ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರೀಕರಣದಿಂದ ಪ್ರಾಕೃತಿಕ ಸಂಪತ್ತು ನಾಶ: ಪರಿಸರ ತಜ್ಞರ ಕಳವಳ

ಬಿಐಸಿ ಆಯೋಜಿಸಿದ್ದ ಸಂವಾದದಲ್ಲಿ ಪರಿಸರ ತಜ್ಞರ ಕಳವಳ
Published 3 ಮೇ 2024, 19:56 IST
Last Updated 4 ಮೇ 2024, 3:17 IST
ಅಕ್ಷರ ಗಾತ್ರ

ಬೆಂಗಳೂರು: ‘ಅತಿಯಾದ ನಗರೀಕರಣದಿಂದಾಗಿ ಗಿಡ–ಮರಗಳು, ಕೆರೆಗಳಂತಹ ಪ್ರಾಕೃತಿಕ ಸಂಪತ್ತು ನಾಶವಾಗಿದೆ. ಇದರಿಂದ ಹವಾಮಾನ ಬದಲಾವಣೆ, ತಾಪಮಾನ ಹೆಚ್ಚಳದಂತಹ ಗಂಭೀರ ಸಮಸ್ಯೆ ಎದುರಿಸುತ್ತಿದ್ದೇವೆ’ ಎಂದು ಪರಿಸರ ತಜ್ಞರು ಕಳವಳ ವ್ಯಕ್ತಪಡಿಸಿದರು. 

ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರವು (ಬಿಐಸಿ) ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಕೆರೆಗಳ ನಗರಿಯಿಂದ ಟ್ಯಾಂಕರ್‌ ನಗರದೆಡೆಗೆ’ ಕುರಿತ ಸಂವಾದದಲ್ಲಿ ‘ಇಕೊ ವಾಚ್ ಸಂಸ್ಥೆ’ಯ ಅಧ್ಯಕ್ಷ ಹಾಗೂ ಪರಿಸರ ಕಾರ್ಯಕರ್ತ ಸುರೇಶ್ ಹೆಬ್ಳೀಕರ್, ವೃಕ್ಷ ವೈದ್ಯ ವಿಜಯ್ ನಿಶಾಂತ್ ಹಾಗೂ ಆ್ಯಕ್ಷನ್ ಏಡ್ ಸಂಸ್ಥೆಯ ರಾಘವೇಂದ್ರ ಪಚ್ಚಾಪುರ್ ಅವರು ಪರಿಸರ ಹಾಗೂ ಕೆರೆಗಳ ಮಹತ್ವದ ಬಗ್ಗೆ ವಿವರಿಸಿದರು. 

‘ಕೆರೆಗಳು ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಪತ್ತು ಕೂಡ ಹೌದು. ಕೆರೆಗಳ ನಗರವಾಗಿದ್ದ ಬೆಂಗಳೂರಿನಲ್ಲಿ 1975–80ರ ವೇಳೆ ಮನೆಗಳಲ್ಲಿ ಫ್ಯಾನ್‌ಗಳನ್ನು ಕೂಡ ಬಳಸುತ್ತಿರಲಿಲ್ಲ. ತಣ್ಣನೆಯ ವಾತಾವರಣದಿಂದಾಗಿ ಅದರ ಅಗತ್ಯತೆಯೂ ಇರಲಿಲ್ಲ. ಆ ವೇಳೆ ಹಲಸೂರು ಕೆರೆಯ ನೀರನ್ನು ನೇರವಾಗಿ ಬಳಸುತ್ತಿದ್ದೆವು. ಆದರೆ, ಈಗ ಆ ಕೆರೆಯ ನೀರನ್ನು ಕುಡಿಯು ಸಾಧ್ಯವಿಲ್ಲದಂತಾಗಿದೆ. ಜಾಗತೀಕರಣದಿಂದ ಕೆರೆಗಳ ಜತೆಗೆ ಗಿಡ–ಮರಗಳೂ ಕಣ್ಮರೆಯಾದವು. ಈಗ ಬೆಂಗಳೂರಿನಲ್ಲಿ ಮಣ್ಣು, ಹುಲ್ಲುಗಾವಲು ಪ್ರದೇಶವೂ ಕಾಣಸಿಗುತ್ತಿಲ್ಲ’ ಎಂದು ಸುರೇಶ್ ಹೆಬ್ಳೀಕರ್ ಬೇಸರ ವ್ಯಕ್ತಪಡಿಸಿದರು. 

ಅವೈಜ್ಞಾನಿಕ ಬೆಳವಣಿಗೆ: ವಿಜಯ್ ನಿಶಾಂತ್, ‘ನಗರವನ್ನು ಅವೈಜ್ಞಾನಿಕವಾಗಿ ಬೆಳೆಸಿದ್ದರಿಂದ ನೀರು ಸೇರಿ ವಿವಿಧ ಸಮಸ್ಯೆಗಳು ತಲೆದೋರಿವೆ. 50 ಲಕ್ಷ ಜನ ವಾಸಿಸಬೇಕಾದ ಈ ನಗರದ ಜನಸಂಖ್ಯೆ ಕೋಟಿ ದಾಟಿದೆ. ಬೆಂಗಳೂರು ಎಂದರೆ ಕರ್ನಾಟಕವೆಂದು ಬಿಂಬಿಸುವುದು ಸರಿಯಲ್ಲ. ಬೇರೆ ನಗರಗಳ ಅಭಿವೃದ್ಧಿಗೂ ಆದ್ಯತೆ ನೀಡಬೇಕು. ಮಕ್ಕಳಿಗೆ ಗಿಡ–ಮರಗಳ ಮಹತ್ವದ ಬಗ್ಗೆ ಶಿಕ್ಷಣ ನೀಡಬೇಕು’ ಎಂದು ಹೇಳಿದರು. 

ರಾಘವೇಂದ್ರ ಪಚ್ಚಾಪುರ್, ‘ಕೊಳಚೆ ನೀರು ಕೆರೆಗಳನ್ನು ಸೇರಿದ ಪರಿಣಾಮ ಕೆರೆಗಳಲ್ಲಿನ ನೀರು ಕಲುಷಿತಗೊಂಡಿದೆ. ಇದನ್ನು ತಡೆಯಬೇಕಾದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೆರೆಗಳ ಮಾಲಿನ್ಯದ ಬಗ್ಗೆ ಗಮನ ಹರಿಸುತ್ತಿಲ್ಲ. ಅದು ತನ್ನ ಆದ್ಯತೆಯಲ್ಲ ಎಂಬಂತೆ ಮಂಡಳಿ ವರ್ತಿಸುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.  

‘ಪ್ರಜಾವಾಣಿ’ ಹಿರಿಯ ವರದಿಗಾರ ಆರ್. ಮಂಜುನಾಥ್ ಅವರು ಸಂವಾದ ನಿರ್ವಹಿಸಿದರು. 

‘ಯುವಜನರಲ್ಲಿ ಐಷಾರಾಮಿ ಪ್ರವೃತ್ತಿ’

‘ಬೆಂಗಳೂರಿನಲ್ಲಿ ಹಿಂದೆ ಭೂಗತ ಜಾಲದೊಂದಿಗೆ ಕೆರೆಗಳು ಪರಸ್ಪರ ಕೊಂಡಿಯಾಗಿದ್ದವು. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಸುತ್ತಮುತ್ತಲಿನ ಹಳ್ಳಿಗಳನ್ನೂ ನಗರವಾಗಿ ಪರಿವರ್ತಿಸಿ ಎಲ್ಲೆಡೆ ಬೃಹತ್ ಕಟ್ಟಡಗಳನ್ನು ನಿರ್ಮಿಸಲಾಯಿತು. ಇದರಿಂದ ಈ ಜಾಲದ ಸಂಪರ್ಕ ಕಡಿತವಾಗಿ ಕೆರೆಗಳು ಬರಿದಾದವು’ ಎಂದು ಸುರೇಶ್ ಹೆಬ್ಳೀಕರ್ ತಿಳಿಸಿದರು. ‘ಜಾಗತೀಕರಣ ಛಾಯೆಯಿಂದ ಯುವಜನರಲ್ಲಿ ಐಷಾರಾಮಿ ಪ್ರವೃತ್ತಿ ಹೆಚ್ಚುತ್ತಿದೆ. ಪರಿಸರ ಮತ್ತು ಅದರ ಮೂಲಗಳ ಉಳಿವಿನ ಬಗ್ಗೆ ಯುವಜನರು ಆಸಕ್ತಿ ತೋರುತ್ತಿಲ್ಲ. ಬೆಂಗಳೂರಿನ ಹೊರಗಡೆಯೂ ಪರಿಸರ ಕಣ್ಮರೆಯಾಗುತ್ತಿದೆ. ನಾವು ವಿದ್ಯುತ್ ಶಕ್ತಿಯನ್ನು ಉತ್ಪಾದಿಸಬಹದು. ಆದರೆ ನೀರನ್ನೂ ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಸದ್ಯದ ಪರಿಸ್ಥಿತಿ ಅವಲೋಕಿಸಿದರೆ ನಮ್ಮ ಭವಿಷ್ಯ ಸುಂದರವಾಗಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT