ಆದರೆ ಅದು ಕೈಗೂಡುವುದು ಅಷ್ಟು ಸುಲಭವಲ್ಲ.  ಪ್ರಸ್ತುತ 10 ಪಂದ್ಯಗಳನ್ನು ಆಡಿರುವ ರಾಜಸ್ಥಾನ ರಾಯಲ್ಸ್ 16 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ತಂಡವು ಬಹುತೇಕ ಪ್ಲೇಆಫ್‌ ಪ್ರವೇಶಿಸಿದೆ.  9 ಪಂದ್ಯಗಳಲ್ಲಿ ಆಡಿರುವ ಕೋಲ್ಕತ್ತ ನೈಟ್ ರೈಡರ್ಸ್‌ ತಲಾ ಹತ್ತು ಪಂದ್ಯ ಆಡಿರುವ ಲಖನೌ ಸೂಪರ್‌ ಜೈಂಟ್ಸ್‌ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳು ತಲಾ 12 ಅಂಕಗಳನ್ನು ಗಳಿಸಿವೆ. ಸಿಎಸ್‌ಕೆ ಮತ್ತು ಡೆಲ್ಲಿ ತಲಾ ಹತ್ತು  ಅಂಕ ಗಳಿಸಿವೆ. ಆದ್ದರಿಂದ ಈ ಎಲ್ಲ ತಂಡಗಳನ್ಣೂ ಹಿಂದಿಕ್ಕಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವುದು ಸುಲಭವಲ್ಲ.  ಅಷ್ಟೇ ಅಲ್ಲ; ಈ ಹಾದಿಯಲ್ಲಿ ಆರ್‌ಸಿಬಿಯು ಒಂದೇ ಒಂದು ಪಂದ್ಯ ಸೋತರೂ ಅಧಿಕೃತವಾಗಿ ನಾಕೌಟ್‌ ರೇಸ್‌ನಿಂದ ಹೊರಬೀಳುತ್ತದೆ.  ಮಳೆ ಸಾಧ್ಯತೆ? ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಸ್ವಲ್ಪ ಹೊತ್ತು ಮಳೆ ಸುರಿದಿದೆ. ಆದರೆ ಹವಾಮಾನ ಮನ್ಸೂಚನೆ ಮೂಲಗಳ ಪ್ರಕಾರ ಶನಿವಾರ ಮಳೆ ಸುರಿಯುವ ಸಾಧ್ಯತೆಗಳು ಕಡಿಮೆ. ಮಧ್ಯಾಹ್ನ ಹೊತ್ತಿನಲ್ಲಿ ಸ್ವಲ್ಪ ಹೊತ್ತು ಬಂದರೂ ಸಂಜೆ ಪಂದ್ಯದ ವೇಳೆ ಮಳೆ ಬರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.  ಪಿಚ್ ಹೇಗಿದೆ? ಈ ಬಾರಿಯ ಐಪಿಎಲ್‌ನಲ್ಲಿ ಇಲ್ಲಿ ನಡೆದ ಎಲ್ಲ ಪಂದ್ಯಗಳಲ್ಲಿಯೂ ಬ್ಯಾಟರ್‌ಗಳು ಹೆಚ್ಚು ಆರ್ಭಟಿಸಿದ್ದಾರೆ. ಆರ್‌ಸಿಬಿ ಮತ್ತು ಸನ್‌ರೈಸರ್ಸ್ ನಡುವಣ ಪಂದ್ಯದಲ್ಲಂತೂ ಒಟ್ಟು 549 ರನ್‌ಗಳು ಹರಿದಿದ್ದವು. ಈ ಪಂದ್ಯದಲ್ಲಿಯೂ ರನ್‌ಗಳ ಹೊಳೆ ಹರಿಯುವ ಸಾಧ್ಯತೆ ಹೆಚ್ಚಿದೆ.

’ಗೋವಾದಲ್ಲಿ ರಿಲ್ಯಾಕ್ಸ್‌ ಆಗಿದ್ದೇವೆ‘

’ಈ ಬಾರಿಯ ವೇಳಾಪಟ್ಟಿಯಲ್ಲಿ ಪಂದ್ಯದಿಂದ ಪಂದ್ಯದ ನಡುವೆ ಹೆಚ್ಚು ದಿನಗಳ ಬಿಡುವು ಲಭಿಸುತ್ತಿದೆ. ಇದು ಒಂದು ರೀತಿಯಲ್ಲಿ ಒಳ್ಳೆಯದಾಗಿದೆ. ತಂಡದಲ್ಲಿ ಪರಸ್ಪರ ಹೊಂದಾಣಿಕೆ ಬೆಳೆಯಲು ಕಾರಣವಾಗಿದೆ. ಗುಜರಾತ್ ತಂಡದ ಎದುರಿನ ಪಂದ್ಯದ ನಂತರ ಎರಡು ದಿನ ಗೋವಾದಲ್ಲಿದ್ದೆವು. ಅಲ್ಲಿ ರಿಲ್ಯಾಕ್ಸ್ ಅಗಿ ಬಂದಿದ್ದೇವೆ. ಕಳೆದ ಎರಡು ದಿನಗಳಿಂದ ಇಲ್ಲಿ (ಬೆಂಗಳೂರು ಅಭ್ಯಾಸದಲ್ಲಿ ತೊಡಗಿಕೊಂಡೆವು‘ ಎಂದು ಆರ್‌ಸಿಬಿ ಆಟಗಾರ ವಿಲ್ ಜ್ಯಾಕ್ಸ್ ಹೇಳಿದರು.  ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಲು ಬಂದು ದೊಡ್ಡ ಹೊಡೆತಗಳನ್ನು ಆಡುವುದು ಸವಾಲಿನ ಕೆಲಸ. ಈ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಾಗ  ಪವರ್‌ ಪ್ಲೇ ಓವರ್‌ಗಳು ಮುಗಿದಿರುತ್ತವೆ. ಇನಿಂಗ್ಸ್‌ಗೆ ಸ್ಥಿರತೆ ಒದಗಿಸುವುದರ ಜೊತೆಗೆ ರನ್‌ ಪೇರಿಸುವುದು ಮುಖ್ಯವಾಗುತ್ತದೆ’ ಎಂದರು.  ಅಹಮದಾಬಾದಿನಲ್ಲಿ ವಿಲ್ ಅವರು ಗುಜರಾತ್ ವಿರುದ್ಧ ಅಬ್ಬರದ ಶತಕ ಗಳಿಸಿದ್ದರು. ಒಟ್ಟು ಹತ್ತು ಸಿಕ್ಸರ್‌ ಸಿಡಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT