ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಎಸ್ಸೆಸ್ಸೆಲ್ಸಿ: ಈ ವರ್ಷವೂ ಉತ್ತಮ ಫಲಿತಾಂಶದ ನಿರೀಕ್ಷೆ

ಮಾರ್ಚ್ 31ರಿಂದ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಜಿಲ್ಲೆಯಿಂದ 21,672 ವಿದ್ಯಾರ್ಥಿಗಳು
Last Updated 27 ಫೆಬ್ರುವರಿ 2023, 4:26 IST
ಅಕ್ಷರ ಗಾತ್ರ

ದಾವಣಗೆರೆ: ಮಾರ್ಚ್ 31ರಿಂದ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಜಿಲ್ಲೆಯಿಂದ 21,672 ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ. ಕಳೆದ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಶೇ 92.55ರಷ್ಟು ಫಲಿತಾಂಶ ಪಡೆದು ಉತ್ತಮ ಸಾಧನೆ ಮಾಡಿರುವ ದಾವಣಗೆರೆ ಜಿಲ್ಲೆಯಲ್ಲಿ ಈ ವರ್ಷವೂ ಉತ್ತಮ ಫಲಿತಾಂಶ ಪಡೆಯಲು ಶಿಕ್ಷಣ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ.

ಶೇ 60ಕ್ಕಿಂತ ಕಡಿಮೆ ಫಲಿತಾಂಶ ಬಂದ ಎರಡು ಶಾಲೆಗಳಿಗೆ ಒಬ್ಬರಂತೆ ದತ್ತು ಅಧಿಕಾರಿಗಳ ನೇಮಕ; ತಿಂಗಳ ಪ್ರತಿ 3ನೇ ಶನಿವಾರ ಕಡಿಮೆ ಫಲಿತಾಂಶ ಪಡೆದ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ವಿಷಯ ಶಿಕ್ಷಕರ ಸಭೆ; ಕ್ಲಿಷ್ಟಕರ ವಿಷಯಗಳ ಬಗ್ಗೆ ಕಾರ್ಯಾಗಾರ; ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಉತ್ತೀರ್ಣರಾಗುವಂತೆ ಕ್ರಿಯಾ ಯೋಜನೆ; ನಿಯಮಿತವಾಗಿ ಪೋಷಕರ ಸಭೆ; ತಾಯಂದಿರ ಸಭೆ; ಸಹಾಯವಾಣಿ; ಪೂರ್ವ ಸಿದ್ಧತಾ ಪರೀಕ್ಷೆಯ ವಿಶ್ಲೇಷಣೆಯ ನಂತರ ತೀರಾ ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ‘ಪಾಸಿಂಗ್ ಪ್ಯಾಕೇಜ್’, ಸರಾಸರಿ ಮತ್ತು ಸರಾಸರಿಗಿಂತ ಹೆಚ್ಚಿನ ಅಂಕ ಗಳಿಕೆಯ ಮಕ್ಕಳಿಗೆ ‘ಸ್ಕೋರಿಂಗ್ ಪ್ಯಾಕೇಜ್’ ರೂಪಿಸಿರುವುದು ಶಿಕ್ಷಣ ಇಲಾಖೆ ಹಮ್ಮಿಕೊಂಡ ಕೆಲವು ಪ್ರಮುಖ ಕಾರ್ಯಕ್ರಮಗಳು.

‘ಕಳೆದ ವರ್ಷ ಜಿಲ್ಲೆಯಲ್ಲಿ 4 ಶಾಲೆಗಳಲ್ಲಿ ಮಾತ್ರ ಶೇ 60ಕ್ಕಿಂತ ಕಡಿಮೆ ಫಲಿತಾಂಶ ಬಂದಿದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪಾಲಕರ ಸಭೆಯನ್ನು ನಿಯಮಿತವಾಗಿ ನಡೆಸಲಾಗುತ್ತಿದೆ. ಪಾಲಕರ ಸ್ಪಂದನೆ ಶೇ 70ರಷ್ಟು ಇದೆ. ಸಭೆಗೆ ಬಾರದವರ ಮನೆಗೆ ಶಿಕ್ಷಕರೇ ಭೇಟಿ ನೀಡಿ ಮಾರ್ಗದರ್ಶನ ನೀಡುತ್ತಾರೆ’ ಎಂದು ಶಿಕ್ಷಣ ಇಲಾಖೆಯ ನೋಡಲ್‌ ಅಧಿಕಾರಿ ಕುಮಾರ್‌ ತಿಳಿಸಿದರು.

‘ಈ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ 32 ಮಕ್ಕಳು ಇದ್ದಾರೆ. ಬೆಳಿಗ್ಗೆ 9ರಿಂದ 10ರವರೆಗೆ ವಿಶೇಷ ತರಗತಿ ತೆಗೆದುಕೊಳ್ಳುತ್ತಿದ್ದೇವೆ. ಸಂಜೆಯೂ ಶಾಲಾ ಅವಧಿಯ ನಂತರ ಗುಂಪು ಅಧ್ಯಯನ ಮಾಡಿಸುತ್ತಿದ್ದೇವೆ. ರಸಪ್ರಶ್ನೆ, ಯೂನಿಟ್ ಟೆಸ್ಟ್‌ಗಳನ್ನೂ

ನಿಯಮಿತವಾಗಿ ನಡೆಸಿದ್ದೇವೆ. ಅಂಕಗಳನ್ನು ಗಳಿಸಿರುವುದರ ಆಧಾರದ ಮೇಲೆ 2 ವಿಭಾಗ ಮಾಡಿದ್ದೇವೆ. ಓದಿನಲ್ಲಿ ಹಿಂದುಳಿದ

ಮಕ್ಕಳಿಗೆ ‘ಪಾಸಿಂಗ್ ಪ್ಯಾಕೇಜ್’, ಅಂದರೆ ಶೇ 30ರಷ್ಟಾದರೂ ಅಂಕ ಗಳಿಸಬಹುದಾದ ಮಾದರಿಯನ್ನು ಇಟ್ಟುಕೊಂಡು ನಿರಂತರವಾಗಿ ಕಲಿಸುತ್ತಿದ್ದೇವೆ. ಈ ವರ್ಷ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಎಲ್ಲ ವಿಷಯಗಳಲ್ಲಿ ಅನುತ್ತೀರ್ಣರಾದ 7 ಮಕ್ಕಳು ಇದ್ದಾರೆ. ಅವರು ಓದುವಂತೆ ಮಾಡಲು ಗರಿಷ್ಠ ಪ್ರಯತ್ನ ನಡೆಸಿದ್ದೇವೆ’ ಎಂದು ದಾವಣಗೆರೆಯ ಕೆ.ಬಿ. ಬಡಾವಣೆಯ ಕಾವೇರಮ್ಮ ಡಿಜೆವಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವಿಜಯಕುಮಾರ್ ಎಚ್. ಚಿಂದಿ ತಿಳಿಸಿದರು.

‘ಪಾಲಕರ ಸಭೆಗೆ 7ರಿಂದ 8 ಜನ ಬಂದರೆ ಹೆಚ್ಚು. ಏಕೆಂದರೆ ನಮ್ಮ ಶಾಲೆಗೆ ಬರುವ ಹೆಚ್ಚಿನ ಮಕ್ಕಳು ತೀರಾ ಬಡ ಕುಟುಂಬಗಳಿಂದ ಬಂದವರು. ತಂದೆ-ತಾಯಿ ಇಬ್ಬರೂ ಕೂಲಿಗೆ ಹೋದರೆ ಅವರ ಜೀವನ ನಡೆಯುತ್ತದೆ. ಮಕ್ಕಳು ಶಾಲೆಗೆ ಹೋದರೋ ಇಲ್ಲವೋ ಎಂದು ನೋಡಲೂ ಅವರಿಂದ ಆಗದು. ಹೀಗಾಗಿ ನಾವೇ ಮನೆಮನೆಗೆ ಹೋಗಿ ತಂದೆ-ತಾಯಿ ಬಳಿ
ಮಾತುಕತೆ ನಡೆಸುತ್ತೇವೆ’ ಎಂದು ಅವರು ಮಾಹಿತಿ ನೀಡಿದರು.

‘ಬಹುತೇಕ ಮನೆಗಳಲ್ಲಿ ಓದಿಗೆ ಪೂರಕ ವಾತಾವರಣ ಇಲ್ಲ. ಪ್ರತ್ಯೇಕ ಕೋಣೆ ವ್ಯವಸ್ಥೆ ಮಾಡುವ ಸಾಮರ್ಥ್ಯ ಪಾಲಕರಲ್ಲಿ ಇರುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳನ್ನು ಶಾಲೆಯಲ್ಲೇ ಹೆಚ್ಚಿನ ಸಮಯ ಉಳಿಸಿಕೊಂಡು ಕಲಿಸಲು ಒತ್ತು ನೀಡಿದ್ದೇವೆ. ಭಾನುವಾರ, ದಸರಾ ರಜೆಗಳಂದೂ ತರಗತಿ ನಡೆಸಿದ್ದೇವೆ’ ಎಂದು ವಿಜಯಕುಮಾರ್ ವಿವರಿಸಿದರು.

‘ಪಾಲಕರಿಗೆ ಮಕ್ಕಳನ್ನು ಟಿ.ವಿ. ಹಾಗೂ ಮೊಬೈಲ್‌ಗಳಿಂದ ದೂರ ಇರಿಸುವಂತೆ ಮನವರಿಕೆ ಮಾಡಿದ್ದೇವೆ. ಮಕ್ಕಳು ಮನೆಯಲ್ಲಿರುವಾಗ ಪಾಲಕರೂ ಟಿವಿ- ಮೊಬೈಲ್ ಬಳಸದಂತೆಯೂ ಸಲಹೆ ನೀಡಿದ್ದೇವೆ. ಓದಿಗೆ ಮಕ್ಕಳ ಇಚ್ಛಾಶಕ್ತಿಯೂ ಬೇಕಿದೆ. ಚೆನ್ನಾಗಿ ಓದುವ ವಿದ್ಯಾರ್ಥಿಗಳೂ ನಮ್ಮಲ್ಲಿ ಇದ್ದಾರೆ. ಕಳೆದ ವರ್ಷ ಶೇ 93ರಷ್ಟು ಫಲಿತಾಂಶದ ಸಾಧನೆ ಮಾಡಿದ ಮಕ್ಕಳೂ ಇದ್ದಾರೆ. ಉತ್ತಮ ಶಿಕ್ಷಕರೂ ಇಲ್ಲಿದ್ದಾರೆ’ ಎಂದು ಅವರು
ತಿಳಿಸಿದರು.

.............

ಕಳೆದ ವರ್ಷ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ 10ನೇ ಸ್ಥಾನ ಪಡೆದಿತ್ತು. ಈ ವರ್ಷ ಪರೀಕ್ಷಾಪೂರ್ವ ತರಬೇತಿ ಕಾರ್ಯಕ್ರಮಗಳು ಚೆನ್ನಾಗಿ ನಡೆದಿವೆ. ರಾಜ್ಯಕ್ಕೆ 5ರೊಳಗಿನ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದೇವೆ.

– ಜಿ.ಆರ್‌. ತಿಪ್ಪೇಶಪ್ಪ, ಡಿಡಿಪಿಐ

.............................

‘ವಿದ್ಯಾರ್ಥಿಗಳನ್ನು ಚೆನ್ನಾಗಿ ಓದುವವರು, ಸಾಧಾರಣ ಓದುವವರು ಹಾಗೂ ಕಲಿಕೆಯಲ್ಲಿ ಹಿಂದುಳಿದವರು ಎಂದು 3 ತಂಡಗಳನ್ನಾಗಿ ವಿಭಾಗಿಸುತ್ತೇವೆ. ಮೊದಲ ತಂಡದವರು ನೇರ ಬೋಧನೆಗೆ ಉತ್ತಮವಾಗಿ ಸ್ಪಂದಿಸುತ್ತಾರೆ. ಸಾಧಾರಣ ಓದಿನವರು ಹಾಗೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ಇಲಾಖೆಯೇ ‘ಪಾಸಿಂಗ್‌ ಪ್ಯಾಕೇಜ್‌’ ಕೈಪಿಡಿ ರೂಪದಲ್ಲಿ ಬಿಡುಗಡೆ ಮಾಡಿದೆ. ದೈನಂದಿನ ಬೋಧನೆಯೊಂದಿಗೆ ವಿಶೇಷ ತರಗತಿ ತೆಗೆದುಕೊಂಡು 2 ಹಾಗೂ 3ನೇ ತಂಡದವರಿಗೆ ಹೆಚ್ಚಿನ ಒತ್ತು ನೀಡಿ ಕಲಿಸುತ್ತಿದ್ದೇವೆ. ಅವರಿಗೆ ಏನು ಅರ್ಥವಾಗುತ್ತಿಲ್ಲ ಎಂಬುದನ್ನು ಅರಿತುಕೊಂಡು ಸಮಸ್ಯೆಗಳನ್ನು ಪರಿಹರಿ ಸುತ್ತಿದ್ದೇವೆ’ ಎಂದು ಸಂಪನ್ಮೂಲ ಶಿಕ್ಷಕ ಎಂ.ಎಸ್‌. ಬಿರಾದಾರ್‌ ತಿಳಿಸಿದರು.

...................

ಇನಾಯತ್‌ ಉಲ್ಲಾ ಟಿ.

ಹರಿಹರ: ‘ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಪ್ರೌಢಶಾಲೆ ಭಾಷಾ ಮತ್ತು ಕೋರ್ ವಿಷಯ ಶಿಕ್ಷಕರ 3 ಕಾರ್ಯಾಗಾರ, ಮುಖ್ಯ ಶಿಕ್ಷಕರ ಮಾಸಿಕ ಸಭೆ, ಪಾಲಕರ ಸಭೆ, ಪಠ್ಯಾಧಾರಿತ ಶೈಕ್ಷಣಿಕ ಸ್ಪರ್ಧೆ, ರಸಪ್ರಶ್ನೆ, ಶಿಕ್ಷಕ, ಸಹಶಿಕ್ಷಕ, ವಿದ್ಯಾರ್ಥಿಗಳಿಗೆ ಒತ್ತಡ ನಿರ್ವಹಣೆಗೆ ಸಂಪನ್ಮೂಲ ವ್ಯಕ್ತಿಗಳಿಂದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಪರೀಕ್ಷೆಯನ್ನು ಎದುರಿಸುವುದು ಹೇಗೆ ಎಂಬ ಕಾರ್ಯಾಗಾರ, ಪೂರ್ವ ಸಿದ್ಧತಾ ಸರಣಿ ಪರೀಕ್ಷೆಗಳನ್ನು ನಡೆಸಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಎಂ. ತಿಳಿಸಿದರು.

‘ಕ್ಲಿಷ್ಟಕರ ಎನಿಸಿದ ಪಠ್ಯದ ಅಂಶಗಳನ್ನು ಸಂಪನ್ಮೂಲ ಶಿಕ್ಷಕರನ್ನು ಕರೆಸಿ ಸುಲಭ ರೀತಿಯಲ್ಲಿ ಪಾಠ ಮಾಡಿಸಲಾಗಿದೆ. ಕಿರು ಪರೀಕ್ಷೆಗಳನ್ನು ಬಹಳ ಬಿಗಿಯಾಗಿ ನಡೆಸುತ್ತೇವೆ. ಇದಕ್ಕೆ ಬೇರೆ ಶಾಲೆಗಳಿಂದ ಪ್ರಶ್ನೆ ಪತ್ರಿಕೆ ತರಿಸುತ್ತೇವೆ. ಬೆಳಿಗ್ಗೆ 9ರಿಂದ 10ರವರೆಗೆ ವಿಶೇಷ ತರಗತಿ, ಸಂಜೆ 4.20 ರಿಂದ 5ರವರೆಗೆ ಗುಂಪು ಅಧ್ಯಯನ ನಡೆಸುತ್ತಿದ್ದೇವೆ. ಈ ಹಿಂದೆ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಉತ್ತಮ ಫಲಿತಾಂಶ ಪಡೆದ ಇದೇ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಈಗಿನ ವಿದ್ಯಾರ್ಥಿಗಳಿಗೆ ಅನುಭವ ಹಂಚಿಕೆ ಕಾರ್ಯಕ್ರಮವನ್ನೂ ನಡೆಸಿದ್ದೇವೆ’ ಎಂದು ಗುತ್ತೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿದ್ದಪ್ಪ ಟಿ. ವಿವರಿಸಿದರು.

................

ಎಚ್.ವಿ. ನಟರಾಜ್

ಚನ್ನಗಿರಿ: ಪ್ರತಿ ಶಾಲೆಯಲ್ಲೂ ‘ಪರೀಕ್ಷೆ ಒಂದು ಹಬ್ಬ’ ಎಂಬ ವಿನೂತನ ಕಾರ್ಯಕ್ರಮವನ್ನು ನಡೆಸುವ ಮೂಲಕ ವಿದ್ಯಾರ್ಥಿಗಳ ಪರೀಕ್ಷೆಯ ಭಯ ಹೋಗಲಾಡಿಸಲಾಗುತ್ತಿದೆ. ಉತ್ಸಾಹ ತುಂಬುವ, ಉತ್ತೇಜನ ನೀಡುವ ಕಾರ್ಯ ಕೈಗೊಳ್ಳಲಾಗಿದೆ. ಈಗಾಗಲೇ 3ರಿಂದ 4 ಬಾರಿ ವಿದ್ಯಾರ್ಥಿಗಳ ತಂದೆ– ತಾಯಿಯರೊಂದಿಗೆ ಸಭೆ ನಡೆಸಲಾಗಿದೆ. ಕಳೆದ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ನಮ್ಮ ತಾಲ್ಲೂಕು ಜಿಲ್ಲೆಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಈ ಬಾರಿ ಪ್ರಥಮ ಸ್ಥಾನ ಪಡೆಯಲು ಬೇಕಾದ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಮಂಜುನಾಥ್ ತಿಳಿಸಿದರು.

‘ನಮ್ಮ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತಯಾರಾಗಲು ಶಿಕ್ಷಕರು ಉತ್ತಮ ರೀತಿಯ ಬೋಧನೆ ಮಾಡುತ್ತಿದ್ದಾರೆ. ಪ್ರತಿ ದಿನ ಬೆಳಿಗ್ಗೆ ಹಾಗೂ ಸಂಜೆ ವಿಷಯವಾರು ಶಿಕ್ಷಕರು ವಿಶೇಷ ಬೋಧನೆ ಮಾಡುತ್ತಿದ್ದಾರೆ. ಇದರ ಫಲವಾಗಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು ಎಂಬ ಧೈರ್ಯ ಬಂದಿದೆ’ ಎಂದು ಸರ್ಕಾರಿ ಬಾಲಕಿಯರ ಪ್ರೌಢಶಾಲೆ 10ನೇ ತರಗತಿಯ ವಿದ್ಯಾರ್ಥಿನಿ ಚೇತನಾ ತಿಳಿಸಿದಳು.

...................

ಡಿ. ಶ್ರೀನಿವಾಸ್

ಜಗಳೂರು: ‘ಪರೀಕ್ಷಾ ಹಬ್ಬ, ಫೋನ್ ಇನ್ ಕಾರ್ಯಕ್ರಮ, ಮಿಸ್ಡ್ ಕಾಲ್ ಕಾರ್ಯಕ್ರಮ, ಮನೆಮನೆಗೆ ಭೇಟಿ, ಶಿಕ್ಷಕರ ಕ್ಲಬ್ ಸಭೆಗಳು ಮುಂತಾದ ವಿಭಿನ್ನ ಪ್ರಯೋಗಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡ ಕಾರಣ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಗಳೂರು ತಾಲ್ಲೂಕು ಸತತ ನಾಲ್ಕು ವರ್ಷಗಳಿಂದ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸುತ್ತಿದೆ. ‘ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸುವುದಕ್ಕಾಗಿ ಪರೀಕ್ಷಾ ಹಬ್ಬ ಕಾರ್ಯಾಗಾರ, ಶಿಕ್ಷಕರ ಕ್ಲಬ್ ಹೆಸರಿನಲ್ಲಿ ವಿಷಯವಾರು ಚರ್ಚೆ, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ಶಿಕ್ಷಕರೊಂದಿಗೆ ಫೋನ್ ಇನ್ ಕಾರ್ಯಕ್ರಮ ಸೇರಿ ಹಲವು ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಮಾಡಲಾಗಿದೆ’ ಎಂದು ಶಿಕ್ಷಣ ಇಲಾಖೆಯ ಪ್ರಭಾರ ಕ್ಷೇತ್ರ ಸಮನ್ವಯಾಧಿಕಾರಿ ಹಾಲೇಶಪ್ಪ ಮಾಹಿತಿ ನೀಡಿದರು.

‘ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮನೆಮನೆಗೆ ಭೇಟಿ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ತೊಡಕಾಗುವ ವಿಷಯವನ್ನು ಗುರತಿಸಿ ಶಿಕ್ಷಕರು ಪರಿಹರಿಸುತ್ತಾರೆ. ಅಂತಹ ವಿದ್ಯಾರ್ಥಿಗಳಿಗೆ ವಾರಕ್ಕೆ ಎರಡು ಬಾರಿ ಪೂರ್ವ ತಯಾರಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಬೆಳಗಿನ ವೇಳೆಯಲ್ಲಿ ಮಕ್ಕಳನ್ನು ಓದಲು ಪ್ರೇರೇಪಿಸುವಂತೆ ಮಿಸ್ಡ್ ಕಾಲ್ ಕೊಟ್ಟು ಎಚ್ಚರಿಸುವುದು, ಆನ್‌ಲೈನ್‌ನಲ್ಲಿ ನೇರವಾಗಿ ವಿದ್ಯಾರ್ಥಿಗಳಿಗೆ ತರಗತಿಗಳನ್ನು ತೆಗೆದುಕೊಳ್ಳುವ ಮೂಲಕ ಎಲ್ಲ ಪ್ರೌಢಶಾಲೆಗಳಲ್ಲಿ ಯಶಸ್ವಿ ಪ್ರಯೋಗಗಳನ್ನು ಮಾಡಲಾಗುತ್ತಿದೆ’ ಎಂದು ಅವರು
ವಿವರಿಸಿದರು.

......................

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT