ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

RCB vs KKR: ಕೋಲ್ಕತ್ತ ವಿರುದ್ಧ 1ರನ್‌ನಿಂದ ಸೋತ ಆರ್‌ಸಿಬಿ

Published 21 ಏಪ್ರಿಲ್ 2024, 9:36 IST
Last Updated 21 ಏಪ್ರಿಲ್ 2024, 9:36 IST
ಅಕ್ಷರ ಗಾತ್ರ

ಕೋಲ್ಕತ್ತ: ವಿಲ್ ಜ್ಯಾಕ್ಸ್, ರಜತ್ ಪಾಟೀದಾರ್ ಅವರ ಶತಕದ ಜೊತೆಯಾಟ ಹಾಗೂ ಕೊನೆಯ ಓವರ್‌ನಲ್ಲಿ ಕರಣ್ ಶರ್ಮಾ ಬಾರಿಸಿದ ಮೂರು ಸಿಕ್ಸರ್‌ಗಳು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಜಯಕ್ಕೆ ಸಾಕಾಗಲಿಲ್ಲ.

ಪಂದ್ಯದ ಕೊನೆಯ ಎಸೆತದಲ್ಲಿ ನಿರ್ಧಾರವಾದ ಫಲಿತಾಂಶದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವು 1 ರನ್‌ ಅಂತರದ ರೋಚಕ ಜಯಸಾಧಿಸಿತು. ಆ್ಯಂಡ್ರೆ ರಸೆಲ್ (25ಕ್ಕೆ3) ಅವರ ಬೌಲಿಂಗ್ ಕೋಲ್ಕತ್ತ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತು. ಇದರೊಂದಿಗೆ ಆರ್‌ಸಿಬಿ ತಂಡದ ಪ್ಲೇಆಫ್ ಪ್ರವೇಶದ ಹಾದಿ ಬಹುತೇಕ ಮುಚ್ಚಿದಂತಾಯಿತು. ತಂಡಕ್ಕಿದು ಸತತ ಆರನೇ ಮತ್ತು ಒಟ್ಟಾರೆ ಏಳನೇ ಸೋಲು. ಪಂಜಾಬ್ ಕಿಂಗ್ಸ್‌ (ಮಾ.25) ಎದುರು ಮಾತ್ರ ಫಫ್ ಬಳಗ ಜಯಿಸಿತ್ತು.

ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಭಾನುವಾರ ಮಧ್ಯಾಹ್ನ ಆರಂಭವಾದ ಪಂದ್ಯದಲ್ಲಿ 223 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಬೆಂಗಳೂರು ತಂಡದ ಇನಿಂಗ್ಸ್‌ ಕೆಲವು ನಾಟಕೀಯ ತಿರುವುಗಳಿಂದ ಕೂಡಿತ್ತು. ಕೊನೆಯ ಓವರ್‌ನಲ್ಲಿ ತಂಡದ ಜಯಕ್ಕೆ 21 ರನ್‌ಗಳ ಅಗತ್ಯವಿತ್ತು. ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಹಾಕಿದ ಈ ಓವರ್‌ನಲ್ಲಿ ‘ಬಾಲಂಗೋಚಿ’ಗಳಾದ ಕರಣ್ ಶರ್ಮಾ ಮತ್ತು ಮೊಹಮ್ಮದ್ ಸಿರಾಜ್ ಕ್ರೀಸ್‌ನಲ್ಲಿದ್ದರು. ಕರಣ್ (20; 7ಎ) ಮೂರು ಸಿಕ್ಸರ್‌ಗಳನ್ನು ಹೊಡೆದು, ತಂಡವನ್ನು ಗೆಲುವಿನ ಸನಿಹ ತಂದು ನಿಲ್ಲಿಸಿದರು. ಆದರೆ ಓವರ್‌ನ 5ನೇ ಎಸೆತದಲ್ಲಿ ಅದೃಷ್ಟ ಕೈಕೊಟ್ಟಿತು. ಎಡಗೈ ಬ್ಯಾಟರ್ ಕರಣ್ ನೇರ ಹೊಡೆತ ಆಡಿದರು. ಬೌಲರ್ ಸ್ಟಾರ್ಕ್ ಚುರುಕಾಗಿ ಬಾಗಿ ಕೆಳಮಟ್ಟದ ಕ್ಯಾಚ್ ಪಡೆದರು. ಕೊನೆಯ ಎಸೆತದಲ್ಲಿ ಜಯಕ್ಕೆ ಮೂರು ರನ್‌ ಅಗತ್ಯವಿದ್ದವು. ಎರಡು ರನ್ ಗಳಿಸಿದ್ದರೆ ಟೈ ಆಗುತ್ತಿತ್ತು. ಆದರೆ ಎರಡನೇ ರನ್ ಗಳಿಸುವ ಪ್ರಯತ್ನದಲ್ಲಿ ಲಾಕಿ ಫರ್ಗ್ಯುಸನ್ ರನ್‌ಔಟ್ ಆದರು.

12ನೇ ಓವರ್‌ನಲ್ಲಿ ತಿರುವು

ಆರ್‌ಸಿಬಿಗೆ 12ನೇ ಓವರ್‌ನವರೆಗೂ ಗೆಲುವಿನತ್ತ ಸಾಗುವ ಉತ್ತಮ ಅವಕಾಶವಿತ್ತು. ಇದಕ್ಕೆ ಕಾರಣರಾಗಿದ್ದು ವಿಲ್ ಜ್ಯಾಕ್ಸ್‌ (55; 32ಎ) ಮತ್ತು ರಜತ್ ಪಾಟೀದಾರ್ (52; 23ಎ) ಅವರ ಶತಕದ ಜೊತೆಯಾಟ. ತಂಡವು 3 ಓವರ್‌ಗಳಲ್ಲಿ 35 ರನ್‌ ಸೇರುವಷ್ಟರಲ್ಲಿ ವಿರಾಟ್ ಕೊಹ್ಲಿ ಮತ್ತು ಫಫ್ ಡುಪ್ಲೆಸಿ ನಿರ್ಗಮಿಸಿದರು. ಆಗ ಜೊತೆಗೂಡಿದ ವಿಲ್ ಮತ್ತು ರಜತ್ ಮೂರನೇ ವಿಕೆಟ್ ಜೊತೆಯಾಟದಲ್ಲಿ 102 ರನ್ ಸೇರಿಸಿದರು. ವಿರಾಟ್ ಮತ್ತು ಫಫ್ ಅವರ ವೈಫಲ್ಯವನ್ನು ಮರೆಸಿದರು.

ಆದರೆ 12ನೇ ಓವರ್‌ನಲ್ಲಿ ಮಧ್ಯಮವೇಗಿ ರಸೆಲ್ ಅವರು ಇವರಿಬ್ಬರ ವಿಕೆಟ್ ಕಬಳಿಸುವ ಮೂಲಕ ಮತ್ತೆ ಜಯದ ಅವಕಾಶವನ್ನು ತಮ್ಮ ತಂಡದತ್ತ ಎಳೆದೊಯ್ದರು. ಇಲ್ಲಿಂದ ಆರಂಭವಾದ ಹಗ್ಗಜಗ್ಗಾಟದಲ್ಲಿ ಬೆಂಗಳೂರು ತಂಡದ ಸುಯಶ್ ಪ್ರಭುದೇಸಾಯಿ (24 ರನ್) ಮತ್ತು ಕಾರ್ತಿಕ್ (25; 18ಎ) ಅವರಿಬ್ಬರೂ ಮಾಡಿದ ಹೋರಾಟ ಫಲ ನೀಡಲಿಲ್ಲ. ಕಾರ್ತಿಕ್ ವಿಕೆಟ್ ಕೂಡ ರಸೆಲ್ ಪಾಲಾಯಿತು. 19ನೇ ಓವರ್‌ನಲ್ಲಿ ದಿನೇಶ್ ಕಾರ್ತಿಕ್ ಅವರೂ ಹೆಚ್ಚು ಅಬ್ಬರಿಸದಂತೆ ತಡೆಯೊಡ್ಡಿದ್ದರು. ಗ್ರೀನ್ ಮತ್ತು ಲೊಮ್ರೊರ್ ವಿಕೆಟ್‌ಗಳನ್ನು ಸುನಿಲ್ ನಾರಾಯಣ ತಮ್ಮದಾಗಿಸಿಕೊಂಡರು.

ಸಾಲ್ಟ್, ಅಯ್ಯರ್ ಮಿಂಚು:

ಟಾಸ್ ಗೆದ್ದ ಬೆಂಗಳೂರು ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಫಿಲ್ ಸಾಲ್ಟ್ (48; 14ಎ) ಮತ್ತು ನಾಯಕ ಶ್ರೇಯಸ್ ಅಯ್ಯರ್ (50; 36ಎ) ಅವರ ಬಿರುಸಿನ ಬ್ಯಾಟಿಂಗ್‌ನಿಂದ ಆತಿಥೇಯ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 222 ರನ್ ಗಳಿಸಿತು. ಬೆಂಗಳೂರು ಬೌಲರ್‌ಗಳು ಇನಿಂಗ್ಸ್‌ನ ಆರಂಭದಲ್ಲಿ ಉತ್ತಮವಾಗಿ ಆಡಿದರು. ಅದರಿಂದಾಗಿ ಕೋಲ್ಕತ್ತ ತಂಡವು 13 ಓವರ್‌ಗಳಲ್ಲಿ 137 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಆದರೆ ನಂತರದ ಏಳು ಓವರ್‌ಗಳಲ್ಲಿ ಬೌಲರ್‌ಗಳು 87 ರನ್‌ಗಳನ್ನು ಬಿಟ್ಟುಕೊಟ್ಟರು. ರಿಂಕು ಸಿಂಗ್ (24; 16ಎ), ರಸೆಲ್ (ಔಟಾಗದೆ 27; 20ಎ) ಮತ್ತು ರಮಣದೀಪ್ ಸಿಂಗ್ (ಔಟಾಗದೆ 24; 9ಎ) ಮಿಂಚಿದರು.

ವಿರಾಟ್ ಅಸಮಾಧಾನ

ಆರ್‌ಸಿಬಿ ತಂಡದ ಆರಂಭಿಕ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಅಂಪೈರ್ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. 7 ಎಸೆತಗಳಲ್ಲಿ 18 ರನ್‌ ಗಳಿಸಿ ಇನಿಂಗ್ಸ್‌ಗೆ ಉತ್ತಮ ಆರಂಭ ನೀಡಿದ್ದ ವಿರಾಟ್ ಮೂರನೇ ಓವರ್‌ನಲ್ಲಿ ಹರ್ಷಿತ್ ರಾಣಾ ಎಸೆತದಲ್ಲಿ ಬೌಲರ್‌ಗೇ ಕ್ಯಾಚ್‌ ಇತ್ತರು. ಆದರೆ ಆ ಎಸೆತವು ಸ್ಲೋವರ್‌ ಫುಲ್‌ಟಾಸ್ ಇತ್ತು. ಬಹುತೇಕ ಬ್ಯಾಟರ್ ಸೊಂಟಕ್ಕಿಂತ ಎತ್ತರದಲ್ಲಿದ್ದಂತೆ ಕಂಡಿತ್ತು. ಅದು ನೋಬಾಲ್ ಆಗಬಹುದೆಂಬ ಅಂದಾಜಿನಲ್ಲಿ ವಿರಾಟ್ ಆಡಿದರು. ಬ್ಯಾಟ್ ಅಂಚಿಗೆ ಬಡಿದು ಮೇಲೆದ್ದ ಚೆಂಡನ್ನು ರಾಣಾ ಕ್ಯಾಚ್ ಮಾಡಿದರು. ಅಂಪೈರ್ ಔಟ್ ನೀಡಿದರು.

ಇನ್ನೊಂದು ಬದಿಯಲ್ಲಿದ್ದ ಫಫ್ ಮತ್ತು ವಿರಾಟ್ ಅವರು ಡಿಆರ್‌ಎಸ್ ಮೊರೆ ಹೋದರು. ಮೂರನೇ ಅಂಪೈರ್ ಮೈಕೆಲ್ ಗಾಫ್‌ ಕೂಡ ಅದು ನೋಬಾಲ್ ಅಲ್ಲ ವಿರಾಟ್ ಔಟ್ ಎಂದು ನಿರ್ಣಯ ನೀಡಿದರು. ಇದರಿಂದ ಕುಪಿತಗೊಂಡ ವಿರಾಟ್ ಫೀಲ್ಡ್‌ ಅಂಪೈರ್‌ಗಳ ಮುಂದೆ ಅಸಮಧಾನ ವ್ಯಕ್ತಪಡಿಸಿದರು. ಡಗ್‌ಔಟ್‌ನಲ್ಲಿ ಯೂ ಅವರು ಬೇಸರದಿಂದ ಬ್ಯಾಟಿನಿಂದ ನೆಲಕ್ಕೆ ಹೊಡೆದರು.

ಹಾಕ್‌ ಕೀ ಟ್ರ್ಯಾಕಿಂಗ್ ತಂತ್ರಜ್ಞಾನದಲ್ಲಿ ಚೆಂಡು ಬ್ಯಾಟ್‌ಗೆ ತಗಲುವಾಗ ಇರುವ ಎತ್ತರವನ್ನಷ್ಟೇ ಅಳತೆಗೆ ಪರಿಗಣಿಸಲಾಗುತ್ತದೆ. ರಾಣಾ ಹಾಕಿದ ಎಸೆತವು ಕ್ರೀಸ್‌ನಿಂದ ಮುಂದಿದ್ದ ವಿರಾಟ್ ಅವರ ನಡುಮಟ್ಟಕ್ಕಿಂತ ಕೆಳಗೆ ಡಿಪ್ ಆಗಿತ್ತು. ‘ನಾನು ಮತ್ತು ವಿರಾಟ್ ಈ ಎಸೆತವು ಸೊಂಟಕ್ಕಿಂತ ಮೇಲೆ ಇದೆ ಎಂದು ಅಂದುಕೊಂಡಿದ್ದೆವು. ಆ ರೀತಿ ಭಾಸವಾಗಿತ್ತು. ನನಗನಿಸತ್ತೆ ಪಾಪಿಂಗ್ ಕ್ರೀಸ್‌ ಸಮಕ್ಕೆ ಎತ್ತರವನ್ನು ಪರಿಗಣಿಸಿರಬೇಕು’ ಎಂದು ಡುಪ್ಲೆಸಿ ಪಂದ್ಯದ ನಂತರ ಸುದ್ದಿಗಾರರಿಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT