ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷಾ ಕೊಠಡಿಯಲ್ಲಿ...

Last Updated 13 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಪರೀಕ್ಷಾ ಕೊಠಡಿಯೊಳಗಿನ ಮೂರು ಗಂಟೆಯ ಪ್ರತಿ ಕ್ಷಣವೂ ಅಕ್ಷರಶಃ ನಿರ್ಣಾಯಕ. ವರ್ಷದ ಓದನ್ನು ಸಾಫಲ್ಯಗೊಳಿಸಬೇಕಾದ ಸವಾಲು ಎದುರಿಸುವ ಸಮಯವದು.

ಈ ಅವಧಿಯಲ್ಲಿ ಆತಂಕ, ಯೋಚಿಸುವಿಕೆ, ಯೋಜಿಸುವಿಕೆ, ಪರಿಶ್ರಮ, ಚಿಂತನ– ಮಂಥನ, ಅಲ್ಪ– ವಿರಾಮ, ನಿರೂಪಣೆ, ನೀರಡಿಕೆ, ನಿಟ್ಟುಸಿರು, ನಿರಾಳತೆ... ಇವೆಲ್ಲ ಹಾಸುಹೊಕ್ಕಿರುತ್ತವೆ.

ಪರೀಕ್ಷೆಯಲ್ಲಿ ಯಾವ ಮಾದರಿಯ ಪ್ರಶ್ನೆಗಳಿಗೆ ಯಾವ ರೀತಿ ಉತ್ತರಿಸಬೇಕು, ಏನು ಮಾಡಬೇಕು, ಏನು ಮಾಡಬಾರದು, ವೇಳೆಯ ನಿರ್ವಹಣೆ ಹೇಗಿರಬೇಕು, ಉದ್ವೇಗ ಶಮನಕ್ಕೆ ಏನು ಮಾಡಬೇಕು..? ಇವೆಲ್ಲದರ ಕುರಿತು ಇಲ್ಲಿವೆ ಕೆಲ ಟಿಪ್ಸ್.

ವೇಳೆಗೆ ಸರಿಯಾಗಿ ಪರೀಕ್ಷಾ ಕೊಠಡಿಯಲ್ಲಿರಿ
ಪರೀಕ್ಷಾ ಕೊಠಡಿಯಲ್ಲಿ ನಿಗದಿತ ಅವಧಿಯ ಒಳಗೆ ಹಾಜರಿರಬೇಕು. ಸಾಮಾನ್ಯವಾಗಿ ಪರೀಕ್ಷೆ ಆರಂಭವಾಗುವ 10 ನಿಮಿಷ ಮೊದಲು ಪರೀಕ್ಷಾ ಕೊಠಡಿ ಪ್ರವೇಶಿಸಲು ಅನುಮತಿ ಇರುತ್ತದೆ. ಈ ಅವಧಿಯಲ್ಲಿ ನಿಮ್ಮ ನಿಗದಿತ ಸ್ಥಳಕ್ಕೆ ಹೋಗಿ ನಿರಮ್ಮಳವಾಗಿ ಕುಳಿತುಕೊಳ್ಳಿ.

ನೀವು ಕುಳಿತಿರುವ ಬೆಂಚ್ ಸರಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ (ಬೆಂಚ್ ಮುರಿದಿರಬಾರದು, ಅಲ್ಲಾಡುತ್ತಿರಬಾರದು, ಅದರ ಮೇಲೆ ಯಾವುದೇ ಬರಹ ಇರಬಾರದು). ಸಮಸ್ಯೆ ಇದ್ದರೆ, ಪರೀಕ್ಷಾ ಕೊಠಡಿ ಮೇಲ್ವಿಚಾರಕರಿಗೆ ಈ ವಿಷಯ ತಿಳಿಸಿ. ಇರುವುದರಲ್ಲೇ ಅಡ್ಜಸ್ಟ್ ಮಾಡಿಕೊಳ್ಳಬೇಕಾದ ಅನಿವಾರ್ಯ ಇದ್ದರೆ, ಅಡ್ಜಸ್ಟ್‌ ಮಾಡಿಕೊಳ್ಳಿ.

ಗೊಂದಲಕ್ಕೆ ಒಳಗಾಗಬೇಡಿ
ಪ್ರಶ್ನೆಪತ್ರಿಕೆ ಕೈ ಸೇರುವ ಮೊದಲಿನ ಈ ಅವಧಿಯಲ್ಲಿ ಉದ್ವೇಗ ಸಹಜ. ಉದ್ವೇಗ ಶಮನಕ್ಕೆ ನಿಮ್ಮ ಜತೆಗೆ ಕೊಂಡೊಯ್ದಿರುವ ಶುದ್ಧವಾದ ನೀರು ಕುಡಿಯಿರಿ. ದೀರ್ಘಾವಧಿಯ ಉಸಿರು ತೆಗೆದುಕೊಳ್ಳಿ. ಮನದಲ್ಲಿಯೇ ‘ನಾನು ಇಂದಿನ ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯುತ್ತೇನೆ, ಚೆನ್ನಾಗಿ ಉತ್ತರಿಸುತ್ತೇನೆ, ಉತ್ತಮ ಅಂಕ ಗಳಿಸುತ್ತೇನೆ’ ಎಂದು ಹೇಳಿಕೊಳ್ಳಿ. ಪೋಷಕರನ್ನು ಸ್ಮರಿಸಿ, ನಂಬಿರುವ ದೇವರಿಗೆ ಮನದಲ್ಲಿಯೇ ವಂದಿಸಿ.

ಪ್ರಶ್ನೆ, ಉತ್ತರ ಪತ್ರಿಕೆ ಕೈಸೇರಿದ ನಂತರ
ಕೂಡಲೇ ಉತ್ತರ ಬರೆಯಲು ಆರಂಭಿಸಬೇಡಿ. ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಯಲ್ಲಿ ಕಡ್ಡಾಯವಾಗಿ ನಿಗದಿತ ಸ್ಥಳದಲ್ಲಿ ನಿಮ್ಮ ನೋಂದಣಿ ಸಂಖ್ಯೆ, ದಿನಾಂಕ, ವಿಷಯ ಇತ್ಯಾದಿ ಮಾಹಿತಿಗಳನ್ನು ನಮೂದಿಸಿ. ಗೊಂದಲಗಳಿದ್ದರೆ, ಕೊಠಡಿ ಮೇಲ್ವಿಚಾರಕನ್ನು ಕೇಳಿ ತಿಳಿಯಿರಿ. ಈಚೆಗೆ ಪ್ರಶ್ನೆ ಪತ್ರಿಕೆಯಲ್ಲೇ ಉತ್ತರಿಸಲು ಸ್ಥಳಾವಕಾಶ ಕಲ್ಪಿಸಲಾಗಿರುತ್ತದೆ. ಅಲ್ಲಿಯೂ ಅಗತ್ಯ ಮಾಹಿತಿಗಳನ್ನು ತಪ್ಪದೇ ಭರ್ತಿ ಮಾಡಿ. ಪ್ರಶ್ನೆಪತ್ರಿಕೆ ಅಥವಾ ಉತ್ತರ ಪತ್ರಿಕೆ ಹರಿದು ಹೋಗಿದ್ದರೆ ಅಥವಾ ಸರಿಯಾಗಿ ಮುದ್ರಣಗೊಂಡಿರದಿದ್ದರೆ ಕೊಠಡಿ ಮೇಲ್ವಿಚಾರಕರಿಗೆ ತಿಳಿಸಿ, ತಕ್ಷಣವೇ ಅದನ್ನು ಬದಲಾಯಿಸಿಕೊಳ್ಳಿ.

ಪ್ರಶ್ನೆಗಳ ಮೇಲೆ ಕಣ್ಣಾಡಿಸಿ
ಅಗತ್ಯವಾದ ಮಾಹಿತಿಯನ್ನು ಭರ್ತಿ ಮಾಡಿದ ನಂತರ, ಪ್ರಶ್ನೆಪತ್ರಿಕೆಯಲ್ಲಿರುವ ಪ್ರಶ್ನೆಗಳ ಮೇಲೊಮ್ಮೆ ಸಂಪೂರ್ಣವಾಗಿ ಕಣ್ಣಾಡಿಸಿ. ಯಾವ ಮಾದರಿಯ ಪ್ರಶ್ನೆಗಳಿಗೆ ಎಷ್ಟು ಉತ್ತರಿಸಬೇಕು. ಮೊದಲು ಉತ್ತರಿಸಬೇಕಾದ ಪ್ರಶ್ನೆ ಯಾವುದು. ನಿಮಗೆ ಕಠಿಣವೆನಿಸುವ, ಉತ್ತರ ಗೊತ್ತಿರದ ಪ್ರಶ್ನೆ ಯಾವುದು. ಕಡ್ಡಾಯವಾಗಿ ಉತ್ತರಿಸಲೇಬೇಕಾದ ಪ್ರಶ್ನೆಗಳಿವೆಯೇ. ಯಾವ ಪ್ರಶ್ನೆಗೆ ಎಷ್ಟು ವೇಳೆ ವ್ಯಯಿಸಬೇಕು..? ಇದೆಲ್ಲರ ಕುರಿತು ಮನಸ್ಸಿನಲ್ಲಿಯೇ ಯೋಜನೆ ರೂಪಿಸಿಕೊಳ್ಳಿ. ನಂತರ ಉತ್ತರ ಬರೆಯಲು ಆರಂಭಿಸಿ.

ವೇಳೆಯ ನಿರ್ವಹಣೆ ಹೀಗಿರಲಿ
ಪರೀಕ್ಷಾ ಅವಧಿ ಎಷ್ಟಿದೆ ಎಂಬುದನ್ನು ಅರಿತು ಅದಕ್ಕೆ ಅನುಗುಣವಾಗಿ ವೇಳೆಯ ಹಂಚಿಕೆ ಹಾಗೂ ನಿರ್ವಹಣೆ ಮಾಡಿ. ಜತೆಯಲ್ಲಿ ಸ್ಟಾಫ್ ವಾಚ್ ಅಥವಾ ಗಡಿಯಾರ ಇದ್ದರೆ ಒಳಿತು. ನೀವು ಬರೆಯುವ ಪರೀಕ್ಷೆ 100 ಅಂಕದ್ದಾಗಿದ್ದು, 3 ಗಂಟೆಯ ಅವಧಿಯನ್ನು ಹೊಂದಿದ್ದರೆ ಒಂದು ಅಂಕಕ್ಕೆ ಹೆಚ್ಚು– ಕಡಿಮೆ 1.5 ನಿಮಿಷ ಅವಧಿ ವ್ಯಯಿಸಿ. ಇದರಿಂದ ಒಟ್ಟಾರೆ 100 ಅಂಕಕ್ಕೆ 150 ನಿಮಿಷ ವ್ಯಯಿಸಿದಂತಾಗುತ್ತದೆ.

ನಿಗದಿಪಡಿಸಿರುವ 180 ನಿಮಿಷಗಳಲ್ಲಿ 30 ನಿಮಿಷ ಉಳಿದಂತಾಗುತ್ತದೆ. ಈ 30 ನಿಮಿಷದಲ್ಲಿ 5 ನಿಮಿಷದಲ್ಲಿ ಪ್ರಶ್ನೆಪತ್ರಿಕೆ ಹಾಗೂ ಉತ್ತರಪತ್ರಿಕೆಯಲ್ಲಿ ಅಗತ್ಯವಿರುವ ಮಾಹಿತಿ ಭರ್ತಿ ಮಾಡಿ. 3 ನಿಮಿಷದಲ್ಲಿ ಸಲಹೆ– ಸೂಚನೆಗಳೇನಾದರೂ ಇದ್ದರೆ ಓದಿಕೊಳ್ಳಿ. 7 ನಿಮಿಷಗಳನ್ನು ಪ್ರಶ್ನೆಗಳ ಪರಾಮರ್ಶೆಗೆ ಬಳಸಿಕೊಳ್ಳಿ. ಪ್ರಬಂಧ ಮಾದರಿಯ ಪ್ರಶ್ನೆಗಳಿಗೆ ಹೆಚ್ಚು ವೇಳೆ ಅಗತ್ಯ ಇರುವುದರಿಂದ ಅವುಗಳಿಗಾಗಿ 10 ನಿಮಿಷಗಳನ್ನು ಹೆಚ್ಚುವರಿಯಾಗಿ ವ್ಯಯಿಸಿ. ಇನ್ನುಳಿದ 5 ನಿಮಿಷ ಕೊನೆಯಲ್ಲಿ ಉತ್ತರಗಳನ್ನು ಪರಿಶೀಲಿಸಲು, ಕೊನೆಯ ಕ್ಷಣದ ತಿದ್ದುಪಡಿ ಮಾಡಲು ಬಳಸಿ.

*******
ಉತ್ತರಗಳ ನಿರೂಪಣೆ ಹೀಗಿರಲಿ
* ಉತ್ತರ ಪತ್ರಿಕೆಯಲ್ಲಿ ಅಗತ್ಯವಿದ್ದರೆ, ‘ಮಾರ್ಜಿನ್ ಪ್ಲೇಸ್’ ಬಿಟ್ಟುಕೊಳ್ಳಿ.

* ಆದ್ಯತೆಯ ಮೇರೆಗೆ ಸುಲಭ ಪ್ರಶ್ನೆಗಳಿಂದ ಉತ್ತರಿಸಲು ಆರಂಭಿಸಿ. ಆಯ್ದುಕೊಂಡ ಪ್ರಶ್ನೆಯ ಕ್ರಮಾಂಕವನ್ನು ‘ಮಾರ್ಜಿನ್ ಪ್ಲೇಸ್’ನಲ್ಲಿ ಸ್ಪಷ್ಟವಾಗಿ ನಮೂದಿಸಿ.

* ಫಸ್ಟ್ ಇಂಪ್ರೆಶನ್, ಬೆಸ್ಟ್ ಇಂಪ್ರೆಶನ್’ ಎಂಬುದನ್ನು ಮರೆಯದಿರಿ. ಆರಂಭದ ಉತ್ತರಗಳನ್ನು ಗೊಂದಲಗಳಿಲ್ಲದೆ, ಸ್ಪಷ್ಟವಾಗಿ ಬರೆಯಿರಿ.
* ವಸ್ತುನಿಷ್ಠ ಮಾದರಿಯ ಒಂದು ಶಬ್ದದ ಉತ್ತರ, ಒಂದು ವಾಕ್ಯದ ಉತ್ತರ, ಸಂಕ್ಷಿಪ್ತ ಉತ್ತರ, ವಿವರವಾದ ಉತ್ತರ ಹೀಗೆ... ಅಂಕಕ್ಕೆ ಅನುಗುಣವಾಗಿ ಅಗತ್ಯ ಇರುವಷ್ಟು ಮಾತ್ರ ಉತ್ತರ ಬರೆಯಿರಿ.

* ಬರಹದಲ್ಲಿ ಕಾಗುಣಿತ ಹಾಗೂ ವ್ಯಾಕರಣ ದೋಷಗಳನ್ನು ಆದಷ್ಟು ತಪ್ಪಿಸಿ.

* ಉತ್ತರಗಳಲ್ಲಿನ ವಾಕ್ಯಗಳು ಆದಷ್ಟು ಚಿಕ್ಕದಾಗಿರಲಿ. ಅತಿ ಮುಖ್ಯವಾದ ಅಂಶಗಳನ್ನು ‘ಅಂಡರ್‌ಲೈನ್’ ಮಾಡಿ, ಪ್ರತಿ ಉತ್ತರದ ನಂತರ ಒಂದು ಸಾಲು ಬಿಡಿ.

* ಕೈಬರಹ ಸ್ಪಷ್ಟವಾಗಿರಲಿ, ಅತಿ ಚಿಕ್ಕ ಅಥವಾ ದೊಡ್ಡ ಗಾತ್ರದ ಅಕ್ಷರಗಳು ಬೇಡ. ಅಕ್ಷರಗಳು ಸುಂದರವಾಗಿರಲಿ. ಚಿತ್ತುಗಳಾಗದಂತೆ ಗಮನವಹಿಸಿ.

* ಪ್ರಬಂಧ ಮಾದರಿಯ ಉತ್ತರಗಳಲ್ಲಿ ಸೈಡ್ ಹೆಡ್ಡಿಂಗ್, ಪ್ಯಾರಾಗ್ರಾಫ್‌ಗಳೂ ಇರಲಿ.

*  ಕಠಿಣವೆನಿಸುವ ಅಥವಾ ಉತ್ತರ ಗೊತ್ತಿರದ ಪ್ರಶ್ನೆಗಳನ್ನು ಕೊನೆಯಲ್ಲಿ ನಿಭಾಯಿಸಿ.

* ಸಾಧ್ಯವಾದಷ್ಟು ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿ, ಕಡ್ಡಾಯ ಪ್ರಶ್ನೆಗಳಿಗೆ ಉತ್ತರಿಸಲು ಮರೆಯದಿರಿ. ಸಮಯ ಸಾಲದೇ ಹೋದರೆ, ಕೊನೆಯ ಪ್ರಶ್ನೆಗಳಿಗೆ ಸಂಬಂಧಿಸಿ ಮುಖ್ಯಾಂಶಗಳನ್ನಾದರೂ ಬರೆಯಿರಿ.

* ಯಾವುದೇ ಕಾರಣಕ್ಕೂ ‘ನನ್ನನ್ನು ಪಾಸು ಮಾಡಿ, ಪ್ಲೀಸ್ 35 ಅಂಕ ನೀಡಿ...’ ಎಂದೆಲ್ಲ ಉತ್ತರ ಪತ್ರಿಕೆಯಲ್ಲಿ ಬರೆಯಬೇಡಿ. ಉತ್ತರ ಪತ್ರಿಕೆಯಲ್ಲಿ ದುಡ್ಡು ಇಡಬೇಡಿ!

******
ಇತರ ಉಪಯುಕ್ತ ಸಲಹೆಗಳು
* ಪರೀಕ್ಷಾ ಪೂರ್ವದಲ್ಲಿ ಮೇಲ್ವಿಚಾರಕರು ನೀಡುವ ಸಲಹೆ– ಸೂಚನೆಗಳನ್ನು ಗಮನವಿಟ್ಟು ಕೇಳಿ. ಅಲ್ಲದೆ, ಪ್ರಶ್ನೆಪತ್ರಿಕೆ, ಉತ್ತರಪತ್ರಿಕೆ ಕೈಸೇರಿದ ನಂತರ ಅವುಗಳಲ್ಲಿ ನಮೂದಿಸಿರುವ ಸೂಚನೆಗಳನ್ನು ಓದಿಕೊಳ್ಳಿ ಹಾಗೂ ತಪ್ಪದೇ ಪಾಲಿಸಿ.

* ಯಾವುದೇ ಕಾರಣಕ್ಕೂ ಪರೀಕ್ಷಾ ಕೊಠಡಿಯಲ್ಲಿ ಮೇಲ್ವಿಚಾರಕರೊಂದಿಗೆ, ಇತರ ಪರೀಕ್ಷಾರ್ಥಿಗಳೊಂದಿಗೆ, ಮತ್ತಿತರ ಪರೀಕ್ಷಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಬೇಡಿ.

* ಯಾವುದೇ ಕಾರಣಕ್ಕೂ, ಯಾವುದೇ ವಿಧದಲ್ಲೂ ನಕಲು ಮಾಡಬೇಡಿ. ಬೇರೆ ಪರೀಕ್ಷಾರ್ಥಿಗಳನ್ನು ಉತ್ತರ ಹೇಳುವಂತೆ ಅಥವಾ ತೋರಿಸುವಂತೆ ಪೀಡಿಸಬೇಡಿ.

* ಪರೀಕ್ಷೆಯ ಮಧ್ಯದಲ್ಲಿ ಉಳಿದ ಪರೀಕ್ಷಾರ್ಥಿಗಳತ್ತ ಗಮನಹರಿಸಬೇಡಿ. ಅಗತ್ಯವಿದ್ದರೆ, ಬರವಣಿಗೆಯನ್ನು ಒಂದು ಕ್ಷಣ ನಿಲ್ಲಿಸಿ, ನೀರು ಕುಡಿಯಿರಿ... ಕ್ಷಣದ ವಿರಾಮ ಪಡೆದು ಬರಹ ಮುಂದುವರಿಸಿ.

* ಹೆಚ್ಚುವರಿ ಶೀಟ್ಸ್‌ (ಸಪ್ಲಿಮೆಂಟ್) ತೆಗೆದುಕೊಂಡಿದ್ದರೆ, ಅವುಗಳನ್ನು ಸರಿಯಾಗಿ ದಾರದಿಂದ ಕಟ್ಟಿ ಅಥವಾ ಸ್ಟೆಪಲ್ ಮಾಡಿ ಕೊಠಡಿ ಮೇಲ್ವಿಚಾರಕರಿಗೆ ಹಿಂದುರಿಗಿಸಿ.

*****
ಪರೀಕ್ಷೆಯ ನಂತರ
ಈ ಪರೀಕ್ಷೆಯಲ್ಲಿ ಆದ ತಪ್ಪುಗಳ ಕುರಿತು ಸ್ನೇಹಿತರೊಡನೆ ಚರ್ಚಿಸದಿರಿ. ನಿಮ್ಮಷ್ಟಕ್ಕೆ ನೀವೇ ಅಂತರಾವಲೋಕನ ಮಾಡಿಕೊಂಡು ಮುಂದಿನ ಪರೀಕ್ಷೆಯಲ್ಲಿ ತಪ್ಪುಗಳಾಗದಂತೆ ಎಚ್ಚರವಹಿಸಿ. ‘ಇಂದು ಇಂದಿಗೆ’ ಎಂಬ ಮಾತಿನಂತೆ ಮುಗಿದದ್ದು ಮುಗಿಯಿತು... ಇಂದಿನದನ್ನು ಮರೆತು ನಾಳಿನ ವಿಷಯದತ್ತ ಗಮನಹರಿಸಿ, ಮತ್ತೆ ಚೆನ್ನಾಗಿ ಪೂರ್ವಸಿದ್ಧತೆ ಮಾಡಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT