ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಾವತಿ ಜಲಾಶಯದಲ್ಲಿ ತಗ್ಗಿದ ನೀರಿನ ಪ್ರಯಾಣ

ಮಳೆ ಬಾರದಿದ್ದರೆ ಇನ್ನೂ ಮೂರು ತಿಂಗಳಲ್ಲಿ ನೀರಿಗೆ ತಾತ್ವರ: ಜನರ ಆತಂಕ
ಪಿ.ಎಸ್.ರಾಜೇಶ್
Published 3 ಮೇ 2024, 6:29 IST
Last Updated 3 ಮೇ 2024, 6:29 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಪಟ್ಟಣ ಹಾಗೂ ಗುಡಿಬಂಡೆಗೆ ಕುಡಿಯುವ ನೀರು ಸರಬರಾಜು ಮಾಡುವ ತಾಲ್ಲೂಕಿನ ಪರಗೋಡಿನ ಚಿತ್ರಾವತಿ ಜಲಾಶಯದಲ್ಲಿ ನೀರಿನ ಒಳ ಹರಿವು ಇಳಿಮುಖವಾಗಿದ್ದು, ಜಲಾಶಯದಲ್ಲಿ ಕಡಿಮೆ ಪ್ರಯಾಣ ಕಡಿಮೆ ಆಗಿದೆ. ಮಳೆ ಬಾರದಿದ್ದರೆ ಇನ್ನೂ ಮೂರು ತಿಂಗಳಲ್ಲಿ ನೀರಿಗೆ ತಾತ್ವರ ಉಂಟಾಗಲಿದೆ ಎಂಬ ಆತಂಕ ಎರಡೂ ತಾಲ್ಲೂಕಿನ ಜನರಲ್ಲಿ ಮೂಡಿದೆ.

ಮಳೆ ಬೀಳದೆ ಇರುವುದು ಹಾಗೂ ಬೇಸಿಗೆ ಕಾರಣದಿಂದ ಚಿತ್ರಾವತಿ ನದಿ ನೀರು ಹರಿಯುವಿಕೆ ಸಂಪೂರ್ಣ ಇಳಿಮುಖವಾಗಿದೆ. ಇದರಿಂದ ಜಲಾಶಯದಲ್ಲಿ ನೀರಿನ ಪ್ರಯಾಣ ಕಡಿಮೆ ಆಗುತ್ತಿದೆ.

ಬಾಗೇಪಲ್ಲಿಯ 23 ವಾರ್ಡ್‍ಗಳು, ತಾಲ್ಲೂಕಿನ 128 ಗ್ರಾಮಗಳು, ಗುಡಿಬಂಡೆ ಪಟ್ಟಣ ಹಾಗೂ 96 ಗ್ರಾಮಗಳಿಗೆ ಇದೇ ಜಲಾಶಯದಿಂದ ಸರಬರಾಜು ಮಾಡಲಾಗುತ್ತಿದೆ. ಎರಡು ವರ್ಷದ ಹಿಂದೆ ಬಿದ್ದ ಭಾರಿ ಮಳೆಯಿಂದ ಚಿತ್ರಾವತಿ ಜಲಾಶಯ ತುಂಬಿ ಹರಿದಿತ್ತು. ಜಲಾಶಯದಲ್ಲಿ ಸಂಗ್ರಹ ಆಗಿದ್ದ ನೀರಿನಿಂದ ನೀರು ಸರಬರಾಜು ಮಾಡಲಾಗಿದೆ. ಇದರಿಂದ ಜಲಾಶಯದ‌ಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆ. ಮುಂದಿನ ಮೂರು ತಿಂಗಳ ಒಳಗೆ ಸಕಾಲದಲ್ಲಿ ಮಳೆ ಆಗದಿದ್ದರೆ ಬಾಗೇಪಲ್ಲಿ ಮತ್ತು ಗುಡಿಬಂಡೆಯಲ್ಲಿ ಜಲಕ್ಷಾಮ ತಲೆದೋರಲಿದೆ ಎನ್ನುತ್ತಿದ್ದಾರೆ ನಾಗರಿಕರು.

ಪಟ್ಟಣದಲ್ಲಿ 102 ಕೊಳವೆಬಾವಿಗಳ ಪೈಕಿ 71 ಕೊಳವೆಬಾವಿಗಳು ಕಾರ್ಯ ನಿರ್ವಹಿಸುತ್ತಿದ್ದು, 31 ಭತ್ತಿ ಹೋಗಿದೆ. ಅಂತರ್ಜಲ ಮಟ್ಟದ ಕುಸಿದ ಪರಿಣಾಮ ಕೊಳವೆಬಾವಿಗಳಲ್ಲಿ ನೀರು ಸಿಗುತ್ತಿಲ್ಲ. ಇದರಿಂದ ಪಟ್ಟಣದ 1ರಿಂದ 5, 7, 12, 13 , 15 ಸೇರಿ ಒಂಬತ್ತು ವಾರ್ಡ್‍ಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಕೆಲ ವಾರ್ಡ್‍ಗಳಲ್ಲಿ ನೀರು 10 ರಿಂದ 20 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ.

ಪಟ್ಟಣದ ಜನರು ಖಾಸಗಿ ಶುದ್ಧ ನೀರಿನ ಘಟಕಗಳ ಬಳಿ ತೆರಳಿ ಕ್ಯಾನಿಗೆ ₹20 ನೀಡಿ ನೀರು ಖರೀದಿಸುತ್ತಿದ್ದಾರೆ. ಸಾರ್ವಜನಿಕ ಕೊಳಾಯಿಗಳ ಮುಂದೆ ಜನರು ಕಾಯುವಂತಾಗಿದೆ.

ಚಿತ್ರಾವತಿ ಜಲಾಶಯದಲ್ಲಿ ಹೆಚ್ಚು ನೀರು ಸಂಗ್ರಹಿಸುವ ಸಾಮರ್ಥ್ಯ ಇದೆ. ಆದರೆ ಹೂಳು ಕಲ್ಲು ಮಣ್ಣು ತುಂಬಿಕೊಂಡಿದೆ. ಇದರಿಂದ ನೀರಿನ ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗಿದೆ

ನರಸಿಂಹಯ್ಯ ಮುಖಂಡ ದಸಂಸ

ಕೆಲ ವಾರ್ಡ್‍ಗಳಲ್ಲಿ ಕುಡಿಯುವ ನೀರನ್ನು ರಸ್ತೆ ಚರಂಡಿಗಳಿಗೆ ಹರಿಸುತ್ತಿದ್ದರೂ ಪುರಸಭೆ ಅಧಿಕಾರಿಗಳು ಸಿಬ್ಬಂದಿ ಮೌನವಹಿಸಿದ್ದಾರೆ. ಮತ್ತೊಂದಡೆ ಕುಡಿವ ನೀರಿಗೆ ಪರದಾಡುವಂತಾಗಿದೆ

ಗಂಗರತ್ನಮ್ಮಕೃಷ್ಣಪ್ಪ ಸ್ಥಳೀಯ ನಿವಾಸಿ

ನೀರು ಪೂರೈಕೆಗೆ ಮತ್ತಷ್ಟು ಯೋಜನೆ

ಪಟ್ಟಣದಲ್ಲಿ 13 ನೂತನ ಕೊಳವೆಬಾವಿ ಕೊರೆಯಿಸಲು ಟೆಂಡರ್ ಕರೆಯಲಾಗಿದೆ. ಮೂರು ತಿಂಗಳ ಒಳಗೆ ಸಕಾಲದಲ್ಲಿ ಮಳೆ ಆಗುವ ಸಾಧ್ಯತೆ ಇದೆ. ಆದರೂ ಚಿತ್ರಾವತಿ ಜಲಾಶಯದಿಂದ ನೀರನ್ನು ಪಟ್ಟಣಕ್ಕೆ ಸಮರ್ಪಕವಾಗಿ ಸರಬರಾಜು ಮಾಡಲು ಮತ್ತಷ್ಟು ಯೋಜನೆ ರೂಪಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT