ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಳಾಪಟ್ಟಿ ಬದಲು– ಶೈಕ್ಷಣಿಕ ಚಟುವಟಿಕೆಗೆ ಧಕ್ಕೆ

ಕುಲಪತಿಗೆ ವರದಿ ಸಲ್ಲಿಸಿದ ಕೆಆರ್‌ಎಂಎಸ್ಎಸ್‌‌
Published 6 ಮೇ 2024, 4:53 IST
Last Updated 6 ಮೇ 2024, 4:53 IST
ಅಕ್ಷರ ಗಾತ್ರ

ಮುಡಿಪು: ಕೋವಿಡ್‌  ಮಹಾಮಾರಿಯ ನಂತರ ಮಂಗಳೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಆದ ಬದಲಾವಣೆಯಿಂದ ಶೈಕ್ಷಣಿಕ ವಲಯವೂ ಕೆಲವೊಂದು ಸಮಸ್ಯೆಗಳಲ್ಲಿ ಸಿಲುಕಿದೆ ಎಂದು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ (ಕೆಆರ್‌ಎಂಎಸ್ಎಸ್‌‌) ಮಂಗಳೂರು ವಿಶ್ವವಿದ್ಯಾನಿಲಯ ವಿಭಾಗವು ಅಧ್ಯಾಪಕರ ಮತ್ತು ವಿದ್ಯಾರ್ಥಿ ಸಮುದಾಯದ ವಿವಿಧ ವಿಚಾರಗಳ ಬಗ್ಗೆ ನಡೆಸಿದ ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ.

ಸಮೀಕ್ಷೆಯಲ್ಲಿ ಕಂಡುಕೊಂಡ ಅಂಶಗಳನ್ನು ಆಧರಿಸಿ ಕೆಆರ್‌ಎಂಎಸ್ಎಸ್‌‌ ಸುಧಾರಣಾ ವರದಿಯನ್ನು ಸಿದ್ಧಪಡಿಸಿದೆ. ಸಂಘದ ಪದಾಧಿಕಾರಿಗಳ ನಿಯೋಗವು ಸಮೀಕ್ಷಾ ವರದಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅವರಿಗೆ  ಈಚೆಗೆ ಹಸ್ತಾಂತರಿಸಿದೆ. ಕುಲಸಚಿವ ರಾಜು ಮೊಗವೀರ ಅವರಿಗೂ ವರದಿಯ ಪ್ರತಿಯನ್ನು ಸಲ್ಲಿಸಲಾಗಿದೆ.

‘ಮಂಗಳೂರು ವಿಶ್ವವಿದ್ಯಾಲಯವು ಕರಾವಳಿಯ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಗೆ ಸಹಾಯಕವಾಗಿದೆ. ಆದರೆ ವಿಶ್ವವಿದ್ಯಾಲಯದ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದ ಬಳಿಕ ವೇಳಾಪಟ್ಟಿಯು ಜೂನ್‌ – ಜುಲೈವರೆಗೆ ವಿಸ್ತರಣೆಯಾಗಿದೆ. ಇದರಿಂದಾಗಿ ಶೈಕ್ಷಣಿಕ ಚಟುವಟಿಕೆಯು ಇಲ್ಲಿನ ಬೇಸಿಗೆಯ ಬಿಸಿಲಿನಿಂದ ದುಷ್ಪರಿಣಾಮವನ್ನು ಎದುರಿಸುವಂತಾಗಿದೆ.  ಜೊತೆಗೆ ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್‌ ಬಳಕೆ ಹೆಚ್ಚಳದಂತಹ ಸಮಸ್ಯೆಗಳನ್ನು  ಇಲ್ಲಿನ ಕಾಲೇಜುಗಳು ಎದುರಿಸುತ್ತಿವೆ. ವಿವಿಧ ಕಾಲೇಜುಗಳ ಆಡಳಿತ ಮಂಡಳಿಗಳು, ಉಪನ್ಯಾಸಕರು, ಮತ್ತು ವಿದ್ಯಾರ್ಥಿ ಸಮುದಾಯದ ಮೇಲೂ ಇದರಿಂದ ದುಷ್ಪರಿಣಾಮ  ಉಂಟಾಗಿದೆ. ಹಿಂದಿನ ವೇಳಾ ಪಟ್ಟಿ ಪ್ರಕಾರ ಶೈಕ್ಷಣಿಕ ಚಟುವಟಿಕೆ ಎಪ್ರಿಲ್‌ – ಮೇ ತಿಂಗಳುಗಳಲ್ಲಿ ಮುಗಿಯುತ್ತಿತ್ತು. ಅದು ಇಲ್ಲಿನ ವಾತಾವರಣಕ್ಕೆ ಪೂರಕವಾಗಿತ್ತು’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.  

ಕೆಆರ್‌ಎಂಎಸ್ಎಸ್‌‌ನ ಮಂಗಳೂರು ವಿಶ್ವವಿದ್ಯಾಲಯ ವಿಭಾಗದ ಅಧ್ಯಕ್ಷೆ  ಸುಧಾ ಎನ್.ವೈದ್ಯ, ರಾಜ್ಯ ಜಂಟಿ ಕಾರ್ಯದರ್ಶಿ ಮಾಧವ ಎಂ.ಕೆ, ಮತ್ತು ವಿಭಾಗದ ಕಾರ್ಯದರ್ಶಿ ವೆಂಕಟೇಶ್ ನಾಯಕ್ , ಸುಭಾಷಿಣಿ ಶ್ರೀವತ್ಸ ಮತ್ತು ರಾಜೇಶ್ ಅವರು ಕುಲಪತಿಯವರಿಗೆ ವರದಿ ಸಲ್ಲಿಸಿದ ನಿಯೋಗದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT