ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಜಿಲ್ಲೆಯಲ್ಲಿ 57 ಕುಷ್ಠರೋಗ ಪ್ರಕರಣ ಪತ್ತೆ

ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ ಸಮೀಕ್ಷೆ
Published 23 ಆಗಸ್ಟ್ 2023, 7:02 IST
Last Updated 23 ಆಗಸ್ಟ್ 2023, 7:02 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕುಷ್ಠರೋಗ ಪತ್ತೆ ಮಾಡುವ ಅಭಿಯಾನ ಕೈಗೊಂಡಿದೆ.

ಧಾರವಾಡ ಜಿಲ್ಲೆಯಲ್ಲಿ ಒಟ್ಟು 57 ರೋಗಿಗಳು ಪತ್ತೆಯಾಗಿದ್ದಾರೆ. ಕಳೆದ ವರ್ಷ 74 ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಂಡಿತ್ತು. ಈ ವರ್ಷ ಇಳಿಕೆಯಾಗಿದೆ.

‘17,47,665 ಜನರನ್ನು ಸಮೀಕ್ಷೆ ಮಾಡಿ ಒಟ್ಟು 5,294 ಸಂಶಯಾಸ್ಪದ ರೋಗಿಗಳನ್ನು ಗುರುತಿಸಲಾಗಿದೆ. ಅವರಲ್ಲಿ ಎಂ.ಬಿ (ಮಲ್ಟಿ ಬ್ಯಾಸಿಲರಿ)– 32, ಪಿಬಿ (ಪಾಸಿ ಬ್ಯಾಸಿಲರಿ)–25 ಪ್ರಕರಣಗಳು ಇವೆ. ಪಿಬಿ ಪ್ರಕರಣಗಳಲ್ಲಿ ನಾಲ್ವರು ಮಕ್ಕಳು ಇದ್ದಾರೆ’ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಆಶಾ ಕಾರ್ಯಕರ್ತರು, ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಸ್ವಯಂಸೇವಕರು ಇರುವ  ಒಟ್ಟು 1,643 ತಂಡಗಳು, 331 ಮೇಲ್ವಿಚಾರಕರು ಮನೆಮನೆ ಸಮೀಕ್ಷೆ ನಡೆಸಿದ್ದಾರೆ. ರೋಗ ಪತ್ತೆಯಾಗಿರುವ ಗ್ರಾಮ ಹಾಗೂ ವಾರ್ಡ್‌ಗಳನ್ನು ಸೂಕ್ಷ್ಮಪ್ರದೇಶಗಳೆಂದು ಪರಿಗಣಿಸಿ ವಿಶೇಷ ಮರುಸಮೀಕ್ಷೆ ಮಾಡಲಾಗಿದೆ. ಸದ್ಯ ಎಂ.ಬಿ– 68, ಪಿ.ಬಿ– 20 ಒಟ್ಟು 88 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಪಿಬಿ–5, ಎಂ.ಬಿ. 21 ಒಟ್ಟು 26 ರೋಗಿಗಳನ್ನು ಗುಣಮುಖಗೊಳಿಸಲಾಗಿದೆ.

ಮೈಕೊಬ್ಯಾಕ್ಟಿರಿಯಂ ಲೆಪ್ರೆ ಎಂಬ ಬ್ಯಾಕ್ಟಿರಿಯಾದಿಂದ ಉಂಟಾಗುವ ಸಾಂಕ್ರಾಮಿಕ ರೋಗವಾದ ಕುಷ್ಠವು ದೀರ್ಘಕಾಲೀನವಾಗಿ ಕಾಡುತ್ತದೆ. ಮುಖ್ಯವಾಗಿ ಚರ್ಮ ಹಾಗೂ ನರಗಳ ಮೇಲೆ ಪರಿಣಾಮ ಬೀರುತ್ತದೆ. ಆರಂಭಿಕ ಹಂತದಲ್ಲೇ ಗುರುತಿಸಿದರೆ ಗುಣಮುಖಗೊಳಿಸಬಹುದು. ಚಿಕಿತ್ಸೆ ಪಡೆಯದಿದ್ದರೆ ಅಂಗವೈಕಲ್ಯವೂ ಉಂಟಾಗಬಹುದು. 

‘ಪಾಸಿ ಬ್ಯಾಸಿಲರಿ (ಪಿ.ಬಿ.) ಪ್ರಕರಣಗಳಿಗೆ 6 ತಿಂಗಳ ಬಹು ಔಷಧೀಯ ಚಿಕಿತ್ಸೆ, ಮಲ್ಟಿ ಬ್ಯಾಸಿಲರಿ (ಎಂ.ಬಿ.) ಪ್ರಕರಣಗಳಿಗೆ 12 ತಿಂಗಳ ಬಹು ಔಷಧೀಯ ಚಿಕಿತ್ಸೆ ಸರ್ಕಾರದಿಂದ ಉಚಿತವಾಗಿ ಸಿಗುತ್ತದೆ. ಎಂ.ಸಿ.ಆರ್‌. ಪಾದರಕ್ಷೆಗಳು, ಸ್ವಯಂ ಆರೈಕೆ ಕಿಟ್‌, ವ್ಯಾಯಾಮ ಸಾಮಗ್ರಿಗಳು, ಸ್ವಯಂ ಆರೈಕೆ ಕುರಿತು ತರಬೇತಿ, ಆರ್‌ಸಿಎಸ್‌ ಶಸ್ತ್ರ ಚಿಕಿತ್ಸೆ, ಈ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಫಲಾನುಭವಿಗಳಿಗೆ ₹ 12 ಸಾವಿರ ಸಹಾಯಧನ ಮತ್ತು ಔಷಧಿ ನೀಡಲಾಗುತ್ತದೆ’ ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ  ಡಾ.ಎಸ್‌.ಬಿ.ಕಳಸೂರಮಠ ತಿಳಿಸಿದ್ದಾರೆ.

ಕುಷ್ಠರೋಗದಿಂದ ಅಂಗವೈಕಲ್ಯ ಉಂಟಾದರೆ ಅವರಿಗೆ ಅಂಗವಿಕಲತೆ ಪ್ರಮಾಣ ಪತ್ರ ನೀಡಲಾಗುತ್ತದೆ. ಗುಣಮುಖ ಹೊಂದಿದವರಿಗೆ ಚಿಕಿತ್ಸಾ ಪ್ರಮಾಣಪತ್ರವನ್ನೂ ಕೊಡಲಾಗುತ್ತದೆ.
–ಡಾ.ಎಸ್‌.ಬಿ.ಕಳಸೂರಮಠ ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ

ಚಿಕಿತ್ಸೆ ಬಳಿಕ ರೋಗ ಹರಡಲ್ಲ’ ಕುಷ್ಠರೋಗಿ ಎಂದು ಖಚಿತಪಡಿಸಿದ ನಂತರ ರೋಗಿ ಸಮಾಜ ಹಾಗೂ ಕುಟುಂಬದಿಂದ ತಿರಸ್ಕಾರಕ್ಕೆ ಒಳಗಾಗುವ ಸಂದರ್ಭ ಒದಗಬಹುದು. ಆಗ ರೋಗಿಗೆ ಆತ್ಮಸ್ಥೈರ್ಯ ತುಂಬಿ ಕುಟುಂಬ ಹಾಗೂ ಸಾರ್ವಜನಿಕರಿಗೆ ಬಹುಔಷಧ ಚಿಕಿತ್ಸೆಯ ಕುರಿತು ಮನವರಿಕೆ ಮಾಡಿಕೊಡಲಾಗುತ್ತದೆ. ಬಹುಔಷಧ ಚಿಕಿತ್ಸೆ ನೀಡಿದ 48 ಗಂಟೆಗಳ ಒಳಗೆ ರೋಗಿಯಲ್ಲಿರುವ ಬ್ಯಾಕ್ಟಿರಿಯಾ ಶೇ 99ರಷ್ಟು ಸತ್ತು ಹೋಗುತ್ತದೆ. ಈ ರೋಗಿಯಿಂದ ಯಾರಿಗೂ ರೋಗ ಹರಡುವುದಿಲ್ಲ ಎಂದು ಮನವರಿಕೆ ಮಾಡಿಕೊಡಲಾಗುತ್ತದೆ. ಆದರೂ ಸಮಾಜದಿಂದ ರೋಗಿ ತಿರಸ್ಕರಿಸಲ್ಪಟ್ಟರೆ ಅಂಥವರನ್ನು ಬಾಗಲಕೋಟೆ ಜಿಲ್ಲೆಯಲ್ಲಿರುವ ಕುಷ್ಠರೋಗ ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಗುತ್ತದೆ. ಇದುವರೆಗೂ ಜಿಲ್ಲೆಯಲ್ಲಿ ರೋಗಿಯನ್ನು ತಿರಸ್ಕರಿಸಲಾದ ಪ್ರಕರಣ ಕಂಡು ಬಂದಿಲ್ಲ ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ಎಸ್‌.ಬಿ.ಕಳಸೂರಮಠ ತಿಳಿಸಿದರು.

ಕುಷ್ಠರೋಗ ಹರಡುವುದು ಹೇಗೆ? ಚಿಕಿತ್ಸೆ ಪಡೆಯದ ಕುಷ್ಠರೋಗಿಯು ಸೀನಿದಾಗ ಕೆಮ್ಮಿದಾಗ ಬರುವ ತುಂತುರು ಹನಿಗಳು ಗಾಳಿಯಲ್ಲಿ ಹರಡಿ ಆರೋಗ್ಯವಂತ ವ್ಯಕ್ತಿಯ ದೇಹದೊಳಗೆ ಪ್ರವೇಶಿಸಿದಾಗ ರೋಗ ಹರಡುವ ಸಾಧ್ಯತೆ ಇರುತ್ತದೆ. ಚರ್ಮದ ಮೇಲೆ ತಿಳಿ ಬಿಳಿ ತಾಮ್ರ ಬಣ್ಣದ ಮಚ್ಚೆ ಇದ್ದು ಅವುಗಳಿಗಳಿಗೆ ಸ್ಪರ್ಶ ಜ್ಞಾನ ಇಲ್ಲದಿರುವುದು ದಪ್ಪನಾದ ಎಣ್ಣೆ ಪಸರಿಸಿದಂಥ ಹೊಳೆಯುವ ಚರ್ಮ ದೇಹದ ಮೇಲೆ ಗಂಟುಗಳು ಕಣ್ಣಿನ ರೆಪ್ಪೆ ಮುಚ್ಚುವಲ್ಲಿ ತೊಂದರೆ ಕೈ ಅಥವಾ ಕಾಲುಗಳಲ್ಲಿ ಬಹುದಿನಗಳ ಗಾಯ ಕೈ ಅಥವಾ ಕಾಲುಗಳಲ್ಲಿ ಬೆರಳು ಮಡಚಿಕೊಂಡಿರುವುದು ನಡೆಯುವಾಗ ಕಾಲು ಎಳೆಯುವುದಾಗುತ್ತದೆ. ಕೈ ಅಥವಾ ಕಾಲುಗಳಲ್ಲಿ ಜುಮ್ಮೆನಿಸುವಿಕೆ ಅಥವಾ ಮರಗಟ್ಟುವಿಕೆ ಅಂಗೈ ಅಥವಾ ಪಾದಗಳಲ್ಲಿ ಶೀತ ಬಿಸಿ ಸಂವೇದನೆ ನಷ್ಟವಾಗುತ್ತದೆ. ಕೈಗಳಲ್ಲಿ ವಸ್ತುಗಳ‌ನ್ನು ಹಿಡಿಯಲು ಬಲಹೀನತೆ ಕಾಣುತ್ತದೆ.

ಅಂಕಿ–ಅಂಶ ವರ್ಷ;ಜನಸಂಖ್ಯೆ;ಪತ್ತೆಯಾದ ಹೊಸ ಪ್ರಕರಣಗಳು 2018–19;2045639;117 2019–2020;2075710;97 2020–2021;2106223;48 2022–2023;2137184;74 2023–2024;2148456;52

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT