ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಚರಿ ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನದ ಪದಕ

Published 27 ಏಪ್ರಿಲ್ 2024, 16:32 IST
Last Updated 27 ಏಪ್ರಿಲ್ 2024, 16:32 IST
ಅಕ್ಷರ ಗಾತ್ರ

ಶಾಂಘೈ: ಏಷ್ಯನ್‌ ಕ್ರೀಡಾಕೂಟದ ಚಾಂಪಿಯನ್ ಜ್ಯೋತಿ ಸುರೇಖಾ ವೆಣ್ಣಮ್ ಅವರ ಪ್ರಾಬಲ್ಯದಿಂದ ಭಾರತವು ಶನಿವಾರ ಆರ್ಚರಿ ವಿಶ್ವಕಪ್‌ನ (ಸ್ಟೇಜ್‌ 1) ಕಂಪೌಂಡ್‌ ವಿಭಾಗದಲ್ಲಿ ಐದು ಪದಕಗಳನ್ನು ಗೆದ್ದುಕೊಂಡಿತು. ಇದೇ ವೇಳೆ ಜ್ಯೋತಿ ಹ್ಯಾಟ್ರಿಕ್‌ ಚಿನ್ನದ ಸಾಧನೆ ಮೆರೆದರು.

ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ವಿಶ್ವದ ಮೂರನೇ ರ‍್ಯಾಂಕ್‌ನ ಜ್ಯೋತಿ 146–146 ರಿಂದ ಅಗ್ರ ಕ್ರಮಾಂಕದ ಆ್ಯಂಡ್ರಿಯ ಬೆಸೆರಾ (ಮೆಕ್ಸಿಕೊ) ಅವರೊಂದಿಗೆ ಸಮಬಲ ಸಾಧಿಸಿ, ನಂತರ ಟೈಬ್ರೇಕರ್‌ನಲ್ಲಿ ಚಿನ್ನಕ್ಕೆ ಮುತ್ತಿಟ್ಟರು. ‌

ದೀಪಿಕಾ ಕುಮಾರಿ ನಂತರ ವಿಶ್ವಕಪ್‌ನಲ್ಲಿ ತ್ರಿವಳಿ ಚಿನ್ನದ ಪದಕ ಗೆದ್ದ ಎರಡನೇ ಭಾರತದ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರವಾಗಿದ್ದಾರೆ. ಮೂರು ಬಾರಿಯ ಒಲಿಂಪಿಯನ್ ಮತ್ತು ವಿಶ್ವದ ಮಾಜಿ ಅಗ್ರಮಾನ್ಯ ಆಟಗಾರ್ತಿ ದೀಪಿಕಾ 2021ರಲ್ಲಿ ಪ್ಯಾರಿಸ್ ವಿಶ್ವಕಪ್ ಸ್ಟೇಜ್‌ 3ರಲ್ಲಿ ಈ ಸಾಧನೆ ಮಾಡಿದ್ದರು. 

ವಿಜಯವಾಡದ 27 ವರ್ಷದ ಸುರೇಖಾ ಅವರು ಕಳೆದ ವರ್ಷ ನಡೆದ ಹಾಂಗ್‌ಝೌ ಏಷ್ಯನ್‌ ಕ್ರೀಡಾಕೂಟದಲ್ಲಿ ವೈಯಕ್ತಿಕ, ಮಹಿಳೆಯರ ತಂಡ ಮತ್ತು ಮಿಶ್ರ ತಂಡ ವಿಭಾಗದಲ್ಲಿ ಹ್ಯಾಟ್ರಿಕ್‌ ಚಿನ್ನ ಗೆದ್ದಿದ್ದರು. ಇಲ್ಲೂ ಅದೇ ಸಾಧನೆ ಮೆರೆದಿದ್ದಾರೆ.

ಕಾಂಪೌಂಡ್ ವಿಭಾಗದ ತಂಡಗಳ ಸ್ಪರ್ಧೆಯಲ್ಲಿ ಭಾರತವು ಕ್ಲೀನ್‌ಸ್ವೀಪ್ ಸಾಧಿಸಿದೆ. ಪುರುಷರ, ಮಹಿಳೆಯರ ಹಾಗೂ ಮಿಶ್ರ ತಂಡಗಳು ಚಿನ್ನ ಗೆದ್ದಿವೆ. ಪ್ರಶಸ್ತಿ ಗೆದ್ದ ಮಹಿಳೆಯರ ಮತ್ತು ಮಿಶ್ರ ತಂಡದಲ್ಲಿ ಜ್ಯೋತಿ ಇದ್ದರು.

ಅಭಿಷೇಕ್ ವರ್ಮಾ, ಪ್ರಿಯಾಂಶ್ ಹಾಗೂ ಪ್ರಥಮೇಶ್ ಅವರನ್ನು ಒಳಗೊಂಡ ಪುರುಷರ ತಂಡವು 238-231 ಅಂತರದಿಂದ ನೆದರ್ಲೆಂಡ್ಸ್‌ ತಂಡವನ್ನು ಮಣಿಸಿತು. ಜ್ಯೋತಿ, ಅದಿತಿ ಸ್ವಾಮಿ ಹಾಗೂ ಪರಿಣಿತಿ ಕೌರ್ ಅವರನ್ನು ಒಳಗೊಂಡ ಮಹಿಳೆಯರ ತಂಡವು 236-225 ಅಂತರದಿಂದ ಇಟಲಿ ತಂಡವನ್ನು ಸೋಲಿಸಿತು. ಜ್ಯೋತಿ ಹಾಗೂ ಅಭಿಷೇಕ್ ಒಳಗೊಂಡ ಮಿಕ್ಸೆಡ್ ತಂಡವು 158-157ರಿಂದ ಎಸ್ಟೋನಿಯಾದ ತಂಡವನ್ನು 1 ಪಾಯಿಂಟ್ಸ್‌ ಅಂತರದಲ್ಲಿ ರೋಚಕವಾಗಿ ಮಣಿಸಿತು.

ಪುರುಷರ ವೈಯಕ್ತಿಕ ಕಾಂಪೌಂಡ್‌ ವಿಭಾಗದಲ್ಲಿ ಯುವ ಆಟಗಾರ ಪ್ರಿಯಾಂಶ್ ಅವರು ಬೆಳ್ಳಿ ಪದಕ ಗೆದ್ದರು.

ರಿಕರ್ವ್ ವಿಭಾಗದಲ್ಲಿ ಪ್ರಶಸ್ತಿ ಸುತ್ತು ಭಾನುವಾರ ನಡೆಯಲಿದ್ದು, ಭಾರತವು ಎರಡು ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದೆ. ಪುರುಷರ ತಂಡವು ಚಿನ್ನದ ಪದಕ ಸುತ್ತಿನಲ್ಲಿ ಒಲಿಂಪಿಕ್ಸ್ ಚಾಂಪಿಯನ್ ದಕ್ಷಿಣ ಕೊರಿಯಾವನ್ನು ಎದುರಿಸಲಿದೆ. ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ದೀಪಿಕಾ ಕುಮಾರಿ ಸೆಮಿಫೈನಲ್‌ನಲ್ಲಿ ಕೊರಿಯಾದ ಆಟಗಾರ್ತಿ ವಿರುದ್ಧ ಸೆಣಸಾಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT