ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ವಿಶೇಷ | ಮಲೆನಾಡು: ಅರಣ್ಯನಾಶ ಅವ್ಯಾಹತ

ಚುನಾವಣೆ ಕಾರ್ಯದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ: ಹೆಚ್ಚಿದ ಭೂಕಬಳಿಕೆ
Published 9 ಮೇ 2024, 23:51 IST
Last Updated 9 ಮೇ 2024, 23:51 IST
ಅಕ್ಷರ ಗಾತ್ರ

ಶಿವಮೊಗ್ಗ: ಲೋಕಸಭಾ ಚುನಾವಣೆಗೆ ನೀತಿ–ಸಂಹಿತೆ ಆರಂಭವಾದ ಬಳಿಕ ಮಲೆನಾಡಿನ ಹಲವೆಡೆ ಕಂದಾಯ ಭೂಮಿಯ ಅತಿಕ್ರಮಣ ವೇಗ ಪಡೆದಿದೆ. ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಚುನಾವಣೆ ಕಾರ್ಯದಲ್ಲಿ ತೊಡಗಿ ಕೊಂಡಿರುವುದು ಭೂಕಬಳಿಕೆದಾರರಿಗೆ ವರದಾನವಾಗಿದೆ.

ಬಗರ್‌ಹುಕುಂ ಅಡಿ ಎರಡು ಎಕರೆ ಮಂಜೂರು ಆದರೆ ಅದಕ್ಕೆ ತಾಗಿಕೊಂಡಿರುವ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಲಾಗುತ್ತಿದೆ. ಆ ಜಾಗದಲ್ಲಿನ ಮರಗಳನ್ನು ರಾತ್ರೋರಾತ್ರಿ ಕಡಿದು
ಸುಟ್ಟು ಮಾರಣಹೋಮ ಮಾಡುವ ಕಾರ್ಯ
ನಡೆದಿದೆ.

ಸೊರಬ ತಾಲ್ಲೂಕಿನ ಅಂದವಳ್ಳಿ, ಬಾಡದಬೈಲು, ಬೆನ್ನೂರು, ನರ್ಚಿ, ತೆಲಗುಂದ್ಲಿ, ಬಿಕ್ಕಲಗೋಡು, ದ್ಯಾವಸ ಬಳಿ ಗ್ರಾಮ ಅರಣ್ಯ ನಾಶಪಡಿಸಿ ಒತ್ತುವರಿ ಮಾಡಿಕೊಂಡ ಜಾಗಕ್ಕೆ ಬೇಲಿ ಹಾಕಲಾಗಿದೆ. ತೊರಗೊಂಡನಕೊಪ್ಪದಲ್ಲಿ ವರದಾ ನದಿ ದಂಡೆಯ ಮೇಲಿನ ಖರಾಬು ಪ್ರದೇಶದ ಅಂದಾಜು 15 ಎಕರೆ ಜಾಗ ಅತಿಕ್ರಮಣಕ್ಕೀಡಾಗಿದೆ.

ಕಂದಾಯ ಗೋಮಾಳದಲ್ಲಿನ ಮರಗಳ ಕಡಿದು ಆ ಜಾಗಕ್ಕೆ ಕೆಲವರು ಬೇಲಿ ಹಾಕಿದ್ದಾರೆ. ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ತಿಂಗಳ ಹಿಂದಷ್ಟೇ ಹೊಳೆಮರೂರಿನಲ್ಲಿ 25 ಎಕರೆ ಅರಣ್ಯ ನಾಶ ಮಾಡಿದ್ದನ್ನು ಗ್ರಾಮಸ್ಥರು ವಿರೋಧಿಸಿದ್ದರು.

ತೊರಗೊಂಡನಕೊಪ್ಪದ ಗೋಮಾಳದಲ್ಲಿ ಜಂಬೆ, ಹೊನ್ನೆ, ಮತ್ತಿ, ಹುಣಾಲು, ನಂದಿ ಮರಗಳ ಕಡಿದುರುಳಿಸಿ ಬೆಂಕಿ ಹಚ್ಚಲಾಗಿದೆ. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೂ ದೂರು ನೀಡಿದ್ದಾರೆ. ‘ಆ ಭೂಮಿ ಕಂದಾಯ ಇಲಾಖೆಗೆ ಸೇರುತ್ತದೆ. ನಾವು ಹಲವು ಬಾರಿ ದೂರು ಕೊಟ್ಟರೂ ಅಧಿಕಾರಿಗಳು ಸ್ಪಂದಿಸು
ತ್ತಿಲ್ಲ’ ಎಂದು ಗ್ರಾಮದ ನಿವಾಸಿ ರಾಕೇಶ್ ಆರೋಪಿಸುತ್ತಾರೆ.

‘ಸಾಗರ ತಾಲ್ಲೂಕಿನ ಮಂಚಾಲೆ ಬೊಮ್ಮತ್ತಿ, ಕರ್ಕಿಕೊಪ್ಪ ಗ್ರಾಮದಲ್ಲೂ ಅರಣ್ಯ ನಾಶ ನಡೆದಿದೆ. ಸಾಗರ– ವರದಹಳ್ಳಿ ಮಧ್ಯೆ ಇರುವ ಮಂಕಳಲೆ ಗ್ರಾಮದ ಕಾನು, ಬೆಟ್ಟ, ಭೂಮಿಯ ಅತಿಕ್ರಮಣವನ್ನು ಕಂದಾಯ, ಅರಣ್ಯ ಇಲಾಖೆ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಚುನಾವಣಾ ಕೆಲಸದ ನೆಪ ಹೇಳುತ್ತಾ ಅಧಿಕಾರಿಗಳು ಪುರುಸೊತ್ತು ಇಲ್ಲ ಎನ್ನುತ್ತಾರೆ’ ಎಂದು ಸೊರಬದ ‍ಪರಿಸರ ಜಾಗೃತಿ ಟ್ರಸ್ಟ್‌ನ ಸಂಚಾಲಕ ಶ್ರೀಪಾದ ಬಿಚ್ಚುಗತ್ತಿ ಬೇಸರ ವ್ಯಕ್ತಪಡಿಸುತ್ತಾರೆ.

ತೀರ್ಥಹಳ್ಳಿ ಮತ್ತು ಹೊಸನಗರ ತಾಲ್ಲೂಕುಗಳ ನಗರ ಹೋಬಳಿ, ಬಾಣಿಗಾ– ಮಾರುತಿಪುರ, ಬಟ್ಟೆ ಮಲ್ಲಪ್ಪ, ಕಟ್ಟೆಕೊಪ್ಪ ಸುತ್ತಲಿನ ಅರಣ್ಯ ಪ್ರದೇಶ ಜೆಸಿಬಿ ಕಾರ್ಯಾಚರಣೆಗೆ ನಲುಗಿದೆ. ಬೆಂಕಿ ಹಚ್ಚಿ ಮರ ಕಡಿದು ಭೂ ಒತ್ತುವರಿ ಮಾಡುವವರು ಬಡವರಲ್ಲ. ಅವರೊಂದಿಗೆ ಕೆಳಹಂತದ ಸಿಬ್ಬಂದಿ ಶಾಮೀಲಾಗದಿದ್ದರೆ ಇಷ್ಟೊಂದು ವ್ಯಾಪಕವಾಗಿ ಅರಣ್ಯ ನಾಶ ಆಗುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಹಿಂದೆಯೂ ಹೀಗೆಯೇ ಆಗಿತ್ತು: ಅಶೀಸರ

‘2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಇಂತಹದ್ದೇ ಅರಣ್ಯನಾಶ–ಒತ್ತುವರಿ ಪ್ರಕರಣಗಳು ನಡೆದಿದ್ದನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಲಾಗಿತ್ತು. ಈ ಒತ್ತುವರಿ ಪ್ರಕರಣಗಳು ಡೀಮ್ಡ್‌ ಅರಣ್ಯ ವ್ಯಾಪ್ತಿಯಲ್ಲಿ ಬರುತ್ತವೆ. ಆದರೆ, ಪಶ್ಚಿಮ ಘಟ್ಟದ ಡೀಮ್ಡ್ ಅರಣ್ಯಗಳು ಅನಾಥವಾಗಿವೆ. ಅರಣ್ಯ ಇಲಾಖೆ ಅವುಗಳ ರಕ್ಷಣೆಗೆ ಮುಂದಾಗುತ್ತಿಲ್ಲ. ಕಂದಾಯ ಇಲಾಖೆಗೆ ಡೀಮ್ಡ್ ಅರಣ್ಯಗಳು ಕಾಣುವುದೇ ಇಲ್ಲ’ ಎಂದು ವೃಕ್ಷ ಲಕ್ಷ ಆಂದೋಲನದ ಅಧ್ಯಕ್ಷ, ಶಿರಸಿಯ ಅನಂತ ಹೆಗಡೆ ಅಶೀಸರ ಹೇಳುತ್ತಾರೆ.

ಗೋಮಾಳದ ಒತ್ತುವರಿಯ ಬಗ್ಗೆ ತಹಶೀಲ್ದಾರ್ ಕಚೇರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಮನವಿ ತೆಗೆದುಕೊಂಡ ಮೇಲೆ ಇತ್ತ ತಲೆ ಹಾಕುವುದಿಲ್ಲ
-ರಾಕೇಶ್, ತೊರಗೊಂಡನಕೊಪ್ಪ ಗ್ರಾಮಸ್ಥ
ಸಾರ್ವಜನಿಕ ಕಾರ್ಯಕ್ಕಾಗಿ ಜಾಗ ಮಂಜೂರಿಗೆ ಕೇಳಿದರೆ ಮಂಜೂರು ಮಾಡದ ಕಂದಾಯ ಇಲಾಖೆ ಈಗ ಖಾಸಗಿಯವರ ಒತ್ತುವರಿಗೆ ಅವಕಾಶ ಮಾಡಿಕೊಟ್ಟಿದೆ
-ಜಗದೀಶ್, ತೊರಗೊಂಡನಕೊಪ್ಪ ಗ್ರಾಮಸ್ಥ
ಸಾಗರ, ತೀರ್ಥಹಳ್ಳಿಯಲ್ಲಿ ಕಂದಾಯ ಭೂಮಿ ಒತ್ತುವರಿ ಬಗ್ಗೆ ಎರಡು ದೂರುಗಳು ಬಂದಿದ್ದವು. ಕ್ರಮ ಕೈಗೊಂಡಿದ್ದೇವೆ. ಅಂದವಳ್ಳಿ ಸಂಗತಿ ಗಮನಕ್ಕೆ ಬಂದಿರಲಿಲ್ಲ.
-ಗುರುದತ್ತ ಹೆಗಡೆ, ಶಿವಮೊಗ್ಗ ಜಿಲ್ಲಾಧಿಕಾರಿ
ಅರಣ್ಯ ಒತ್ತುವರಿಯ ಪ್ರಕರಣ ಜಿಲ್ಲೆಯಲ್ಲಿ ಕಂಡುಬಂದಿಲ್ಲ. ಸಣ್ಣ ಒತ್ತುವರಿ ಆದರೂ ಇಲಾಖೆಯ ಗಮನಕ್ಕೆ ಬರುತ್ತದೆ.
-ಕೆ.ಟಿ.ಹನುಮಂತಪ್ಪ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT