ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SRH vs MI: 523 ರನ್, 38 ಸಿಕ್ಸರ್; ಆರ್‌ಸಿಬಿಯ ಸೇರಿದಂತೆ ಹಲವು ದಾಖಲೆ ಉಡೀಸ್

Published 28 ಮಾರ್ಚ್ 2024, 2:21 IST
Last Updated 28 ಮಾರ್ಚ್ 2024, 2:21 IST
ಅಕ್ಷರ ಗಾತ್ರ

ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯದಲ್ಲಿ ರನ್ ಹೊಳೆ ಹರಿಯಿತು.

ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಎಸ್‌ಆರ್‌ಎಚ್ ದಾಖಲೆಯ 277 ರನ್ ಪೇರಿಸಿದರೆ ಗುರಿ ಬೆನ್ನಟ್ಟಿದ ಮುಂಬೈ ದಿಟ್ಟ ಹೋರಾಟ ನೀಡಿತ್ತಲ್ಲದೆ 246 ರನ್ ಗಳಿಸಿತು. ಆದರೂ 31 ರನ್ ಅಂತರದಿಂದ ಸೋಲಿಗೆ ಶರಣಾಯಿತು.

ಹೈದರಾಬಾದ್ ಹಾಗೂ ಮುಂಬೈ ನಡುವಣ ಪಂದ್ಯದಲ್ಲಿ ಹಲವು ದಾಖಲೆ ಸೃಷ್ಟಿಯಾದವು. ಈ ಕುರಿತು ಮಾಹಿತಿ ಇಲ್ಲಿದೆ.

ಐಪಿಎಲ್ ಟೂರ್ನಿಯಲ್ಲಿಯೇ ಗರಿಷ್ಠ ಮೊತ್ತ:

ಹೆನ್ರಿಕ್ ಕ್ಲಾಸೆನ್ (80*), ಅಭಿಷೇಕ್ ಶರ್ಮಾ (63) ಹಾಗೂ ಟ್ರಾವಿಸ್ ಹೆಡ್ (62) ಸ್ಫೋಟಕ ಬ್ಯಾಟಿಂಗ್ ಬಲದಿಂದ ಎಸ್‌ಆರ್‌ಎಚ್ ತಂಡವು ಮೂರು ವಿಕೆಟ್ ನಷ್ಟಕ್ಕೆ 277 ರನ್ ಪೇರಿಸಿತು. ಇದು ಐಪಿಎಲ್ ಟೂರ್ನಿಯ ಇತಿಹಾಸದಲ್ಲೇ ತಂಡವೊಂದರಿಂದ ದಾಖಲಾದ ಗರಿಷ್ಠ ಮೊತ್ತವಾಗಿದೆ. ಆ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದಾಖಲೆಯನ್ನು ಅಳಿಸಿ ಹಾಕಿದೆ. 11 ವರ್ಷಗಳ ಹಿಂದೆ ಆರ್‌ಸಿಬಿ ತಂಡವು 263 ರನ್‌ ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.

ಎರಡನೇ ಇನಿಂಗ್ಸ್‌ನಲ್ಲೂ ಗರಿಷ್ಠ ಮೊತ್ತ:

ಕಠಿಣ ಪೈಪೋಟಿ ನೀಡಿದ ಮುಂಬೈ ಇಂಡಿಯನ್ಸ್, ತಿಲಕ್ ವರ್ಮಾ (64), ಟಿಮ್ ಡೇವಿಡ್ (42*) ಇಶಾನ್ ಕಿಶಾನ್ (34), ನಮನ್ ಧಿರ್ (30) ಹಾಗೂ ರೋಹಿತ್ ಶರ್ಮಾ (26) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 246 ರನ್ ಗಳಿಸಿತು. ಐಪಿಎಲ್ ಟೂರ್ನಿಯಲ್ಲಿ ಚೇಸಿಂಗ್ ವೇಳೆ ತಂಡವೊಂದು ಗಳಿಸಿದ ಗರಿಷ್ಠ ಮೊತ್ತ ಇದಾಗಿದೆ. 2020ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಆರು ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು.

523: ಪಂದ್ಯದಲ್ಲಿ ದಾಖಲಾದ ಗರಿಷ್ಠ ರನ್

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಂದ್ಯವೊಂದರಲ್ಲಿ ಒಟ್ಟು 500ಕ್ಕೂ ಹೆಚ್ಚು ರನ್‌ ದಾಖಲಾಯಿತು. ಇದು ಪುರುಷ ಟಿ20 ಕ್ರಿಕೆಟ್‌ನಲ್ಲಿ ದಾಖಲಾದ ಗರಿಷ್ಠ ಮೊತ್ತವೂ ಹೌದು. ಎಸ್‌ಆರ್‌ಎಚ್ ಹಾಗೂ ಮುಂಬೈ ನಡುವಣ ಪಂದ್ಯದಲ್ಲಿ ದಾಖಲಾದ ಒಟ್ಟು ರನ್ 523. ಕಳೆದ ವರ್ಷ ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್‌ಇಂಡೀಸ್ ನಡುವಣ ಅಂತರರಾಷ್ಟ್ರೀಯ ಪಂದ್ಯದಲ್ಲಿ ಒಟ್ಟು 517 ರನ್ ದಾಖಲಾಗಿತ್ತು. ಇನ್ನು ಐಪಿಎಲ್‌ನಲ್ಲಿ 2010ರಲ್ಲಿ ಚೆನ್ನೈ ಹಾಗೂ ರಾಜಸ್ಥಾನ ನಡುವಣ ಪಂದ್ಯದಲ್ಲಿ ಒಟ್ಟು 469 ರನ್ ದಾಖಲಾಗಿತ್ತು.

ಹೆನ್ರಿಕ್ ಕ್ಲಾಸೆನ್
ಹೆನ್ರಿಕ್ ಕ್ಲಾಸೆನ್(ಪಿಟಿಐ ಚಿತ್ರ)

38: ಐಪಿಎಲ್ ಪಂದ್ಯದಲ್ಲಿ ಗರಿಷ್ಠ ಸಿಕ್ಸರ್

ಇತ್ತಂಡಗಳ ಬ್ಯಾಟರ್‌ಗಳು ಒಟ್ಟು 38 ಸಿಕ್ಸರ್‌ಗಳನ್ನು ಸಿಡಿಸಿದ್ದರು. ಈ ಪೈಕಿ ಮುಂಬೈ 20 ಹಾಗೂ ಹೈದರಾಬಾದ್ 18 ಸಿಕ್ಸರ್‌ ಬಾರಿಸಿತು. ಆ ಮೂಲಕ ಐಪಿಎಲ್ ಸೇರಿದಂತೆ ಟಿ20 ಪಂದ್ಯವೊಂದರಲ್ಲೇ ಅತಿ ಹೆಚ್ಚು ಸಿಕ್ಸರ್ ದಾಖಲಾಯಿತು. 2018ರಲ್ಲಿ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಣ ಐಪಿಎಲ್ ಪಂದ್ಯದಲ್ಲಿ 33 ಸಿಕ್ಸರ್ ಮತ್ತು 2018ರಲ್ಲಿ ಅಫ್ಗನ್ ಪ್ರೀಮಿಯರ್ ಲೀಗ್‌ನಲ್ಲಿ ಬಾಲ್ಕ್ ಲೆಜೆಂಡ್ಸ್ ಹಾಗೂ ಕಾಬೂಲ್ ಜ್ವಾನನ್ ನಡುವಣ ಪಂದ್ಯದಲ್ಲಿ 37 ಸಿಕ್ಸರ್‌ ಸಿಡಿದಿತ್ತು.

ಅತಿ ಹೆಚ್ಚು ಬೌಂಡರಿ (4 ಹಾಗೂ 6 ಸೇರಿದಂತೆ)

2010ರಲ್ಲಿ ಚೆನ್ನೈ ಹಾಗೂ ರಾಜಸ್ಥಾನ ನಡುವಣ ಪಂದ್ಯದಲ್ಲಿ ಒಟ್ಟು 69 ಬೌಂಡರಿಗಳು (4 ಹಾಗೂ 6 ಸೇರಿದಂತೆ) ದಾಖಲಾಗಿತ್ತು. ಈ ದಾಖಲೆಯನ್ನು ಎಸ್‌ಆರ್‌ಎಚ್ ಹಾಗೂ ಮುಂಬೈ ನಡುವಣ ಪಂದ್ಯ ಸರಿಗಟ್ಟಿದೆ. ಉಭಯ ತಂಡಗಳು 38 ಸಿಕ್ಸರ್ ಹಾಗೂ 31 ಬೌಂಡರಿ ಗಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT