ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು | ಪ್ರಜಾತಂತ್ರದ ಜಯ: ಎಎಪಿ

Published 10 ಮೇ 2024, 15:55 IST
Last Updated 10 ಮೇ 2024, 15:55 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಮುಖ್ಯಮಂತ್ರಿಯೂ ಆಗಿರುವ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿರುವ ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಹೇಳಿರುವ ಆಮ್‌ ಆದ್ಮಿ ಪಕ್ಷ (ಎಎಪಿ), ಇದು ಪ್ರಜಾತಂತ್ರದ ಗೆಲುವು ಎಂದು ಶುಕ್ರವಾರ ಹೇಳಿದೆ.

ಪಕ್ಷದ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ಮುಖಂಡರು, ಈ ಬೆಳವಣಿಗೆ ದೇಶದಲ್ಲಿನ ಸರ್ವಾಧಿಕಾರಿ ಧೋರಣೆಗೆ ಕೊನೆ ಹಾಡಲಿದೆ ಎಂದು ಹೇಳಿದರು. 

ಸಚಿವ ಸೌರಭ್ ಭಾರದ್ವಾಜ್‌,‘ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ದೊರೆತಿರುವುದು ತನ್ನ ಭಕ್ತನಿಗೆ ಆಂಜನೇಯ ದೇವರು ಆಶೀರ್ವಾದ ಮಾಡಿದಂತೆ ಆಗಿದೆ’ ಎಂದರು.

‘40 ದಿನಗಳ ನಂತರ ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ದೊರೆತಿರುವುದು ಯಾವುದೇ ಪವಾಡಕ್ಕಿಂತ ಕಡಿಮೆಯೇನಲ್ಲ. ಈ ಬೆಳವಣಿಗೆಯು, ದೇಶದಲ್ಲಿನ ಸದ್ಯದ ಪರಿಸ್ಥಿತಿ ಬದಲಾಗುತ್ತದೆ ಎಂಬುದರ ಕುರಿತ ದೈವಿಕ ಸೂಚನೆಯಾಗಿದೆ. ನ್ಯಾಯಾಂಗ ಬಂಧನದಿಂದ ಕೇಜ್ರಿವಾಲ್‌ ಅವರ ಬಿಡುಗಡೆಯು ದೇಶದಲ್ಲಿ ಭಾರಿ ಬದಲಾವಣೆಗೆ ದಾರಿ ಮಾಡಿ ಕೊಡಲಿದೆ’ ಎಂದರು.

‘ಪ್ರಜಾಪ್ರಭುತ್ವವನ್ನು ಪ್ರೀತಿಸುವವರಿಗೆಲ್ಲಾ ಸುಪ್ರೀಂ ಕೋರ್ಟ್‌ನ ಈ ತೀರ್ಪು ಸಂತಸ ತಂದಿದೆ. ಜನರ ಪಾಲಿಗೆ ಇದು ಆಶಾಕಿರಣ’ ಎಂದು ಎಎಪಿ ದೆಹಲಿ ಘಟಕದ ಸಂಚಾಲಕ ಗೋಪಾಲ್‌ ರಾಯ್ ಹೇಳಿದರು.

‘ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ಮಾತ್ರ ಲಭಿಸಿಲ್ಲ; ಸುಪ್ರೀಂ ಕೋರ್ಟ್‌ನ ಈ ತೀರ್ಮಾನವು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಗೆಲುವನ್ನು ಖಾತ್ರಿಪಡಿಸಿದಂತಾಗಿದೆ’ ಎಂದು ರಾಯ್‌ ಹೇಳಿದರು.

‘ಇದು ಪ್ರಜಾಪ್ರಭುತ್ವ ಮತ್ತು ಸತ್ಯಕ್ಕೆ ಸಿಕ್ಕ ದೊಡ್ಡ ಗೆಲುವು. ಈ ತೀರ್ಪು ಮುಕ್ತ ಮತ್ತು ನ್ಯಾಯಯುತ ಚುನಾವಣೆಯನ್ನು ಖಾತ್ರಿಪಡಿಸಲಿದೆ’ ಎಂದು ಸಚಿವೆ ಆತಿಶಿ ಮರ್ಲೆನಾ ಹೇಳಿದರು.

‘ಮತ ಚಲಾವಣೆ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಲು ಹಾಗೂ ಸರ್ವಾಧಿಕಾರವನ್ನು ಬದಲಾಯಿಸಲು ದೊರೆತಿರುವ ಕೊನೆಯ ಅವಕಾಶ ಎಂಬುದನ್ನು ಜನರಿಗೆ ಹೇಳಲು ಬಯಸುತ್ತೇನೆ’ ಎಂದೂ ಆತಿಶಿ ಹೇಳಿದರು.

ಸಂಜಯ್‌ ಸಿಂಗ್‌ ಪೋಸ್ಟ್‌: ಎಎಪಿ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್‌,‘ಸತ್ಯವನ್ನು ಸಂಕಷ್ಟಕ್ಕೆ ದೂಡಬಹುದೇ ಹೊರತು ಅದನ್ನು ಸೋಲಿಸಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್‌ ತೀರ್ಪಿಗೆ ಸ್ವಾಗತ. ಸರ್ವಾಧಿಕಾರ ಕೊನೆಗೊಳ್ಳಲಿದೆ. ಸತ್ಯಮೇವ ಜಯತೆ’ ಎಂದು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಮಧ್ಯಂತರ ಜಾಮೀನು: ವಿಪಕ್ಷ ನಾಯಕರ ಸ್ವಾಗತ ನವದೆಹಲಿ

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಸುಪ್ರೀಂ ಕೋರ್ಟ್‌ ಮಧ್ಯಂತರ ಜಾಮೀನು ನೀಡಿದ್ದನ್ನು ವಿರೋಧ ಪಕ್ಷಗಳ ನಾಯಕರು ಶುಕ್ರವಾರ ಸ್ವಾಗತಿಸಿದ್ದಾರೆ. ‘ಈ ತೀರ್ಪಿನಿಂದಾಗಿ ಪ್ರಜಾಪ್ರಭುತ್ವ ಉಳಿವಿಗಾಗಿ ನಡೆಯುತ್ತಿರುವ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು’ ಎಂದು ಹೇಳಿದ್ದಾರೆ. ‘ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರಿಗೂ ನ್ಯಾಯ ಸಿಗಲಿದೆ’ ಎಂದು ಕಾಂಗ್ರೆಸ್‌ ಮುಖಂಡ ಪವನ್‌ ಖೇರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಜೂನ್‌ 4ರ ನಂತರ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿಯಾಗುವರು.  ನಂತರ ಸಾಬರಮತಿ ಆಶ್ರಮದಲ್ಲಿ ಕುಳಿತು ತಾನು ಯಾವ ರೀತಿಯ ರಾಜಕಾರಣದಲ್ಲಿ ತೊಡಗಿದ್ದೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲು ಅವರಿಗೆ ಸಾಕಷ್ಟು ಸಮಯ ಸಿಗಲಿದೆ’ ಎಂದು ಖೇರಾ ಹೇಳಿದ್ದಾರೆ. ‘ಇದು ಕೇಜ್ರಿವಾಲ್‌ ಅವರಿಗೆ ಸಿಕ್ಕ ದೊಡ್ಡ ಜಯ’ ಎಂದು ಹೇಳಿರುವ ಶಿವಸೇನಾ (ಯುಬಿಟಿ) ನಾಯಕಿ ಪ್ರಿಯಾಂಕಾ ಚತುರ್ವೇದಿ ‘ವಿಪಕ್ಷಗಳ ನಾಯಕರ ದನಿ ಅಡಗಿಸಲು ಬಿಜೆಪಿ ಮಾಡಿದ ಯತ್ನಗಳು ಅದಕ್ಕೇ ತಿರುಗುಬಾಣವಾಗಿವೆ. ನಮ್ಮ ದನಿ ಅಡಗಿಸಲಾಗದು ಯಾವುದೇ ಕಾರಣಕ್ಕೂ ನಮ್ಮ ಹೋರಾಟ ಕೈಬಿಡುವುದಿಲ್ಲ. ಜೈ ಹಿಂದ್’ ಎಂದು ಅವರು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT