ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಂಡಿಯಂಡ, ಕಾಣತಂಡಗಳಿಗೆ ಭಾರಿ ಗೆಲುವು

ಅರಮಣಮಾಡ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿ
Published 6 ಮೇ 2024, 4:55 IST
Last Updated 6 ಮೇ 2024, 4:55 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಸಮೀಪದ ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ ಅರಮಣಮಾಡ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಪಾಂಡಿಯಂಡ, ಕಾಣತಂಡಗಳಿಗೆ ಹೆಚ್ಚು ರನ್‌ಗಳ ಅಂತರದ ಗೆಲುವು ಸಿಕ್ಕರೆ, ಮಲ್ಚೀರ, ನೆರವಂಡ ತಂಡಗಳಿಗೆ 10 ವಿಕೆಟ್‌ಗಳ ಗೆಲುವು ಲಭಿಸಿತು.

ಪಾಂಡಿಯಂಡ ತಂಡವಂತೂ ಪೆಬ್ಬಟ್ಟೀರ ವಿರುದ್ಧ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆಯಿತು. ನಿಗದಿತ 8 ಓವರ್‌ಗಳಲ್ಲಿ ಕೇವಲ 1 ವಿಕೆಟ್‌ ಮಾತ್ರವನ್ನೇ ಕಳೆದುಕೊಂಡು 136 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಪೆಬ್ಬಟ್ಟೀರ ತಂಡವನ್ನು ಪಾಂಡಿಯಂಡ ತಂಡದ ಬೌಲರ್‌ಗಳು ಕೇವಲ 36 ರನ್‌ಗಳಿಗೆ ನಿಯಂತ್ರಿಸಿದರು. ಈ ಮೂಲಕ 100 ರನ್‌ಗಳ ಭಾರಿ ಅಂತರದ ಗೆಲುವನ್ನು ಪಾಂಡಿಯಂಡ ಪಡೆಯಿತು.

ಇದೇ ಬಗೆಯಲ್ಲಿ ಉತ್ತಮ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ನೀಡಿದ ಕಾಣತಂಡ ತಂಡಕ್ಕೆ ಕುಂಡಚ್ಚೀರ ವಿರುದ್ಧ 87 ರನ್‌ಗಳ ಗೆಲುವು ದಕ್ಕಿತು. ಕಾಣತಂಡ ತಂಡವು ಕೇವಲ 1 ವಿಕೆಟ್ ಕಳೆದುಕೊಂಡು ಗಳಿಸಿದ 137 ರನ್‌ಗಳನ್ನು ಬೆನ್ನತ್ತಿದ ಕುಂಡಚ್ಚೀರ ತಂಡವನ್ನು ಕಾಣತಂಡದ ಬೌಲರ್‌ಗಳು ಕೇವಲ 50 ರನ್‌ಗಳಿಗೆ ನಿಯಂತ್ರಿಸುವಲ್ಲಿ ಸಫಲರಾದರು.

ಮಲ್ಚೀರ ತಂಡವು ಪುಳ್ಳಂಗಡ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಪುಳ್ಳಂಗಡ ನೀಡಿದ 48 ರನ್‌ಗಳ ಸುಲಭ ಗುರಿಯನ್ನು ಯಾವುದೇ ವಿಕೆಟ್ ಕಳೆದುಕೊಳ್ಳದೇ ಮಲ್ಚೀರ ತಲುಪಿದ್ದು ವಿಶೇಷ ಎನಿಸಿತು.

ನೆರವಂಡ ತಂಡವೂ ಪೋರೇರ ವಿರುದ್ಧ 10 ವಿಕೆಟ್‌ಗಳ ಅಮೋಘ ಜಯ ಗಳಿಸಿತು. ಪೋರೇರ ನೀಡಿದ 49 ರನ್‌ಗಳ ಗುರಿಯನ್ನು ನೆರವಂಡ ಯಾವುದೇ ವಿಕೆಟ್ ಕಳೆದುಕೊಳ್ಳದೇ ತಲುಪಿತು.

ಅಪ್ಪುಡ ತಂಡಕ್ಕೆ ಕೀತಿಯಂಡ ವಿರುದ್ಧ 25 ರನ್‌ಗಳ ಗೆಲುವು ಒಲಿಯಿತು. ಅಪ್ಪುಡ ನೀಡಿದ 94 ರನ್‌ಗಳ ಗುರಿಯನ್ನು ಬೆನ್ನತ್ತಿದ ಕೀತಿಯಂಡ ತಂಡವು 68 ರನ್‌ಗಳನ್ನು ಮಾತ್ರ ಗಳಿಸಿ ಗೆಲುವಿನ ದಡವನ್ನು ತಲುಪಲಿಲ್ಲ.

ಚಿಯಣಮಾಡ ತಂಡವು ಪೆಮ್ಮಣಮಾಡ ತಂಡದ ವಿರುದ್ಧ 24 ರನ್‌ಗಳ ಜಯ ಪಡೆಯಿತು. ಚಿಯಣಮಾಡ ನೀಡಿದ 92 ರನ್‌ಗಳ ಗುರಿಯನ್ನು ಬೆನ್ನತ್ತಿದ ಪೆಮ್ಮಣಮಾಡ 69 ರನ್‌ಗಳಿಗೆ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ನಿರಾಶವಾಯಿತು.

ಚೆನಿಯಪಂಡ ತಂಡವು ಕೊಪ್ಪೀರ ವಿರುದ್ಧ 22 ರನ್‌ಗಳ ಗೆಲುವು ಪಡೆಯಿತು. ಚೆನಿಯಪಂಡ ನೀಡಿದ 119 ರನ್‌ಗಳ ಗುರಿಯನ್ನು ಬಹಳ ಉತ್ಸಾಹದಿಂದಲೇ ಬೆನ್ನತ್ತಿದ ಕೊಪ್ಪೀರ 97 ರನ್‌ಗಳಿಸಿ ಗೆಲುವಿನ ಹೊಸ್ತಿಲಲ್ಲಿ ಎಡವಿತು.

ಪೆಮ್ಮಣಮಾಡ ತಂಡವು ಪೂನ್ನಕಚ್ಚೀರ ತಂಡದ ವಿರುದ್ಧ 16 ರನ್‌ಗಳ ಗೆಲುವು ಪಡೆಯಿತು. ಪೆಮ್ಮ ಣಮಾಡ ನೀಡಿದ 120 ರನ್‌ಗಳ ಗುರಿಯನ್ನು ಬೆನ್ನತ್ತಿದ ಪೂನ್ನಕಚ್ಚೀರ ತಂಡವು 103 ರನ್‌ಗಳಿಸಿ ಗೆಲುವಿನ ಗುರಿ ತಲುಪಲಾಗದೇ ಸೋಲು ಕಂಡಿತು.

ಮೇಕೆರಿರ ತಂಡವು ಕೊಡಂದೇರ ವಿರುದ್ಧ 26 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತು. ಮೇಕೆರಿರ ನೀಡಿದ 108 ರನ್‌ಗಳ ಗುರಿಯನ್ನು ಬೆನ್ನತ್ತಿದ ಕೊಡಂದೇರ 82 ರನ್‌ಗಳನ್ನು ಗಳಿಸುವಷ್ಟರಲ್ಲಿ ಎಲ್ಲ ವಿಕೆಟ್‌ಗಳನ್ನು ಪಡೆಯುವಲ್ಲಿ ಮೇಕೆರಿರ ತಂಡದ ಬೌಲರ್‌ಗಳು ಸಫಲರಾದರು.

ಉಳಿದಂತೆ, ಬೊಳ್ಳೇರ ಮತ್ತು ಕುಂದ್ರಂಡ ತಂಡಗಳು ವಾಕ್‌ ಓವರ್ ಪಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT