ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: 197 ವರ್ಷಗಳ ಇತಿಹಾಸ ಇರುವ ಸಾರ್ವಜನಿಕರ ಆರಾಧ್ಯನಾದ ‘ಮನೆತನದ ಗಣಪ’

Published 14 ಸೆಪ್ಟೆಂಬರ್ 2023, 6:18 IST
Last Updated 14 ಸೆಪ್ಟೆಂಬರ್ 2023, 6:18 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಗಣಪನ ಸ್ವಾಗತಕ್ಕೆ ಜನರು ಸಿದ್ಧವಾಗಿದ್ದಾರೆ. ಇಲ್ಲಿಯ ಸಾರ್ವಜನಿಕ ಗಣೇಶೋತ್ಸವಕ್ಕೆ ಹಲವು ವರ್ಷಗಳ ವೈಶಿಷ್ಟ್ಯತೆ ಇದೆ. ಹುಬ್ಬಳ್ಳಿಯಿಂದ 16 ಕಿ.ಮೀ ದೂರದ ಛಬ್ಬಿ ಗ್ರಾಮದ ಕೆಂಪು ಗಣಪನಿಗೆ 197 ವರ್ಷಗಳ ಇತಿಹಾಸವಿದೆ.

‘ಛಬ್ಬಿ ಗಣಪ’ ಎಂದೇ ಖ್ಯಾತವಾದ ಕೆಂಪು ಗಣಪತಿ ಈ ಗ್ರಾಮದ ಕುಲಕರ್ಣಿ ಮನೆತನದವರ 7 ಮನೆಗಳಲ್ಲಿ ಪ್ರತಿಷ್ಠಾಪಿತ ಆಗುತ್ತದೆ. ಆದರೆ, ಕಾಲಾಂತರದಲ್ಲಿ ಇದಕ್ಕೆ ಸಾರ್ವಜನಿಕ ಉತ್ಸವದ ರೂಪ ಪ್ರಾಪ್ತವಾಗಿರುವುದೇ ಇದರ ವೈಶಿಷ್ಟ್ಯ.

ಛಬ್ಬಿ ಗ್ರಾಮದ ಕುಲಕರ್ಣಿ ಮನೆತನದ ತಮ್ಮಪ್ಪ ಎಂಬುವರಿಗೆ ಸಂತಾನ ಭಾಗ್ಯ ಇರಲಿಲ್ಲ. 1827ರಲ್ಲಿ ಹಳೇಹುಬ್ಬಳ್ಳಿಯ ಕೃಷ್ಣೇಂದ್ರಸ್ವಾಮಿ ಮಠದ ಕೃಷ್ಣೇಂದ್ರ ಸ್ವಾಮೀಜಿ ‘ಸಿಂಧೂರ (ಕೆಂಪು) ಗಣಪತಿ’ ಪ್ರತಿಷ್ಠಾಪಿಸಿ ಪೂಜಿಸಲು ಸೂಚಿಸಿದರು. ಈ ಬಗ್ಗೆ ಮಠದ ‘ಕೃಷ್ಣೇಂದ್ರ ಗುರು ಚರಿತ್ರೆ’ಯಲ್ಲಿ ಉಲ್ಲೇಖವಿದೆ. ಹೀಗೆ ಕೆಂಪು ಗಣಪತಿ ಪ್ರತಿಷ್ಠಾಪನೆ 1827ರಲ್ಲಿ ಈ ಮನೆತನದಲ್ಲಿ ಆರಂಭವಾಯಿತು.  ಆ ನಂತರ 6 ತಲೆಮಾರು ಆಗಿದ್ದು ಈಗ ಈ ಮನೆತನದ ರಾಮಚಂದ್ರ ಅನಂತರಾವ್‌ ಕುಲಕರ್ಣಿ, ಮೋಹನ ಹನುಮಂತರಾವ್‌ ಕುಲಕರ್ಣಿ, ವಿನಾಯಕ ಕಾಶಿನಾಥರಾವ್‌ ಕುಲಕರ್ಣಿ, ನಾರಾಯಣ ರಾಮಚಂದ್ರರಾವ್‌ ಕುಲಕರ್ಣಿ, ಸೋಮರಾವ್‌ ಶ್ರೀಪಾದರಾವ್‌ ಕುಲಕರ್ಣಿ, ವಿಶ್ವನಾಥ ವಾಸುದೇವರಾವ್‌ ಕುಲಕರ್ಣಿ, ಮಾಲತೇಶ ಶಂಕರರಾವ್‌ ಕುಲಕರ್ಣಿ ಅವರ ಮನೆಗಳಲ್ಲಿ ಈ ವಿನಾಯಕನ ದರ್ಶನವಾಗುತ್ತದೆ.

‘ಕೆಂಪು ಗಣೇಶನನ್ನು ಛಬ್ಬಿ ಗ್ರಾಮದ ಕಲಾವಿದರೇ ಸೂಕ್ತ ಮುಹೂರ್ತದಲ್ಲಿ ತಯಾರಿಸುತ್ತಾರೆ. ಪೂರ್ವಾಭಿಮುಖವಾಗಿ ಪ್ರತಿಷ್ಠಾಪನೆಯಾಗುವ ಮೂರ್ತಿಯ ಬಲಗೈಯಲ್ಲಿ ಮುರಿದ ದಂತ, ಎಡಗೈಯಲ್ಲಿ ಈಶ್ವರ ಲಿಂಗು ಹಾಗೂ ಉಳಿದ ಕೈಗಳಲ್ಲಿ ಆಯುಧಗಳು ಇರುತ್ತವೆ. ಇಂತಹ ಗಣಪತಿಯನ್ನು ಮೈಸೂರು ಹಾಗೂ ಇಂದೂರಿನ ಅರಮನೆಗಳಲ್ಲಿ ಕಾಣಬಹುದು. ಸಂಜೆಯ ವೇಳೆ ಪ್ರತಿಷ್ಠಾಪಿಸುವುದೂ ವಿಶೇಷ. ಚೌತಿಯಂದು ಗಣೇಶ ಬರುವಾಗ ಚಂದ್ರ ಆತನನ್ನು ಕಂಡು ನಕ್ಕ. ಕೋಪಗೊಂಡ ಗಣೇಪ ತನ್ನ ದಂತ ಮುರಿದು ಚಂದ್ರನತ್ತ ಎಸೆದ ಎಂಬ ಕಥೆ ಕೇಳುತ್ತೇವೆ. ಹೀಗಾಗಿಯೇ ಬಲಗೈಯಲ್ಲಿ ಮುರಿದ ದಂತ ಇರಿಸುವ ರೂಢಿ ಬಂದಿರಬಹುದು’ ಎಂದು ಛಬ್ಬಿಯ ವಿನಾಯಕ ಕುಲಕರ್ಣಿ ವಿವರಿಸಿದರು.

ಮೊದಲ ದಿನ ಸಂಜೆ 6ಕ್ಕೆ ಮೆರವಣಿಗೆಯಲ್ಲಿ ಗಣಪತಿ ಮೂರ್ತಿಗಳನ್ನು ತಂದು ಪ್ರತಿಷ್ಠಾಪಿಸಲಾಗುತ್ತದೆ. ನಂತರ ರಾತ್ರಿ 8.30ರಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಇಲ್ಲಿಯ ಗ್ರಾಮ ಪಂಚಾಯಿತಿಯೇ ಪಾರ್ಕಿಂಗ್‌, ಕುಡಿಯುವ ನೀರು, ಸ್ವಚ್ಛತೆ, ಪೊಲೀಸ್‌ ಬಂದೋಬಸ್ತ್‌ ಹಾಗೂ ಉತ್ಸವದ ಇತರ ವ್ಯವಸ್ಥೆಗಳನ್ನು ಮಾಡುತ್ತದೆ. ಹೊರ ಜಿಲ್ಲೆಗಳು, ಹೊರ ರಾಜ್ಯಗಳಿಂದಲೂ ಭಕ್ತರು ಬರುವುದರಿಂದ ವಾಯವ್ಯ ಸಾರಿಗೆಯಿಂದ ಛಬ್ಬಿ ಗ್ರಾಮಕ್ಕೆ ಪ್ರತಿ ವರ್ಷ ಬಸ್‌ ವ್ಯವಸ್ಥೆ ಸಹ ಮಾಡಲಾಗುತ್ತದೆ. ಒಟ್ಟು ಮೂರು ದಿನ ಗಣೇಶ ದರ್ಶನಕ್ಕೆ ವ್ಯವಸ್ಥೆಯಿದೆ.

‘ಕಾಲಕ್ರಮೇಣ ಜನತೆ ಅಡಿಕೆ ಅಥವಾ ರುದ್ರಾಕ್ಷಿ ಒಯ್ದು ಪೂಜೆ ಮಾಡಿಸಿಕೊಂಡು ಬರುವುದು, ನಿರಂತರ ಮೂರು ವರ್ಷ ತಪ್ಪದೇ ದರ್ಶನ ಪಡೆಯಬೇಕು ಎಂಬ ರೂಢಿಗಳನ್ನು ಬೆಳೆಸಿಕೊಂಡಿದ್ದಾರೆ. ಇಲ್ಲಿ ಯಾವುದೇ ಕಟ್ಟಳೆಗಳು ಇಲ್ಲದಿದ್ದರೂ ಕೆಲವು ಪದ್ಧತಿಗಳನ್ನು ಜನರೇ ರೂಪಿಸಿಕೊಂಡಿದ್ದಾರೆ. ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬುದು ಭಕ್ತರ ನಂಬಿಕೆ’ ಎಂದು ವಿನಾಯಕ ಕುಲಕರ್ಣಿ ಹಾಗೂ ಅಚ್ಯುತ ಕುಲಕರ್ಣಿ ತಿಳಿಸಿದರು.

ಮೂರನೇ ದಿನ ರಾತ್ರಿ 12ರ ನಂತರ ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆ ನಡೆಯುತ್ತದೆ. ಧಾರವಾಡ ಜಿಲ್ಲೆ, ವಿಜಯಪುರ, ಬಾಗಲಕೋಟೆ, ಕಲಬುರಗಿ, ಬೆಂಗಳೂರು ಜಿಲ್ಲೆ ಹಾಗೂ ಹೊರ ರಾಜ್ಯಗಳ ಜನರೂ ವಿಘ್ನವಿನಾಶಕನ ದರ್ಶನಕ್ಕೆ ಬರುತ್ತಾರೆ. ಈ ವರ್ಷ ಸೆಪ್ಟೆಂಬರ್ 18ರಿಂದ 20ರವರೆಗೆ ಛಬ್ಬಿಯ ಕೆಂಪು ಗಣೇಶೋತ್ಸವ ನಡೆಯಲಿದೆ. ಸೆಪ್ಟೆಂಬರ್ 18ರ ರಾತ್ರಿ 8.30ರಿಂದ ಸಾರ್ವಜನಿಕ ದರ್ಶನಕ್ಕೆ ಲಭ್ಯವಿದೆ.

ಛಬ್ಬಿ ಗ್ರಾಮದಲ್ಲಿ ಕೆಂಪು ಗಣಪನ ದರ್ಶನಕ್ಕೆ ಸರತಿಯಲ್ಲಿ ನಿಂತ ಭಕ್ತರು (ಸಂಗ್ರಹ ಚಿತ್ರ)
ಛಬ್ಬಿ ಗ್ರಾಮದಲ್ಲಿ ಕೆಂಪು ಗಣಪನ ದರ್ಶನಕ್ಕೆ ಸರತಿಯಲ್ಲಿ ನಿಂತ ಭಕ್ತರು (ಸಂಗ್ರಹ ಚಿತ್ರ)
ಛಬ್ಬಿ ಗ್ರಾಮದಲ್ಲಿ ಕೆಂಪು ಗಣಪನನ್ನು ಮೆರವಣಿಗೆಯಲ್ಲಿ ಕರೆತರುತ್ತಿರುವುದು (ಸಂಗ್ರಹ ಚಿತ್ರ)
ಛಬ್ಬಿ ಗ್ರಾಮದಲ್ಲಿ ಕೆಂಪು ಗಣಪನನ್ನು ಮೆರವಣಿಗೆಯಲ್ಲಿ ಕರೆತರುತ್ತಿರುವುದು (ಸಂಗ್ರಹ ಚಿತ್ರ)
ಇದು ಮನೆತನದ ಗಣಪತಿ. 30 ವರ್ಷಗಳಿಂದ ಸಾರ್ವಜನಿಕರು ಅಪಾರ ಪ್ರಮಾಣದಲ್ಲಿ ಬರುತ್ತಿದ್ದಾರೆ. ಹೀಗಾಗಿ ಸಾರ್ವಜನಿಕ ಉತ್ಸವದ ಸ್ವರೂಪ ಪಡೆದಿದೆ
ವಿನಾಯಕ ಕುಲಕರ್ಣಿ ಛಬ್ಬಿ
ಛಬ್ಬಿ ಗ್ರಾಮ ಪಂಚಾಯಿತಿಯಿಂದ ಉತ್ತಮ ಸಹಕಾರವಿದೆ. ನಮ್ಮ ಕುಟುಂಬಗಳ ಹಬ್ಬದಲ್ಲಿ ಸಾವಿರಾರು ಜನ ಪಾಲ್ಗೊಳ್ಳುತ್ತಿರುವುದು ಸಂಭ್ರಮ ಮೂಡಿಸಿದೆ
ಅಚ್ಯುತ ಕುಲಕರ್ಣಿ ಛಬ್ಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT