ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ| ಸೆಂಟ್ರಲ್ ಕ್ಷೇತ್ರ: 260 ಮತಗಟ್ಟೆ, 1,244 ಸಿಬ್ಬಂದಿ

ಮಸ್ಟರಿಂಗ್‌ ಕೇಂದ್ರದಿಂದ ಮತಗಟ್ಟೆಗಳಿಗೆ ತೆರಳಿದ ಚುನಾವಣಾ ಸಿಬ್ಬಂದಿ
Published 6 ಮೇ 2024, 15:46 IST
Last Updated 6 ಮೇ 2024, 15:46 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹು–ಧಾ ಸೆಂಟ್ರಲ್‌ ಮತ್ತು ಪೂರ್ವ ವಿಧಾನ ಸಭಾ ಕ್ಷೇತ್ರದಲ್ಲಿ ಲೋಕಸಭಾ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ಸೋಮವಾರ ಇವಿಎಂ, ವಿ.ವಿ.ಪ್ಯಾಟ್‌ಗಳೊಂದಿಗೆ ಮತಗಟ್ಟೆಗಳಿಗೆ ತೆರಳಿದರು.

ಹುಬ್ಬಳ್ಳಿಯ ಲ್ಯಾಮಿಂಗ್ಟನ್‌ ಶಾಲೆಯ ಮಸ್ಟರಿಂಗ್ ಸೆಂಟರ್‌ನಲ್ಲಿ ಸಿಬ್ಬಂದಿಗೆ ಮತಯಂತ್ರ ಬಳಕೆ ಬಗ್ಗೆ ಮಾಹಿತಿ ನೀಡಲಾಯಿತು.

ಚುನಾವಣಾಧಿಕಾರಿಯೂ ಆದ ಹು–ಧಾ ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಮಾಹಿತಿ ನೀಡಿ, ‘ಸೆಂಟ್ರಲ್‌ ಕ್ಷೇತ್ರದಲ್ಲಿ 260 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಅದರಲ್ಲಿ 9 ವಿಶೇಷ,  ತಲಾ ಒಂದು ವಿಶೇಷ ಚೇತನ, ಯುವ ಮತ್ತು ಎಥ್ನಿಕ್ ಮತಗಟ್ಟೆಗಳಿವೆ’ ಎಂದು ತಿಳಿಸಿದರು.

ಒಟ್ಟು 1,244 ಮತದಾನ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, 61 ಮಾರ್ಗಗಳಿಗೆ ಅಷ್ಟೇ ಸಂಖ್ಯೆಯ ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ. ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.

‘ಮಹಿಳಾ ಮತದಾರರನ್ನು ಸೆಳೆಯಲು ಸಿದ್ಧೇಶ್ವರ ಪಾರ್ಕ್‌ನ ಸೇಂಟ್ ಅಂಟೋನಿ ಪಬ್ಲಿಕ್ ಶಾಲೆ, ವಿವೇಕಾನಂದ ಕಾಲೊನಿಯ ಚಿನ್ಮಯ ವಿದ್ಯಾಲಯ, ಕುಸುಗಲ್ ರಸ್ತೆಯ ಎಸ್‌ಬಿಐ ಆಫೀಸರ್ಸ್ ಅಸೋಸಿಯೇಷನ್‌ ಎಜುಕೇಷನ್ ಸೊಸೈಟಿಯ ಇಂಗ್ಲಿಷ್ ಮಾಧ್ಯಮ ಶಾಲೆ,   ಕೇಶ್ವಾಪುರದ ಸಹಸ್ರಾರ್ಜುನ ಕಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆ, ನವ ಆನಂದ ನಗರದ ಸರ್ಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಸಖಿ ಮತಗಟ್ಟೆಗಳನ್ನು ತೆರೆಯಲಾಗಿದೆ. ಸಖಿ ಮತಗಟ್ಟೆಗೆ ಬರುವ ಮಹಿಳಾ ಮತದಾರರಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಲಾಗುವುದು’ ಎಂದರು.

‘ಯುವ ಮತದಾರರನ್ನು ರೋಟರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ  ಯುವ ಮತಗಟ್ಟೆ, ವಿದ್ಯಾನಗರದ ಕಿಮ್ಸ್‌ನಲ್ಲಿ ಥೀಮ್ ಆಧಾರಿತ ಮತಗಟ್ಟೆ, ಉಣಕಲ್‌ನ ಸರ್ಕಾರಿ ಹೆಣ್ಣುಮಕ್ಕಳ ಶಾಲೆಯಲ್ಲಿ ಅಂಗವಿಕಲರಿಗಾಗಿ ಪ್ರತ್ಯೇಕ ಮತಗಟ್ಟೆ ತೆರೆಯಲಾಗಿದೆ’ ಎಂದು ತಿಳಿಸಿದರು.

ಸಿಬ್ಬಂದಿ ಸೋಮವಾರ ರಾತ್ರಿ ಮತಗಟ್ಟೆಗಳಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಅವರಿಗೆ ಊಟ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಬುಧವಾರ ಬೆಳಿಗ್ಗೆ ಅಣಕು ಮತದಾನ ಪ್ರಕ್ರಿಯೆ ನಡೆಸಲಾಗುವುದು, ಅದಕ್ಕೂ ಮುನ್ನ ಸಿಬ್ಬಂದಿಗೆ ಉಪಾಹಾರ ಪೂರೈಸಲಾಗುವುದು ಎಂದು ಹೇಳಿದರು.

ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗೆ ಲ್ಯಾಮಿಂಗ್ಟನ್ ಶಾಲೆ ಆವರಣದಲ್ಲಿ ಶಾಮಿಯಾನ ಹಾಕಿ ಊಟ, ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಹೆಚ್ಚು ಬಿಸಿಲು, ಸೆಖೆ ಇದ್ದುದರಿಂದ ಶಾಮಿಯಾನದಲ್ಲಿ ಫ್ಯಾನ್ ಅಳವಡಿಸಲಾಗಿತ್ತು.

ಪೂರ್ವ ಕ್ಷೇತ್ರ; 217 ಮತಗಟ್ಟೆ:

ಹು–ಧಾ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗೆ ಮತಯಂತ್ರಗಳನ್ನು ವಿದ್ಯಾನಗರದ ಸರ್ಕಾರಿ ಪಾಲಿಟೆಕ್ನಿಕಲ್‌ ಕಾಲೇಜಿನ ಮಸ್ಟರಿಂಗ್‌ ಕೇಂದ್ರದಲ್ಲಿ ನೀಡಲಾಯಿತು.

ಹು–ಧಾ ಪೂರ್ವ ಕ್ಷೇತ್ರದಲ್ಲಿ 217 ಮತಗಟ್ಟೆಗಳಿದ್ದು, 1008 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಬಿಡನಾಳದ ಕರ್ನಾಟಕ ಪಬ್ಲಿಕ್‌ ಶಾಲೆ, ಪಿ.ಬಿ.ರಸ್ತೆಯ ನ್ಯೂ ಇಂಗ್ಲಿಷ್ ಮಾಧ್ಯಮ ಶಾಲೆ, ಕೌಲ್‌ಪೇಟೆಯ ಆಂಗ್ಲೊ ಉರ್ದು ಬಾಲಕಿಯರ ಪ್ರೌಢಶಾಲೆ, ಕಾರವಾರ ರಸ್ತೆಯ ಗುರುದೇವ ವಿದ್ಯಾ ಸಮಿತಿಯ ಪೂರ್ವ ಪ್ರಾಥಮಿಕ ಶಾಲೆ, ಹಳೆ ಹುಬ್ಬಳ್ಳಿಯ ಎಸ್‌.ಎಂ. ಕೃಷ್ಣನಗರದ ರಾಜೀವಗಾಂಧಿ ಕನ್ನಡ  ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಸಖಿ ಮತಗಟ್ಟೆ, ನೇಕಾರನಗರದ ಅಮರಜ್ಯೋತಿ ಪ್ರಾಥಮಿಕ ಶಾಲೆಯಲ್ಲಿ ಯುವ ಮತಗಟ್ಟೆ ತೆರೆಯಲಾಗಿದೆ.

ಮಧ್ಯಾಹ್ನ ಊಟದ ನಂತರ ಸಿಬ್ಬಂದಿ ಮತಗಟ್ಟೆಗಳಿಗೆ ತೆರಳಿದರು.

4 ಸಾವಿರ ಪೊಲೀಸರ ನಿಯೋಜನೆ

ಹುಬ್ಬಳ್ಳಿ: ‘ಮುಕ್ತ ನ್ಯಾಯಸಮ್ಮತ ಮತ್ತು ಶಾಂತಿಯುತವಾಗಿ ಮತದಾನಕ್ಕಾಗಿ ಹುಬ್ಬಳ್ಳಿ–ಧಾರವಾಡ ಕಮಿಷನರೇಟ್ ವ್ಯಾಪ್ತಿಯಲ್ಲಿ 4 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ’ ಎಂದು ಹು–ಧಾ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ಹೇಳಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು‘ ಭದ್ರತೆಗಾಗಿ ತಮಿಳುನಾಡಿನಿಂದ ಹೆಚ್ಚುವರಿ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದೆ. ಸಿಆರ್‌ಪಿಎಫ್‌ ಕೆಎಸ್‌ಆರ್‌ಪಿ ತುಕಡಿಗಳು ಕಾರ್ಯನಿರ್ವಹಿಸಲಿವೆ. ಸೂಕ್ಷ್ಮ ಮತಗಟ್ಟೆಗಳಲ್ಲಿ ಇಬ್ಬರು ಸಾಮಾನ್ಯ ಮತಗಟ್ಟೆಗಳಲ್ಲಿ ಒಬ್ಬ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT