ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2022ರ ಹಿನ್ನೋಟ | ‘ಪೂರ್ವ’ ಮುಳುಗಿದ್ದ ನಗರದಲ್ಲಿ ಹಗರಣಗಳ ನೋಟ, ದುರವಸ್ಥೆಯ ಮೇಲಾಟ

Last Updated 31 ಡಿಸೆಂಬರ್ 2022, 0:00 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಆತಂಕದ ಛಾಯೆಯಲ್ಲಿಯೇ ಆರಂಭವಾದ 2022, ಮತ್ತೆ ಸಾಂಕ್ರಾಮಿಕ ರೋಗ ಹರಡುವ ಭೀತಿಯನ್ನು ರಾಜಧಾನಿಯಲ್ಲಿ ಹರಡಿ ವರ್ಷ ಮುಕ್ತಾಯಗೊಳ್ಳುತ್ತಿದೆ. ವರ್ಷದ ಆರಂಭದಿಂದ ಅಂತ್ಯದವರೆಗೂ ಮಳೆಗಾಲವೇ ಆಗಿದ್ದು ಈ ಬಾರಿಯ ವಿಶೇಷ. ಈ ಜಲಕಂಟಕ ನಗರದ ಹಲವು ಹುಳುಕುಗಳನ್ನು ಎತ್ತಿತೋರಿಸಿ, ‘ಪೂರ್ವ’ ಭಾಗವೇ ಮುಳುಗಿಹೋಗಿತ್ತು. ಕೋವಿಡ್‌ ನಂತರ ಹೆಚ್ಚು ಚಟುವಟಿಕೆ ಕಂಡ ವರ್ಷದಲ್ಲಿ ನಗರದ ರಸ್ತೆ, ಸಂಚಾರ ದಟ್ಟಣೆಯ ಸಮಸ್ಯೆಗಳು ಹೆಚ್ಚು ಕಾಡಿದವು. ರಸ್ತೆಯಲ್ಲಿ ಉಂಟಾದ ಗುಂಡಿಗಳಿಂದ ಸಂಭವಿಸಿದ ಅಪಘಾತದಿಂದ ಐವರು ಪ್ರಾಣ ಕಳೆದುಕೊಂಡರು. ಹೊಸದಾಗಿ ನಿವೇಶನಗಳನ್ನು ವಿತರಿಸದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬದಲಿ ನಿವೇಶನ ನೀಡುವ ಅಕ್ರಮದಿಂದ ಆಯುಕ್ತರು ಸೇರಿದಂತೆ ಹಲವು ಅಧಿಕಾರಿಗಳ ವರ್ಗಾವಣೆ ಕಂಡಿತು. ಒಳಚರಂಡಿ ನೀರನ್ನು ನಿರ್ವಹಣೆ ಮಾಡುವಲ್ಲಿ ಸಾಧನೆಯೇನೂ ಮಾಡದ ಬಿಡಬ್ಲ್ಯುಎಸ್‌ಎಸ್‌ಬಿ, ಗ್ರಾಹಕರು ಪಾವತಿಸಿದ ನಗದು ಜಲಮಂಡಳಿ ಖಾತೆಗೆ ಹೋಗದೆ ಗುತ್ತಿಗೆ ನೌಕರರು ಮಾಡಿಕೊಂಡ ಹಣ ದುರ್ಬಳಕೆಯ ಪ್ರಕರಣ ಹೆಚ್ಚು ಗಮನಸೆಳೆಯಿತು.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ವರ್ಷದ ಆರಂಭದಿಂದಲೂ ಚುನಾವಣೆ ಈಗ ನಡೆಯಬಹುದು ಆಗ ನಡೆಯಬಹುದು ಎಂಬ ಭಾವನೆ ಅಂತ್ಯದವರೆಗೂ ಇತ್ತು. ಆದರೂ ಅದು ಈಡೇರಲಿಲ್ಲ. 243 ವಾರ್ಡ್‌ ನಿಗದಿ ಆಯಿತು. ಆದರೂ ಸುಪ್ರೀಂ ಕೋರ್ಟ್‌, ಹೈಕೋರ್ಟ್‌ ಮೆಟ್ಟಲೇರಿದ ವಾರ್ಡ್‌ ಮೀಸಲಾತಿ ವಿಷಯವು ವರ್ಷಾಂತ್ಯಕ್ಕೂ ಬಗೆಹರಿಯಲಿಲ್ಲ.

ಒತ್ತು‘ವರಿ’

ರಸ್ತೆ, ಚರಂಡಿಯಂತಹ ಮೂಲಸೌಕರ್ಯಗಳನ್ನು ನೀಡಬೇಕಾದ ಬಿಬಿಎಂಪಿ, ವರ್ಷದ ಎಲ್ಲ ತಿಂಗಳೂ ಸುರಿದ ಮಳೆಯ ನೆಪವೊಡ್ಡಿ ರಸ್ತೆಯ ಗುಂಡಿಗಳನ್ನೇ ಮುಚ್ಚಲಿಲ್ಲ. ನಗರದಲ್ಲಿ 30 ಸಾವಿರ ಗುಂಡಿಗಳಿವೆ ಎಂದು ಅಧಿಕೃತವಾಗಿ ಬಿಬಿಎಂಪಿ ಒಪ್ಪಿಕೊಂಡಿತು. ಡಿಸೆಂಬರ್‌ನಲ್ಲಿ ಮಾತ್ರ ರಸ್ತೆ ಗುಂಡಿಗಳು ಮುಚ್ಚಿದಂತಾದವು. ಕೆಲವು ರಸ್ತೆಗಳು ಡಾಂಬರೂ ಕಂಡವು. ಇದರಿಂದ ಸಮಸ್ಯೆಯ ತೀವ್ರತೆ ಕಡಿಮೆಯಾಯಿತೆ ಹೊರತು, ನಿವಾರಣೆಯಾಗಲಿಲ್ಲ.ಪ್ರಧಾನಮಂತ್ರಿ ನರೇಂದ್ರ ಮೋದಿ ಜೂನ್‌ ಹಾಗೂ ನವೆಂಬರ್‌ನಲ್ಲಿ ನಗರಕ್ಕೆ ಬಂದಾಗ ರಸ್ತೆಗಳು ರಾತ್ರೋರಾತ್ರಿ ಡಾಂಬರು ಕಂಡಿದ್ದವು. ಕೊಮ್ಮಘಟ್ಟ ರಸ್ತೆ 24 ಗಂಟೆಯಲ್ಲೇ ಕುಸಿದು, ಪ್ರಧಾನಿ ಕಚೇರಿಯೂ ಇದರ ಬಗ್ಗೆ ವರದಿ ಕೇಳಿತ್ತು.

ಜುಲೈನಲ್ಲಿ ಸುರಿದ ದಾಖಲೆಯ ಮಳೆ ಬೆಂಗಳೂರು ಪೂರ್ವ ಭಾಗವನ್ನು ಮುಳುಗಿಸಿತು. ಐಟಿ–ಬಿಟಿ ಕಂಪನಿಗಳು ಸೇರಿದಂತೆ ಪ್ರತಿಷ್ಠಿತ ಬಡಾವಣೆಗಳು ರಾಜಕಾಲುವೆಗಳನ್ನು ಒತ್ತುವರಿ ಮಾಡಿದ್ದೇ ಈ ಮುಳುಗಡೆಗೆ ಕಾರಣ ಎಂಬುದು ಸಾಬೀತಾದರೂ ಅನ್ನು ನಿವಾರಿಸುವಲ್ಲಿ ಬಿಬಿಎಂಪಿ ಹಿನ್ನಡೆಯೇ ಕಂಡಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವರು, ವಿರೋಧ ಪಕ್ಷ ನಾಯಕರು ರಸ್ತೆಗಳಲ್ಲೇ ಬೋಟ್‌ನಲ್ಲಿ ಸಂಚರಿಸಿ ಸಮಸ್ಯೆಯ ತೀವ್ರತೆ ಅರಿತುಕೊಂಡರು. ಎಲ್ಲರೂ ರಾಜಕಾಲುವೆ ಒತ್ತುವರಿ ತೆರವು ಮಾಡಬೇಕೆಂದು ಒತ್ತಾಯಿಸಿದರು. ಡಿಸೆಂಬರ್‌ ಅಂತ್ಯದಲ್ಲಿ ಒಂದೆರಡು ದಿನ ತೆರವು ಕಾರ್ಯಾಚರಣೆ ನಡೆಯಿಷ್ಟೇ. ಸಮಸ್ಯೆ ಈಗಲೂ ಹಾಗೆಯೇ ಉಳಿದುಕೊಂಡಿದೆ.

ಅಮೃತ ನಗರೋತ್ಥಾನ ಯೋಜನೆಯಡಿ ಬಿಬಿಎಂಪಿಗೆ ಬಂದ ₹6 ಸಾವಿರ ಕೋಟಿ ಮೌಲ್ಯದ ಯೋಜನೆಗಳು ಒಂದು ತಿಂಗಳಲ್ಲಿ ಕಾರ್ಯಗತವಾಗಬೇಕಿದ್ದರೂ, ಆರು ತಿಂಗಳು ಕಳೆದರೂ ಟೆಂಡರ್‌ ಹಂತಕ್ಕೂ ಕೆಲವು ಯೋಜನೆ ಹೋಗಿಲ್ಲ. ಸುಮಾರು ₹2 ಸಾವಿರ ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಹಲವು ಯೋಜನೆಗಳ ಕಾರ್ಯಾದೇಶವಾಗಿದ್ದರೂ ಕಾಮಗಾರಿ ಆರಂಭವಾಗಿಲ್ಲ. ಬಹುತೇಕ ಯೋಜನೆಗಳು ಟೆಂಡರ್‌ ಹಂತದಲ್ಲಿಯೇ ಉಳಿದುಕೊಂಡಿವೆ. ರ‍್ಯಾಪಿಡ್‌ ರಸ್ತೆ ಎಂಬ ವೇಗದ ರಸ್ತೆ ನಿರ್ಮಾಣ ಪ್ರಾಯೋಗಿಕವಾಗಿ ಜಾರಿಯಾದರೂ, ಅತಿಹೆಚ್ಚು ವೆಚ್ಚದಿಂದ ಅದಕ್ಕೆ ತಡೆಯಾಯಿತು. ಶಿವಾನಂದ ವೃತ್ತದ ಮೇಲ್ಸೇತುವೆ ನಾಲ್ಕು ವರ್ಷಗಳ ನಂತರ ಕಾಮಗಾರಿ ಮುಗಿದು ಸಂಚಾರಕ್ಕೆ ಮುಕ್ತವಾಯಿತು. ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ ಮೇಲ್ಸೇತುವೆ ಕಾಮಗಾರಿ ಈ ವರ್ಷವೂ ಮುಗಿಯಲಿಲ್ಲ. ಜೆ.ಸಿ. ರಸ್ತೆ ಮೇಲ್ಸೇತುವೆ ವಿಷಯ ಮತ್ತೆ ಮುನ್ನೆಲೆಗೆ ಬಂದು ತಾಂತ್ರಿಕ ಸಲಹಾ ಸಮಿತಿಯ ಸಮ್ಮತಿ ಪಡೆದದ್ದೇ ಸಾಧನೆಯಾಯಿತು.

ಚಿಲುಮೆ ಹಗರಣ

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ‘ಚಿಲುಮೆ ಸಂಸ್ಥೆಯ’ ದತ್ತಾಂಶ ಕಳವು ಪ್ರಕರಣ ರಾಜ್ಯ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲಿ ಪ್ರಖ್ಯಾತಿ ಪಡೆಯಿತು. ಇಬ್ಬರು ಐಎಎಸ್‌ ಅಧಿಕಾರಿಗಳಾದ ನಗರ ಜಿಲ್ಲಾಧಿಕಾರಿ ಶ್ರೀನಿವಾಸ್‌ ಹಾಗೂ ಬಿಬಿಎಂಪಿಯ ಆಡಳಿತ ವಿಶೇಷ ಅಧಿಕಾರಿ ರಂಗಪ್ಪ ಅವರನ್ನೇ ಕೇಂದ್ರ ಚುನಾವಣೆ ಆಯೋಗ ಅಮಾನತುಗೊಳಿಸಿತು. ಹೈಕೋರ್ಟ್‌ ಅದನ್ನು ರದ್ದುಗೊಳಿಸಿತು. ಬಿಬಿಎಂಪಿ ಆಡಳಿತ ವ್ಯವಸ್ಥೆಯಲ್ಲಿ ಅತಿ ಹೆಚ್ಚು ಸದ್ದು ಮಾಡಿದ್ದ ವಿಷಯವೇ ಇದಾಗಿ, ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಕೆಲ ದಿನ ಆಸ್ಪತ್ರೆ ಸೇರಿಕೊಂಡಿದ್ದರು. ‌

ರಸ್ತೆ ಗುಂಡಿ, ಪಾದಚಾರಿ ಮಾರ್ಗ ದುರಸ್ತಿ ಮಾಡದಿದ್ದರೆ ಎಂಜಿನಿಯರ್‌ಗಳ ಮೇಲೆ ಕ್ರಮ ಎಂದು ಮುಖ್ಯ ಆಯುಕ್ತರು ಹಲವು ಬಾರಿ ಈ ವರ್ಷ ಎಚ್ಚರಿಕೆ ನೀಡಿದ್ದರು. ವರ್ಷದ ಅಂತ್ಯದವರೆಗೆ ಯಾರ ಮೇಲೂ ಕ್ರಮ ಆಗಲಿಲ್ಲ. ಕೊನೆಗೆ ತುಷಾರ್‌ ಗಿರಿನಾಥ್‌ ‘ಗುಂಡಿ ಮುಕ್ತರಸ್ತೆ’ ಅಸಾಧ್ಯ ಎಂದು ಘೋಷಿಸಿದರು. ಶುದ್ಧ ಕುಡಿಯುವನೀರಿನ ಘಟಕಗಳ ಸ್ಥಾಪನೆಯಲ್ಲಿ ₹970 ಕೋಟಿ ಭ್ರಷ್ಟಾಚಾರದ ವಿವರಣೆಗೆ ಕೋರಿ ಜಾರಿ ನಿರ್ದೇಶನಾಲಯವು(ಇಡಿ) ಬಿಬಿಎಂಪಿ ಮುಖ್ಯ ಆಯುಕ್ತರಿಗೆ ವರ್ಷಾಂತ್ಯದಲ್ಲಿ ನೋಟಿಸ್ ಜಾರಿ ಮಾಡಿತು.

ದಾಖಲೆ ನೀರು...

ಬೆಂಗಳೂರಿಗೆ ಮೊದಲು ಕುಡಿಯುವ ನೀರು ನೀಡಿದ ಹೆಸರಘಟ್ಟ ಹಾಗೂ ಸಂಸ್ಕರಿತ ನೀರನ್ನು ಪ್ರಥಮವಾಗಿ ನೀಡಿದ ತಿಪ್ಪಗೊಂಡನಹಳ್ಳಿ ಜಲಾಶಯಗಳು ದಶಕಗಳ ನಂತರ ತುಂಬಿತುಳುಕಿದವು. ಮತ್ತೊಂದು ಕಡೆ, ಹೆಸರಘಟ್ಟ ತನ್ನ ಹುಲ್ಲುಗಾವಲು ಉಳಿಸಿಕೊಳ್ಳಲು ಮೀಸಲು ಸಂರಕ್ಷಿತ ಪ್ರದೇಶ ಎಂದು ವನ್ಯಜೀವಿ ಮಂಡಳಿ ಸಭೆ ನಿರ್ಣಯಿಸಿದರೂ ಪ್ರತಿರೋಧ ಉಂಟಾಯಿತು. ಮುಖ್ಯಮಂತ್ರಿಯವರ ಮಧ್ಯಪ್ರವೇಶದಿಂದ ಮತ್ತೊಮ್ಮೆ ಸಮಾಲೋಚನೆಗೆ ಸೂಚಿಸಲಾಗಿದ್ದು, ವಿಷಯ ತಣ್ಣಗಾಗಿದೆ.

ಬದಲಿ... ಬಿಡಿಎ ಪ್ರಾಮುಖ್ಯ!

ಹೊಸ ಬಡಾವಣೆಗಳನ್ನು ನಿರ್ಮಿಸಿ, ಹೊಸ ನಿವೇಶನಗಳನ್ನು ಹಂಚುವ ಪ್ರಕ್ರಿಯೆಯಲ್ಲಿ ಹಿಂದುಳಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬದಲಿ ನಿವೇಶನ ನೀಡಲು ಪ್ರಾಮುಖ್ಯ ನೀಡಿತ್ತು. ಗೃಹ ಸಚಿವ ಅರಗಂ ಜ್ಞಾನೇಂದ್ರ ಅವರಿಗೆ ನೀಡಿದ್ದ ಬದಲಿ ನಿವೇಶನದ ಬಗ್ಗೆ ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿತ್ತು. ಇದರಿಂದಾಗಿಯೇ ಬಿಡಿಎ ಆಯುಕ್ತ ರಾಜೇಶ್‌ ಗೌಡ ಸೇರಿದಂತೆ ಹಲವು ಅಧಿಕಾರಿಗಳು ವರ್ಗಾವಣೆಯೂ ಆದರು. ಅತಿಹೆಚ್ಚು ವಾಹನ ದಟ್ಟಣೆಯ ಜಂಕ್ಷನ್‌ನಲ್ಲಿ ಒಂದಾದ ಹೆಬ್ಬಾಳ ಮೇಲ್ಸೇತುವೆಯ ವಿಸ್ತರಣೆ ಬಿಡಿಎಯ ಪ್ರಮುಖ ಯೋಜನೆಯಾದರೂ ಅದನ್ನು ಕಾರ್ಯಗತಗೊಳಿಸಲಾಗಲಿಲ್ಲ.2,560 ಎಕರೆ ಭೂಮಿಯನ್ನು ಸ್ವಾಧೀನಕೊಳ್ಳಬೇಕಾದ 73 ಕಿ.ಮೀ ಉದ್ದದಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್‌) ನಿರ್ಮಾಣ ಮತ್ತೆ ಮುನ್ನೆಲೆಗೆ ಬಂತಾದರೂ, ಪರಿಸರ ಇಲಾಖೆಯ ಸಮ್ಮತಿ ಸೇರಿದಂತೆ 36 ಸಾವಿರ ಮರಗಳ ನಾಶ ಹಾಗೂ ರೈತರಿಗೆ ಪರಿಹಾರದ ಗೊಂದಲಗಳು ಯೋಜನೆಯನ್ನು ಸ್ಥಗಿತಗೊಳಿಸಿದವು. ಸುಪ್ರೀಂ ಕೋರ್ಟ್‌ ಆದೇಶದಂತೆ ಕೊನೆಗೂ ಶಿವರಾಮ ಕಾರಂತ ಬಡಾವಣೆ ನಿರ್ಮಾಣ ವರ್ಷದ ಅಂತ್ಯದಲ್ಲಿ ಆರಂಭವಾಯಿತು. ಯಲಹಂಕ ವಿಧಾನಸಭಾ ಕ್ಷೇತ್ರದ 17 ಗ್ರಾಮಗಳ 3,546 ಎಕರೆ ಪ್ರದೇಶದಲ್ಲಿ ₹2,600 ಕೋಟಿ ವೆಚ್ಚದಲ್ಲಿಈ ಬಡಾವಣೆ ನಿರ್ಮಾಣವಾಗಲಿದೆ. ಸುಮಾರು 22 ಸಾವಿರ ನಿವೇಶನಗಳನ್ನು 60:40 ಅನುಪಾತದಲ್ಲಿ ರೈತರು ಮತ್ತು ಸಾರ್ವಜನಿಕರಿಗೆ ಹಂಚಿಕೆ ಮಾಡುವ ಗುರಿಯನ್ನು ಬಿಡಿಎ ಹೊಂದಿದೆ.

ಜಲಮಂಡಳಿ: ಹಣ ದುರ್ಬಳಕೆ...

ಬಿಬಿಎಂಪಿ ವ್ಯಾ‍ಪ್ತಿಗೆ ಸೇರಿದ 110 ಹಳ್ಳಿಗಳು ಸೇರಿದಂತೆ ಹೊರವಲಯದ ಬಡಾವಣೆಗಳಿಗೆ ಒಳಚರಂಡಿ ವ್ಯವಸ್ಥೆ ಹಾಗೂ ನೀರಿನ ಸೌಲಭ್ಯ ಒದಗಿಸುವುದು ಸೇರಿದಂತೆ ಕೆರೆಗಳಿಗೆ ಒಳಚರಂಡಿ ನೀರನ್ನು ತಡೆಯುವ ಯೋಜನೆಗಳು ಬಿಡಬ್ಲ್ಯುಎಸ್ಎಸ್‌ಬಿಯಿಂದ ಈ ವರ್ಷ ಅನುಷ್ಠಾನವಾಗಲಿಲ್ಲ. ಆದರೆ, ಗ್ರಾಹಕರು ಪಾವತಿಸಿದ ಕೋಟ್ಯಂತರ ರೂಪಾಯಿಗಳನ್ನು ಗುತ್ತಿಗೆ ನೌಕರರನ್ನು ಮಂಡಳಿಗೆ ಕಟ್ಟದೆ ದುರುಪಯೋಗಪಡಿಸಿಕೊಂಡರು. ಇದನ್ನು ಕಂಡುಹಿಡಿಯಲು ವರ್ಷಗಟ್ಟಲೆ ತೆಗೆದುಕೊಂಡ ಮಂಡಳಿ, ಕೊನೆಗೆ ಅದನ್ನು ಪರಿಶೀಲಿಸಿ, ಪೊಲೀಸ್‌ ಠಾಣೆಗೆ ದೂರು ನೀಡಿತ್ತು. ಈ ಸಂಬಂಧ 9 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ವರ್ಷಾರಂಭದಲ್ಲಿ ಕಾಡಿದ್ದ ಕೋವಿಡ್

ಕೊರೊನಾ ವೈರಾಣುವಿನ ರೂಪಾಂತರಿ ಓಮೈಕ್ರಾನ್ ಪತ್ತೆಯಿಂದ ನಗರದಲ್ಲಿ ಕೋವಿಡ್ ಮೂರನೇ ಅಲೆ ಕಾಣಿಸಿಕೊಂಡಿತು. ಜನವರಿ ತಿಂಗಳಲ್ಲಿ ದಿನವೊಂದಕ್ಕೆ 30 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿ, ಸಕ್ರಿಯ ಪ್ರಕರಣಗಳು 2 ಲಕ್ಷದ ಗಡಿ ದಾಟಿತ್ತು. ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ಕೋವಿಡ್‌ ಚಿಕಿತ್ಸೆಗೆ ನಗರದಲ್ಲಿ 5 ಸಾವಿರಕ್ಕೂ ಅಧಿಕ ಹಾಸಿಗೆಗಳನ್ನು ಗುರುತಿಸಲಾಗಿತ್ತು. ಮೊದಲೆರಡು ಅಲೆಗೆ ಹೋಲಿಸಿದರೇ ಸೋಂಕಿನ ತೀವ್ರತೆ ಕಡಿಮೆ ಇದ್ದಿದ್ದರಿಂದ ಅಷ್ಟಾಗಿ ಸಾವು–ನೋವು ಸಂಭವಿಸಲಿಲ್ಲ.

ಕೋವಿಡ್ ಮೂರನೇ ಅಲೆಯ ಬಳಿಕ (ಮಾರ್ಚ್‌ ನಂತರ), ಕೋವಿಡೇತರ ಚಿಕಿತ್ಸೆಗೆ ಆದ್ಯತೆ ನೀಡಲಾಯಿತು.ಇದರಿಂದಾಗಿ ವೈದ್ಯಕೀಯ ಪ್ರವಾಸೋದ್ಯಮ ಚೇತರಿಸಿಕೊಂಡಿತು. ವಿದೇಶದಿಂದ ರೋಗಿಗಳು ಮತ್ತೆ ಬರಲಾರಂಭಿಸಿದ್ದಾರೆ. ಆಫ್ರಿಕಾ, ಮಧ್ಯಪೂರ್ವ ದೇಶಗಳು, ಬಾಂಗ್ಲಾದೇಶ, ಅಫ್ಗಾನಿಸ್ತಾನ, ಶ್ರೀಲಂಕಾದವರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಆಸ್ಪತ್ರೆಗಳ ಮೂಲಸೌಕರ್ಯ ವೃದ್ಧಿಗೂ ಆದ್ಯತೆ ನೀಡಲಾಯಿತು.

*ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಅಸ್ಥಿಮಜ್ಜೆ (ಬೋನ್‌ ಮ್ಯಾರೊ) ಕಸಿ ಚಿಕಿತ್ಸೆಗೆ ಫೆ.15ರಂದು ಚಾಲನೆ ನೀಡಲಾಯಿತು.

*ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಜಯದೇವಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ50 ಹಾಸಿಗೆಗಳ ಉಪಕೇಂದ್ರ ಹಾಗೂಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ಘಟಕವನ್ನು ಅ.6ರಂದು ಪ್ರಾರಂಭಿಸಲಾಯಿತು.

*ರಾಷ್ಟ್ರೋತ್ಥಾನ ಪರಿಷತ್ ರಾಜರಾಜೇಶ್ವರಿ ನಗರದಲ್ಲಿ ನಿರ್ಮಿಸಿರುವ ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಡಿ.5ರಂದು ಚಾಲನೆ ನೀಡಲಾಯಿತು.

*ವರ್ಷಾಂತ್ಯದ ಕೊನೆಯಲ್ಲಿ ಕೊರೊನಾ ವೈರಾಣುವಿನ ರೂಪಾಂತರಿ ‘ಬಿಎಫ್‌.7’ ಆತಂಕದ ಕಾರಣ ಮುಖಗವಸು ಧರಿಸುವಿಕೆ ಸೇರಿ ಕೆಲ ನಿರ್ಬಂಧಗಳನ್ನು ಸರ್ಕಾರ ವಿಧಿಸಿತು.

ಕಳೆಗಟ್ಟಿದ ಸಾಂಸ್ಕೃತಿಕ ಚಟುವಟಿಕೆ

ನಗರದಲ್ಲಿ ಮಾರ್ಚ್‌ ಬಳಿಕ ಕೋವಿಡ್ ನಿಯಂತ್ರಣಕ್ಕೆ ಬಂದಿದ್ದರಿಂದ ನಿರ್ಬಂಧಗಳನ್ನು ತೆರವುಗೊಳಿಸಿ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಯಿತು. ಇದರಿಂದಾಗಿ ವರ್ಷದ ಮೊದಲಾರ್ಧದ ಬಳಿಕ ಸಂಗೀತ, ನೃತ್ಯ, ನಾಟಕ ಸೇರಿ ವಿವಿಧ ಕಲಾ ಚಟುವಟಿಕೆಗಳು ಗರಿಗೆದರಿದವು.

*ಒಂಬತ್ತು ದಶಕಗಳಿಂದ ವಿವಿಧ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ ಒದಗಿಸಿದ್ದ ಕನ್ನಡ ಸಾಹಿತ್ಯ ಪ‍ರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರವನ್ನು ನವೀಕರಣ ಮಾಡಲಾಯಿತು. ₹ 1.95 ಕೋಟಿ ವೆಚ್ಚದಲ್ಲಿನೆಲಹಾಸು, ಧ್ವನಿ–ಬೆಳಕಿನ ವ್ಯವಸ್ಥೆ, ಆಸನಗಳು, ಹವಾನಿಯಂತ್ರಿತ ವ್ಯವಸ್ಥೆ ಸೇರಿ ಸಭಾಂಗಣದಲ್ಲಿ ಎಲ್ಲವನ್ನೂ ಹೊಸದಾಗಿ ಅಳವಡಿಸಲಾಯಿತು.

*ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅ.28ರಂದು ಕಂಠೀರವ ಕ್ರೀಡಾಂಗಣದಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮ ನಡೆಸಲಾಯಿತು.

*ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿಆರು ಕಾಲು ಅಡಿ ಎತ್ತರದ ಭುವನೇಶ್ವರಿಪ್ರತಿಮೆ ಸ್ಥಾಪಿಸಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನಾವರಣ ಮಾಡಿದರು.

*ಬೆಂಗಳೂರುಸಾಹಿತ್ಯಉತ್ಸವದ 11ನೇ ಆವೃತ್ತಿಯನ್ನು ಡಿ.3 ಮತ್ತು ಡಿ.4ಕ್ಕೆ ಕುಮಾರಕೃಪಾ ರಸ್ತೆಯಲ್ಲಿರುವ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ನಡೆಸಲಾಯಿತು.ಎರಡು ದಿನಗಳ ಉತ್ಸವದಲ್ಲಿ 150ಕ್ಕೂ ಅಧಿಕ ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಲಾಗಿತ್ತು.

300 ಎಲೆಕ್ಟ್ರಿಕ್‌ ಬಸ್‌

ಎಲೆಕ್ಟ್ರಿಕ್‌ ಬಸ್‌ಗಳ ಸಂಚಾರ ಹೆಚ್ಚಾಗಿ 300 ಎಲೆಕ್ಟ್ರಿಕ್ ಬಸ್‌ಗಳು ಬಿಎಂಟಿಸಿಗೆ ಸೇರ್ಪಡೆಗೊಂಡಿದ್ದು, ನಗರದಲ್ಲಿ ಸಂಚರಿಸುತ್ತಿವೆ.ಪ್ರಯಾಣಿಕರು ಎಲ್ಲಾ ರೀತಿಯ ಪಾಸ್‌ಗಳನ್ನು ಆ್ಯಪ್‌ನಲ್ಲಿ ಪಡೆದುಕೊಳ್ಳಲು ಬಿಎಂಟಿಸಿ ಟುಮ್ಯಾಕ್‌ ಆ್ಯಪ್ ಬಿಡುಗಡೆ ಮಾಡಿತು. ನಗದು ರಹಿತ ಮತ್ತು ಕಾಗದ ರಹಿತ ವಹಿವಾಟಿನ ಕಡೆ ಮುಖ ಮಾಡಿರುವ ಬಿಎಂಟಿಸಿ, ಟುಮ್ಯಾಕ್ ಆ್ಯಪ್‌ನಲ್ಲಿ ಡಿಜಿಟಲ್ ಪಾವತಿ ಮೂಲಕವೇ ಪಾಸ್ ಖರೀದಿಸಲು ಅವಕಾಶ ಕಲ್ಪಿಸಿತು. ಪ‍್ರಯಾಣಿಕರನ್ನು ಸೆಳೆಯಲು ಓಲ್ವೊ ಬಸ್‌ಗಳ ಪ್ರಯಾಣ ದರವನ್ನು ಕಡಿಮೆ ಮಾಡಿದ್ದು, ಪ್ರಯಾಣಿಕರ ಸಂಖ್ಯೆ ಈಗ ಹೆಚ್ಚಾಗಿದೆ.

2022ರಲ್ಲಿ ಹೊಸ ಮೆಟ್ರೊ ರೈಲು ಮಾರ್ಗಗಳು ಸಾರ್ವಜನಿಕರಿಗೆ ಸಮರ್ಪಣೆಯಾಗದಿದ್ದರೂ, ಕಾಮಗಾರಿಗಳು ಅಂತಿಮ ಹಂತಕ್ಕೆ ಬಂದಿದ್ದು, ಮೂರು ಹೊಸ ಮಾರ್ಗಗಳು ಕಾರ್ಯಾರಂಭಕ್ಕೆ ಸಜ್ಜಾಗಿವೆ. ಬೆಂಗಳೂರು ಮೆಟ್ರೊ ರೈಲು ಮಾರ್ಗದ ಅತಿ ದೊಡ್ಡ ಸುರಂಗ ಮಾರ್ಗದ ಕಾಮಗಾರಿ ವೇಗವಾಗಿ ನಡೆಯಿತು. ಸರ್ಜಾಪುರ–ಹೆಬ್ಬಾಳ ಹೊಸ ಮಾರ್ಗವನ್ನು 2022ರ ಬಜೆಟ್‌ನಲ್ಲಿ ಘೊಷಿಸಿದ್ದು ವಿಶೇಷ.

ಕೆಎಸ್‌ಆರ್‌ಟಿಸಿ ಕೂಡ ಎಲೆಕ್ಟ್ರಿಕ್‌ ಬಸ್‌ ಸೇವೆ ಆರಂಭಿಸಲು ಅಂತಿಮ ಸಿದ್ಧತೆ ಮಾಡಿಕೊಂಡಿದೆ. ಉದ್ಯೋಗಿಗಳಿಗೆ ₹1 ಕೋಟಿ ಮೊತ್ತದ ಅಪಘಾತ ಪರಿಹಾರ ವಿಮೆ ಜಾರಿಗೆ ತರಲಾಯಿತು. ಪ್ರತಿ ತಿಂಗಳು ಒಂದನೇ ತಾರೀಕಿನಂದೇ ಸಂಬಳ ನೀಡುವ ವ್ಯವಸ್ಥೆ ಜಾರಿಗೆ ಬಂತು.

ಓಲಾ ಮತ್ತು ಉಬರ್ ರೀತಿಯ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗೆ ದರ ನಿಗದಿಗೆ ಸಾರಿಗೆ ಇಲಾಖೆ ಪ್ರಯತ್ನಿಸಿದ್ದು, ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಬೈಕ್ ಟ್ಯಾಕ್ಸಿ ಸೇವೆ ಅಧಿಕೃತಕ್ಕೆ ಆದೇಶಿಸಿದ್ದು, ಇದರ ವಿರುದ್ಧ ಆಟೊ ಚಾಲಕರು ಪ್ರತಿಭಟನೆ ಆರಂಭಿಸಿದ್ದಾರೆ.

ಉಪನಗರ ರೈಲು ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದರು. ಆದರೆ, ಕಾಮಗಾರಿ ಆರಂಭವಾಗುವ ನಿರೀಕ್ಷೆ ಹುಸಿಯಾಗಿದೆ. ಚಿಕ್ಕಬಾಣಾವರ–ಬೈಯಪ್ಪನಹಳ್ಳಿ ಕಾರಿಡಾರ್‌ನ(ಸಂಪಿಗೆ) ಸಿವಿಲ್ ಕಾಮಗಾರಿಗೆ ಈ ವರ್ಷ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ.

ಯಶವಂತಪುರ ಮತ್ತು ಕಂಟೋನ್ಮೆಂಟ್ ರೈಲು ನಿಲ್ದಾಣಗಳಿಗೆ ವಿಮಾನ ನಿಲ್ದಾಣ ಮಾದರಿಯಲ್ಲಿ ಮೂಲ ಸೌಕರ್ಯ ಒದಗಿಸಿ ಪುನರ್ ಅಭಿವೃದ್ಧಿಪಡಿಸುವ ಯೋಜನೆ ಆರಂಭವಾಗಿದೆ. ವಿಮಾನ ನಿಲ್ದಾಣದ ಹಾಲ್ಟ್ ಸ್ಟೇಷನ್‌ ಮೂಲಕ ದೇವನಹಳ್ಳಿಗೆ 8 ರೈಲುಗಳ ಸಂಚಾರ ಆರಂಭಿಸಲಾಗಿದೆ.

ಕೆಂಪೇಗೌಡ ಪ್ರತಿಮೆ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್–2 ನವೆಂಬರ್ 11ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.ಪರಿಸರ, ಸುಸ್ಥಿರ, ತಂತ್ರಜ್ಞಾನ, ಕಲೆ– ಸಂಸ್ಕೃತಿ ಎಂಬ ನಾಲ್ಕು ಆಶಯಗಳನ್ನು ಹೊಸೆದು ನಿರ್ಮಿಸಿರುವ ಈ ಟರ್ಮಿನಲ್ ಪ್ರವಾಸಿ ತಾಣದಂತೆ ಭಾಸವಾಗುತ್ತಿದೆ. ಸದ್ಯದಲ್ಲೇ ಕಾರ್ಯಾರಂಭಕ್ಕೆ ಸಿದ್ಧತೆಯೂ ನಡೆದಿದೆ. ವಿಮಾನ ನಿಲ್ದಾಣದ ಬಳಿಯೇ ನಾಡಪ್ರಭು ಕೆಂಪೇಗೌಡರ 108 ಅಡಿಯ ಪ್ರತಿಮೆ ನಿರ್ಮಿಸಲಾಗಿದ್ದು, ಅದನ್ನೂ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಬೆಂಗಳೂರಿಗೆ ಬಂದಿಳಿಯುವಾಗ ವಿಮಾನದಿಂದಲೇ ಕೆಂಪೇಗೌಡ ದೊಡ್ಡ ಪ್ರತಿಮೆ ಪ್ರಯಾಣಿಕರಿಗೆ ಕಾಣಿಸುವಂತೆ ನಿರ್ಮಿಸಲಾಗಿದೆ. ಇವೆರಡೂ ಬೆಂಗಳೂರಿನ ಹೆಮ್ಮೆಯಾಗಿ ಸೇರ್ಪಡೆಗೊಂಡಿವೆ.

ಕೃಷಿ ಮೇಳದ ಸಂಭ್ರಮ

ಕೃಷಿ ವಿಶ್ವವಿದ್ಯಾಲಯದಿಂದ ನ.3ರಿಂದ 6ರ ವರೆಗೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ‘ಕೃಷಿಯಲ್ಲಿ ನವೋದ್ಯಮ’ ಘೋಷವಾಕ್ಯದ ಅಡಿ ಕೃಷಿ ಮೇಳ ಆಯೋಜಿಸಲಾಗಿತ್ತು. ಮೇಳದಲ್ಲಿ ವಿವಿಯ ಸಂಶೋಧಕರು ಅಭಿವೃದ್ಧಿಪಡಿಸಿರುವ ಭತ್ತ, ಜೋಳ ಸೇರಿದಂತೆ 9 ಹೊಸ ತಳಿ ಹಾಗೂ 38 ತಂತ್ರಜ್ಞಾನ ಬಿಡುಗಡೆ ಮಾಡಲಾಯಿತು.ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಹಾಗೂ ಮೀನು ಸಾಕಾಣಿಕೆ ಬಗ್ಗೆ ತಿಳಿಸಲು ಅರಮನೆ ಮೈದಾನದಲ್ಲಿ ಅಕ್ಟೋಬರ್ 16ರಂದು ‘ಒಳನಾಡು ಮೀನು ಉತ್ಪಾದಕರ ಸಮಾವೇಶ–2022’ ಹಮ್ಮಿಕೊಳ್ಳಲಾಗಿತ್ತು. ಮೀನು ಸಾಕಣೆ ಕ್ರಮ, ಆಹಾರ ಪದ್ಧತಿ, ಆಮ್ಲಜನಕ ವ್ಯವಸ್ಥೆ, ಮಾರುಕಟ್ಟೆ ಹಾಗೂ ಸರ್ಕಾರದ ಯೋಜನೆಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.

ತರಹೇವಾರಿ ಅಪರಾಧ

ಸಾಮೂಹಿಕ ಅತ್ಯಾಚಾರ, ಆ್ಯಸಿಡ್ ದಾಳಿ, ಗೃಹ ಸಚಿವರ ಮನೆಗೆ ಮುತ್ತಿಗೆ, ಮಕ್ಕಳನ್ನು ಕೊಂದು ತಾಯಂದಿರ ಆತ್ಮಹತ್ಯೆ... ಹೀಗೆ ಹಲವು ಅಪರಾಧ ಘಟನೆಗಳಿಗೆ 2022 ಸಾಕ್ಷಿಯಾಯಿತು.

ಜ. 13: ಕೋಣನಕುಂಟೆ ಬಳಿಯ ವಾಜರಹಳ್ಳಿ ಮುಖ್ಯರಸ್ತೆಯಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ‘ಕಲರ್ಸ್ ಕನ್ನಡ ವಾಹಿನಿಯ ‘ನನ್ನಮ್ಮ ಸೂಪರ್ ಸ್ಟಾರ್‌’ ರಿಯಾಲಿಟಿ ಶೋ ಸ್ಪರ್ಧಿ ಸಮನ್ವಿ (6) ಮೃತಪಟ್ಟಿದ್ದರು.

ಜ. 18: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆರ್‌.ಟಿ.ನಗರದ ಖಾಸಗಿ ಮನೆಯ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಕೋರಮಂಗಲ ಠಾಣೆಯ ಹೆಡ್‌ಕಾನ್‌ಸ್ಟೆಬಲ್ ಸಂತೋಷ್, ಕಾನ್‌ಸ್ಟೆಬಲ್ ಶಿವಕುಮಾರ್ ಅವರನ್ನು ಡ್ರಗ್ಸ್ ಪ್ರರಣದಲ್ಲಿ ಬಂಧಿಸಲಾಗಿತ್ತು.

ಜ. 28: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೊಮ್ಮಗಳು ಸೌಂದರ್ಯ (30) ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ವಸಂತನಗರದಲ್ಲಿರುವ ಲೆಗೆಸಿ ಅಪಾರ್ಟ್‌ಮೆಂಟ್ ಸಮುಚ್ಚಯದ ಫ್ಲ್ಯಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು.

ಜ. 31: ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಹಾಗೂ ಬೆಂಗಳೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದ ಸದಸ್ಯರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ವಿದ್ಯಾರ್ಥಿಗಳು ಗಾಯಗೊಂಡಿದ್ದರು.

ಜ. 31: ಜಯನಗರದ ಒಂದನೇ ಹಂತದ 10ನೇ ‘ಬಿ’ ಮುಖ್ಯರಸ್ತೆಯ ಮನೆಯೊಂದರ ಮುಂದೆ ಮಲಗಿದ್ದ ಶ್ವಾನದ ಮೇಲೆ ಕಾರು ಹರಿಸಿ ಕೊಂದಿದ್ದ ಆರೋಪದಡಿ ಉದ್ಯಮಿ ಆದಿಕೇಶವಲು ನಾಯ್ಡು ಅವರ ಮೊಮ್ಮಗ ಆದಿ ಎಂಬಾತನನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದರು.

ಫೆ 10: 2020ರ ಮಾರ್ಚ್ 11ರಂದು ತಲೆ ಮೇಲೆ ಮರದ ಕೊಂಬೆ ಬಿದ್ದು ಪ್ರಜ್ಞೆ ಕಳೆದುಕೊಂಡು 701 ದಿನ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಕಿ ರೈಚಲ್ ಪ್ರಿಷಾ (8), ಚಿಕಿತ್ಸೆಗೆ ಸ್ಪಂದಿಸದೇ ಮಣಿಪಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಫೆ. 22 : 'ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಕಾರಿ ಬರಹ ಪ್ರಕಟಿಸಿದ್ದಾರೆ’ ಎಂಬ ಆರೋಪದಡಿ ನಟ ಎ. ಚೇತನ್ ಕುಮಾರ್ ಅವರನ್ನು ಶೇಷಾದ್ರಿಪುರ ಪೊಲೀಸರು ಬಂಧಿಸಿದ್ದರು.

ಫೆ. 22 ಮೂಡಲಪಾಳ್ಯದಲ್ಲಿ ಸಾವಿತ್ರಿ ಹಾಗೂ ಅವರ ತಾಯಿ ಸರೋಜಮ್ಮ ಎಂಬುವವರನ್ನು ಕೊಲೆ ಮಾಡಲಾಗಿತ್ತು. ಸಾವಿತ್ರಿಯವರ ಪತಿ ರವಿಕುಮಾರ್‌ನನ್ನು ಬಂಧಿಸಲಾಗಿತ್ತು.

ಮಾ. 21 ಹಿಜಾಬ್ ವಿಚಾರವಾಗಿ ತೀರ್ಪು ನೀಡಿದ್ದ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆಯೊಡ್ಡಿದ್ದ ಆರೋಪದಡಿ ತಮಿಳುನಾಡಿನ ತೌಹೀದ್ ಜಮಾತ್ (ಟಿ.ಎಂ.ಟಿ.ಜೆ)’ ಮುಸ್ಲಿಂ ಸಂಘಟನೆಯ ಮುಖಂಡ ಆರ್. ರಹಮತ್‌–ಉಲ್ಲಾ ಹಾಗೂ ಎಸ್‌. ಜಮಾಲ್ ಮುಹಮ್ಮದ್ ಉಸ್ಮಾನಿ (44) ಅವರನ್ನು ಪೊಲೀಸರು ಬಂಧಿಸಿದ್ದರು.

ಏಪ್ರಿಲ್ 4: ಜಗಜೀವನ್‌ರಾಮ್ ನಗರ ಠಾಣೆ ವ್ಯಾಪ್ತಿಯ ಹಳೇ ಗುಡ್ಡದಹಳ್ಳಿ ಬಳಿ ಉರ್ದುವಿನಲ್ಲಿ ಮಾತನಾಡಲಿಲ್ಲವೆಂಬ ಕಾರಣಕ್ಕೆ ಚಂದ್ರಶೇಖರ್ (22) ಎಂಬುವರನ್ನು ಕೊಲೆ ಮಾಡಲಾಗಿತ್ತು.

ಏಪ್ರಿಲ್ 7: ‘ಫ್ಯಾಬ್ರಿಕೇಷನ್ ಉದ್ಯಮದ ಲೆಕ್ಕದಲ್ಲಿ ₹ 1.50 ಕೋಟಿ ವ್ಯತ್ಯಾಸ ಆಯಿತು’ ಎಂಬ ಕಾರಣಕ್ಕೆ ಅರ್ಪಿತ್ (25) ಎಂಬುವರನ್ನು ಬೆಂಕಿ ಹಚ್ಚಿ ಕೊಲೆ ಮಾಡಲಾಗಿತ್ತು. ಕೃತ್ಯ ಎಸಗಿದ್ದ ಆರೋಪದಡಿ ತಂದೆ ಸುರೇಂದ್ರಕುಮಾರ್ ಅಲಿಯಾಸ್ ಬಾಬು (51) ಅವರನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದರು.

ಏಪ್ರಿಲ್ 18: ‘ಕ್ರಿಪ್ಟೊ’ ಕರೆನ್ಸಿ ಹೂಡಿಕೆ ಹೆಸರಿನಲ್ಲಿ ಹಣ ಸಂಗ್ರಹಿಸಿ ವಂಚಿಸಿದ್ದ ಶೀತಲ್ ಬಸ್ತವಾಡ್, ಇಮ್ರಾನ್ ರಿಯಾಜ್, ರೆಹಮತ್‌ ಉಲ್ ಖಾನ್ ಹಾಗೂ ಜಬೀವುಲ್ಲಾ ಖಾನ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ₹ 78 ಲಕ್ಷ ನಗದು ಸೇರಿ ₹ 17 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದರು.

ಏಪ್ರಿಲ್ 28:ತನ್ನನ್ನು ಮದುವೆಯಾಗಲು ಒಪ್ಪಲಿಲ್ಲವೆಂಬ ಕಾರಣಕ್ಕೆ ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಯುವರಿಯೊಬ್ಬರ ಮೇಲೆ ಆ್ಯಸಿಡ್ ಎರಚಲಾಗಿತ್ತು. ಈ ಸಂಬಂಧ ಆರೋಪಿ ನಾಗೇಶ್‌ ಬಾಬುನನ್ನು ತಮಿಳುನಾಡಿನ ತಿರುವಣ್ಣಾಮಲೈನ ಶಿವ ದೇವಸ್ಥಾನದ ಆಶ್ರಮದಲ್ಲಿ ಪೊಲೀಸರು ಬಂಧಿಸಿದ್ದರು.

ಮೇ : ಬಾಂಗ್ಲಾದೇಶದ 23 ವರ್ಷದ ಯುವತಿಯ ಗುಪ್ತಾಂಗದೊಳಗೆ ಮದ್ಯದ ಬಾಟಲಿ ಹಾಗೂ ಕಾಲ್ಬೆರಳು ತುರುಕಿ ಮೃಗೀಯವಾಗಿ ವರ್ತಿಸಿ ಸಾಮೂಹಿಕ ಅತ್ಯಾಚಾರ ಎಸಗಿರುವ ಹೀನ ಕೃತ್ಯ ನಡೆಯಿತು. ಪರಿಚಯಸ್ಥ ಮಹಿಳೆಯರು ಸೇರಿದಂತೆ 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ಮೇ 24: ಚಿಕ್ಕಪೇಟೆಯಲ್ಲಿರುವ ‘ದೀಪಂ ಎಲೆಕ್ಟ್ರಿಕಲ್ಸ್‌’ ಮಳಿಗೆ ಮಾಲೀಕ ಜುಗರಾಜ್‌ ಜೈನ್‌ (74) ಅವರನ್ನು ಕೊಲೆ ಮಾಡಿ ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ, ಬೆಳ್ಳಿ ಬೆಳ್ಳಿ ಸಾಮಗ್ರಿ ದೋಚಿದ್ದ ಆರೋಪಿ ಕೆಲಸಗಾರ ಬಿಜರಾಮ್‌ನನ್ನು ಗುಜರಾತ್‌ನಲ್ಲಿ ಬಂಧಿಸಲಾಗಿತ್ತು.

ಮೇ 30: ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕೇಳಿಬಂದಿದ್ದ ಭ್ರಷ್ಟಾಚಾರ ಆರೋಪ ಚರ್ಚಿಸಲೆಂದು ‘ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ’ ನೇತೃತ್ವದಲ್ಲಿ ರೈತ ಮುಖಂಡರು ಗಾಂಧಿಭವನದಲ್ಲಿ ‘ಆತ್ಮಾವಲೋಕನ ಹಾಗೂ ಸ್ಪಷ್ಟೀಕರಣ ಸಭೆ’ ಹಮ್ಮಿಕೊಂಡಿದ್ದರು. ಭಾರತೀಯ ಕಿಸಾನ್‌ ಒಕ್ಕೂಟದ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ (55) ಮೇಲೆ ಹಲ್ಲೆ ಮಾಡಿ, ಮುಖಕ್ಕೆ ಮಸಿ ಎರಚಲಾಗಿತ್ತು. ಭಾರತೀಯ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಭರತ್‌ ಶೆಟ್ಟಿ ಸೇರಿ ಹಲವರನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದರು.

ಜೂನ್ 26: ರಾಜ್ಯದಾದ್ಯಂತ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಲಾಗಿದ್ದ ₹ 67.40 ಕೋಟಿ ಮೌಲ್ಯದ ಮಾದಕ ವಸ್ತುವನ್ನು (ಡ್ರಗ್ಸ್) ಪೊಲೀಸರು ನಾಶಪಡಿಸಿದರು.

ಜೂನ್ 12: ಟ್ರಿನಿಟಿ ವೃತ್ತ ಬಳಿಯ ‘ದಿ ಪಾರ್ಕ್‌’ ಪಂಚತಾರಾ ಹೋಟೆಲ್‌ನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿ ಮೇಲೆ ದಾಳಿ ಮಾಡಿದ್ದ ಪೊಲೀಸರು, ಬಾಲಿವುಡ್ ನಟ ಶಕ್ತಿ ಕಪೂರ್ ಅವರ ಮಗ ಸಿದ್ಧಾಂತ್ (38) ಸೇರಿ ಐವರನ್ನು ಬಂಧಿಸಿದ್ದರು.

ಜೂನ್ 8: ನಗರದ ಶ್ರೀರಾಮಪುರ ಠಾಣೆ ವ್ಯಾಪ್ತಿಯಲ್ಲಿ ಅಡಗಿದ್ದ ಹಿಜ್ಬುಲ್‌–ಮುಜಾಹಿದ್ದೀನ್‌ (ಎಚ್‌ಎಂ) ಉಗ್ರ ಸಂಘಟನೆಯ ಕಮಾಂಡರ್ ತಾಲಿಬ್ ಹುಸೇನ್ ಅಲಿಯಾಸ್ ತಾರಿಕ್‌ನನ್ನು (36) ಬಂಧಿಸಲಾಗಿತ್ತು

ಜೂನ್ 9: ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣದ ಕಡೆಯಿಂದ ರಾಜಭವನ ರಸ್ತೆಯಲ್ಲಿ ಅತೀ ವೇಗವಾಗಿ ಕಾರು ಚಲಾಯಿಸಿದ್ದ ಶಾಸಕ ಅರವಿಂದ ಲಿಂಬಾವಳಿ ಅವರ ಪುತ್ರಿಯಿಂದ ಸಂಚಾರ ಪೊಲೀಸರು ₹ 10 ಸಾವಿರ ದಂಡ ವಸೂಲಿ ಮಾಡಿದ್ದರು.

ಜೂನ್ 30: ರಾಜರಾಜೇಶ್ವರಿನಗರ ಬಳಿಯ ಚನ್ನಸಂದ್ರದ ‘ಮಂತ್ರಿ ಆಫ್‌ಲೈನ್‌’ ಅಪಾರ್ಟ್‌ಮೆಂಟ್ ಸಮುಚ್ಚಯದ ಫ್ಲ್ಯಾಟ್‌ನಲ್ಲಿ ಮೂರೂವರೆ ವರ್ಷದ ಮಗಳು ರಿಯಾಳನ್ನು ಕೊಂದು ತಾಯಿ ದೀಪಾ (31) ಆತ್ಮಹತ್ಯೆ ಮಾಡಿಕೊಂಡಿದ್ದರು.‌

ಜುಲೈ 27: ಡ್ರಗ್ಸ್ ಮಾರಾಟ ಆರೋಪಿಗಳನ್ನು ಬಂಧಿಸಲೆಂದು ಆಂಧ್ರಪ್ರದೇಶದ ಚಿತ್ತೂರಿಗೆ ಹೊರಟಿದ್ದ ವೇಳೆ ಅಪಘಾತ ಸಂಭವಿಸಿ ಶಿವಾಜಿನಗರ ಠಾಣೆಯ ಪಿಎಸ್ಐ ಕೆ. ಅವಿನಾಶ್ (29), ಕಾನ್‌ಸ್ಟೆಬಲ್ ಅನಿಲ್ ಮುಳಿಕ್ (26) ಹಾಗೂ ಚಾಲಕ ಮ್ಯಾಕ್ಸ್‌ವೆಲ್ (28) ಮೃತಪಟ್ಟಿದ್ದರು.

ಜುಲೈ 29: ಮನೆಬಿಟ್ಟುಬಂದಿದ್ದ ಬಾಲಕಿಯನ್ನು ಪುಸಲಾಯಿಸಿ ಸಹಾಯದ ಸೋಗಿನಲ್ಲಿ ತಮ್ಮ ಕೊಠಡಿಗೆ ಕರೆದೊಯ್ದ ಅತ್ಯಾಚಾರ ಎಸಗಿದ್ದ ಆರೋಪದಡಿ ಗೋವಿಂದರಾಜನಗರ ಠಾಣೆ ಕಾನ್‌ಸ್ಟೆಬಲ್ ಪವನ್ ದ್ಯಾವಣ್ಣನವರ್ ಅವರನ್ನು ಪೋಕ್ಸೊ ಕಾಯ್ದೆಯಡಿ ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದರು.

ಜುಲೈ 30: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರುಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಅಧಿಕೃತ ನಿವಾಸಕ್ಕೆ ಅಕ್ರಮವಾಗಿ ನುಗ್ಗಿ ಗಲಭೆ ಸೃಷ್ಟಿಸಿದ್ದರು. 30 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.

ಆಗಸ್ಟ್ 5: ಸಂಪಂಗಿರಾಮನಗರ ಠಾಣೆ ವ್ಯಾಪ್ತಿಯ ಅದ್ವಿತ್ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ದ್ವಿತಿ ಎಂಬ ನಾಲ್ಕು ವರ್ಷದ ಹೆಣ್ಣು ಮಗುವನ್ನು ಕೊಂದ ಆರೋಪದಡಿ ತಾಯಿ ಸುಷ್ಮಾ (34) ಅವರನ್ನು ಪೊಲೀಸರು ಬಂಧಿಸಿದ್ದರು.

ಆಗಸ್ಟ್ 8: ಬನಶಂಕರಿ ಠಾಣೆ ವ್ಯಾಪ್ತಿಯಲ್ಲಿ ತಮ್ಮ ಮಗಳು ಆರಾಧನಾಳನ್ನು (9) ಕೊಂದು ದಂತವೈದ್ಯೆ ಶೈಮಾ (39) ಆತ್ಮಹತ್ಯೆ ಮಾಡಿಕೊಂಡಿದ್ದರು.

ಅಕ್ಟೋಬರ್ 7: ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ 2017ರಲ್ಲಿ ನಡೆದಿದ್ದ ಶಾಂತಕುಮಾರಿ (70) ಎಂಬುವರ ಕೊಲೆ ಪ್ರಕರಣ ಭೇದಿಸಿದ್ದ ಪೊಲೀಸರು, ಮೃತರ ಮಗಳು ರಾಧಾ ಶ್ರೀವಾಸುದೇವ್ ರಾವ್ ಅಲಿಯಾಸ್ ಶಶಿಕಲಾ (50) ಹಾಗೂ ಮೊಮ್ಮಗ ಸಂಜಯ್ (27) ಅವರನ್ನು ಕೊಲ್ಲಾಪುರದಲ್ಲಿ ಬಂಧಿಸಿ ನಗರಕ್ಕೆ ಕರೆತಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT