ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಮಸ್‌ ಕಪ್‌ ಬ್ಯಾಡ್ಮಿಂಟನ್‌: ಪ್ರಶಸ್ತಿ ಉಳಿಸಿಕೊಳ್ಳುವ ವಿಶ್ವಾಸದಲ್ಲಿ ಭಾರತ

ಥಾಮಸ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿ ಇಂದಿನಿಂದ
Published 26 ಏಪ್ರಿಲ್ 2024, 22:12 IST
Last Updated 26 ಏಪ್ರಿಲ್ 2024, 22:12 IST
ಅಕ್ಷರ ಗಾತ್ರ

ಚೆಂಗ್ಡು, ಚೀನಾ: ಅನುಭವಿ ಆಟಗಾರರನ್ನು ಒಳಗೊಂಡ ಭಾರತ ಪುರುಷರ ತಂಡವು ಶನಿವಾರ ಇಲ್ಲಿ ಆರಂಭವಾಗುವ ಥಾಮಸ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಭಿಯಾನ ಆರಂಭಿಸಲಿದೆ. ಆದರೆ, ಮಹಿಳೆಯರ ತಂಡವು ಪಿ.ವಿ. ಸಿಂಧು ಸೇರಿದಂತೆ ಅನುಭವಿ ಆಟಗಾರ್ತಿಯರ ಅನುಪಸ್ಥಿತಿಯಲ್ಲಿ ಉಬರ್ ಕಪ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದೆ.

2022ರಲ್ಲಿ ಭಾರತ ಪುರುಷರ ತಂಡವು ‘ವಿಶ್ವ ಚಾಂಪಿಯನ್‌ಷಿಪ್‌’ ಎಂದು ಪರಿಗಣಿಸಲ್ಪಟ್ಟ ‌ಥಾಮಸ್ ಕಪ್ ಕಿರೀಟವನ್ನು ಮೊದಲ ಬಾರಿಗೆ ಗೆದ್ದಿತ್ತು. ಇದೀಗ ಚೀನಾದ ಚೆಂಗ್ಡುನಲ್ಲಿ 33ನೇ ಆವೃತ್ತಿ ನಡೆಯುತ್ತಿದ್ದು, ಅಲ್ಲೂ ಭಾರತ ತಂಡವು ಪರಾಕ್ರಮ ಮುಂದುವರಿಸುವ ಛಲದಲ್ಲಿದೆ.

ಎರಡು ವರ್ಷದ ಹಿಂದೆ ಬ್ಯಾಂಕಾಂಕ್‌ನಲ್ಲಿ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ್ದ ಭಾರತ ತಂಡದಲ್ಲಿದ್ದ ಆಟಗಾರರೇ ಈ ಬಾರಿಯೂ ತಂಡದಲ್ಲಿದ್ದಾರೆ. ಭಾರತವು ಕಳೆದ ಬಾರಿಯ ರನ್ನರ್ಸ್‌ ಅಪ್‌ ಇಂಡೊನೇಷ್ಯಾ, ಥಾಯ್ಲೆಂಡ್‌ ಮತ್ತು ಇಂಗ್ಲೆಂಡ್‌ ತಂಡಗಳೊಂದಿಗೆ ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಹಾಲಿ ವಿಶ್ವ ಚಾಂಪಿಯನ್ ಕುನ್ಲಾವುಟ್‌ ವಿಟಿಡ್‌ಸರ್ನ್‌ ಮತ್ತು ಪನಿಚ್ಚಾಫೋನ್ ತೀರರತ್ಸಕುಲ್ ಅವರನ್ನು ಒಳಗೊಂಡ ಥಾಯ್ಲೆಂಡ್‌ ವಿರುದ್ಧ ಭಾರತವು ಅಭಿಯಾನ ಆರಂಭಿಸಲಿದೆ.

ಹಿಂದಿನ ಆವೃತ್ತಿಯ ಫೈನಲ್‌ನಲ್ಲಿ ಭಾರತವು 3–0 ಯಿಂದ 14 ಬಾರಿಯ ಚಾಂಪಿಯನ್‌ ಇಂಡೊನೇಷ್ಯಾ ತಂಡವನ್ನು ಮಣಿಸಿತ್ತು. ಮೂರನೇ ಶ್ರೇಯಾಂಕದ ಇಂಡೊನೇಷ್ಯಾ ತಂಡದಲ್ಲಿ ಈ ಬಾರಿಯೂ ಅನುಭವಿ ಆಟಗಾರರಿದ್ದಾರೆ. ಮಾರ್ಚ್‌ನಲ್ಲಿ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದ ಸಿಂಗಲ್ಸ್‌ ಆಟಗಾರರಾದ ಜೊನಾಥನ್ ಕ್ರಿಸ್ಟಿ ಮತ್ತು ಆಂಥೋನಿ ಗಿಂಟಿಂಗ್, ವಿಶ್ವದ ಏಳನೇ ರ‍್ಯಾಂಕ್‌ನ ಮೊಹಮ್ಮದ್ ರಿಯಾನ್ ಅರ್ಡಿಯಾಂಟೊ ಮತ್ತು ಫಜರ್ ಅಲ್ಫಿಯಾನ್ ತಂಡದಲ್ಲಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 9ನೇ ಸ್ಥಾನದಲ್ಲಿರುವ ಎಚ್‌.ಎಸ್‌. ಪ್ರಣಯ್‌ ಅವರು ಭಾರತ ತಂಡಕ್ಕೆ ಉತ್ತಮ ಆರಂಭ ನೀಡುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಫ್ರೆಂಚ್ ಓಪನ್ ಮತ್ತು ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ಗಳಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ವಿಶ್ವದ 13ನೇ ರ‍್ಯಾಂಕ್‌ನ ಲಕ್ಷ್ಯ ಸೇನ್‌ ಅವರ ಮೇಲೂ ನಿರೀಕ್ಷೆಯ ಭಾರ ಹೆಚ್ಚಿದೆ. 2022ರ ಆವೃತ್ತಿಯಲ್ಲಿ ಎಲ್ಲಾ ಆರು ಪಂದ್ಯಗಳನ್ನು ಗೆದ್ದಿದ್ದ ಕಿದಂಬಿ ಶ್ರೀಕಾಂತ್ ಈ ಬಾರಿ ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಪ್ರಿಯಾಂಶು ರಾಜಾವತ್‌ ಮತ್ತು ಕಿರಣ್ ಜಾರ್ಜ್‌ ಅವರೂ ತಂಡದಲ್ಲಿದ್ದಾರೆ.

ಅಮೋಘ ಲಯದಲ್ಲಿರುವ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರು ಡಬಲ್ಸ್‌ನಲ್ಲಿ ಭಾರತದ ಅಭಿಯಾನದ ಮುಂಚೂಣಿಯಲ್ಲಿರುತ್ತಾರೆ. ಎರಡನೇ ಡಬಲ್ಸ್‌ ಜೋಡಿ ಧ್ರುವ್ ಕಪಿಲ ಮತ್ತು ಎಂ.ಆರ್. ಅರ್ಜುನ್ ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದೆ.

ಅಶ್ಮಿತಾ ಚಾಲಿಹಾ
ಅಶ್ಮಿತಾ ಚಾಲಿಹಾ

ಉಬರ್‌ ಕಪ್‌: ಅಶ್ಮಿಕಾ ಸಾರಥ್ಯ

ಉಬರ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಮಹಿಳಾ ತಂಡವನ್ನು ಅಶ್ಮಿತಾ ಚಾಲಿಹಾ ಮುನ್ನಡೆಸಲಿದ್ದಾರೆ. ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ ತಂಡವು ಅನುಭವಿ ಆಟಗಾರರನ್ನು ಹಿಂದಿರುವ ಕೆನಡಾ ತಂಡದ ವಿರುದ್ಧ ತಮ್ಮ ಅಭಿಯಾನ ಆರಂಭಿಸಲಿದೆ. ಹಲವು ಬಾರಿ ಪ್ರಶಸ್ತಿ ಗೆದ್ದಿರುವ ಆತಿಥೇಯ ಚೀನಾ ಮತ್ತು ಸಿಂಗಪುರ ತಂಡಗಳೂ ‘ಎ’ ಗುಂಪಿನಲ್ಲಿದ್ದು ಭಾರತ ತಂಡಕ್ಕೆ ಗುಂಪು ಹಂತವನ್ನು ದಾಟುವುದೇ ದೊಡ್ಡ ಸವಾಲಾಗಿದೆ. 1957 2014 ಮತ್ತು 2016ರಲ್ಲಿ ಭಾರತ ತಂಡವು ಸೆಮಿಫೈನಲ್ ಪ್ರವೇಶಿಸಿದ್ದು ಈವರೆಗಿನ ಉತ್ತಮ ಸಾಧನೆಯಾಗಿದೆ. ಅಶ್ಮಿತಾ ಅವರೊಂದಿಗೆ ಚೊಚ್ಚಲ ಏಷ್ಯಾ ಟೀಮ್ ಚಾಂಪಿಯನ್‌ಷಿಪ್‌ ಪ್ರಶಸ್ತಿ ಗೆದ್ದ ಭಾರತ ತಂಡದಲ್ಲಿದ್ದ ರಾಷ್ಟ್ರೀಯ ಚಾಂಪಿಯನ್ ಅನ್ಮೋಲ್ ಖಾರ್ಬ್ ಇಶಾರಾಣಿ ಬರೂವಾ ಮತ್ತು 15 ವರ್ಷದ ತನ್ವಿ ಶರ್ಮಾ ಸಿಂಗಲ್ಸ್‌ನಲ್ಲಿ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ಡಬಲ್ಸ್‌ನಲ್ಲಿ ಟ್ರೀಸಾ ಜೋಳಿ–ಗಾಯತ್ರಿ ಗೋಪಿಚಂದ್ ಮತ್ತು ಅಶ್ವಿನಿ ಪೊನ್ನಪ್ಪ–ತನಿಶಾ ಕ್ರಾಸ್ಟೊ ಅವರ ಅನುಪಸ್ಥಿತಿಯಲ್ಲಿ ಶ್ರುತಿ ಮಿಶ್ರಾ ಪ್ರಿಯಾ ಕೊಂಜೆಂಗ್‌ಬಾಮ್ ಸಿಮ್ರಾನ್ ಸಿಂಘಿ ರಿತಿಕಾ ಥಾಕರ್ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT