ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವನ: ಒಂದು ಬೀಜದ ವ್ಯಥೆ

ಮಂಜಯ್ಯ ದೇವರಮನಿ 
Published 16 ಮಾರ್ಚ್ 2024, 23:52 IST
Last Updated 16 ಮಾರ್ಚ್ 2024, 23:52 IST
ಅಕ್ಷರ ಗಾತ್ರ


ಮಾಳಗಿಮನೆಯ ಮಣ್ಣು

ಹೊಲದ ಕಸವು

ಬಿತ್ತಲು ಸಿದ್ದರಿಲ್ಲ ಯಾರೂ…

ಮಾಳಗಿಯ ಮೆಟ್ಟಿಲುಗಳನ್ನು

ಬಳಸಿ ಮಹಲು ಕಟ್ಟಲಾಗಿದೆ

ಹತ್ತುವ ಕಾಲುಗಳಿಗೆ

ನಾಲು ಕಟ್ಟುವರಾರು?

ಗೊಬ್ಬರ ಗುಂಡಿಯ ಬಿಟ್ಟು

ಅಲ್ಲೆಲ್ಲೋ ಅಂಗಡಿ ಮುಂದೆ

ನಿಂತಿದೆ ಸರತಿ ಸಾಲು…


ಹಗೇವು ಬಾಯಿಗೆ

ಚಪ್ಪಡಿ ಹಾಕಿ ತುಂಬಾ ದಿನಗಳಾದವು

ಬಿತ್ತಲು ಬೀಜ ಕೊಳ್ಳುವ

ಗಲಾಟೆಗೆ ಗೋಲಿಬಾರಿನ ಸದ್ದು


ಪ್ರತಿಭಟನೆಯ ಕೂಗಿಗೆ

ಹೊಲದಲ್ಲಿನ ನನ್ನ ಬಣ್ಣ

ಯಾರದೋ ಹೆಗಲೇರಿದೆ…

ಹೆಗಲ ಮೇಲಿನ ಬಾರುಕೋಲು

ಚಾಟಿ ಬಿಸುವುದ ಬಿಟ್ಟು ಚಾಮರ ಬೀಸುತ್ತಿದೆ


ಊಳಬೇಕಿದೆ…

ಹುಡಿಕಟ್ಟಿ ನನ್ನ ಬಿತ್ತಬೇಕಿದೆ…

ಮನವೆಂಬ ಹೊಲದಲ್ಲಿ

ಮಾನವೀಯತೆಯ ಬೆಳೆ ಬೆಳೆಯಲು


ಮೇಳಿ ಮೇಲಿನ ಕೈಗಳು

ಕಸುವಿಲ್ಲದೆ ಬೇಡುತ್ತಿವೆ 

ಯಾವ ಗೊಬ್ಬರ ಕೇಳಲಿ?

ಒಲ್ಲೆನೆಂದರು

ಬಿತ್ತುವರು ವಿಷವೆಂಬ ರಾಸಾಯನಿಕವ

ಸ್ವಾರ್ಥ ಸಾಧನೆಯ ಹಪಾಹಪಿಗೆ 

ಕಳೆಯ ಕೀಳುವ ಬದಲು

ನಾಶಕವ ಉಗುಳುವರು

ನಂಜು ತಾಗದಿರುವುದೇ 

ನನ್ನೆದೆಯ ಗರ್ಭಕ್ಕೆ


ಮಣ್ಣುಗೂಡಲು ಬಂದವರಿಗೆ

ಮನ್ನಿಸಿ ಮೃಷ್ಟಾನ್ನವಾದೆ…

ಒಲವೆಂಬ ಹೊಲದಲ್ಲಿ 

ನನ್ನ ಸಹೋದರರು ಕಾಯುತ್ತಿರುವರು 

ಹೊಸದೊಂದು ಬದುಕಿನ ಮುಂಗಾರಿಗೆ…

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT